Site icon Vistara News

ವಾರದ ವ್ಯಕ್ತಿಚಿತ್ರ | ಮುಸೋಲಿನಿ ಅಭಿಮಾನಿ ಮೆಲೋನಿ ಇಟಲಿಯ ಪ್ರಧಾನಿ

Georgia

“ನಾವು ಇತಿಹಾಸದ ಹಸುಗೂಸುಗಳಾಗಿದ್ದೇವೆ. ಇತಿಹಾಸದುದ್ದಕ್ಕೂ ನಾವು ಮಕ್ಕಳೇ ಆಗಿದ್ದೇವೆ. ಬೇರೆ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶ ಸಾಗಿ ಬಂದ ಹಾದಿ ಜಟಿಲವಾಗಿದೆ. ನೀವು ತಿಳಿದುಕೊಂಡಿರುವುದಕ್ಕಿಂತ ಸಂಕೀರ್ಣತೆಯಿಂದ ಕೂಡಿದೆ”… ಜೋರ್ಜಿಯಾ ಮೆಲೋನಿ ಎಂಬ ಮುಸೋಲಿನಿ ಅಭಿಮಾನಿಯು 2021ರಲ್ಲಿ ಪ್ರಕಟಿಸಿದ “I Am Giorgia” ಆತ್ಮಚರಿತ್ರೆಯಲ್ಲಿ ದೇಶದ ಇತಿಹಾಸದ ಬಗ್ಗೆ ಹೀಗೆ ಬರೆದುಕೊಂಡಿದ್ದರು. ಆದರೆ, ದೇಶದ ಇತಿಹಾಸದ ಬಗ್ಗೆ ಮಾತನಾಡಿದ್ದ ಜೋರ್ಜಿಯಾ ಮೆಲೋನಿ ಅವರೇ ಇಟಲಿಯ ಭವಿಷ್ಯ ರೂಪಿಸಲು ಹೊರಟಿದ್ದಾರೆ.

ಹೌದು, ಹೊಸ ಮನ್ವಂತರಕ್ಕೆ ಇಟಲಿ ಸಾಕ್ಷಿಯಾಗುತ್ತಿದೆ. ಬೆನಿಟೊ ಮುಸೋಲಿನಿ ಅವರಂತೆಯೇ ಬಲಪಂಥೀಯವಾದವನ್ನು ಪ್ರಭಾವಿಯಾಗಿ ಪ್ರತಿಪಾದಿಸುತ್ತಿರುವ ಪಕ್ಷ ಎಂದೇ ಕರೆಯುವ ಬ್ರದರ್ಸ್‌ ಆಫ್‌ ಇಟಲಿ ಪಕ್ಷದ ನಾಯಕಿ ಮೆಲೋನಿ ಜೋರ್ಜಿಯಾ ಅವರು ದೇಶದ ಮೊದಲ ಮಹಿಳಾ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಳ್ಳಲು ಸಜ್ಜಾಗಿದ್ದಾರೆ. ಚುನಾವಣೆ ಫಲಿತಾಂಶದ ಪ್ರಕಾರ ಅವರೇ ಇಟಲಿ ಪ್ರಧಾನಿಯಾಗುವುದು ನಿಶ್ಚಿತವಾಗಿದ್ದು, ಕೆಲವು ದಿನಗಳ ಪ್ರಕ್ರಿಯೆ ಬಳಿಕ ಅವರು ಅಧಿಕಾರದ ಗದ್ದುಗೆ ಏರಲಿದ್ದಾರೆ. ಹಾಗಾಗಿ, ಸರ್ವಾಧಿಕಾರಿ ಮುಸೋಲಿನಿಯ ಅಭಿಮಾನಿ ಆಗಿರುವ, ಕಟ್ಟರ್‌ ಬಲಪಂಥೀಯವಾದಿಯಾಗಿರುವ 45 ವರ್ಷದ ಮೆಲೋನಿ ಅವರ ಮುಂದಿನ ಆಡಳಿತ, ನಿಲುವು, ಧೋರಣೆ ಹೇಗಿರಲಿದೆ ಎಂಬ ಕುತೂಹಲ, ನಿರೀಕ್ಷೆಯು ಸಹಜವಾಗಿಯೇ ಮೂಡಿದೆ. ಇದರ ಜತೆಗೆ, ಮೆಲೋನಿ ಜೋರ್ಜಿಯಾ ಸಾಗಿ ಬಂದ ಹಾದಿ, ಪ್ರತಿಪಾದಿಸಿದ ಸಿದ್ಧಾಂತ, ಏಳಿಗೆ ಹೊಂದಿದ ರೀತಿಯ ಬಗ್ಗೆಯೂ ಕುತೂಹಲ ಹೆಚ್ಚಾಗಿದೆ.

ಮೆಲೋನಿ ಎಂಬ ಗಟ್ಟಿಗಿತ್ತಿ

ಜಗತ್ತಿನ ಯಾವ ಸಾಧಕರ ಸಾಧನೆಯೂ ಸುಲಭವಾಗಿ ಇರುವುದಿಲ್ಲ. ಸುಲಭವಾಗಿ ಸಿಗಲು ಯಶಸ್ಸೇನು ಅಲ್ಲಾವುದ್ದೀನನ ದೀಪವೂ ಅಲ್ಲ. ಜೋರ್ಜಿಯಾ ಮೆಲೋನಿ ಅವರೂ ಇಂತಹ ಏಳು-ಬೀಳುಗಳನ್ನು ಕಂಡೇ ಏಳಿಗೆ ಹೊಂದಿದ್ದಾರೆ. ಮೆಲೋನಿ ಹುಟ್ಟಿದ ಕೂಡಲೇ ತಂದೆ ಎನಿಸಿಕೊಂಡವನು ನಡು ನೀರಿನಲ್ಲಿ ಕೈಬಿಟ್ಟ. ಇದ್ದ ತಾಯಿಯೊಬ್ಬಳೇ ಮೆಲೋನಿಗೆ ತಂದೆಯೂ ಆದಳು, ತಾಯಿಯೂ ಆದಳು. ಮೆಲೋನಿ ಜೀವನ ಹೀಗೆ ಆರಂಭವಾಯಿತು. ವಿಶ್ವವಿದ್ಯಾಲಯದ ಮೆಟ್ಟಿಲೇ ಹತ್ತದ, ತಾಯಿಗೆ ಆಸರೆಯಾಗಲು ಸಣ್ಣಪುಟ್ಟ ಕೆಲಸಗಳನ್ನು ಮಾಡಿದ ಮೆಲೋನಿ ಈಗ ದೇಶದ ಉನ್ನತ ಹುದ್ದೆ ಅಲಂಕರಿಸಲು ಮುಂದಾಗಿರುವುದು ಅವರ ಗಟ್ಟಿತನಕ್ಕೆ ಸಾಕ್ಷಿಯಾಗಿದೆ.

ಇಟಲಿಯಲ್ಲಿ ಜೋರ್ಜಿಯಾ ಮೆಲೋನಿ ಕ್ರೇಜ್‌.

ಚಿಕ್ಕಂದಿನಿಂದಲೇ ತುಂಬ ತುಂಟಿಯಾಗಿದ್ದ, ಎಲ್ಲರೊಂದಿಗೂ ಬೆರೆಯುವ ಗುಣ ಹೊಂದಿದ್ದ ಮೆಲೋನಿ ತನ್ನ ೧೫ನೇ ವಯಸ್ಸಿನಲ್ಲಿಯೇ ಎಡಪಂಥೀಯವಾದಿಗಳ ವಿರುದ್ಧ ನಿಲುವು ತಾಳಿದರು. ಅದೇ ವಯಸ್ಸಿನಲ್ಲಿ ನಿಯೋಫ್ಯಾಸಿಸ್ಟ್‌ ಇಟಾಲಿಯನ್‌ ಸೋಷಿಯಲ್‌ ಮೂವ್‌ಮೆಂಟ್‌ ಸೇರಿದರು. ಮತ್ತೊಂದು ಬಲಪಂಥೀಯ ಪಕ್ಷವಾದ ನ್ಯಾಷನಲ್‌ ಅಲಯನ್ಸ್‌ನ ವಿದ್ಯಾರ್ಥಿ ಘಟಕವನ್ನು ಮುನ್ನಡೆಸಿದರು. ಒಂದೊಂದೇ ಹೆಜ್ಜೆಗಳನ್ನು ಇಡುತ್ತ ಯುವ ನಾಯಕಿಯಾಗಿ ಹೊರಹೊಮ್ಮಿದರು. ೨೦೦೬ರಲ್ಲಿ ಇಟಲಿ ಪಾರ್ಲಿಮೆಂಟ್‌ನ ಚೇಂಬರ್‌ ಆಫ್‌ ಡೆಪ್ಯೂಟೀಸ್‌ಗೆ ಆಯ್ಕೆಯಾದರು. ಇದಾದ ಎರಡೇ ವರ್ಷಕ್ಕೆ ಯುವಜನ ಖಾತೆಯು ಅವರನ್ನು ಅರಸಿ ಬಂದಿತು. ದೇಶದಲ್ಲೇ ಅತಿ ಕಿರಿಯ ಸಚಿವೆ ಎಂಬ ಹೆಗ್ಗಳಿಕೆಗೂ ಪಾತ್ರರಾದರು. ಮೆಲೋನಿ ಅವರಲ್ಲಿದ್ದ ನಾಯಕತ್ವ ಗುಣವೇ ೨೦೧೨ರಲ್ಲಿ ಬ್ರದರ್ಸ್‌ ಆಫ್‌ ಇಟಲಿ ಎಂಬ ಪಕ್ಷವನ್ನು ಸ್ಥಾಪಿಸುವಂತೆ ಮಾಡಿತು. ಅಲ್ಲಿಂದ ಮೆಲೋನಿಯವರ ಚಹರೆಯೇ ಬದಲಾಯಿತು.

ಚುನಾವಣೆ ಪ್ರಚಾರದ ವೇಳೆ ಜೋರ್ಜಿಯಾ ಮೆಲೋನಿ.

ಸ್ಪಷ್ಟ ನಿಲುವು, ಜನರ ಒಲವು

ಜಗತ್ತಿನ ಬಹುತೇಕ ಬಲಪಂಥೀಯ ನಾಯಕರಂತೆಯೇ ಜೋರ್ಜಿಯಾ ಮೆಲೋನಿ ಸ್ಪಷ್ಟ ನಿಲುವುಗಳನ್ನು ಹೊಂದಿದ್ದಾರೆ. “ನೀವು ಹಿಟ್ಲರ್‌, ಮುಸೋಲಿನಿ, ವ್ಲಾಡಿಮಿರ್‌ ಪುಟಿನ್‌ ಅವರಂತೆಯೇ ಸರ್ವಾಧಿಕಾರಿ” ಎಂದು ಪ್ರತಿಪಕ್ಷಗಳು ಜರಿದರೆ, “ಮುಸೋಲಿನಿ ಒಬ್ಬ ಸಂಕೀರ್ಣ ನಾಯಕ” ಎನ್ನುತ್ತಾರೆ. “ನಾನು ಉಕ್ರೇನ್‌ ಪರ” ಎಂದು ಹೇಳುವ ಮೂಲಕ ಪುಟಿನ್‌ ಅವರನ್ನು ತಿರಸ್ಕರಿಸುತ್ತಾರೆ. “ನಾನೊಬ್ಬ ಮಹಿಳೆ, ತಾಯಿ, ಇಟಲಿಯ ಹೆಮ್ಮೆಯ ಪ್ರಜೆ. ನಾನು ಕ್ರಿಶ್ಚಿಯನ್‌. ಯಾವುದೇ ಕಾರಣಕ್ಕೂ ನೀವಿದನ್ನು ನನ್ನಿಂದ ದೂರ ಮಾಡಲು ಆಗುವುದಿಲ್ಲ” ಎಂದು ವಿರೋಧಿಗಳಿಗೆ ಸಂದೇಶ ರವಾನಿಸುತ್ತಾರೆ. “ಇಸ್ಲಾಂ ಹಿಂಸಾಚಾರಕ್ಕೆ ಜಾಗವಿಲ್ಲ, ಗಡಿ ಸುರಕ್ಷತೆಯಲ್ಲಿ ರಾಜಿ ಇಲ್ಲ. ದೇಶದ ಜನರಿಗಾಗಿ ದುಡಿಯಲು ಸದಾ ಸಿದ್ಧ. ಅಂತಾರಾಷ್ಟ್ರೀಯ ಹಣದ ಋಣಭಾರ ನಮಗೆ ಬೇಕಿಲ್ಲ” ಎಂದು ಹೇಳುವ ಮೂಲಕ ಮೆಲೋನಿ ಜನರ ಮನಸ್ಸಿನಲ್ಲಿ ಸ್ಥಾನ ಪಡೆದಿದ್ದಾರೆ. ಹಾಗಾಗಿಯೇ, ಶೇ.೪೪ರಷ್ಟು ಮತ ಪಡೆದು ಗೆಲುವು ಸಾಧಿಸಿದ್ದಾರೆ.

ಸವಾಲು ಮೆಟ್ಟಿ ನಿಲ್ಲುವರೇ ಮೆಲೋನಿ?

ಇನ್ನೇನು ಕೆಲವೇ ದಿನಗಳಲ್ಲಿ ಜೋರ್ಜಿಯಾ ಮೆಲೋನಿ ಇಟಲಿಯ ಪ್ರಧಾನಿಯಾಗಿ ಆಯ್ಕೆಯಾಗುತ್ತಾರೆ. ಆದರೆ, ಇದುವರೆಗೆ ಚುನಾವಣೆಗಳಲ್ಲಿ ಅವರು ನೀಡಿದ ಭರವಸೆ, ಎರಡನೇ ವಿಶ್ವಯುದ್ಧದ ಬಳಿಕ ಆಡಳಿತಕ್ಕೆ ಬಂದ ಬಲಪಂಥೀಯ ಸರ್ಕಾರವನ್ನು ಮುನ್ನಡೆಸುವುದು, ಜನರ ಆಶೋತ್ತರಗಳಿಗೆ ತಕ್ಕಂತೆ ಆಡಳಿತ ನಡೆಸುವುದು ಸೇರಿ ಹಲವು ಸವಾಲುಗಳು ಮೆಲೋನಿ ಅವರ ಎದುರಿವೆ. ಅದರಲ್ಲೂ, ಮುಸೋಲಿನಿ ಅಭಿಯಾನಿ ಎಂಬುದರ ಹೊರತಾಗಿಯೂ ಪ್ರಜಾಸತ್ತಾತ್ಮಕ ಆಡಳಿತ ನೀಡುವ ಜವಾಬ್ದಾರಿ ಅವರ ಮೇಲಿದೆ.

ಸರ್ಕಾರ ರಚನೆಯಾಗುತ್ತಲೇ ಮುಂದಿನ ಬಜೆಟ್‌ಗೆ ಮೆಲೋನಿ ಹಾಗೂ ಅವರ ಸಂಪುಟ ಅಣಿಯಾಗಬೇಕು. ಆರ್ಥಿಕ ಬೆಳವಣಿಗೆ ಕುಂಟುತ್ತಿದೆ. ಬ್ಯಾಂಕ್‌ಗಳ ಬಡ್ಡಿದರ ಏರಿಕೆಯಾಗುತ್ತಿದೆ. ಇದೆಲ್ಲವನ್ನೂ ಮೆಟ್ಟಿನಿಲ್ಲುವ ಮುಂಗಡಪತ್ರವನ್ನು ಮೆಲೋನಿ ಅವರಿಂದ ಜನ ನಿರೀಕ್ಷಿಸುತ್ತಿದ್ದಾರೆ. ಹಾಗೆಯೇ, ದೇಶದಲ್ಲಿ ಇಂಧನ ಕೊರತೆ ಇದೆ. ವಿದ್ಯುತ್‌ ಬೆಲೆಯೇರಿಕೆ ತಡೆಯಲು, ಇದರ ಬಿಸಿ ಜನರಿಗೆ ತಟ್ಟದಂತೆ ಮಾಡಲು ಇಟಲಿ ೬೬ ಶತಕೋಟಿ ಯುರೋಗಳನ್ನು ವ್ಯಯಿಸಿದೆ. ಇಂಧನ ಖರೀದಿಗೆ ಸಣ್ಣ ಉದ್ಯಮಗಳು ಪರದಾಡುತ್ತಿವೆ. ಅಡುಗೆ ಅನಿಲಕ್ಕೂ ಸಮಸ್ಯೆಯಾಗುತ್ತಿದೆ. ಬೆಲೆಗಳು ಏರಿಕೆ ಕಂಡಿವೆ. ಇವುಗಳೆಲ್ಲವನ್ನೂ ಮೆಲೋನಿ ಮೆಟ್ಟಿನಿಲ್ಲಬೇಕಿದೆ. ವಲಸಿಗರದ್ದು ಸಮಸ್ಯೆ ಎಂದು ಹೇಳುವ ಮೆಲೋನಿ ಅವರು, ಆ ಸಮಸ್ಯೆ ಕುರಿತು ಹೇಗೆ ಪ್ರತಿಕ್ರಿಯಿಸುತ್ತಾರೆ, ಯಾವ ನಿಯಮ ಜಾರಿಗೆ ತರುತ್ತಾರೆ ಎಂಬುದನ್ನು ಕಾದುನೋಡಬೇಕು.

ಮೆಲೋನಿ ಬಗ್ಗೆ ಇರುವ ಆತಂಕವೇನು?

ಮೊದಲೇ ಹೇಳಿದಂತೆ, ಜೋರ್ಜಿಯಾ ಮೆಲೋನಿ ಒಬ್ಬ ಕಟ್ಟರ್‌ ಬಲ ಪಂಥೀಯವಾದಿ. ಕೆಲವೊಂದು ವಿಚಾರಗಳಲ್ಲಿ ಅವರ ನಿಲವುಗಳು ಸರಿಯೋ, ತಪ್ಪೋ, ಆದರೆ ಅವು ಜಾರಿಗೆ ತಂದೇ ತೀರುವೆ ಎನ್ನುವ ರೀತಿಯಲ್ಲಿ ಮೆಲೋನಿ ಮಾತನಾಡುತ್ತಾರೆ. ಸಲಿಂಗಕಾಮವನ್ನು ಮೆಲೋನಿ ವಿರೋಧಿಸುತ್ತಾರೆ. ಅಪ್ಪ ಬಿಟ್ಟು ಹೋಗಿದ್ದಕ್ಕೋ ಏನೋ, ಕುಟುಂಬಗಳ ಮೌಲ್ಯಗಳ ಬಗ್ಗೆ ಮಾತನಾಡುತ್ತಾರೆ. ಕುಟುಂಬ ವ್ಯವಸ್ಥೆ ಹೀಗೆಯೇ ಇರಬೇಕು ಎಂದು ಪ್ರತಿಪಾದಿಸುತ್ತಾರೆ. ಅಕ್ರಮ ವಲಸಿಗರನ್ನು ಹೊರಗೆ ಹಾಕುತ್ತೇನೆ ಎಂದು ಹೇಳುತ್ತಾರೆ. ಹಾಗಾಗಿ, ದೇಶದಲ್ಲಿ ಮತ್ತೆ ಸರ್ವಾಧಿಕಾರ ಜಾರಿಗೆ ಬರುತ್ತದೆಯೋ ಎಂಬ ಆತಂಕ ಮನೆ ಮಾಡಿದೆ.

ದೇಶದಲ್ಲಿ ಮಾತ್ರವಲ್ಲ, ವಿದೇಶದಲ್ಲಿಯೂ ಮೆಲೋನಿ ಅವರ ಬಗ್ಗೆ ಅಸಮಾಧಾನ ಇದೆ. ಎಡಪಂಥೀಯ ನಿಲುವುಳ್ಳ ಸರ್ಕಾರವಿರುವ ಅಮೆರಿಕ ಸೇರಿ ಹಲವು ರಾಷ್ಟ್ರಗಳಲ್ಲಿ ಈಗಾಗಲೇ ಮೆಲೋನಿ ಅವರ ಬಗ್ಗೆ ಆತಂಕ ಮೂಡಿದೆ ಎಂದೂ ಹೇಳಲಾಗುತ್ತಿದೆ. ಆದರೆ, ಬಲಪಂಥೀಯ ಸರ್ಕಾರವಿರುವ ಹಲವು ರಾಷ್ಟ್ರಗಳು, ಎಡಪಂಥೀಯ ಸರ್ಕಾರವಿರುವ ಕೆಲ ರಾಷ್ಟ್ರಗಳು ಮೆಲೋನಿ ಅವರ ಪರ ಮಾತನಾಡಿವೆ. ಆದರೆ, ಎಡ-ಬಲದ ಮಧ್ಯೆ “ನೇರ”ವಂತಿಕೆಗೆ ಆದ್ಯತೆ ನೀಡುವ ಮೆಲೋನಿ ಮುಂದಿನ ದಿನಗಳಲ್ಲಿ ಹೇಗೆ ಆಡಳಿತ ನಡೆಸುತ್ತಾರೆ? ದೇಶದ ಅಭ್ಯುದಯಕ್ಕೆ ಏನು ಮಾಡುತ್ತಾರೆ? ಮುಸೋಲಿನಿ ಅಭಿಮಾನಿಯಾಗಿ, ಅವರಂತೆಯೇ ವರ್ತಿಸುತ್ತಾರಾ ಎಂಬ ಪ್ರಶ್ನೆಗಳಂತೂ ಇಟಲಿ ನಾಗರಿಕರಿಗೆ ಮಾತ್ರವಲ್ಲ, ಜಗತ್ತಿನ ಬಹುತೇಕ ರಾಷ್ಟ್ರಗಳಿಗೂ ಕಾಡುತ್ತಿದೆ.

ಇದನ್ನೂ ಓದಿ | ಒಕ್ಕೂಟದಲ್ಲಿ ಹೆಚ್ಚಿದ ಉದ್ವಿಗ್ನತೆ; ಇಟಲಿ ಪ್ರಧಾನಮಂತ್ರಿ ಮಾರಿಯೊ ಡ್ರಾಘಿ ರಾಜೀನಾಮೆ

Exit mobile version