Site icon Vistara News

ಮೊಗಸಾಲೆ ಅಂಕಣ: ಶಾಸಕರ ಸಿಟ್ಟಿನ ನಡುವೆ ಸಬೂಬುಗಳ ತಲಾಶೆ

siddaramaiah govt

ಭರ್ಜರಿ ಎಂದು ಯಾವ ಸಂಕೋಚವೂ ಇಲ್ಲದೆ ಹೇಳಬಹುದಾದ ಬಹುಮತದೊಂದಿಗೆ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್‍ನ (congress karnataka) ನಾಯಕತ್ವಕ್ಕೆ ಪಕ್ಷದಲ್ಲೇ ಹೆಡೆ ಎತ್ತಿರುವ ಒಳ ಸವಾಲು ದಿನದಿಂದ ದಿನಕ್ಕೆ ಗಂಭೀರವಾಗುತ್ತಿದೆ. ರಾಜ್ಯಕ್ಕಾಗಲೀ ಆಡಳಿತ ಪಕ್ಷಕ್ಕಾಗಲೀ ಬೇಡವಾಗಿರುವ ಮತ್ತು ಜನರ ದೃಷ್ಟಿಯಿಂದ ಅಹಿತಕರವೆನಿಸಿರುವ ಬೆಳವಣಿಗೆ ಇದು. ಸಂಖ್ಯಾಬಲವೆಂಬ ನಿಚ್ಚಳ ಬಹುಮತವಿರದ ಆಡಳಿತದಲ್ಲಿ ಸೂತ್ರ ಹಿಡಿದವರ ಮೇಲೆ ಬಗೆಬಗೆಯ ಒತ್ತಡ ಸಹಜ. ಮುಖ್ಯಮಂತ್ರಿಯನ್ನು ತಮ್ಮ ತಾಳಕ್ಕೆ ತಕ್ಕಂತೆ ಕುಣಿಸುವವರ ದಂಡೇ ಅಲ್ಲಿ ಇರುತ್ತದೆ. ಅಂಥವರು ಹಾಕುವ ತಾಳಕ್ಕೆ ಸಿಎಂ ಆದವರು ಕುಣಿಕುಣಿದು ಮಾನಗೆಟ್ಟಿದ್ದನ್ನು ಕರ್ನಾಟಕ ಕಂಡಿದೆ. ಈ ಒತ್ತಡ ತಂತ್ರ ಬ್ಲ್ಯಾಕ್‍ಮೇಲ್ ಹಂತಕ್ಕೆ ಹೋದ ನಿದರ್ಶನಗಳೂ ಇವೆ. ಹಲಬಗೆಯ ಹಗ್ಗ ಜಗ್ಗಾಟದಲ್ಲಿ ಸಿಲುಕಿರುವ ಆದರೆ ಬಲಶಾಲಿ ನಾಯಕರಾಗಿ ಬಿಂಬಿತರಾಗಿ ಸಿಎಂ ಪಟ್ಟದಲ್ಲಿ ಕುಳಿತಿರುವ ಸಿದ್ದರಾಮಯ್ಯ (CM siddaramaiah) , “ಕೆಲವಂ ಬಲ್ಲವರಿಂದ ಕಲಿತು…” ಎಂಬ ನೀತಿಯನ್ನು ತಮ್ಮ ಆಡಳಿತದಲ್ಲಿ ಅನುಸರಿಸಲು ನಿರಾಕರಿಸಿದರೆ ಭವಿಷ್ಯದ ದಿನಗಳಲ್ಲಿ ಅವರು ಕೂಡಾ ಹತ್ತರಲ್ಲಿ ಒಬ್ಬರಾಗಿಬಿಡುವ ಅಪಾಯವಿದೆ.

ಚುನಾವಣಾ ಪೂರ್ವ (assembly election) ಮತದಾರರಿಗಿತ್ತ ಪ್ರಣಾಳಿಕೆಯಲ್ಲಿ ನೀಡಿದ ಐದು ಭರವಸೆಗಳಲ್ಲಿ ನಾಲ್ಕನ್ನು ಕಾಂಗ್ರೆಸ್ ಆಡಳಿತ ಸುಗಮವಾಗಿ ಜಾರಿಗೆ ತಂದಿದೆ. ಐದನೆಯದು ಇಷ್ಟರಲ್ಲೇ ಜಾರಿಗೆ ಬರಬಹುದು; ಇನ್ನಷ್ಟು ವಿಳಂಬವೂ ಆಗಬಹುದು. ನಿರುದ್ಯೋಗಿ ಪದವೀಧರರು ಮತ್ತು ಡಿಪ್ಲೊಮಾದಾರರಿಗೆ ತಿಂಗಳು ತಿಂಗಳೂ ನೀಡುವುದಾಗಿ ಕೊಟ್ಟಿರುವ ನಿರುದ್ಯೋಗ ಭತ್ಯೆ ಭರವಸೆಯ ಅನುಷ್ಟಾನ ಅಷ್ಟೆಲ್ಲ ಸುಗಮವಲ್ಲ ಎನ್ನುವುದು ವಿಳಂಬಕ್ಕೆ ಕಾಣುತ್ತಿರುವ ಕಾರಣ. ಅದೇನೇ ಇದ್ದರೂ ಆಡಳಿತ ಪಕ್ಷದ ವರ್ಚಸ್ಸನ್ನು ಭರವಸೆಗಳ ಜಾರಿ ಹೆಚ್ಚಿಸಿದೆ ಎನ್ನುವುದು ಸುಳ್ಳಲ್ಲ. ಈ ವರ್ಚಸ್ಸನ್ನು ಲೋಕಸಭೆ ಚುನಾವಣೆವರೆಗೂ ಯಥಾವತ್ ಕಾಯ್ದುಕೊಂಡು ಎಳೆದೊಯ್ಯುವ ಹೊಣೆ ಆಡಳಿತ ಪಕ್ಷದ ಮೇಲೂ ಇದೆ; ಮುಖ್ಯಮಂತ್ರಿಯ ಮೇಲೂ ಇದೆ.

ಸುಭದ್ರ ಸರ್ಕಾರಕ್ಕೆ ನಿಚ್ಚಳ ಬಹುಮತ ಅಗತ್ಯವೆಂದು ಇಂದಿರಾ ಗಾಂಧಿಯವರು (indira gandhi) ಆಗಾಗ ಹೇಳುತ್ತಿದ್ದರು. ಆ ಮಾತು ಎಲ್ಲ ಕಾಲಕ್ಕೂ ಸತ್ಯವಲ್ಲ ಎನ್ನುವುದಕ್ಕೆ ಕರ್ನಾಟಕದಲ್ಲಿ ಉದಾಹರಣೆಯಾಗಿ ಹಾಲಿ ಸಿದ್ದರಾಮಯ್ಯ ಸರ್ಕಾರವಿದೆ. 1989ರಲ್ಲಿ ವೀರೇಂದ್ರ ಪಾಟೀಲರು ಎರಡನೇ ಬಾರಿಗೆ ಸಿಎಂ ಆದಾಗ ಶಾಸನ ಸಭೆಯಲ್ಲಿ ಕಾಂಗ್ರೆಸ್ಸು 178 ಶಾಸಕರನ್ನು ಹೊಂದಿತ್ತು. ಭರ್ಜರಿ ಬಹುಮತದಲ್ಲಿ ಐದು ವರ್ಷ ಸುಭದ್ರ ಸರ್ಕಾರ ಇರಬೇಕಿತ್ತು. ಆದರೆ ಆಗಿದ್ದು ಚಿಂದಿ ಚಿತ್ರಾನ್ನ. ಪಾಟೀಲರನ್ನು ಕಿತ್ತು ಹಾಕಿ ಎಸ್. ಬಂಗಾರಪ್ಪನವರನ್ನು ತರಲಾಯಿತು. ಅವರಿಗೆ ಕೊಕ್ ಕೊಟ್ಟು ವೀರಪ್ಪ ಮೊಯಿಲಿಯವರನ್ನು ಪಟ್ಟಕ್ಕೇರಿಸಲಾಯಿತು. ಈಗ 135 ಕಾಂಗ್ರೆಸ್ ಶಾಸಕರೇ ಅಲ್ಲದೆ ಮೂವರು ಪಕ್ಷೇತರ ಶಾಸಕರ ಬೆಂಬಲ ಸಹಿತ 138 ಶಾಸಕ ಸೇನೆ ಹೊಂದಿರುವ ದಂಡನಾಯಕ ಸಿದ್ದರಾಮಯ್ಯ, ಬಯಸಿ ಬಯಸಿ ಎರಡನೇ ಬಾರಿಗೆ ಮುಖ್ಯಮಂತ್ರಿಯಾದರೂ ಏಗುವುದು ಸಲೀಸಲ್ಲ ಎನಿಸುತ್ತಿದೆ.

ಅಧಿಕಾರಕ್ಕೆ ಬಂದ ನಾಲ್ಕು ತಿಂಗಳಲ್ಲಿಯೇ ಸರ್ಕಾರ ಮುಗ್ಗರಿಸುವ ಹಲವು ಸೂಚನೆಗಳು ಕಾಣಿಸಲಾರಂಭವಾಗಿದೆ. ಇದರಿಂದ ಮೂರೋ ಆರೋ ತಿಂಗಳಲ್ಲಿ ಸರ್ಕಾರ ಉರುಳಿ ಬೀಳುತ್ತದೆ ಎಂದಲ್ಲ. ವಿರೋಧ ಪಕ್ಷದವರು ಅದನ್ನು ನಿರೀಕ್ಷಿಸಬಹುದು. ವಾಸ್ತವ ಅದಲ್ಲ. ಆದರೆ ಸಂಕಷ್ಟ ಪರಿಹಾರಕ್ಕೆ ಸೂತ್ರವೊಂದು ಸಿದ್ಧವಾಗದಿದ್ದರೆ ಕಷ್ಟದ ದಿನ ಬರುವುದು ಖಚಿತ. ಮುಖ್ಯಮಂತ್ರಿ ಯಾರಾಗಬೇಕು ಎಂಬಲ್ಲಿಂದ ಶುರುವಾದ ಆಡಳಿತ ಪಕ್ಷದ ಒಳಜಗಳ ಹಾದಿಬೀದಿ ರಂಪವಾಗಿದ್ದು ಎಲ್ಲ ಬಲ್ಲ ಬೆಳವಣಿಗೆ. ಜಿದ್ದಾಜಿದ್ದಿ ಎಂಬಂತೆ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನಡುವೆ ನಡೆದ ಗುದಮುರಗಿ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಸಂದೇಶ ರವಾನಿಸಿತಷ್ಟೇ ಅಲ್ಲ, ಕಾಂಗ್ರೆಸ್ಸು ಮತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷಗಳಲ್ಲಿ ಬಣವೆರಡಾಗಿ ಮಾರಾಮಾರಿಗೆ ಸಿದ್ಧವಾಗಿರುವುದರ ಸೂಚನೆಯೂ ರವಾನೆಯಾಗಿದೆ.

ಆಡಳಿತ ಪಕ್ಷದ ಕೆಲವು ಶಾಸಕರು ಒಂದಿಷ್ಟು ಅಸಮಾಧಾನವನ್ನು ಬಹಿರಂಗದಲ್ಲಿ ಹೇಳಿಕೊಂಡಿದ್ದಾರೆ. ಕುದಿ ಎಸರಿನಂತೆ ಅವರಲ್ಲಿ ಕೊತಗುಟ್ಟುತ್ತಿರುವ ಅಂತರಂಗ ಸತ್ಯವನ್ನು ಸಮಾನಮನಸ್ಕರೊಂದಿಗೆ ಹಂಚಿಕೊಂಡು ದುಃಖವನ್ನು ವಿನಿಮಯ ಮಾಡಿಕೊಂಡಿದ್ದಾರೆ. ತಂತಮ್ಮ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕೆಲಸವನ್ನು ಮಾಡಿಸಿದಂತೆ ತೋರಿಸಿಕೊಳ್ಳಲಾಗದ ಶಾಸಕರು ಜನಾಕ್ರೋಶ ಎದುರಿಸಬೇಕಾಗಿದೆ. ಅಸಹಾಯಕತೆಯಲ್ಲಿ ಕೈಚೆಲ್ಲುವ ಶಾಸಕರನ್ನು ನೀವಿದ್ದೇನು ಪ್ರಯೋಜನ ಎಂದು ಕೇಳುವಷ್ಟು ಗಟ್ಟಿ ಧ್ವನಿ ಈಗ ಮತದಾರರಿಗೆ ಬಂದಿದೆ. ಐದು ಭರವಸೆ ಜಾರಿಗೆ ಹಣವನ್ನು ಹೊಂದಿಸಬೇಕಿರುವ ಕಾರಣ, ಈ ವರ್ಷ ಅಭಿವೃದ್ಧಿ ಯೋಜನೆಗಳಿಗೆ ಹಣವಿಲ್ಲ ಎಂಬ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಹೇಳಿಕೆ ಆಡಳಿತ ಪಕ್ಷದ ಶಾಸಕರನ್ನು ಅಕ್ಷರಶಃ ಅಡಕೊತ್ತಿಗೆಯಲ್ಲಿ ಸಿಲುಕಿಸಿದೆ, ಜನರ ಮುಂದೆ ಧೈರ್ಯವಾಗಿ ಮುಖ ತೋರಿಸಲಾಗದಂತೆ ಮಾಡಿದೆ.

ವಿರೋಧ ಪಕ್ಷದ ಶಾಸಕರಿಗೆ ಇದು ಸಮಸ್ಯೆಯಲ್ಲ. ಕಾಂಗ್ರೆಸ್ ಸರ್ಕಾರವಿದೆ, ವಿರೋಧ ಪಕ್ಷದ ಶಾಸಕರ ಕ್ಷೇತ್ರಕ್ಕೆ ಹಣ ಬಿಡುಗಡೆ ಮಾಡುತ್ತಿಲ್ಲ ಎಂದು ದೂರಿ ಸರ್ಕಾರದ ಮೇಲೆ ದೋಷಾರೋಪ ಹೊರಿಸಿ ಪಾರಾಗಬಹುದು. ಜನ ಅದನ್ನು ನಂಬುತ್ತಾರೆ ಕೂಡಾ. ಆಡಳಿತ ಪಕ್ಷದ ಶಾಸಕರು ತಮ್ಮ ಸಮಸ್ಯೆಗೆ ಯಾರನ್ನು ದೂರಬೇಕು ಇದು ಅವರ ಚಿಂತೆ ಹೆಚ್ಚಿಸಿದೆ. ಇಷ್ಟರಲ್ಲೇ ತಾಲ್ಲೂಕು ಪಂಚಾಯತು, ಜಿಲ್ಲಾ ಪಂಚಾಯತು ಮತ್ತು ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಯಲಿದೆ. ಅದಾಗುತ್ತಿದ್ದಂತೆಯೇ ಲೋಕಸಭೆ ಚುನಾವಣೆ ಎಂಬ ಪೆಡಂಭೂತ ಎದುರಾಗಲಿದೆ. ಮತದಾರರ ಮುಂದೆ ಹೋಗಿ ಮತ ಕೇಳಬೇಕಿರುವ ಆಡಳಿತ ಪಕ್ಷದ ಶಾಸಕರು ಅಭಿವೃದ್ಧಿ ಕಾರ್ಯಗಳ ಸ್ಥಗಿತಕ್ಕೆ ಏನೆಂದು ಸಬೂಬು ಕೊಡಬೇಕು… ಇದು ಅವರೆಲ್ಲರ ಚಿಂತೆ ಹೆಚ್ಚಿಸಿರುವ ಸಂಗತಿ.

ಇದನ್ನೂ ಓದಿ: ಮೊಗಸಾಲೆ ಅಂಕಣ: ಚುನಾವಣೆಯ ಬಿರುಗಾಳಿಯಲ್ಲಿ ರಾಜಕೀಯದ ಗಿರಿಗಿಟ್ಟಿ

ಮೂವತ್ತೈದು ವರ್ಷದ ಹಿಂದೆ 1984ರಲ್ಲಿ ನಡೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕರ್ನಾಟಕದಲ್ಲಿ ರಾಮಕೃಷ್ಣ ಹೆಗಡೆ ನೇತೃತ್ವದ ಜನತಾ ಪಕ್ಷದ ಸರ್ಕಾರವಿತ್ತು. ಅಧಿಕಾರ ಕಳೆದುಕೊಂಡಿದ್ದ ಕಾಂಗ್ರೆಸ್ ಒಂದು ಬಗೆಯ ಅಳುಕಿನಲ್ಲೇ ಲೋಕಸಭೆ ಚುನಾವಣೆಗೆ ಇಳಿದಿತ್ತು. ಆದರೆ ಆಗ ಕಾಂಗ್ರೆಸ್ ಗೆದ್ದುದು 28ರಲ್ಲಿ 24 ಸೀಟುಗಳನ್ನು. ಅದರ ಮತಗಳಿಕೆ ಶೇ.51.5 ಆಗಿತ್ತು. 2019ರ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ಕರ್ನಾಟಕದಲ್ಲಿ ಶೇ.53ಕ್ಕಿಂತ ಹೆಚ್ಚಿನ ಮತ ಪಡೆದು 25 ಸೀಟನ್ನು ತೆಕ್ಕೆಗೆ ಹಾಕಿ ಕೊಂಡಿದೆ. ಈ ಬಗೆಯ ಹಾವು ಏಣಿ ಆಟ ಚುನಾವಣೆಯಲ್ಲಿ ಸಾಮಾನ್ಯ. ಬರಲಿರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೇ ಮತ ಹಾಕಬೇಕೆಂದು ಜನ ತೀರ್ಮಾನಿಸಿದರೆ ಅದಕ್ಕೆ ಐದು ಭರವಸೆ ಕಾರಣವಾಗಲಿದೆ. ಹಾಕಬಾರದು ಎಂದು ಮತದಾರರು ತೀರ್ಮಾನಿಸಿದರೆ ಅದಕ್ಕೆ ಕಾರಣ ನಿಸ್ಸಂಶಯವಾಗಿ ಅಭಿವೃದ್ಧಿ ಕಾರ್ಯಗಳು ನೆನೆಗುದಿಗೆ ಬಿದ್ದಿರುವುದು. ಈ ನೋವು ತಳಮಟ್ಟದಲ್ಲಿ ಕಾರ್ಯಕರ್ತರೊಂದಿಗೆ ಜನಸಾಮಾನ್ಯರೊಂದಿಗೆ ಬೆರೆಯುವ ಶಾಸಕರಿಗೆ ಗೊತ್ತಿದೆ. ವಿಧಾನ ಸೌಧದ ಮೂರನೇ ಮಹಡಿಯಲ್ಲಿ ಕುಳಿತು ಮಾಧ್ಯಮ ಗೋಷ್ಟಿ ನಡೆಸುವುದಕ್ಕೂ ಹಳ್ಳಿ ಹಳ್ಳಿಗಳಲ್ಲಿ ಜನರೊಂದಿಗೆ ಮುಖಾಮುಖಿ ಆಗುವುದಕ್ಕೂ ಇರುವ ವ್ಯತ್ಯಾಸ ತಲೆನೋವಿನ ಮೂಲ ಎನ್ನುವುದು ಆಡಳಿತ ಪಕ್ಷದ ಶಾಸಕರಿಗೆ ಮೊದಲ ನಾಲ್ಕು ತಿಂಗಳಲ್ಲಿಯೇ ಮನವರಿಕೆಯಾಗಿದೆ.

ಮೂರು ಸಾವಿರ ಜನಸಂಖ್ಯೆಯುಳ್ಳ ಪ್ರತಿ ಗ್ರಾಮ ಪಂಚಾಯತಿಗೆ ಒಂದರಂತೆ ಹೆಂಡದಂಗಡಿ ತೆರೆಯುವ ಅಬಕಾರಿ ಇಲಾಖೆ ಪ್ರಸ್ತಾವ ಸರ್ಕಾರವನ್ನು ತೀರಾ ಮುಜುಗರಕ್ಕೆ ಈಡು ಮಾಡಿದೆ. ಇದರಿಂದ ಅಭಿವೃದ್ಧಿ ಕಾರ್ಯಕ್ಕೆ ಸಂಪನ್ಮೂಲ ಸಂಗ್ರಹವಾಗುತ್ತದೆಂಬ ಇಲಾಖೆ ನಿಲುವನ್ನು ಆಳಂದ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ.ಆರ್.ಪಾಟೀಲರು “ಸರ್ಕಾರ ನಡೆಸುವುದಕ್ಕೆ ಪಾಪದ ಹಣ ಬೇಕೇ” ಎಂದು ಖಾರವಾಗಿ ಪ್ರಶ್ನಿಸಿದ್ದಾರೆ. ಅಭಿವೃದ್ಧಿ ಯೋಜನೆಗಳಿಗ ಹಣವಿಲ್ಲ ಎಂಬ ಮಾತಿಗೆ ಆಡಳಿತ ಪಕ್ಷದ ಐದಾರು ಶಾಸಕರು ಬಹಿರಂಗವಾಗೇ ಪ್ರತಿರೋಧ ವ್ಯಕ್ತಪಡಿಸಿದ್ದಾರೆ. ಕೆಲವು ಹಳ್ಳಿಗಳಲ್ಲಿ ಉದ್ದೇಶಿತ ಹೆಂಡದಂಗಡಿ ವಿರುದ್ಧ ಮಹಿಳೆಯರು ಬೀದಿಗೆ ಇಳಿದ ಸುದ್ದಿ ತಿಳಿದ ಸಿದ್ದರಾಮಯ್ಯ “ಅದು ಕೇವಲ ಚಿಂತನೆ ಹಂತದ ಮಾತು, ಹೆಂಡದಂಗಡಿಗಳನ್ನು ತೆರೆಯಲು ಅನುಮತಿ ನೀಡೋಲ್ಲ” ಎಂದಿದ್ದಾರೆ. ಆದರೆ ಅವರ ಉಪಮುಖ್ಯಮಂತ್ರಿ ಡಿಕೆಶಿಯವರು, ನಿರುದ್ಯೋಗ ನಿವಾರಣೆ ದೃಷ್ಟಿಯಿಂದ ಹೆಂಡದಂಗಡಿಗಳನ್ನು ಶುರು ಮಾಡುವ ಯೋಚನೆ ಇದೆ ಎಂದಿದ್ದಾರೆ. ಎತ್ತು ಏರಿಗೆ ಎಮ್ಮೆ ನೀರಿಗೆ! ಸಾವಿರ ಅಂಗಡಿಗಳನ್ನು ತೆರೆದರೆ ಎಷ್ಟು ಸಾವಿರ ಮಂದಿಗೆ ಉದ್ಯೋಗ ಸಿಕ್ಕೀತು ಎನ್ನುವುದನ್ನು ಡಿಸಿಎಂ ಹೇಳಿಲ್ಲ, ಹೇಳುವುದಕ್ಕೆ ಬೇಕಾದ ಅಂಕಿಅಂಶವೂ ಅವರಲ್ಲಿಲ್ಲ.

ಮೂವತ್ತು ವರ್ಷದಿಂದ ಮದ್ಯ ಮರಾಟದ ಹೊಸ ಅಂಗಡಿಗಳಿಗೆ ಪರ್ಮಿಟ್ ನೀಡಿಲ್ಲ ಎಂದು ಡಿಕೆಶಿ ಸಬೂಬು ಕೊಟ್ಟಿದ್ದಾರೆ. ಕಳೆದ 75 ವರ್ಷಗಳಿಂದ ನೂರಾರು ಹಳ್ಳಿಗಳಲ್ಲಿ ಕುಡಿಯುವ ಶುದ್ಧ ನೀರಿಗೇ ಗತಿ ಇಲ್ಲ. ಸರ್ಕಾರದ ಆದ್ಯತೆ ಯಾವುದು..? ಹೆಂಡದಂಗಡಿಗಳನ್ನು ತೆರೆಯುವುದೋ, ಕುಡಿಯುವ ನೀರನ್ನು ಪೂರೈಸುವುದೋ…?

ಇದನ್ನೂ ಓದಿ: ಮೊಗಸಾಲೆ ಅಂಕಣ: ಬರಗಾಲ ಇದ್ದರೂ ಸಚಿವರ ದರಬಾರಿಗೆ ಕೊನೆಯೇ ಇಲ್ಲ!

Exit mobile version