Site icon Vistara News

ಮೊಗಸಾಲೆ ಅಂಕಣ : ಮುಂಬರುವ ಚುನಾವಣೆ ಗೆಲ್ಲಲು ಕಾಂಗ್ರೆಸ್‌ ಸರ್ಕಾರದಿಂದ ‘ಗ್ಯಾರಂಟಿ’ಗಳ ಚಲಾವಣೆ!

Siddaramaiah

ರಾಜ್ಯದಲ್ಲಿ ಅಧಿಕಾರ ಸೂತ್ರವನ್ನು ನಿರುಮ್ಮಳ ಬಹುಮತದೊಂದಿಗೆ ಹಿಡಿದಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಚುನಾವಣಾ ಪೂರ್ವದಲ್ಲಿ ತಾನು ಜನತೆಗೆ ನೀಡಿದ್ದ ಐದು ಭರವಸೆಗಳನ್ನು ಮೀನಮೇಷ ಮಾಡದೆ ಜಾರಿಗೊಳಿಸುವ ತೀರ್ಮಾನಕ್ಕೆ ಬಂದಿರುವುದು ಮೆಚ್ಚಬೇಕಾಗಿರುವ ರಾಜಕೀಯ ನಿರ್ಧಾರ. ಈ ಭರವಸೆಗಳ ಅನುಷ್ಠಾನಕ್ಕೆ ಸರ್ಕಾರ ಎಲ್ಲಿಂದ ಹಣ ತರುತ್ತದೆ ಎನ್ನುವುದು ವಿರೋಧ ಪಕ್ಷಗಳ ಮತ್ತು ಬಹುತೇಕ ಜನರ ಪ್ರಶ್ನೆ. ಸಿದ್ದರಾಮಯ್ಯ ಇಷ್ಟರಲ್ಲೇ ಮಂಡಿಸಲಿರುವ ವಾರ್ಷಿಕ ಬಜೆಟ್ ಈ ಸಂದೇಹ ಪರಿಹರಿಸಬಹುದು.

ಇದು ಸಿದ್ದರಾಮಯ್ಯ ಮಂಡಿಸಲಿರುವ ಹದಿನಾಲ್ಕನೇ ಬಜೆಟ್. ಈ ಸಂಖ್ಯೆಯಲ್ಲಿ ಬಜೆಟ್ ಮಂಡಿಸಿರುವ ಖ್ಯಾತಿ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರ ಹೆಸರಲ್ಲಿದ್ದು ಅದನ್ನು ಸಿದ್ದರಾಮಯ್ಯ ಸರಿಗಟ್ಟಲಿದ್ದಾರೆ. ಹದಿನೈದು ಬಜೆಟ್ ಮಂಡಿಸಿದರೆ ದಾಖಲೆ ಅವರ ಹೆಸರಿಗೆ ವರ್ಗವಾಗುತ್ತದೆ. ಆ ಗುರಿ ಸಿದ್ದರಾಮಯ್ಯನವರ ಮುಂದೆ ಇದೆ. ಅಂದಹಾಗೆ ಸಿದ್ದರಾಮಯ್ಯ ರಾಜಕೀಯ ಮುಂಚೂಣಿಗೆ ಬಂದುದು, ಮೊದಲಿಗೆ ಸಚಿವರಾಗಿದ್ದು ಹೆಗಡೆ ಕಾರಣವಾಗಿ.

ಐದು ಭರವಸೆಗಳನ್ನು ಇಷ್ಟೆಲ್ಲ ಬೇಗ ಸರ್ಕಾರ ಈಡೇರಿಸುವುದಿಲ್ಲ ಎನ್ನುವುದು ವಿರೋಧ ಪಕ್ಷಗಳ ಮುಖ್ಯವಾಗಿ ಭಾರತೀಯ ಜನತಾ ಪಕ್ಷದ ನಿಲುವಾಗಿತ್ತು. ಈ ಐದೂ ಭರವಸೆ ಜಾರಿಗೆ ಕೋಟ್ಯಂತರ ಹಣದ ಅಗತ್ಯವಿದೆ. ಕೊರತೆ ಬಜೆಟ್‌ನಲ್ಲಿ ನರಳುತ್ತ, ಯೋಜನಾ ವೆಚ್ಚಕ್ಕೆ ಸಾಲ ಮಾಡುವ ಸ್ಥಿತಿಯಲ್ಲಿರುವ ರಾಜ್ಯದಲ್ಲಿ ಈ ಭರವಸೆಗಳ ಜಾರಿಗೆ ಹಣ ಎಲ್ಲಿಂದ ಎನ್ನುವುದು ಬಿಜೆಪಿ ಪ್ರಶ್ನೆ. ರಾಜ್ಯದ ಮೇಲೆ ಈಗ ಐದು ಲಕ್ಷ ಅರವತ್ತು ಸಾವಿರ ಕೋಟಿಗೂ ಹೆಚ್ಚಿನ ಮೊತ್ತದ ಸಾಲವಿದೆ. ಸಂಪನ್ಮೂಲ ಕ್ರೋಡೀಕರಣಕ್ಕೆ ಮಾರ್ಗೋಪಾಯ ಬಂದ್ ಆದರೆ ಸಾಲ ಮಾಡುವುದು ಅನಿವಾರ್ಯ. ಈ ಕೆಲಸವನ್ನು ಈ ಹಿಂದಿನ ಬಿ.ಎಸ್.ಯಡಿಯೂರಪ್ಪ-ಬಸವರಾಜ ಬೊಮ್ಮಾಯಿ ಸರ್ಕಾರಗಳು ಮಾಡಿವೆ. ಅದಕ್ಕೂ ಮೊದಲಿದ್ದ ಸಿದ್ದರಾಮಯ್ಯ ಸರ್ಕಾರ ಕೂಡಾ ಮಾಡಿದೆ. ಅದಕ್ಕೂ ಮೊದಲು ಸಾಲ ಮಾಡುವುದು ಮರ್ಯಾದಸ್ತ ಸರ್ಕಾರದ ಕೆಲಸವಲ್ಲ ಎಂಬ ಅಂಜಿಕೆ ಕಾಣಿಸುತ್ತಿತ್ತು. ಈಗ ಹಾಗೇನೂ ಇಲ್ಲ; ಸಾಲ ಮಡಿಯಾದರೂ ಸೈ ತುಪ್ಪ ತಿನ್ನು ಎಂಬ ನಿಲುವಿಗೆ ಸರ್ಕಾರಗಳು ಬಂದಿವೆ. ಈ ಹಿನ್ನೆಲೆಯಲ್ಲಿ ನಮ್ಮ ಮೇಲಿರುವ ಸಾಲದ ಋಣಭಾರ ಸುಲಭವಾಗಿ ಊರ್ಧ್ವಮುಖಿಯಾಗಿ ಚಲಿಸಲಿದೆ.

ಅಧಿಕಾರಕ್ಕೆ ಬರುವ ಯಾವುದೇ ಪಕ್ಷ ಸಾಮಾನ್ಯವಾಗಿ ಮತದಾರರಿಗೆ ಹೇಳುವುದೆಂದರೆ ಭರವಸೆಗಳನ್ನು ಈಡೇರಿಸುವುದಕ್ಕೆ ಐದು ವರ್ಷ ಕಾಲಾವಕಾಶವಿದೆ ಎಂಬ ಸಬೂಬು. ಪ್ರಸ್ತುತ ಸರ್ಕಾರ ಈ ಐದು ಭರವಸೆ ಅನುಷ್ಠಾನದ ವಿಚಾರದಲ್ಲಿ ಯಾವುದೇ ಕುರುಡು ಸಬೂಬನ್ನೂ ಮುಂದಿಟ್ಟಿಲ್ಲ ಎನ್ನುವುದು ಪ್ರಶಂಸನೀಯ. ಕಷ್ಟವೋ ಕಾರ್ಪಣ್ಯವೋ ಜಾರಿ ಮಾಡುತ್ತೇನೆಂಬ ಛಲದಲ್ಲಿ ಅದು ಸಾಗಿದೆ. ಆರ್ಥಿಕ ಹೊರೆಯನ್ನು ನಿಭಾಯಿಸುವ ಭುಜಶಕ್ತಿ ತಮ್ಮಲ್ಲಿದೆ ಎಂದು ಸಿದ್ದರಾಮಯ್ಯ ಹೇಳಿಕೊಂಡಿದ್ದಾರೆ. ಆದರೆ ಈ ಬಗೆಯ ಛಲಕ್ಕೆ ಮುಖ್ಯ ಕಾರಣವಾಗಿರುವ ರಾಜಕೀಯ ಆಯಾಮವೂ ಒಂದಿದೆ. ಈ ಆಯಾಮವೇ ಸರ್ಕಾರದ ಮೂಗು ಹಿಡಿದು ಈ ಭರವಸೆಗಳನ್ನು ಅಮಲಿಗೆ ತರುವಂತೆ ಮಾಡಿದೆ. ಮೂಗು ಹಿಡಿದಿರುವುದು ಸರಮಾಲೆಯಂತೆ ಎದುರಾಗಲಿರುವ ಚುನಾವಣೆ ಗುಮ್ಮ.

224 ಸ್ಥಾನ ಬಲದ ವಿಧಾನ ಸಭೆಯಲ್ಲಿ 135 ಶಾಸಕರು ಕಾಂಗ್ರೆಸ್‌ನವರು. ಇಷ್ಟರಲ್ಲೇ ಆಂಗ್ಲೋ ಇಂಡಿಯನ್ ಸಮುದಾಯಕ್ಕೆ ಸೇರಿದವರೊಬ್ಬರನ್ನು ವಿಧಾನ ಸಭೆಗೆ ನಾಮಕರಣ ಮಾಡಬೇಕಿದೆ. ನಾಮನಿರ್ದೇಶಿತ ಶಾಸಕರಿಗೆ ಓಟಿನ ಅಧಿಕಾರ ಇರುವುದಿಲ್ಲ ಆದರೆ ಅವರು ಸದನದಲ್ಲಿ ಕುಳಿತುಕೊಳ್ಳುವುದರಿಂದ ಕಾಂಗ್ರೆಸ್ ಶಾಸಕ ಬಲ 136ಕ್ಕೆ ಏರುತ್ತದೆ. ಯಾರೂ ಅಲ್ಲಾಡಿಸಲಾಗದ ಶಾಸಕ ಬಲದಲ್ಲಿದ್ದರೂ ಆಡಳಿತ ಪಕ್ಷವನ್ನು ಚುನಾವಣಾ ಗುಮ್ಮ ಬೆನ್ನು ಹತ್ತಿದೆ. ಈ ಗುಮ್ಮವೇ ಐದು ಭರವಸೆಗಳನ್ನು ತಾಪಡತೋಪಡು ಅನುಷ್ಠಾನಕ್ಕೆ ತರುವಂತೆ ಒತ್ತಡ ಹೇರಿದೆ.

ಮೊದಲ ಗುಮ್ಮವೆಂದರೆ ಬೆಂಗಳೂರು ಬೃಹತ್ ಮಹಾ ನಗರ ಪಾಲಿಕೆ ಚುನಾವಣೆ. ಎರಡೂವರೆ ವರ್ಷದ ಹಿಂದೆ ಬಿಬಿಎಂಪಿ ಚುನಾವಣೆ ಅವಧಿ ಮುಗಿದು ಅಧಿಕಾರಿಗಳ ದರ್ಬಾರು ಸಾಗಿರುವ ಸ್ಥಳೀಯ ಸಂಸ್ಥೆ ಇದು. ತನ್ನ ಆಡಳಿತ ವೈಖರಿ ನೋಡಿರುವ ಬೆಂಗಳೂರು ನಾಗರಿಕರು ಬರೆ ಎಳೆಯಬಹುದೆಂಬ ಭಯದಲ್ಲಿ ಎರಡೂವರೆ ವರ್ಷ ಜನ ಪ್ರತಿನಿಧಿ ಇಲ್ಲದ ಪಾಲಿಕೆ ಇದಾಗಿತ್ತು. ಬರೋಬ್ಬರಿ 243 ಸದಸ್ಯ ಬಲದ -ವಿಧಾನ ಸಭೆಗಿಂತ ಹೆಚ್ಚು ಸದಸ್ಯ ಬಲ- ಪಾಲಿಕೆಗೆ ಈಗ ಚುನಾವಣೆ ನಡೆದರೆ ಅದರ ಲಾಭ ಕಾಂಗ್ರೆಸ್‌ಗೆ ಖಂಡಿತ. 1982ರಲ್ಲಿ ರಾಜ್ಯದಲ್ಲಿ ರಾಮಕೃಷ್ಣ ಹೆಗಡೆ ನೇತೃತ್ವದ ಜನತಾ ಪಕ್ಷದ ಸರ್ಕಾರ ಅಧಿಕಾರಕ್ಕೆ ಬಂದಾಗ ಬೆಂಗಳೂರು ಮಹಾ ನಗರ ಪಾಲಿಕೆಗೆ ಹತ್ತು ವರ್ಷ ಕಾಲ ಚುನಾವಣೆಯೇ ನಡೆದಿರಲಿಲ್ಲ. ದೇವರಾಜ ಅರಸು, ಗುಂಡೂರಾವ್ ಅವಧಿ ಇದು. ಜನತಾ ಸರ್ಕಾರ ಯಾವುದೇ ವಿಳಂಬ ಮಾಡದೆ ಚುನಾವಣೆ ನಡೆಸಿದಾಗ ಭರ್ಜರಿ ಜಯ ಅದರದಾಯಿತು. ಈಗ ಕಾಂಗ್ರೆಸ್‌ಗೆ ಅಂಥ ಅವಕಾಶವಿದೆ. ಐದು ಭರವಸೆಗಳ ಅನುಷ್ಠಾನ ವಿಚಾರದಲ್ಲಿ ಈ ಸರ್ಕಾರ ಹಿಂದೆಮುಂದೆ ನೋಡಿದ್ದರೆ ಅದು ಬಿಬಿಎಂಪಿ ಚುನಾವಣೆಯಲ್ಲಿ ಪ್ರತಿಕೂಲ ಪರಿಣಾಮ ಬೀರುವ ಗುಮ್ಮ ಆಗಿತ್ತು. ಸರ್ಕಾರ ಅಷ್ಟರಮಟ್ಟಿಗೆ ಬಚಾವ್ ಆಗುವ ಲಕ್ಷಣ ಸ್ಪಷ್ಟವಾಗಿದೆ.

ಇದಲ್ಲದೆ ರಾಜ್ಯದ ಪಟ್ಟಣ ಪಂಚಾಯತ್, ಪುರಸಭೆ, ನಗರ ಸಭೆ, ನಗರಪಾಲಿಕೆ… ಹೀಗೆ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ಹತ್ತಿರ ಹತ್ತಿರವಾಗುತ್ತಿದೆ. ಈ ಭರವಸೆಗಳನ್ನು ಅನುಷ್ಠಾನಗೊಳಿಸದೇ ಮತ ಕೇಳುವ ಮುಖ ಆಡಳಿತ ಪಕ್ಷಕ್ಕೆ ಇರುವುದಿಲ್ಲ. ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿಂದೆಯೇ ತಾಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಚುನಾವಣೆ ಇದೆ. ಸಾಲು ಸಾಲು ಚುನವಣೆಯನ್ನು ಗೆಲ್ಲಲೇ ಬೇಕಾದ ಅನಿವಾರ್ಯ ಆಡಳಿತಾರೂಢ ಕಾಂಗ್ರೆಸ್‌ಗೆ ಇದೆ. ಈ ಅನಿವಾರ್ಯ ದೊಡ್ಡ ಗುಮ್ಮನಂತೆ ಕಾಡುತ್ತಿರುವುದು ಮುಂದಿನ 10-11 ತಿಂಗಳಲ್ಲಿ ಬರಲಿರುವ ಲೋಕಸಭಾ ಚುನಾವಣೆ.

ವಿಧಾನ ಸಭೆಗೆ 2018ರಲ್ಲಿ ಚುನಾವಣೆ ನಡೆದಾಗ ಬಿಜೆಪಿ ಗೆದ್ದುದು 104 ಕ್ಷೇತ್ರಗಳನ್ನು. ಅಲ್ಲಿಂದ ಮುಂದಕ್ಕೆ ಕೆಲವೇ ತಿಂಗಳಲ್ಲಿ 2019ರ ಲೋಕಸಭಾ ಚುನಾವಣೆ ನಡೆಯಿತು. ಆ ಚುನಾವಣೆಯಲ್ಲಿ ಬಿಜೆಪಿ 173 ವಿಧಾನ ಸಭಾ ಕ್ಷೇತ್ರಗಳಲ್ಲಿ ಬಹುಮತ ಪಡೆಯಿತು. 28ರಲ್ಲಿ 25 ಸ್ಥಾನ ಅದರ ಕೈವಶವಾಯಿತು. ಕಾಂಗ್ರೆಸ್, ಜೆಡಿಎಸ್ ತಲಾ ಒಂದು ಸ್ಥಾನ, ಪಕ್ಷೇತರ ಅಭ್ಯರ್ಥಿ ಒಂದು ಸ್ಥಾನ ಪಡೆದರು. ಈ ಬಾರಿ ಹದಿನೈದಾದರೂ ಲೋಕಸಭಾ ಕ್ಷೇತ್ರಗಳನ್ನು ಗೆಲ್ಲುವ ಗುರಿಯನ್ನು ಕಾಂಗ್ರೆಸ್ ಹಾಕಿಕೊಂಡಿದೆ. ಐದು ಭರವಸೆ ಜಾರಿಯಲ್ಲಿ ಮಾಡುವ ಯವುದೇ ವಿಳಂಬ ಅದರ ಚುನಾವಣಾ ಅದೃಷ್ಟಕ್ಕೆ ಗುಮ್ಮವಾಗಿ ಕಾಡಬಹುದೆಂಬ ಸಹಜ ಆತಂಕದಲ್ಲಿ ಸರ್ಕಾರ ಭರವಸೆಗಳು ಅನುಷ್ಠಾನದ ವಿಚಾರದಲ್ಲಿ ತಡ ಮಾಡಿಲ್ಲ; ಮಾಡುವಂತಿಲ್ಲ.

ತೆಲಂಗಾಣ, ರಾಜಸ್ಥಾನ, ಮಧ್ಯ ಪ್ರದೇಶ, ಛತ್ತೀಸ್‌ಗಢ ವಿಧಾನಸಭೆಗಳಿಗೆ ಈ 2013ರ ವರ್ಷದಲ್ಲಿ ಇನ್ನು ಕೆಲವೇ ತಿಂಗಳಲ್ಲಿ ಚುನಾವಣೆ ನಡೆಯಬೇಕಿದೆ. ಮಧ್ಯಪ್ರದೇಶದಲ್ಲಿ ಬಿಜೆಪಿ; ತೆಲಂಗಾಣದಲ್ಲಿ ಬಿಆರ್‌ಎಸ್; ರಾಜಸ್ಥಾನ, ಛತ್ತೀಸ್‌ಗಢದಲ್ಲಿ ಕಾಂಗ್ರೆಸ್ ಸರ್ಕಾರವಿದೆ. ಕರ್ನಾಟಕದಲ್ಲಿ ಸಿಕ್ಕಿರುವ ಜಯದಿಂದ ಕಾಂಗ್ರೆಸ್‌ನಲ್ಲಿ ಹೊಸ ಹುರುಪು ಹುಮ್ಮಸ್ಸು ಒಡೆದು ಕಾಣುತ್ತಿದೆ. ರಾಜಸ್ಥಾನ, ಛತ್ತೀಸಗಢವನ್ನು ಕೈಯಲ್ಲೇ ಉಳಿಸಿಕೊಳ್ಳುವುದರ ಜೊತೆಗೆ ಮಧ್ಯಪ್ರದೇಶ, ತೆಲಂಗಾಣವನ್ನು ಹಸ್ತವಶ ಮಾಡಿಕೊಳ್ಳುವ ಆತ್ಮ ಸ್ಥೈರ್ಯ ಆ ಪಕ್ಷದಲ್ಲಿ ವೃದ್ಧಿಸುತ್ತಿದೆ. ಆ ರಾಜ್ಯಗಳ ವಿಧಾನ ಸಭಾ ಚುನಾವಣಾ ಪ್ರಣಾಳಿಕೆಯಲ್ಲಿ ಕರ್ನಾಟಕ ಕಾಂಗ್ರೆಸ್ ಘೋಷಿಸಿದ ಐದು ಭರವಸೆಗಳು ಮುಂಚೂಣಿಗೆ ಬರುವ ಸಾಧ್ಯತೆಯನ್ನು ಅಲ್ಲಗಳೆಯಲು ಕಾರಣ ಕಾಣಿಸುತ್ತಿಲ್ಲ.

ಈ ಅಂಕಣವನ್ನೂ ಓದಿ: ಮೊಗಸಾಲೆ ಅಂಕಣ: ಸಿಎಂ ಪದವಿ ಹಂಚಿಕೆ: ʼಕೈʼಕಮಾಂಡ್‌ ಮೌನದ ಹಿಂದೆ ಏನು ಸಂದೇಶವಿದೆ?

ಇದು ಕೇವಲ ಚುನಾವಣಾ ಭರವಸೆಗಳಷ್ಟೇ ಅಲ್ಲ; ಈ ಐದೂ ಆಶ್ವಾಸನೆಗಳನ್ನು ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿದ್ದು ಈ ರಾಜ್ಯಗಳಲ್ಲೂ ಅನುಷ್ಠಾನಕ್ಕೆ ತರುತ್ತೇವೆಂದು ಕಾಂಗ್ರೆಸ್ ನಾಯಕತ್ವ ಹೇಳಿಕೊಳ್ಳಲು ಪಂಚ ಭರವಸೆ ಕಾರ್ಯಾನುಷ್ಠಾನ ನೆರವಿಗೆ ಬರುತ್ತದೆ. ಇಲ್ಲಿ ಕರ್ನಾಟಕದಲ್ಲಿ ಚುನಾವಣಾ ಗುಮ್ಮ ಆ ಕೆಲಸ ಮಾಡಿಸಿದ್ದರೆ ಬೇರೆ ಇತರ ರಾಜ್ಯ ಚುನಾವಣೆಗಳಲ್ಲಿ ವರಪ್ರದವಾಗುವ ಸೂಚನೆ ಇದೆ. ರಾಷ್ಟ್ರೀಯ ಕಾಂಗ್ರೆಸ್‌ಗೆ ಕರ್ನಾಟಕ ಕಾಂಗ್ರೆಸ್ ಮಾದರಿಯಾಗಿದೆ ಎಂದೂ ವ್ಯಾಖ್ಯಾನಿಸಬಹುದು.

ಇನ್ನಷ್ಟು ವಿಚಾರಪ್ರಚೋದನೆಯ ಅಂಕಣಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Exit mobile version