Site icon Vistara News

ಮೊಗಸಾಲೆ ಅಂಕಣ | ಗುಜರಾತ್ ಚುನಾವಣೆ: ಯಾರು ಹಿತವರು ಈ ಮೂವರೊಳಗೆ!?

gujarat election

ಗುಜರಾತ್ ವಿಧಾನ ಸಭೆ ಚುನಾವಣೆ ಪ್ರಕ್ರಿಯೆ ಮುಂದಿನ ತಿಂಗಳ ಈ ಹೊತ್ತಿಗೆ ಮುಕ್ತಾಯಗೊಂಡು ಫಲಿತಾಂಶ ಹೊರಬಿದ್ದು ಹೊಸ ಸರ್ಕಾರದ ರಚನೆಯೂ ಆಗಿರುತ್ತದೆ. ಎರಡೂವರೆ ದಶಕಕ್ಕೂ ಹೆಚ್ಚು ಅವಧಿಯಿಂದ ತನ್ನ ಮುಷ್ಟಿಯಲ್ಲಿರುವ ಸರ್ಕಾರವನ್ನು ಮತ್ತೆ ಕೈವಶ ಮಾಡಿಕೊಳ್ಳುವ ಛಲದಲ್ಲಿ ಭಾರತೀಯ ಜನತಾ ಪಾರ್ಟಿ ಇನ್ನಿಲ್ಲದ ಕಸರತ್ತನ್ನು ನಡೆಸಿದೆ. ಹರಸಾಹಸ ಮಾಡಿಯಾದರೂ ಸೈ ಈ ಬಾರಿ ತಾನೇ ಸರ್ಕಾರ ರಚಿಸುವಂತಾಗಬೇಕೆಂಬ ಸಂಕಲ್ಪದಲ್ಲಿ ಪ್ರಮುಖ ವಿರೋಧ ಪಕ್ಷ ಕಾಂಗ್ರೆಸ್ ಮುನ್ನುಗ್ಗುತ್ತಿದೆ. ಇಬ್ಬರ ಜಗಳ ಮೂರನೆಯವರಿಗೆ ಲಾಭ ಎಂದು ಕೋಟೆಗೆ ಲಗ್ಗೆ ಹಾಕಿರುವ ಆಮ್ ಆದ್ಮಿ ಪಾರ್ಟಿ ಮಹಾತ್ಮ ಗಾಂಧಿ ನಾಡಿನಲ್ಲಿ ತನ್ನ ಭವಿಷ್ಯ ಅರಸಿ ಹೊರಟಿದೆ. ಈ ಪೈಕಿ ಯಾವ ಪಕ್ಷದ ಕೊರಳಿಗೆ ಗುಜರಾತಿಗಳು ರತ್ನಹಾರ ಹಾಕಲಿದ್ದಾರೆ ಎನ್ನುವುದು ತೀವ್ರ ಸ್ವರೂಪದ ಕುತೂಹಲಕ್ಕೆ ಎಡೆ ಮಾಡಿದೆ.

ಕುತೂಹಲದ ಮುಖ್ಯ ಕಾರಣ ಹೋರಾಟದ ಮುಂಚೂಣಿಯಲ್ಲಿರುವ ಆಡಳಿತ ಮತ್ತು ವಿರೋಧ ಪಕ್ಷಗಳೆರಡರಲ್ಲೂ ಇದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಆಪ್ತ, ಗೃಹ ಸಚಿವ ಅಮಿತ್ ಶಾರ ತವರು ರಾಜ್ಯ ಗುಜರಾತು. ಚುನಾವಣೆ ಭರಾಟೆ ಮುಗಿಲು ಮುಟ್ಟಿರುವ ಈ ಘಟ್ಟದಲ್ಲಿ ಈ ಇಬ್ಬರೂ ನಾಯಕರಿಗೆ ಅವರು ಹೊಂದಿರುವ ಸ್ಥಾನಕ್ಕಿಂತ ತವರು ರಾಜ್ಯದ ಜನ ನಾಡಿ ಮಿಡಿತದ ದಿಕ್ಕುದೆಸೆ ಅರಿಯುವುದು ಬಹಳ ಬಹಳ ಮುಖ್ಯವಾಗಿದೆ. ರ್ಯಾಲಿಗಳ ತರುವಾಯ ರ್ಯಾಲಿ ಎಂಬಂತೆ ಅವರಿಬ್ಬರ ಚುನಾವಣಾ ಪ್ರಚಾರ ಪ್ರವಾಸ ಈ ಹಿಂದಿನ ಎಲ್ಲ ದಾಖಲೆಗಳನ್ನೂ ಮುರಿಯುತ್ತಿದೆ ಎಂಬ ಸುದ್ದಿ ಬರುತ್ತಿದೆ. ಸಾಕಷ್ಟು ಸಂಖ್ಯೆಯಲ್ಲಿ ಜನವೂ ಜಮಾಯಿಸುತ್ತಿದ್ದು ಒಂದಿಷ್ಟು ಖುಷಿ ಮತ್ತೊಂದಿಷ್ಟು ಸಂಕಟಕ್ಕೆ ನೇರವಾಗಿ ಅದು ಕಾರಣವಾಗಿದೆ. ಇಲ್ಲಿ ನೆನಪಾಗುವುದು ಅಟಲ್ ಬಿಹಾರಿ ವಾಜಪೇಯಿಯವರು ಆಡಿರುವ ಮಾತು. ಅವರ ಸಭೆಗೆ ಜನ ತಂಡೋಪತಂಡವಾಗಿ ಬರುತ್ತಿದ್ದರು. “ನನ್ನ ಭಾಷಣ ಕೇಳಿದವರೆಲ್ಲರೂ ಓಟು ಮಾಡಿದ್ದರೆ ನನ್ನ ಪಕ್ಷ ಯಾವತ್ತೋ ಅಧಿಕಾರಕ್ಕೆ ಬರುತ್ತಿತ್ತು”. ಈ ಮಾತು ಅಂದೂ ಸತ್ಯ ಇಂದೂ ಸತ್ಯ. ಈ ಎಚ್ಚರದಲ್ಲಿ ಬಿಜೆಪಿ ಹೆಜ್ಜೆ ಹಕಿರುವುದು ಸ್ಪಷ್ಟ.

ಗುಜರಾತ್‍ನಲ್ಲಿ ಆಡಳಿತ ವಿರೋಧಿ ಅಲೆ ಭಾರೀ ಜೋರಾಗಿ ಇಲ್ಲವಾಗಿರಬಹುದು, ಸಣ್ಣದಾಗಿ ಇದ್ದರೂ ಅದು ಗುಪ್ತವಾಗಿಲ್ಲ. ಅತ್ಯಂತ ಶ್ರೀಮಂತವಾದ ಆ ರಾಜ್ಯದಲ್ಲಿ ಮೋದಿ ಕಲ್ಪನೆಯಲ್ಲಿ ಸಾಕಾರಗೊಂಡಿದ್ದ “ಗುಜರಾತ್ ಮಾದರಿ” ಎಂಬ ಆಡಳಿತ ವ್ಯವಸ್ಥೆ ಹಳಸುತ್ತಿರುವುದರ ವಾಸನೆ ವಿರೋಧ ಪಕ್ಷಗಳ ಮೂಗಿಗೆ ಬಡಿದಿದೆ. ಈ ಬಾರಿಯೂ ಬಿಜೆಪಿ ಆಡಳಿತ ಸೂತ್ರ ಹಿಡಿದರೆ ಏಳನೇ ಬಾರಿಗೆ ವಿಧಾನ ಸೌಧವನ್ನು ಅದು ತನ್ನ ವಶ ಪಡಿಸಿಕೊಂಡಂತಾಗುತ್ತದೆ. ಇಷ್ಟೆಲ್ಲ ವರ್ಷ ಸತತವಾಗಿ ಒಂದೇ ಪಕ್ಷದ ಸರ್ಕಾರವಿದ್ದಲ್ಲೆಲ್ಲ ಸಹಜವಾಗೇ ಏಳುವ ಆಡಳಿತ ವಿರೋಧಿ ಅಲೆ ಗುಜರಾತ್‍ನಲ್ಲೂ ಕಾಣಿಸಿದೆ. ಅಲೆಯೇನೋ ಇದೆ. ಆದರೆ ಅದು ದಡ ಮುಟ್ಟಿ ವಿರಮಿಸುತ್ತದೋ ಅಥವಾ ಸುನಾಮಿಯಾಗಿ ಅಪ್ಪಳಿಸುತ್ತದೋ ಎನ್ನುವುದು ವಿರೋಧ ಪಕ್ಷಗಳ ಕಾರ್ಯತಂತ್ರವನ್ನು ಅವಲಂಬಿಸಿದೆ. ಆಡಳಿತದ ವಿರುದ್ಧ ಜನಮನ ತಿರುಗಿ ಬೀಳುವಂತೆ ಮಾಡುತ್ತಿರುವ ಯತ್ನ ಅವು ನಡೆಸಿರುವ ಪ್ರಚಾರ ವೈಖರಿಯಲ್ಲಿ ಸಧ್ಯಕ್ಕಂತೂ ಕಾಣಿಸುತ್ತಿದೆ.

ಎಂಟು ವರ್ಷದ ಹಿಂದೆ ಪ್ರಧಾನಿಯಾಗುವ ಪೂರ್ವದಲ್ಲಿ 13 ವರ್ಷ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಮೋದಿಯವರಿಗೆ ಆ ರಾಜ್ಯವನ್ನು ಪುನಃ ಗೆಲ್ಲುವುದು ಅತ್ಯಂತ ಮುಖ್ಯವಾಗಿದೆ. ಗುಜರಾತ್ ಆಡಳಿತ ಸೂತ್ರ ಇತರ ಪಕ್ಷಗಳ ಕೈಗೆ ಹೋದೀತೆಂಬ ಸಣ್ಣ ಯೋಚನೆಯನ್ನು ಕಲ್ಪಿಸಿಕೊಳ್ಳುವುದು ಮೋದಿಗೂ ಸಾಧ್ಯವಿಲ್ಲ, ಅಮಿತ್ ಶಾಗೂ ಸಾಧ್ಯವಿಲ್ಲ. ಚುನಾವಣಾ ಸಮರ ಇಷ್ಟು ವರ್ಷ ನೇರಾನೇರ ಸ್ಪರ್ಧೆಯದಾಗಿತ್ತು. ಬಿಜೆಪಿ ಮತ್ತು ಕಾಂಗ್ರೆಸ್ ನಡುವಣ ಹೋರಾಟಕ್ಕಷ್ಟೇ ಮುಖ್ಯವಾಗಿ ಅದು ಸೀಮಿತವಾಗಿತ್ತು. ಈ ಬಾರಿ ಅಧಿಕಾರ ಹಿಡಿದೇ ಸಿದ್ಧ ಎಂಬ ಛಲದೊಂದಿಗೆ ಆಮ್ ಆದ್ಮಿ ಪಾರ್ಟಿ ಮಾಡಿರುವ ಪ್ರವೇಶ ತ್ರಿಕೋನ ಸ್ಪರ್ಧೆಯನ್ನು ಅನಿವಾರ್ಯವಾಗಿಸಿದೆ. ಸಮರದ ರಂಗು ಹೆಚ್ಚುವಂತಾಗಿದೆ. ಬಿಜೆಪಿಯ ಬಿ ಟೀಮು ಆಮ್ ಆದ್ಮಿ ಪರ್ಟಿ ಎನ್ನುವುದು ಕಾಂಗ್ರೆಸ್ ಆರೋಪ. ಹಾಗಲ್ಲ, ಕಾಂಗ್ರೆಸ್‍ನ ಬಿ ಟೀಮು ಆಪ್ ಎನ್ನುವುದು ಬಿಜೆಪಿ ಪ್ರತ್ಯಾರೋಪ. ಆಪ್ ಸ್ಪರ್ಧಿಸಿರುವುದರಿಂದ ಆಡಳಿತ ವಿರೋಧಿ ಮತಗಳು ಹಂಚಿಹೋಗಿ ಬಿಜೆಪಿಗೆ ಅನುಕೂಲವಾದರೂ ಆಗಬಹುದೆಂಬ ಆತಂಕ ಕಾಂಗ್ರೆಸ್ ಪಾಳಯದಲ್ಲಿದೆ. ಅದರ ಆತಂಕವನ್ನು ಇನ್ನಷ್ಟು ಹೆಚ್ಚಿಸಿರುವುದು ಅಸಾದುದ್ದೀನ್ ಓವೈಸಿ ಯಜಮಾನಿಕೆಯ ಎಐಎಂಐಎಂ ಪಾರ್ಟಿ. ಅಲ್ಪಸಂಖ್ಯಾತ ಮತಗಳನ್ನು ಸೆಳೆಯುವಲ್ಲಿ ಅದು ಯಶಸ್ವಿಯಾದರೆ ಕಾಂಗ್ರೆಸ್‍ನ ಮಂಡೆಬಿಸಿ ನಿಜವಾಗುವ ಸಂಭವವಿದೆ.

ಐದು ವರ್ಷದ ಹಿಂದೆ 2017ರ ಚುನಾವಣೆಯಲ್ಲಿ ಬಿಜೆಪಿ ಗೆದ್ದಿದ್ದು ಹೌದಾದರೂ ಫಲಿತಾಂಶ ಏದುಸಿರು ಬಿಡುವಂತೆ ಮಾಡಿತ್ತು. 182 ಸ್ಥಾನಬಲದ ವಿಧಾನ ಸಭೆಯಲ್ಲಿ ಸರಳ ಬಹುಮತಕ್ಕೆ 92 ಸೀಟು ಅಗತ್ಯ. ಬಿಜೆಪಿ ಆಗ ತುರುಸಿನ ಸ್ಪರ್ಧೆಯಲ್ಲಿ ಗೆಲ್ಲಲು ಸಾಧ್ಯವಾಗಿದ್ದು 99 ಸೀಟುಗಳನ್ನು (ಗಳಿಸಿದ ಮತ 49.1%) ಮಾತ್ರ. ಮತ ಎಣಿಕೆ ಸಮಯದಲ್ಲಿ ಹಾವು ಏಣಿಯ ಆಟ ಬಿಜೆಪಿಯನ್ನು ಸಂಕಟ ಸ್ಥಿತಿಗೆ ದೂಡಿತ್ತು. ಆಗ ಅದರ ಸ್ಥಾನಬಲ 16 ಸೀಟಿನಷ್ಟು ಕಡಿಮೆಯಾಗಿ ಆಡಳಿತ ಪಕ್ಷದಲ್ಲಿ, ಪ್ರಧಾನಿ ಮೋದಿಯವರಲ್ಲಿ, ಗೃಹ ಸಚಿವ ಅಮಿತ್ ಶಾರಲ್ಲಿ ನಡುಕ ಮೂಡಿಸಿತ್ತು. ಜನಪ್ರಿಯ ಸರ್ಕಾರವೊಂದು ಮೋದಿಯಂಥ ಮೋದಿ ನೇತೃತ್ವದಲ್ಲಿ ಚುನಾವಣೆ ಎದುರಿಸಿದಾಗಲೂ ಇರುವ ಬಲದಲ್ಲಿ 16 ಸೀಟು ಕಳೆದುಕೊಂಡಿದ್ದ ವಿಚಾರ ಈ ಚುನಾವಣೆಯಲ್ಲೂ ವ್ಯಾಪಕ ಚರ್ಚೆಗೆ ಗ್ರಾಸವೊದಗಿಸಿದೆ. ಕಾಂಗ್ರೆಸ್ ಆಗ 77 ಸೀಟು (ಗಳಿಸಿದ ಶೇಕಡಾವಾರು ಮತ 41.4) ಗೆದ್ದಿತ್ತಷ್ಟೆ ಅಲ್ಲ, ಅದರ ಸ್ಥಾನ ಬಲ 16 ಸೀಟುಗಳಷ್ಟು ಹೆಚ್ಚಿತ್ತು. ಆಪ್ ಒಂದು ಸ್ಥಾನವನ್ನೂ ಗೆದ್ದಿರಲಿಲ್ಲ, ಅದರ ಮತ ಗಳಿಕೆಯೂ ಯಕಃಶ್ಚಿತ್ 0.01% ಮಾತ್ರವಿತ್ತು. ಆದರೆ ಆ ಸೋಲೇ ಆ ಪಕ್ಷದ ಧೈರ್ಯವನ್ನು ಹೆಚ್ಚಿಸಿರಬಹುದು. ಸಕಲಬಲದೊಂದಿಗೆ ಗುಜರಾತ್ ಅಖಾಡಾಕ್ಕೆ ಇಳಿಯಲು ಅದು ಪಂಜಾಬನ್ನು ಮೂರನೇ ಎರಡು ಬಹುಮತದೊಂದಿಗೆ ಗೆದ್ದಿದ್ದೇ ಕಾರಣ ಎನ್ನುವುದು ಹಗಲಿನಷ್ಟೇ ಸ್ಪಷ್ಟ.

ಇದನ್ನೂ ಓದಿ | ಮೊಗಸಾಲೆ ಅಂಕಣ | ಸಡಿಲವಾಗುತ್ತಿರುವ ರಾಜ್ಯ-ಕೇಂದ್ರ ಸಂಬಂಧ: ಜ್ವಾಲಾಮುಖಿ ಸ್ಫೋಟ?

ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ನಡೆಸಿರುವ ಭಾರತ್ ಜೋಡೋ ಯಾತ್ರೆ ಹಾದುಹೋಗುವ ಮಾರ್ಗದಲ್ಲಿ ಗುಜರಾತ್ ಭೂಪಟವೇ ಇಲ್ಲ. ಕಾರಣ ಗೊತ್ತಿಲ್ಲ. ಅದೇನೇ ಇದ್ದರೂ ದೇಶದಲ್ಲಿ ಒಂದು ಬಗೆಯ ಸಂಚಲನಕ್ಕೆ ಯಾತ್ರೆ ಕಾರಣವಾಗಿರುವುದು ಸುಳ್ಳೇನೂ ಅಲ್ಲ. ತಮ್ಮ ರಾಜ್ಯದಲ್ಲಿ ಯಾತ್ರೆ ನಡೆಯದೇ ಇದ್ದರೂ ಗುಜರಾತಿಗಳು ಟಿವಿ ಚಾನೆಲ್‍ಗಳ ಮೂಲಕ ಅದನ್ನು ಗಮನಿಸುತ್ತಿದ್ದಾರೆ. ಕಾಂಗ್ರೆಸ್, ಬಿಜೆಪಿ, ಆಪ್ ಮುಂತಾದ ಪಕ್ಷಗಳನ್ನು ಮುಂದಿಟ್ಟುಕೊಂಡು “ಯಾರು ಹಿತವರು ಈ ಮೂವರೊಳಗೆ” ಎಂಬ ಕಟ್ಟೆ ಪುರಾಣ ಅಲ್ಲೂ ನಡೆಯುತ್ತಿದೆ. ಸರಿತಪ್ಪುಗಳ ವಿಮರ್ಶೆ ಸಾಗಿದೆ. ಇಂಥದ್ದರಿಂದೆಲ್ಲ ಬಿಜೆಪಿಯ ದೈತ್ಯ ಶಕ್ತಿ ಕುಂದುತ್ತದೆ, ಅಥವಾ ಅದರ ನೈತಿಕ ಬಲ ಉಡುಗುತ್ತದೆ ಎಂದು ಯಾರಾದರೂ ಭಾವಿಸಿದರೆ ಅವರು ಮೂರ್ಖರ ಸ್ವರ್ಗದಲ್ಲಿದ್ದಾರೆಂದೇ ಅರ್ಥ ಎಂಬ ವ್ಯಾಖ್ಯಾನವೂ ಇದೆ.

ಏತನ್ಮಧ್ಯೆ ಕಾಂಗ್ರೆಸ್‍ನ ಚುನಾವಣಾ ಪ್ರಣಾಳಿಕೆ ಗಮನ ಸೆಳೆದಿದೆ. ಹತ್ತು ಲಕ್ಷ ಉದ್ಯೋಗ ಸೃಷ್ಟಿ, ಹತ್ತು ಲಕ್ಷ ರೂಪಾಯಿವರೆಗೆ ಉಚಿತ ವೈದ್ಯಕೀಯ ನೆರವು, ಸಾವಿರ ರೂಪಾಯಿ ಮುಟ್ಟಿರುವ ಅಡುಗೆ ಅನಿಲದ ದರವನ್ನು ಐದು ನೂರು ರೂಪಾಯಿಗೆ ಇಳಿಕೆ, ತಿಂಗಳಿಗೆ ಮೂರು ನೂರು ಯೂನಿಟ್ ಉಚಿತ ವಿದ್ಯುತ್, ಮೂರು ಸಾವಿರ ರೂಪಾಯಿ ನಿರುದ್ಯೋಗ ಭತ್ಯ, ದಿವ್ಯಾಂಗರು, ವಿಧವೆಯರು, ಹಿರಿಯ ನಾಗರಿಕರಿಗೆ ಎರಡು ಸಾವಿರ ರೂಪಾಯಿ ಮಾಸಾಶನ, ಬೆಸ್ತರ ಮೂರು ಲಕ್ಷ ರೂಪಾಯಿವರೆಗಿನ ಸಾಲಮನ್ನಾ…ಮುಂತಾದ ಬಾಯಲ್ಲಿ ನೀರೂರಿಸುವ ಭರವಸೆಗಳನ್ನು ಅದು ನೀಡಿದೆ.

ಆಪ್ ಕೂಡಾ ಇಂಥ ಭರವಸೆ ನೀಡುವಲ್ಲಿ ಹಿಂದೆ ಬಿದ್ದಿಲ್ಲ. ಮಾಸಿಕ ಮುನ್ನೂರು ಯೂನಿಟ್ ವಿದ್ಯುತ್ ಉಚಿತ, ಮೂರು ಸಾವಿರ ರೂಪಾಯಿ ನಿರುದ್ಯೋಗ ಭತ್ಯದ ಭರವಸೆಯನ್ನು ಅದು ನೀಡಿದೆ. 18 ವರ್ಷ ವಯಸ್ಸು ದಾಟಿದ ಎಲ್ಲ ಹೆಣ್ಣು ಮಕ್ಕಳು, ಮಹಿಳೆಯರಿಗೆ ತಿಂಗಳಿಗೆ ಒಂದು ಸಾವಿರ ರೂಪಾಯಿಯನ್ನು ಅಧಿಕಾರಕ್ಕೆ ಬಂದಲ್ಲಿ ಕೊಡುವುದಾಗಿ ಆಪ್ ನಾಯಕ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲ್ ಘೋಷಿಸಿದ್ದಾರೆ. ಜನರಿಂದ ತೆರಿಗೆ ರೂಪದಲ್ಲಿ ಬಂದ ಹಣ ಜನರಿಗೇ ಸಂದಾಯವಾಗಬೇಕಲ್ಲದೆ ಸ್ವಿಸ್ ಬ್ಯಾಂಕ್ ಖಾತೆಗೆ ಜಮಾ ಆಗಬಾರದೆಂದು ಅವರು ಹೇಳಿರುವುದು ಯಾರನ್ನುದ್ದೇಶಿಸಿ ಆಡಿದ ಮಾತೆಂಬ ಚರ್ಚೆಯೂ ಸಾಗಿದೆ.

ಬಿಜೆಪಿ ಹೊಸ ಭರವಸೆಗಳನ್ನು ಕೊಡಲು ಹೋಗಿಲ್ಲ. ಅದರ ಪ್ರಕಾರ ಅಭಿವೃದ್ಧಿ ಕೆಲಸಕ್ಕೆ ಗುಜರತಿನಲ್ಲಿ ಇನ್ನು ಅವಕಾಶವೇ ಇಲ್ಲದಂತೆ ಎಲ್ಲವನ್ನೂ ಮೂರೂವರೆ ದಶಕದಲ್ಲಿ “ಮಾಡಿ ಮುಗಿಸಲಾಗಿದೆ”. ಆದರೆ ಭರವಸೆ ಇಲ್ಲದೆ ಪ್ರಜಾಪ್ರಭುತ್ವದಲ್ಲಿ ಚುನಾವಣೆ ನಡೆಯುತ್ತದಾದರೂ ಹೇಗೆ…? ಎಂದೇ ಅದು ಜನರನ್ನು “ನಮ್ಮಿಂದ ನಿಮಗಿನ್ನೇನು ಆಗಬೇಕು” ಎಂದು ಕೇಳಿದೆ. ರಾಜ್ಯದ ಎಲ್ಲ ಕ್ಷೇತ್ರಗಳಿಂದ ಸಂಗ್ರಹಿಸುವ ಜನಾಭಿಪ್ರಾಯವನ್ನು ಕ್ರೋಡೀಕರಿಸಿ ಪ್ರಣಾಳಿಕೆ ಸಿದ್ಧಪಡಿಸುವ ನೂತನ ಮಾರ್ಗಕ್ಕೆ ಅದು ಹೊರಳಿದೆ. “ಗುಜರಾತ್ ಮುನ್ನಡೆ” ಎನ್ನುವ ಥೀಮನ್ನು ಬಿಜೆಪಿ ಜನರಿಗೆ ನೀಡಿದೆ. ಮುನ್ನಡೆಗೆ ಏನನ್ನೆಲ್ಲ ಜನಮನ ಸೂಚಿಸುವುದೋ ಅದನ್ನು ಪಕ್ಷದ ಸರ್ಕಾರ ಅಧಿಕಾರಕ್ಕೆ ಮರಳಿದರೆ ಕಾರ್ಯರೂಪಕ್ಕೆ ತರಲಾಗುವುದು ಎಂಬ ಪ್ರಚಾರವೂ ಸಾಗಿದೆ.

ಇದನ್ನೂ ಓದಿ | ಮೊಗಸಾಲೆ ಅಂಕಣ | ಬಿಜೆಪಿ ಚುನಾವಣಾ ಜಯಕ್ಕೆ ʻತಾರಾಬಲʼ

ವಿವಿಧ ಸಮೀಕ್ಷೆಗಳು ಬಿಜೆಪಿಯೇ ಮತ್ತೊಮ್ಮೆ ಅಧಿಕಾರ ಸೂತ್ರ ಹಿಡಿಯಲಿದೆ ಎಂದಿರುವುದು ಆಡಳಿತ ಪಕ್ಷದ ಸ್ಥೈರ್ಯ ಹೆಚ್ಚಿಸಿದೆ. ಹಾಗಂತ ಸಮೀಕ್ಷೆಗಳು ಎಲ್ಲ ಕಾಲದಲ್ಲೂ ನಿಜವಾಗಿವೆ ಎಂದೇನೂ ಅಲ್ಲ. ಅವು ನುಡಿದ ಭವಿಷ್ಯ ಉಲ್ಟಾಪಲ್ಟಾ ಆಗಿರುವುದಕ್ಕೆ ಸ್ವತಃ ಗುಜರಾತೇ ಸಾಕ್ಷಿಯಾಗಿದೆ. ಮೋದಿ ಮತ್ತೆ ಅಧಿಕಾರಕ್ಕೆ ಬರುವುದು ಕನಸಿನ ಮಾತು ಎಂಬ ಸಮೀಕ್ಷೆಗಳೆಲ್ಲ ತಲೆಕೆಳಗಾಗಿ ಮತ್ತೆ ಅವರೇ ಸಿಎಂ ಆದ ನೆನಪು ಗುಜರಾತಿಗಳಲ್ಲಿದೆ. ಬರುವುದೇ ಇಲ್ಲ ಎಂಬ ಸಮೀಕ್ಷೆ ಸುಳ್ಳಾದ ರೀತಿಯಲ್ಲೇ ಬಂದೇ ಬರುತ್ತದೆಂಬ ಸಮೀಕ್ಷೆ ಕೂಡಾ ಹುಸಿ ಹೋಗುವ ಸಾಧ್ಯತೆ ಇದೆ ಎಂಬುದು ಕಾಂಗ್ರೆಸ್ ಮತ್ತು ಆಪ್ ಲೆಕ್ಕಾಚಾರ.

ಏಐಸಿಸಿಗೆ ನೂತನ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆಯವರು ಎದುರಿಸುತ್ತಿರುವ ಮೊದಲ ಅಗ್ನಿಪರೀಕ್ಷೆಗಳಲ್ಲಿ ಗುಜರಾತ್ ಚುನಾವಣೆಗೆ ದೊಡ್ಡ ಮಹತ್ವವಿದೆ. ಹಿಮಾಚಲ ಪ್ರದೇಶದಲ್ಲೂ ಚುನಾವಣೆ ನಡೆದಿದೆ. ಆದರೆ ಗುಜರಾತ್ ಚುನಾವಣೆ ಎದುರು ಹಿಮಾಚಲ “ಔಟ್ ಆಫ್ ಫೊಕಸ್” ಆಗಿದೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಸಾಧನೆ ಕಳಪೆಯದೇನೂ ಆಗಿರಲಿಲ್ಲ. 182 ಸೀಟುಗಳ ಪೈಕಿ 77ನ್ನು ಗೆದ್ದಿದ್ದು ಮತಗಳಿಕೆ ಪ್ರತಿಶತ 41ರ ಗಡಿ ದಾಟಿದ್ದು ಅದರ ಬಲ ಶೂನ್ಯವಲ್ಲ ಎನ್ನುವುದನ್ನು ಹೇಳುತ್ತದೆ. ಕಳೆದ ಬಾರಿಯ ಚುನಾವಣೆ ಸಮಯದಲ್ಲಿ ಏಐಸಿಸಿ ಸೂತ್ರ ಹಿಡಿದು ಜಗ್ಗಾಡುತ್ತಿದ್ದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಈ ಬಾರಿ ನೇರವಾಗಿ ಪ್ರತ್ಯಕ್ಷವಾಗಿ ಏನನ್ನೂ ಮಾಡುತ್ತಿಲ್ಲ, ಬದಲಿಗೆ ಎಲ್ಲವನ್ನೂ ಖರ್ಗೆಯವರಿಗೆ “ವಹಿಸಿ” ಕೈತೊಳೆದುಕೊಂಡಿದ್ದಾರೆ. ಸ್ಟಾರ್ ಕ್ಯಾಂಪೇನರ್ಸ್ ಪಟ್ಟಿ ಹೊರಬಿದ್ದಿದ್ದು ಮುಂಚೂಣಿ ಹೆಸರುಗಳಲ್ಲಿ ಈ ಮೂವರದು ಪ್ರಧಾನವಾಗಿದೆ. ಖರ್ಗೆಯವರ ಹೆಗಲಿಗೆ ಹೆಗಲನ್ನು ಕೊಟ್ಟು ಪಕ್ಷವನ್ನು ಅಧಿಕಾರಕ್ಕೆ ಬರುವಂತೆ ಮಾಡುವ ನಾಯಕರ ಕೆಲಸಕ್ಕೆ ಜನ ಹೇಗೆ ಸ್ಪಂದಿಸುತ್ತಾರೆ ಎನ್ನುವುದು ಮುಂದಿನ ಅಂಕ.

ಗುಜರಾತನ್ನು ಕಾಂಗ್ರೆಸ್ ಗೆದ್ದರೆ ಅದರ ತುರಾಯಿ ಅಮ್ಮ ಮಕ್ಕಳ ಮುಡಿಗೆ ಸಲ್ಲುತ್ತದೆ. ಸೋತರೆ ಖರ್ಗೆ ತಲೆಗೆ ಕಟ್ಟುತ್ತಾರೆ. ಗೆದ್ದೇ ಗೆಲ್ಲುತ್ತೇವೆ ಎಂಬ ಖರ್ಗೆಯವರ ನಿರೀಕ್ಷೆ ಸುಳ್ಳಾದರೆ ಪಕ್ಷದ ಉನ್ನತ ಸ್ತರದಲ್ಲಿ ಒಂದಿಷ್ಟು ಅಲ್ಲೋಲಕಲ್ಲೋಲ ಉಂಟಾಗುವ ಸಂಭವ ಇಲ್ಲದಿಲ್ಲ. ದಕ್ಷಿಣ ಭಾರತೀಯನೊಬ್ಬ ಏಐಸಿಸಿ ಅಧ್ಯಕ್ಷರಾಗಿ “ಸಲಹೆ, ಸೂಚನೆ, ಆದೇಶ, ಅಪ್ಪಣೆ- ಆಜ್ಞೆ” ಮಾಡುವುದನ್ನು ಸಹಿಸಿಕೊಳ್ಳುವುದು ಉತ್ತರ ಭಾರತದ ಅನೇಕ ಕಾಂಗ್ರೆಸ್ ನಾಯಕರಿಗೆ ಸಾಧ್ಯವಾಗುತ್ತಿಲ್ಲ. ಮೇಲ್ನೋಟಕ್ಕೆ ಎಲ್ಲವೂ ಶಾಂತವಾಗಿರುವಂತೆ ತೋರುವ ಜ್ವಾಲಾಮುಖಿ ಅದು. ಹೊರ ನೋಟಕ್ಕೆ ಎಲ್ಲವೂ ಚಂದವಾಗಿದೆ, ಫೋಟೋಕ್ಕೆ ಮಾತ್ರ. ರಾಜಸ್ಥಾನದ ಉಸ್ತುವಾರಿ ಏಐಸಿಸಿ ಪ್ರಧಾನ ಕಾರ್ಯದರ್ಶಿ ಅಜಯ್ ಮಾಕೆನ್ ಹುದ್ದೆಗೆ ರಾಜೀನಾಮೆ ನೀಡಿರುವುದು ನಿರ್ಲಕ್ಷಿಸಬಹುದ ಬೆಳವಣಿಗೆಯಲ್ಲ. ರಾಜಸ್ಥಾನ ಕಾಂಗ್ರೆಸ್ ಬಿಕ್ಕಟ್ಟಿನ ವಿಚಾರದಲ್ಲಿ ಶಿಸ್ತು ಕ್ರಮ ತೆಗೆದುಕೊಳ್ಳುವುದಕ್ಕೆ ಹೈಕಮಾಂಡ್ ಮೀನ ಮೇಷ ಮಾಡುತ್ತಿದೆ ಎಂದು ತಮ್ಮ ರಾಜೀನಾಮೆಗೆ ಮಾಕೆನ್ ಕಾರಣ ಕೊಟ್ಟಿದ್ದಾರೆ. ರಾಜಸ್ಥಾನದಲ್ಲಿ ಬಿಕ್ಕಟ್ಟು ಶುರುವಾಗಿದ್ದು ಉಲ್ಬಣಗೊಂಡಿದ್ದು ಸೋನಿಯಾ ಅಧಿಕಾರದಲ್ಲಿದ್ದಾಗ ನಡೆದ ಬೆಳವಣಿಗೆ. ಮಾಕೆನ್ ಈಗ ಎಚ್ಚರಗೊಂಡಿದ್ದರೆ ಅದಕ್ಕೆ ಇರಬಹುದಾದ ಕಾರಣಗಳೇನು ಎಂಬ ಚರ್ಚೆ ಈಗ ಸಾಗಿದೆ. ಖರ್ಗೆ ಅಧಿಕಾರ ವಹಿಸಿಕೊಂಡು ತಿಂಗಳೂ ಆಗಿಲ್ಲ, ಆಗಲೇ ಮಹತ್ವದ ವಿಕೆಟೊಂದು ಮಾಕೆನ್ ರಾಜೀನಾಮೆ ಕಾರಣವಾಗಿ ಉರುಳಿದೆ.

ಇದನ್ನೂ ಓದಿ | ಮೊಗಸಾಲೆ ಅಂಕಣ | ಚರ್ಚಿಲ್ ಕುಳಿತಿದ್ದ ಆಸನದಲ್ಲಿ ರಿಷಿ‌

ಅತ್ತ ಬಿಜೆಪಿಯಲ್ಲೂ ಆತಂಕ ಕಳವಳ ಚಿಂತೆ ಇರುವುದು ಸುಳ್ಳಲ್ಲ. ಗುಜರಾತ್ ಆ ಪಕ್ಷದ ಕೈಬಿಟ್ಟು ಹೋದರೆ ಮೋದಿ ಹಿನ್ನಡೆಗೆ ಅದು ಮುಹೂರ್ತವೂ ಆಗುವ ಅಪಾಯ ಇದೆಯೆಂದೇ ಆ ಪಕ್ಷದಲ್ಲಿ ಚಿಂತೆ ಕಳವಳ ಉಮ್ಮಳಿಸುತ್ತಿದೆ. ತವರು ರಾಜ್ಯದಲ್ಲಿ ಫಲಿತಾಂಶ ಏರುಪೇರಾದರೆ ಅದನ್ನು ಸಹಿಸಿಕೊಳ್ಳುವುದು ಪಕ್ಷಕ್ಕೆ ಬಹಳ ಕಷ್ಟವಾಗುತ್ತದೆ. ಹಾಗೆಂದೇ ಹರಸಾಹಸ ಮಾಡಿಯಾದರೂ ಗೆಲುವನ್ನು ಒಲಿಸಿಕೊಳ್ಳುವ ಎಲ್ಲ ಬಗೆಯ ತಂತ್ರಗಾರಿಕೆಯನ್ನೂ ಮಾಡುತ್ತಿದೆ. ಸಮೀಕ್ಷೆಗಳ ಪ್ರಕಾರ ಆಡಳಿತ ಪಕ್ಷ 130-140 ಸೀಟು ಗೆಲ್ಲಲಿದೆ. ಕಾಂಗ್ರೆಸ್ ಬಲ 30-35ಕ್ಕೆ ಕುಸಿಯಲಿದೆ. ಸಮೀಕ್ಷೆಗಳ ಪ್ರಕಾರ ಬೋರ್ಡಿಗೇ ಇಲ್ಲದ ಆಪ್ ಸೈಡ್ ವಿಂಗ್‍ನಲ್ಲಿ ನಿಂತು ತನ್ನ ಪ್ರವೇಶದ ಸಮಯಕ್ಕೆ ಕಾದಿದೆ.

Exit mobile version