Site icon Vistara News

ಮೊಗಸಾಲೆ ಅಂಕಣ: ಬರ ಮತ್ತು ಸಾಲ, ರೈತರ ಪಾಲಿನ ಶೂಲ

drought situation

ದೇಶದಲ್ಲಿ ರೈತರು (farmers) ಮತ್ತು ಕೃಷಿ ಕಾರ್ಮಿಕರು (agri laboures) ಹುಳುಗಳಂತೆ ಸಾಯುತ್ತಿದ್ದಾರೆ ಎಂದರೆ ತುಸು ಉತ್ಪ್ರೇಕ್ಷೆಯ ಮಾತಾಯಿತೆಂದು ನಗರವಾಸಿ ಭಾರತೀಯರಿಗೆ ಅನಿಸಬಹುದು. ಆದರೆ ಸತ್ಯವನ್ನು ಮುಚ್ಚಿಡುವುದಾಗಲೀ ಬಚ್ಚಿಡುವುದಾಗಲೀ ಹೇಗೆ ಸಾಧ್ಯ…? ಬಚ್ಚಿಟ್ಟ ಮಾತ್ರಕ್ಕೆ ಎಷ್ಟು ಕಾಲ ಅದನ್ನು ಅದುಮಿ ಇಡಬಹುದು..? ಭಾರತ ಕೃಷಿ ಪ್ರಧಾನವಾದ ದೇಶ. ಕೃಷಿ ಕ್ಷೇತ್ರ ಸೊರಗಿದರೆ ಕೃಷಿ ಆಧರಿತ ನಮ್ಮ ಆರ್ಥಿಕ ವ್ಯವಸ್ಥೆ ಕುಸಿಯುತ್ತದೆ. ನಮ್ಮ ಅರ್ಥ ವ್ಯವ್ಥೆಯ ಕೋಳು ಕಂಭವೇ ಕೃಷಿಯಾಗಿದ್ದರೂ ಸ್ವಯಂ ಮರಣದಂಡನೆಯಂಥ ಜೀವ ಹರಣದ ಗರಿಷ್ಟ ಶಿಕ್ಷೆಗೆ ರೈತರು ಯಾಕಾಗಿ ತಮ್ಮನ್ನು ತಾವೇ ಒಡ್ಡಿಕೊಳ್ಳುತ್ತಾರೆ…? ದಶಕಗಳಿಂದ ಈ ಪ್ರಶ್ನೆಗಳಿಗೆ ಉತ್ತರದ ಹುಡುಕಾಟ ವ್ಯರ್ಥ ಪ್ರಯತ್ನ ಎಂಬಂತೆ ನಡದೇ ಇದೆ. ಉತ್ತರ ಕೊಡಬೇಕಾದ ಕೇಂದ್ರ, ರಾಜ್ಯ ಸರ್ಕಾರಗಳು ಸತ್ಯಶೋಧನೆಗೆ ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ. ಕೇಂದ್ರದತ್ತ ರಾಜ್ಯ, ರಾಜ್ಯ ಸರ್ಕಾರಗಳತ್ತ ಕೇಂದ್ರ ಪರಸ್ಪರ ದೋಷ ಹೊರಿಸುತ್ತ ರೈತರು ಎದುರಿಸುತ್ತಿರುವ ನಿಜ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಕೆಲಸ ಗಂಭೀರ ನೆಲೆಯಲ್ಲಿ ನಡೆಯದಂತೆ ಮಾಡಿರುವುದು ಸ್ವಾತಂತ್ರ್ಯೋತ್ತರ ಭಾರತದ ವಾಸ್ತವ.

ಕೃಷಿ ಸಂಬಂಧಿ ಸಮಸ್ಯೆಗಳಿಗೆ ಪರಿಹಾರ ಹುಡುಕಿಕೊಳ್ಳಬೇಕಾದ್ದು ರಾಜ್ಯ ಸರ್ಕಾರಗಳ ಹೊಣೆ. ರಾಜ್ಯದಿಂದ ರಾಜ್ಯಕ್ಕೆ ರೈತರ ಸಮಸ್ಯೆ ಭಿನ್ನ ಭಿನ್ನವಾಗಿವೆ. ಒಂದು ರಾಜ್ಯದ ಪ್ರಮುಖ ಬೆಳೆ ಇನ್ನೊಂದು ರಾಜ್ಯದಲ್ಲಿ ಕೆಲಸಕ್ಕೆ ಬಾರದಿರಬಹುದು. ಒಂದು ರಾಜ್ಯದ ರೈತರು ಎದುರಿಸುತ್ತಿರುವ ಸಮಸ್ಯೆಗೂ ಮತ್ತೊಂದಕ್ಕೂ ದೊಡ್ಡ ವ್ಯತ್ಯಾಸವೂ ಇರಬಹುದು. ಇದೇ ಅಲ್ಲದೆ ಇನ್ನಿತರ ಬೇರೆ ಬೇರೆ ವಿಚಾರಗಳೂ ಕೃಷಿಯನ್ನು ರಾಜ್ಯ ವಿಷಯದ ಪಟ್ಟಿಯಲ್ಲಿ ಸೇರಿಸುವುದಕ್ಕೆ ಕೇಂದ್ರ ಸರ್ಕಾರದಲ್ಲಿದ್ದ ಕಾರಣಗಳಾಗಿರಬಹುದು. ಕೆಲವು ರಾಜ್ಯಗಳಲ್ಲಿ ರೈತರ ಹೆಸರಿನಲ್ಲಿ ಪ್ರತ್ಯೇಕ ಬಜೆಟ್ ಮಂಡಿಸುವ ಪ್ರಹಸನ ನಡೆದಿರುವುದಕ್ಕೆ ಇದೇ ಕಾರಣವಾಗಿರಲೂಬಹುದು. ಬಿ.ಎಸ್. ಯಡಿಯೂರಪ್ಪನವರು ಅರ್ಥ ಖಾತೆ ಸಹಿತ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಹಸಿರು ಶಾಲು ಹೊದ್ದು ಪ್ರತ್ಯೇಕ ರೈತ ಬಜೆಟ್ ಮಂಡಿಸಿದ್ದು ನೆನಪಿನಲ್ಲಿರುವ ವಿದ್ಯಮಾನ.

ಚುನಾವಣೆಗೆ ಮೊದಲು ರೈತರೇ ಈ ದೇಶದ ಬೆನ್ನೆಲುಬು ಎಂದು ಹಾಡಿಹೊಗಳಿ ಹೊನ್ನ ಶೂಲಕ್ಕೇರಿಸುವ ರಾಜಕೀಯ ಪಕ್ಷಗಳು ಮತ್ತು ರಾಜಕಾರಣಿಗಳು ಅಧಿಕಾರಕ್ಕೆ ಬಂದ ನಂತರದಲ್ಲಿ ಅದೇ ರೈತರ ಬೆನ್ನಮೂಳೆಯನ್ನು ಮುರಿಯುವ ಕೆಲಸ ಮಾಡುತ್ತಿರುವುದು ಕಣ್ಮುಂದಿನ ಸತ್ಯ. ನಮ್ಮ ಶಾಸನ ಸಭೆಗಳಲ್ಲಿ ಮತ್ತು ಸಂಸತ್‍ನಲ್ಲಿ ನಮ್ಮನ್ನು ಪ್ರತಿನಿಧಿಸುವವರಲ್ಲಿ ಗ್ರಾಮೀಣ ಪ್ರದೇಶದವರೇ ಅಧಿಕ. ಅದರಲ್ಲೂ ಕೃಷಿ ಕುಟುಂಬದಿಂದ ಬಂದವರು ಗಣನೀಯ ಸಂಖ್ಯೆಯಲ್ಲಿದ್ದಾರೆ. ಹೀಗಿದ್ದೂ ರೈತರ ಪಡಿಪಾಟಲುಗಳಿಗೆ ಪರಿಹಾರ ಹುಡುಕುವ ಯತ್ನ ನಡೆದಿಲ್ಲವೇಕೆ..? ಯಾರು ಉತ್ತರ ಕೊಡಬೇಕು…?. ಕೇಂದ್ರ ಸರ್ಕಾರ ರಾಜ್ಯಗಳತ್ತ, ರಾಜ್ಯ ಸರ್ಕಾರಗಳು ಕೇಂದ್ರದತ್ತ ಬೆರಳು ತೋರಿಸಿ ಕೈ ತೊಳೆದುಕೊಳ್ಳುತ್ತಿವೆ. ರೈತರು ಎದುರಿಸುತ್ತಿರುವ ಬಗೆಬಗೆಯ ಸಮಸ್ಯೆಗಳ ವಿಚಾರದಲ್ಲಿ ಸ್ಪಂದಿಸಬೇಕಿರುವ ಉತ್ತರದಾಯಿತ್ವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಇದೆ. ಅದನ್ನು ನೆನಪು ಮಾಡಿ ಕೊಡಬೇಕಿರುವ ನಮ್ಮವರೇ ಆದ ತಥಾಕಥಿತ ಜನ ಪ್ರತಿನಿಧಿಗಳು ನರಸತ್ತಂಥ ಸ್ಥಿತಿಯಲ್ಲಿದ್ದಾರೆಂಬ ಆರೋಪ ರೈತ ಸಂಘಟನೆಗಳದು.

ಈ ಆರೋಪ ನಿರಾಧಾರವೇನಲ್ಲ. ಹುಟ್ಟಿಸಿದ ದೇವರು ಹುಲ್ಲು ಮೇಯಿಸುವುದಿಲ್ಲ ಎನ್ನುವುದು ನಮ್ಮ ರೈತರ ವಿಚಾರದಲ್ಲಿ ಪದೇ ಪದೇ ನಿಜವಾಗಿದೆ. ರೈತರ ಆತ್ಮಹತ್ಯಾ ಸರಣಿ ಆರಂಭವಾಗಿದ್ದು 1970ರ ದಶಕದಲ್ಲಿ. ಖಾಸಗಿ ಲೇವಾದೇವಿಗಾರರಿಂದ ಸಾಲ ಪಡೆದು ಮೀಟರ್ ಬಡ್ಡಿಯ ವಿಷವರ್ತುಲದೊಳಗೆ ಸಿಕ್ಕು ಅನ್ಯ ಮಾರ್ಗ ಕಾಣದೆ ಆತ್ಯಹತ್ಯೆಗೆ ಮುಂದಾದ ರೈತರ ಸಂಖ್ಯೆ ಅಪರಿಮಿತ. ಆ ದಿನಗಳಲ್ಲಿ ಬ್ಯಾಂಕುಗಳು ಸಾಲ ಕೊಟ್ಟರೂ ಅದರ ವಸೂಲಿಯ ಕ್ರೂರ ಕ್ರಮ ರೈತರನ್ನು ಆತ್ಮಹತ್ಯೆಗೆ ತಳ್ಳಿದ್ದು ಇತಿಹಾಸ. ಮೀಟರ್ ಬಡ್ಡಿ ದಂಧೆಗೆ ಕಡಿವಾಣ ಹಾಕುವ ಕಾನೂನನ್ನು ಕರ್ನಾಟಕವೂ ಸೇರಿದಂತೆ ಅನೇಕ ರಾಜ್ಯಗಳು ಅಮಲಿಗೆ ತಂದಿವೆ. ಆದರೆ ಚಾಪೆ ಕೆಳಗೆ, ಅಗತ್ಯಬಿದ್ದರೆ ರಂಗೋಲಿ ಕೆಳಗೆ ತೂರುವ ಮೀಟರ್ ಬಡ್ಡಿ ಶೂರರು ಸರ್ಕಾರದ ಕಾನೂನು ಕೆಲಸಕ್ಕೆ ಬಾರದಂತೆ ಮಾಡಿದ್ದಾರೆ. ಇದರಲ್ಲಿ ಕಂದಾಯ ಅಧಿಕಾರಿಗಳು, ಪೊಲೀಸರೂ ಸೇರಿದಂತೆ ಸರ್ಕಾರಿ ವ್ಯವಸ್ಥೆಯ ಪಾಲುದಾರಿಕೆಯೂ ಇದೆ ಎನ್ನುವುದನ್ನು ಮರೆಯಬಾರದು.

ಸರ್ಕಾರದ ಅಧಿಕೃತ ಸಂಸ್ಥೆ ನ್ಯಾಷನಲ್ ಕ್ರೈಂ ರೆಕಾರ್ಡ್ಸ್‌ ಬ್ಯೂರೋ (ಎನ್‍ಸಿಆರ್‌ಬಿ) ಪ್ರಕಟಿಸಿರುವ ಅಂಕಿಅಂಶ ರೀತ್ಯ ದೇಶದಲ್ಲಿ ಘಟಿಸುವ ಒಟ್ಟಾರೆ ಆತ್ಮಹತ್ಯೆಯಲ್ಲಿ ರೈತರು ಮತ್ತು ಕೃಷಿ ಕಾರ್ಮಿಕರ ಪಾಲು ಶೇಕಡಾ 11.2. ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಹೇಳಿರುವಂತೆ ಕಳೆದ ಏಪ್ರಿಲ್‍ನಿಂದ ಇದುವರೆಗೆ 251 ರೈತರು ನಮ್ಮ ರಾಜ್ಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರದೇ ಸಂಪುಟದ ಸಚಿವ ಶಿವಾನಂದ ಪಾಟೀಲರು ರೈತ ಕುಟುಂಬದಲ್ಲಿ ಯಾವುದೇ ಕಾರಣಕ್ಕೆ ಸಾವು ಸಂಭವಿಸಿದರೂ ರೈತರ ಆತ್ಮಹತ್ಯೆ ಎಂದು ಬಿಂಬಿಸುವ ಪರಿಪಾಠ ಮಾಧ್ಯಮದ್ದು ಎಂದು ಹೇಳಿದ್ದಾರೆ. ಅವರ ಮಾತು ಸಿಎಂ ಹೇಳಿಕೆ ನಂತರ ತಲೆಬುಡ ಕಳಚಿದ ಹೇಳಿಕೆ ಎನಿಸಿದೆ. ಕರ್ನಾಟಕದ ರೈತರ ಆತ್ಮಹತ್ಯೆಗೆ ಸಿದ್ದರಾಮಯ್ಯ ಕೊಟ್ಟಿರುವ ಕಾರಣ, ಲೇವಾದೇವಿಗಾರರ ಮತ್ತು ಬ್ಯಾಂಕುಗಳ ಕಿರುಕುಳ. ಕಳೆದ 23 ವರ್ಷದ ಅವಧಿಯಲ್ಲಿ ಕರ್ನಾಟಕದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಸಂಖ್ಯೆ ಬರೋಬ್ಬರಿ ಹನ್ನೊಂದು ಸಾವಿರ. ಅಂದರೆ ರೈತರ ಆತ್ಮಹತ್ಯೆಗೆ ಕಾರಣ ಏನೆನ್ನುವುದು ಸಿದ್ದರಾಮಯ್ಯನವರಿಗೆ ಗೊತ್ತಿದೆ ಎಂದಂತಾಯಿತು. ಆದರೆ ಅದರ ವಿರುದ್ಧ ಕ್ರಮ ಏಕಿಲ್ಲ..?

ಎನ್‍ಸಿಆರ್‌ಬಿ ಪ್ರಕಾರ 1995ರಿಂದ 2014ರ 19 ವರ್ಷದಲ್ಲಿ ದೇಶದಲ್ಲಿ ಒಟ್ಟು ಎರಡು ಲಕ್ಷ, 96 ಸಾವಿರದ 438 ರೈತರು ಆತ್ಮಹತ್ಯೆ ಮೊರೆ ಹೋಗಿದ್ದಾರೆ. ಇದರಲ್ಲಿ ಮಹಾ ರಾಷ್ಟ್ರದ್ದೇ ಮೇಲುಗೈ. ಅಲ್ಲಿ ಈ 19 ವರ್ಷದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಸಂಖ್ಯೆ 60,750. ಉಳಿದಂತೆ ಒಡಿಷಾ, ಸಂಯುಕ್ತ ಆಂದ್ರ ಪ್ರದೇಶ, ಮಧ್ಯ ಪ್ರದೇಶ, ಗುಜರಾತ್ ಹಾಗೂ ಚತ್ತೀಸ್‍ಘಡಗಳ ರೈತರು ಪ್ರಾಣ ನೀಗಿಕೊಂಡಿದ್ದಾರೆ.

1986ರಲ್ಲಿ ಸ್ಥಾಪನೆಯಾದ ಎನ್‍ಸಿಆರ್‍ಬಿ ಹೇಳುವಂತೆ 2014ರಿಂದ 2020ರ ಆರು ವರ್ಷದ ಅವಧಿಯಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ರೈತರು ಕೃಷಿ ಕೂಲಿ ಕಾರ್ಮಿಕರು ನೇಣು ಹಾಕಿಕೊಂಡೋ; ವಿಷ ಸೇವಿಸಿಯೋ, ಹೊಳೆ ಬಾವಿಗೆ ಜಿಗಿದೋ, ರೈಲಿಗೆ ತಲೆ ಕೊಟ್ಟೋ ಮುಂತಾದ ಅಮಾನವೀಯ ಕ್ರಮಗಳ ಮೂಲಕ ಪ್ರಾಣ ಹರಣ ಮಾಡಿಕೊಂಡು ನಂಬಿರುವ ಕುಟುಂಬವನ್ನು ಅನಾಥ ಮಾಡಿ ಹೋಗಿದ್ದಾರೆ. ವರದಿ ಬಹಿರಂಗಪಡಿಸಿರುವ ದಾಖಲೆ ಹೇಳುವಂತೆ ದೇಶದಲ್ಲಿ 2014ರ ಒಂದೇ ವರ್ಷದಲ್ಲಿ 5600 ಹಾಗೂ 2020ರಲ್ಲಿ 5500 ರೈತರು ದುರ್ಮರಣಕ್ಕೀಡಾಗಿದ್ದಾರೆ. ಎರಡೂ ವರ್ಷದ ರೈತರ ಸಾವಿನೊಂದಿಗೆ ಕೃಷಿ ಕೂಲಿ ಕಾರ್ಮಿಕರ ಆತ್ಮಹತ್ಯೆಯನ್ನು ಸೇರಿಸಿದರೆ ಅಂಕಿ 10 ಸಾವಿರದ ಗಡಿಯನ್ನು ದಾಟುತ್ತದೆ.

ರೈತರ ಆತ್ಮಹತ್ಯೆಗೆ ಸರ್ಕಾರದ ವಿವಿಧ ಇಲಾಖೆಗಳು ಕೊಡುವ ವಿವರಣೆ ಹೆಚ್ಚಿನ ಸಂದರ್ಭದಲ್ಲಿ ಜೋಕ್ ಆಗಿರುತ್ತದೆ. ಇಲಾಖೆಗಳು ಹೇಳುವ ರೀತ್ಯ ರೈತರಲ್ಲಿ ಆರ್ಥಿಕ ಶಿಸ್ತು ಎನ್ನುವುದೇ ಇಲ್ಲ. ಕೃಷಿ ಉದ್ದೇಶಕ್ಕಾಗಿ ಪಡೆದ ಸಾಲವನ್ನು ಮದುವೆ ಮೋಜುಮಸ್ತಿಗೆ ಖರ್ಚುಮಾಡಿ ಸಾಲ ತೀರಿಸುವ ಸಮಯದಲ್ಲಿ ಕಂಗಾಲಾಗುತ್ತಾರೆ ಎನ್ನುವುದು ವಿಷಯದ ಗಾಂಭೀರ್ಯ ಮರೆಮಾಚುವ ಅತ್ಯಂತ ತೆಳು ವಿವರಣೆ. ಸಾಲಗಾರ ರೈತರ ಮನೆ ಬಾಗಿಲಿಗೆ ಸಾಲ ವಸೂಲಾತಿ ವಾಹನವನ್ನು ತೆಗೆದುಕೊಂಡು ಹೋಗಿ ತಮಟೆ ಬಾರಿಸುವ ಮೂಲಕ ಸಾಲಗಾರ ರೈತರ ಆತ್ಮಸ್ಥೈರ್ಯ ಉಡುಗಿಸುವ ಅನಾಗರಿಕ ಪದ್ಧತಿಯನ್ನು ಸಾಲ ನೀಡುವ ಘಟಕಗಳು ಅನುಸರಿಸಿಕೊಂಡು ಬಂದಿವೆ. ಮಾನ ಹರಾಜು ಹಾಕುವ ಕ್ರಿಯೆಯಿಂದ ಮನನೊಂದ ರೈತರು ಇನ್ನು ಬದುಕಿದ್ದು ಏನು ಪ್ರಯೋಜನ ಎಂಬ ತೀರ್ಮಾನಕ್ಕೆ ಬಂದರೆ ಅವರ ಪ್ರಶ್ನೆಗೆ ಆತ್ಮಹತ್ಯೆಯೇ ಉತ್ತರವಾಗುವ ಅಪಾಯವಿದೆ.

ರೈತರ ಸಂಕಷ್ಟಕ್ಕೆ ಕಾರಣ ಹಲವು. ಮೊದಲನೆಯದಾಗಿ ಅವರು ಬೆಳೆಯುವ ಬೆಳೆಯ ಕೃಷಿ ಉತ್ಪಾದನಾ ವೆಚ್ಚಕ್ಕೂ ಮಾರುಕಟ್ಟೆಯಲ್ಲಿ ಆ ಬೆಳೆಗೆ ಸಿಗುವ ಬೆಲೆಗೂ ತಾಳಮೇಳ ಇಲ್ಲದ ಸ್ಥಿತಿ, ಕೃಷಿ ಕ್ಷೇತ್ರಕ್ಕೆ ಅವರು ಬೆನ್ನು ಹಾಕುವಂತೆ ಮಾಡಿದೆ. ತಿಂಗಳು ತಿಂಗಳು ನಿಯಮಿತ ಸಂಬಳ ಎಣಿಸುವವರು ಇದುವರೆಗೆ ಆರ್ಥಿಕ ಸಂಕಷ್ಟಕ್ಕಾಗಿ ಆತ್ಮಹತ್ಯೆಗೆ ಓಗೊಟ್ಟಿಲ್ಲ. ಅವರ ಮಾಸಿಕ ಸಂಬಳ ಅವರ ಮರ್ಯಾದೆಯನ್ನು ಕಾಪಾಡುತ್ತದೆ; ಹೊಟ್ಟೆಯನ್ನು ತುಂಬಿಸುತ್ತದೆ. ಮಕ್ಕಳ ಶಿಕ್ಷಣ ಮುಂತಾದವನ್ನು ನೋಡಿಕೊಳ್ಳುತ್ತದೆ. ರೈತ ಕುಟುಂಬದಲ್ಲಿ ನಿಶ್ಚಿತ ಆದಾಯ ಎನ್ನುವುದೇ ಇಲ್ಲ, ಹೀಗಿರುವಾಗ ಆರ್ಥಿಕ ಶಿಸ್ತಿನ ಪಾಠ ಅವರ ಪಾಲಿಗೆ ನೀರಿಳಿಯದ ಗಂಟಲಿನಲ್ಲಿ ಕಡುಬು ತುರುಕಿದಂತೆ ಆಗದೆ…? ಕೆಲವು ವರ್ಷಗಳ ಹಿಂದಿನ ಮಾತು, ರೈತ ಸಂಘದ ನಾಯಕರೂ ಶಾಸಕರೂ ಆಗಿದ್ದ ಪುಟ್ಟಣ್ಣಯ್ಯ ಹೇಳಿದ ವಸ್ತುಸ್ಥಿತಿಯ ಮಾತು: ಒಂದು ಟನ್ ಕೂದಲಿಗೆ ಇರುವ ಬೆಲೆ ಒಂದು ಟನ್ ಕಬ್ಬಿಗೆ ಇಲ್ಲ. ಬೆಳೆಯಲು ಮಾಡಿದ ಖರ್ಚು ಸಹಾ ಹುಟ್ಟದು ಎಂದಿದ್ದರು. ಇದು ತಮಾಷೆಗೆ ಹೇಳಿದ ಮಾತಲ್ಲ, ಬದಲಿಗೆ ನೂರಕ್ಕೆ ನೂರು ಸತ್ಯ. (ಕೊಪ್ಪಳ ಜಿಲ್ಲೆಯ ಭಾಗ್ಯನಗರ ಎಂಬಲ್ಲಿ ಮನುಷ್ಯರ ಕೂದಲನ್ನು ಸಂಸ್ಕರಿಸಿ ಮಾರುಕಟ್ಟೆ ಮಾಡುವ ವ್ಯವಸ್ಥೆ ಇದೆ. ಅಲ್ಲಿ ವಿಚಾರಿಸಿದರೆ ಟನ್ ಕೂದಲಿನ ದರ ಎಷ್ಟೆನ್ನುವುದು ಮತ್ತು ಟನ್ ಕಬ್ಬಿನ ದರಕ್ಕಿಂತ ಅದು ಎಷ್ಟು ಜಾಸ್ತಿ ಎನ್ನುವುದು ಗೊತ್ತಾಗುತ್ತದೆ).

ರೈತರು ಬಹುತೇಕ ಕಡೆಗಳಲ್ಲಿ ಅವಲಂಬಿಸಿರುವುದು ಮಳೆಯನ್ನು. ಮಳೆ ಕೈಕೊಟ್ಟಿತೆಂದರೆ ಕೃಷಿಕರ ಬದುಕು ಬರ್ಬಾದಾಗುತ್ತದೆ. ಈ ವರ್ಷ ಮಳೆ ಬರಲಿಲ್ಲ, ಬೆಳೆ ಕೈ ಹತ್ತಲಿಲ್ಲ ಎಂದ ಮಾತ್ರಕ್ಕೆ ಸಾಲ ಕೊಟ್ಟ ಬ್ಯಾಂಕುಗಳು, ಮೀಟರ್ ಬಡ್ಡಿಯವರು ಸುಮ್ಮನೆ ಇರುವುದಿಲ್ಲ. ಮನೆ ಮುಂದೆ ಬಂದು ಗಲಾಟೆ ಮಾಡುತ್ತಾರೆ; ಗೂಂಡಾಗಳನ್ನು ಕಳಿಸಿ ಜೀವ ಬೆದರಿಕೆ ಹಾಕುತ್ತಾರೆ. ಹೆಂಡತಿ ಮಕ್ಕಳ ಎದುರೇ ಯಾರ್ಯಾರದೋ ಮುಂದೆ ಅಧೋಮುಖರಾಗಿ ನಿಲ್ಲುವ ಮಾನಧನ ರೈತರಿಗೆ ಯಾಕಾದರೂ ರೈತರಾಗಿ ಹುಟ್ಟಿದೆವೋ ಎನಿಸಿದರೆ ಆ ತಪ್ಪಿಗೆ ಎಲ್ಲೋ ಇರುವ ಕಾರಣ ಸ್ಪಷ್ಟವಾಗಬೇಕಲ್ಲವೆ…?

ಕರ್ನಾಟಕದ 195 ತಾಲ್ಲೂಕುಗಳಲ್ಲಿ ಬರ ಪರಿಸ್ಥಿತಿ ಎದುರಾಗಿದೆ ಎಂದು ಸರ್ಕಾರ ಅಧಿಕೃತವಾಗಿ ಪ್ರಕಟಿಸಿದೆ. ಮಳೆ ಬಾರದಿದ್ದರೆ ಈ ಬರಗಾಲ ಎಷ್ಟು ಜನ ರೈತರ ಪ್ರಾಣವನ್ನು ಮುಕ್ಕಲಿದೆಯೋ ಹೇಳಲಾಗದು. ರೈತರು ಮಾಡಿರುವ ಕೃಷಿ ಸಾಲ ವಸೂಲಾತಿಯ ಕ್ರೂರ ಮಾರ್ಗವನ್ನು ಸರ್ಕಾರ ಬದಲಿಸಬೇಕು. ಶ್ರೀಮಂತ ಉದ್ಯಮಿಗಳು ಪಡೆದ ಸಾಲದ ವಸೂಲಾತಿಗೆ ತೆಗೆದುಕೊಳ್ಳುವ ಮೃದು ಕ್ರಮವನ್ನು ರೈತರಿಗೂ ಅನ್ವಯಿಸುವ ಮತ್ತು ಸಾಲ ನೀಡುವ ಸಂಸ್ಥೆಗಳಿಗೆ ಟೋಪಿ ಹಾಕುವುದೇ ಗುರಿಯಾಗಿಸಿಕೊಂಡಿರುವ ಕಳ್ಳರ ಕೈಗೆ ಬೇಡಿ ತೊಡಿಸುವ ಕೆಲಸಕ್ಕೆ ಸರ್ಕಾರ ಮುಂದಾದರೆ ಆರ್ಥಿಕ ಸ್ಥಿತಿಗೆ ಮುಕುರ ಎದುರಾಗದು.

ಇದನ್ನೂ ಓದಿ: ಮೊಗಸಾಲೆ ಅಂಕಣ: ಸನಾತನ ಧರ್ಮ ಮತ್ತು ಸಿಎಂ ಕಾವೇರಿ ಗೃಹಪ್ರವೇಶ!

Exit mobile version