ಕರ್ನಾಟಕದ ಕಾಂಗ್ರೆಸ್‍ನ (Karnataka congress) ಕಾರ್ಯವೈಖರಿಯಲ್ಲಿ ಯಾವತ್ತೂ ಕಾಣಿಸಿಕೊಂಡಿರದಂಥ ಬಿಕ್ಕಟ್ಟು ಸೃಷ್ಟಿಯಾಗಿದ್ದು ಪಕ್ಷದ ಹೈಕಮಾಂಡ್ ಹಂತದಲ್ಲಿ ಊಹಾತೀತ ಸಮಸ್ಯೆ ಧುತ್ತೆಂದು ಒಕ್ಕರಿಸಿದೆ. ಮುಖ್ಯಮಂತ್ರಿ ಸ್ಥಾನದ ವಿಚಾರದಲ್ಲಿ ತಲೆಗೊಂದು ಹೇಳಿಕೆ ಕೊಡಕೂಡದೆಂದೂ ಪಕ್ಷದ ಆದೇಶವನ್ನು ಉಲ್ಲಂಘಿಸಿದವರು ಶಿಸ್ತುಕ್ರಮಕ್ಕೆ ಒಳಗಾಗ ಬೇಕಾಗುತ್ತದೆಂದೂ ಹೈಕಮಾಂಡ್‍ನ ಪ್ರತಿನಿಧಿಗಳಾಗಿ ಬೆಂಗಳೂರಿಗೆ ದೌಡಾಯಿಸಿದ ಕೆ.ಸಿ.ವೇಣುಗೋಪಾಲ್ ಮತ್ತು ರಣದೀಪ್ ಸುರ್ಜೆವಾಲಾ ಖಡಕ್ ಸೂಚನೆ ನೀಡಿದ ಬಳಿಕವೂ ಫಲಿತಾಂಶ ಯಥಾ ಸ್ಥಿತಿಯಲ್ಲೇ ಇರುವುದು ಬಿಕ್ಕಟ್ಟಿನ ತೀವ್ರತೆ ಯಾವ ಮಟ್ಟದಲ್ಲಿದೆ ಎನ್ನುವುದನ್ನು ಹೇಳುತ್ತದೆ.
ರಾಜ್ಯದಲ್ಲಿ ಕಾಂಗ್ರೆಸ್ಸು ಅವ್ಯವಸ್ಥೆಯ ಹಂತಕ್ಕೆ ಈ ಹಿಂದೆ ಹೋಗಿರಲಿಲ್ಲ ಎಂದೇನೂ ಅಲ್ಲ. ಆದರೆ ಇವತ್ತು ನಾವು ನೋಡುತ್ತಿರುವ ಭೂಕಂಪ ಮಾದರಿಯದು ಘಟಿಸಿರಲಿಲ್ಲ. 135 ಶಾಸಕರುಳ್ಳ ಭೀಮಬಲ ಸೇನೆಯೊಂದಿಗೆ ಅಧಿಕಾರಕ್ಕೆ ಬಂದಾಗ “ಇನ್ನು ಎಲ್ಲವೂ ಸುಗಮ, ಬಿಜೆಪಿಯನ್ನು ಅಡ್ಡಡ್ಡ ಮಲಗಿಸಿದ್ದಾಗಿದೆ, ಲೋಕಸಭೆಯ 28 ಸ್ಥಾನದ ಪೈಕಿ ಇಪ್ಪತ್ತಕ್ಕೆ ಕಡಿಮೆ ಇಲ್ಲದಂತೆ ಗೆದ್ದು ರಾಹುಲ್ ಗಾಂಧಿಯವರನ್ನು ಪ್ರಧಾನಿ ಸ್ಥಾನದಲ್ಲಿ ಕುಳ್ಳಿರಿಸುವುದಕ್ಕೆ ಅಖಂಡ ಬೆಂಬಲ ಸೂಚಿಸುವುದಷ್ಟೇ ಬಾಕಿ ಉಳಿದಿರುವ ಕೆಲಸ” ಎಂದು ಬೀಗುತ್ತಿದ್ದ ಪ್ರದೇಶ ಕಾಂಗ್ರೆಸ್ಸು ಅಧಿಕಾರಕ್ಕೆ ಬಂದ ಆರೇ ತಿಂಗಳಲ್ಲಿ ಅಕ್ಷರಶಃ ಎರಡು ಬಣವಾಗಿ ಹೋಳಾಗಿದೆ.
ಮುಖ್ಯಮಂತ್ರಿಯೂ ಆಗಿರುವ ಶಾಸಕಾಂಗ ಕಾಂಗ್ರೆಸ್ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಈ ಎರಡು ಬಣದ ಅ-ಘೋಷಿತ ನಾಯಕರು. ಸಿದ್ದರಾಮಯ್ಯನವರಿಗೆ ಐದೂ ವರ್ಷ ಸಿಎಂ ಸ್ಥಾನದಲ್ಲಿರುವ ಆಸೆ, ಎರಡೂವರೆ ವರ್ಷದ ತರುವಾಯ ಮುಂದಿನ ಎರಡೂವರೆ ವರ್ಷಕ್ಕೆ ತಾವು ಸಿಎಂ ಗದ್ದುಗೆಯಲ್ಲಿ ಕೂರಬೇಕೆಂಬುದು ಡಿಕೆಶಿ ಕನಸು. ಆಸೆ ಕನಸುಗಳ ಮುಖಾಮುಖಿ ಗುದುಮುರಿಗೆ ಈ ಹೊತ್ತು ಪ್ರದೇಶ ಕಾಂಗ್ರೆಸ್ಸನ್ನು ಮೂರಾಬಟ್ಟೆ ಸ್ಥಿತಿಗೆ ತಂದು ನಿಲ್ಲಿಸಿದೆ. ಸಿಎಂ ಸ್ಥಾನಕ್ಕೆ ಯಾರು ಎಂಬಲ್ಲಿಂದ ಆರಂಭವಾದ ಭಿನ್ನಮತಕ್ಕೆ ಸೂಕ್ತ ಮದ್ದನ್ನು ಅರೆಯುವ ಯಾವ ಕೆಲಸವನ್ನೂ ಮಾಡದೆ ಮೂಕಪ್ರೇಕ್ಷಕನಂತೆ ಇದ್ದ ಹೈಕಮಾಂಡ್ ಈಗ ಚೇಳು ಕುಟುಕಿದ ಸ್ಥಿತಿಯಲ್ಲಿ ಮೈಕೈ ಕೊಡವಿಕೊಂಡು ಎಚ್ಚರವಾಗಿದೆ.
ಎರಡೂ ಬಣಗಳಲ್ಲಿ ಅನೇಕ ಮುಖಂಡರು ಮುಖ್ಯವಾಗಿ ಮಂತ್ರಿಗಳು ಶಾಸಕರು ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಅವಕಾಶ ಸಿಕ್ಕಾಗಲೆಲ್ಲ ತಮ್ಮ ತಮ್ಮ ನಾಯಕನ್ನು ವೈಭವೀಕರಿಸುವ ಭೋಪರಾಕ್ ಹಾಕುತ್ತಿದ್ದಾರೆ. ವ್ಯಕ್ತಿ ಮುಖ್ಯವಲ್ಲ ಪಕ್ಷ ಮುಖ್ಯ ಎಂದೊಮ್ಮೆ ಹೇಳುತ್ತಿದ್ದ ಡಿಕೆಶಿಯವರಾಗಲೀ, ಪಕ್ಷದ ವಿಚಾರವನ್ನು ಹಾದಿಬೀದಿ ರಂಪಾಟಕ್ಕೆ ತರಬಾರದು ಎಂದು ಒಂದಾನೊಂದು ಕಾಲದಲ್ಲಿ ಹೇಳುತ್ತಿದ್ದ ಸಿದ್ದರಾಮಯ್ಯನವರಾಗಲೀ ಈಗ ತಮ್ಮ ಬೆಂಬಲಿಗರು ಹಾಕುತ್ತಿರುವ ಪರಾಕುಗಳಿಗೆ ಜಾಣ ಕಿವುಡರಾಗಿ ಪಕ್ಷ ಹಳ್ಳ ಹಿಡಿಯುವುದಕ್ಕೆ ಎಷ್ಟುಬೇಕೋ ಅಷ್ಟನ್ನೂ ಮಾಡುತ್ತಿದ್ದಾರೆ. ನಾಯಕತ್ವದ ಮೊದಲ ಲಕ್ಷಣವೆಂದರೆ ನಾಯಕನಾದವನು ಬೆಂಬಲಿಗರನ್ನು ಎಷ್ಟರಮಟ್ಟಿಗೆ ನಿಯಂತ್ರಣದಲ್ಲಿಡುತ್ತಾನೆ ಎನ್ನುವುದು. ಆದರೆ ಈ ರಾಜ್ಯದಲ್ಲಿ ಕೆಪಿಸಿಸಿ ಅಧ್ಯಕ್ಷರು ಹಾಗೂ ಶಾಸಕಾಂಗ ಪಕ್ಷದ ನಾಯಕರಿಬ್ಬರೂ ಈ ವಿಚಾರದಲ್ಲಿ ಸೋತಿದ್ದಾರೆ.
ವೇಣುಗೋಪಾಲ್ ಮತ್ತು ಸುರ್ಜೆವಾಲಾರನ್ನು ಬೆಂಗಳೂರಿಗೆ ಕಳಿಸುವ ಕೆಲಸ ಮಾಡಿರುವ ಏಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ತಮ್ಮ ಸುದೀರ್ಘ ರಾಜಕೀಯ ಜೀವನದ ಬಹುದೊಡ್ಡ ಧರ್ಮಸಂಕಟದಲ್ಲಿದ್ದಾರೆ. ಸುಮ್ಮನಿರಿ ಎಂದು ಸಿದ್ದರಾಮಯ್ಯನವರಿಗಾಗಲೀ ಇಲ್ಲವೇ ಡಿಕೆಶಿಯವರಿಗಗಲೀ ಹೇಳಲಾಗದ ಹಾಗಂತ ಹೇಳದೇ ಇರಲೂ ಆಗದ ಸ್ಥಿತಿ ಅವರದು. ಆರು ತಿಂಗಳ ಹಿಂದೆ ಸಿದ್ದರಾಮಯ್ಯ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ದಿನ, ಅದೇ ಮುಹೂರ್ತದಲ್ಲಿಯೇ ತಮ್ಮ ಮಗ ಪ್ರಿಯಾಂಕ ಖರ್ಗೆ ಕ್ಯಾಬಿನೆಟ್ ದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವಂತೆ ತಂದೆಯಾಗಿ ಖರ್ಗೆ ನೋಡಿಕೊಂಡರು. ಇದಕ್ಕೆ ತಕರಾರು ಮಾಡದೆ ಸಹಕರಿಸಿದ ಸಿದ್ದರಾಮಯ್ಯ ವಿಚಾರದಲ್ಲಿ ಸಹಜ ಆದರ ಖರ್ಗೆಯವರ ಮನದಾಳದಲ್ಲಿದೆ. ತಮ್ಮ ಬಾಯಿಗೆ ಖರ್ಗೆಯವರು ತಾವೇ ಹೊಲಿಗೆ ಹಾಕಿಕೊಂಡಿರುವ ರಾಜಕೀಯ ಬೆಳವಣಿಗೆ ಇದು. ಸಿದ್ದರಾಮಯ್ಯ ವಲಸೆ ಕಾಂಗ್ರೆಸ್ಸಿಗ, ತಮಗೆ ಸಿಎಂ ಹುದ್ದೆ ಸಿಗದೇ ಇರಲು ಕಾರಣರಾದವರಲ್ಲಿ ಸಿದ್ದರಾಮಯ್ಯ ಕೂಡಾ ಒಬ್ಬರು ಎನ್ನುವುದನ್ನು ಅವರು ಈಗ ಮಗನ ಹಿತಾಸಕ್ತಿ ಕಾಪಿಡುವ ನಿಟ್ಟಿನಲ್ಲಿ ಮರೆತಿದ್ದಾರೆ ಅಥವಾ ಮರೆತವರಂತೆ ಇದ್ದಾರೆ.
ವಲಸೆ ಕಾಂಗ್ರೆಸ್ಸಿಗರ ಆಕ್ರಮಣಕಾರೀ ದಾಳಿ ವಿರುದ್ಧ ಮೊದಲಿನಿಂದಲೂ ಎದೆ ಸೆಟೆಸಿ ನಿಂತವರು ಡಿಕೆಶಿ ಎನ್ನುವ ಆದರಾಭಿಮಾನ ಖರ್ಗೆಯವರಲ್ಲಿದೆ. ವಿಧಾನ ಸಭೆಯಲ್ಲಿ ಬಹುಮತ ಪಡೆದ ಸಂದರ್ಭದಲ್ಲಿ ಮೂಲ ಕಾಂಗ್ರೆಸ್ಸಿನ ಡಿಕೆಶಿ ಸಿಎಂ ಗಾದಿಯಲ್ಲಿ ಕೂರಬಹುದೆಂಬ ಒಳ ಆಸೆ ಖರ್ಗೆಯವರಲ್ಲಿತ್ತು. ಏಐಸಿಸಿ ಅಧ್ಯಕ್ಷರಾಗಿ ತಮ್ಮ ಒಳ ಆಸೆಯನ್ನು ಜಾರಿಗೆ ತರುವ ಪರಮಾಧಿಕಾರ ಮಾತ್ರ ಅವರ ಕೈಯಲ್ಲಿರಲಿಲ್ಲ. ಅಧಿಕೃತವಾಗಿ ಯಾವುದೇ ಘೋಷಣೆ ಮಾಡದೆ ಏರಡೂವರೆ ವರ್ಷದಂತೆ ಅಧಿಕಾರ ಸೂತ್ರವನ್ನು ಹಂಚುವ ಅಪ್ರಕಟಿತ ಒಪ್ಪಂದವನ್ನು ತೆರೆಮರೆಯಲ್ಲಿ ಅಂಗೀಕರಿಸಲಾಯಿತು ಎಂದು ಬಿಂಬಿಸಿದಾಗ ಮುಂದೆ ಇಂಥ ಎಡವಟ್ಟುಗಳಿಗೆ ದಾರಿಯಾಗುತ್ತದೆಂದು ಅವರು ಕೂಡಾ ಸುತರಾಂ ನಿರೀಕ್ಷಿಸಿರಲಿಲ್ಲ.
ತಮ್ಮನ್ನು ರಾಜ್ಯ ರಾಜಕಾರಣದಿಂದ ದೂರದ ದಿಲ್ಲಿಗೆ ತಳ್ಳಿದ ರಾಜಕೀಯ ತಂತ್ರಗಾರಿಕೆ ಹಿಂದೆ ಯಾರೆಲ್ಲ ಇದ್ದಾರೆ ಮತ್ತು ಅಂಥ ಸಂಕಷ್ಟದ ಸಮಯದಲ್ಲಿ ತಮ್ಮೊಂದಿಗೆ ನಿಂತವರು ಯಾರೆಲ್ಲ ಎನ್ನುವುದು ಖರ್ಗೆಯವರಿಗೆ ಗೊತ್ತಿದೆ. ತಮಗೆ ಆಗ ಬೆಂಬಲವಾಗಿ ನಿಂತಿದ್ದ ಡಿಕೆಶಿಯವರಿಗೆ ಸಿಎಂ ಪಟ್ಟ ಕಟ್ಟಲು ತಮ್ಮ ಕೈಲಾಗಲಿಲ್ಲ ಎಂಬ ಒಳನೋವು ಇದ್ದೇ ಇದೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಿಡಿದು ಆಡಿಸುವ ತಕ್ಕಡಿಯಲ್ಲಿ ಸಿದ್ದರಾಮಯ್ಯ ಮತ್ತು ಡಿಕೆಶಿಗೆ ಬೀಳುವ ಬೆಂಬಲದ ಕಲ್ಲೆಷ್ಟು ಮತ್ತು ಅದರ ತೂಕವೆಷ್ಟು ಎನ್ನವುದರ ಪಕ್ಕಾ ಅಂದಾಜು ಖರ್ಗೆಯವರಿಗೆ ಇಲ್ಲ. ಹಾಗಾಗಿ ಅವರು ಅತ್ತಲೂ ವಾಲಲಾಗದೆ ಇತ್ತಲೂ ತುಯ್ಯಲಾಗದೆ ಧರ್ಮಸಂಕಟವನ್ನು ಅನುಭವಿಸಬೇಕಿದೆ.
ತಮ್ಮದೇ ರಾಜ್ಯದಲ್ಲಿ ತಮ್ಮ ಕಣ್ಮುಂದೆಯೇ ಬೆಳೆದ ಕಾಂಗ್ರೆಸ್ಸಿಗರು ಹೈಕಮಾಂಡ್ ಆದೇಶವನ್ನು ಸೂತ್ರ ಕಿತ್ತೆದ್ದು ಹೋದ ಗಾಳಿಪಟದಂತೆ ಹಾರಿಸುತ್ತ ಜನರ ನಗೆಪಾಟಲಿಗೆ ಈಡಾಗುವ ತೆರದಲಿ ಆಡಿಸುತ್ತಿರುವುದು ಅವರ ನೋವನ್ನು ಹೆಚ್ಚಿಸಿದೆ. ಕರ್ನಾಟಕದ ಈ ಗೊಂದಲ, ಖರ್ಗೆಯವರು ಏಐಸಿಸಿ ಅಧ್ಯಕ್ಷರಾಗಿ ಒಂದು ವರ್ಷ ಪೂರೈಸುತ್ತಿರುವ ಸಂದರ್ಭದಲ್ಲಿ ಅವರಿಗೆ ಕೆಪಿಸಿಸಿ ಮತ್ತು ಸರ್ಕಾರ ನೀಡುತ್ತಿರುವ ಉಡುಗೊರೆಯಾಗಿದೆ ಎನ್ನುವುದು ಎಂಥ ಕ್ರೂರ ವ್ಯಂಗ್ಯ.
ಸಿದ್ದರಾಮಯ್ಯನವರಿಗೆ ಅಥವಾ ಡಿಕೆಶಿಯವರಿಗೆ “ಬೇಡ ಸಾಕು, ಹೈಕಮಾಂಡ್‍ಗೆ ಮುಜುಗರ ಉಂಟು ಮಾಡಬೇಡಿ” ಎನ್ನುವುದು ತಮಗೆ ಸಾಧ್ಯವಾಗುತ್ತಿಲ್ಲ ಎಂದೇ ಅವರು ವೇಣು ಗೋಪಾಲ್, ಸುರ್ಜೆವಾಲಾರನ್ನು ಕಳಿಸಿ ಬಾಯಿ ಮುಚ್ಚಿಸುವ ಕೆಲಸ ಮಾಡಿದರು. ಆದರೆ ಈ ಇಬ್ಬರೂ ನಾಯಕರು ಬೆಂಗಳೂರಿನಲ್ಲಿ ನಾಯಕರೊಂದಿಗೆ ಸಭೆ ನಡೆಸಿದ ಬಳಿಕ ಮಾಧ್ಯಮ ಗೋಷ್ಟಿ ಪೂರೈಸಿ ದೆಹಲಿಗೆ ಪರತ್ ತೆರಳಿ ವಿಮಾನ ನಿಲ್ದಾಣದಲ್ಲಿ ಹೆಜ್ಜೆ ಊರುವ ಮುನ್ನವೇ “ನಾನೇ ಐದೂ ವರ್ಷ ಮುಖ್ಯಮಂತ್ರಿ” ಎಂದು ಸ್ವಯಂ ಘೋಷಿಸಿಕೊಂಡಿರುವ ಸಿದ್ದರಾಮಯ್ಯ ಹೈಕಮಾಂಡ್‍ಗೆ “ಐ ಡೋಂಟ್ ಕೇರ್” ಸಂದೇಶ ರವಾನಿಸಿದ್ದಾರೆ. ಮೇಲ್ನೋಟಕ್ಕೆ ಶಾಂತವಾಗಿರುವಂತೆ ಕಾಣಿಸಿಕೊಳ್ಳುತ್ತಿರುವ ಡಿಕೆಶಿಯವರ ಒಡಲಲ್ಲಿ ಕುದಿಯುತ್ತಿರುವ ಜ್ವಾಲಾಮುಖಿಯಂಥ ಮೌನ ಮತ್ತು ಸಿದ್ದರಾಮಯ್ಯನವರ “ಐದೂ ವರ್ಷ ನಾನೇ ಸಿಎಂ” ಎಂಬ ಧಮಕಿ ಸ್ವರೂಪದ ಮಾತು ಪಕ್ಷದ ಎರಡೂ ಬಣಗಳಲ್ಲಿ ನಿಯಂತ್ರಣಕ್ಕೆ ಬಾರದ ಮೇಘಸ್ಫೋಟ ಸೃಷ್ಟಿಸಿದೆ.
ಇದನ್ನೂ ಓದಿ: ಮೊಗಸಾಲೆ ಅಂಕಣ: ಕಾಂಗ್ರೆಸ್ ಈಗ ಬಣ ರಾಜಕೀಯದ ಕಣ
ತೆಲಂಗಾಣಾ, ಮಧ್ಯಪ್ರದೇಶ, ರಾಜಸ್ತಾನ, ಚತ್ತೀಸ್‍ಘಡ ಹಾಗೂ ಮಿಜೋರಾಂಗಳ ವಿಧಾನ ಸಭಾ ಚುನಾವಣೆ ಪ್ರಕ್ರಿಯೆ ಆರಂಭವಾಗಿದೆ. ಕೈಲಿರುವ ರಾಜಸ್ತಾನ, ಚತ್ತೀಸ್‍ಘಡವನ್ನು ಉಳಿಸಿಕೊಂಡು ಮತ್ತೆರಡು ರಾಜ್ಯವನ್ನಾದರೂ ಕೈವಶ ಮಾಡಿಕೊಳ್ಳುವ ತಂತ್ರಗಾರಿಕೆಯಲ್ಲಿ ಮುಳುಗಿರುವ ಪಕ್ಷದ ಹೈಕಮಾಂಡ್‍ಗೆ ಕರ್ನಾಟಕದ ಕಾಂಗ್ರೆಸ್ ಬೆಳವಣಿಗೆ ಮರ್ಮಾಘಾತ ತಂದಿದೆ. ಚುನಾವಣಾ ಪ್ರಚಾರದಲ್ಲಿ ಕರ್ನಾಟಕದ ಕಾಂಗ್ರೆಸ್‍ನ ಸ್ಥಿತಿಗತಿ ಮೇಲುಗೈ ಪಡೆಯಲಿದೆ. ಈ ರಾಜ್ಯದಲ್ಲಿ ಸೋತು ಹೆಳವಾಗಿರುವ ಬಿಜೆಪಿಗೆ ಆಮ್ಲಜನಕ ತುಂಬಲು, ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸನ್ನು ಹರಾಜು ಹಾಕಲು ಇದು ಆ ಪಕ್ಷಕ್ಕೆ ನೆರವಾಗಲಿದೆ. ಇದನ್ನು ಸಿದ್ದರಾಮಯ್ಯ ಅಥವಾ ಡಿಕೆಶಿ ಮನವರಿಕೆ ಮಾಡಿಕೊಂಡಂತೆ ಕಾಣಿಸದೇ ಇರುವುದಕ್ಕೆ ಕಾರಣ ಅವರ ದೃಷ್ಟಿಗೆ ಕವಿದಿರುವ ಕುರ್ಚಿ ಕುರುಡು.
ಹೈಕಮಾಂಡ್ ಎಂದರೆ ಯಾರು ಎನ್ನುವ ಗೊಂದಲವೂ ಇಲ್ಲಿ ಹುಟ್ಟಿಕೊಂಡಿದೆ. ಸಿದ್ದರಾಮಯ್ಯ ಪರವಾಗಿ ಸತತ ಬ್ಯಾಟಿಂಗ್ ನಡೆಸಿರುವ ಸಚಿವ ಜಮೀರ್ ಅಹಮದ್ ಪ್ರಕಾರ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹೇಳಿದರೆ ಮಾತ್ರವೇ ಇಲ್ಲಿ ಬದಲಾವಣೆ ಆಗುತ್ತದೆ. ಅಂದರೆ ಏಐಸಿಸಿ ಅಧ್ಯಕ್ಷ ಖರ್ಗೆಯವರು ಇಂಥ ಅನೇಕರ ಪಾಲಿಗೆ ಹೈಕಮಾಂಡ್ ಅಲ್ಲ. ಸಿಎಂ ಕುರ್ಚಿ ಮೇಲೆ ತಮ್ಮದೂ ಒಂದಿರಲಿ ಎಂದು ಟವೆಲ್ ಹಾಕಿರುವ ಸಚಿವ ಪ್ರಿಯಾಂಕ ಖರ್ಗೆ “ಹೈಕಮಾಂಡ್ ಸೂಚಿಸಿದರೆ ಸಿಎಂ ಆಗಲು ತಾವು ರೆಡಿ” ಎಂದಿದ್ದಾರೆ. ಅವರಿಗೆ ಹೈಕಮಾಂಡ್ ಎಂದರೆ ಅವರ ತಂದೆಯೇ. ಏಐಸಿಸಿ ಸೂಚನೆ ಏನೇ ಇರಲಿ, ಈಗ ಗೃಹ ಸಚಿವರಾಗಿರುವ ಜಿ.ಪರಮೇಶ್ವರ್ ಸಿಎಂ ಆಗುವುದು ಖಚಿತ, ಏನು ಮಾಡಿಕೊಳ್ಳುತ್ತೀರೋ ಮಾಡಿಕೊಳ್ಳಿ ಎಂಬ ಸವಾಲನ್ನು ಸಚಿವ ಕೆ.ಎನ್.ರಾಜಣ್ಣ ಹಾಕಿದ್ದಾರೆ. ಅನಾಹುತಕಾರಿಯಾಗಿರುವ ಈ ಎಲ್ಲ ಬೆಳವಣಿಗೆಯನ್ನು 138 ವರ್ಷದ “ಮುತ್ಯಾ” ಪಕ್ಷ ಹೇಗೆ ನಿಭಾಯಿಸುತ್ತದೋ ಗೊತ್ತಿಲ್ಲ. ಹಾಲಿ ವಿದ್ಯಮಾನ ನೋಡಿದರೆ ಹೈಕಮಾಂಡ್ ನೂರಾರು ನೋಟೀಸುಗಳನ್ನು ಕರ್ನಾಟಕಕ್ಕೆಂದೇ ಸಿದ್ಧಪಡಿಸಬೇಕಿದೆ. ನೋಟೀಸು ಪಡೆಯುವವರು ಅದನ್ನು ಒರೆಸಿ ಬಿಸಾಕುವ ಟಿಶ್ಯೂ ಪೇಪರಿನಂತೆ ಪರಿಗಣಿಸಿದರೆ ಹೈಕಮಾಂಡ್ ಮುಂದೇನು ಮಾಡುತ್ತದೆ…?
ಇದನ್ನೂ ಓದಿ: ಮೊಗಸಾಲೆ ಅಂಕಣ: ಬಿಜೆಪಿಯಲ್ಲಿ ನಾಯಕರಿಲ್ಲ, ಕಾಂಗ್ರೆಸ್‌ನಲ್ಲಿ ನಾಯಕರಿದ್ದರೂ ಸುಖವಿಲ್ಲ!