ಅಮೆರಿಕಾದಲ್ಲಿ ನೂತನ ಅಧ್ಯಕ್ಷರ ಆಯ್ಕೆಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಆರು ತಿಂಗಳು ಅವರನ್ನು ಯಾರೂ ಯಾವ ಕಾರಣಕ್ಕೂ ಪ್ರಶ್ನಿಸುವುದಿಲ್ಲ ಎಂದು ಓದಿದ ನೆನಪು. ಅಲ್ಲಿಯ ಜನತಂತ್ರ ಎರಡು ಪಕ್ಷದ ಸ್ವಾಮ್ಯಕ್ಕೆ ಸೇರಿದ್ದು. ವಿರೋಧ ಪಕ್ಷ ಕಿರಿಕಿರಿ ಮಾಡುವುದಿಲ್ಲ; ಮುದ್ರಣ ಅಥವಾ ವಿದ್ಯನ್ಮಾನ ಮಾಧ್ಯಮದವರು ಹೋದಲ್ಲಿ ಬಂದಲ್ಲಿ ಬೆನ್ನು ಹತ್ತಿ ಗೋಳು ಹೊಯ್ಯುವುದಿಲ್ಲ ಎನ್ನುತ್ತಾರೆ ಬಲ್ಲವರು. ಇದಕ್ಕೆ ಕಾರಣವಿದೆ. ಅಧ್ಯಕ್ಷರು ಎಂಥ ಪಳಗಿದ ರಾಜಕಾರಣಿಯೇ ಆಗಿದ್ದರೂ ರಕ್ಷಣಾ ರಹಸ್ಯದಂಥ ಸೂಕ್ಷ್ಮ ಸಂಗತಿಗಳ ಆಳ ಅಗಲದ ಪರಿಚಯ ಅವರಿಗೆ ನೂರಕ್ಕೆ ನೂರರಷ್ಟು ಇರುವುದಿಲ್ಲ; ಇರುವುದು ಸಾಧ್ಯವೂ ಇಲ್ಲ. ಸ್ವಂತ ರಾಷ್ಟ್ರದ ಒಳಹೊರಗನ್ನು ಅಧ್ಯಯನ ಮಾಡುವುದು ಮತ್ತು ಅಂತಾರಾಷ್ಟ್ರೀಯ ವಿದ್ಯಮಾನಗಳನ್ನು ಕರಗತ ಮಾಡಿಕೊಳ್ಳುವುದು ಭಾಷಣ ಮಾಡಿದಷ್ಟು ಸುಲಭದ್ದಲ್ಲ. ಕಡಿಮೆ ಕಡಿಮೆ ಎಂದರೂ ಆರು ತಿಂಗಳಾದರೂ ಇದಕ್ಕೆ ಬೇಕೇಬೇಕು ಎನ್ನುವುದು ಕಾರಣ. ಇದನ್ನು “ರಜೆ ಅವಧಿ” ಎಂದು ಕರೆಯುವ ಪರಿಪಾಠವೂ ಇದೆ. ಆ ದೇಶದ ವಿವಿಧ ರಾಜ್ಯಗಳ ಗೌರ್ನರ್ ಆಗಿ ಆಯ್ಕೆಯಾಗುವ ರಾಜಕಾರಣಿಗಳಿಗೂ ಇಂಥದೇ ಅನುಕೂಲ ಇದೆ.
ನಮ್ಮ ದೇಶದಲ್ಲಿ ಈ ಪದ್ಧತಿ ಇಲ್ಲ. ಅಧಿಕಾರಕ್ಕೆ ಬಂದವರು ಮೊದಲ ದಿನದಿಂದಲೇ ತಮಗೆ ಎಲ್ಲವೂ ಗೊತ್ತು ಎಂಬ ಅಹಮಿಕೆಯಲ್ಲಿ ಸರ್ಕಾರ ನಡೆಸುವ ದರ್ಬಾರು ಶುರು ಹಚ್ಚಿಕೊಳ್ಳುತ್ತಾರೆ. ಜನರಿಂದ ತಿರಸ್ಕೃತಗೊಂಡು ಅಧಿಕಾರ ಪೀಠದಿಂದ ಉರುಳಿಬಿದ್ದವರು ತಾವು ಇದ್ದಾಗ ಮಾಡಿದ್ದು ಮಾತ್ರವೇ ಸರಿ, ಈಗ ನಡೆಯುತ್ತಿರುವುದೆಲ್ಲವೂ ತಪ್ಪು ಎಂದು ಅದೇ ಜನರನ್ನು ನಂಬಿಸುವ ಯತ್ನ ನಡೆಸುತ್ತಾರೆ. ಇಲ್ಲಿ ರಜೆ ಅವಧಿ ಯಾವ ರಾಜಕಾರಣಿಗೂ ಬೇಡ. ಅದನ್ನು ಮಂಜೂರು ಮಾಡುವುದಕ್ಕೆ ಯಾವುದೇ ರಾಜಕೀಯ ಪಕ್ಷವಾಗಲೀ ಮಾಧ್ಯಮವಾಗಲೀ ತಯ್ಯಾರಿಲ್ಲ. ಅಧಿಕಾರ ಸ್ವೀಕರಿಸಿದ ಕ್ಷಣದಿಂದಲೇ ಹೊಗಳಿಕೆಯ ಮಹಾಪೂರವೂ ಹರಿಯುತ್ತದೆ; ಟೀಕಾಸ್ತ್ರಗಳ ಮಳೆಯೂ ಸುರಿಯುತ್ತದೆ.
ಕರ್ನಾಟಕದಲ್ಲಿ ಈಗ ನಡೆದಿರುವುದು ಟೀಕಾಸ್ತ್ರಗಳ ಸುರಿಮಳೆ. ಹಾಗಂತ ಇದು ವಿರೋಧ ಪಕ್ಷಗಳ ಕಡೆಯಿಂದ ನಡೆದಿರುವ ಕಿತಾಪತಿ ಎನ್ನುವಂತಿಲ್ಲ. ಆಡಳಿತ ಪಕ್ಷದೊಳಗಿನ ಅಸಮಾಧಾನ, ಉರಿಯುವ ಪಟಾಕಿ ಸುತ್ತಮುತ್ತಲೆಲ್ಲ ಕಿಡಿ ಸಿಡಿಸಿದಂತೆ ಪುಟಿಯುತ್ತಿದೆ. ಬಯಸಿ ಬಯಸಿ ಮುಖ್ಯಮಂತ್ರಿ ಪಟ್ಟವನ್ನು ಗೆದ್ದುಕೊಂಡಲ್ಲಿಗೆ ಸಿಎಂ ಸಿದ್ದರಾಮಯ್ಯ (cm siddaramiah) ರಾಜಕೀಯ ಪಥ ಹೂವು ಹಾಸಿದ ದಾರಿ ಎಂದು ಭಾವಿಸಲು ಅವಕಾಶವೇ ಇಲ್ಲದಂತೆ ಕರ್ನಾಟಕ ಕಾಂಗ್ರೆಸ್ ಪಕ್ಷದೊಳಗೆ ಹೊಯ್‍ಕೈ ಸಮರ ಸಾಗಿದೆ. ಅವರು ಪ್ರಮಾಣ ವಚನ ಸ್ವೀಕರಿಸಿ ಇನ್ನೂ ಆರು ತಿಂಗಳಾಗಿಲ್ಲ. ಅಷ್ಟರಲ್ಲೇ ಆಡಳಿತ ಪಕ್ಷದೊಳಗೆ ಅನಿಯಂತ್ರಿತ ಒಳಗುದಿ ಹೆಚ್ಚಿದೆ. 135 ಶಾಸಕರು ಕಾಂಗ್ರೆಸ್‍ನಿಂದ ಆಯ್ಕೆಯಾದಾಗ ಮುಂದಿನದೆಲ್ಲವೂ ಸುಗಮ, ಈ ಸರ್ಕಾರ ಸುಖಾಂತ್ಯ ಕಂಡೀತೆಂಬ ಜನರ ನಿರೀಕ್ಷೆ ಈ ಐದೇ ತಿಂಗಳಲ್ಲಿ ಭ್ರಮೆಯ ಸ್ವರೂಪ ಪಡೆಯುತ್ತಿದೆ. ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು ಎಂಬಂತೆ ಉಪ ಮುಖ್ಯಮಂತ್ರಿ ಪದವಿಯನ್ನು ಸಿಟ್ಟು ಆಕ್ರೋಶ, ಅಸಮಾಧಾನ ಇತ್ಯದಿ ಸಹಿತ ಒಲ್ಲದ ಮನಸ್ಸಿನಿಂದಲೇ ಒಪ್ಪಿಕೊಂಡ ಡಿ.ಕೆ. ಶಿವಕುಮಾರ್ (DK Shivakumar) ಪಕ್ಷದ ಒಳಗೇ ಮತ್ತೊಂದು ಶಕ್ತಿ ಕೇಂದ್ರವಾಗಿ ಬೆಳೆಯುತ್ತಿರುವುದು ಸಿದ್ದರಾಮಯ್ಯ ಅನುಭವಿಸುತ್ತಿರುವ ಮಂಡೆಬಿಸಿಯ ಮುಖ್ಯ ಕಾರಣ. ಹೇಗಾದರೂ ಸೈ ಡಿಕೆಶಿ ಬಲವನ್ನು ಹಣಿಯುವುದು ಸಿದ್ದರಾಮಯ್ಯ ಅವರಿಗೆ ಬೇಕಾಗಿದೆ. ಇದನ್ನು ಸೂಚ್ಯವಾಗಿ ಅವರು ಮಾಡುತ್ತಿದ್ದಾರೆ. ಅವರನ್ನು ಐದೂ ವರ್ಷ ಸಿಎಂ ಪಟ್ಟದಲ್ಲಿ ಮುಂದುವರಿಸುವ ಅವರ ಬೆಂಬಲಿಗರ ಬಣ ಈ ಕೆಲಸವನ್ನು ವಾಚ್ಯ ರೂಪದಲ್ಲಿ ನಡೆಸಿದೆ. ಈ ಮಾತಿಗೆ ಪುರಾವೆಯಾಗಿ ಡಿಕೆಶಿಯವರ ಬೆಳಗಾವಿ ಭೇಟಿ ಮತ್ತು ಅವರ ಭೇಟಿಯನ್ನು ಗಂಭೀರವಾಗಿ ಪರಿಗಣಿಸದ (ಡಿಕೆಶಿ ಆಗಮನವನ್ನು ನಿರ್ಲಕ್ಷಿಸಿದ ಎನ್ನಬಹುದೆ?) ಆ ಜಿಲ್ಲಾ ಕಾಂಗ್ರೆಸ್ ಶಾಸಕರ ಧೋರಣೆಯನ್ನು ಗಮನಿಸಬಹುದಾಗಿದೆ.
ಡಿಕೆಶಿಯವರೇ ಹೇಳಿಕೊಂಡಂತೆ ಅವರ ಬೆಳಗಾವಿ ಪ್ರವಾಸ ಒಂದು ಖಾಸಗಿ ಭೇಟಿ. ಆದಾಗ್ಯೂ ತಮ್ಮ ಅಧೀನದಲ್ಲಿರುವ ಭಾರೀ ನೀರಾವರಿ ಖಾತೆಯ ಒಂದೆರಡು ಯೋಜನೆ ಕುರಿತಂತೆ ಪ್ರಗತಿ ಪರಿಶೀಲನಾ ಸಭೆಯೂ ಅವರ ಪ್ರವಾಸ ಅಜೆಂಡಾದ ಭಾಗವಾಗಿತ್ತು. ಬೆಂಗಳೂರಿನಿಂದ ಸಡಗರದಿಂದಲೇ ಹೊರಟಿದ್ದ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರು ಬೆಳಗಾವಿಯಲ್ಲಿ ಭೂಸ್ಪರ್ಶ ಮಾಡುವ ಮುನ್ನವೇ ಭೂಕಂಪದ ಅನುಭವ ಆಗುವಂತೆ ಮಾಡಿದ್ದು ಮಾತ್ರ ಡಿಕೆಶಿ ಪಾಲಿಗೆ ತೀರಾ ತೀರಾ ಅನಿರೀಕ್ಷಿತ. ಕಳೆದ ಕೆಲವು ವರ್ಷಗಳಿಂದ ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯ, ಹವಾಲಾ ಆರೋಪಕ್ಕೆ ಸಂಬಂಧಿಸಿದಂತೆ ವಿಚಾರಣೆ, ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಿಬಿಐ ತನಿಖೆ, ಸಿಬಿಐ ಕೋರ್ಟ್ ಮತ್ತಿತರ ಕೋರ್ಟ್‍ಗಳಲ್ಲಿ ನಡೆದಿರುವ ವಿಚಾರಣೆಗಳಿಂದ ಡಿಕೆಶಿಯವರು ಹಣ್ಣುಗಾಯಿ ನೀರುಗಾಯಿ ಆಗಿರುವುದು ನಿಜ. ಆದರೆ ರಾಜಕೀಯವಾಗಿ ಅವರದೊಂದು ರೀತಿ ಮೈದಾಸ ಸ್ಪರ್ಶ. ಮುಟ್ಟಿದ್ದೆಲ್ಲವೂ ಚಿನ್ನ.
ಇಂತಿಪ್ಪ ಡಿಕೆಶಿಯವರು ಏನನ್ನೂ ಸಹಿಸಿಕೊಂಡಾರು. ಆದರೆ ರಾಜಕೀಯದಲ್ಲಿ ಮಾತ್ರ ತಿಲಮಾತ್ರವೂ ಹಿನ್ನಡೆಯನ್ನು ಸಹಿಸಿಕೊಳ್ಳುವ ಜಾಯಮಾನ ಅವರದಲ್ಲ. ಹೇಗೋ ಎಂತೋ “ಸೆಟ್ಲ್‍ಮೆಂಟ್” ಮಾಡಿ ತಮ್ಮ ಅನುಕೂಲಕ್ಕೆ ಬೆಳವಣಿಗೆಯನ್ನು ಬಗ್ಗಿಸಿಕೊಳ್ಳುವ ಶಕ್ತಿ ಅವರಲ್ಲಿದೆ. ಪಕ್ಷದ ಹನ್ನೊಂದು ಶಾಸಕರು ಇರುವ ಬೆಳಗಾವಿ ಜಿಲ್ಲಾ ರಾಜಕೀಯ ಸದ್ಯಕ್ಕಂತೂ ಸತೀಶ ಜಾರಕಿಹೊಳಿಯವರ ಆಡುಂಬೊಲ. ತಾವು ಹೇಳಿದ್ದೇ ನಡೆಯಬೇಕೆಂಬ ಛಲ. ಅವರ ಅಣ್ಣ ರಮೇಶ ಜಾರಕಿಹೊಳಿ ಈ ಮೊದಲು ಜಿಲ್ಲಾ ರಾಜಕಾರಣದಲ್ಲಿ ಇಂಥ ನಿಯಂತ್ರಣವನ್ನಿಟ್ಟುಕೊಂಡಿದ್ದರು. ರಾಜಕೀಯವಾಗಿ ಅವರು ಈಗ ತುಸು ನಿತ್ರಾಣಗೊಂಡಿರುವಂತೆ ಮೇಲ್ನೋಟಕ್ಕೆ ಕಾಣುವ ಕಾರಣಗಳು ಹೇಳುತ್ತವೆ. ಅಣ್ಣನ ಜಾಗದಲ್ಲಿ ತಮ್ಮ ಈಗ ಜೋರಾಗಿದ್ದಾರೆ ಎನ್ನುವುದು ಡಿಕೆಶಿಯವರಿಗೆ ಸಮಾಧಾನ ತರುವ ಬೆಳವಣಿಗೆಯಲ್ಲ. ಜಿಲ್ಲೆಯಲ್ಲಿ ನಡೆಯುವ ವರ್ಗಾವರ್ಗಿ ವಿಚಾರದಲ್ಲಿ ಡಿಕೆಶಿ ಅನಗತ್ಯ ಹಸ್ತಕ್ಷೇಪ ಮಾಡುತ್ತಿದ್ದಾರೆ ಎನ್ನುವುದು ಸತೀಶರ ಅಸಮಾಧಾನಕ್ಕೆ ಒಂದು ಕಾರಣ. ಡಿಕೆಶಿಯವರಿಂದ ಈ ಕೆಲಸ ಮಾಡಿಸುತ್ತಿರುವ ವ್ಯಕ್ತಿ ಲಕ್ಷ್ಮೀ ಹೆಬ್ಬಾಳ್ಕರ್ ಎಂಬ ಗುಮಾನಿಯನ್ನೂ ಅವರು ಖುಲ್ಲಂಖುಲ್ಲಾ ಹೊರ ಹಾಕಿದ್ದಾರೆ. ತಮ್ಮ ಮೌನವನ್ನು ದೌರ್ಬಲ್ಯವೆಂದು ಭಾವಿಸಬಾರದು ಎಂಬ ಎಚ್ಚರಿಕೆಯ ಸಂದೇಶವನ್ನು ಜಾರಕಿಹೊಳಿ ರವಾನಿಸಿದ್ದಾರೆ. ಪಕ್ಷದ ಮೂಲಗಳು ಹೇಳುವಂತೆ ಇದು ಡಿಕೆಶಿ ಅವರತ್ತ ನೇರ ಗುರಿ ಇಟ್ಟಿರುವ ಜಾರಕಿಹೊಳಿ ಬಾಣ.
ಡಿಕೆಶಿಯವರನ್ನು ಸ್ವಾಗತಿಸಲು ವಿಮಾನ ನಿಲ್ದಾಣಕ್ಕೆ ಹೋಗುವ ರಾಜಕೀಯ ಉದ್ದೇಶ ಅಥವಾ ಮುಖ ತೋರಿಸಿ ಮುಜುರೆ ಸಲ್ಲಿಸಿ ಮೆಚ್ಚುಗೆ ಗಳಿಸುವ ಮುಲಾಜು ಆ ಪಕ್ಷದ ಶಾಸಕರಿಗೆ ಕಾರ್ಯಕರ್ತರಿಗೆ ಇರುತ್ತದೆ. ಆದರೆ ಶಿಷ್ಟಾಚಾರ (ಪ್ರೊಟೊಕೋಲ್) ಅದನ್ನು ಬೇಡುವುದಿಲ್ಲ. ಡಿಕೆಶಿ ಹೊಂದಿರುವ ಉಪಮುಖ್ಯಮಂತ್ರಿ ಸ್ಥಾನ ಸಂವಿಧಾನದತ್ತ ಹುದ್ದೆ ಅಲ್ಲ. ಈ ದೃಷ್ಟಿಯಿಂದ ನೋಡಿದರೆ ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಪ್ರೊಟೊಕೋಲ್ ಉಲ್ಲಂಘನೆಯಾಗಿಲ್ಲ. ಸತೀಶ ಜಾರಕಿಹೊಳಿ ಅವರಿಗೆ ಇದೆಲ್ಲ ಗೊತ್ತಿದೆ. ಡಿಕೆಶಿ ಸ್ವಾಗತಕ್ಕೆ ತಾವು ಹೋಗಬಾರದು ಮಾತ್ರವಲ್ಲ ಜಿಲ್ಲೆಯ ಇತರ ಶಾಸಕ ಮುಖಂಡರೂ ಹೋಗಬಾರದು ಎಂಬ ಅವರ ಒಳ ಹಟ, ಹೊರ ಗೆಲುವು ಸಾಧಿಸಿದೆ. ಸಿದ್ದರಾಮಯ್ಯನವರಿಗೆ ಅತ್ಯಂತ ನಿಕಟವಾಗಿರುವ ಜಾರಕಿಹೊಳಿ, ತಮ್ಮನ್ನು ತಾವೇ ಮೂರನೆ ಶಕ್ತಿ ಕೇಂದ್ರವೆಂದು ಘೋಷಣೆ ಮಾಡಿಕೊಂಡಿದ್ದಾರೆ. ಆಡಳಿತ ಪಕ್ಷದಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ಒಂದು, ಡಿಕೆಶಿ ನೇತೃತ್ವದಲ್ಲಿ ಮತ್ತೊಂದು ಹೀಗೆ ಎರಡು ಪರಸ್ಪರ ವಿರೋಧಿ ಶಕ್ತಿ ಕೇಂದ್ರಗಳಿವೆ. ಅವುಗಳ ಉದ್ದೇಶ ಬಹಳ ಸ್ಪಷ್ಟ. ಸಿದ್ದರಾಮಯ್ಯ ಬಣದ ಪ್ರಕಾರ ಸಿಎಂ ಸ್ಥಾನದಲ್ಲಿ ಅವರು ಐದೂ ವರ್ಷ ಇರಬೇಕು; ಇರತಕ್ಕದ್ದು. ವಿರುದ್ಧ ಬಣದ ಪ್ರಕಾರ ಎರಡೂವರೆ ವರ್ಷ ಬಳಿಕ ಸಿದ್ದರಾಮಯ್ಯ ಪೀಠ ತ್ಯಾಗ ಮಾಡಲೇಬೇಕು ಮತ್ತು ಆ ಜಾಗದಲ್ಲಿ ಡಿಕೆಶಿ ಪ್ರತಿಷ್ಟಾಪನೆ ಆಗತಕ್ಕದ್ದು.
ಸತೀಶ ಜಾರಕಿಹೊಳಿ (Satish Jarkiholi) ಘೋಷಿಸಿಕೊಂಡಿರುವ ತೃತೀಯ ಶಕ್ತಿ ಕೇಂದ್ರದ ಉದ್ದೇಶ ಏನೆಂದು ಆ ಬಣದವರು ಹೇಳಿಲ್ಲ. ಆದರೆ ಸಿದ್ದರಾಮಯ್ಯ ಮತ್ತು ಜಾರಕಿಹೊಳಿ ನಡುವಣ ಸುದೀರ್ಘ ರಾಜಕೀಯ ಸಂಬಂಧ, ಆ ಒಡನಾಟದ ಮಿತ್ರತ್ವದತ್ತ ನೋಟ ಹಾಯಿಸಿದರೆ ಅವರ ಬಣದ ಬೆಂಬಲ ನೂರಕ್ಕೆ ನೂರು ಪರ್ಸೆಂಟ್ ಸಿದ್ದರಾಮಯ್ಯನವರಿಗೇ. ಬೆಳಗಾವಿ ರಾಜಕೀಯದಲ್ಲಿ ಡಿಕೆಶಿಯವರು ಹೆಚ್ಚಾಗಿ ಓಲೈಸುವುದು ಲಕ್ಷ್ಮೀ ಹೆಬ್ಬಾಳ್ಕರರನ್ನು (laxmi hebbalkar). ಲಕ್ಷ್ಮಿಯವರು ಮೊದಲಿನಿಂದಲೂ ಡಿಕೆಶಿ ಆಪ್ತ ಬಳಗದಲ್ಲಿದ್ದು ವಿಶ್ವಾಸಪಾತ್ರರಾಗಿದ್ದಾರೆ. ಸಿಎಂ ಹುದ್ದೆಯಲ್ಲಿ ಡಿಕೆಶಿ ವಿರಾಜಮಾನರಾಗುವುದನ್ನು ನೋಡುವುದಕ್ಕೆ ಕಾಯುತ್ತಿರುವ ಕಾಂಗ್ರೆಸ್‍ನ ಹಲವು ಶಾಸಕರಲ್ಲಿ ಇವರೂ ಒಬ್ಬರು. ಇದು ಕೂಡಾ ಸತೀಶ ಜಾರಕಿಹೊಳಿ ಸಿಟ್ಟಿಗೆ ಮತ್ತೊಂದು ಕಾರಣ. ಕೆಪಿಸಿಸಿ ಕಾರ್ಯಾಧ್ಯಕ್ಷರಲ್ಲಿ ಜಾರಕಿಹೊಳಿ ಒಬ್ಬರು. ಅವರ ಬೆಂಬಲಿಗರ ಪ್ರಕಾರ ಸತೀಶ ಜಾರಕಿಹೊಳಿಯವರನ್ನು ಕಾರ್ಯಾಧ್ಯಕ್ಷ ಸ್ಥಾನದಿಂದ ಕೆಳಕ್ಕೆ ಇಳಿಸುವ ರಾಜಕೀಯ ಈಗ ಹೊಸ ಒಳಗುದಿಗೆ ಕಾರಣವಾಗಿದೆ. ಬೆಳಗಾವಿ ಜಿಲ್ಲೆಯ ಸೂತ್ರವನ್ನು ಲಿಂಗಾಯತ ವೀರಶೈವರಿಗೆ ಮತ್ತೆ ಒಪ್ಪಿಸುವ ತಂತ್ರಗಾರಿಕೆ ಜಾರಕಿಹೊಳಿ ಗಮನಕ್ಕೆ ಬಂದಿದೆ. ವಿಧಾನ ಸಭೆ ಚುನಾವಣೆ ಘೋಷಣೆಯಾದ ಬಳಿಕ ಕಾಂಗ್ರೆಸ್ ಸೇರಿ ಶಾಸಕರಾಗಿರುವ ಲಕ್ಷ್ಮಣ ಸವದಿಯವರನ್ನು ಕಾರ್ಯಾಧ್ಯಕ್ಷರನ್ನಾಗಿಸಿದರೆ ಡೇರೆಯೊಳಗೆ ಒಂಟೆ ನುಸುಳಿದಂತೆ ಆಗುತ್ತದೆಂಬ ಆತಂಕ ಅವರಲ್ಲಿದೆ.
ಇದನ್ನೂ ಓದಿ: ಮೊಗಸಾಲೆ ಅಂಕಣ: ಬಿಜೆಪಿಯಲ್ಲಿ ನಾಯಕರಿಲ್ಲ, ಕಾಂಗ್ರೆಸ್‌ನಲ್ಲಿ ನಾಯಕರಿದ್ದರೂ ಸುಖವಿಲ್ಲ!
ಸರ್ಕಾರದ ವರ್ಚಸ್ಸು ಲೋಕಸಭೆ ಚುನಾವಣೆವರೆಗಾದರೂ ಯಥಾಸ್ಥಿತಿಯಲ್ಲಿ ಇರಬೇಕೆಂಬ ಪಕ್ಷದ ಹೈಕಮಾಂಡ್ ಅಪೇಕ್ಷೆಗೆ ಪ್ರದೇಶ ಕಾಂಗ್ರೆಸ್‍ನ ಬಣ ರಾಜಕೀಯದ ಕಚ್ಚಾಟ ಸಾಕಷ್ಟು ಇರಿಸುಮುರಿಸು ಬರಿಸಿದೆ. ತಮ್ಮ ತೌರು ರಾಜ್ಯದಲ್ಲಿ ತಮ್ಮದೇ ಪಕ್ಷದಲ್ಲಿ ನಡೆದಿರುವ ಈ ಬೆಳವಣಿಗೆ ಏಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರಿಗೆ (Mallikarjun Kharge) ಭಾರೀ ಸವಾಲಾಗಿ ಪರಿಣಮಿಸಿದೆ. ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್ ಖರ್ಗೆಯವರ ಮಾತನ್ನು ಕೇಳುತ್ತಿಲ್ಲ ಎನ್ನುವುದಕ್ಕೆ ಸಾಕಷ್ಟು ಸಾಂದರ್ಭಿಕ ಸಾಕ್ಷ್ಯಗಳಿವೆ. ಪಕ್ಷದ ಮರ್ಯಾದೆಯನ್ನು ಕಾಪಾಡಿಕೊಂಡು ವರ್ಚಸ್ಸು ಕಳೆಗುಂದದಂತೆ ನೋಡಿಕೊಳ್ಳುವ ಹರಸಾಹಸದಲ್ಲಿ ಖರ್ಗೆ ಹೈರಾಣಾಗುತ್ತಿದ್ದಾರೆ.
ಒಂದೂವರೆ ದಶಕದ ಹಿಂದೆ ತೆರೆಕಂಡ “ಕಾಂಜೀವರಂ” ಎಂಬ ತಮಿಳು ಸಿನಿಮಾ ಇಲ್ಲಿ ನೆನಪಿಗೆ ಬರುತ್ತದೆ. ಬಡ ನೇಕಾರನ ಮಗಳು ಸತ್ತು ಹೋಗಿದ್ದಾಳೆ. ರೇಷ್ಮೆ ಸೀರೆ ಉಡಿಸಿ ಅವಳನ್ನು ಮದುವೆ ಮಾಡಿ ಕಳಿಸುವ ಅಪ್ಪನ ಕನಸು ನುಚ್ಚು ನೂರಾಗಿದೆ. ಅರ್ಧ ನೇಯ್ದಿಟ್ಟ ಸೇರೆಯನ್ನು ಆಕೆ ದೇಹಕ್ಕೆ ಮುಚ್ಚಲು ತಂದೆ ಹೆಣಗಾಡುತ್ತಾನೆ. ಅರ್ಧ ಸೀರೆಯಾದ್ದರಿಂದ ಮುಖ ಮುಚ್ಚಿದರೆ ಪಾದಗಳು ಹೊರಕ್ಕೇ ಉಳಿಯುತ್ತವೆ. ಪಾದ ಮುಚ್ಚುವಂತೆ ಸೀರೆ ಎಳೆದರೆ ಮುಖ ಬಯಲಾಗುತ್ತದೆ. ವಿಷಣ್ಣ ಭಾವದಲ್ಲಿ ಪ್ರೇಕ್ಷಕರ ಕಣ್ಣುಗಳು ಒದ್ದೆಯಾಗುತ್ತವೆ. ಖರ್ಗೆಯವರು ಅತ್ತ ಪಕ್ಷದ ವರ್ಚಸ್ಸನ್ನು ಹಾದಿ ಬೀದಿಗೆ ಬಾರದಂತೆ ಮುಚ್ಚಬೇಕು; ಇತ್ತ ಮರ್ಯಾದೆ ಹರಾಜಾಗದಂತೆ ಪಕ್ಷವನ್ನು ಕಾಪಾಡಿಕೊಳ್ಳಬೇಕು. 135 ಶಾಸಕರನ್ನು ಗೆಲ್ಲಿಸಿ ಅಖಂಡ ಆಶೀರ್ವಾದ ನೀಡಿದ ಮತದಾರರು ಖರ್ಗೆಯವರ ಸಾಹಸವನ್ನು ಕಣ್‍ರೆಪ್ಪೆ ಮಿಟುಕಿಸದೆ ನೋಡುತ್ತಿದ್ದಾರೆ.
ಇದನ್ನೂ ಓದಿ: ಮೊಗಸಾಲೆ ಅಂಕಣ: ಶಾಸಕರ ಸಿಟ್ಟಿನ ನಡುವೆ ಸಬೂಬುಗಳ ತಲಾಶೆ