Site icon Vistara News

Mann ki Baat @100: ಮನೆಮನೆಯ ಸದಸ್ಯನ ಮೂಲಕ ಹರಿದು ಬಂದ ಪ್ರಜೆಗಳ ಮನದ ಮಾತು

modi mann ki baat new

:: ಬಿ.ಕೆ ಸುಮತಿ, ಆಕಾಶವಾಣಿ ಉದ್ಘೋಷಕರು

ಇಸವಿ 1947. ಮಧ್ಯರಾತ್ರಿ 12 ಗಂಟೆ. ಎಲ್ಲೆಡೆ ಸ್ವಾತಂತ್ರ್ಯದ ಸಂಭ್ರಮ. ಅಂದಿನ ಪ್ರಧಾನಿ ಜವಾಹರ್ ಲಾಲ್ ನೆಹರು ಅವರು ಭಾರತ ದೇಶದ ಜನತೆಯನ್ನು ಉದ್ದೇಶಿಸಿ ಭಾಷಣ ಮಾಡಿದರು. ಈ ಭಾಷಣ ಇಂದಿಗೂ ಆಕಾಶವಾಣಿಯಲ್ಲಿ ಲಭ್ಯವಿದೆ. Tryst with Destiny ಎಂಬ ಶೀರ್ಷಿಕೆ ಉಳ್ಳ ಈ ಭಾಷಣವನ್ನು ಎಷ್ಟು ಸಲ ಕೇಳಿದರೂ ರೋಮಾಂಚನವಾಗುತ್ತದೆ.

ಇಸವಿ 1947. ಭಾರತ ವಿಭಜನೆಯ ಕಾಲ. ಅನೇಕ ಅಹಿತಕರ ಘಟನೆಗಳು ನಡೆಯುತ್ತಿದ್ದ ಸಂದರ್ಭ. ನವೆಂಬರ್ 12ನೇ ತಾರೀಖು ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ನವದೆಹಲಿಯ ಆಕಾಶವಾಣಿ ಸ್ಟುಡಿಯೋಸ್‌ಗೆ ಆಗಮಿಸಿದರು. ಜನರಿಗೆ ಸಂದೇಶ ನೀಡಿದರು. ಸಾಂತ್ವನ ಹೇಳಿದರು. ಈ ಭಾಷಣವೂ ಆಕಾಶವಾಣಿಯ ಧ್ವನಿ ಮುದ್ರಣ ಭಂಡಾರದಲ್ಲಿ ಸುರಕ್ಷಿತವಾಗಿದೆ.

ಬಿ.ಕೆ ಸುಮತಿ

ನಂತರದ ದಿನಗಳಲ್ಲಿ ನವೆಂಬರ್ 12ನೇ ತಾರೀಖು ಮಹಾತ್ಮ ಗಾಂಧೀಜಿ ಅವರು ಆಕಾಶವಾಣಿಗೆ ಭೇಟಿ ನೀಡಿದ ದಿನ ಎಂಬ ಕಾರಣಕ್ಕೆ ಸಾರ್ವಜನಿಕ ಪ್ರಸಾರ ದಿನವನ್ನಾಗಿ ಆಚರಿಸಲಾಗುತ್ತಿದೆ. ಸ್ವಾತಂತ್ರ್ಯ ಪೂರ್ವದಲ್ಲಿಯೇ ರೇಡಿಯೋ ಕೇಂದ್ರಗಳು ಇದ್ದವು. ವಿವಿಧ ರೂಪಗಳಲ್ಲಿ ಕಾರ್ಯಕ್ರಮಗಳನ್ನು ನೀಡುತ್ತಿದ್ದವು. ಸ್ವಾತಂತ್ರ್ಯಾನಂತರ ಆಕಾಶವಾಣಿ ಅಥವಾ ಆಲ್ ಇಂಡಿಯಾ ರೇಡಿಯೋ ಇಡೀ ದೇಶವನ್ನು ಆವರಿಸಿಕೊಂಡ ಪರಿ ಅನನ್ಯ.

ಸಂಗೀತ, ಸಂಸ್ಕೃತಿ, ಮಾತು, ಹಾಡು, ಕೃಷಿ , ಶಿಕ್ಷಣ, ಆರೋಗ್ಯ, ಮಹಿಳೆ, ಮಕ್ಕಳು, ಕ್ರೀಡೆ .. ಹೀಗೆ ಎಲ್ಲ ವಿಭಾಗಗಳಲ್ಲೂ ಕಾರ್ಯಕ್ರಮಗಳನ್ನು ರೂಪಿಸುತ್ತ ಜನಮಾನಸದಲ್ಲಿ ಒಂದಾಯಿತು. ದೇಶದ ಅಭಿವೃದ್ಧಿಯಲ್ಲಿ ತನ್ನ ಪಾಲೂ ಇದೆ ಎಂದು ಸಾಬೀತುಪಡಿಸಿತು. ಇದೆಲ್ಲ ಒಂದು ಕಡೆ ಆದರೆ, ಮತ್ತೊಂದು ವಿಚಾರ ಜನರ ಕೇಳುವಿಕೆ.

“ಆಕಾಶವಾಣಿ. ಸ್ವಾತಂತ್ರ್ಯೋತ್ಸವದ ಮುನ್ನಾ ದಿನವಾದ ಇಂದು ರಾಷ್ಟ್ರಪತಿಗಳಾದ ……… ಅವರು ರಾಷ್ಟ್ರವನ್ನು ಉದ್ದೇಶಿಸಿ ಮಾಡುವ ಪ್ರಸಾರ ಭಾಷಣ.” ಎಂಬ ಉದ್ಘೋಷಣೆ. ಬಹುಮುಖ್ಯ ಕಾರ್ಯಕ್ರಮಕ್ಕಾಗಿ ಎದ್ದು ನಿಲ್ಲಿ ಎಂಬ ಸಂದೇಶ. ಜನಗಣಮನ ಪ್ರಸಾರ, ಅದಾದ ನಂತರ ರಾಷ್ಟ್ರಪತಿಗಳ ಮಾತು ಆರಂಭ. ಈ ವಿಶೇಷ ಉದ್ಘೋಷಣೆಗಳನ್ನು ಕೇಳಲು ಜನ ಕಾತುರದಿಂದ ಕಾಯುತ್ತಿದ್ದರು.

ಅದೇ ರೀತಿ ಆಗಸ್ಟ್ 15. “ಸ್ವಾತಂತ್ರ್ಯ ದಿನದ ಸಂದರ್ಭದಲ್ಲಿ ದೆಹಲಿಯ ಕೆಂಪುಕೋಟೆಯ ಆವರಣದಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿ ಪ್ರಧಾನಮಂತ್ರಿಗಳಾದ ………,ಅವರು ಮಾಡುವ ಭಾಷಣದ ನೇರ ಪ್ರಸಾರವನ್ನು ಈಗ ಆಲಿಸುವಿರಿ. ನಾವೀಗ ನಮ್ಮ ಶ್ರೋತೃಗಳನ್ನು ಕೆಂಪುಕೋಟೆಯ ಆವರಣಕ್ಕೆ ಕರೆದೊಯ್ಯುತ್ತಿದ್ದೇವೆ.” ಈ ಮಾತುಗಳನ್ನು ಉದ್ಘೋಷಕರು ಸ್ಫುಟವಾಗಿ ಉಲಿಯುತ್ತಿದ್ದರೆ, ಮತ್ತೆ ಮತ್ತೆ ಅದನ್ನು ಕೇಳಬೇಕು ಎನಿಸುತ್ತಿತ್ತು.

ಅದೇ ರೀತಿ ಜನವರಿ 26, ಗಣರಾಜ್ಯೋತ್ಸವದ ಪಥ ಸಂಚಲನ ಕಾರ್ಯಕ್ರಮದ ನೇರ ಪ್ರಸಾರಗಳು, ಪ್ರಧಾನಿಗಳ ಭಾಷಣ, ಇವುಗಳನ್ನು ಕೇಳಲು ಜನ ಇಷ್ಟ ಪಡುತ್ತಿದ್ದರು. ಇದು ಆಕಾಶವಾಣಿ ಬಿತ್ತಿ ಬೆಳೆಸಿದ ಸಂಸ್ಕೃತಿ.

ಹೀಗೆ ರಾಷ್ಟ್ರಪತಿಗಳ ಅಥವಾ ಪ್ರಧಾನ ಮಂತ್ರಿಗಳ ಭಾಷಣ ಪ್ರಸಾರವಾದಾಗಲೆಲ್ಲ ಸಾಮಾನ್ಯವಾಗಿ ಅವುಗಳ ಅನುವಾದವನ್ನು ಆಯಾ ರಾಜ್ಯಗಳ ಭಾಷೆಗಳಲ್ಲಿ ಮಾಡಿಸಿ ನಿಗದಿತ ಸಮಯದಲ್ಲಿ ಪ್ರಸಾರ ಮಾಡುವುದು ಕೂಡ ಆಕಾಶವಾಣಿಯ ಕೈಂಕರ್ಯವಾಗಿತ್ತು. ಇದು ಒಂದು ಇತಿಹಾಸ.

ಭಾರತದಲ್ಲಿ ಮಾಧ್ಯಮ ಲೋಕ, ತಂತ್ರಜ್ಞಾನ ತೆರೆದುಕೊಂಡ ಪರಿ ವಿಶಿಷ್ಟ. ಇಸವಿ 2014, ಅಕ್ಟೋಬರ್ 3 ನೇ ತಾರೀಖು. ಪ್ರಧಾನ ಮಂತ್ರಿಗಳು ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡುತ್ತಾರೆ ಎಂಬ ಸೂಚನೆ. ಆಗಸ್ಟ್ 15 ಅಲ್ಲ, ಜನವರಿ 26 ಅಲ್ಲ, ಇದೇನಿದು ಎಂಬ ಆಶ್ಚರ್ಯ!

ಅಂದು ಪ್ರಧಾನಿಗಳು ಮಾತನಾಡಿದ್ದು ವಿಶಿಷ್ಟವಾಗಿತ್ತು. “ನಾನು ಇನ್ನು ಮುಂದೆ ನಿಮ್ಮೊಡನೆ ಪ್ರತಿ ತಿಂಗಳು ಸಂಭಾಷಿಸುತ್ತೇನೆ.” ಎಂದು ಹೇಳಿದ ಪ್ರಧಾನ ಮಂತ್ರಿಗಳು ಒಂದು ತಿಂಗಳೂ ತಪ್ಪಿಸದೆ ನೂರು ಕಾರ್ಯಕ್ರಮಗಳನ್ನು ಪೂರೈಸಿದರು. ಅದೇ ಜನಜನಿತ ಲೋಕ ಪ್ರಿಯ ಕಾರ್ಯಕ್ರಮ “ಮನ್ ಕೀ ಬಾತ್”

ಮಧ್ಯೆ ಚುನಾವಣೆ ಬಂದಿತ್ತು. ಐದು ವರ್ಷ ಪೂರೈಸಿದ್ದ ಪ್ರಧಾನಿ ಚುನಾವಣೆ ಫಲಿತಾಂಶ ಬಂದ ಮೇಲೆ ಮತ್ತೊಮ್ಮೆ ನಿಮ್ಮನ್ನು ಭೇಟಿ ಮಾಡುವೆ ಎಂದಿದ್ದರು. ಆಗ ಇವರೇ ಪ್ರಧಾನಿ ಆಗುವರೇ… ಎಂದು ಅನೇಕರು ತಮ್ಮಳಗೇ ಕೇಳಿಕೊಂಡಿದ್ದರು. ಚುನಾವಣೆ ಫಲಿತಾಂಶ ಬಂತು. ಮತ್ತೆ ಪ್ರಧಾನಿಗಳು ಮಾತನಾಡಿದರು. ಮನ್ ಕಿ ಬಾತ್ ಮುಂದುವರೆಯಿತು. “ನಾನು ಮುಂದಿನ ತಿಂಗಳು ಬರುತ್ತೇನೆ ಎಂದಿದ್ದೆ, ಅಂತೆಯೇ ಬರಮಾಡಿಕೊಂಡಿದ್ದೀರಿ” ಎಂದೇ ಭಾಷಣ ಆರಂಭಿಸಿದರು.

ಇದೇ ಏಪ್ರಿಲ್ 30. ಮನ್ ಕೀ ಬಾತ್ ಗೆ ನೂರರ ಸಂಭ್ರಮ. ಅಗಸ್ಟ್ 15, ಜನವರಿ 26 ಅಲ್ಲ, ಪ್ರತಿ ತಿಂಗಳೂ ಪ್ರಧಾನಿ ದೇಶದ ಜನತೆಯೊಡನೆ ಮಾತನಾಡುತ್ತಾರೆ ಎಂಬುದು ಬಹಳ ವಿಶೇಷ ಸಂಗತಿಯಾಗಿತ್ತು. ದೇಶದಾದ್ಯಂತ ಎಲ್ಲಾ ಆಕಾಶವಾಣಿ ಕೇಂದ್ರಗಳು ಇದಕ್ಕಾಗಿ ತಯಾರಾಗುತ್ತಿದ್ದವು. ಪ್ರತಿ ತಿಂಗಳ ಕೊನೆಯ ಭಾನುವಾರ ಪ್ರಧಾನಿಗಳ ಭಾಷಣ ಎಂಬುದು ಎಲ್ಲ ನೌಕರರ ಉದ್ಯೋಗಿಗಳ ಮನದಲ್ಲಿ ಸ್ಥಿರವಾಯಿತು.

ಅದಕ್ಕೆ ಸೂಕ್ತ ಪ್ರಚಾರವನ್ನು ನೀಡಲಾಯಿತು. ಮನೆ ಮನೆಗಳಲ್ಲಿ ಮನ್ ಕಿ ಬಾತ್ ಮೊಳಗಿತು. ಆರಂಭದ ದಿನಗಳಲ್ಲಿ ಮನ ಕೀ ಬಾತ್ ಬೆಳಿಗ್ಗೆ 11 ಗಂಟೆಗೆ ಪ್ರಸಾರವಾದರೆ ರಾತ್ರಿ ಎಂಟು ಗಂಟೆಗೆ ಪ್ರಾದೇಶಿಕ ಅವತರಣಿಕೆ ಪ್ರಸಾರವಾಗುತ್ತಿತ್ತು. ಜನಪ್ರಿಯತೆ ಹೆಚ್ಚಾದಂತೆಲ್ಲ ಕಾರ್ಯಕ್ರಮ ಸ್ವರೂಪ ಸ್ವಲ್ಪ ಬದಲಾಯಿತು. 11 ಗಂಟೆಗೆ ಪ್ರಧಾನಿಗಳ ಭಾಷಣ, ಕೂಡಲೇ ಪ್ರಾದೇಶಿಕ ಅನುವಾದ, ಮತ್ತೆ ಪ್ರಾದೇಶಿಕ ಅನುವಾದದ ಮರು ಪ್ರಸಾರ ರಾತ್ರಿ 8 ಗಂಟೆಗೆ. ಹೀಗೆ ನಿಗದಿತವಾಯಿತು.

ಮೊದಲ ದಿನಗಳಲ್ಲಿ ಭಾನುವಾರವೇ ಅನುವಾದಗೊಳ್ಳುತ್ತಿತ್ತು. ಸ್ವಲ್ಪ ಸಮಯದ ನಂತರ ಶನಿವಾರವೇ ಭಾಷಣದ ಲಿಖಿತ ರೂಪವನ್ನು ಎಲ್ಲ ಆಕಾಶವಾಣಿ ಕೇಂದ್ರಗಳಿಗೂ ಕಳುಹಿಸಿಕೊಡಲು ತೀರ್ಮಾನಿಸಲಾಯಿತು. ಪ್ರಾದೇಶಿಕ ಅನುವಾದ ಮಾಡಿ ಅದರ ಧ್ವನಿ ಮುದ್ರಣವನ್ನು ಮಾಡಿ ಪ್ರಧಾನಿಗಳ ಭಾಷಣದ ನಂತರ ಪ್ರಸಾರ ಮಾಡುವುದು ಎಂದು ನಿರ್ಧರಿಸಲಾಯಿತು. ದಿನದಿಂದ ದಿನಕ್ಕೆ ಮನ್ ಕಿ ಬಾತ್ ಒಂದು ಸಂಭ್ರಮವಾಯಿತು.

ಹಿರಿಯ ಉದ್ಯೋಗಿಗಳಿಗೆ, ನಿರ್ದೇಶಕರಿಗೆ, ಸುದ್ದಿ ವಿಭಾಗದವರಿಗೆ, ಅನುವಾದಕರಿಗೆ, ಸಮನ್ವಯಕಾರರಿಗೆ, ಪಾಳಿಗಳಲ್ಲಿ ಕೆಲಸ ನಿರ್ವಹಿಸುವ ಇಂಜಿನಿಯರ್‌ಗಳು ಮತ್ತು ಉದ್ಘೋಷಕರಿಗೆ ಇದೊಂದು ವಿಶೇಷ ಜವಾಬ್ದಾರಿ ಆಯಿತು. ಪ್ರತಿ ತಿಂಗಳ ಕೊನೆಯ ಭಾನುವಾರ ಈ ಜವಾಬ್ದಾರಿಯನ್ನು ಯಶಸ್ವಿಯಾಗಿ ಉದ್ಯೋಗಿಗಳು ನಿರ್ವಹಿಸಿದರು. ಮತ್ತು ನಿರ್ವಹಿಸುತ್ತಿದ್ದಾರೆ.

ಈ ನೂರು ಕಾರ್ಯಕ್ರಮಗಳಲ್ಲಿ ಪ್ರಧಾನಿಗಳು ಮಾತನಾಡದ ವಿಷಯವೇ ಇಲ್ಲ. ಮಾದಕ ವ್ಯಸನ, ಸ್ವಚ್ಛ ಭಾರತ ಅಭಿಯಾನ, ಯೋಗ, ಹೆಣ್ಣು ಮಕ್ಕಳು, ಯೋಧರು, ಯೋಜನೆಗಳು, ಕೊರೊನಾ, ಸಂಕಷ್ಟಗಳು, ಮುದ್ರಾ ಬ್ಯಾಂಕ್, ಖಾದಿ, ಕ್ರೀಡೆ, ಓದುವಿಕೆ, ಲೈಬ್ರರಿ, ನೀರು, ಮ್ಯೂಸಿಯಂಗಳು, ಮೊಬೈಲ್ ಬಳಕೆ, ಕಥೆ ಹೇಳುವ ಹವ್ಯಾಸ, ತಂತ್ರಜ್ಞಾನ, ಚಂದ್ರಯಾನ, ಆರೋಗ್ಯ, ಜೂಗಳ ನಿರ್ವಹಣೆ, ಪ್ರಾಣಿಗಳು, ಕುಶಲಕರ್ಮಿಗಳು ಮತ್ತು ಕೌಶಲ್ಯ, ರೈತರು, ವಿದ್ಯಾರ್ಥಿಗಳು, ಒತ್ತಡ, ಪರೀಕ್ಷೆ, ಹೀಗೆ ಹತ್ತು ಹಲವಾರು ವಿಷಯಗಳನ್ನು ಪ್ರಧಾನಿಗಳು ಚರ್ಚಿಸಿದರು.

ಆರಂಭದ ದಿನಗಳಲ್ಲಿ ಪ್ರಧಾನಿಗಳು ಮಾತನಾಡುತ್ತಿದ್ದರು. ನಂತರದ ದಿನಗಳಲ್ಲಿ ಜನರನ್ನು ಸಂಪರ್ಕಿಸಲು ಆರಂಭಿಸಿದರು. ದೇಶದ ವಿವಿಧ ಮೂಲೆಗಳಲ್ಲಿ ವಿವಿಧ ವೃತ್ತಿಗಳಲ್ಲಿ ತೊಡಗಿರುವ ಹಾಗೆಯೇ ಮನ್ ಕಿ ಬಾತ್ ಕೇಳುವ ಶ್ರೋತೃ ವರ್ಗವನ್ನು ಪ್ರಧಾನಿಗಳು ಸಂಪರ್ಕಿಸಿದರು. ಸ್ವತಹ ಅವರನ್ನು ಫೋನ್ ಮೂಲಕ ಮಾತನಾಡಿಸಿದರು. ತನ್ಮೂಲಕ ಸಲಹೆ ಸೂಚನೆಗಳನ್ನು ನೀಡಿದರು.ಅಹವಾಲುಗಳನ್ನು ಆಲಿಸಿದರು. ಸ್ಪೂರ್ತಿ ತುಂಬಿದರು.

ಈ ಬಾರಿ ಪ್ರಧಾನಿಗಳು ಏನು ಹೇಳುತ್ತಾರೆ? ಯಾವ ವಿಷಯ ಚರ್ಚೆ ಮಾಡಬಹುದು? ಇದಕ್ಕೂ ಬೆಟ್ಟಿಂಗುಗಳು ನಡೆಯುತ್ತಿದ್ದವು. ಮನ್ ಕಿ ಬಾತ್ ನ ಕೆಲವು ಸಂಚಿಕೆಗಳಲ್ಲಿ ವಿಶೇಷ ಅತಿಥಿಗಳು ಪಾಲ್ಗೊಂಡಿದ್ದರು. 2015 ರ ಮನ್ ಕಿ ಬಾತ್ ಒಂದರಲ್ಲಿ ಅಮೆರಿಕಾದ ಅಧ್ಯಕ್ಷರಾದ ಬರಾಕ್ ಒಬಾಮ ಅವರು ಭಾಗವಹಿಸಿದ್ದರು. 2019 ಸೆಪ್ಟೆಂಬರ್ 29ರ ವಿಶೇಷ ಮನ್ ಕಿ ಬಾತ್ ನಲ್ಲಿ ಲತಾ ಮಂಗೇಶ್ಕರ್ ಅವರು ಭಾಗವಹಿಸಿದ್ದರು.

ಪ್ರಧಾನಮಂತ್ರಿಗಳ ಕಛೇರಿಯಿಂದ ಬರುವ ಸೂಚನೆಗಳ ಅನುಸಾರ ರಾಷ್ಟ್ರದಾದ್ಯಂತ ಜನರನ್ನು ಸಂಪರ್ಕಿಸಲಾಯಿತು. ಬಾಯಿಂದ ಬಾಯಿಗೆ ಮನ್ ಕಿ ಬಾತ್ ನ ಯಶಸ್ಸು ಹರಡಿತು. ಹಾಲು ಮಾರುವವರು, ದಿನಪತ್ರಿಕೆ ಹಾಕುವವರು, ಕೈಗಾಡಿಗಳನ್ನು ತಳ್ಳುವವರು, ಹೋಟೇಲು ಕಾರ್ಮಿಕರು, ಗೃಹಿಣಿಯರು , ವಿದ್ಯಾರ್ಥಿಗಳು, ಉದ್ಯಮಿಗಳು ಎಲ್ಲರನ್ನೂ ತಲುಪಿತು.

ಏಪ್ರಿಲ್ 30 ಮನ್ ಕಿ ಬಾತ್ ಅಭಿಮಾನಿಗಳಿಗೆ ವಿಶೇಷ ದಿನ. 100 ಸಂಚಿಕೆಗಳನ್ನು ಪೂರೈಸಿದ ಮನ್ ಕಿ ಬಾತ್ ಹಲವು ದಾಖಲೆಗಳನ್ನು ನಿರ್ಮಾಣ ಮಾಡಿದೆ. ಆಕಾಶವಾಣಿಗೆ ಮತ್ತೊಮ್ಮೆ ಜನಪ್ರಿಯತೆಯನ್ನು ತಂದುಕೊಟ್ಟ ಕಾರ್ಯಕ್ರಮ ಮನ್ ಕಿ ಬಾತ್. ಈ 100 ತಿಂಗಳುಗಳಲ್ಲಿ 100 ಸಂಚಿಕೆಗಳಲ್ಲಿ ಭಾರತದ 130 ಕೋಟಿ ಪ್ರಜೆಗಳಲ್ಲಿ 100 ಕೋಟಿ ಪ್ರಜೆಗಳು ಮನ್ ಕಿ ಬಾತ್ ನ ಒಂದಾದರೂ ಸಂಚಿಕೆಯನ್ನು ಕೇಳಿದ್ದಾರೆ. ದೇಶದ ಪ್ರತಿ ಪ್ರಜೆಗೂ ಮನ್ ಕಿ ಬಾತ್ ಕಾರ್ಯಕ್ರಮದ ಅರಿವಿದೆ. ರೋಹ್ಟಕ್‌ನ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ಸಮೀಕ್ಷೆ ಹೇಳುವ ಪ್ರಕಾರ ದೇಶದ 23 ಕೋಟಿ ಜನ ಇದನ್ನು ಪ್ರತಿ ತಿಂಗಳು ಆಲಿಸುತ್ತಾರೆ.

CSRS ಸಮೀಕ್ಷೆ ಪ್ರಕಾರ ಶೇ.66.7 ದೇಶವಾಸಿಗಳು ಇದನ್ನು ಕೇಳಿದ್ದಾರೆ. ಇದೊಂದು ಜನಾಂದೋಲನ ಎಂದಿದ್ದಾರೆ ಖ್ಯಾತ ಕಲಾವಿದ ಅಮೀರ್ ಖಾನ್. ಅತ್ಯಂತ ಪ್ರಭಾವ ಬೀರಿದ ಕಾರ್ಯಕ್ರಮ ಎಂದಿದ್ದಾರೆ ಹಿರಿಯ ನಟ ಅಮಿತಾಭ್‌ ಬಚ್ಚನ್.

ಮನ್ ಕಿ ಬಾತ್ ನ 100ನೇ ಸಂಭ್ರಮವನ್ನು ದೇಶದಾದ್ಯಂತ ವಿಶಿಷ್ಟವಾಗಿ ಆಚರಿಸಲು ತೀರ್ಮಾನಿಸಲಾಯಿತು. ಕೆಲವೆಡೆ ಚುನಾವಣೆಗಳು ನಡೆಯುವುದಿತ್ತು. ಹಾಗಾಗಿ ಚುನಾವಣಾ ಆಯೋಗದ ಅನುಮತಿಯನ್ನು ಪಡೆದು ಆಯಾ ರಾಜ್ಯಗಳ ರಾಜ್ಯಪಾಲರ ಕಚೇರಿಗಳಲ್ಲಿ ಅಂದರೆ ರಾಜ ಭವನದಲ್ಲಿ ಆಹ್ವಾನಿತ ಅತಿಥಿಗಳ ಸಮ್ಮುಖದಲ್ಲಿ 100ನೇ ಕಾರ್ಯಕ್ರಮವನ್ನು ಪ್ರಸಾರ ಮಾಡಲಾಯಿತು.

100ನೇ ಕಾರ್ಯಕ್ರಮದ ಯಶಸ್ಸು ಅಭೂತಪೂರ್ವ. 9 ಲಕ್ಷ tweet ಗಳು, 11 ಲಕ್ಷ Photo Postಗಳು ಮಿಲಿಯನ್‌ಗಟ್ಟಲೆ like ಮತ್ತು view ಪಡೆದು ದಾಖಲೆ ಮಾಡಿದೆ. “ನನಗೆ ಇದು ಜನರ ಆರಾಧನೆ, ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಹಾಗೆ, ನೈವೇದ್ಯ ಇಟ್ಟ ಹಾಗೆ” ಎಂದು ಭಾವುಕರಾಗಿ ಪ್ರಧಾನಿಗಳು ಹೇಳಿದರು. “ನಾನು ನಿಮ್ಮ ಮನೆಯಲ್ಲಿ ಕುಳಿತು ಹಿರಿಯ ಸದಸ್ಯನಂತೆ ಮಾತಾಡುತ್ತೇನೆ, ನೀವು ಕೇಳಿದ್ದೀರಿ” ಎಂದಾಗ ಚಪ್ಪಾಳೆ ತಟ್ಟಿದರು ಜನ.

ರೇಡಿಯೋ ಯಾರು ಕೇಳುತ್ತಾರೆ? ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ರಾಜಸ್ಥಾನದಲ್ಲಿ ರಿಷಭ್ ಎಂಬ ವ್ಯಕ್ತಿ ಒಬ್ಬ ಮನ್ ಕಿ ಬಾತ್ ನ 100ನೇ ಸಂಚಿಕೆಯನ್ನು ಕೇಳಬೇಕು ಎಂದು ತನ್ನ ವಿವಾಹ ಮುಹೂರ್ತವನ್ನು ಮುಂದೂಡಿದ. ಏನಾದರೂ ತೊಂದರೆ ತಾಪತ್ರಯಗಳು ಯಾರನ್ನಾದರೂ ಬಾಧಿಸಿದಾಗ, “ಮನ್ ಕಿ ಬಾತ್ ಗೆ ಬರೆದು ಹಾಕಿ” ಎಂದು ಹೇಳಿದ್ದನ್ನು ಸ್ವತಹ ಕೇಳಿದ್ದೇನೆ.

ಇದನ್ನೂ ಓದಿ: Mann Ki Baat: ಪ್ರಧಾನಿ ಮೋದಿಯವರ ಮಾರ್ಗದರ್ಶಕ ಯಾರು?; ಮನ್​ ಕೀ ಬಾತ್​​ನಲ್ಲಿ ಸ್ಮರಣೆ

ಮೊದಲನೆಯ ಮನ್ ಕಿ ಬಾತ್ ನಿಂದ ಹಿಡಿದು 100ನೇ ಮನ್ ಕಿ ಬಾತ್ ವರೆಗೆ ಹಲವಾರು ಕಾರ್ಯಕ್ರಮಗಳಲ್ಲಿ ಕರ್ತವ್ಯ ನಿರ್ವಹಿಸಿದ್ದೇನೆ. ಸರ್ಕಾರದ ಕಾರ್ಯಕ್ರಮ ಒಂದು ಜನಪ್ರಿಯವಾದಾಗ , ಯಶಸ್ವಿಯಾದಾಗ, ಸಿಗುವ ಆತ್ಮ ತೃಪ್ತಿಯೇ ಬೇರೆ. ಯಾರೋ ಹೇಳಿದರು ; ಪ್ರಧಾನಿಗಳು ರೇಡಿಯೋ ಮಾಧ್ಯಮವನ್ನು ಬಳಸಿಕೊಂಡರು ಎಂದು. ಮತ್ತೊಬ್ಬರು ಹೇಳಿದರು. “ಪ್ರಸಾರವಾಗಿದ್ದು ಸರ್ಕಾರದ ವಾಹಿನಿಯಲ್ಲಿ ಆದರೂ ಇದನ್ನು ಜನಪ್ರಿಯಗೊಳಿಸಿದ್ದು ಖಾಸಗಿ ವಾಹಿನಿಗಳು” ಎಂದು. ಪ್ರಧಾನಮಂತ್ರಿಗಳ ಹಿಂದೆ ಸುದ್ದಿಗಾಗಿ ಯಾವುದೇ ವಾಹಿನಿಯಾದರೂ ಬರಲೇಬೇಕು. ಪ್ರಧಾನಿ ಆಕಾಶವಾಣಿಯನ್ನು ಆಯ್ದುಕೊಂಡಾಗ ಸುದ್ದಿಗಾಗಿ ಖಾಸಗಿ ವಾಹಿನಿಗಳು ಆಶ್ರಯಿಸಿದವೇ ಹೊರತು ಮನ್ ಕಿ ಬಾತ್ ಜನಪ್ರಿಯಗೊಳಿಸುವ ಯಾವುದೇ ತತ್ವ ವಿಚಾರ ಅಲ್ಲಿರಲಿಲ್ಲ.

100 ಕಾರ್ಯಕ್ರಮಗಳ ಧ್ಯಾನ ಸಫಲವಾಗಿದೆ. ನಿರಂತರತೆಯಿಂದ ಜನಪ್ರಿಯವಾಗಿದೆ. ರೇಡಿಯೋ ಮಾಧ್ಯಮವನ್ನು ಜನಹಿತಕ್ಕಾಗಿ ಬಳಸಿಕೊಳ್ಳಲಾಗಿದೆಯೇ ಹೊರತು ಬೇರೆ ಉದ್ದೇಶಗಳಿಗೆ ಅಲ್ಲ ಎಂದು ಅಲ್ಲಿ ಪ್ರಸ್ತಾಪಿಸಲಾದ ವಿಚಾರಗಳನ್ನು ಅವಲೋಕಿಸಿದಾಗ ತನ್ನಂ ತಾನೇ ತಿಳಿಯುತ್ತದೆ. ಇದಕ್ಕಾಗಿ ವಿಶೇಷ duty, ಅನುವಾದಗಳು, ಅದರ ಸುಸೂತ್ರ ಪ್ರಸಾರ, ಇದರ ಸುತ್ತ ದೇಶದ ಎಲ್ಲ ಆಕಾಶವಾಣಿ ಕೇಂದ್ರಗಳೂ ಕೆಲಸ ಮಾಡುತ್ತಾ ಬಂದಿವೆ.

“ಮೇರೆ ಪ್ಯಾರೇ ದೇಶ ವಾಸಿಯೋ..” ಅಂತ ಶುರು ಆದರೆ, ಎಲ್ಲರೂ ಕಿವಿಗೊಡಲು ಶುರು ಮಾಡಿದರು. ಕೋಟಿ ಕೋಟಿ ಜನ ಆಲಿಸಿದರು. ಪ್ರಧಾನಿಗಳು ಜನರನ್ನು ಯಾವ ರೀತಿ ಬೇಕಾದರೂ ತಲುಪಬಹುದಿತ್ತು. ಆದರೆ ಅವರು ಅರಿಸಿಕೊಂಡದ್ದು ಆಕಾಶವಾಣಿಯನ್ನು. ದೇಶದ ಶೇ 99ಕ್ಕೂ ಹೆಚ್ಚು ಮಂದಿಯನ್ನು ತಲುಪುವ ಸಾಂಪ್ರದಾಯಿಕ ಸಂಸ್ಕೃತಿ ವಾಹಿನಿ ಆಕಾಶವಾಣಿಯನ್ನು. ಆಕಾಶವಾಣಿ ಎಂಬ ನೆನಪನ್ನು ಎಲ್ಲರ ಹೃದಯಗಳಲ್ಲಿ ಅರಳಿಸಿದರು.

ಮನ್ ಕೀ ಬಾತ್.. ಇಂದು ಜನಜನಿತ. ಆಟೋ ದಲ್ಲಿ ಹೋಗುವಾಗ, “ಆಕಾಶವಾಣಿ” destination ನೋಡಿ ಅವ ಕೇಳುತ್ತಾನೆ, “ಅಲ್ಲಿಂದನೇ ಅಲ್ವಾ ಮನ್ ಕಿ ಬಾತ್ ಬರೋದು.” ಮನೆಯಲ್ಲಿ ಏನಾದರೂ ಕಾರ್ಯ ಕ್ರಮ ಇದ್ದು, ಭಾನುವಾರ ಆದರೂ ಹೋಗದೆ ಇದ್ದರೆ, ಅಮ್ಮ ಕೇಳ್ತಾರೆ, “ಏನೇ, ಮನ್ ಕೀ ಬಾತ್ dutyನಾ” ಅಂತ. ಹೇಗೆ ಮಾಡ್ತಾರೆ ಮನ್ ಕಿ ಬಾತ್.. ಸ್ನೇಹಿತರ ಪ್ರಶ್ನೆ. ಒಟ್ಟಿನಲ್ಲಿ ಮನ್ ಕಿ ಬಾತ್ ಪ್ರಧಾನಿಗಳ ಮಾತಾಗಿ ಉಳಿದಿಲ್ಲ. ಅವರೇ ಹೇಳಿದಂತೆ ಅದು ಪ್ರತಿಯೊಬ್ಬರ ಮನದ ಮಾತಾಗಿ ಹರಿಯಿತು.

ಇದನ್ನೂ ಓದಿ: Mann Ki Baat: ಮೋದಿಯವರ ಮನ್​ ಕೀ ಬಾತ್​ ಒಂದು ಎಪಿಸೋಡ್​ಗೆ 8.3 ಕೋಟಿ ರೂ.ವೆಚ್ಚ?; ವೈರಲ್​ ಸಂದೇಶ ನಿಜವೇ?

ಖಾಸಗಿ ವಾಹಿನಿಗಳು, ಪತ್ರಿಕೆಗಳು… you tube ವಾಹಿನಿಗಳು ಈ ಸಲ ಏನು ಅಂತ ಕಾದು ಕುಳಿತಿರುತ್ತಿದ್ದರು. ಮನ್ ಕೀ ಬಾತ್ ಕಾರ್ಯಕ್ರಮವನ್ನು ಹೀಗಳೆದವರೂ ಇಂದು ಮೂಗಿನ ಮೇಲೆ ಬೆರಳಿಡುವಂತೆ ಆಗಿದೆ. ಇದು ಮನೆಯ ಸದಸ್ಯನಾಗಿದೆ. ಇದು ಜನರ ಆಂದೋಲನವೇ ಆಗಿದೆ. ಇಲ್ಲಿ ಪಕ್ಷ ಮುಖ್ಯ ಅಲ್ಲ, ಪ್ರಧಾನಿ ಮತ್ತು ದೇಶ ಮುಖ್ಯ ಎಂಬುದನ್ನು ಗಮನದಲ್ಲಿ ಇರಿಸಿ ನೋಡಿದರೆ ನೀವು ಹೆಮ್ಮೆ ಪಡುತ್ತೀರಿ. ಖಂಡಿತ.

(ಲೇಖಕರು ಉದ್ಘೋಷಕರಾಗಿ ಕಳೆದ 30 ವರ್ಷಗಳಿಂದ ಆಕಾಶವಾಣಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಹಲವಾರು ಕಾರ್ಯಕ್ರಮಗಳನ್ನು ರೂಪಿಸಿ ಪ್ರಸ್ತುತ ಪಡಿಸಿದ್ದಾರೆ. ಮಾಧ್ಯಮ ಮತ್ತು ಭಾಷೆ ವಿಶೇಷ ಆಸಕ್ತಿ. ನಿರೂಪಣೆ, ಮಾತಲ್ಲ ಗೀತೆ ಪ್ರಕಟಿತ ಕೃತಿಗಳು. ಲೇಖನ ಅಂಕಣಗಳನ್ನು ಬರೆದಿದ್ದಾರೆ. ಕೊರೊನಾ ಸಂದರ್ಭದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದ್ದಾರೆ. ಪ್ರಧಾನಮಂತ್ರಿಗಳು ಕೊರೊನಾ ಸಮಯದಲ್ಲಿ ನಿರೂಪಕರ ಜೊತೆ ನಡೆಸಿದ ವಿಡಿಯೋ ಸಂವಾದದಲ್ಲಿ ಭಾಗವಹಿಸಿ ಬೆಂಗಳೂರು ಆಕಾಶವಾಣಿಯನ್ನು ಪ್ರತಿನಿಧಿಸಿದ್ದಾರೆ.)

Exit mobile version