ಬಿಜೆಪಿ ರಾಜಕಾರಣದಿಂದ ಬಿ.ಎಸ್. ಯಡಿಯೂರಪ್ಪನವರನ್ನು (BS Yediyurappa) ದೂರವಿಡುವ ಬಗೆಬಗೆಯ ಯತ್ನದಲ್ಲಿ ಸೋತು ಸುಣ್ಣವಾದ ಪಕ್ಷದ ವರಿಷ್ಟ ಮಂಡಳಿ ಈಗ ಯಡಿಯೂರಪ್ಪನವರ ಮಗ ಬೂಕನಕೆರೆ ಯಡಿಯೂರಪ್ಪ ವಿಜಯೇಂದ್ರ (BY Vijayendra) ಅವರನ್ನು ರಾಜ್ಯ ಬಿಜೆಪಿ ಅಧ್ಯಕ್ಷರನ್ನಾಗಿ ನೇಮಿಸಿದೆ. ಇದಾಗಿ ಒಂದೆರಡು ದಿನ ಕಳೆಯುವುದರೊಳಗಾಗಿ ಅದೇ ಯಡಿಯೂರಪ್ಪನವರಿಗೆ ಬೇಕಾಗಿರುವ ಆರ್.ಆಶೋಕ್ (R Ashok) ಅವರನ್ನು ವಿಧಾನ ಸಭೆ ವಿರೋಧ ಪಕ್ಷದ (Opposition leader) ನಾಯಕನನ್ನಾಗಿ ಬಿಜೆಪಿ ಶಾಸಕಾಂಗ ಪಕ್ಷ ಐವರು ಶಾಸಕರ ಗೈರು ಹಾಜರಿ, ಬಸವರಾಜ ಪಾಟೀಲ ಯತ್ನಾಳರ (Basavaraja patil Yatnal) ಬಹಿರಂಗ ಬಂಡಾಯದ ನಡುವೆಯೂ “ಸರ್ವಾನುಮತದಿಂದ” (?!) ಆಯ್ಕೆ ಮಾಡಿದೆ. ಯಡಿಯೂರಪ್ಪನವರನ್ನು ಪಕ್ಕಕ್ಕೆ ಸರಿಸಿ ರಾಜಕೀಯವಾಗಿ ಉದ್ಧಾರ ಆಗುವುದು ಸನಿಹ ಭವಿಷ್ಯ ಕರ್ನಾಟಕದಲ್ಲಿ ಆಗದ ಮಾತು ಎಂಬ ನಿಲುವಿಗೆ ಬಿಜೆಪಿ ನಾಯಕರು ಬಂದಿರುವುದು ಇದೀಗ ಸ್ಪಷ್ಟವಾಗಿದೆ.
ಲಿಂಗಾಯತ ವೀರಶೈವರು ಮಾತ್ರವೇ ಬಿಜೆಪಿಗೆ ಮತ ನೀಡುವವರು, ಅವರನ್ನು ಒಲಿಸಿಕೊಳ್ಳಲು ಯಡಿಯೂರಪ್ಪನವರನ್ನು ಖುಷಿಖುಷಿಯಾಗಿಡುವುದು ಅತ್ಯಗತ್ಯ ಎಂಬ ತೀರ್ಮಾನ ಒಂದೆಡೆಯಾದರೆ, ಕಳೆದ ಮೇ ತಿಂಗಳಲ್ಲಿ ನಡೆದ ರಾಜ್ಯ ವಿಧಾನ ಸಭೆ ಚುನಾವಣೆಯಲ್ಲಿ ಕಂಡ ಹೀನಾಯ ಸೋಲಿನ ಉರಿಗಾಯಕ್ಕೆ ಹೊಂದಾಣಿಕೆ ರಾಜಕೀಯ ಮುಲಾಮಾಗಿ ಕೆಲಸ ಮಾಡಬಹುದೆಂಬ ನಂಬಿಕೆ ಇನ್ನೊಂದೆಡೆ.
ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದ ನಳೀನ್ ಕುಮಾರ್ ಕಟೀಲರ ಸೇವಾವಧಿ ಕಳೆದ ನಂತರವೂ ಒಂದು ವರ್ಷ ಮೂರು ತಿಂಗಳು ಅವರೇ ಅಲ್ಲಿ ಮುಂದುವರಿದರು. ಅವರನ್ನು ತಂದರೆ ಹೇಗೆ, ಇವರನ್ನು ಕೂರಿಸಿದರೆ ಹೇಗೆ ಎಂದು ಹದಿನೈದು ತಿಂಗಳು ಅಳೆದೂ ಸುರಿದೂ ತೂಗೀ ತೂಗೀ ವಿಜಯೇಂದ್ರರಿಗೆ ಪಕ್ಷ ಪಟ್ಟ ಕಟ್ಟಿದೆ. ಇಷ್ಟರಲ್ಲಿಯೇ ಬರಲಿರುವ ಸ್ಥಳೀಯ ಸಂಸ್ಥೆ, ತಾಲ್ಲೂಕಾ ಪಂಚಾಯತ್, ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ತಮ್ಮ ಸಾಮರ್ಥ್ಯವನ್ನು ವಿಜಯೇಂದ್ರ ಪ್ರಚುರಪಡಿಸುವುದರೊಂದಿಗೆ ಹೊಸ ಅಧ್ಯಾಯ ಶುರುವಾಗಲಿದೆ. ವಿಧಾನ ಸಭೆಯಲ್ಲಿ ತಾವೆಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತೇವೆನ್ನುವುದನ್ನು ಸಾಬೀತು ಪಡಿಸುವ ಅವಕಾಶ ಬೆಳಗಾವಿ ಅಧಿವೇಶನದ ನೆಪದಲ್ಲಿ ಅಶೋಕ್‍ರಿಗೆ ಒದಗಿಬಂದಿದೆ.
ನರೇಂದ್ರ ಮೋದಿಯವರು ಜಗತ್ತಿನ ಗಣ್ಯಾತಿಗಣ್ಯ ನಾಯಕರಲ್ಲಿ ಒಬ್ಬರಾಗಿರಬಹುದು; ಗೃಹ ಸಚಿವ ಅಮಿತ್ ಶಾ ತಮ್ಮ ಉಕ್ಕಿನ ಬಿಗಿ ಹಿಡಿತದಲ್ಲಿ ಪಕ್ಷದ ಜುಟ್ಟು ಜನಿವಾರವನ್ನು ಭದ್ರವಾಗಿ ಇಟ್ಟುಕೊಂಡಿರಬಹುದು; ಜಗತ್ತಿನಲ್ಲೇ ಅತ್ಯಧಿಕ ಸಕ್ರಿಯ ಸದಸ್ಯರನ್ನು ಹೊಂದಿರುವ ಅತಿ ದೊಡ್ಡ ರಾಜಕೀಯ ಪಕ್ಷ ಬಿಜೆಪಿ ಆಗಿರಬಹುದು… ಆದರೆ ಕರ್ನಾಟಕ ಮಟ್ಟಿಗೆ, ಸ್ಥಳೀಯ ಬಿಜೆಪಿ ಮಟ್ಟಿಗೆ ಯಡಿಯೂರಪ್ಪ ಹೇಳಿದ್ದೇ ವೇದವಾಕ್ಯ ಎನ್ನುವುದು ಈಗ ಮತ್ತೊಮ್ಮೆ ಸಾಬೀತಾಗಿದೆ. ವರಿಷ್ಟ ಮಂಡಳಿ ಯಡಿಯೂರಪ್ಪ ಹೇಳಿದಲ್ಲಿ ಕಮಕ್‍ಕಿಮಕ್ ಎನ್ನದೆ ಸಹಿ ಹಾಕುವ ಹಂತಕ್ಕೆ ಕುಸಿದಿದೆ.
ವಿಜಯೇಂದ್ರ ಅವರನ್ನು ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಸಚಿವರನ್ನಾಗಿಸುವ, ಅದಕ್ಕೂ ಪೂರ್ವದಲ್ಲಿ 2018ರ ವಿಧಾನ ಸಭಾ ಚುನಾವಣೆಯಲ್ಲಿ ವರುಣಾ ಕ್ಷೇತ್ರದಲ್ಲಿ ಅಭ್ಯರ್ಥಿಯನ್ನಾಗಿಸಿ ಶಾಸಕ ಸ್ಥಾನದಲ್ಲಿ ಕುಳ್ಳಿರಿಸುವ, ಲೆಟರ್‍ಹೆಡ್ ಹುದ್ದೆಯಷ್ಟೇ ಆಗಿರುವ ರಾಜ್ಯ ಬಿಜೆಪಿ ಉಪಾಧ್ಯಕ್ಷ ಸ್ಥಾನದ ಬದಲಿಗೆ ಪವರ್‌ಫುಲ್ ಪ್ರಧಾನ ಕಾರ್ಯದರ್ಶಿಯನ್ನಾಗಿಸುವ ನಿಟ್ಟಿನಲ್ಲಿ ಯಡಿಯೂರಪ್ಪನವರು ಕಂಡ ಕನಸೆಲ್ಲವೂ ಒಂದೊಂದಾಗಿ ಕಮರಿದ ಬಳಿಕ ಕನಲಿದ ನಾಯಕ ತೋಳೇರಿಸಿ ತೊಡೆ ತಟ್ಟಿದರು. ಅದನ್ನು ಆವಾಗ ಪಕ್ಷ ಬಹಳ ಹಗುರವಾಗಿ ನೋಡಿತು. ಯಾವಾಗ ರಾಜ್ಯ ವಿಧಾನ ಸಭೆಯಲ್ಲಿ ಪಕ್ಷದ ಸ್ಥಾನಬಲ 66ಕ್ಕೆ ಧಸಕ್ಕನೆ ಕುಸಿಯಿತೋ ಆವಾಗಲೇ ವರಿಷ್ಟ ಮಂಡಳಿಗೆ ಜ್ಞಾನೋದಯವಾಗಿದ್ದು ತಾನು ನಿಂತಿದ್ದು ಮರಳ ಮೇಲೆ ಎನ್ನುವುದು. ಪಕ್ಷ ಪರಾಭವದ ಹಿಂದೆ ಯಾರದೆಲ್ಲ ಪ್ರತ್ಯಕ್ಷ ಪರೋಕ್ಷ ಪಾತ್ರವಿದೆ ಎನ್ನುವುದನ್ನು ಕ್ರಮೇಣ ಅರಿತ ವರಿಷ್ಟ ಮಂಡಳಿ ಅಂತಿಮವಾಗಿ ಯಡಿಯೂರಪ್ಪ ಹೇಳಿದ ಮಂತ್ರಕ್ಕೆ “ಮಮ” ಎನ್ನುವುದು ಅನಿವಾರ್ಯ ಎಂಬ ತೀರ್ಮಾನಕ್ಕೆ ಬಂದಿದ್ದರ ಫಲಿತವೇ ವಿಜಯೇಂದ್ರರಿಗೆ ಅಧ್ಯಕ್ಷಗಿರಿ ತುರಾಯಿ.
ಈ ಪೂರ್ವದಲ್ಲಿ (2018-23ರ ನಡುಣ ಅವಧಿಯಲ್ಲಿ ಯಡಿಯೂರಪ್ಪ ಸಿಎಂ ಆಗಿದ್ದಾಗ) ಮಂಡ್ಯ ಜಿಲ್ಲೆ ಕೆ.ಆರ್. ಪೇಟೆ ವಿಧಾನ ಸಭಾ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆ ಉಸ್ತುವಾರಿಯನ್ನು ವಿಜಯೇಂದ್ರರಿಗೆ ವಹಿಸಲಾಗಿತ್ತು. ಮಂಡ್ಯ ಜಿಲ್ಲೆಯಲ್ಲಿ ಇಷ್ಟು ವರ್ಷ ನಡೆದ ಚುನಾವಣೆಯಲ್ಲಿ ಬಿಜೆಪಿ ಬೋರ್ಡ್‍ಗೆ ಬಂದಿದ್ದರೆ ಅದು ಠೇವಣಿ ಕಳೆದುಕೊಂಡ ಪಕ್ಷವಾಗಿ. ಅಲ್ಲಿ ಗೆದ್ದಾಗ ಅದರ ಸಂಪೂರ್ಣ ಶ್ರೇಯಸ್ಸನ್ನು ವಿಜಯೇಂದ್ರರಿಗೆ ಒಪ್ಪಿಸಲಾಯಿತು. ನಂತರದ ಶಿರಾ ಉಪಚುನಾವಣೆ ಉಸ್ತುವಾರಿಯೂ ವಿಜಯೇಂದ್ರ ಹೆಗಲನ್ನೇರಿತು. ಅಲ್ಲೂ ಪಕ್ಷ ಗೆದ್ದಾಗ ವಿಜಯೇಂದ್ರರನ್ನು ಹಿಡಿಯುವವರೇ ಇಲ್ಲವಾಯಿತು. ರಾಯಚೂರು ಜಿಲ್ಲೆ ಮಸ್ಕಿ ವಿಧಾನ ಸಭಾ ಕ್ಷೇತ್ರದ ಉಪಚುನಾವಣೆಯಲ್ಲೂ ವಿಜಯಪತಾಕೆ ಹಾರಿಸುವ ಹೊಣೆಯನ್ನು ಪಕ್ಷ ವಿಜಯೇಂದ್ರರಿಗೆ ಒಪ್ಪಿಸಿತು. ಫಲಿತಾಂಶ ಬಂದಾಗ ಎಡವಟ್ಟಾಗಿ ಹೋಗಿತ್ತು. ಹಾಗಂತ ಆ ಸೋಲಿನ ಮುಳ್ಳಿನ ಕಿರೀಟವನ್ನು ಪಕ್ಷ ಅವರ ನೆತ್ತಿ ಮೇಲೆ ಯಡಿಯೂರಪ್ಪ ಭಯದಲ್ಲಿ ಇಡಲು ಮುಂದಾಗಲಿಲ್ಲ.
ಹತ್ತಾರು ವಿವಾದಗಳು ವಿಜಯೇಂದ್ರ ಅವರಿಗೆ ಮೆತ್ತಿಕೊಂಡಿವೆ. ಇತ್ತೀಚಿನ ದಶಕಗಳಲ್ಲಿ ಮುಖ್ಯಮಂತ್ರಿಯಾದವರ ಮಕ್ಕಳು ಅಪ್ಪನ ಹೆಸರು ಹಾಳಾಗುತ್ತದೆ ಎಂದು ಭಾವಿಸಿದ ಉದಾಹರಣೆ ಕಡಿಮೆ. ಯಡಿಯೂರಪ್ಪನವರ ಇನ್ನೊಬ್ಬ ಮಗ ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ, ಅಪ್ಪನ ಹೆಸರು ಕೆಡಿಸುವಂಥ ಭಾನಗಡಿಯಲ್ಲಿ ಆರೋಪ ಹೊತ್ತ ಸಣ್ಣ ನಿದರ್ಶನವೂ ಇಲ್ಲ. ಆದರೆ ವಿಜಯೇಂದ್ರ ಅವರಿಗೆ ಈ ವಿಚಾರದಲ್ಲಿ ಉತ್ತಮ ನಡವಳಿಕೆ ಸರ್ಟಿಫಿಕೆಟ್ ನೀಡುವ ಸ್ಥಿತಿಯಲ್ಲಿ ಅವರದೇ ಪಕ್ಷ ಬಿಜೆಪಿಯೇ ಇಲ್ಲ. ಇದೇನೇ ಇದ್ದರೂ ಈಗ ಅವರಿಗೆ ಬಹಳ ದೊಡ್ಡ ಜವಾಬ್ದಾರಿ ಬಂದಿದೆ. ಅವರ ಕಾರ್ಯವೈಖರಿ ಹೇಗೆ ಪಕ್ಷವನ್ನು ಮುನ್ನಡೆಸಲಿದೆ ಎನ್ನುವುದು ಕುತೂಹಲ ಕೆರಳಿಸಿದೆ.
ಇದನ್ನೂ ಓದಿ: ಮೊಗಸಾಲೆ ಅಂಕಣ: ಲೋಕಸಭೆ ಫೈನಲ್‌ಗೂ ಮುನ್ನ ಪಂಚರಾಜ್ಯ ಸೆಮಿಫೈನಲ್
ಒಕ್ಕಲಿಗರ ಮೇಲೆ ಅನುಕೂಲಕರ ಪರಿಣಾಮ ಬೀರಬಹುದು ಎಂಬ ಲೆಕ್ಕಾಚಾರ ಅಶೋಕ್ ಅವರನ್ನು ವಿರೋಧ ಪಕ್ಷದ ನಾಯಕನನ್ನಾಗಿ ಮಾಡಿದ್ದರಲ್ಲಿದೆ ಎಂದು ತರ್ಕಿಸಬಹುದು. ಶಾಸಕಾಂಗ ಪಕ್ಷ ಅವರನ್ನು ಆಯ್ಕೆ ಮಾಡಿದ ಸಂದರ್ಭದಲ್ಲಿ ಪಕ್ಷದ ಐವರು ಶಾಸಕರು ಗೈರು ಹಾಜರಾಗಿದ್ದು, ಬಸವರಾಜ ಪಾಟೀಲ ಯತ್ನಾಳರು ಅಸಹನೆಯಲ್ಲಿ ಕೆಂಬಾವುಟ ಹಾರಿಸಿದ್ದು ಉತ್ತಮ ಸಂದೇಶ ರವಾನಿಸದ ಬೆಳವಣಿಗೆ. ವರಿಷ್ಟ ಮಂಡಳಿ ಈ ಬೆಳವಣಿಗೆಯನ್ನು ಊಹಿಸಿತ್ತು ಎನ್ನುವುದಕ್ಕೆ ವೀಕ್ಷಕರಾಗಿ ಆಗಮಿಸಿದ್ದ ಕೇಂದ್ರ ಅರ್ಥ ಸಚಿವೆ ನಿರ್ಮಲಾ ಸೀತಾರಾಮನ್ ಯತ್ನಾಳರ ಮನೆಗೇ ಹೋಗಿ ಮನವೊಲಿಸುವ ಯತ್ನ ಮಾಡಿದರು ಎನ್ನುವುದು. ಆದರೆ ಅವರು ಕೈಸುಟ್ಟುಕೊಂಡಿದ್ದು ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದಕ್ಕೆ ಪುರಾವೆ. ಶಾಸಕರಾದ ಎಸ್.ಟಿ. ಸೋಮಶೇಖರ್ ಮತ್ತು ಅರೆಬೈಲು ಶಿವರಾಮ ಹೆಬ್ಬಾರರು ಈಗಾಗಲೇ ಒಂದು ಕಾಲನ್ನು ಬಿಜೆಪಿಯಿಂದ ಹೊರಕ್ಕೆ ಇಟ್ಟಾಗಿದೆ. ಅವರ ಅನುಪಸ್ಥಿತಿ ವಿಶೇಷವಲ್ಲ. ಆದರೆ ಯತ್ನಾಳ್, ರಮೇಶ ಜಾರಕಿಹೊಳಿ ಶಾಸಕಾಂಗ ಪಕ್ಷದ ಸಭೆಯಿಂದ “ಸಭಾತ್ಯಾಗ” ಮಾಡಿದ್ದು ಮುಂದಿನ ದಿನಗಳಲ್ಲಿ ಬಿಜೆಪಿ ಎದುರಿಸಲಿರುವ ಬಿಕ್ಕಟ್ಟಿನ ಮುನ್ಸೂಚನೆ. ಸಿ.ಟಿ.ರವಿ ಮಧ್ಯ ಪ್ರದೇಶದ ಚುನಾವಣೆ ಪ್ರಚಾರದಲ್ಲಿರುವ ಕಾರಣ ಸಭೆಗೆ ಬಂದಿಲ್ಲ ಎಂಬ ವಿವರಣೆ ಬಂದಿದೆ. ಈ ವಿವರಣೆಯ ನಿಜ ಸುಳ್ಳು ಮುಂದಿನ ದಿನಗಳಲ್ಲಿ ಅನಾವರಣಗೊಳ್ಳಲಿದೆ.
ಪಕ್ಷದ ಅಧ್ಯಕ್ಷ ಮತ್ತು ವಿರೋಧ ಪಕ್ಷದ ನಾಯಕರಿಬ್ಬರೂ ದಕ್ಷಿಣ ಕರ್ನಾಟಕದವರು. ಬಿಜಪಿಯಿಂದ ಲೋಕಸಭೆಗೆ ಆಯ್ಕೆಯಾದವರಲ್ಲಿ ಒಂದು ಡಜನ್ ಸಂಸದರು ಉತ್ತರ ಕನಾಟಕ, ಕಲ್ಯಾಣ ಕರ್ನಾಟಕ ಭಾಗದವರು. ಆ ಪ್ರದೇಶದಲ್ಲಿ ಪಕ್ಷ ಸಾಕಷ್ಟು ಬೆಳೆದಿದೆ. ಆದರೆ ಪಕ್ಷದ ಅಧ್ಯಕ್ಷ ಸ್ಥಾನ, ವಿಪಕ್ಷ ನಾಯಕ ಸ್ಥಾನವೆರಡೂ ದಕ್ಷಿಣದ ಪಾಲಾಗಿದೆ. ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಸ್ಥಾನದಲ್ಲಿ ಯಾರನ್ನು ಪಕ್ಷ ಕುಳ್ಳಿರಿಸಲಿದೆಯೋ ಗೊತ್ತಿಲ್ಲ. ಮಹತ್ವದ ಎರಡು ಸ್ಥಾನಗಳು ಲಿಂಗಾಯತ, ಒಕ್ಕಲಿಗರ ಪಾಲಾಗಿರುವುದರಿಂದ ಈ ಸಮುದಾಯದವರಿಗೇ ಪರಿಷತ್ ವಿಪಕ್ಷ ಸ್ಥಾನ ಕೊಡುವ ಮತ್ತೊಂದು ದುಃಸಾಹಸಕ್ಕೆ ಪಕ್ಷದ ವರಿಷ್ಟ ಮಂಡಳಿ ಮುಂದಾಗದೆಂಬ ದೂರದ ಅಂದಾಜಿದೆ. ಒಂದಂತೂ ಸತ್ಯ. ಕರ್ನಾಟಕದ ವಿಚಾರದಲ್ಲಿ ಬಿಜೆಪಿ ಹೈಕಮಾಂಡ್ “ಹೈ ಕ್ಯಾ ಮೈಂಡ್” ಎಂಬಂತೆ ವರ್ತಿಸುತ್ತಿದೆ. ಈ ಮಾತನ್ನು ಕಾಂಗ್ರೆಸ್ ವಿಚಾರದಲ್ಲಿ ಆಡುತ್ತಿದ್ದ ಸಮಾಜ ಸ್ವಯಂ ಘೋಷಿತ ಅತ್ಯಂತ ಶಿಸ್ತಿನ ಪಕ್ಷದ ಬಗ್ಗೆ ಈಗ ಬೆರಳು ತೋರಿಸಿ ಆಡುವಂತಾಗಿದೆ.
ಇದನ್ನೂ ಓದಿ: ಮೊಗಸಾಲೆ ಅಂಕಣ: ಕಾಂಗ್ರೆಸ್ ಒಗ್ಗಟ್ಟು ಧೂಳಿಪಟ, ಹೈಕಮಾಂಡ್ ಗಾಳಿಪಟ