Site icon Vistara News

Marriage Problem: ವಿವಾಹವೆಂಬ ಬಂಧನದಿಂ ದೂರ ನಿಲ್ವನೇ ಮಾಡರ್ನ್ ಇಂಡಿಯನ್ ಪುರುಷ?

marriage-problem-in-youth

#image_title

ಸೋಮೇಶ್ವರ ಗುರುಮಠ
ಮದುವೆ ಎಂಬುದು ಪ್ರತಿಯೋರ್ವ ವ್ಯಕ್ತಿಯ ಬಾಳಿನ ಅತ್ಯಂತ ಪ್ರಮುಖ ಘಟ್ಟ. ಭಾರತೀಯ ಪರಂಪರೆಯಲ್ಲಂತೂ ಗೃಹಸ್ಥ ಜೀವನ ಅತ್ಯಂತ ಹೊಣೆಗಾರಿಕೆಯುಳ್ಳದ್ದೆಂಬುದು ಸಾರ್ವಕಾಲಿಕವಾಗಿ ಸಾಬೀತಾಗುತ್ತಲೇ ಬಂದಿದೆ. ಯೋಗ್ಯನು ಮಾತ್ರವೇ ವಿವಾಹಕ್ಕೆ ಅರ್ಹನೆಂಬ ನಂಬುಗೆಯಿಲ್ಲಿದೆ. ಆದರೆ ಇತ್ತೀಚಿನ ದಿನಮಾನಗಳಲ್ಲಿ ಒಂದೆಡೆ ವಿವಾಹವನ್ನು ತಿರಸ್ಕರಿಸಿ ನಿಂತ ಯುವಕರೊಂದೆಡೆಯಾದರೆ, ವಿವಾಹಕ್ಕೆ ಅರ್ಹತೆಯನ್ನು ಹೊಂದಿಯೂ ಕನ್ಯೆ ಸಿಗದ ಕಾರಣಕ್ಕೆ ಅವಿವಾಹಿತರಾಗಿಯೇ ಉಳಿದ ಪ್ರವರ್ಗ ಮತ್ತೊಂದೆಡೆ.

2014ರಲ್ಲಿ ಲೋಕಸಭಾ ಚುನಾವಣೆಯ ಕಾಲಘಟ್ಟದಲ್ಲಿ ಹರಿಯಾಣದ ಪ್ರದೀಪ್ ಸಿಂಗ್ ಸೇರಿದಂತೆ ಇತರೆ ಯುವಕರ ಪಡೆಯೊಂದು ರಾಜಕಾರಣಿಗಳ ಸನಿಹ ತೆರಳಿ ವಿಚಿತ್ರವಾದ ಬೇಡಿಕೆಯೊಂದನ್ನು ಇಟ್ಟರಂತೆ. ಏನೆಂದರೆ, ”ಬಹು ದಿಲಾವೋ ವೋಟ್ ಪಾವೋ”( ಮತಪಡೆಯಲು ಮನೆಗೆ ಸೊಸೆಯನ್ನು ನೀಡಿ) ಎಂಬ ಬೇಡಿಕೆ. ”ಜಿಂದ್ ಕುವಾರಾ ಯೂನಿಯನ್” ಎಂಬ ಅವಿವಾಹಿತ ಯುವಕರ ಸಂಘವೇ ಇಂತಹ ಬೇಡಿಕೆಯನ್ನು ಮುಂದೆ ಇಟ್ಟಿತ್ತು. ಇನ್ನು ಪ್ರದೀಪ್ ಸಿಂಗ್ ಇದೇ ಸಂಘಟನೆಯ ಭಾಗವಾಗಿದ್ದರು. ನಿಮಗೆ ತಕ್ಷಣವೇ ಮತವನ್ನು ನೀಡಲು ನಾವು ಸಿದ್ದರಿದ್ದೇವೆ, ಆದರೆ ನಮಗೆ ವರಿಸಲು ಕನ್ಯೆಯನ್ನು ಅರ್ಥಾತ್ ಹೆಂಡತಿಯನ್ನು ಹುಡುಕಿ ಕೊಡುವ ಹೊಣೆಗಾರಿಕೆಯನ್ನು ನೀವು ಹೊತ್ತುಕೊಳ್ಳಬೇಕು ಎಂದಿದ್ದರು. ಆಗ ಆಡಳಿತ ಪಕ್ಷದ ಸಂಸದರೊಬ್ಬರು ”ನಮ್ಮ ಪಕ್ಷಕ್ಕೆ ಮತ ಹಾಕಿದರೆ, ಮದುವೆಯಾಗದ ಹುಡುಗರಿಗೆ ಹೆಂಡತಿ ಸಿಕ್ಕಂತೆಯೇ” ಎಂದು ನೀಡಿದ ಹೇಳಿಕೆ ಭಾರಿ ವೈರಲ್ ಆಗಿತ್ತು.

2007ರಲ್ಲಿ ನಡೆದ ಲೋಕನೀತಿ ಸಿ.ಯಸ್.ಡಿ.ಎಸ್ ಯೂಥ್ ಸ್ಟಡೀಸ್‌ರವರ ಸಮೀಕ್ಷೆಯ ಪ್ರಕಾರ ಭಾರತದಲ್ಲಿ ಶೇಕಡಾ 51 ರಷ್ಟು ಯುವಕರು ಅಂದಿನ ಸಂದರ್ಭದಲ್ಲಿ ಅವಿವಾಹಿತರಾಗಿ ಉಳಿದಿದ್ದರು. ತದನಂತರ, 2016 ರಲ್ಲಿ, ಅಂದರೆ ಸರಿಯಾಗಿ 7 ವರ್ಷಗಳ ಆನಂತರ ನಡೆದ ಲೋಕನೀತಿ ಸಿ.ಯಸ್.ಡಿ.ಎಸ್ ಯೂಥ್ ಸ್ಟಡೀಸ್ ರವರ ಸಮೀಕ್ಷೆಯಲ್ಲಿ ಶೇಕಡಾವಾರು ಪ್ರಮಾಣ 61% ಗೆ ಏರಿಕೆಯಾಗಿತ್ತು. ಹಾಗಿದ್ದಲ್ಲಿ ಯುವಕರಿಗೇನು ಮದುವೆಯಲ್ಲಿ ಆಸಕ್ತಿಯಿಲ್ಲವೆಂದೇನಿಲ್ಲ, ಬದಲಿಗೆ ಮದುವೆಯಾಗಲು ಎಲ್ಲಿಯೂ ಕನ್ಯೆಯೇ ಸಿಗುತ್ತಿಲ್ಲವೆಂಬುದು ಅವರ ಆಪಾದನೆಯಾಗಿತ್ತು. ಹೀಗಾಗಿಯೇ ಹರಿಯಾಣ ರಾಜ್ಯದಲ್ಲಿ ವಧುವನ್ನು ಹುಡುಕಲು ಪಕ್ಕದ ರಾಜಸ್ಥಾನ, ಬಿಹಾರ, ಉತ್ತರಪ್ರದೇಶ, ಪಂಜಾಬ್ ಮತ್ತು ಪಶ್ಚಿಮ ಬಂಗಾಳದಂತಹ ರಾಜ್ಯಗಳ ಮೊರೆ ಹೋಗುತ್ತಾರೆ. ಅಲ್ಲಿಂದ ಬಂದಂತಹ ವಧುವನ್ನು ”ಮೋಲ್ ಕಿ ಬಹುಯೇ” (ಖರೀದಿಸಿ ತಂದ ಹೆಂಡತಿಯರು) ಎಂದಿವರು ಸಂಬೋಧಿಸುತ್ತಾರೆ. ಮೇಲ್ಕಂಡ ಕೆಲ ರಾಜ್ಯಗಳಲ್ಲಿ ಕಡುಬಡತನದ ಕುಟುಂಬಗಳ ಸಂಖ್ಯೆಯೇ ಹೆಚ್ಚಿರುವ ಕಾರಣ ವರದಕ್ಷಿಣೆಯನ್ನು ನೀಡಿಯೋ ಅಥವಾ ಹಣ ಪಡೆದು ಅನ್ಯ ಅನೈತಿಕ ಮಾರ್ಗಗಳಿಂದ ತಮ್ಮ ಮಕ್ಕಳನ್ನು ಹಸ್ತಾಂತರಿಸುವ ಎಷ್ಟೋ ಕುಟುಂಬಗಳು ಮತ್ತು ಜಾಲಗಳಿವೆ. ಇದುವೇ ಹ್ಯೂಮನ್ ಟ್ರಾಫಿಕಿಂಗ್ ನಂತಹ ಸಮಸ್ಯೆಗಳಿಗೆ ನಾಂದಿ ಹಾಡುತ್ತವೆ.

ಹಾಗಿದ್ದಲ್ಲಿ ನವಯುಗದಲ್ಲಿ ಬಹುಯುವಕರು ಅವಿವಾಹಿತರಾಗಿಯೇ ಉಳಿಯಲು ಪ್ರಮುಖವಾದ ಕಾರಣಗಳೇನೆಂದರೆ –

1. ಲಿಂಗ ಅನುಪಾತದಲ್ಲಿನ ಅಜಗಜಾಂತರ ವ್ಯತ್ಯಾಸ – ಪ್ರದೀಪ್ ಸಿಂಗ್ ಅವರೇ ಹೇಳುವಂತೆ ಬಹುಪಾಲು ಯುವಕರಿಗೆ ಮದುವೆಯಾಗೋಣವೆಂದರೆ ಕನ್ಯೆ ಸಿಗುತ್ತಿಲ್ಲ. ಇದಕ್ಕೆ ಕಾರಣವೇ ಲಿಂಗ ಅನುಪಾತದಲ್ಲಿನ ವ್ಯತ್ಯಾಸ. ನ್ಯಾಷನಲ್ ಫ್ಯಾಮಿಲಿ ಹೆಲ್ತ್ ಸರ್ವೇ 2015 -16 ರ ಪ್ರಕಾರ ಮತ್ತು ವರ್ಷದ ಹಿಂದಷ್ಟೇ ನೀಡಿದ ಅಂಕಿ ಅಂಶಗಳನ್ನು ಗಮನಿಸಿದರೆ ಸದ್ಯ ವಯಸ್ಕರ ಮಟ್ಟದಲ್ಲಿ 1000 ಪುರುಷರಿಗೆ 1020 ಸಂಖ್ಯೆಯಲ್ಲಿ ಮಹಿಳೆಯರಿದ್ದರೂ ಹೆಣ್ಣು ಮಗುವಿನ ಜನನ ಪ್ರಮಾಣದಲ್ಲಿ ಯಾವುದೇ ಪ್ರಗತಿಯಿಲ್ಲವಂತೆ. PEW  ರಿಸರ್ಚ್ ಪ್ರಕಾರ ಭಾರತದಲ್ಲಿ ಪ್ರತೀ 1000 ಗಂಡು ಮಗುವಿಗೆ 925 ರಂತೆ ಹೆಣ್ಣು ಮಗುವಿನ ಜನನವಾಗುತ್ತಿದೆ. ಅಂತೆಯೇ UNFPA ರವರ 2020 ರಲ್ಲಿ ಪ್ರಕಟಿತವಾದ ವರದಿಯ ಪ್ರಕಾರ 2013 ರಿಂದ 2017 ರವರೆಗೂ ಅಂದಾಜು 4,60,000 ದಷ್ಟು ಹೆಣ್ಣುಮಕ್ಕಳ ಜನನ ಸಂಖ್ಯೆಯಲ್ಲಿ ಕುಸಿತ ಕಂಡಿದೆ. ಬೇರೆ ದೇಶಗಳಿಗೆ ಹೋಲಿಸಿದರೆ ಮೇಲಿನ ಅನುಪಾತವೂ ಸಹ ಅಪಾಯಕಾರಿ ಹಂತದಲ್ಲಿಯೇ ಉಂಟು. ಹಾಗಿದ್ದಲ್ಲಿ ಇದಕ್ಕೆ ಪ್ರಮುಖ ಕಾರಣವೇನು? ನಮ್ಮ ದೇಶದ ಕೆಲ ಸಮುದಾಯಗಳಲ್ಲಿ ಇಂದಿಗೂ ಮನೆ ಮಾಡಿರುವ ಪೂರ್ವಾಗ್ರಹ ಪೀಡಿತವಾದ ತಾರತಮ್ಯ ಮನೋಭಾವವೆನ್ನಬಹುದು. ಹೆಣ್ಣು ಮಗುವಿಗಿಂತ ಗಂಡು ಮಗು ಜನಿಸಿದರೆ ಹೆಚ್ಚಿನ ಸಂಭ್ರಮ. ಏಕೆಂದರೆ, ವರದಕ್ಷಿಣೆಯ ಚಿಂತೆಯೆಲ್ಲ, ಆಕೆಯನ್ನು ರಕ್ಷಿಸುವ ಹೊಣೆಗಾರಿಕೆಯಿಲ್ಲ, ಅಲ್ಪ ಎಡವಿದರೂ ಅವಮಾನಕ್ಕೀಡುಮಾಡುವ ಗಂಡಿನ ಮನೆಯವರ ಕುರಿತು ಯೋಚನೆಯಿಲ್ಲ. ಇದೆ ಜತೆಗೆ, ವಂಶವನ್ನು ಮುನ್ನಡೆಸಲು ಮತ್ತು ನಿಧನನಾದ ನಂತರ ಅಂತಿಮ ಸಂಸ್ಕಾರ ಮತ್ತು ಕ್ರಿಯಾವಿಧಿ ನೆರವೇರಿಸಲು ಗಂಡು ಮಗಯವೇ ಬೇಕು ಎಂಬ ಮನಃಸ್ಥಿತಿಯೂ ಕಾರಣ. ಇದೇ ಕಾರಣಕ್ಕೆ ಹರಿಯಾಣದಂತೆಯೇ ಬಹುಪಾಲು ರಾಜ್ಯಗಳಲ್ಲಿಯೂ ಇಂತಹುದೇ ಸಮಸ್ಯೆ ತಲೆದೂರುತ್ತಿದೆ. 

ಹಾಗಿದ್ದಲ್ಲಿ ಈ ಅನುಪಾತದಲ್ಲಿನ ವ್ಯತ್ಯಾಸ ಸೃಷ್ಟಿಸಿರುವ ಅಲ್ಲೋಲ ಕಲ್ಲೋಲಗಳ ಪರಿಣಾಮ ಕೇವಲ ಪುರುಷರ ಮೇಲಾಗುತ್ತಿದೆಯೇ? ಇಲ್ಲ. ಇದರ ಪರಿಣಾಮ ಮಹಿಳೆಯರ ಮೇಲೂ ಬೀರುತ್ತಿದೆ. ಇತ್ತೀಚಿನ ಯುವತಿಯರನ್ನು ಎರೆಡು ವಿಭಾಗಗಳಲ್ಲಿ ವಿಂಗಡಿಸಬಹುದಾಗಿದೆ. ಮೊದಲನೇಯದಾಗಿ ಸಾಮಾಜಿಕವಾಗಿ, ಶಯಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಸಧೃಢತೆಯನ್ನು ಹೊಂದಿದ ಯುವತಿ. ಆಕೆ ತನ್ನಿಚ್ಚೆಯಂತೆ ಯೋಗ್ಯ ವರನನ್ನು ಹುಡುಕಿ ಮದುವೆಯಾಗುವ ಅಥವಾ ಅವನನ್ನು ಅಷ್ಟೇ ಅಧಿಕಾರದಿಂದ ತಿರಸ್ಕರಿಸುವ ಶಕ್ತಿಯನ್ನು ಹೊಂದಿದ್ದಾಳೆ.

ಉತ್ತರ ಪ್ರದೇಶದಲ್ಲಂತೂ ‘ವರ’ನೋರ್ವ ಕನ್ನಡಕವನ್ನು ಧರಿಸುತ್ತಾನೆಂಬ ಕಾರಣಕ್ಕೆ ಮತ್ತೋರ್ವ ಯುವತಿ ತನ್ನ ಹುಡುಗನಿಗೆ ಗಣಿತದ ಸಮಸ್ಯೆಗಳನ್ನು ಬಿಡಿಸಲು ಬರದೆಂಬ ಕಾರಣಕ್ಕೆ ಮದುವೆ ನಿರಾಕರಿಸಿದಂತಹ ಉದಾಹರಣೆಗಳು ಒಂದೆಡೆಯಿವೆ. ಆದರೆ ಮತ್ತೊಂದೆಡೆ ಹರಿಯಾಣದ ”ಮೋಲ್ ಕಿ ಬಹುಯೇ” ರೂಪದಲ್ಲಿ ಆರ್ಥಿಕವಾಗಿ, ಶೈಕ್ಷಣಿಕವಾಗಿ ದುರ್ಬಲರಾಗಿರುವ ಯುವತಿಯರ ಕುಟುಂಬಗಳು ಬಹುಬೇಗನೆ ಅವರನ್ನು ಸಂಸಾರಕ್ಕೆ ನೂಕಿ ಬಿಡುತ್ತವೆ. ಇನ್ನು ತಮಿಳುನಾಡಿನ ತಮಿಳ್ ಬ್ರಾಹ್ಮಣ ಅಸೋಸಿಯೇಷನ್ ಅಧ್ಯಕ್ಷರಾದ ‘ನಾರಾಯಣನ್’ ಹೇಳುವಂತೆ  ತಮ್ಮ ಸಮಾಜದ ಪ್ರತೀ 10 ಯುವಕರಿಗೆ ತಮಿಳುನಾಡಿನಲ್ಲಿ ಕೇವಲ 6 ಜನ ಕನ್ಯೆಯರಿರುವ ಕಾರಣ ಕೋ ಆರ್ಡಿನೇಟರ್ಗಳ ಸಹಾಯದಿಂದ ಯು.ಪಿ ಮತ್ತು ಬಿಹಾರದಂತಹ ರಾಜ್ಯದಿಂದ ಕನ್ಯೆ ತರುವ ಅಥವಾ ಹುಡುಕುವ ಪ್ರಯತ್ನವನ್ನು ಮಾಡುತ್ತಿದ್ದಾರಂತೆ.

2. ಸರ್ಕಾರಿ ನೌಕರಿ ಹೊಂದಿರುವ ವರನ ಅನ್ವೇಷಣೆ – ಬಹುಶಃ ಇತ್ತೀಚಿನ ದಿನಮಾನಗಳಲ್ಲಿ ವಧುವರರ ಅನ್ವೇಷಣಾ ಕೇಂದ್ರಗಳ ಬದಲು ಸರ್ಕಾರಿ ನೌಕರಿ ವರ ಅನ್ವೇಷಣಾ ಕೇಂದ್ರಗಳು ಅಘೋಷಿತವಾಗಿ ಸಮಾಜದಲ್ಲಿ ಪ್ರಾರಂಭಿಸಲ್ಪಟ್ಟಿವೆಯೆಂದರೆ ತಪ್ಪಾಗಲಿಕ್ಕಿಲ್ಲ. ಏಕೆಂದರೆ, ಪ್ರತೀ ಕುಟುಂಬವೂ ತಮ್ಮ ಹುಡುಗಿಯನ್ನು ವರಿಸುವ ಹುಡುಗನ ಕೈಯಲ್ಲಿ ಸರ್ಕಾರಿ ಕೆಲಸವಿರಬೇಕೆಂದು ಬಯಸುತ್ತದೆ. ಕಾರಣ ಅದು ಮಾತ್ರವೇ ಸುರಕ್ಷಿತ ಮತ್ತು ನಿರಂತರ ಆರ್ಥಿಕ ನೆರವನ್ನು ನೀಡಬಲ್ಲದೆಂಬುದು ಅವರ ಅಭಿಪ್ರಾಯ. ಕಾಶ್ಮೀರ, ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ, ಮಹಾರಾಷ್ಟ್ರಾದ ಮರಾಠವಾಡದಲ್ಲಿ ಇಂತಹ ಬೇಡಿಕೆಗಳಿವೆ. ಮರಾಠವಾಡದಲ್ಲಿಯಂತೂ ಯಾವ ರೈತಾಪಿ ಕುಟುಂಬವೂ ತಮ್ಮ ಮಗಳನ್ನು ಮತ್ತೋರ್ವ ರೈತನಿಗೆ ನೀಡಿ ಮದುವೆ ಮಾಡಿಸುವುದಿಲ್ಲ. ಕಾರಣವೇನೆಂದರೆ, ತಮ್ಮ ಬದುಕಿನಂತೆಯೇ ಆಕೆಯ ಬದುಕೂ ಸಹ ಆರ್ಥಿಕವಾಗಿ ಅಸ್ಥಿರವಾಗಿರಬಾರದೆಂದು ಹೇಳುತ್ತಾರೆ. ಈ ಸಮಸ್ಯೆಯನ್ನು ಕಳೆದ ವರ್ಷ ಮಂಡ್ಯದಲ್ಲಿಯಾದ ವಧು ಹುಡುಕಿ ಕೊಡಿ ಎಂಬ ಘಟನೆಗೂ ತಾಳೆ ಹಾಕಿ ನೋಡಿದರೆ ನಿಜವಾದ ಸಮಸ್ಯೆಯ ಮೂಲವನ್ನು ಅರಿಯಬಹುದು. ಖಾಸಗಿ ಕ್ಷೇತ್ರಗಳಲ್ಲಿಯೂ ಲಕ್ಷಾಂತರ ರೂಪಾಯಿಯನ್ನು ಗಳಿಸಬಹುದೆಂಬ ಪರಿಕಲ್ಪನೆಯನ್ನು ಇಂತಹ ಕುಟುಂಬಗಳಿಗೆ ಕಟ್ಟಿಕೊಡಲು ಬಹುಶಃ ಅಂಬಾನಿಯವರೇ ಬರಬೇಕೇನೋ?

3. ಆರ್ಥಿಕ ಅಸುರಕ್ಷತೆಯ ಭಾವ – ಇತ್ತೀಚಿಗೆ, ಭಾರತದ ಸುಮಾರು 10,000 ಸಂಖ್ಯೆಯ ತರುಣವರ್ಗವನ್ನು ಗುರಿಯಾಗಿಸಿಕೊಂಡು ನಡೆಸಿದ YouGov-Mint-CPR Millenial ಅಧ್ಯಯನದ ಪ್ರಕಾರ ಶೇಕಡಾ 40 ರಷ್ಟು ತರುಣರು ಮದುವೆಯಾಗಲು ಹಿಂದೇಟು ಹಾಕುತ್ತಿದ್ದಾರಂತೆ. ಇದಕ್ಕೆ ಪ್ರಮುಖ ಕಾರಣವೇ ಆರ್ಥಿಕ ಅಸುರಕ್ಷತೆಯ ಭಾವ. ಜೀವನದಲ್ಲಿ ಸೆಟಲ್ ಆಗಬೇಕೆಂದು ಸುಮ್ಮನಿರುವರು. ವಯಸ್ಸು ಮೂವತ್ತೈದಾದರೂ ಮದುವೆಯ ಗೋಜಲಿಗೆ ತೆರಳದ ಹಲವಾರು ಯುವಕರನ್ನಿಂದು ಕಾಣಬಹುದು.

ಇದರ ಜೊತೆಜೊತೆಗೆ ತಮ್ಮ ಮಗನಿಗೆ ಕನ್ಯೆ ಸಿಗದ ಕಾರಣ ಮಾನಸಿಕ ಒತ್ತಡಕ್ಕೊಳಗಾಗಿ ಹೃದಯಾಘಾತದಿಂದ ಮೃತಪಟ್ಟ ದುರ್ದೈವಿ ಪಾಲಕರ ಉದಾಹರಣೆಗಳೂ ಉಂಟು. ಮಹಾರಾಷ್ಟ್ರದಲ್ಲಿಯಂತೂ ಯುವಕರ ಪಡೆಯೊಂದು ಕುದುರೆಯ ಮೇಲೆ ಕುಳಿತು ವರರಂತೆ ಸಿಂಗಾರಗೊಂಡು ಡಿಸ್ಟ್ರಿಕ್ ಕಲೆಕ್ಟರ್ ಆಫೀಸಿನ ಎದುರು ತೆರಳಿ ತಮಗೆ ವಧುವನ್ನು ಹುಡುಕಿ ಕೊಡುವಂತೆ ಮನವಿ ಸಲ್ಲಿಸಿದ್ದ ಘಟನೆಯೂ ಉಂಟು. ಅವರಲ್ಲಿ 37 ವರ್ಷದ ವ್ಯಕ್ತಿಯೊಬ್ಬರು ಅವಿವಾಹಿತರಾಗಿರುವ ಕಾರಣ ತಮ್ಮ ಮೇಲೆ ಉಂಟಾಗುತ್ತಿರುವ ಮಾನಸಿಕ ದುಷ್ಪಾರಿಣಾಮಗಳನ್ನು ಮಾಧ್ಯಮದ ಮುಂದೆ ಬಹಿರಂಗವಾಗಿಯೇ ಹೇಳಿಕೊಂಡಿದ್ದೂ ಇದೆ. ನಮ್ಮ ಪುರುಷ ಪ್ರಧಾನ ಸಮಾಜದಲ್ಲಂತೂ ಪುರುಷರ ಮಾನಸಿಕ ಒತ್ತಡ, ಕ್ಷೋಭೆಗಳಂತಹ ಸಮಸ್ಯೆಗಳನ್ನು ಚರ್ಚಿಸಲು ಮುಕ್ತವಾದ ವಾತಾವರಣ ದೊರೆಯುವುದೇ ವಿರಳಾತೀವಿರಳವೆನ್ನಬಹುದು.

ಈ ಮೂರು ಪ್ರಮುಖ ಕಾರಣಗಳ ಜೊತೆಗೆ ವಿವಾಹವಾದರೆ ಪುರುಷನು ಅಪರಾಧಿ ಕೃತ್ಯಗಳಲ್ಲಿ ಭಾಗಿಯಾಗುವ ಸಂಭವ ಅತ್ಯಂತ ಕಡಿಮೆಯಾಗಿರುತ್ತದೆಂಬ ಸಮೀಕ್ಷಾ ವರದಿಗಳೂ ಉಂಟು. ಏಕೆಂದರೆ, ಆತನಿಗೆ ಕೌಟುಂಬಿಕ ಜವಾಬ್ದಾರಿಯಿರುತ್ತದೆ, ಜೊತೆಜೊತೆಗೆ ಸಮಾಜ ಆತನನ್ನು ನೋಡುವ ರೀತಿಯಲ್ಲೂ ವ್ಯತ್ಯಾಸವಿರುತ್ತದೆ. ಆತ ಸ್ವಲ್ಪವೇ ಎಡವಿದರೂ ಗೌರವಕ್ಕೆ ಧಕ್ಕೆಯಾಗುವ ಸಂದರ್ಭಗಳು ಬಂದೊದಗಬಹುದು. ಹೀಗಾಗಿಯೇ ಆತ ಕುಕೃತ್ಯಗಳಲ್ಲಿ ಭಾಗಿಯಾಗನೆಂದು ಅಮೆರಿಕೆಯ ಬ್ಯುರೋ ಆಫ್ ಜಸ್ಟಿಸ್  ಸಮೀಕ್ಷೆ ಹೇಳುವುದು. ಆದರೆ ಭಾರತದ ಗೃಹಸ್ಥ ಆಶ್ರಮದ ಪ್ರವೇಶ ನಿಬಂಧನೆಗಳ ಅಂತರ್ಯವೇ ಇವುಗಳಿಗಿಂತ ಭಿನ್ನವಾಗಿ ಆತ ಅತ್ಯಂತ ಯೋಗ್ಯನಾದ ಮೇಲೆಯೇ ವಿವಾಹಕ್ಕೆ ಅರ್ಹನೆಂದು ನುಡಿಯುತ್ತವೆ. ಯಾರೇನೇ ನುಡಿಯಲಿ ”ವಿವಾಹವೆಂಬ” ಬಂಧನದಿಂ ನಮ್ಮ ಮಾಡರ್ನ್ ಇಂಡಿಯನ್ ಪುರುಷ ದೂರ ನಿಂತಿರುವುದಂತೂ ಸುಳ್ಳಲ್ಲ.

ಲೇಖಕ: ಸೋಮೇಶ್ವರ ಗುರುಮಠ ಅವರು ಉದಯೋನ್ಮುಖ ಲೇಖಕ, ವಾಗ್ಮಿ, ಕಿರುಚಿತ್ರ ನಿರ್ದೇಶಕ, ಹಾಡುಗಾರ, ಕವಿ, ನಿರೂಪಕ, ಅಂಕಣಗಾರ ಹಾಗೂ ರಾಗ ಸಂಯೋಜಕ.

Exit mobile version