ಅಜ್ಜಿಗೆ ಅರಿವೆಯ ಚಿಂತೆಯಾದರೆ ಮೊಮ್ಮಗಳಿಗೆ…ಚಿಂತೆ ಎಂಬ ಗಾದೆ ನೆನಪಿನಂಗಳದಲ್ಲಿ ಒತ್ತರಿಸುತ್ತಿರುವುದಕ್ಕೆ ರಾಜ್ಯ ಸರ್ಕಾರದ ಎಡಬಿಡಂಗಿ ನೀತಿ ನಿಲುವು ಕಾರಣ. ಇನ್ನೂ ಹೆಚ್ಚು ಸ್ಪಷ್ಟವಾಗಿ ಹೇಳಬಹುದಾದರೆ ಈ ನಿಲುವಿಗೆ ಸರ್ಕಾರ ಬಂದಿರುವುದಕ್ಕೆ ಅರ್ಥ ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ (CM Siddaramaiah) ಕಾರಣ ಪುರುಷ. ರಾಜ್ಯದಲ್ಲಿ ಹೊಸ ಸರ್ಕಾರ (Karnataka government) ಬಂದು ಮೂರು ತಿಂಗಳು ಕಳೆದು ಹೋಗಿದೆ. ಸರ್ಕಾರದ ಕಾರ್ಯಕ್ರಮದಲ್ಲಿ ಆದ್ಯತೆ ಎನ್ನುವುದೊಂದು ಅದರ ಹೃದಯದಲ್ಲಿರಬೇಕು. ಆ ಆದ್ಯತೆಗಳಲ್ಲಿ ಮೊದಲನೆಯದು ಆರ್ಥಿಕ ಶಿಸ್ತಿನದಾಗಿರಬೇಕು. ಆ ಶಿಸ್ತನ್ನು ನಿಯಂತ್ರಿಸುವ ಕೆಲಸವನ್ನು ಅರ್ಥ ಇಲಾಖೆ ಮಾಡಬೇಕು. ಗೂಳಿ ಎಲ್ಲೆಂದರಲ್ಲಿ ನುಗ್ಗದಂತೆ ಹಗ್ಗ ಜಗ್ಗುವ ಕೆಲಸವನ್ನು ಸಿದ್ದರಾಮಯ್ಯ ಮಾಡಬೇಕು. ಅವರು ಮಾಡುತ್ತಿಲ್ಲ ಎನ್ನಲು ರಾಜ್ಯದ ಜನತೆ ಹಿಂದೆಮುಂದೆ ನೋಡಬೇಕಾದ ಅಗತ್ಯವಿಲ್ಲ.
ರಾಜ್ಯದಲ್ಲಿ ಮುಖ್ಯಮಂತ್ರಿ ಹುದ್ದೆಯೂ ಸೇರಿದಂತೆ 35 ಸಚಿವ ಹುದ್ದೆ ಭರ್ತಿಯಾಗಿದೆ. ಅವರಲ್ಲಿ ಕೆಲವರು ಹಳಬರು, ಅನುಭವಸ್ಥರು. ಮತ್ತೆ ಕೆಲವರು ಇದೇ ಮೊದಲಬಾರಿಗೆ ಸಚಿವ ಸ್ಥಾನ ಪಡೆದವರು. ಅವರಿಗೆಲ್ಲ ಬೆಂಗಳೂರಲ್ಲಿ ವಾಸ್ತವ್ಯಕ್ಕೆ ಅಧಿಕೃತ ಸರ್ಕಾರಿ ಬಂಗಲೆಗಳು ಮಂಜೂರಾಗಿವೆ. ಬಹುತೇಕರು ಮನೆ ಪ್ರವೇಶಕ್ಕೆ ಸುಣ್ಣಬಣ್ಣದ ಕೆಲಸ ಸಮರ್ಪಕವಾಗಿ ಮುಗಿಯಲಿ ಮತ್ತು ಹೊಸ ಪೀಠೋಪಕರಣಗಳ ಅಳವಡಿಕೆ ಕೆಲಸ ಪೂರೈಸಲಿ ಎಂದು ಕಾದಿದ್ದಾರೆ. ಏತನ್ಮಧ್ಯೆ ಎಲ್ಲ ಸಚವರಿಗೂ ಐಷಾರಾಮೀ ಹೊಸ ಕಾರು ಕೊಡಿಸುವ ಸಿದ್ಧತೆ ಸಾಗಿದೆ. ಎಲ್ಲ ಸಚಿವರ ಮನೆ ಅಲಂಕಾರಕ್ಕೆ ಮತ್ತು ಹೊಸ ಕಾರು ಖರೀದಿಗೆ ಅರ್ಥ ಇಲಾಖೆ 24-25 ಕೋಟಿ ರೂಪಾಯಿ ಮೊತ್ತವನ್ನು ಮಂಜೂರು ಮಾಡಿದೆ ಎಂಬ ಸುದ್ದಿ ನಿಜಕ್ಕೂ ಆತಂಕಕಾರಿ.
ಸಾರ್ವಜನಿಕ ಉದ್ದೇಶಗಳಿಗೆ ಹಣ ಮಂಜೂರು ಮಾಡುವ ಸಂದರ್ಭಗಳಲ್ಲಿ ಬಜೆಟ್‍ನಲ್ಲಿ ಅದಕ್ಕೆ ಬೇಕಾದ ಹಣದ ಲಭ್ಯತೆ ಇಲ್ಲವೇ ಇಲ್ಲ ಎಂದು ರಾಗ ಎಳೆಯುವ ಅರ್ಥ ಇಲಾಖೆ, ಸಂಪುಟ ಸಚಿವರ ಹೊಸ ಕಾರಿನ ತೆವಲು ಪೂರೈಸುವುದಕ್ಕೆ, ಬಂಗಲೆಗಳ ಅಲಂಕಾರಕ್ಕೆ ಇಷ್ಟು ದೊಡ್ಡ ಮೊತ್ತದ ಬಿಡುಗಡೆಗೆ ಹಸಿರು ನಿಶಾನೆ ತೋರಿರುವುದು ಆತಂಕಕ್ಕೆ ಕಾರಣ. ರಾಜ್ಯದ ತೊಂಭತ್ತು ಭಾಗ ಬರದಡಿಯಲ್ಲಿ ಸಿಕ್ಕು ನರಳುತ್ತಿರುವ ಈ ಸಂಕಷ್ಟ ಸಮಯದಲ್ಲಿ ಹೊಸ ಕಾರಿನ ಹುಚ್ಚನ್ನು ತೆವಲು ಎನ್ನದೆ ಬೇರಿನ್ಯಾವ ಶಬ್ದ ಬಳಸಿ ಬಣ್ಣಿಸಬೇಕು…?
ಸಚಿವರಿಗೆ ಮಂಜೂರಾಗಿರುವ ಮನೆಗಳು ವರ್ಷಗಳಿಂದ ವಾಗತಿ ಕಾಣದ ಖಾಲಿ ಬಿದ್ದಿರುವ ಭೂತ ಬಂಗಲೆಗಳೇನೂ ಅಲ್ಲ. ಮೂರು ತಿಂಗಳ ಹಿಂದಿನವರೆಗೂ ಆ ಮನೆಗಳಲ್ಲಿ ವಾಸವಿದ್ದವರು ಹಿಂದಿನ ಬಿಜೆಪಿ ಸರ್ಕಾರದ ಸಚಿವರು, ಉಭಯ ಸದನಗಳ ಮುಖ್ಯ ಸಚೇತಕರು, ವಿಧಾನ ಸಭೆ ವಿಧಾನ ಪರಿಷತ್‍ನ ವಿರೋಧ ಪಕ್ಷದ ನಾಯಕರು ಇತ್ಯಾದಿ. ಎರಡೂ ಸದನಗಳ ಅಧ್ಯಕ್ಷ, ಸಭಾಪತಿ. ಅವರು ಮನೆ ತೊರೆದರು ಎಂದ ಮಾತ್ರಕ್ಕೆ ಅಲ್ಲಿ ಹೊಸದಾಗಿ ಪ್ರವೇಶ ಪಡೆಯುವವರು ದುಂದುವೆಚ್ಚದಲ್ಲಿ ಮನೆ ಅಲಂಕಾರ ಮಾಡಬೇಕೆಂದೇನೂ ಇಲ್ಲ.
ಸಾಮಾನ್ಯವಾಗಿ ಸಚಿವರು ವಾಸವಿರುವ ಮನೆಗಳು ಹಾಳು ಬಿದ್ದಿರದೆ ಒಪ್ಪ ಓರಣವಾಗೇ ಇರುತ್ತವೆ. ಅಂಥ ಮನೆಗಳಿಗೂ ಮತ್ತೆ ಮತ್ತೆ ಸುಣ್ಣಬಣ್ಣ, ಇರುವ ಪೀಠೋಪಕರಣಗಳಿಗೆ ಬದಲಾಗಿ ಹೊಸದಾಗಿ ಕೊಂಡಿದ್ದು, ಕಿಟಕಿ ಬಾಗಿಲುಗಳಿಗೆ ಹೊಸ ಪರದೆ ಬೇಕೆನ್ನುವುದು ಬರಗಾಲದ ಬರ್ಬರ ತೀರ್ಮಾನ. ಓರಣವಾಗಿರುವ ಮನೆಗಳಿಗೆ ಮತ್ತೇಕೆ ಅಷ್ಟೆಲ್ಲ ವೆಚ್ಚದಲ್ಲಿ ಅಂದ ಅಲಂಕಾರ ಎಂದು ಕೇಳಿ ಹಣ ಇಲ್ಲ ಎಂದು ಫೈಲನ್ನು ಹಿಂದಕ್ಕೆ ಕಳಿಸಬೇಕಾದ ಅರ್ಥ ಇಲಾಖೆ ಕಣ್ಮುಚ್ಚಿಕೊಂಡು ಮಂಜೂರಾತಿ ನೀಡುವುದರ ಹಿಂದೆ ಸಾಮಾನ್ಯ ಪ್ರಜ್ಞೆ ಕೆಲಸ ಮಾಡಿದಂತೆ ಕಾಣಿಸುವುದಿಲ್ಲ.
ಕೆಲವು ವರ್ಷ ಹಿಂದೆ ಬಿಜೆಪಿ ಸರ್ಕಾರದಲ್ಲಿ ಎಸ್. ಸುರೇಶ್ ಕುಮಾರ್ ಸಚಿವರಾಗಿದ್ದಾಗಿನ ಮಾತು. ಅವರು ಸರ್ಕಾರಿ ಬಂಗಲೆಗೆ ಸ್ಥಳಾಂತರಗೊಳ್ಳದೆ ತಮ್ಮ ಮತ ಕ್ಷೇತ್ರ ರಾಜಾಜಿ ನಗರದಲ್ಲಿರುವ ಸ್ವಂತ ಮನೆಯಲ್ಲೇ ವಾಸಿಸಲು ತೀರ್ಮಾನ ತೆಗೆದುಕೊಂಡರು. ಎರಡೋ ಮೂರೋ ತಿಂಗಳು ಅಥವಾ ಅದಕ್ಕೂ ತುಸು ಹೆಚ್ಚು ಸಮಯ ಆಗಿರಬಹುದು. ಅವರ ಮನೆಗೆ ಹೊಸ ಪೀಠೋಪಕರಣ ಪೂರೈಸಿ, ಕರ್ಟನ್‍ಗಳನ್ನು ಬದಲಿಸಿ, ಸುಣ್ಣಬಣ್ಣ ಮಾಡಿದ್ದಕ್ಕೆ ಇಷ್ಟು ವೆಚ್ಚವಾಗಿದೆ ಎಂದು ಬಿಲ್ ಸಲ್ಲಿಸಿದ ಸುದ್ದಿ ಅವರ ಗಮನಕ್ಕೆ ಬಂತು. ಅಚ್ಚರಿಯ ಸಂಗತಿ ಎಂದರೆ ಅವರ ಮನೆಗೆ ಯಾವ ಅಲಂಕಾರವೂ ಆಗಿರಲಿಲ್ಲ. ತಕ್ಷಣ ಸಂಬಂಧಿಸಿದ ಇಲಾಖಾ ಮುಖ್ಯಸ್ಥರಿಗೆ ಅವರು ಬರೆದ ಖಾರದ ಪತ್ರ ಸರ್ಕಾರದೊಳಗೆ ಅಧಿಕಾರಿಗಳು ನಡೆಸುವ ಕರಾಮತ್ತನ್ನು ಅನಾವರಣಗೊಳಿಸಿತ್ತು. ಎಲ್ಲರೂ ಸುರೇಶ ಕುಮಾರ್ ಆಗಿರುವುದು ಸಾಧ್ಯವಿಲ್ಲ. ಅವರಿಗೆಲ್ಲ ಹೊಸ ಕಾರು, ಹೊಸದರಂತೆ ಕಾಣಿಸುವ ಬಂಗಲೆ ಬೇಕೇಬೇಕು. ಅದಕ್ಕೆ ತಕ್ಕಂತೆ ಮಣಿಯುವ ಅರ್ಥ ಸಚಿವರು, ಅರ್ಥ ಇಲಾಖೆ ಕಾರ್ಯದರ್ಶಿ ಇದ್ದರೆ ಸುಗ್ಗಿಯೋ ಸುಗ್ಗಿ.
ಇನ್ನು, ಹೊಸ ಐಷಾರಾಮಿ ಕಾರುಗಳ ಖರೀದಿಗೆ ಒಪ್ಪಿಗೆ ನೀಡಿರುವ ಸಮಾಚಾರ. ಹೊಸ ಸಚಿವ ಸಂಪುಟ ಅಧಿಕಾರಕ್ಕೆ ಬಂದ ಬೆನ್ನಲ್ಲೇ ಹೊಸ ಮತ್ತು ಹೈಎಂಡ್ ಮಾಡೆಲ್ಲಿನ ಅತ್ಯಾಧುನಿಕ ಕಾರುಗಳಿಗೆ ಬೇಡಿಕೆ ಮಂಡನೆಯಾಗುವುದು ಆ ಪಕ್ಷ ಈ ಪಕ್ಷ ಎನ್ನದೆ ರಾಜಕಾರಣಿಗಳಲ್ಲಿ ನಿರಂತರವಾಗಿ ಕಾಣಿಸಿಕೊಳ್ಳುವ ಮತ್ತು ಯಾವತ್ತಿಗೂ ಗುಣವಾಗದ ನಿರ್ಲಜ್ಜ ವ್ಯಾಧಿ. ಸಿದ್ದರಾಮಯ್ಯ ಸಂಪುಟದಲ್ಲಿ ಇರುವ ಸಚಿವರಲ್ಲಿ ಒಬ್ಬಿಬ್ಬರನ್ನು ಹೊರತುಪಡಿಸಿದರೆ ಎಲ್ಲರೂ ನೂರಾರು ಕೋಟಿ ಒಡೆಯರೇ. ಅವರಲ್ಲಿ ಇಲ್ಲದ ಕಾರುಗಳು ಯಾವ ದೇಶದ ಮಾರುಕಟ್ಟೆಯಲ್ಲೂ ಇಲ್ಲ. ಹೀಗಿದ್ದೂ ಅವರಿಗೆ ಸರ್ಕಾರದ ವೆಚ್ಚದಲ್ಲಿ ಹೊಸ ಹೊಸ ಕಾರುಗಳೇ ಬೇಕು. ವ್ಯಸನ ಎಂದು ಕರೆಯುವುದು ಇದನ್ನೇ ಅಲ್ಲವೇ…?
ಇದನ್ನೂ ಓದಿ: ಮೊಗಸಾಲೆ ಅಂಕಣ: ಬರ ಮತ್ತು ಸಾಲ, ರೈತರ ಪಾಲಿನ ಶೂಲ
ಕರ್ನಾಟಕ ಕಂಡ ದಕ್ಷ ಶುದ್ಧ ಹಸ್ತದ ರಾಜಕಾರಣಿಗಳಲ್ಲಿ ಎಂ.ವೈ.ಘೋರ್ಪಡೆ ಒಬ್ಬರು. ದೇವರಾಜ ಅರಸು ಸಂಪುಟದಲ್ಲಿ ಅವರು ಅರ್ಥ ಸಚಿವರಾಗಿ ಕೆಲಸ ಮಾಡಿ ಹೆಸರು ಗಳಿಸಿದವರು. ಸೊಂಡೂರು ಅರಸೊತ್ತಿಗೆಯ ರಾಜಕುಮಾರ ಘೋರ್ಪಡೆ. ಆದರೆ ಅವರಲ್ಲಿ ರಾಜಸ್ತಿಕೆಯ ಸೋಂಕು ಇರಲಿಲ್ಲ. ಅರಸು ಸಂಪುಟದಲ್ಲಿ ಸಚಿವರಾಗಿದ್ದ ಕೆಲವರಿಗೆ ತಾವು ಓಡಾಡಲೆಂದು ಸರ್ಕಾರ ಕೊಟ್ಟ ಅಂಬಾಸಿಡರ್ ಕಾರು ಪುರಾತನವೆನಿಸಿ ಆ ಕಾಲಕ್ಕೆ ಅತ್ಯಾಧುನಿಕ ಎನಿಸಿದ್ದ ಕಾಂಟೆಸ್ಸಾ ಕಾರುಗಳಿಗೆ ಬೇಡಿಕೆ ಮಂಡಿಸಿದ್ದರು. ಕೆಲವರಂತೂ ಅಂಬಾಸಿಡರ್ ಕಾರಿನಲ್ಲಿ ದೂರ ದೂರ ಪ್ರಯಾಣ ಮಾಡಿದರೆ ಮೈಕೈ ವಿಶೇಷವಾಗಿ ಬೆನ್ನು ನೋವು ಖಚಿತ ಎಂದೂ ಅರಸು ಮನ ಕರಗಿಸುವ ಕೆತ್ತೆಬಾಜಿ ನಡೆಸಿದ್ದರು. ಅರಸು ಎಷ್ಟೆಂದರೂ ಅರಸು. ಏಕಪಕ್ಷೀಯವಾಗಿ ತೀರ್ಮಾನ ತೆಗೆದುಕೊಳ್ಳದೆ ಅರ್ಥ ಸಚಿವ ಘೋರ್ಪಡೆಯವರೊಂದಿಗೆ ಚರ್ಚೆ ನಡೆಸಿದರು. ಘೋರ್ಪಡೆಯವರು ಕಡ್ಡಿ ಮುರಿದಂತೆ ಹೊಸ ಕಾರಿಗೆ ಹಣ ವೆಚ್ಚ ಮಾಡಬೇಕಾಗಿಲ್ಲ, ಬಳಸಿರುವ ಕಾರುಗಳು ಸುಸ್ಥಿತಿಯಲ್ಲೇ ಇವೆ ಎಂದು ತಮ್ಮಲ್ಲಿದ್ದ ಮಾಹಿತಿಯನ್ನು ಹಂಚಿಕೊಂಡರು. ಅರಸು ಸಮ್ಮತಿಸಿದರು. ಹೊಸ ಕಾಂಟೆಸ್ಸಾ ಕಾರು ಬರಲಿಲ್ಲ ಎಂದಲ್ಲ, ಆ ಸಂದರ್ಭದಲ್ಲಿ ಬರಲಿಲ್ಲ. ಅಲ್ಲೀವರೆಗೆ ಅಂಬಾಸಿಡರ್ ಕಾರಿನಲ್ಲಿ ರಾಜ್ಯ ಸುತ್ತಿದ ಸಚಿವರಿಗೆ ಬೆನ್ನು ನೋವೂ ಬರಲಿಲ್ಲ!
ಇದು ಬರಗಾಲದ ಸಮಯ. ಪ್ರತಿಯೊಂದು ಬಿಲ್ಲೆಯನ್ನೂ ಬಡ ಅಸಹಾಯಕ ಜನರ ಸಂಕಷ್ಟದ ನಿವಾರಣೆಗೆ ವಿನಿಯೋಗಿಸುವ ಮನಸ್ಸನ್ನು ಸರ್ಕಾರ ಸಂಕಲ್ಪದ ರೀತಿಯಲ್ಲಿ ಮಾಡಬೇಕು. ಇಂಥ ವಿಚಾರಗಳಲ್ಲಿ ಸಿದ್ದರಾಮಯ್ಯನವರು ಗಟ್ಟಿ ನಿರ್ಧಾರ ತೆಗೆದುಕೊಂಡು ತಮ್ಮದೇ ಇಲಾಖೆಯ ಅಧಿಕಾರಿಗಳ ಕಿವಿ ಹಿಂಡಿ ದುಂದು ವೆಚ್ಚಕ್ಕೆ ಕಡಿವಾಣ ಹಾಕಬೇಕು. ಹಾಗೆ ಮಾಡದೆ ಕಾರುಬಾರಿಗೆ ಸಮ್ಮತಿ ಇತ್ತುದೇ ಹೌದಾದರೆ ಬಡವರ ಬಗೆಗೆ ಅವರು ಆಡುತ್ತಿರುವ ಮಾತು ನಾಟಕದ ಸಂಭಾಷಣೆಯಂತೆ ಜನರಿಗೆ ಕೇಳಿಸಿದರೆ ಅದರಲ್ಲಿ ಆಶ್ಚರ್ಯಪಡುವಂಥದು ಏನೂ ಇರುವುದಿಲ್ಲ.
ಇದನ್ನೂ ಓದಿ: ಮೊಗಸಾಲೆ ಅಂಕಣ: ಸನಾತನ ಧರ್ಮ ಮತ್ತು ಸಿಎಂ ಕಾವೇರಿ ಗೃಹಪ್ರವೇಶ!