Site icon Vistara News

ಮೊಗಸಾಲೆ ಅಂಕಣ: ಲೋಕಸಭೆ ಫೈನಲ್‌ಗೂ ಮುನ್ನ ಪಂಚರಾಜ್ಯ ಸೆಮಿಫೈನಲ್‌

election five states

ಜಗತ್ತಿನ ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ಕಣ್ಣು ಮತ್ತು ಮನಸ್ಸು ಇದೀಗ ಭಾರತದಲ್ಲಿ ನಡೆಯುತ್ತಿರುವ ವಿಶ್ವಕಪ್ ಟೂರ್ನಿಯ (ICC world cup 2023) ಮೇಲೆ ನೆಟ್ಟಿದೆ. ಸೆಮಿಫೈನಲ್ಸ್‍ಗೆ ಯಾವ ಟೀಮು ಹೋಗುತ್ತದೆ; ಅದರಲ್ಲಿ ಯಾವುದು ಫೈನಲ್ಸ್ ಗೆದ್ದು ಕಪ್ ಹಿಡಿದು ಬೀಗುತ್ತದೆಂಬ ಚರ್ಚೆ ವ್ಯಾಪಕವಾಗಿದೆ. ಭಾರತದ ವೀಕ್ಷಕರ ಪಾಲು ಇದರಲ್ಲಿ ಬಹಳ ಬಹಳ ದೊಡ್ಡದು ಎನ್ನಬೇಕು, ಏಕೆಂದರೆ ಅವರಿಗೆಲ್ಲರಿಗೂ ವಿಶ್ವಕಪ್ಪನ್ನು ಭಾರತ ಗೆಲ್ಲುವುದು ಬೇಕಾಗಿದೆ. ಆದರೆ ಹೇಳಿಕೇಳಿ ಕ್ರಿಕೆಟ್ ಕೂಡಾ ಅದರ ಅಭಿಮಾನಿಗಳು ಹೇಳುವಂತೆ ಒಂದು ಕ್ರೀಡೆಯೇ. ಕ್ರೀಡೆ ಮತ್ತು ಪಂದ್ಯವೆಂದರೆ ಸೋಲು ಗೆಲುವಿನ ಹಾವು ಏಣಿ ಆಟ. ಅಲ್ಲಿ ಅಂತಿಮವಾಗಿ ಉಳಿಯುವುದು ಕ್ರೀಡಾಮನೋಭಾವದ ದರ್ಶನ. ಆದರೆ ಸೋತ ನಾಡು ಕಳೆಗುಂದುತ್ತದೆ; ಗೆದ್ದವರು ಬೀಗಿ ಅಟ್ಟಹಾಸದಲ್ಲಿ ಒಂದಿಷ್ಟು ಕಾಲ ಮೆರೆಯುತ್ತಾರೆ.

ಭಾರತದ ರಾಜಕಾರಣ ಈಗ ಸೆಮಿಫೈನಲ್ಸ್‌ನತ್ತ ದೃಷ್ಟಿ ನೆಟ್ಟಿರುವುದು ನಿಜವಾದರೂ ಅದು ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಲ್ಲ. ಬದಲಿಗೆ ಐದು ರಾಜ್ಯ ವಿಧಾನ ಸಭೆಗಳಿಗೆ ನಡೆದಿರುವ ಚುನಾವಣೆಯಲ್ಲಿ (assembly electuion 2023) ಅದರ ಸಂಪೂರ್ಣ ಗಮನ ಕೇಂದ್ರೀಕೃತವಾಗಿದೆ. ಮಧ್ಯ ಪ್ರದೇಶ (230 ಕ್ಷೇತ್ರ); ರಾಜಸ್ತಾನ (200); ತೆಲಂಗಾಣಾ (119); ಚತ್ತೀಸ್‍ಘಡ (90) ಮತ್ತು ಮಿಜೋರಾಮ್‍ನ 40 ಹೀಗೆ 679 ಶಾಸಕರನ್ನು ಚುನಾಯಿಸುವ ಚುನಾವಣೆ ಇದು. ಅಖಿಲ ಭಾರತ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ (Mallikarjun Kharge) ಪ್ರಕಾರ 2024ರ ಮೊದಲರ್ಧ ಭಾಗದಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯ ಸೆಮಿಫೈನಲ್ಸ್ ಈಗ ನಡೆದಿರುವ ಪಂಚರಾಜ್ಯ ಹಣಾಹಣಿ. ವಿಧಾನ ಸಭಾ ಚುನಾವಣೆಯಲ್ಲಿ ಪರಿಗಣಿತವಾಗುವ ಅಂಶಗಳಿಗೂ ಲೋಕಸಭೆ ಚುನಾವಣೆಯಲ್ಲಿ (Parliament election 2024) ಎದುರಾಗುವ ವಿಚಾರಗಳಿಗೂ ಏನಕೇನ ಸಂಬಂಧವಿಲ್ಲವಾದ್ದರಿಂದ ಖರ್ಗೆಯವರ ಅನಿಸಿಕೆ ಅರ್ಥ ಹೀನ ಎನ್ನುವ ವಾದ ಡಾಟೆಡ್ ಇಂಡಿಯಾ ಒಕ್ಕೂಟದ ವಿರೋಧಿ ಪಾಳಯದ್ದು.

ವಾದ ಪ್ರತಿವಾದ ಏನೇ ಇರಲಿ. ಈಗ ನಡೆದಿರುವ ಚುನಾವಣೆ ಬಿಜೆಪಿ (BJP) ನೇತೃತ್ವದ ಎನ್‍ಡಿಎಯಲ್ಲಿ (NDA) ಹೇಗೋ ಹಾಗೆಯೇ ಕಾಂಗ್ರೆಸ್‍ನಲ್ಲೂ (Congress) ತಳಮಳವನ್ನು ಕೊಂಚ ಮಟ್ಟಿಗಾದರೂ ಸೃಷ್ಟಿಸಿರುವುದನ್ನು ರಾಜಕೀಯ ವಿಶ್ಲೇಷಕರು ಅಲ್ಲಗಳೆಯುವುದಿಲ್ಲ. ಈ ಚುನಾವಣೆಯಲ್ಲಿ ಡಾಟೆಡ್ ಇಂಡಿಯಾ ಸೀಟು ಹೊಂದಾಣಿಕೆಯಾಗದೆ ಸ್ಪರ್ಧಿಸಿಲ್ಲ. ಕಾಂಗ್ರೆಸ್‍ನೊಳಗೆ ಅದು ಒಂದು ಬಗೆಯ ತೊಳಸಂಬಟ್ಟೆಗೆ ಹೇತುವಾಗಿದೆ. ಅದೇನೇ ಇದ್ದರೂ ಮುಖ್ಯ ಪಕ್ಷಗಳಿಗೆ ಗೆಲ್ಲುವುದು ಮುಖ್ಯ ಮತ್ತು ಅನಿವಾರ್ಯ. ಇದಕ್ಕೆ ಕಾರಣ ಈಗ ರಾಜ್ಯವನ್ನು, ರಾಜ್ಯಗಳನ್ನು ಗೆಲ್ಲಬಹುದಾದ ಪಕ್ಷ ಒಕ್ಕೂಟದ ಗೆಲುವಿನ ಹವಾ ಲೋಕಸಭಾ ಚುನಾವಣೆವರೆಗೂ ಉಳಿಯುವ ಆತಂಕ. ಗೆದ್ದರೆ ಎಲ್ಲವೂ ಸುಗಮ, ಸೋತರೆ ಏದುಸಿರು ಬಿಡುವಷ್ಟು ದುರ್ಗಮ.

ಈ ಐದು ರಾಜ್ಯಗಳಿಂದ ಲೋಕಸಭೆಯಲ್ಲಿ ಚುನಾಯಿತ ಪ್ರಾತಿನಿಧ್ಯ ಒಟ್ಟಾರೆ 83 ಸ್ಥಾನ. ಮಧ್ಯಪ್ರದೇಶ 29 ಲೋಕಸಭೆ ಸ್ಥಾನ ಅದರಲ್ಲಿ 28 ಬಿಜೆಪಿ ಕೈಲಿದೆ. ರಾಜಸ್ತಾನದ ಲೋಕಸಭಾ ಸೀಟು 25 ಅದರಲ್ಲಿ 24 ಬಿಜೆಪಿ ಕೈಲಿದೆ. ತೆಲಂಗಾಣಾ ಲೋಕಸಭಾ ಸೀಟು 17. ಅದರಲ್ಲಿ ಒಂಭತ್ತು ರಾಜ್ಯದ ಆಡಳಿತಾರೂಢ ಪಕ್ಷ ಬಿಆರ್‍ಎಸ್ ಕೈಲಿದೆಯಾದರೆ ನಾಲ್ಕು ಸ್ಥಾನ ಬಿಜೆಪಿ ಹಿಡಿತದಲ್ಲಿದೆ. ಚತ್ತೀಸಘಡದ ಒಟ್ಟು ಹನ್ನೊಂದು ಸ್ಥಾನದಲ್ಲಿ ಬಿಜೆಪಿ ಒಂಭತ್ತು ಸ್ಥಾನ ಹೊಂದಿದ್ದರೆ ಕಾಂಗ್ರೆಸ್ ಕೈಯಲ್ಲಿ ಎರಡು ಸೀಟು ಇವೆ. ಮಿಜೋರಾಮ್‍ದಲ್ಲಿ ಇರುವ ಏಕೈಕ ಸೀಟು ಆಡಳಿತ ಪಕ್ಷ ಮಿಜೋರಾಂ ನ್ಯಾಷನಲ್ ಫ್ರಂಟ್ ಕೈಲಿದೆ. ಬಿಜೆಪಿ ಬೆಂಬಲಿತ ಪ್ರಾದೇಶಿಕ ಪಕ್ಷ ಅದು.

ರಾಜ್ಯದ ಆಡಳಿತ ಯಾವ ಪಕ್ಷದ ಕೈಲಿರುತ್ತದೋ ಆ ಪಕ್ಷಕ್ಕೆ ಲೋಕಸಭಾ ಸ್ಥಾನ ಗೆಲ್ಲುವುದು ತೀರಾ ಸುಲಭ ಎಂದಲ್ಲವಾದರೂ ತೀರಾ ಕಷ್ಟವಲ್ಲ ಎಂಬ ಮಾತು ರಾಜಕಾರಣದಲ್ಲಿ ಚಾಲ್ತಿಯಲ್ಲಿದೆ. ಪ್ರಸ್ತುತ ಬಿಜೆಪಿ ಈ ಐದು ರಾಜ್ಯಗಳ ಒಟ್ಟಾರೆ 83 ಲೋಕಸಭಾ ಸ್ಥಾನದ ಪೈಕಿ 58 ಸ್ಥಾನವನ್ನು 2019ರ ಚುನವಣೆಯಲ್ಲಿ ಗೆದ್ದಿದೆ. ನರೇಂದ್ರ ಮೋದಿಯವರು ಸ್ವತಃ ಘೋಷಿಸಿಕೊಂಡಿರುವಂತೆ ಮೂರನೇ ಅವಧಿಗೆ ಪ್ರಧಾನಿಯಾಗಿ ಮುಂದುವರಿಯಬೇಕು ಎಂದಾದರೆ ಲೋಕಸಭೆಯ ಒಂದೊಂದು ಸ್ಥಾನವೂ ಮಹತ್ವ ಪಡೆಯುತ್ತದೆ. ಅವರ ಪಕ್ಷ ಮಧ್ಯಪ್ರದೇಶದಲ್ಲಿ ಹದಿನೈದು ವರ್ಷದಿಂದ ಆಡಳಿತ ನಡೆಸಿದೆ. ಮೂರು ಅವಧಿ ಮುಖ್ಯಮಂತ್ರಿಯಾಗಿರುವ ಶಿವರಾಜ ಸಿಂಗ್ ಚೌಹಾಣರ ಆಡಳಿತ ಜನರಲ್ಲಿ ಸಾಕಷ್ಟು ಬೇಸರ ಬರಿಸಿದೆ ಎಂಬ ಸುದ್ದಿ ಭೂಪಾಲದಿಂದ ಬರುತ್ತಿದೆ. ಅಲ್ಲಿ ಕೈಲಿರುವ ಸರ್ಕಾರವನ್ನು ಉಳಿಸಿಕೊಳ್ಳುವ ಹರಸಾಹಸ ಆ ಪಕ್ಷದ್ದಾದರೆ ಕಾಂಗ್ರೆಸ್ ಅಲ್ಲಿ ಗೆದಿಯುವ ಭರವಸೆಯಲ್ಲಿದೆ.

ಕಾಂಗ್ರೆಸ್ ಆಡಳಿತವಿರುವ ರಾಜಸ್ತಾನದಲ್ಲಿ ಅಶೋಕ್ ಗೆಹ್ಲೋಟ್ (Ashok gehlot) ಮೂರು ಅವಧಿ ಮುಖ್ಯಮಂತ್ರಿಯಾಗಿದ್ದು ಅವರು ಮುಂದುವರಿಯುವುದು ಸ್ವತಃ ಕಾಂಗ್ರೆಸ್ಸಿಗೇ ಬೇಕಾಗಿಲ್ಲ ಎಂಬ ಸುದ್ದಿ ಹರಡಿದೆ. ಸ್ವತಃ ರಾಹುಲ್ ಗಾಂಧಿಯವರೇ ರಾಜಸ್ತಾನವನ್ನು ಗೆಲ್ಲುವ ವಿಶ್ವಾಸ ಕಳೆದುಕೊಂಡಿರುವುದು ಅವರು ನಡೆಸಿರುವ ಮಾಧ್ಯಮ ಗೋಷ್ಟಿಯಲ್ಲಿ ವ್ಯಕ್ತವಾಗಿದೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಮಾತಿಗೇ ಸೊಪ್ಪು ಹಾಕದ ಗೆಹ್ಲೋಟ್, ಖರ್ಗೆಯವರ ಮಾತಿಗೆ ಎಷ್ಟು ಬೆಲೆ ಕೊಟ್ಟಾರು…? ರಾಹುಲ್ ಮತ್ತು ಪ್ರಿಯಾಂಕಾಗೆ ಸಚಿನ್ ಪೈಲಟ್‍ರನ್ನು ಸಿಎಂ ಸ್ಥಾನದಲ್ಲಿ ಕುಳ್ಳಿರಿಸುವ ಆಸೆ ಗುಟ್ಟಾಗಿ ಉಳಿದಿಲ್ಲ. ಇದು ಎಷ್ಟು ಗಂಭೀರ ಸ್ವರೂಪದ ಹಂತಕ್ಕೆ ಹೋಗಿದೆ ಎಂದರೆ ಅಶೋಕ್ ಗೆಹ್ಲೋಟ್ ಬೆಂಬಲಿತ ಅಭ್ಯರ್ಥಿಗಳ ಸೋಲಿಗೆ ಸಚಿನ್ ಬಣ ಒಳಗೊಳಗೇ ಕೆಲಸ ಮಾಡುತ್ತಿದೆ. ಅದೇ ರೀತಿ ಗೆಹ್ಲೋಟ್ ಶಿಬಿರದಲ್ಲಿರುವವರು ಸಚಿನ್ ಬೆಂಬಲಿತ ಅಭ್ಯರ್ಥಿಗಳ ಪರಾಭವಕ್ಕೆ ಪಣ ತೊಟ್ಟಿದ್ದಾರೆ. ಇಬ್ಬರ ಜಗಳದಲ್ಲಿ ಒಂದಿಷ್ಟು ಲಾಭ ಹೊಡೆಯಲು ಸಾಧ್ಯವೇ ಎಂಬ ಯೋಚನೆಯಲ್ಲಿ ಬಿಜೆಪಿ ಕಸರತ್ತು ನಡೆಸಿದೆ.

ಕರ್ನಾಟಕದ ವಿಧಾನ ಸಭೆಗೆ 2013ರಲ್ಲಿ ನಡೆದ ಚುನಾವಣೆ ಇಲ್ಲಿ ನೆನಪಿಗೆ ಬರುತ್ತದೆ. ಆಗ ಡಾ.ಜಿ.ಪರಮೇಶ್ವರ ಕೆಪಿಸಿಸಿ ಅಧ್ಯಕ್ಷರು. ಆಡಳಿತ ಪಕ್ಷ ಬಿಜೆಪಿ ಸೋಲುತ್ತದೆ; ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂಬ ವಾತಾವರಣ ಸೃಷ್ಟಿಯಾಗಿತ್ತು. ಆಗ ನಡೆದ ರಾಜಕೀಯ ತಂತ್ರಗಾರಿಕೆಯಲ್ಲಿ ಪರಮೇಶ್ವರ ಅವರನ್ನು ಕೊರಟಗೆರೆ ಕ್ಷೇತ್ರದಲ್ಲಿ ಸೋಲಿಸಲಯಿತು. ಈ ಸೋಲಿನ ತಂತ್ರಕ್ಕೆ ಕಾಂಗ್ರೆಸ್‍ನ ಕೆಲವರೇ ಶಾಮೀಲಾದರೆ ಮುಖ್ಯ ಆರೋಪ ದಲಿತ ಸಂಘಟನೆಗಳು ಮಾಡಿದಂತೆ ಸಿದ್ದರಾಮಯ್ಯ ಹಣೆಗೆ ಮೆತ್ತಿಕೊಂಡಿತು. ರಾಜ್ಯದಲ್ಲಿ ದಲಿತ ನಾಯಕರೊಬ್ಬರು ಸಿಎಂ ಆಗುವ ಅವಕಾಶವನ್ನು ಕರ್ನಾಟಕದಲ್ಲಿ ಎರಡನೇ ಬಾರಿಗೆ ಈ ಮೂಲಕ ತಪ್ಪಿಸಲಾಯಿತು. (ಮಲ್ಲಿಕರ್ಜುನ ಖರ್ಗೆ ಮೊದಲ ಅವಕಾಶ ವಂಚಿತರು). ಈಗ ರಾಜಸ್ತಾನದಲ್ಲಿ ಅವರ ಕಾಲನ್ನು ಇವರು ಎಳೆಯುವ, ಇವರ ಕಾಲನ್ನು ಅವರು ಎಳೆಯುವ ಆಟ ನಡೆದಿದೆ.

ಚತ್ತೀಸ್‍ಘಡದಲ್ಲಿ ಭೂಪೇಶ್ ಭಗೇಲ್ ಕಾಂಗ್ರೆಸ್ ಮುಖ್ಯಮಂತ್ರಿ ಮತ್ತು ಅವರು ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವ ಸಾಧ್ಯತೆ ಬಹಳವಿದೆ ಎನ್ನಲಾಗುತ್ತಿದೆ.ಬಹಳ ವರ್ಷ ಕಾಲ ರಾಜ್ಯ ರಾಜಕೀಯದಿಂದ ತಾನೇ ದೂರವಿಟ್ಟಿದ್ದ ರಮಣ್ ಸಿಂಗ್ ಅವರನ್ನು ಬಿಜೆಪಿ ಚುನಾವಣಾ ರಣಕಣಕ್ಕೆ ಕರೆತಂದಿದೆ. ಇನ್ನೇನು ಚುನಾವಣೆ ಹತ್ತಿರ ಬಂತೆನ್ನುವಾಗ ಬಿಜೆಪಿ ವರಿಷ್ಟ ಮಂಡಳಿ ತೆಗೆದುಕೊಂಡಿರುವ ಈ ಕ್ರಮ ಯಾವ ಬಗೆಯ ಲಾಟರಿಯನ್ನು ವಿಶ್ವದ ಅತ್ಯಂತ ದೊಡ್ಡ ಮತ್ತು ಬಲಿಷ್ಟ ಪಕ್ಷಕ್ಕೆ ಉಡುಗೊರೆಯಾಗಿ ಕೊಡಲಿದೆಯೋ ಯಾರು ಬಲ್ಲ. ಮಧ್ಯ ಪ್ರದೇಶ ಬಿಜೆಪಿ ಕೈತಪ್ಪಿದರೆ, ರಾಜಸ್ತಾನ, ಚತ್ತೀಸ್‍ಘಡ ಕಾಂಗ್ರೆಸ್ ಕೈತಪ್ಪಿದರೆ ಎರಡೂ ಪ್ರಮುಖ ಪಕ್ಷಗಳಿಗೆ ಲಕ್ಷಲಕ್ಷ ವೋಲ್ಟೇಜ್ ಶಾಕ್ ಖಚಿತ. ಮಿಜೋರಾಮ್‍ದಲ್ಲಿ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿ ಗೆಲ್ಲಿಸಿಕೊಂಡು ಬರುವ ಭರವಸೆ ಕಾಂಗ್ರೆಸ್ಸಿಗೂ ಇಲ್ಲ ಬಿಜೆಪಿಗೂ ಇಲ್ಲ. ಆ ರಾಜ್ಯದಿಂದ ಬರುವ ಲೋಕಸಭೆಯ ಒಂದು ಸೀಟು ಪಾರ್ಲಿಮೆಂಟ್‍ನಲ್ಲಿ ಯಾರತ್ತ ವಾಲಲಿದೆಯೋ ಗೊತ್ತಿಲ್ಲ.

ಇದನ್ನೂ ಓದಿ: ಮೊಗಸಾಲೆ ಅಂಕಣ: ಕಾಂಗ್ರೆಸ್‌ ಒಗ್ಗಟ್ಟು ಧೂಳಿಪಟ, ಹೈಕಮಾಂಡ್‌ ಗಾಳಿಪಟ

ತೆಲಂಗಾಣಾ ಬಹಳ ನಿರೀಕ್ಷೆ ಕೆರಳಿಸಿರುವ ದಕ್ಷಿಣದ ರಾಜ್ಯ. ರಾಜ್ಯ ಅಸ್ತಿತ್ವಕ್ಕೆ ಬಂದ ಹತ್ತು ವರ್ಷದಿಂದಲೂ ಸಾರ್ವಭೌಮ ಸಿಎಂ ಆಗಿರುವ ಕೆ.ಚಂದ್ರಶೇಖರ ರಾವ್ (K Chandrashekhar rao), ಮೂರನೇ ಬಾರಿ ಆಡಳಿತ ಸೂತ್ರ ಹಿಡಿಯುವ ಧಾವಂತದಲ್ಲಿದ್ದಾರೆ. ಐದು ವರ್ಷದ ಹಿಂದೆ ನಡೆದ ಚುನಾವಣೆಯಲ್ಲಿ 119 ಸ್ಥಾನದ ಪೈಕಿ 90 ಸ್ಥಾನ ಗೆದ್ದ ಕಾಂಗ್ರೆಸ್, ಬಿಜೆಪಿ ಮತ್ತಿತರ ಪಕ್ಷಗಳನ್ನು ಕಸದ ಬುಟ್ಟಿಗೆ ಹಾಕಿದ್ದ ರಾವ್ ಈ ಚುನವಣೆಯಲ್ಲೂ ಅದೇ ಗೆಲುವನ್ನು ಮರಳಿ ಕೈವಶ ಮಾಡಿಕೊಳ್ಳುವ ವಿಶ್ವಾಸದಲ್ಲಿದ್ದಾರೆ. ಆದರೆ ಅವರ ಗೆಲುವಿನ ಓಟಕ್ಕೆ ಕಾಂಗ್ರೆಸ್ ಅಡ್ಡಗಾಲು ಹಾಕಿರುವಂತಿದೆ. ಇದಕ್ಕೆ ಕಾರಣ ಕರ್ನಾಟಕದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (DK Shivakumar). ಅರ್ಥಪೂರ್ಣ ರೀತಿಯಲ್ಲಿ ರಾಜಕೀಯ ತಂತ್ರಗಾರಿಕೆಯನ್ನು ಮೆರೆಯುವ, ಸಂಘಟನಾ ಸಾಮರ್ಥ್ಯದಲ್ಲಿ ಮೇಲುಗೈ ಎನಿಸಿರುವ ಡಿಕೆಶಿಯವರಿಗೆ ರಾಜ್ಯದ ಚುನಾವಣಾ ಮೇಲುಸ್ತುವಾರಿಯನ್ನು ಕಾಂಗ್ರೆಸ್ ಹೈಕಮಾಂಡ್ ಒಪ್ಪಿಸಿದೆ. ತಮ್ಮಲ್ಲಿ ಲಭ್ಯವಿರುವ ಬಗೆಬಗೆಯ ಸಂಪನ್ಮೂಲ ಹೂಡಿ ದೊಡ್ಡ ಪ್ರಮಾಣದ ಡಿವಿಡೆಂಡ್ ಪಡೆಯುವುದಕ್ಕೆ ಹೆಸರಾಗಿರುವ ಡಿಕೆಶಿ, ತೆಲಂಗಾಣಾದಲ್ಲಿ ಮಣ್ಣು ಮುಕ್ಕಿರುವ ಕಾಂಗ್ರೆಸ್‍ಗೆ ಒಂದು ಚೇತರಿಕೆ ಕೊಡಲಿದ್ದಾರೆಂಬ ವಿಶ್ವಾಸ ಆ ಪಕ್ಷದಲ್ಲಿದೆ.

ಆಂಧ್ರ ಪ್ರದೇಶವನ್ನು ಕತ್ತರಿಸಿ ಪ್ರತ್ಯೇಕ ತೆಲಂಗಾಣಾ ರಾಜ್ಯ ರಚನೆಯಾಗಬೇಕೆಂದು ನಡೆದ ದೊಡ್ಡ ಹೋರಾಟದಲ್ಲಿ ಚಂದ್ರಶೇಖರರಾವ್ ಪಾಲ್ಗೊಂಡು ಅಂದಿನ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ (Sonia gandhi) ಗಮನ ಸೆಳೆದಿದ್ದರು. ಆಂಧ್ರ ಪ್ರವಾಸದ ಸಮಯದಲ್ಲಿ ಪ್ರತ್ಯೇಕ ರಾಜ್ಯ ರಚನೆಯ ಭರವಸೆಯನ್ನು ನೀಡಿ ಅವರು ದೆಹಲಿಗೆ ಮರಳಿದರು. ಆಗ ಮನ ಮೋಹನ್ ಸಿಂಗ್ ಸರ್ಕಾರದಲ್ಲಿ ರಾವ್ ಸಚಿವರು. ತೆಲಂಗಾಣಾ ರಾಜ್ಯ ಸ್ಥಾಪನೆಯ ಅಧಿಕೃತ ಆದೇಶ ಹೊರ ಬೀಳುತ್ತಿದ್ದಂತೆಯೇ ಸಚಿವ ಪದವಿಗೆ ರಾವ್ ರಾಜೀನಾಮೆ ಕೊಟ್ಟು ಹೊರಬಿದ್ದರು. ಯುಪಿಎ ಜತೆಗಿನ ಸಂಬಂಧಕ್ಕೆ ಕತ್ತರಿ ಪ್ರಯೋಗ ಮಾಡಿದರು. ನಂತರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ಸನ್ನು ಹೇಳಹೆಸರಿಲ್ಲದಂತೆ ಮಾಡಿ ಹತ್ತು ವರ್ಷದಿಂದ ಸಾರ್ವಭೌಮ ಸಿಎಂ ಆಗಿರುವ ಅವರನ್ನು ಶತಾಯಗತಾಯ ಸೋಲಿಸಿ ಕಾಂಗ್ರೆಸ್ಸನ್ನು ಅಧಿಕಾರಕ್ಕೆ ತರಬೇಕು ಎನ್ನುವುದು ಆ ಪಕ್ಷದ ಒಡಲಾಳದ ಆಸೆ. ಪಕ್ಷದ ಕನಸು ನನಸಾಗುವಂತೆ ಮಾಡಿದರೆ ದೀಪಾವಳಿ ಮುನ್ನಾ ದಿನಗಳಲ್ಲಿ ಸ್ಟಾಕ್ ಎಕ್ಸ್‌ಚೇಂಜಿನಲ್ಲಿ ಷೇರು ಮೌಲ್ಯ ಜಿಗಿಯುವಂತೆ ಪಕ್ಷದಲ್ಲಿ ಡಿಕೆಶಿ ಸ್ಥಾನಮಾನ ಮಣೆ ಮನ್ನಣೆ ಮುಂತಾದವು ಇನ್ನಷ್ಟು ಹೆಚ್ಚಲಿದೆ. ಹೈಕಮಾಂಡ್‍ಗೆ ಈ ಕಾರಣಕ್ಕೆ ಡಿಕೆಶಿ ಇನ್ನಷ್ಟು ಹತ್ತಿರವಾಗುವುದು ಸಿದ್ದರಾಮಯ್ಯ ಬಣಕ್ಕೆ ಕಸಿವಿಸಿಯ ಸಂಗತಿಯೇ ಹೌದಾದರೂ ಅದಕ್ಕೆ ತಕ್ಷಣದ ಮದ್ದರೆಯುವ ತಂತ್ರ ಎದುರು ಪಾಳಯದಲ್ಲಿ ನಡೆಯುತ್ತದೆ. ಅನುಮಾನ ಬೇಡವೇ ಬೇಡ.

ಇದನ್ನೂ ಓದಿ: ಮೊಗಸಾಲೆ ಅಂಕಣ: ಕಾಂಗ್ರೆಸ್‌ ಈಗ ಬಣ ರಾಜಕೀಯದ ಕಣ

Exit mobile version