ಮಗ್ಗುಲ ಮುಳ್ಳು ಎಂದು ಜನ ಕರೆಯುವುದಕ್ಕೆ ನಿತ್ಯವೂ ನಿರಂತರವೂ ಆದ ಬಗೆಹರಿಯದ ಸಮಸ್ಯೆ ಕಾರಣ. ಸುಲಭಕ್ಕೆ ಅದು ಪರಿಹಾರ ಆಗುವ ಸಾಧ್ಯತೆ ನೂರರಲ್ಲಿ ಒಂದರಷ್ಟೂ ಇರುವುದಿಲ್ಲ. ಅಂಥದೊಂದು ಸಮಸ್ಯೆ ಇತ್ಯರ್ಥವಾದರೆ ಇನ್ನೊಂದು ಉದಾಹರಣೆ ಕಾಣಿಸಿಕೊಳ್ಳುವವರೆಗೂ ಇದರದೇ ಇತಿಹಾಸ; ನಿತ್ಯ ಮಾತಿನಲ್ಲಿ ಇದರದೇ ಪ್ರಸ್ತಾಪ.
ವರ್ತಮಾನ ಕರ್ನಾಟಕ ರಾಜಕೀಯ ವಿದ್ಯಮಾನದಲ್ಲಿ ಇಂಥ ಮಗ್ಗುಲ ಮುಳ್ಳು ನಿತ್ಯ ರಂಜನೆಯನ್ನು ಜನಕ್ಕೆ ನೀಡುತ್ತಿದ್ದರೆ ರಾಜಕೀಯ ಪಕ್ಷಗಳ ಪಾಲಿಗೆ ಅದರಲ್ಲೂ ಆಳುವ ಪಕ್ಷ ಕಾಂಗ್ರೆಸ್ ಮತ್ತು ಅಧಿಕಾರ ಕಳೆದುಕೊಂಡು ಅಳುತ್ತಿರುವ ಬಿಜೆಪಿಗೆ ನಿತ್ಯ ತಲೆನೋವು ತಂದಿರಿಸಿದೆ. ಕಾಂಗ್ರೆಸ್‌ಗೆ ಬಿ.ಕೆ. ಹರಿಪ್ರಸಾದ್ ಎಂಬ ಹೆಸರಿನಲ್ಲಿ; ಬಸವರಾಜ ಪಾಟೀಲ ಯತ್ನಾಳರ ಹೆಸರಿನಲ್ಲಿ ಬಿಜೆಪಿಗೆ ಒಕ್ಕರಿಸಿರುವ ಮಗ್ಗುಲ ಮುಳ್ಳು ಉಭಯ ಪಕ್ಷಗಳು ಪರದಾಡಲು ಸಾಕು ಸಾಕೆನಿಸುವಷ್ಟು ಚುಚ್ಚಿಕೊಂಡಿದೆ. ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು ಎನ್ನುವ ಗಾದೆ ಇಲ್ಲಿ ಪರಿಹಾರ ಸೂತ್ರವಾಗಿ ಕಾಣಿಸುವ ಸುಸೂತ್ರದ ಲಕ್ಷಣ ಇನ್ನೂ ಅಸ್ಪಷ್ಟ ಸ್ಥಿತಿಯಲ್ಲೇ ಇದೆ. ಒಂದುವೇಳೆ ಅದು ಅಷ್ಟೆಲ್ಲ ಶೀಘ್ರವಾಗಿ ಕೆಲಸ ಮಾಡುವಂತಿದ್ದರೆ ಈ ವೇಳೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮಾಜಿ ಮುಖ್ಯಮಂತ್ರಿ, ಬಿಜೆಪಿ ಸಂಸದೀಯ ಮಂಡಳಿ ಸದಸ್ಯರಾಗಿರುವ ಬಿ.ಎಸ್. ಯಡಿಯೂರಪ್ಪ ಮುಳ್ಳು ಮುಕ್ತ ನಾಯಕರಾಗುತ್ತಿದ್ದರು.
ಜಾನಪದ ಕಥೆಗಳು ಮತ್ತು ಅವನ್ನು ಆಧರಿಸಿ ತಯಾರಾದ ಸಿನಿಮಾಗಳಲ್ಲಿ ಅಟ್ಟಹಾಸದಿಂದ ಮೆರೆಯುವ ಮಾಯಾವಿಗಳು ಹೊಂದಿರುವಂಥವೇ ಬಗೆಬಗೆಯ ಹತಾರಗಳು ಯಡಿಯೂರಪ್ಪ ಅವರಲ್ಲೂ, ಸಿದ್ದರಾಮಯ್ಯನವರಲ್ಲೂ ಇವೆ. ಆದರೆ ಮಗ್ಗುಲ ಮುಳ್ಳು ತೆಗೆದು ನೋವು ಪರಿಹರಿಸುವ ಹತಾರ ಮಾತ್ರ ಇದ್ದಂತಿಲ್ಲ. ಉಭಯ ಪಕ್ಷಗಳ ರಾಜ್ಯ ಮಟ್ಟದ ನಾಯಕರನ್ನು ಬಿಡಿ. ಹರಿಪ್ರಸಾದ್ ವಿಚಾರದಲ್ಲಿ ಕಾಂಗ್ರೆಸ್ ಹೈಕಮಾಂಡ್ ಅಸಹಾಯಕತೆಯಲ್ಲಿ ಕೈ ಚೆಲ್ಲಿರುವ ಸ್ಥಿತಿಯೇ ಯತ್ನಾಳರ ವಿಚಾರದಲ್ಲಿ ಬಿಜೆಪಿ ಹೈಕಮಾಂಡ್ ಸ್ಥಿತಿಯೂ ಆಗಿದೆ. ಇವರಿಬ್ಬರಿಗೂ ಅವರವರ “ನೆಚ್ಚಿನ” ಹೈಕಮಾಂಡ್ ಹಂತದಲ್ಲಿ ಇರುವ ಬೆಂಬಲ ಯಾವ ಸ್ವರೂಪದ್ದು ಮತ್ತು ಅದರ ಆಳ ಅಗಲ ಎಷ್ಟು ಎನ್ನುವುದರ ಅಡಬಡ ಮಾಹಿತಿ ಇರಬಹುದಾದರೂ ನಿಖರ ಮಾಹಿತಿ ಸ್ಥಳೀಯ ನಾಯಕರಲ್ಲಿ ಖಂಡಿತವಾಗಿಯೂ ಇಲ್ಲ.
ಹತ್ತು ಜನ ಕುರುಡರು ಆನೆಯನ್ನು ಮುಟ್ಟಿ ನೋಡಿ ಆನೆ ಇರುವುದೇ ಹೀಗೆ ಎಂದು ಊಹಿಸಿಕೊಂಡಂತೆ ಸ್ಥಳೀಯ ನಾಯಕರ ಪಾಡು ಪಡಿಪಾಟಲು. ಕಿವಿ ಮುಟ್ಟಿದ ಕುರುಡ ಧಾನ್ಯ ಕೇರುವ ಮೊರ ಇದ್ದಂತೆ ಆನೆ ಎಂದನಂತೆ; ಕಾಲು ಮುಟ್ಟಿದವ ಆನೆ ಎಂದರೆ ಮರದ ದಿಮ್ಮಿ ಇದ್ದಂತೆ ಎಂದನಂತೆ; ದಂತ ಸವರಿದವ ಆನೆ ಎಂದರೆ ಉದ್ದನೆಯ ಸೊಟ್ಟ ಕಟ್ಟಿಗೆ ಇದ್ದಂತೆ ಎಂದನಂತೆ; ಬಾಲದ ತುದಿ ಮುಟ್ಟಿದವ ಆನೆ ಎಂದರೆ ಪೊರಕೆ ಇದ್ದಂತೆ ಎಂದನಂತೆ. ಯತ್ನಾಳ್, ಬಿಕೆಎಚ್ ಈ ಇಬ್ಬರು ಹೊಂದಿರುವ ಹೈಕಮಾಂಡ್ ಸಂಬಂಧ ರಾಜ್ಯ ನಾಯಕರಲ್ಲಿ ಅಂತೆ ಕಂತೆ ಹಂತದಲ್ಲೇ ಇರುವುದು ಸದ್ಯದ ಸ್ಥಿತಿ. ಅವರಿಬ್ಬರ ಹಿಂದಿರುವ ಅಗೋಚರ ಬೆಂಬಲ ಮತ್ತು ಅದು ತುಂಬುತ್ತಿರುವ ಶಕ್ತಿ ವಿಚಾರದಲ್ಲಿ ಅಂತೆಕಂತೆ ಪುರಾಣ ರಾಜ್ಯ ಹಂತದಲ್ಲಂತೂ ನಿತ್ಯ ಪಾರಾಯಣ ಸ್ವರೂಪ ಪಡೆದಿದೆ. ಒಂದು ಮಾತಂತೂ ಸತ್ಯ ಇವರಿಬ್ಬರೂ ಪೊರಕೆ ಹಿಡಿದು ಹೊರಟವರಂತೆ ತಮ್ಮ ನಾಯಕರಿಗೆ ಝಾಡಿಸುತ್ತಿರುವದಂತೂ ನಮ್ಮ ನಿಮ್ಮಂಥವರಿಗೆ ನಿತ್ಯ ರಂಜನೆ.
ರಾಮಕೃಷ್ಣ ಹೆಗಡೆಯವರು 1982ರಲ್ಲಿ ಕರ್ನಾಟಕಕ್ಕೆ ಮರಳಿ ಮುಖ್ಯಮಂತ್ರಿಯಾಗುವ ಪೂರ್ವದಲ್ಲಿ ತುಸು ಹೆಚ್ಚೂಕಡಿಮೆ ಹತ್ತು ವರ್ಷ ಕಾಲ ದೆಹಲಿಯಲ್ಲೇ ನೆಲಸಿ ತಾವಿದ್ದ ಪಕ್ಷದ ಕೇಂದ್ರ ವ್ಯವಹಾರ ವಹಿವಾಟಿನ ಭಾಗವಾಗಿದ್ದರು. ಕಾಲ ಕರೆಯಿತು, ರಾಜ್ಯಕ್ಕೆ ಬಂದು ಸಿಎಂ ಆಗಿ ಬಹಳ ಒಳ್ಳೆ ಹೆಸರನ್ನೂ ಒಂದಿಷ್ಟು ಕೆಟ್ಟ ಹೆಸರನ್ನೂ ಸಂಪಾದಿಸಿದರು. ಆ ಉದಾಹರಣೆಗೆ ಸರಿಸಮ ಎನ್ನಬಹುದಾದುದು ಹರಿಪ್ರಸಾದ್ ಕಾಂಗ್ರೆಸ್ ಹೈಕಮಾಂಡ್‌ನೊಂದಿಗೆ ಹೊಂದಿದ್ದ ಮತ್ತು ಈಗಲೂ ಹೊಂದಿರಬಹುದಾದ ಸಂಬಂಧ. ಹತ್ತಿರ ಹತ್ತಿರ ಎರಡು ದಶಕ ಕಾಲ ರಾಜ್ಯಸಭೆ ಸದಸ್ಯರಾಗಿ; ಉತ್ತರ ಭಾರತದ ಕೆಲವು ರಾಜ್ಯಗಳ ಉಸ್ತುವಾರಿ ಪ್ರಧಾನ ಕಾರ್ಯದರ್ಶಿಯಾಗಿ ಅವರು ಪಕ್ಷದ ವರಿಷ್ಟರೊಂದಿಗೆ ಬೆಳೆಸಿಕೊಂಡ ಸಂಬಂಧ ಒಂದು ರೀತಿಯಲ್ಲಿ ಕರುಳು ಬಳ್ಳಿಯಂಥದು. ಇಂತಿಪ್ಪ ಹರಿಪ್ರಸಾದ್ ರಾಜ್ಯ ರಾಜಕೀಯಕ್ಕೆ ಮರಳುವ ತೀರ್ಮಾನ ತೆಗೆದುಕೊಂಡಿದ್ದು ಒಂದು ಮಹತ್ವಾಕಾಂಕ್ಷೆಯಲ್ಲಿ. ಆ ಮಹತ್ವದ ಆಕಾಂಕ್ಷೆಯ ಹಿಂದಿದ್ದುದು ಬಿಜೆಪಿ ಸರ್ಕಾರ ಹೋಗಿ ಕಾಂಗ್ರೆಸ್ ಅಧಿಕಾರಕ್ಕೆ ಬಂದೇ ಬರುತ್ತದೆಂಬ ವಿಶ್ವಾಸ.
ರಾಜ್ಯಸಭಾ ಸದಸ್ಯತ್ವ ಮುಗಿಯುತ್ತಿದ್ದಂತೆಯೇ ಅವರಿಗೆ ಕರ್ನಾಟಕ ವಿಧಾನ ಪರಿಷತ್ ಸದಸ್ಯರಾಗುವ ಅವಕಾಶವನ್ನು ಅವರು ನೆಚ್ಚಿರುವ ಹೈಕಮಾಂಡ್ ಕೃಪೆಯ ರೂಪದಲ್ಲಿ ದಯಪಾಲಿಸಿತು. ಆಡಳಿತಾರೂಢ ಬಿಜೆಪಿಗೆ ಸಮರ್ಥ ಸವಾಲು ಪೈಪೋಟಿ ನೀಡುವ ಸಾಮರ್ಥ್ಯವುಳ್ಳವರು ಎಂಬ ಕಾರಣಕ್ಕೆ ವಿರೋಧ ಪಕ್ಷದ ನಾಯಕ ಸ್ಥಾನವೂ ಅವರಿಗೆ ವರವಾಗಿ ಒಲಿಯಿತು. ಆ ಸ್ಥಾನದಲ್ಲಿ ಕುಳಿತು ಸರ್ಕಾರಕ್ಕೆ ಬಿಸಿ ತಾಗಿಸುವ ಕರ್ತವ್ಯದಲ್ಲಿ ಯಾವುದೇ ಬಗೆಯ ರಾಜಿ ಮುಲಾಜಿಗೂ ಹರಿಪ್ರಸಾದ್ ಮಣಿಯಲಿಲ್ಲ. ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತ ಗಳಿಸಿದರೆ ಹೊಸ ಸರ್ಕಾರದಲ್ಲಿ ಹರಿಪ್ರಸಾದ್ ಕ್ಯಾಬಿನೆಟ್ ದರ್ಜೆಯಲ್ಲಿ ಮಹತ್ವದ ಖಾತೆ ಸಚಿವರಾಗಲಿದ್ದಾರೆ ಎನ್ನುವುದು ಪಕ್ಷದ ಒಳಗೂ ಹೊರಗೂ ಚರ್ಚೆಗೆ ಗ್ರಾಸವೊದಗಿಸಿತು. ಏತನ್ಮಧ್ಯೆ ಸಿಎಂ ಹುದ್ದೆಗೂ ಅವರ ಹೆಸರು ತೇಲುವಂತೆ ವ್ಯವಸ್ಥಿತ ಪ್ರಚಾರವೂ ನಡೆಯಿತು. ಇವೆಲ್ಲ ಹರಳುಗಟ್ಟಿ ಹರಿಪ್ರಸಾದ್‌ರಲ್ಲಿ ಆಸೆ ಕೊನರಿತು.
ಕಾಂಗ್ರೆಸ್ ನಿರೀಕ್ಷೆಯಂತೆ ಸರ್ಕಾರ ರಚಿಸಿತು. ಸ್ವತಃ ಸೋನಿಯಾ ಗಾಂಧಿ ಸೂಚಿಸಿದ ಹೆಸರು ಎನ್ನಲಾದ ಹರಿಪ್ರಸಾದ್ ಹೆಸರು ಸಚಿವರ ಪಟ್ಟಿಯಲ್ಲಿ ಕಾಣಿಸಲಿಲ್ಲ. ತಮ್ಮ ಸಂಪುಟದ ಒಳಗೆ ಇನ್ನೊಬ್ಬ (ಡಿ.ಕೆ.ಶಿವಕುಮಾರ್ ಇನ್ನೊಬ್ಬರು) ಸಮರ್ಥ ಎದುರಾಳಿ ಬಾರದಂತೆ ನೋಡಿಕೊಳ್ಳುವಲ್ಲಿ ಸಿದ್ದರಾಮಯ್ಯ ಯಶಸ್ವಿಯಾದರು. ಹರಿಪ್ರಸಾದ್ ಹೃದಯ ಒಡೆದು ಸಹಸ್ರ ಹೋಳಾಗಲು ಅಷ್ಟು ಸಾಕಾಯಿತು. ಈಗ ಅವರು ಸಿದ್ದರಾಮಯ್ಯ ಪಾಲಿನ ಮಗ್ಗುಲ ಮುಳ್ಳಾಗಿದ್ದರೆ ಅದಕ್ಕೆ ಸ್ವತಃ ಸಿಎಂ ಅವರೇ ಕಾರಣ. ಬೋರ್ಡು ಕಾರ್ಪೊರೇಷನ್ ಅಧ್ಯಕ್ಷ ಗಿರಿಯಂಥ ಗಂಜಿ ಕೇಂದ್ರದ ಸ್ಥಾನಮಾನ ಎಂಬ ಆಮಿಷ ಒಡ್ಡಿದರೆ ಅದನ್ನು ಹರಿಪ್ರಸಾದ್ ಒಪ್ಪಿಕೊಳ್ಳುತ್ತಾರೆ ಎನ್ನುವುದಕ್ಕೆ ಸ್ಥಳೀಯ ನಾಯಕತ್ವದಲ್ಲಿ ಯಾವ ಭರವಸೆಯೂ ಇಲ್ಲ. ಇನ್ನು ಸೋನಿಯಾ ಗಾಂಧಿ ಇಲ್ಲವೇ ರಾಹುಲ್ ಗಾಂಧಿ ಸೂಚಿಸಿದರೆ ಅದನ್ನು ಹರಿಪ್ರಸಾದ್ ನಿರಾಕರಿಸಿಯಾರು ಎನ್ನುವುದಕ್ಕೂ ಯಾವುದೇ ಭರವಸೆ ಇಲ್ಲ. ಶಂಖದಿಂದ ಬಂದುದೆಲ್ಲವೂ ತೀರ್ಥವೇ!
ಬಿಜೆಪಿ ಮಗ್ಗುಲ ಮುಳ್ಳು ಯತ್ನಾಳರತ್ತ ಈಗ ದೃಷ್ಟಿ ಹಾಯಿಸೋಣ. ಇವರು ಹರಿಪ್ರಸಾದರಂತೆ ಹಿಂಬಾಗಿಲ ರಾಜಕೀಯ ಮಾಡಿದವರಲ್ಲ. ಹರಿಯವರಿಗೆ ಚುನಾವಣೆಯಲ್ಲಿ ಸೆಣೆಸಿ ಸೋತ ಅನುಭವ ಇದೆಯೇ ಶಿವಾಯಿ ಗೆದ್ದ ಒಂದು ಅನುಭವವೂ ಇಲ್ಲ. ಆದರೆ ಯತ್ನಾಳರದು ಜನರ ನಡುವೆ ಇದ್ದು ಅವರ ಮನ ಗೆದ್ದು ಚುನಾವಣೆ ಬಳಿಕ ಚುನಾವಣೆ ಜೈಸಿದ “ಜನ ಮೆಚ್ಚಿದ” ನಾಯಕತ್ವ. ಕೇಂದ್ರದಲ್ಲಿ ವಾಜಪೇಯಿ ಸಂಪುಟದಲ್ಲಿ ಸಚಿವರಾಗಿದ್ದ ಸರ್ಟಿಫಿಕೆಟ್ ಅವರ ಕಿಸೆಯಲ್ಲಿದೆ. ಅದನ್ನು ಅವರು ಆಗಾಗ ತಮ್ಮ ಮಾತಿನಲ್ಲಿ ಹೇಳುತ್ತಾರೆ ಕೂಡಾ. ಕೇಂದ್ರದಲ್ಲಿ ಎನ್‌ಡಿಎ/ಬಿಜೆಪಿ ಅಧಿಕಾರಕ್ಕೆ ಬಂದಾಗಲೆಲ್ಲ ಸಚಿವರಾದ ಅನಂತ ಕುಮಾರ್ ಮತ್ತು ಯಡಿಯೂರಪ್ಪ ನಡುವೆ ಸಂಬಂಧ ಹಳಸುತ್ತಿದ್ದ ಹಂತದಲ್ಲಿ ಯಡಿಯೂರಪ್ಪ ವಿರುದ್ಧ ಪರ್ಯಾಯ ಲಿಂಗಾಯತ ನಾಯಕನನ್ನು ಬೆಳೆಸುವ ಅನಂತಕುಮಾರ್ ತಂತ್ರಕ್ಕೆ ಹರಕೆಯ ಕುರಿ ಆದವರು ಯತ್ನಾಳರು. ಒಡಕಲು ಬಿಂಬವಾಗಿರುವ ಯಡಿಯೂರಪ್ಪ- ಯತ್ನಾಳರ ಸಂಬಂಧಕ್ಕೆ ತೇಪೆ ಹಚ್ಚುವ ಯತ್ನ ಆಗೀಗ ನಡೆದರೂ ಯಡಿಯೂರಪ್ಪ ಜೊತೆಗಿನ ಯತ್ನಾಳರ ಗಾಯ ಹಾಗೇ ಉಳಿದುಕೊಂಡು ಇದೀಗ ವೃಣದ ಸ್ವರೂಪಕ್ಕೆ ತಲುಪಿದೆ.
ಅನಂತಕುಮಾರ್ ಈಗ ಇಲ್ಲ. ಆದರೆ ಅವರು ಊರಿದ ಬೀಜ ಒಣಗುವ ಲಕ್ಷಣ ಕಾಣಿಸುತ್ತಿಲ್ಲ. ಕಳೆದ ವರ್ಷ ನಡೆದ ಚುನಾವಣೆಯಲ್ಲಿ ವಿರೋಧ ಪಕ್ಷದ ಸ್ಥಾನಕ್ಕೆ ಬಿಜೆಪಿ ಹೋದಾಗ ವಿಧಾನ ಸಭೆಯಲ್ಲಿ ವಿರೋಧ ಪಕ್ಷದ ನಾಯಕನಾಗುವ ಇಲ್ಲವೇ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷನಾಗುವ ಎರಡು ಕನಸನ್ನು ಯತ್ನಾಳರು ಕಂಡಿದ್ದರು. ಅವರೇ ವ್ಯಕ್ತಪಡಿಸಿರುವ ಅನುಮಾನದಂತೆ ಯಡಿಯೂರಪ್ಪ, ಬಿ.ವೈ.ವಿಜಯೇಂದ್ರ “ಅಪ್ಪ ಮಕ್ಕಳ ಕಿತಾಪತಿ” ಯತ್ನಾಳರ ರಾಜಕೀಯ ಮಹತ್ವಾಕಾಂಕ್ಷೆಗೆ ಕೊಳ್ಳಿ ಇಟ್ಟಿತು. ಅವರು ಕನವರಿಸಿದ ಎರಡೂ ಸ್ಥಾನ ಎರಡು ಕನಸಾಗಷ್ಟೇ ಕಮರಿ ಹೋಯಿತು. ಯತ್ನಾಳರ ಹೃದಯ ಒಡೆದು ಛಪ್ಪನ್ನ ಚೂರಾಗಲು ಇಷ್ಟು ಸಾಲದೆ…? ರಾಜ್ಯದಲ್ಲಿ ಬಿಜೆಪಿ ಆಡಳಿತಾರೂಢ ಕಾಂಗ್ರೆಸ್ ಪಾಲಿಗೆ ವಿರೋಧ ಪಕ್ಷ. ಆದರೆ ಯಡಿಯೂರಪ್ಪ, ರಾಜ್ಯ ಬಿಜೆಪಿ ಅಧ್ಯಕ್ಷ ರಾಘವೇಂದ್ರ, ವಿಧಾನ ಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕರ ಪಾಲಿಗೆ ಮಾತ್ರ ಯತ್ನಾಳರೇ ವಿರೋಧ ಪಕ್ಷ. ಅವರ ನಿತ್ಯ ವರಸೆ, ಪಕ್ಷಕ್ಕೆ ಮುಜುಗರ ತರುವ ಹೇಳಿಕೆ ಸ್ಥಳೀಯ ಬಿಜೆಪಿ ವರಿಷ್ಟರ ಪಾಲಿಗೆ ಸೆರಗಿನಲ್ಲಿ ಸುತ್ತಿಕೊಂಡ ಕೆಂಡ.
ಪಕ್ಷದ ವಿರುದ್ಧ ಯತ್ನಾಳರು ಮಾಡುತ್ತಿರುವ ಕೆಲಸ, ನೀಡುತ್ತಿರುವ ಹೇಳಿಕೆ ವಿಚಾರದಲ್ಲಿ ನೋಟೀಸ್ ಹೊರಡಿಸಿ ಪಕ್ಷವೇ ಸುಸ್ತಾಗಿದೆ. ಅವರ ವಿರುದ್ಧ ಮುರುಗೇಶ ನಿರಾಣಿ, ರೇಣುಕಾಚಾರ್ಯರಂಥ ಯಡಿಯೂರಪ್ಪ ಬೆಂಬಲಿಗರು ನಡೆಸಿರುವ ನಿತ್ಯ ಹೋರಾಟ ನೀರಿನಲ್ಲಿ ನೆಂದಿರುವ ಪಟಾಕಿಯಂತೆ ಠುಸ್‌ಪುಸ್ ಆಗುತ್ತಿವೆ. ಯತ್ನಾಳರ ಬಾಯನ್ನು ಮುಚ್ಚಿಸುವ ಕೆಲಸವನ್ನು ಹೈಕಮಾಂಡ್ ಮಾಡುತ್ತದೆಂಬ ಸ್ಥಳೀಯ ನಾಯಕರ ವಿಶ್ವಾಸ ಎಂಟು ತಿಂಗಳಾದರೂ ಫಲ ಕೊಡುವ ಸೂಚನೆ ಇಲ್ಲವಾಗಿದೆ. ಯತ್ನಾಳರ ಬಾಯಿಗೆ ಹೊಲಿಗೆ ಹಾಕುವ ಸೂಜಿದಾರ ಕೇಂದ್ರದಲ್ಲಿ ಇರುವುದೇ ಹೌದಾದರೆ ಅದನ್ನು ಬಳಸುವುದಕ್ಕೆ ನಾಯಕತ್ವ ಹಿಂದೆಮುಂದೆ ನೋಡುತ್ತಿರುವುದಾದರೂ ಏಕೆ ಎನ್ನುವ ಪ್ರಶ್ನೆಗೆ ಪಕ್ಷದ ಒಳಗೂ ಹೊರಗೂ ಉತ್ತರ ತೋಚುತ್ತಿಲ್ಲ. ಕರ್ನಾಟಕದಲ್ಲಿ ಪಕ್ಷವನ್ನು ಹಾಳಾಗಲು ಮುಕ್ತಾವಕಾಶ ನೀಡಿರುವ ಬಿಜೆಪಿ ಹೈಕಮಾಂಡ್‌ನ ಕೆಲವು ನಾಯಕರು ಇನ್ನೆಂಥ ಡ್ಯಾಮೇಜಿಗಾಗಿ ಕಾಯುತ್ತಿದ್ದಾರೋ ಗೊತ್ತಿಲ್ಲ. ಕರ್ನಾಟಕದ ಬಿಜೆಪಿ ವಿಚಾರದಲ್ಲಿ ಕಣ್ಣು ಕಿವಿ ಮುಚ್ಚಿ ಕೂತಿರುವ ಮೋದಿ, ಶಾ, ನಡ್ಡಾ ಹಂತದಿಂದಲೇ ಸೂಕ್ತ ಮದ್ದು ಕರ್ನಾಟಕಕ್ಕೆ ರವಾನೆಯಾಗುವವರೆಗೂ ಯತ್ನಾಳರ ಬಾಯಿಗೆ ಬೀಗ ಬೀಳುವುದಿಲ್ಲ. ಇದು ಖರೇ ಖರೇ ಖಬರ್!
ಈ ಸುದ್ದಿಯನ್ನೂ ಓದಿ: ಮೊಗಸಾಲೆ ಅಂಕಣ: ಕಿರಿಯರ ಸಚಿವಗಿರಿ, ಸೀನಿಯರ್‌ಗಳ ಕಿರಿಕಿರಿ