Site icon Vistara News

Tejas Aircraft: ಸ್ವದೇಶಿ ʼತೇಜಸ್ʼ ವಿಮಾನದಲ್ಲಿ ಮೋದಿ ಹಾರಾಟ: ಪಾಕಿಸ್ತಾನ, ಚೀನಾಗೆ ನಡುಕ!

modi tejas viman

ಪ್ರಧಾನಿ ನರೇಂದ್ರ ಮೋದಿಯವರು ನವೆಂಬರ್ 25ರಂದು ಭಾರತದ ಸ್ವದೇಶಿ ನಿರ್ಮಾಣದ ಯುದ್ಧ ವಿಮಾನ ‘ತೇಜಸ್’ನಲ್ಲಿ (Tejas Aircraft) 30 ನಿಮಿಷಗಳ ಕಾಲ ಹಾರಾಟ ನಡೆಸಿದರು. ಆ ಮೂಲಕ ತೇಜಸ್ ವಿಮಾನದಲ್ಲಿ (Tejas Aircraft) ಹಾರಾಟ ನಡೆಸಿದ ಭಾರತದ ಪ್ರಥಮ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರವಾದರು. ಈ ಬೆಳವಣಿಗೆ ಭಾರತದ ಶತ್ರು ರಾಷ್ಟ್ರಗಳಾದ ಪಾಕಿಸ್ತಾನ ಮತ್ತು ಚೀನಾಗೆ ನಡುಕ ಮೂಡಿಸಿದೆ. ಮೋದಿಯವರು ಗ್ರೂಪ್ ಕ್ಯಾಪ್ಟನ್ ದೇಬಂಜನ್ ಮಂಡಲ್ ಅವರೊಡನೆ ತೇಜಸ್ ವಿಮಾನದಲ್ಲಿ ಹಾರಾಟ ನಡೆಸಿದರು. ಪ್ರಧಾನಿಯವರನ್ನು ವಾಯುಪಡೆಯ ಮುಖ್ಯಸ್ಥರಾದ ಏರ್ ಚೀಫ್ ಮಾರ್ಷಲ್ ವಿ ಆರ್ ಚೌಧರಿ ಸ್ವಾಗತಿಸಿ, ಸನ್ಮಾನಿಸಿದರು. ಗಮನಾರ್ಹ ಅಂಶವೆಂದರೆ, ವಿವಿಐಪಿಗಳು ಸಾಮಾನ್ಯವಾಗಿ ಸು-30ಎಂಕೆಐನಂತಹ ಅವಳಿ ಎಂಜಿನ್ ಯುದ್ಧ ವಿಮಾನಗಳಲ್ಲಿ ಹಾರಾಟ ನಡೆಸುತ್ತಾರೆ. ಪ್ರಧಾನಿ ಮೋದಿಯವರು ತೇಜಸ್ ವಿಮಾನ ಹಾರಾಟದ ಕುರಿತು ತಮ್ಮ ಅನುಭವವನ್ನು ಟ್ವೀಟ್ ಮೂಲಕ ಹಂಚಿಕೊಂಡಿದ್ದಾರೆ. ಅವರು ಭಾರತದ ಸ್ವದೇಶೀ ನಿರ್ಮಾಣ ಸಾಮರ್ಥ್ಯದ ಕುರಿತು ಭರವಸೆ ವ್ಯಕ್ತಪಡಿಸಿದ್ದು, ತೇಜಸ್ ವಿಮಾನ ಭಾರತದ ಹೆಮ್ಮೆ ಎಂದು ಶ್ಲಾಘಿಸಿದ್ದಾರೆ. ಅವರು ಈ ವಿಮಾನ ಒಂದು ಆಶಾವಾದವನ್ನು ಒದಗಿಸಿದ್ದು, ತೇಜಸ್ ವಿಮಾನ (Tejas Aircraft) ಭಾರತದ 140 ಕೋಟಿ ಜನರ ಸಾಮರ್ಥ್ಯ ಮತ್ತು ಕೌಶಲಗಳನ್ನು ಪ್ರತಿನಿಧಿಸುತ್ತದೆ ಎಂದಿದ್ದಾರೆ.

ತಂತ್ರಜ್ಞರಿಗೆ ಉತ್ತೇಜನ

ಮೋದಿಯವರು ತೇಜಸ್ ವಿಮಾನದ (Tejas Aircraft) ನಿರ್ಮಾಣ ಘಟಕಕ್ಕೆ ಭೇಟಿ ನೀಡಿ, ಎಂಜಿನಿಯರ್‌ಗಳು ಮತ್ತು ತಂತ್ರಜ್ಞರನ್ನು ಉತ್ತೇಜಿಸಿದರು. ಎಚ್ಎಎಲ್ ತೇಜಸ್ ಒಂದು ಎಂಜಿನ್ ಮತ್ತು ಡೆಲ್ಟಾ ವಿಂಗ್ ಹೊಂದಿರುವ, ಹಗುರವಾರ ಬಹುಪಾತ್ರಗಳ ಯುದ್ಧ ವಿಮಾನವಾಗಿದ್ದು, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಓ) ಎಡಿಎ ಮತ್ತು ಎಚ್ಎಎಲ್‌ಗಳು ಜಂಟಿಯಾಗಿ ವಿನ್ಯಾಸಗೊಳಿಸಿ, ಅಭಿವೃದ್ಧಿಪಡಿಸಿವೆ. ತೇಜಸ್ ತನ್ನ ವರ್ಗದಲ್ಲಿ ಅತ್ಯಂತ ಸಣ್ಣದಾದ, ಹಗುರವಾದ ಸೂಪರ್‌ಸಾನಿಕ್ ಯುದ್ಧ ವಿಮಾನವಾಗಿದ್ದು, ಸ್ವದೇಶೀ ನಿರ್ಮಾಣದ ಫ್ಲೈ ಬೈ ವೈರ್ ವ್ಯವಸ್ಥೆ ಹಾಗೂ ಭಾರತೀಯ ನಿರ್ಮಾಣದ ಸಂಯುಕ್ತ ವಸ್ತುಗಳನ್ನು ಒಳಗೊಂಡಿದೆ. ತೇಜಸ್ 2001ರಲ್ಲಿ ತನ್ನ ಪ್ರಥಮ ಹಾರಾಟ ನಡೆಸಿತು. ಅದಾದ ಬಳಿಕ, 2016ರಲ್ಲಿ ‘ಫ್ಲೈಯಿಂಗ್ ಡ್ಯಾಗರ್ಸ್’ ಎಂಬ ಅದರ ಮೊದಲ ಕಾರ್ಯಾಚರಿಸುವ ಸ್ಕ್ವಾಡ್ರನ್ ನಿರ್ಮಾಣಗೊಂಡಿತು.

ಖರೀದಿಗೆ ಆದೇಶ ಸಲ್ಲಿಕೆ

ಭಾರತೀಯ ವಾಯುಪಡೆ (ಐಎಎಫ್) ಈಗಾಗಲೇ 32 ಎಲ್‌ಸಿಎ ಮಾರ್ಕ್ 1, 73 ಮಾರ್ಕ್ 1ಎ, ಹಾಗೂ 18 ಮಾರ್ಕ್ 1 ಎರಡು ಆಸನಗಳ ವಿಮಾನಗಳ ಖರೀದಿಗೆ ಆದೇಶ ಸಲ್ಲಿಸಿದೆ. ಅದರೊಡನೆ, ವಾಯುಪಡೆ ಇನ್ನೂ 97 ಹೆಚ್ಚುವರಿ ಮಾರ್ಕ್ 1ಎ ವಿಮಾನಗಳನ್ನು ಖರೀದಿಸಲು ಉದ್ದೇಶಿಸಿದೆ. ಭವಿಷ್ಯದಲ್ಲಿ ಅಂದಾಜು 200ರಷ್ಟು ಎಲ್‌ಸಿಎ ಮಾರ್ಕ್ 2 ಯುದ್ಧ ವಿಮಾನಗಳು ಬೇಕಾಗಬಹುದೆಂದು ವಾಯುಪಡೆ ಅಂದಾಜಿಸಿದೆ.
ಎಲ್‌ಸಿಎ ಮಾರ್ಕ್1ಎ ವಿಮಾನದ ಆರಂಭಿಕ ಹಾರಾಟ ಮೇ 2022ರಲ್ಲಿ ನೆರವೇರಿತು. ಈ ವಿಮಾನ ಮ್ಯಾಕ್ 1.6ರ ಗರಿಷ್ಠ ವೇಗದಲ್ಲಿ ಚಲಿಸಬಲ್ಲದಾಗಿದ್ದು, 5,300 ಕೆಜಿಯ ತನಕ ಹೊತ್ತು ಸಾಗಬಲ್ಲ ಬಾಹ್ಯ ಹಾರ್ಡ್ ಪಾಯಿಂಟ್‌ಗಳನ್ನು ಹೊಂದಿದೆ. ಇದು ಸ್ಟ್ಯಾಂಡ್ ಆಫ್ ರೇಂಜ್‌ನಿಂದ ವಿವಿಧ ಬಗೆಯ ರಾಕೆಟ್‌ಗಳು, ಕ್ಷಿಪಣಿಗಳು ಮತ್ತು ಬಾಂಬ್‌ಗಳನ್ನು ಹೊತ್ತು ಸಾಗಬಲ್ಲದು. (ಸ್ಟ್ಯಾಂಡ್ ಆಫ್ ರೇಂಜ್ ಎಂದರೆ ಒಂದು ಯುದ್ಧ ವಿಮಾನ ಗುರಿಗೆ ಅತ್ಯಂತ ಸಮೀಪಕ್ಕೆ ತೆರಳದೆ, ಶತ್ರುವಿನ ದಾಳಿಯ ನಿಲುಕಿಗೆ ಒಳಗಾಗದೆ ಶತ್ರುವಿನ ಮೇಲೆ ದಾಳಿ ನಡೆಸಬಲ್ಲ ಸುರಕ್ಷಿತ ಅಂತರವಾಗಿದೆ).

ಎಲೆಕ್ಟ್ರಾನಿಕ್ ವಾರ್‌ಫೇರ್ ಸೂಟ್

ಎಲ್‌ಸಿಎ ಎಂಕೆ1ಎ ವಿಮಾನದ ಆರಂಭಿಕ ತಂಡಗಳು ಎಲ್ಟಾ ಇಎಲ್/ಎಂ-2052 ರೇಡಾರ್‌ಗಳನ್ನು ಹೊಂದಿದ್ದು, ಅದರ ಬದಲಿಗೆ ದೇಶೀಯ ನಿರ್ಮಾಣದ ಎಲ್ಆರ್‌ಡಿಇ ಉತ್ತಮ್ ರೇಡಾರ್ ಅಳವಡಿಸಲಾಗುತ್ತದೆ. ಇದು ಬಹುತೇಕ 40 ಅಭಿವೃದ್ಧಿಗಳನ್ನು ಹೊಂದಿದ್ದು, ಸಮರ್ಥವಾದ ಎಲೆಕ್ಟ್ರಾನಿಕ್ ವಾರ್‌ಫೇರ್ ಸೂಟ್ ಹೊಂದಿದೆ. ಈ ವಿಮಾನ ಅಸ್ತ್ರ ಮತ್ತು ಎಎಸ್ಆರ್‌ಎಎಎಂ ಕ್ಷಿಪಣಿಗಳನ್ನು ಹೊಂದಲಿದ್ದು, ಅವೆಲ್ಲವೂ ದೇಶೀಯ ನಿರ್ಮಾಣದವಾಗಿವೆ. ಇವುಗಳ ಸೇರ್ಪಡೆ 2024ರಲ್ಲಿ ಆರಂಭಗೊಳ್ಳಲಿದೆ.
ತೇಜಸ್ ಎಂಕೆ2 ಅಥವಾ ಮೀಡಿಯಂ ವೆಯ್ಟ್ ಫೈಟರ್ ದೊಡ್ಡ ಗಾತ್ರದ ಯುದ್ಧ ವಿಮಾನವಾಗಿದ್ದು, ಹೆಚ್ಚಿನ ಪೇಲೋಡ್ ಹೊಂದಬಲ್ಲದು. ಇದಕ್ಕೆ ಜನರಲ್ ಇಲೆಕ್ಟ್ರಿಕ್ ಜಿಇ ಎಫ್414 ಐಎನ್ಎಸ್6 ಇಂಜಿನ್ ಶಕ್ತಿ ನೀಡುತ್ತದೆ. ಈ ಎಂಜಿನ್‌ಗಳು ಭಾರತದ ದೇಶೀಯ ನಿರ್ಮಾಣದ ಐದನೇ ತಲೆಮಾರಿನ ಯುದ್ಧ ವಿಮಾನವಾದ ಎಎಂಸಿಎಯಲ್ಲೂ ಬಳಕೆಯಾಗಲಿದೆ.

2024ರಲ್ಲಿ ಹಾರಾಟ ನಡೆಸುವ ನಿರೀಕ್ಷೆ

ತೇಜಸ್ ಎಂಕೆ2 ವಿಮಾನ 2024ರಲ್ಲಿ ಹಾರಾಟ ನಡೆಸುವ ನಿರೀಕ್ಷೆಗಳಿದ್ದು, ಆಧುನಿಕ ಗಾಜಿನ ಕಾಕ್‌ಪಿಟ್, ಆಧುನಿಕ ಎಇಎಸ್ಎ ರೇಡಾರ್, ಹಾಗೂ ಅಂತರ್ಗತ ಇನ್‌ಫ್ರಾರೆಡ್ ಸರ್ಚ್ ಆ್ಯಂಡ್ ಟ್ರ್ಯಾಕ್ (ಐಆರ್‌ಎಸ್‌ಟಿ) ವ್ಯವಸ್ಥೆಗಳನ್ನು ಒಳಗೊಂಡಿದೆ. ಇದರಲ್ಲಿ ಆಮ್ಲಜನಕ ಉತ್ಪಾದನಾ ವ್ಯವಸ್ಥೆ, ಅಂತರ್ಗತ ಇಲೆಕ್ಟ್ರಾನಿಕ್ ವಾರ್‌ಫೇರ್ ಸೂಟ್, ಹಾಗೂ ಹೆಚ್ಚಿನ ಕದನ ವ್ಯಾಪ್ತಿಯನ್ನು ಒಳಗೊಂಡಿದೆ. ಈ ವಿಮಾನ ಅಂತಿಮವಾಗಿ ಮಿರೇಜ್-2000, ಜಾಗ್ವಾರ್ ಹಾಗೂ ಮಿಗ್-29 ವಿಮಾನಗಳ ಬದಲಿಗೆ ಕಾರ್ಯ ನಿರ್ವಹಿಸುವ ಸಾಧ್ಯತೆಗಳಿವೆ.

ಯಶಸ್ವಿ ಲ್ಯಾಂಡಿಂಗ್‌

ನೌಕಾಪಡೆಯ ಆವೃತ್ತಿಗೆ ಸಂಬಂಧಿಸಿದ ಮಹತ್ತರ ಮೈಲುಗಲ್ಲು ಎಂಬಂತೆ, ಎಲ್‌ಸಿಎ ಐಎನ್ಎಸ್ ವಿಕ್ರಮಾದಿತ್ಯ ನೌಕೆಯ ಮೇಲೆ 2020ರಲ್ಲಿ ಯಶಸ್ವಿಯಾಗಿ ಲ್ಯಾಂಡಿಂಗ್ ನಡೆಸಿ, ಬಳಿಕ 18 ಬಾರಿ ಟೇಕಾಫ್ ಮತ್ತು ಲ್ಯಾಂಡಿಂಗ್ ಕೈಗೊಂಡಿತ್ತು. ಫೆಬ್ರವರಿ 2023ರಲ್ಲಿ ಎಲ್‌ಸಿಎ ಮಿಗ್-29ಕೆ ವಿಮಾನದ ಜೊತೆಗೆ ಸ್ವದೇಶೀ ನಿರ್ಮಾಣದ ವಿಮಾನ ವಾಹಕ ನೌಕೆಯಾದ ಐಎನ್ಎಸ್ ವಿಕ್ರಾಂತ್ ಮೇಲೆ ಇಳಿಯಿತು.
2022ರ ವೇಳೆಗೆ, ತೇಜಸ್ ಮಾರ್ಕ್ 1 ಯುದ್ಧ ವಿಮಾನ ತನ್ನ ಮೌಲ್ಯದ 59.7% ಮತ್ತು ಬದಲಾಯಿಸಬಲ್ಲ ಭಾಗಗಳ 75.5% ಸ್ವದೇಶೀ ವಸ್ತುಗಳನ್ನು ಹೊಂದಿತ್ತು. ತೇಜಸ್ ಎಂಕೆ 1ಎ ಆರಂಭದಲ್ಲಿ 50% ಸ್ವದೇಶೀ ವಸ್ತುಗಳನ್ನು ಒಳಗೊಂಡು, ಬಳಿಕ ಯೋಜನೆ ಪೂರ್ಣಗೊಳ್ಳುವ ವೇಳೆಗೆ 60% ಸಾಧಿಸುವ ಗುರಿ ಹೊಂದಿದೆ.

ಎಚ್‌ಎಎಲ್‌ನಿಂದ ನೂತನ ಉತ್ಪಾದನಾ ಘಟಕ

ಎಚ್ಎಎಲ್ ಬೆಂಗಳೂರಿನಲ್ಲಿ ವಾರ್ಷಿಕವಾಗಿ 16 ಎಲ್‌ಸಿಎ ಎಂಕೆ-1ಎ ವಿಮಾನಗಳನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, ನಾಶಿಕ್‌ನಲ್ಲಿ ನೂತನ ಉತ್ಪಾದನಾ ಘಟಕವನ್ನು ಆರಂಭಿಸಿದೆ. ಈ ಮೂಲಕ ಎಚ್ಎಎಲ್ ವಾರ್ಷಿಕವಾಗಿ 24 ಜೆಟ್‌ಗಳನ್ನು ಉತ್ಪಾದಿಸಬಲ್ಲದು. ಈ ಹೆಚ್ಚಳದ ಕಾರಣದಿಂದ, ಎಚ್ಎಎಲ್ ಒಪ್ಪಂದ ಮಾಡಿಕೊಂಡಿರುವ 83 ಯುದ್ಧ ವಿಮಾನಗಳನ್ನು ಅವಧಿಗಿಂತಲೂ ಒಂದು ವರ್ಷ ಮೊದಲೇ, ಅಂದರೆ 2027-28ರಲ್ಲಿ ಒದಗಿಸಬಹುದು. ಭಾರತೀಯ ವಾಯುಪಡೆ ಶೀಘ್ರವಾಗಿ ತನ್ನ ಹಳೆಯದಾಗುತ್ತಿರುವ ಮಿಗ್ 21 ಯುದ್ಧ ವಿಮಾನ ಸ್ಕ್ವಾಡ್ರನ್‌ಗಳನ್ನು ನಿವೃತ್ತಿಗೊಳಿಸಿ, ಅವುಗಳ ಬದಲಿಗೆ ನೂತನ ವಿಮಾನಗಳನ್ನು ಹೊಂದಬೇಕಿರುವುದರಿಂದ, ವಿಮಾನಗಳು ಶೀಘ್ರವಾಗಿ ಪೂರೈಕೆಯಾದಷ್ಟೂ ಅನುಕೂಲಕರವಾಗಿರಲಿದೆ.

ಸಮರ್ಥ ಯುದ್ಧ ವಿಮಾನವಾಗಿ ಸಾಬೀತು

ಎಲ್‌ಸಿಎ ವಿಮಾನ ಭಾರತದ ಏರೋ ಇಂಡಿಯಾ ಪ್ರದರ್ಶನಗಳಲ್ಲಿ ತನ್ನ ಸಾಮರ್ಥ್ಯ ಪ್ರದರ್ಶಿಸಿ, ತಾನು ಸಮರ್ಥ ಯುದ್ಧ ವಿಮಾನ ಎಂದು ಸಾಬೀತುಪಡಿಸಿದೆ. ಎಚ್ಎಎಲ್ ಈಗ ಎಲ್‌ಸಿಎ ವಿಮಾನದ ಎರಡು ಆಸನಗಳ ಲೀಡ್ ಇನ್ ಫೈಟರ್ ಟ್ರೈನರ್ (ಎಲ್ಐಎಫ್‌ಟಿ) ತರಬೇತಿ ಆವೃತ್ತಿಯನ್ನು ಅಭಿವೃದ್ಧಿ ಪಡಿಸುತ್ತಿದೆ. ಎಚ್ಎಎಲ್ ಈಗಾಗಲೇ ಸಂಭಾವ್ಯ ವಿಮಾನ ರಫ್ತಿಗಾಗಿ ಬೋಟ್ಸ್‌ವಾನಾ ಮತ್ತು ಈಜಿಪ್ಟ್‌ನಂತಹ ದೇಶಗಳೊಡನೆ ಮಾತುಕತೆ ನಡೆಸುತ್ತಿದೆ. ತೇಜಸ್ ರಫ್ತಿನ ಅಂಗವಾಗಿ, ಇಂಡೋನೇಷ್ಯಾ, ಮಲೇಷ್ಯಾ, ಶ್ರೀಲಂಕಾ ಮತ್ತು ವಿಯೆಟ್ನಾಂಗಳಲ್ಲಿ ಸಾಗಾಣಿಕಾ ವ್ಯವಸ್ಥೆಯನ್ನು ಸ್ಥಾಪಿಸಲು ಯೋಚಿಸುತ್ತಿದೆ.
ವಿಮಾನ ಉತ್ಪಾದನೆಗೆ ಆಧುನಿಕ ತಂತ್ರಜ್ಞಾನಗಳು ಅತ್ಯವಶ್ಯಕವಾಗಿರುವುದರಿಂದ, ವೈಮಾನಿಕ ವಲಯ ರಕ್ಷಣಾ ವಿಭಾಗದಲ್ಲಿ ಸ್ವಾವಲಂಬನೆ ಸಾಧಿಸಲು ಹೆಚ್ಚಿನ ಅವಕಾಶ ಕಲ್ಪಿಸುತ್ತದೆ. ತಂತ್ರಜ್ಞಾನಗಳ ಹಂಚಿಕೊಳ್ಳುವಿಕೆ ಅತ್ಯಂತ ಅಪರೂಪವಾಗಿರುವುದರಿಂದ, ಭಾರತ ತನ್ನದೇ ಆದ ಬೌದ್ಧಿಕ ಆಸ್ತಿಯನ್ನು ಅಭಿವೃದ್ಧಿಪಡಿಸಬೇಕು. ವಿಮಾನಗಳು ಬಳಕೆಯಾಗದೆ ಹಳೆಯದಾಗುವುದೂ ಒಂದು ಸವಾಲಾಗಿದ್ದು, ಭಾರತೀಯ ವಾಯುಪಡೆ ಎಲ್‌ಸಿಎ ಯೋಜನೆಗೆ ಸಂಪೂರ್ಣ ಬೆಂಬಲ ನೀಡುತ್ತಿದೆ. ವಾಯುಪಡೆಯ ಮುಖ್ಯಸ್ಥರಾದ ವಿ ಆರ್ ಚೌಧರಿ ಅವರು ಎಲ್‌ಸಿಎ ಯೋಜನೆ ಸ್ವದೇಶೀ ಸಮರ ಪಡೆಗಳನ್ನು ಅಭಿವೃದ್ಧಿ ಪಡಿಸುವ ಭಾರತೀಯ ವಾಯುಪಡೆಯ ಬದ್ಧತೆಯ ಸಂಕೇತವಾಗಿದೆ ಎಂದಿದ್ದಾರೆ. ಎಚ್ಎಎಲ್ ಹಾಗೂ ಡಿಆರ್‌ಡಿಓ ತಂತ್ರಜ್ಞಾನವನ್ನು ಖಾಸಗಿ ಸಂಸ್ಥೆಗಳಿಗೆ ಒದಗಿಸಿದ್ದು, ರಕ್ಷಣಾ ಉಪಕರಣಗಳ ಉತ್ಪಾದನೆಗೆ ಸೂಕ್ತ ಕ್ರಮಗಳನ್ನು ಒದಗಿಸಲಿದೆ. ಪ್ರಧಾನಿ ಮೋದಿಯವರೂ ಈ ಯೋಜನೆಯಲ್ಲಿ ವಿಶ್ವಾಸ ವ್ಯಕ್ತಪಡಿಸಿ, ಬೆಂಬಲ ಸೂಚಿಸಿದ್ದು, ಇದರಿಂದ ಎಲ್‌ಸಿಎ ಮತ್ತು ಎಎಂಸಿಎ ಯೋಜನೆಯ ಸ್ಥೈರ್ಯ ಹೆಚ್ಚಿ, ವಿನ್ಯಾಸ, ಅಭಿವೃದ್ಧಿ ಇನ್ನಷ್ಟು ವೇಗ ಪಡೆದುಕೊಳ್ಳುವ ಸಾಧ್ಯತೆಗಳಿವೆ. ಅದರೊಡನೆ, ಅವುಗಳ ಭವಿಷ್ಯದ ಹಂತಗಳಿಗೂ ಶೀಘ್ರವಾಗಿ ಅನುಮತಿ ಲಭಿಸಲು ಸಾಧ್ಯವಾಗುತ್ತದೆ. ಚೀನಾ ಮತ್ತು ಪಾಕಿಸ್ತಾನದ ಬೆದರಿಕೆ ಎದುರಿಸುವಲ್ಲಿ ತೇಜಸ್‌ ಮಹತ್ವದ ಪಾತ್ರ ವಹಿಸಲಿದೆ.

(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕರು)

ಇದನ್ನೂ ಓದಿ: LCA Tejas: ವಾಯುಪಡೆ ಬತ್ತಳಿಕೆ ಸೇರಿದ ಲಘು ಯುದ್ಧ ವಿಮಾನ ತೇಜಸ್! 8 ಏರ್‌ಕ್ರಾಫ್ಟ್‌ಗೆ ಎಚ್‌ಎಎಲ್‌ ಜತೆ ಸೇನೆ ಒಪ್ಪಂದ

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version