ಭಾರತೀಯ ಜನತಾ ಪಕ್ಷದ ಸರ್ಕಾರವನ್ನು ಕರ್ನಾಟಕದಲ್ಲಿ ನಿಜಗೊಳಿಸಿದ ಖ್ಯಾತಿಯ ತುರಾಯಿಧಾರಿ ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ (b s yediyurappa) ಪಕ್ಷದ ಮಧ್ಯ ರಂಗಕ್ಕೆ (ಸೆಂಟರ್ ಸ್ಟೇಜ್) ಮತ್ತೆ ಬಂದಿದ್ದಾರೆ. ಮುಖ್ಯಮಂತ್ರಿಯಾಗಿದ್ದ ಅವರನ್ನು ಪದಚ್ಯುತಗೊಳಿಸಿದ ಬಿಜೆಪಿ ವರಿಷ್ಠ ಮಂಡಳಿ, ಆ ಜಾಗದಲ್ಲಿ ಯಡಿಯೂರಪ್ಪನವರೇ “ಹೆಸರು ಸೂಚಿಸಿದ” ಬಸವರಾಜ ಬೊಮ್ಮಾಯಿಯವರನ್ನು ಕುಳ್ಳಿರಿಸಿ ಹತ್ತಿರ ಹತ್ತಿರ ಮೂರು ವರ್ಷವಾಗಿದೆ. ಸಾಕಷ್ಟು ದೀರ್ಘ ಎನ್ನಬಹುದಾದ ಈ ಅವಧಿಯಲ್ಲಿ “ಎಲ್ಲೋ ಇದ್ದಾರೆ” ಎಂಬಂತಿದ್ದ ಯಡಿಯೂರಪ್ಪ ಧುತ್ತನೆ ಮಧ್ಯ ರಂಗದಲ್ಲಿ ಕಾಣಿಸಿಕೊಂಡಿದ್ದಾರೆ.
ಮುಖ್ಯಮಂತ್ರಿಯಾಗಿ ಬೊಮ್ಮಾಯಿಯವರು, ಯಡಿಯೂರಪ್ಪ ಸೂಚಿಸಿದಂತೆ ಆ ಸ್ಥಾನಕ್ಕೆ ಹೊಸ ವ್ಯಕ್ತಿಯಾಗಿ ಬಂದರೇನೋ ನಿಜ, ಆದರೆ ಪಕ್ಷದ ಸಂಘಟನೆಗೆ ಅಗತ್ಯವಾದ ಹೊಸ ರಕ್ತ ತುಂಬುವಲ್ಲಿ ನಿರೀಕ್ಷಿತ ಮಟ್ಟದಲ್ಲಿ ಸಫಲರಾಗಲಿಲ್ಲ ಎನ್ನುವುದೂ ಅಷ್ಟೇ ನಿಜ. ಅಕ-ಇಕ ಎನ್ನುವುದರೊಳಗಾಗಿ ರಾಜ್ಯ ವಿಧಾನ ಸಭೆಗೆ ಚುನಾವಣೆ ಘೋಷಣೆಯಾಗಲಿದ್ದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‍ಕುಮಾರ್ ಕಟೀಲ್, ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆ ಎದುರಿಸಿದರೆ ಮರಳಿ ಸರ್ಕಾರ ರಚಿಸುವುದು ದುಸ್ತರ ಎಂಬ ಭಾವನೆ ಪಕ್ಷದೊಳಗೆ ಬಲಿಯುತ್ತಿದೆ. ಇದನ್ನು ಮನಗಂಡಿರುವ ಪಕ್ಷದ ಹೈಕಮಾಂಡ್ ಯಡಿಯೂರಪ್ಪನವರನ್ನು ಮತ್ತೆ ಜನಾರಣ್ಯದಲ್ಲಿ ಮತಬೇಟೆಗೆ ಬಳಸಿಕೊಳ್ಳಲು ಮುಂದಾಗಿರುವುದು ಸ್ಪಷ್ಟ.
ಯಡಿಯೂರಪ್ಪನವರ ಎಂಬತ್ತನೇ ಹುಟ್ಟುಹಬ್ಬದ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದವರು ಸ್ವತಃ ಪ್ರಧಾನಿ ನರೇಂದ್ರ ಮೋದಿ. ಯಡಿಯೂರಪ್ಪನವರಿಗೆ ಅವರ ಪರಮಾಯಿಷಿ ಆಸಕ್ತಿಯ ಹಸಿರು ಶಾಲು ಹೊದಿಸಿ ಹಾರ ಹಾಕಿ, ಪೇಟ ತೊಡಿಸಿದ್ದಷ್ಟೇ ಅಲ್ಲದೆ ನೇಗಿಲಿನ ಪ್ರತಿಕೃತಿಯ ಉಡುಗೊರೆ ನೀಡಿ ಗೌರವಿಸಲಾಯಿತು. ಅಂದು ವೇದಿಕೆ ಮೇಲಿದ್ದ ಕೇಂದ್ರ-ರಾಜ್ಯ ನಾಯಕರು ಮೋದಿಯವರ ಕೈಯಿಂದ ಇದೆಲ್ಲವನ್ನೂ ಕೊಡಿಸಿ ಚಪ್ಪಾಳೆ ಸುರಿಮಳೆಗರೆದರು. ಯಡಿಯೂರಪ್ಪನವರ ಕೈಗಳೆರಡನ್ನೂ ಹಿಡಿದ ಮೋದಿ, ನಡುಬಾಗಿ ತಮ್ಮ ನೊಸಲನ್ನು ಅದಕ್ಕೆ ಘಟ್ಟಿಸಿದರು. ಯಡಿಯೂರಪ್ಪ ಸುಪ್ರೀತರಾಗಿದ್ದು ಟಿವಿಯಲ್ಲಿ ಮತ್ತು ಖುದ್ದಾಗಿ ಕಾರ್ಯಕ್ರಮ ವೀಕ್ಷಿಸಿದವರಿಗೆಲ್ಲ ಮನವರಿಕೆಯಾಗಿದೆ. ಯಡಿಯೂರಪ್ಪನವರು ಶಂಕಾತೀತ ರೈತ ನಾಯಕ ಎಂಬ ಸಂದೇಶವನ್ನು ರಾಜ್ಯದ ಉದ್ದಗಲಕ್ಕೆ ರವಾನಿಸುವ ಉದ್ದೇಶದಿಂದಲೇ ಹಸಿರು ಶಾಲು ಹೊದಿಸಿ ನೇಗಿಲು ನೀಡಿದ್ದು ಎಂದು ಯಾರೂ ಭಾವಿಸಬಹುದು.
ಲಿಂಗಾಯತ ಸಮುದಾಯದ ಎಸ್. ನಿಜಲಿಂಗಪ್ಪ, ವೀರೇಂದ್ರ ಪಾಟೀಲರಿಗೆ ಕಾಂಗ್ರೆಸ್ ಅನ್ಯಾಯ ಮಾಡಿದೆ ಎಂಬ ವಾದವನ್ನು ಬರಲಿರುವ ಚುನಾವಣೆ ರಾಜಕೀಯದ ಭಾಗವಾಗಿ ಬಿಜೆಪಿ ಮುನ್ನೆಲೆಗೆ ತಂದಿದೆ. ಮುಖ್ಯಮಂತ್ರಿಯಾಗಿ ಐದು ವರ್ಷವನ್ನು ಯಡಿಯೂರಪ್ಪ ಭರ್ತಿ ಮಾಡಲಿಲ್ಲ, ಆದರೆ ನಾಲ್ಕು ಬಾರಿ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಹಿರಿಮೆ ಅವರದು. ಬೊಮ್ಮಾಯಿ ತರುವ ಮುನ್ನ ಯಡಿಯೂರಪ್ಪನವರನ್ನು ಅನ್ಯಾಯವಾಗಿ ಸ್ಥಾನಚ್ಯುತರನ್ನಾಗಿ ಮಾಡಿದ್ದನ್ನು ವೀರಶೈವ ಲಿಂಗಾಯತ ಸಮುದಾಯ ಮರೆಯಬಾರದು ಎಂಬ ಪ್ರಚಾರವನ್ನು ಕಾಂಗ್ರೆಸ್ ಮಾಡುತ್ತಿದೆ. ಎರಡೂ ರಾಜಕೀಯ ಪಕ್ಷಗಳಲ್ಲಿ ಅಭಿವೃದ್ಧಿ ಬಗೆಗಿನ ಚರ್ಚೆಗಿಂತ ಲಿಂಗಾಯತ ಸಮುದಾಯವನ್ನು ಖುಷಿ ಪಡಿಸುವ ಒಳ ರಾಜಕೀಯ ನಡೆದಿದೆ. ಲಿಂಗಾಯತ ವೀರಶೈವರನ್ನು ಓಲೈಸುವಲ್ಲಿ ಯಾವ ಪಕ್ಷ ಹೆಚ್ಚು ಸಫಲವಾಗುತ್ತದೋ ಅದು ಅಧಿಕಾರಕ್ಕೆ ಬರುವ ಸಾಧ್ಯತೆ ಹೆಚ್ಚು ಎಂಬ ಲೆಕ್ಕಾಚಾರದಲ್ಲಿ ನಡೆದಿರುವ ರಾಜಕಾರಣ ಇದು.
ಈ ಲೆಕ್ಕಾಚಾರಕ್ಕೆ ಕಾರಣವಿದೆ. ರಾಜ್ಯದಲ್ಲಿ ತುಸು ಹೆಚ್ಚೂಕಡಿಮೆ ಐದು ಸಾವಿರದಷ್ಟು ಲಿಂಗಾಯತ ಮಠಗಳಿವೆ. ತಮ್ಮ ವ್ಯಾಪ್ತಿಯ ಭಕ್ತರ ಮೇಲೆ ಸಾಕಷ್ಟು ಪ್ರಭಾವವನ್ನೂ ಅವು ಹೊಂದಿವೆ. ತಂತಮ್ಮ ಮಠಗಳ ಸ್ವಾಮಿಗಳು, ಗುರುಗಳು, ಜಗದ್ಗುರುಗಳು ಹಾಕಿದ ಗೆರೆಯನ್ನು ಭಕ್ತರು ದಾಟುವುದು ಇಲ್ಲವೇ ಇಲ್ಲ ಎಂಬಷ್ಟು ಅಪರೂಪ. ಬಹುತೇಕ ಸ್ವಾಮಿಗಳು, ಗುರುಗಳು, ಜಗದ್ಗುರುಗಳು ಯಡಿಯೂರಪ್ಪನವರ ವಿಚಾರದಲ್ಲಿ ಮೃದು ಧೋರಣೆಯಲ್ಲಿದ್ದಾರೆ ಎಂಬ ಮಾತೂ ಸತ್ಯ. ತಾವು ಸಿಎಂ ಆಗಿದ್ದಾಗ ಬಹುತೇಕ ಎಲ್ಲ ಜಾತಿ ಮತ ಪಂಗಡಗಳ ಮಠಗಳಿಗೆ ಯಡಿಯೂರಪ್ಪನವರು ಮಾಡಿಕೊಟ್ಟ ಧನ ಸಹಾಯವೂ ಸೇರಿದಂತೆ ಮುಂದೆ ಮಾಡಿದ ಅನುಕೂಲಗಳನ್ನು ನೆರವು ಪಡೆದ ಮಠಗಳು ಮರೆಯುವುದು ಸಾಧ್ಯವೇ ಇಲ್ಲ. ನೆರವು ನಿರಾಕರಿಸಿದ ಕೆಲವು ಮಠಗಳೂ ಇಲ್ಲವೆಂದಲ್ಲ, ಇವೆ. ಯಡಿಯೂರಪ್ಪ ಹಾಕಿದ ಗೆರೆಯನ್ನು ಬಹುತೇಕವಾಗಿ ನೆರವು ಪಡೆದ ಮಠಗಳು ಮೀರುವುದಿಲ್ಲ. ಲಿಂಗಾಯತ ವೀರಶೈವ ಮಠಗಳಿಗೆ “ಯಡಿಯೂರಪ್ಪ ನಮ್ಮವರು” ಎಂಬ ಒಲವು ಇರುವುದು ಅಂತರಂಗದ ಸತ್ಯವೂ ಹೌದು, ಬಹಿರಂಗ ಸತ್ಯವೂ ಹೌದು. ಯಡಿಯೂರಪ್ಪ ರಾಜ್ಯದಲ್ಲಿ ಹೊಂದಿರುವ ರಾಜಕೀಯ ಶಕ್ತಿಯ ಒಂದು ಮುಖ ಇದು.
ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ, ಮಧ್ಯ ಕರ್ನಾಟಕ ಭಾಗದಲ್ಲಿ ರೈತರ ಜೊತೆಗಿನ ದಶಕಗಳ ಕಾಲದ ಯಡಿಯೂರಪ್ಪ ಒಡನಾಟ, ತಾವು ಅಧಿಕಾರದಲ್ಲಿದ್ದಾಗ ವಿಶೇಷವಾಗಿ ಮಂಡಿಸಿದ “ರೈತ ಬಜೆಟ್” ಗ್ರಾಮೀಣ ಪ್ರದೇಶದಲ್ಲಿ ಅವರ ಓಟ್ ಬ್ಯಾಂಕ್ ಶಕ್ತಿಯನ್ನು ವರ್ಧಿಸಿದೆ. ಬಿಜೆಪಿ ನಗರ ಪಕ್ಷಪಾತಿ ಪಕ್ಷ ಎಂಬ ಆರೋಪ ಅದಕ್ಕೆ ಜನಸಂಘ ಕಾಲದಿಂದಲೂ ಮೆತ್ತಿಕೊಂಡಿತ್ತು. ಆ ಕೊಳೆಯನ್ನು ಕರ್ನಾಟಕದ ಮಟ್ಟಿಗೆ ತೊಳೆದು ಹಾಕಿದವರು ಯಡಿಯೂರಪ್ಪ. ಹಳ್ಳಿ ಹಳ್ಳಿ ಸುತ್ತಿದ ಅವರು ರೈತ ಸಮುದಾಯದೊಂದಿಗೆ ನಡೆಸಿದ ಒಡನಾಟ ಅವರನ್ನು ರೈತ ನಾಯಕ ಪಟ್ಟಕ್ಕೇರಿಸಿದೆ. ಅವರ ಮತ್ತೊಂದು ರಾಜಕೀಯ ಶಕ್ತಿ ಇದು.
ಮಲೆನಾಡು ಮತ್ತು ಕರಾವಳಿ ಕರ್ನಾಟಕದಲ್ಲಿ ಯಡಿಯೂರಪ್ಪ ವಿಶೇಷ ಆದರಾಭಿಮಾನದ ರಾಜಕೀಯ ಧುರೀಣ. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ವಿಧಾನಸಭಾ ಮತಕ್ಷೇತ್ರವನ್ನು ಕರ್ಮಭೂಮಿಯಾಗಿಸಿಕೊಂಡು ಮಲೆನಾಡಿನಲ್ಲಿ ಪ್ರಭಾವ ಬೆಳೆಸಿಕೊಂಡಿರುವ ಅವರನ್ನು ಕರಾವಳಿ ಕರ್ನಾಟಕವೂ ಮೆಚ್ಚಿರುವುದಕ್ಕೆ ಕಾರಣ ಅಲ್ಲಿ ಬಲಿಷ್ಠವಾಗಿರುವ ಸಂಘ ಪರಿವಾರ. ಬಿಜೆಪಿಯನ್ನು ರಾಜ್ಯದಲ್ಲಿ ಮೊದಲಿಗೆ ಅಧಿಕಾರಕ್ಕೆ ತಂದ, ಕಮಲ ಇಲ್ಲಿ ಅರಳದು ಎಂಬ ಮಾತನ್ನು ಹುಸಿ ಮಾಡಿದ ನಾಯಕ ಎನ್ನುವುದು ಸಂಘ ಪರಿವಾರ ಮೆಚ್ಚುವ ಗುಣ. ಇದು ಯಡಿಯೂರಪ್ಪನವರಲ್ಲಿರುವ ಹೈಕಮಾಂಡ್ ಗುರುತಿಸಿರುವ ಮತ್ತೊಂದು ಶಕ್ತಿ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ನಡುವೆ ರಾಜಕೀಯ ಮೇಲುಗೈ ಪಡೆಯುವ ಹೋರಾಟ ಇಂದು ನಿನ್ನೆಯದಲ್ಲ. ಪರಿಶಿಷ್ಟ ಜಾತಿಯಲ್ಲಿ ಬಲಗೈ ಪಂಗಡ ಮೀಸಲಾತಿ ಲಾಭವನ್ನೆಲ್ಲ ಪಡೆದ ಕಾರಣ ತಮಗೆ ಅನ್ಯಾಯವಾಗಿದೆ ಎಂಬ ಎಡಗೈ ಪಂಗಡದ ಕೂಗು ಅಂತಿಮವಾಗಿ ಸ್ಫೋಟಿಸಿದ್ದು ಒಳ ಮೀಸಲಾತಿಗೆ ಆಗ್ರಹಿಸುವಲ್ಲಿ. ನೆರೆಯ ಅವಿಭಜಿತ ಆಂಧ್ರ ಪ್ರದೇಶದಲ್ಲಿ (ಈಗ ತೆಲಂಗಾಣದಲ್ಲೂ) ನಡೆದ/ನಡೆಯುತ್ತಿರುವ ಮಾದಿಗ ದಂಡೋರ ಹೋರಾಟ ಇಲ್ಲಿಯೂ ಸ್ಫೂರ್ತಿ ತುಂಬಿತಷ್ಟೇ ಅಲ್ಲ, ಒಳ ಮೀಸಲಾತಿ ಬೇಡಿಕೆಯ ಪೂರ್ವಾಪರದ ವಿಮರ್ಶೆಗೆ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗ ರಚನೆಯಾಗುವಂತಾಗಿದ್ದು ಒಂದು ಘಟ್ಟ.
ಸದಾಶಿವ ವರದಿಯ ಶಿಫಾರಸುಗಳ ಜಾರಿಗೆ ಬೆಂಬಲವಿರುವಷ್ಟೇ ಪ್ರಮಾಣದಲ್ಲಿ ಜಾರಿ ಮಾಡಕೂಡದು ಎಂಬ ವಿರೋಧವೂ ಇದೆ. ಏನೇ ಇದ್ದರೂ ಎಡಗೈ ದಲಿತ ಸಮುದಾಯಕ್ಕೆ ರಾಜಕೀಯ ಮಹತ್ವ ಬರುವಂತೆ ನೋಡಿಕೊಂಡವರಲ್ಲಿ ಯಡಿಯೂರಪ್ಪ ಬಿಜೆಪಿಯ ಮೊದಲಿಗರಾಗುತ್ತಾರೆ. ವಿಧಾನಸಭೆಯಲ್ಲಿ ಎಡಗೈ ಸಮುದಾಯದವರು ಗಣನೀಯ ಪ್ರಮಾಣದಲ್ಲಿ ಇರುವುದರ ಹಿಂದೆ ಯಡಿಯೂರಪ್ಪ ಇದ್ದಾರೆಂದು ಆ ಸಮುದಾಯ ನಂಬಿದೆ. ಇದರಿಂದ ಬಿಜೆಪಿ ದಲಿತ ವಿರೋಧಿ ಎಂಬ ಆರೋಪವೂ ಗಣನೀಯ ಪ್ರಮಾಣದಲ್ಲಿ ತಗ್ಗಲು ಅವಕಾಶವಾಗಿದೆ. ಪರಿಶಿಷ್ಟ ವರ್ಗದಲ್ಲೂ ಯಡಿಯೂರಪ್ಪನವರ ವಿಚಾರದಲ್ಲಿ ವಿಶೇಷ ಗೌರವಾದರವಿದೆ. ಇದು ಮಾಜಿ ಮುಖ್ಯಮಂತ್ರಿಯ ಮತ್ತೊಂದು ಶಕ್ತಿ.
ಮೊನ್ನೆ ಮೊನ್ನೆ ಯಡಿಯೂರಪ್ಪ ಬೆಂಗಳೂರಿನಲ್ಲಿ ಮಾಧ್ಯಮ ಗೋಷ್ಠಿ ನಡೆಸಿದರು. ಬಿಜೆಪಿ ಸಂಸದೀಯ ಮಂಡಳಿ ಸದಸ್ಯರಾಗಿ ನೇಮಕಗೊಂಡ ಕೆಲವು ತಿಂಗಳುಗಳ ಬಳಿಕ ಅವರು ಅಧಿಕೃತವಾಗಿ ನಡೆಸಿದ ಮೊದಲ ಗೋಷ್ಠಿ ಇದು. ಇಷ್ಟು ದಿವಸ ಸುಮ್ಮನಿದ್ದ, ದೂರ ನಿಂತು ವೀಕ್ಷಕನ ಕೆಲಸ ಮಾಡುತ್ತಿದ್ದ, ಮಾಧ್ಯಮದವರು ಎದುರಾಗಿ ತಾವಾಗಿಯೇ ಕೇಳಿದ ಪ್ರಶ್ನೆಗಳಿಗಷ್ಟೇ ಉತ್ತರಿಸಿ ಜಾರಿಕೊಳ್ಳುತ್ತಿದ್ದ ಯಡಿಯೂರಪ್ಪ, ಈ ಗೋಷ್ಠಿಯ ಭಾಗವಾಗಿ ಹೇಳಿದ್ದು ಹಾಲಿ ಶಾಸಕಾಂಗ ಪಕ್ಷದ ನಾಲ್ಕಾರು ಜನರನ್ನು ಬಿಟ್ಟರೆ ಉಳಿದವರಿಗೆ ಟಿಕೆಟ್ ಗ್ಯಾರಂಟಿ ಎಂಬ ಮಾತನ್ನು.
ಇದನ್ನೂ ಓದಿ: ಮೊಗಸಾಲೆ ಅಂಕಣ: ಸೋನಿಯಾ, ಬಿಎಸ್‌ವೈ ಮನಸ್ಸು ಭಾರ:ಚುನಾವಣೆ ಕಣದಿಂದ ದೂರ
ಕಾಂಗ್ರೆಸ್ ಪಕ್ಷ ತನ್ನ ಅಭ್ಯರ್ಥಿಗಳ ಹೆಸರನ್ನು ಬಹುತೇಕ ಅಂತಿಮಗೊಳಿಸಿದೆ ಎಂದು ಕೆಪಿಸಿಸಿ ಹೇಳಿದೆ. ಅದು ಪ್ರಕಟವಾಗುವುದು ದೆಹಲಿಯಲ್ಲಿ, ಹೈಕಮಾಂಡ್ ಅಂಗಳದಲ್ಲಿ. ಇಲ್ಲಿ ನಡೆಯುವುದೆಲ್ಲ ಊಹಾಪೋಹ ಮಾತ್ರ. ಜೆಡಿಎಸ್‍ನ ಪ್ರಥಮ ಪಟ್ಟಿ ಬಿಡುಗಡೆಯಾಗಿದೆ. ಎರಡು ಮತ್ತು ಅಂತಿಮ ಪಟ್ಟಿ ಅಷ್ಟೆಲ್ಲ ಸುಲಭದಲ್ಲಿ ಈಚೆಗೆ ಬರುವುದಿಲ್ಲ ಎನ್ನುವುದನ್ನು ಹಾಸನ ಜಿಲ್ಲಾ ಜೆಡಿಎಸ್ ರಾಜಕೀಯ ರಾದ್ಧಾಂತ ಹೇಳುತ್ತಿದೆ. ಆಡಳಿತಾರೂಢ ಬಿಜೆಪಿ ತನ್ನ ಪಟ್ಟಿಯನ್ನು ಅಂತಿಮಗೊಳಿಸಿದೆಯೇ ಇಲ್ಲವೇ ಎನ್ನುವುದು ಖಚಿತವಾಗಿಲ್ಲ. ಆದರೆ ಯಡಿಯೂರಪ್ಪ ಮಾತ್ರ ಏಕಪಕ್ಷೀಯವಾಗಿ ನಾಲ್ಕಾರು ಹೆಸರು ಬಿಟ್ಟರೆ ಉಳಿದವರಿಗೆಲ್ಲ ಟಿಕೆಟ್ ಗ್ಯಾರಂಟಿ ಎಂಬ ಭರವಸೆ ನೀಡುವ ಮೂಲಕ ಟಿಕೆಟ್ ಆಕಾಂಕ್ಷಿಗಳ ಗಮನ ತಮ್ಮತ್ತ ಕೇಂದ್ರೀಕೃತವಾಗುವಂತೆ ಮಾಡಿದ್ದಾರೆ.
ಯಾರಿಗೆ ಟಿಕೆಟ್, ಯಾರಿಗೆ ಇಲ್ಲ ಎಂಬ ಮಾತನ್ನು ಹೇಳಬೇಕಾಗಿರುವ ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ಬಾಯಿ ಬಿಟ್ಟಿಲ್ಲ, ಎಲ್ಲವುದಕ್ಕೂ ಕ್ಷಣಾರ್ಧವನ್ನೂ ವ್ಯರ್ಥಗೊಳಿಸದೆ ಪ್ರತಿಕ್ರಿಯಿಸುವುದಕ್ಕೆ ಹೆಸರಾಗಿರುವ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತುಟಿಪಿಟಿಕ್ ಎಂದಿಲ್ಲ. ರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿ ಆಗುಹೋಗುಗಳಿಗೆ ಕಾರಣವಾಗಿರುವ ಕರ್ನಾಟಕದ ರಾಜಕೀಯದಲ್ಲಿ ಅಪಾರ ಆಸಕ್ತಿ ಹೊಂದಿರುವ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್‍ರ ಮನಸ್ಸಿನಲ್ಲಿ ಏನಿದೆಯೋ ಗೊತ್ತಿಲ್ಲ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾರ ಪ್ರತಿಕ್ರಿಯೆ ಏನು ಎಂಬುದನ್ನು ಊಹೆ ಮಾಡುವುದು ಕಷ್ಟ. ಅಮಿತ್ ಶಾ, ಮೋದಿ ಮೌನಕ್ಕೆ ಇದೇ ಅರ್ಥ ಎಂದು ಹೇಳುವ ಸ್ಥಿತಿಯಲ್ಲಿ ಯಾರೂ ಇಲ್ಲ. ಹೀಗಿರುವಾಗ ಬಂದಿರುವ ಯಡಿಯೂರಪ್ಪ ಪ್ರಕಟಣೆ ಸಹಜ ಸಂಚಲನಕ್ಕೆ ಕಾರಣ ಒದಗಿಸಿದೆ. ಈ ಮೂಲಕ ಯಡಿಯೂರಪ್ಪ ಪಕ್ಷದ ಕಬ್ಜಾವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡಿದ್ದಾರೆಂದು ಭಾವಿಸಲು ಸರಕು ಸಿಕ್ಕಿದೆ. ಈ ಮಾತನ್ನಾಡುವುದಕ್ಕೆ ಯಡಿಯೂರಪ್ಪ ಯಾರು ಎಂದು ಯಾರೊಬ್ಬರೂ ಈವರೆಗೂ ಕೇಳಿಲ್ಲ. ಯಡಿಯೂರಪ್ಪ ಹೇಳಿರುವುದು ಅವರ ವೈಯಕ್ತಿಕ ಅಭಿಪ್ರಾಯವೇ ಹೊರತೂ ಪಕ್ಷದ್ದಲ್ಲ ಎಂದು ದೂರೀಕರಿಸುವ ಕೆಲಸವೂ ನಡೆದಿಲ್ಲ. ಇದೆಲ್ಲದರ ಒಟ್ಟಾರೆ ಅರ್ಥ ಯಡಿಯೂರಪ್ಪನವರು ರಾಜ್ಯ ಬಿಜೆಪಿ ಚುನಾವಣಾ ಪೂರ್ವ ರಾಜಕೀಯದ ಮಧ್ಯ ರಂಗಕ್ಕೆ ಕಾಲಿರಿಸಿದ್ದಾರೆ ಎಂದು.
ಇದನ್ನೂ ಓದಿ: ಮೊಗಸಾಲೆ ಅಂಕಣ: ರೋಹಿಣಿ, ರೂಪಾ ರಂಪಾಟ: ಸರ್ಕಾರಕ್ಕೆ ಪೇಚಾಟ
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ, ಕಾಂಗ್ರೆಸ್ ನಾಯಕ ಶಾಮನೂರು ಶಿವಶಂಕರಪ್ಪ ತಮ್ಮ ಸಮುದಾಯಕ್ಕೆ 224ರಲ್ಲಿ 82 ಕ್ಷೇತ್ರದಲ್ಲಿ ಸ್ಪರ್ಧಿಸಲು ಅವಕಾಶ ನೀಡುವಂತೆ ಕಾಂಗ್ರೆಸ್‍ಗೆ ಮನವಿ ಮಾಡಿರುವುದು; ಯಡಿಯೂರಪ್ಪ ಇಷ್ಟರಲ್ಲೇ ಮುಖ್ಯಮಂತ್ರಿ ಸ್ಥಾನದಿಂದ ಕೆಳಕ್ಕಿಳಿಯಲಿದ್ದಾರೆಂಬ ಸುದ್ದಿ ಮೂರು ವರ್ಷದ ಹಿಂದಾದರೂ ಅಡಬಡ ಎಂಬ ಹಂತದಲ್ಲಿದ್ದಾಗ ಕೆಪಿಸಿಸಿ ಚುನಾವಣಾ ಪ್ರಚಾರ ಸಮಿತಿಗೆ ಲಿಂಗಾಯತ ಸಮುದಾಯದ ಎಂ.ಬಿ. ಪಾಟೀಲರನ್ನು ಅಧ್ಯಕ್ಷರನ್ನಾಗಿ ನೇಮಿಸಿ ಪಕ್ಷ ಬಹುಮತ ಪಡೆದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಪಾಟೀಲರ ಹೆಸರೂ ಪರಿಗಣನೆಗೆ ಬರಬಹುದೆಂಬ ಸುದ್ದಿಯನ್ನು ಗಾಳಿಯಲ್ಲಿ ತೇಲಿಬಿಟ್ಟಿದ್ದು, ಲಿಂಗಾಯತಕ್ಕೆ ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡಬೇಕೆಂಬ 2018ರ “ಅನಾಹುತಕಾರಿ” ಚುನಾವಣಾ ಪೂರ್ವದ ಬೇಡಿಕೆಯನ್ನು ಕಾಂಗ್ರೆಸ್ಸು ಮತ್ತೆ ಮಂಡಿಸುವುದಿಲ್ಲ ಎಂದು ಅದರ ನಾಯಕರು ಆ ಸಮುದಾಯಕ್ಕೆ ಭರವಸೆ ನೀಡಿದ್ದೇ ಮುಂತಾದವು ಲಿಂಗಾಯತ ವೀರಶೈವರನ್ನು ಓಲೈಸುವ ಕಾಂಗ್ರೆಸ್ ಉಪಕ್ರಮಗಳು ಎಂದು ಭಾವಿಸಲಾಗಿದೆ.
ಒಂದೂವರೆ ದಶಕದ ಹಿಂದೆ 2008ರಲ್ಲಿ “ವಚನ ಭ್ರಷ್ಟ ಕುಮಾರಸ್ವಾಮಿ” ಕಾರಣವಾಗಿ ಅಲೆ ಯಡಿಯೂರಪ್ಪ ಪರ ಬೀಸಿ ಬಿಜೆಪಿ 110 ಸೀಟು ಗೆಲ್ಲುವಂತೆ ಮಾಡಿದ್ದು; 2013ರಲ್ಲಿ ಕೆಜೆಪಿ ಕಟ್ಟಿದ ಯಡಿಯೂರಪ್ಪ ಕಾರಣವಾಗಿ ಬಹುತೇಕ ಕ್ಷೇತ್ರಗಳು ಬಿಜೆಪಿ ಕೈಬಿಟ್ಟು ಹೋಗಿ ಅಧಿಕಾರ ಕಳೆದುಕೊಂಡಿದ್ದು; 2018ರ ಹೊತ್ತಿಗೆ ಬಿಜೆಪಿಗೆ ಮರಳಿದ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಚುನಾವಣೆಯಲ್ಲಿ ಪಕ್ಷ 104 ಸ್ಥಾನ ಗೆದ್ದಿದ್ದು ಮುಂತಾದವು ಯಡಿಯೂರಪ್ಪ ಮಹತ್ವ ಹೆಚ್ಚಿಸಿರುವ ಸಂಗತಿಗಳು. ಎಲ್ಲ ರಾಜ್ಯದಲ್ಲೂ 75 ದಾಟಿದವರನ್ನು “ಮಾರ್ಗದರ್ಶಕ ಮಂಡಲಿ”ಗೆ ವರ್ಗಾಯಿಸುತ್ತಿರುವ ಬಿಜೆಪಿ ಹೈಕಮಾಂಡ್ ಕರ್ನಾಟಕದ ಮಟ್ಟಿಗೆ ಮಾತ್ರ ಯಡಿಯೂರಪ್ಪನವರನ್ನು ಆತುಕೊಂಡಿದೆ. ಹೈಕಮಾಂಡಿನ ಮನಸ್ಸು ಏನೆನ್ನುವುದು ಯಡಿಯೂರಪ್ಪನವರಿಗೂ ಚೆನ್ನಾಗಿ ಮನವರಿಕೆ ಆಗಿದೆ. ಇದು ಬೇಕು, ಇದು ಆಗಲೇಬೇಕು ಎಂಬ ಕೆಲವು ಹಕ್ಕೊತ್ತಾಯದೊಂದಿಗೆ ಯಡಿಯೂರಪ್ಪ ಮಧ್ಯರಂಗದಲ್ಲಿ ನಿಂತಿದ್ದಾರೆ. ಅವರನ್ನು ಪಕ್ಷ ಈ ಚುನಾವಣೆ ಮಟ್ಟಿಗಾದರೂ ಎಷ್ಟರಮಟ್ಟಿಗೆ ಬಳಸಿಕೊಳ್ಳಲಿದೆ ಎನ್ನುವುದು ಕುತೂಹಲಕಾರಿ. ಲಿಂಗಾಯತ ವೀರಶೈವ ಸಮುದಾಯವೆಂಬ ಓಟ್‍ಬ್ಯಾಂಕ್‍ನ ಪಾಸ್‍ಬುಕ್ ಮತ್ತು ಚೆಕ್‍ಬುಕ್ ಯಡಿಯೂರಪ್ಪ ಕೈಲಿರುವುದು ಬಿಜೆಪಿ ಹೈಕಮಾಂಡ್‍ಗೆ ಮತ್ತೊಮ್ಮೆ ಮನವರಿಕೆ ಆಗಿದೆ ಎನ್ನಲು ಇಷ್ಟು ಸಾಕು. ಇಷ್ಟಾಗಿಯೂ ಬಿಜೆಪಿ ಪಾಲಿಗೆ ಯಡಿಯೂರಪ್ಪ ಬಂದಳಿಕೆ ಆಗಲಿದ್ದಾರೆಯೇ ಅಥವಾ ಯಡಿಯೂರಪ್ಪ ಪಾಲಿಗೆ ಬಿಜೆಪಿಯೇ ಬಂದಳಿಕೆ ಆಗಲಿದೆಯೇ….ಕಾಲವೇ ನಿರ್ಣಯಿಸಬೇಕಿದೆ.
ಇದನ್ನೂ ಓದಿ: ಮೊಗಸಾಲೆ ಅಂಕಣ: ಹೊಸ ವರ್ಷದಲ್ಲಿ ಹಳೆ ಬಜೆಟ್, ಎಡವಟ್ಟು ಮಾಡಿದ ಗೆಹ್ಲೋಟ್