Site icon Vistara News

ನೇತಾಜಿ ನೆನಪು : ದಣಿವರಿಯದ ಹೋರಾಟಗಾರ ಸುಭಾಶ್ಚಂದ್ರ ಬೋಸ್

Netaji bose

| ಡಾ.ಡಿ.ಸಿ ರಾಮಚಂದ್ರ

ಸುಭಾಶ್‌ಚಂದ್ರ ಬೋಸ್ ಜನಿಸಿದ್ದು 1897ರ ಜನವರಿ 23ರಂದು, ಒಡಿಶಾದ ಕಟಕ್‍ನಲ್ಲಿ. ತಂದೆ ಜಾನಕೀನಾಥ ಬೋಸ್, ತಾಯಿ ಪ್ರಭಾವತಿ. ಆ ದಂಪತಿಗಳ 14 ಜನ ಮಕ್ಕಳಲ್ಲಿ ಸುಭಾಶ್ 9ನೆಯವರು. ಕಟಕ್‍ನಲ್ಲಿ ರಯಾವೆನ್‍ಶಾ ಕೊಲಿಜಿಯೇಟ್ ಶಾಲೆಯಲ್ಲಿ ಪ್ರಾಥಮಿಕ ವ್ಯಾಸಂಗ, ಅಲ್ಲಿ ಮುಖ್ಯೋಪಾಧ್ಯಾಯ ಬೇಣಿ‌ ಮಾಧವದಾಸ್‍ರಿಂದ ಪ್ರೇರಣೆ, ಮುಂದೆ ವಿವೇಕಾನಂದರ ಸಾಹಿತ್ಯಗಳು, ಪತ್ರಗಳು ಮತ್ತು ‘ಕೊಲೊಂಬೋದಿಂದ ಆಲ್ಮೋರಾಕ್ಕೆ’ ಉಪನ್ಯಾಸಗಳಿಂದ ಪ್ರಭಾವಿತರಾದ ಬೋಸರು ಅರವಿಂದರ ʼಆರ್ಯ’ ಮಾಸಪತ್ರಿಕೆಯ ತಪ್ಪದ ಓದುಗರಾದರು.

1919ರಲ್ಲಿ ತತ್ವಶಾಸ್ತ್ರ ವಿಭಾಗದಲ್ಲಿ ಬಿ.ಎ. ಪದವಿ, ನಂತರ 1919ರ ಸೆಪ್ಟೆಂಬರ್ 15ರಂದು ಐ.ಸಿ.ಎಸ್ ಪರೀಕ್ಷೆಗಾಗಿ ಇಂಗ್ಲೆಂಡಿಗೆ ಪಯಣ. 1920ರ ಸೆಪ್ಟಂಬರ್‌ನಲ್ಲಿ ನಾಲ್ಕನೇ ಸ್ಥಾನಿಗರಾಗಿ ಐ.ಸಿ.ಎಸ್ ಪದವಿ ಪ್ರಾಪ್ತಿ. ವಿದೇಶಿ ನೌಕರಿ ಒಲ್ಲೆ ಎಂದು ಗಳಿಸಿದ್ದ ಐ.ಸಿ.ಎಸ್. ಪದವಿಯನ್ನು 1921ರ ಏಪ್ರಿಲ್ 22ರಂದು ಬ್ರಿಟಿಷ್‌ ಸರ್ಕಾರದ ಭಾರತ ವ್ಯವಹಾರ ಸಚಿವ ಎಡ್ವಿನ್ ಮಾಂಟೆಗುಗೆ ಪತ್ರವೊಂದನ್ನು ಬರೆದು ಮರಳಿಸಿದ್ದರು ಬೋಸ್!

ನೇತಾಜಿ ಎಂದೇ ಪ್ರಸಿದ್ಧರಾದ ಸುಭಾಶ್‌ಚಂದ್ರ ಬೋಸ್ ಸ್ವಾತಂತ್ರ್ಯ ಸಂಗ್ರಾಮದ ಪ್ರಮುಖ ಸೇನಾನಿಗಳಲ್ಲಿ ಒಬ್ಬರು. ಸ್ವಾಮಿ ವಿವೇಕಾನಂದರ ವಿಚಾರಗಳಿಂದ ಪ್ರಭಾವಿತರಾದ ಇವರು ಭಾರತ ಸ್ವಾತಂತ್ರ್ಯ ಹೋರಾಟದಲ್ಲಿ ಅತ್ಯಂತ ವಿಶಿಷ್ಟ ಪಾತ್ರ ವಹಿಸಿದವರು. ಭಾರತವು ಸ್ವಾತಂತ್ರ್ಯ ಪಡೆಯಲು ಭಾರತಕ್ಕೆ ಸಹಾಯ ಮಾಡಿದ ಜರ್ಮನಿ, ಜಪಾನ್, ರಷ್ಯಾಗಳಂತಹ ದೇಶಗಳು ಬ್ರಿಟಿಷ್‌ ವಿರುದ್ಧ ಹೋರಾಡಲು ಮತ್ತು ಸ್ವಾತಂತ್ರ್ಯ ಪಡೆಯಲು ಬೋಸರಿಗೆ ಸಹಾಯ ಮಾಡಲು ಸಿದ್ಧವಾಗಿದ್ದವು ಎಂದು ಭಾವಿಸಲಾಗಿದೆ. ಗಾಂಧಿಯವರು ಸ್ವಾತಂತ್ರ್ಯ ಪಡೆಯುವ ಬಗೆಗೆ ಒಂದೇ ಮಾರ್ಗದಲ್ಲಿದ್ದರು. ಆದರೆ ಬೋಸ್ ಸ್ವಾತಂತ್ರ್ಯಕ್ಕೆ ಸಶಸ್ತ್ರ ಹೋರಾಟವನ್ನೂ ಒಪ್ಪಿದ್ದರು. ಅವರ ಹೋರಾಟವು ಭಾರತ ಸ್ವಾತಂತ್ರ್ಯ ಪಡೆಯುವಲ್ಲಿ ಜನರನ್ನು ಉತ್ತೇಜಿಸಿ ತನ್ನದೇ ಆದ ಕೊಡುಗೆ ನೀಡಿದೆ ಎಂದು ಭಾವಿಸಲಾಗಿದೆ.

ರಾಷ್ಟ್ರ ನಿರ್ಮಾಣದ ಜವಾಬ್ದಾರಿ

ರಾಷ್ಟ್ರ ನಿರ್ಮಾಣದ ಜವಾಬ್ದಾರಿಯುತ ಸ್ಥಾನದಲ್ಲಿದ್ದು ರಾಷ್ಟ್ರಹಿತಕ್ಕೆ ಧಕ್ಕೆಯಾಗುವ ಯಾವುದೇ ವಿಷಯಗಳಲ್ಲಿ ದುರ್ಬಲನೀತಿ ಹೊಂದಿರಬಾರದೆಂಬ ಮಾತು ಸುಭಾಷರದಾಗಿತ್ತು. ಕಾಂಗ್ರೆಸ್‍ನ ಬಲಹೀನ ನಾಯಕತ್ವ, ದುರ್ಬಲ ಒಪ್ಪಂದಗಳು, ಸ್ವಾಭಿಮಾನ ಶೂನ್ಯ ವರ್ತನೆಗೆ ಪ್ರತಿಯಾಗಿ ಆತ್ಮಾಭಿಮಾನದ ಸ್ವರಾಜ್ಯ ಹೋರಾಟಕ್ಕೆ ಬಲತುಂಬಿದವರು ಸುಭಾಷರು.

ತಾನು ಕಷ್ಟಪಟ್ಟುಗಳಿಸಿದ್ದ ಐ.ಸಿ.ಎಸ್. ಪದವಿಯನ್ನೇ ತಿರಸ್ಕರಿಸಿ, ಸ್ವಾತಂತ್ರ್ಯ ಸಂಗ್ರಾಮಕ್ಕೆ ಧುಮುಕಿದ ಬೋಸ್‍ರಿಗಿದ್ದ ರಾಜಕೀಯ ಚಿಂತನೆಯ ವೈಶಾಲ್ಯತೆ ಆ ಕಾಲಮಾನದ ಯಾರೊಬ್ಬರಲ್ಲೂ ಇರಲಿಲ್ಲ. ಆಸ್ಟ್ರಿಯಾ, ಇಂಗ್ಲೆಂಡ್, ಜರ್ಮನಿ, ಜಪಾನ್ ಸೇರಿದಂತೆ ಹತ್ತಾರು ರಾಷ್ಟ್ರಗಳಲ್ಲಿ ಮಿಂಚಿನ ಓಡಾಟ ನಡೆಸಿ ಭಾರತೀಯ ಸ್ವರಾಜ್ಯ ಹೋರಾಟದ ದನಿಗೆ ತೀವ್ರತೆ ತಂದಿದ್ದ ಬೋಸರು, ತಾನು ನಂಬಿದ್ದ ಕ್ರಾಂತಿಪಥದಲ್ಲಿ ಎಂದೂ ರಾಜಿ ಮಾಡಿಕೊಂಡವರಲ್ಲ.

ಸ್ವರಾಜ್ಯ ಪಕ್ಷ ಸ್ಥಾಪನೆ

1927ರ ನವೆಂಬರ್‌ನಲ್ಲಿ ಬಂಗಾಳ ಪ್ರದೇಶ ಕಾಂಗ್ರೆಸ್‍ನ ಅಧ್ಯಕ್ಷರಾಗಿ ಆಯ್ಕೆಯಾದರು, ಆದರೆ ಗಾಂಧಿ ಪ್ರಣೀತ ಮಂದಗಾಮಿ ಮಾರ್ಗಕ್ಕಿಂತ ಸುಭಾಷರದು ತೀರಾ ಭಿನ್ನ ಎಂಬುದು ಕ್ರಮೇಣವಾಗಿ ಗೊತ್ತಾಯಿತು. ಹತ್ತಾರು ಚಳವಳಿಗೆ ನೇತೃತ್ವ, ಅಖಿಲಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್‍ನ ಅಧ್ಯಕ್ಷರಾಗಿ ಆಯ್ಕೆಯಾದರು. 1933, ಫೆಬ್ರವರಿ 23ರಂದು ಯೂರೋಪಿನಲ್ಲಿ ಭಾರತದ ಸ್ವಾತಂತ್ರ್ಯ ಹೋರಾಟಪರ ಅಭಿಯಾನವನ್ನು ಆರಂಭಿಸಿದರು. ಇಂಗ್ಲೆಂಡ್, ಆಸ್ಟ್ರಿಯಾ, ಇಟೆಲಿಗೆ ಭೇಟಿ ನೀಡಿ, ತ್ವರಿತಗತಿಯ ಪ್ರವಾಸ, ಮಿಂಚಿನ ಓಡಾಟ ಮಾಡಿದರು. ಸ್ವಿಟ್ಜರ್ಲೆಂಡ್, ಚೆಕೋಸ್ಲೋವಾಕಿಯಾ, ಪೋಲೆಂಡ್, ಜರ್ಮನಿಗಳಲ್ಲಿ ಭಾರತದ ಪರ ಅಬ್ಬರದ ಪ್ರಚಾರ ಮಾಡಿದರು. ಇಟೆಲಿ ಪ್ರಧಾನಿ ಬೆನಿತೋ ಮುಸ್ಸೋಲಿನಿ ಜತೆ ಚರ್ಚೆ ಮಾಡಿ, 1936 ಏಪ್ರಿಲ್ 8ರಂದು ಮರಳಿ ಭಾರತಕ್ಕೆ ಬಂದ ನಂತರ ಬಂಧನವಾದರು. 1937ರಲ್ಲಿ ಮತ್ತೆ ಆಸ್ಟ್ರಿಯಾ ಪಯಣ.

ಇದನ್ನೂ ಓದಿ | ರಾಜ ಮಾರ್ಗ ಅಂಕಣ | ನೇತಾಜಿ ಬಗ್ಗೆ ಒಂದೊಂದು ಮಾತು ಆಡುವಾಗಲೂ ಚರ್ಚಿಲ್‌ ಧ್ವನಿ ನಡುಗ್ತಿತ್ತು! ಅವ್ರು ಹೆದರಿದ್ದೇಕೆ?

ಕಾಂಗ್ರೆಸ್‍ನ ಡೋಲಾಯಮಾನ ನೀತಿಗಳಿಗೆ ಬೇಸತ್ತು ಚಿತ್ತರಂಜನ್‌ ದಾಸ್‌ ಜತೆಗೆ ʼಸ್ವರಾಜ್ಯʼ ಪಕ್ಷ ಸ್ಥಾಪನೆ ಮಾಡಿದರು. ಬೋಸ್‍ರು ದಾಸ್‍ರ ಜತೆಗೆ ಚಟುವಟಿಕೆಗಳಲ್ಲಿ ಭಾಗಿಯಾಗಿ 1923ರ ಅಕ್ಟೋಬರ್‌ನಿಂದ ದಾಸ್‍ರು ಸ್ಥಾಪಿಸಿದ್ದ ʼಫಾರ್ವರ್ಡ್’ ದಿನಪತ್ರಿಕೆಯ ನಿರ್ವಹಣೆಯ ಜವಾಬ್ದಾರಿಯನ್ನು ವಹಿಸಿಕೊಂಡರು. 1925ರ ಜೂನ್ 16, ದಾಸ್‍ರ ನಿಧನ, ಕ್ರಾಂತಿಕಾರಿ ಚಟುವಟಿಕೆಗಳಿಗಾಗಿ ಬೋಸ್‍ರ ಬಂಧನ, ಬಿಡುಗಡೆಯಾಯಿತು.

ರಾಜಕೀಯ ಅನುಭವ

ಕಾಂಗ್ರೆಸ್‍ನ ಅಖಿಲ ಭಾರತ ಅಧಿವೇಶನದ ಅಧ್ಯಕ್ಷತೆ 1938ರ ಫೆಬ್ರವರಿ 19ರಂದು, ಹರಿಪುರದಲ್ಲಿ ನಡೆಯಿತು. ವಿದೇಶಿ ನೆಲಗಳ ಓಡಾಟದಿಂದ ಪಡೆದ ರಾಜಕೀಯ ಅನುಭವ-ಒಳನೋಟಗಳಿಂದ ಬ್ರಿಟಿಷರ ಒಡೆದು ಆಳುವ ನೀತಿ ಕುರಿತ ಐತಿಹಾಸಿಕ ಭಾಷಣ, ದೇಶ ವಿಭಜನೆಯ ಬ್ರಿಟಿಷರ ತಂತ್ರದ ಸೂಚನೆ. ಮುಂದಿನ 9 ವರ್ಷದಲ್ಲೇ ಸತ್ಯವಾದ ಬೋಸ್ ಭವಿಷ್ಯವಾಣಿ! ಆರೆಸ್ಸೆಸ್‍ನ ʼಸಂಘ ಶಿಕ್ಷಾವರ್ಗ’ ಶಿಬಿರಕ್ಕೆ 1938ರಲ್ಲಿ ಭೇಟಿಗೆ ಒಪ್ಪಿಗೆ ನೀಡಿದರು, ಸಂಘದ ಧ್ಯೇಯ – ಅನುಶಾಸನ ಕಾರ್ಯಪದ್ಧತಿ ಕುರಿತ ಶ್ಲಾಘನೆ ಮಾಡಿದರು, ಆದರೆ ಕಾರಣಾಂತರಗಳಿಂದ ಭೇಟಿ ಸಾಧ್ಯವಾಗಲಿಲ್ಲ.

ಕಾಂಗ್ರೆಸ್ ಅಧ್ಯಕ್ಷ ಗಾದಿಗೆ ನಡೆದ ಮೊತ್ತಮೊದಲ ಚುನಾವಣೆಯಲ್ಲಿ ಡಾ|| ಪಟ್ಟಾಭಿ ಸೀತಾರಾಮಯ್ಯರ ವಿರುದ್ಧ 215 ಮತಗಳ ಗೆಲುವು ಸಾಧಿಸಿದರು. ಸುಭಾಶ್ ವಿರುದ್ಧ ಹಲವಾರು ಟೀಕೆಗಳು, ಅನಗತ್ಯ ಋಣಾತ್ಮಕ ಮಾತುಗಳು ಗಾಂಧೀಜಿಯಿಂದ ಕೇಳಿಬಂದವು. ಸ್ವಾತಂತ್ರ್ಯದ ಮೋಡಗಳು ಸಮೀಪ ಇರುವಂತೆಯೇ ಬ್ರಿಟಿಶ್ ಸರ್ಕಾರದ ಜತೆ ದುರ್ಬಲ ಕಾಂಗ್ರೆಸ್‍ನ ತಾರ್ಕಿಕ ನಡೆಗಳಿಂದ ಬೇಸತ್ತು ಕಾಂಗ್ರೆಸ್‍ಗೆ ರಾಜೀನಾಮೆ ನೀಡಿದರು.

ಇದನ್ನೂ ಓದಿ | ರಾಜ ಮಾರ್ಗ ಅಂಕಣ | ನೇತಾಜಿ ಪ್ರಾಣ ಉಳಿಸಲು ತನ್ನ ಗಂಡನನ್ನೇ ಕೊಂದು ಹಾಕಿದ ನೀರಾ ಆರ್ಯ!

Exit mobile version