Site icon Vistara News

ಮೊಗಸಾಲೆ ಅಂಕಣ: ಇರುವೆ ಬಿಟ್ಟುಕೊಂಡ್ರಾ… ಆರಗ ಜ್ಞಾನೇಂದ್ರ?

araga jnanedra

ಸುಮ್ಮನೆ ಇರಲಾರದೆ ಇರುವೆ ಬಿಟ್ಟುಕೊಂಡರು ಎಂಬ ಗಾದೆಗೆ ಇತ್ತೀಚಿನ ಅತ್ಯುತ್ತಮ ಉದಾಹರಣೆ ಆರಗ ಜ್ಞಾನೇಂದ್ರ (Araga Jnanendra). ಪ್ರಜ್ಞಾವಂತ ಮತದಾರರೇ ಬಹು ಸಂಖ್ಯೆಯಲ್ಲಿರುವ ವಿಧಾನ ಸಭಾ ಕ್ಷೇತ್ರಗಳಲ್ಲಿ ಒಂದು ಎನ್ನಲಾಗುವ ತೀರ್ಥಹಳ್ಳಿಯಿಂದ ಹಲವು ಬಾರಿ ಆಯ್ಕೆಯಾಗಿರುವ ಅವರು ವಿಧಾನ ಸಭೆಯ ಹಿರಿಯ ಶಾಸಕರಲ್ಲಿ ಒಬ್ಬರು. ಅವರಿಗೆ ಎಳ್ಳಷ್ಟೂ ಅನುಭವದ ಕೊರತೆ ಇಲ್ಲ, ಕನಸಿನಲ್ಲೂ ನಿರೀಕ್ಷಿಸಿರದ ಗೃಹ ಸಚಿವ (home minister) ಪದವಿ ಅವರನ್ನು ಹುಡುಕಿಕೊಂಡು ಬಂತು. ಇದೆಲ್ಲ ಅವರನ್ನು ಮಾಗಿದ ಮನಸ್ಸಿನ ಮನುಷ್ಯನನ್ನಾಗಿಸಬೇಕಿತ್ತು. ಆದರೆ ಅದು ಆಗಲಿಲ್ಲ ಎನ್ನುವುದಕ್ಕೆ ಸ್ವತಃ ಅವರೇ ತಮ್ಮ ಮೈಮೇಲೆ ಬಿಟ್ಟುಕೊಂಡಿರುವ ಇರುವೆಗಳು.

ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು ಎನ್ನುವುದು ಮತ್ತೊಂದು ಗಾದೆ ಮಾತು. ಆ ಸಾಲಿಗೂ ಜ್ಞಾನೇಂದ್ರ ಸೇರಿದರು ಎನ್ನುವುದು ರಾಜ್ಯ ರಾಜಕಾರಣ ಮತ್ತೆ ಮತ್ತೆ ಅಸಹ್ಯದತ್ತ ಹೊರಳುತ್ತಿರುವುದನ್ನು ಹೇಳುತ್ತದೆ. ಹೇಟ್ ಸ್ಪೀಚ್‍ಗೆ (ಮಾತಿನಲ್ಲಿ ದ್ವೇಷ ಕಾರುವುದಕ್ಕೆ) ಒಂದಿಷ್ಟು ನಿರ್ಬಂಧಗಳಿವೆ. ಚುನಾವಣೆ ಸಮಯದಲ್ಲಿ ಅಮಲಿಗೆ ಬರುವ ನೀತಿ ಸಂಹಿತೆಯಲ್ಲಿ ದ್ವೇಷ ಭಾಷಣಕ್ಕೆ ಅವಕಾಶ ಇಲ್ಲವೇ ಇಲ್ಲ. ಯಾವುದೋ ಪಕ್ಷದ ಯಾರ ವಿರುದ್ಧವೋ ಬಾಯಿಗೆ ಬಂದುದನ್ನು ಆಡಿ ಸುಲಭದಲ್ಲಿ ಪಾರಾಗುವುದಕ್ಕೆ ನೀತಿ ಸಂಹಿತೆ ಸುತರಾಂ ಬಿಡುವುದಿಲ್ಲ. ಆದರೆ ದೇಶದಲ್ಲಿ ಸದಾ ಕಾಲವೂ ಚುನಾವಣೆ ಇರುವುದಿಲ್ಲ. ನಾಗರಿಕರೆಂದು ನಮ್ಮನ್ನು ನಾವೇ ಕರೆದುಕೊಳ್ಳುವವರು, ಆಚಾರವಿಲ್ಲದ ನಾಲಗೆ ನಿನ್ನ ನೀಚ ಬುದ್ಧಿಯ ಬಿಡು ನಾಲಗೆ ಎಂಬಂತೆ ನಮಗೆ ನಾವೇ ನಾಗರಿಕ ಮನಸ್ಸುಗಳು ಸಾರ್ವತ್ರಿಕವಾಗಿ ಒಪ್ಪುವಂಥ ಮರ್ಯಾದಸ್ತ ಸಮಾಜಕ್ಕೆ ಬೇಕಾದಂಥ ನೀತಿ ಸಂಹಿತೆಯನ್ನು ಸ್ವಯಂ ಅಳವಡಿಸಿಕೊಳ್ಳಬೇಕಿದೆ. ಆದರೆ ಆರಗ ಜ್ಞಾನೇಂದ್ರರು ನಾಲಗೆಯನ್ನು ಸಡಿಲಬಿಟ್ಟರೆಂದೇ ಈ ಹೊತ್ತು ಹತ್ತೂ ಮೂಲೆಗಳಿಂದ ಬರುತ್ತಿರುವ ಇರಿಯುವ ಬಾಣಗಳನ್ನು ಎದುರಿಸುವಂತಾಗಿದೆ.

ತಮ್ಮ ಮತ ಕ್ಷೇತ್ರ ತೀರ್ಥಹಳ್ಳಿಯಲ್ಲಿ ಅವರು ಮಾಡಿದ ಭಾಷಣದ ಮೂಲವಸ್ತು ಕಸ್ತೂರಿರಂಗನ್ ವರದಿಯನ್ನು ಯಥಾವತ್ ಜಾರಿಗೆ ತರುವುದಕ್ಕೆ ವಿರೋಧ ವ್ಯಕ್ತಪಡಿಸುವುದು. ಪಶ್ಚಿಮ ಘಟ್ಟದಲ್ಲಿ ಆಗಿರುವ ಲಕ್ಷಲಕ್ಷ ಹೆಕ್ಟೇರು ಒತ್ತುವರಿಯನ್ನು ನಿವಾರಿಸುವುದು ಎಂದರೆ ಪೀಳಿಗೆ ಪೀಳಿಗೆಯಿಂದ ಅಲ್ಲಿ ಮನೆಮಠ ಮಾಡಿಕೊಂಡು ಜಮೀನು ಕೃಷಿ ಮಾಡಿಕೊಂಡು ವಾಸಿಸುತ್ತಿರುವ ಸಹಸ್ರ ಸಹಸ್ರ ಕುಟುಂಬಗಳನ್ನು ಒಕ್ಕಲೆಬ್ಬಿಸುವುದು ಎಂದೇ ಅರ್ಥ. ಪಶ್ಚಿಮ ಘಟ್ಟದ ಸ್ಥಿತಿಗತಿಯನ್ನು ಮೊದಲಿಗೆ ಅಧ್ಯಯನ ಮಾಡಿದ್ದು ಗಾಡ್ಗೀಳ್ ಸಮಿತಿ. ಅವರ ವರದಿ ಬಂದ ಬಳಿಕವೇ ಅರಣ್ಯವಾಸಿಗಳೂ ತಮ್ಮವರು ಎಂಬ ಜ್ಞಾನೋದಯ ನಮ್ಮ ರಾಜಕಾರಣಿಗಳಿಗೆ ಆಗಿದ್ದು.
ಶಿಕ್ಷಣ, ಆರೋಗ್ಯ, ವಿದ್ಯುತ್, ಸಂಪರ್ಕ, ವಾಹನ ಸೌಲಭ್ಯ ಹೀಗೆ ಯಾವುದೇ ರೀತಿಯ ಸವಲತ್ತೂ ಇಲ್ಲದೆ ಆದಿಮಾನವರಂತೆ ಬದುಕುತ್ತಿರುವ, ಚುನಾವಣೆ ಸಮಯದಲ್ಲಿ ಮಾತ್ರವೇ ದೇಶೋದ್ಧಾರದ ಹೊಣೆ ಹೊತ್ತವರಿಗೆ ನೆನಪಾಗುವ ಹುಲು ಮಾನವರು ಈ ಆದಿವಾಸಿಗಳು. ಗಾಡ್ಗೀಳ್ ವರದಿ ಸೂಚಿಸಿದಂತೆ ಅವರೆಲ್ಲರ ಎತ್ತಂಗಡಿಯಾದರೆ ಮತ ಗಳಿಕೆ ಕಷ್ಟ ಎಂಬ ಹಿನ್ನೆಲೆಯಲ್ಲಿ ಆ ಪಕ್ಷ ಈ ಪಕ್ಷ ಎನ್ನದೆ ಎಲ್ಲ ರಾಜಕಾರಣಿಗಳೂ ಚುರುಕಾದರು. ಆದಿವಾಸಿಗಳಿಗೆ ಅಗತ್ಯ ಸೌಲಭ್ಯ ಒದಗಿಸುವ ಕೂಗು ಜೋರಾಗಿ ಕೇಳಿ ಬಂದಿದ್ದು ಆವಾಗ ಮತ್ತು ಅದೇ ಕೂಗು ಗಾಡ್ಗೀಳ್ ಸಮಿತಿ ವರದಿ ವಿರುದ್ಧದ ಕೂಗೂ ಆಯಿತು.

ಒತ್ತಡಕ್ಕೆ ಮಣಿದ ಕೇಂದ್ರ ಸರ್ಕಾರ ಗಾಡ್ಗೀಳರ ವರದಿಯನ್ನು ಮೂಲೆಗೆ ತಳ್ಳಿ ಹಾಕಿತು. ಇಸ್ರೋದ ಮಾಜಿ ಅಧ್ಯಕ್ಷ ಕಸ್ತೂರಿರಂಗನ್ ನೇತೃತ್ವದ ಇನ್ನೊಂದು ಸಮಿತಿ ರಚಿಸಿ ಅದರಿಂದ ವರದಿ ತರಿಸಿಕೊಂಡು ಅದನ್ನು ಜಾರಿಗೆ ತರುವ ವಿಚಾರದಲ್ಲಿ ಪಶ್ಚಿಮ ಘಟ್ಟ ಹಾದು ಹೋಗುವ ರಾಜ್ಯಗಳ ಅಭಿಪ್ರಾಯವನ್ನು ಕೇಳಿದೆ. ಕೇರಳ, ಕರ್ನಾಟಕ. ಗೋವಾ, ಮಹಾರಾಷ್ಟ್ರ ರಾಜ್ಯಗಳು ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕಿದೆ. ಪ್ರಸ್ತುತ ಕರ್ನಾಟಕದ ಅರಣ್ಯ ಸಚಿವ ಈಶ್ವರ ಖಂಡ್ರೆ. ಇತ್ತೀಚಿನ ಅವರ ಹೇಳಿಕೆ ಪ್ರಕಾರ “ಕಸ್ತೂರಿರಂಗನ್ ವರದಿ ಜಾರಿಗೆ ಸರ್ಕಾರ ಬದ್ಧ”. ನಂತರದಲ್ಲಿ ಎದುರಾದ ವಿರೋಧದ ಹಿನ್ನೆಲೆಯಲ್ಲಿ ತಾವು ಅಂಥ ಹೇಳಿಕೆ ಮಾಡಿಲ್ಲ ಎಂಬ ವಿವರಣೆಯನ್ನೂ ಅವರು ಕೊಟ್ಟಿದ್ದಾಗಿದೆ.

ಆರಗ ಜ್ಞಾನೇಂದ್ರರ ಕ್ಷೇತ್ರದಲ್ಲಿ ಮಲೆನಾಡಿನ ಇತರ ಬಹುತೇಕ ಕ್ಷೇತ್ರಗಳಂತೆ ಗಣನೀಯ ಪ್ರಮಾಣದಲ್ಲಿ ಅರಣ್ಯದ ಒತ್ತುವರಿಯಾಗಿದೆ. ಅವರ ಒಂದು ಹೇಳಿಕೆಯಲ್ಲಿ ಸತ್ಯಾಂಶವಿದೆ. ಅದೆಂದರೆ ಕಸ್ತೂರಿ ರಂಗನ್ ಸಮಿತಿ ಖುದ್ದು ಸ್ಥಳ ಪರಿಶೀಲನೆ ಮಾಡಿಲ್ಲ, ಬದಲಿಗೆ ಉಪಗ್ರಹ ಚಿತ್ರ ಆಧರಿಸಿ ಅರಣ್ಯ ಪ್ರದೇಶ ಎಷ್ಟೆಲ್ಲ ಒತ್ತುವರಿಯಾಗಿದೆ ಎಂಬ ತೀರ್ಮಾನಕ್ಕೆ ಬಂದಿದೆ. ಇದು ಅವೈಜ್ಞಾನಿಕ ವರದಿ. ಈ ಕ್ರಮ ಸರಿಯಾದುದಲ್ಲ, ಸ್ವೀಕಾರಾರ್ಹವೂ ಅಲ್ಲ ಎನ್ನುವುದಕ್ಕೆ ಶಾಸಕರಲ್ಲಿ ಅವರದೇ ಆದ ಕಾರಣಗಳಿವೆ. ಉಪಗ್ರಹ ಬಯಲು ಪ್ರದೇಶದ ಚಿತ್ರ ಕೊಡುತ್ತದೆ. ಅರಣ್ಯ ಪ್ರದೇಶದ ಚಿತ್ರ ರವಾನಿಸುತ್ತದೆ. ಭೂಮಿಯಿಂದ ಅದೆಷ್ಟೋ ಕಿಮೀ ಎತ್ತರದಲ್ಲಿ ಕೆಲಸ ಮಾಡುವ ಉಪಗ್ರಹ ರವಾನಿಸುವ ಚಿತ್ರಗಳಲ್ಲಿ ಅಡಿಕೆ ತೋಟವೂ ಅರಣ್ಯದಂತೆ ತೋರುತ್ತದೆ. ಇದನ್ನು ಆಧಾರವಾಗಿಟ್ಟುಕೊಂಡಿರುವ ವರದಿ ಆಧರಿಸಿ ಕ್ರಮಕ್ಕೆ ಮುಂದಾದರೆ ನೂರಾರು ವರ್ಷಗಳಿಂದ ಉತ್ತು ಬೆಳೆಯುತ್ತಿರುವ ರೈತರು ಬೀದಿ ಪಾಲಾಗುತ್ತಾರೆಂಬ ಆತಂಕ ಜ್ಞಾನೇಂದ್ರ ಅವರದು. ಇಷ್ಟು ಹೇಳಿ ಅವರು ಸುಮ್ಮನಾಗಿದ್ದರೆ ವಿಷಯದ ಗಾಂಭೀರ್ಯ ಇನ್ನಷ್ಟು ಹೆಚ್ಚುತ್ತಿತ್ತು.

ಆದರೆ ಎಷ್ಟೆಂದರೂ ಅವರೊಬ್ಬ ರಾಜಕಾರಣಿ. ಅಧಿಕಾರ ಕಳೆದುಕೊಂಡ ನೋವು ಒಂದೆಡೆ. ತಮ್ಮ ಪಕ್ಷ ಕಟುವಾಗಿ ವಿರೋಧಿಸುವ ಪಕ್ಷವೊಂದು ಅಧಿಕಾರ ಪೀಠದಲ್ಲಿ ಕೂತಿರುವ ಸಂಕಟ ಇನ್ನೊಂದೆಡೆ. ಅವರ ಪ್ರಹಾರ ಶುರುವಾಗಿದ್ದು ಅರಣ್ಯ ಸಚಿವ ಈಶ್ವರ ಖಂಡ್ರೆ ಮಾಡಿದರೆನ್ನಲಾದ ಹೇಳಿಕೆಯ ವಿರುದ್ಧ. ಮರ ಗಿಡ ಸಸಿ ನೆರಳು ಎಂದರೆ ಏನೆಂದೇ ಗೊತ್ತಿರದ ಬೀದರ್ ಜಿಲ್ಲೆಯ ಮನುಷ್ಯ ಅರಣ್ಯ ಮಂತ್ರಿಯಾಗಿದ್ದಾರೆ. ಅರಣ್ಯ ವಾಸಿಗಳ ನೋವು ಸಂಕಟ ಅವರಿಗೆ ಗೊತ್ತಿಲ್ಲ ಎಂದೆಲ್ಲ ಬೇಡವಾದ ಸಂಗತಿಗಳನ್ನಿಟ್ಟುಕೊಂಡು ಒಂದಿಷ್ಟು ಆರೋಪ ಮಾಡಿದ್ದು ಜ್ಞಾನೇಂದ್ರರಿಗೆ ಒಪ್ಪದ ನಡವಳಿಕೆ. ಸಭೆಯಲ್ಲಿದ್ದ ಜನರ ಶಿಳ್ಳೆ ಚಪ್ಪಾಳೆ ಕೇಕೆ ಮುಂತಾದವು ಜ್ಞಾನೇಂದ್ರರನ್ನು ಗಾಡಿ ಹತ್ತಿಸಿರಬೇಕು. ಅವರ ಮಾತಿನ ಏಟು ತಿರುಗಿದ್ದು ಏಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರತ್ತ. ಅವರ ತೊಗಲಿನ ಬಣ್ಣದತ್ತ. ಖರ್ಗೆ ಮೈಬಣ್ಣ ಕುರಿತಂತೆ ಜ್ಞಾನೇಂದ್ರ ಮಾಡಿರುವ ಕಾಮೆಂಟ್ ಮಾಜಿ ಸಚಿವರು ಇನ್ನೂ ಮಾಗಿಲ್ಲ; ಪಕ್ವವಾಗಿಲ್ಲ ಎನ್ನುವುದನ್ನು ಋಜುವಾತು ಮಾಡಿದೆ.

ಖರ್ಗೆಯವರನ್ನು ಕರ್ರಗೆ ಎಂದು ಕರೆಯುವವರು ಕಲ್ಯಾಣ ಕರ್ನಾಟಕದಲ್ಲೇ ಬಹಳ ಜನ ಇದ್ದಾರೆ. ಅದನ್ನು ಖರ್ಗೆಯವರು ಕ್ರೀಡಾ ಮನೋಭಾವದಲ್ಲಿ ಸ್ವೀಕರಿಸಿ ದೊಡ್ಡತನ ಮೆರೆದಿದ್ದಾರೆ. ಕಲಬುರ್ಗಿ ಕೇಂದ್ರಿತ ಧರ್ಮಸಿಂಗ್ ಮತ್ತು ಖರ್ಗೆಯವರ ಜೋಡಿಯನ್ನು ಧರಂಕರಂ ಎಂದವರಿದ್ದಾರೆ. ಆದರೆ ಈ ಮಾತಿನಲ್ಲಿ ವಿಷ ಇರಲಿಲ್ಲ ಎನ್ನುವುದು ಮತ್ತು ಆರಗ ಜ್ಞಾನೇಂದ್ರರ ಹೇಳಿಕೆಯಲ್ಲಿ ವಿಷದ ಛಾಯೆ ಇರುವುದು ಸದ್ಯದ ವಿವಾದಕ್ಕೆ ಆಹಾರವಾಗಿರುವ ಸಂಗತಿ.

ರಾಮಮೋಹರ ಲೋಹಿಯಾರು ಬಣ್ಣ ಮತ್ತು ಅದು ವ್ಯಕ್ತಿಗತ ನೆಲೆಯಲ್ಲಿ ತರುವ ಅಹಂಕಾರದ ಬಗ್ಗೆ ಭಾರತೀಯರನ್ನು ಆಗಾಗ ಎಚ್ಚರಿಸುವ ಕೆಲಸ ಮಾಡಿದ ಮುತ್ಸದ್ದಿ. ಬಣ್ಣ ಮತ್ತು ಭಾರತವನ್ನು ಒಮ್ಮೆ ಅವಲೋಕಿಸಿ ಈ ವಿಚಾರದಲ್ಲಿ ಮುಂದಕ್ಕೆ ಹೋಗೋಣ. ಭಾರತವನ್ನು ನೂರಾರು ವರ್ಷ ಆಳಿದ ಮೊಘಲರದು ಶ್ವೇತವರ್ಣದ ಚರ್ಮ. ಅವರ ತೊಗಲು ಕಂದು ಬಣ್ಣ/ ಕಪ್ಪು ಬಣ್ಣದ ಭಾರತೀಯರ ಮೇಲೆ ಮಾಡಿದ ಮೋಡಿ ಅಷ್ಟಿಷ್ಟಲ್ಲ. ನಂತರದಲ್ಲಿ ಎರಡು ನೂರು ವರ್ಷ ಕಾಲ ಫರಂಗೀಯ ಬ್ರಿಟಿಷರ ಆಡಳಿತ. ಕಪ್ಪು ಜನರನ್ನು ಕುಗ್ಗಿಸಿದ ಬ್ರಿಟಿಷರ ಕೆಂಪು ಬಣ್ಣ ಭಾರತೀಯರಲ್ಲಿ ಕೀಳರಿಮೆ ಮೂಡುವಂತೆ ಮಾಡಿದ್ದು ವಾಸ್ತವ. ಬಿಳಿ ಬಣ್ಣದ್ದೆಲ್ಲವೂ ಶ್ರೇಷ್ಠ ಕಪ್ಪು ಕನಿಷ್ಟ ಎಂಬ ಮನೋರೋಗಕ್ಕೆ ಬಲಿಯಾದವರು ಕಂದು ಕಪ್ಪು ಬಣ್ಣವೇ ಪ್ರಧಾನವಾದ ಭಾರತೀಯರು. ಮಗ ಎಷ್ಟೇ ಕಪ್ಪಾಗಿದ್ದರೂ ಸೈ ಬಿಳಿ ತೊಗಲಿನ ಸೊಸೆಯೇ ಬೇಕೆಂಬ ಮನೋಭಾವ ಈಗಲೂ ಬಹುತೇಕ ಭಾರತೀಯ ಕುಟುಂಬಗಳಲ್ಲಿದೆ. ಬಿಳಿ ಸೊಸೆ ಬೇಕೆಂಬ ಹಟದಲ್ಲಿ ಕರಿ ಬಣ್ಣದ ಮಗನಿಗೆ ಲಕ್ಷಾಂತರ ರೂಪಾಯಿ ವಧು ದಕ್ಷಿಣೆ ಕೊಟ್ಟು ಮದುವೆ ಮಾಡಿಸಿರುವ ಉದಾಹರಣೆಗಳು ಬೇಕಷ್ಟಿವೆ. ಇದು ಕಪ್ಪಿನ ವಿರುದ್ಧದ ಬಿಳಿ ವ್ಯಾಮೋಹ ಎಂಬ ರೋಗಗ್ರಸ್ತ ಮನಃಸ್ಥಿತಿಯ ಬಾಹ್ಯ ಲಕ್ಷಣ.

ಕೆಲ ವರ್ಷಗಳ ಹಿಂದಿನ ಮಾತು. ಬಹುಶ್ರುತ ವಿದ್ವಾಂಸರೊಬ್ಬರಿಂದ ಮಹಾಭಾರತ ಕುರಿತ ಉಪನ್ಯಾಸ ಸರಣಿ ನಡೆದಿತ್ತು. ದ್ರೌಪದಿ ಸ್ವಯಂವರದ ಪ್ರಸಂಗ. ದ್ರೌಪದಿಯನ್ನು ವರಿಸುವ ಆಸೆಯಲ್ಲಿ ರಾಜಮಹಾರಾಜರ ದಂಡೇ ವಿವಾಹ ಮಂಟಪದಲ್ಲಿ ನೆರೆದಿತ್ತು. ಇದನ್ನು ಬಣ್ಣಿಸುವ ಭರದಲ್ಲಿ ಉಪನ್ಯಾಸಕರು “ದ್ರೌಪದಿ ಅಂಥ ಸುಂದರಿಯೇನೂ ಅಲ್ಲ, ಆಕೆ ಕಪ್ಪು” ಎಂದುಬಿಟ್ಟರು. ಮರು ದಿವಸ ಮುಂದುವರಿದ ಉಪನ್ಯಾಸದ ಸಮಯದಲ್ಲಿ ತಾವಾಡಿದ ದ್ರೌಪದಿ ಮೈಬಣ್ಣ ಕುರಿತಾದ ಮಾತಿಗೆ ವಿಷಾದ ವ್ಯಕ್ತಪಡಿಸಿದರು. ಇದು ಪ್ರಜ್ಞಾವಂತರು ತಮ್ಮ ತಪ್ಪನ್ನು ತಿದ್ದಿಕೊಳ್ಳುವ ಗೌರವದ ಮಾದರಿ. ರಾಜಕಾರಣಿಗಳಿಂದ ಇಂಥ ಮಾದರಿಯನ್ನು ನಾವು ನೋಡಲಾರೆವು.

ಇದನ್ನೂ ಓದಿ: ಮೊಗಸಾಲೆ ಅಂಕಣ: ಹೆಡೆ ತುಳಿದ ಹಾವಿನಂತಾಗಿರುವ ಬಿ.ಕೆ ಹರಿಪ್ರಸಾದ್‌ ರವಾನಿಸುತ್ತಿರುವ ಸಂದೇಶವೇನು?

ತಾವಾಡಿರುವ ಮಾತುಗಳಿಂದ ಯಾರಿಗಾದರೂ ನೋವಾಗಿದ್ದರೆ ತಾವು ವಿಷಾದ ವ್ಯಕ್ತಪಡಿಸುವುದಾಗಿ ಜ್ಞಾನೇಂದ್ರರು ಷರತ್ ಸಹಿತದ ಹೇಳಿಕೆ ನೀಡಿ ವಿವಾದವನ್ನು ತಣ್ಣಗಾಗಿಸುವ ಯತ್ನ ಮಾಡಿದ್ದಾರೆ. ಯಾರಿಗಾದರೂ ನೋವಾಗಿದ್ದರೆ ಎನ್ನುವ ಅವರ ಹೇಳಿಕೆಯಲ್ಲೇ ಅವರ ಮನಸ್ಸು ಹೇಳಿಕೆಗೆ ಒಪ್ಪಿಲ್ಲ ಎನ್ನುವುದನ್ನು ಹೇಳುತ್ತಿದೆ. ಮಾತಿನ ಭರದಲ್ಲಿ ಖರ್ಗೆಯವರ ಮನಸ್ಸಿಗೆ ನೋವಾಗುವ ಮಾತಾಡಿದ್ದೇನೆ, ತಪ್ಪಿನ ಅರಿವಾಗಿದೆ ಕ್ಷಮೆ ಕೇಳುತ್ತೇನೆ ಎನ್ನುವುದಕ್ಕೂ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ ಎನ್ನುವುದಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಜ್ಞಾನೇಂದ್ರ ಈ ವ್ಯತ್ಯಾಸವನ್ನು ಅರ್ಥ ಮಾಡಿಕೊಂಡಿಲ್ಲ ಎನ್ನುವುದು ಅವರನ್ನು ಬಲ್ಲ ಅನೇಕರ ಅಭಿಮತ.

ವರ್ಣಭೇದದ ಪರಿಣಾಮವನ್ನು ಜಗತ್ತು ಎದುರಿಸುತ್ತ ಬಂದಿದೆ. ಮನುಷ್ಯ ವಿಕಾಸ ಪಥದಲ್ಲಿ ಪೀಳಿಗೆಯಿಂದ ಪೀಳಿಗೆಗೆ ವಂಶವಾಹಿ ಸತತ ಎಂಬಂತೆ ಹರಿಯುತ್ತಿರುತ್ತದೆ ಎನ್ನುತ್ತದೆ ಜೀವ ವಿಕಾಸ ವಿಜ್ಞಾನ. ಮೊಘಲರ ನಂತರ ಬ್ರಿಟಿಷರ ಆಳ್ವಿಕೆ ಕಾಲದಲ್ಲಿ ಬಿಳಿಯದೇ ಶ್ರೇಷ್ಠ ಎಂಬ ಒಳಮನಸ್ಸು ಕ್ರಮೇಣ ವಂಶವಾಹಿಯ ಭಾಗವಾಗಿ ಮುಂದುವರಿದಿರುತ್ತದೆ. ಕಪ್ಪಿನ ವಿರುದ್ಧ ಮನಸ್ಸು ಒಳಗೊಳಗೇ ವಿಷ ಕಾರುತ್ತಿರುತ್ತದೆ. ಇಂಥ ಬಣ್ಣದ ಕಾರೇ ಬೇಕು ಎಂದು ಅರ್ಜಿ ಹಾಕಿದಂತೆ ಮನವಿ ಮಾಡಿಕೊಳ್ಳಲು ಹುಟ್ಟಿ ಜಗತ್ತಿಗೆ ಬರುವವರಿಗೆ ಅವಕಾಶವಿಲ್ಲ. ಜನ್ಮ ಪೂರ್ವದಲ್ಲಿ ಇದೇ ಜಾತಿಯಲ್ಲಿ ಬಿಳಿ ಬಣ್ಣದಲ್ಲಿ ಜನಿಸುವ ಅವಕಾಶ ಕೋರಲು ಎಲ್ಲಿದೆ ಅವಕಾಶ. ಖರ್ಗೆಯವರದು ಕಪ್ಪು ಬಣ್ಣ. ನಮ್ಮ ದೇಶಕ್ಕೆ ಸಂವಿಧಾನ ಕೊಟ್ಟ ಅಂಬೇಡ್ಕರ್ ಕಪ್ಪು ಬಣ್ಣದವರು. ಆಹಾರ ಕ್ರಾಂತಿಯ ಹರಿಕಾರ ಬಾಬೂ ಜಗಜೀವನ ರಾಂ ಕಡು ಕಪ್ಪು ಬಣ್ಣದವರು. ಲೋಕೋತ್ತರ ಕಾವ್ಯ ಕೊಟ್ಟ ವಾಲ್ಮೀಕಿ, ವ್ಯಾಸರು ಕಪ್ಪು ಬಣ್ಣದವರು. ಬಣ್ಣದಲ್ಲಿ ಜರಿಯುವಂಥದು ಎಲ್ಲಿದೆ ಜ್ಞಾನೇಂದ್ರರೇ…?

ಇದನ್ನೂ ಓದಿ: ಮೊಗಸಾಲೆ ಅಂಕಣ: ಯಾರು ಹಿತವರು ನಮಗೆ ಈ ಎರಡು ಒಕ್ಕೂಟದೊಳಗೆ?

Exit mobile version