ಮುಂದಿನ ವರ್ಷದ ಮಾರ್ಚ್-ಏಪ್ರಿಲ್ ವೇಳೆಗೆ ನಡೆಯಲಿರುವ ಲೋಕಸಭಾ ಚುನಾವಣೆಗೆ (lok sabha election) ಪೂರ್ವ ಸಿದ್ಧತೆಯೋ ಎಂಬಂತೆ ವಿವಿಧ ರಾಜಕೀಯ ಪಕ್ಷ ಮತ್ತು ಒಕ್ಕೂಟಗಳಲ್ಲಿ ಗಿರಗಿಟ್ಟಿ ಶುರುವಾಗಿದೆ. ಅವರ್ನ್ ಬಿಟ್ ಇವರ್ನ; ಇವರ್ನ್ ಬಿಟ್ಟು ಅವರ್ನ್ ಹಿಡಿದು ಎಂಬ ಮಕ್ಕಳಾಟದಂತೆ ಗಿರಗಿಟ್ಟಿ ಸಾಗಿದೆ. ಚುನಾವಣಾ ಆಯೋಗದಿಂದ ಅಧಿಕೃತ ಘೋಷಣೆ ಹೊರಬೀಳುವವರೆಗೂ ಮಾತ್ರವಲ್ಲ ಹೊರಬಿದ್ದ ನಂತರದಲ್ಲೂ ಗಾಳಿ ಗುದ್ದಿ ಮೈಕೈ ನೋಯಿಸಿಕೊಳ್ಳುವ ಈ ಆಟ ಮುಂದುವರಿಯುವ ಸೂಚನೆ ದಿನದಿಂದ ದಿನಕ್ಕೆ ನಿಚ್ಚಳವಾಗುತ್ತಿದೆ. ಬಿಜೆಪಿ ಪಾರಮ್ಯದ ಎನ್‍ಡಿಎ (NDA) ಮತ್ತು ಕಾಂಗ್ರೆಸ್ ಯಜಮಾನಿಕೆಯ ಐ.ಎನ್.ಡಿ.ಐ.ಎ (INDIA bloc) ಕೇಂದ್ರಿತವಾಗಿ ಚುನಾವಣೆ ನಡೆಯಲಿದೆ. ಒಕ್ಕೂಟದಲ್ಲಿದ್ದ ಮಾತ್ರಕ್ಕೆ ಸದಸ್ಯ ಪಕ್ಷಗಳಿಗೆ ಅದು ಶಾಶ್ವತ ಬಂಧ ಎಂದೇನೂ ಅಲ್ಲ. ಹಾಗಾಗಿ ಆಗಾಗ ಅಲ್ಲಿ ಇಲ್ಲಿ ಬಿರುಕು ಕಾಣಿಸುತ್ತದೆ. ಬಿರುಕನ್ನು ಮುಚ್ಚುವ ತೇಪೆ ಯತ್ನವೂ ನಡೆಯುತ್ತಿರುತ್ತದೆ.
ಗಿರಗಿಟ್ಟಿ ಆಟವನ್ನು ನೋಡಲು ಮೊದಲಿಗೆ ದಕ್ಷಿಣ ಭಾರತವನ್ನು ಆಯ್ಕೆ ಮಾಡಿಕೊಳ್ಳುವುದು ಉಚಿತವೆನಿಸುತ್ತದೆ. ಕರ್ನಾಟಕದಲ್ಲಿ ಇದ್ದಬದ್ದ ನೆಲೆಯನ್ನೂ ಕಳೆದುಕೊಂಡ ಭಾವ ಬೇಗುದಿಯಲ್ಲಿ ಬೇಯುತ್ತಿರುವ ಬಿಜೆಪಿ/ಎನ್‍ಡಿಎಗೆ ಇದೀಗ ತಮಿಳುನಾಡೂ ಕೈಕೊಟ್ಟಿದೆ. ಕರ್ನಾಟಕದಲ್ಲಿ ಸರ್ಕಾರವಿಲ್ಲ ಎನ್ನುವುದು ನಿಜ, ಆದರೆ ಆಮ್ಲಜನಕದ ನೆರವಿನಿಂದ ಅದರ ಉಸಿರಾಟ ನಡೆದಿದೆ ಎನ್ನುವುದೂ ನಿಜ. ಆದರೆ ನೆರೆಯ ತಮಿಳುನಾಡಿನಲ್ಲಿ ಪರಿಸ್ಥಿತಿ ಸಂಕಟದ್ದೂ ಹೌದು ಸಂಕಷ್ಟದ್ದೂ ಹೌದು. ಆ ರಾಜ್ಯದಲ್ಲಿ ಬಿಜೆಪಿಯ ಶೇಕಡಾವಾರು ಮತಗಳಿಕೆ ಯಾವತ್ತೂ ಎರಡಂಕಿ ಮುಟ್ಟಿಲ್ಲ. ಚುನಾವಣೆ ಯಾವುದೇ ಇರಲಿ ಚುನಾಯಿತ ಮತದಲ್ಲಿ ಪ್ರತಿಶತ 5-6ರ ಗಡಿಯಲ್ಲಿರುವ ಆ ಪಕ್ಷದ ಬೇರು ಆ ರಾಜ್ಯದಲ್ಲಿ ಬಲಿಯುವುದು ಸುಲಭವಲ್ಲವೇ ಅಲ್ಲ. ಇತ್ತೀಚೆಗೆ ಅಲ್ಲಿ ನಡೆದ ಪಂಚಾಯತ್ ಚುನಾವಣೆಯಲ್ಲಿ ತಾನು ಮೂರನೇ ಸ್ಥಾನಕ್ಕೆ ಏರಿರುವುದಾಗಿ ಬಿಜೆಪಿ ಹೇಳಿಕೊಂಡಿದೆ. ಇದುವರೆಗೆ ಮೂರನೇ ಸ್ಥಾನ ಕಾಂಗ್ರೆಸ್‍ನದಾಗಿತ್ತು. ಅರ್ಥ ಸ್ಪಷ್ಟ. ಅಲ್ಲಿ ಡಿಎಂಕೆ, ಅಣ್ಣಾಡಿಎಂಕೆ ನಂತರದ ಸ್ಥಾನಕ್ಕೆ ಈ ಎರಡೂ ರಾಷ್ಟ್ರೀಯ ಪಕ್ಷಗಳ ನಡುವೆ ಬಡಿದಾಟ ನಡೆದಿದೆ.
ಇದುವರೆಗೆ ಬಿಜೆಪಿ/ಎನ್‍ಡಿಎ ಭಾಗವಾಗಿದ್ದ ಅಣ್ಣಾಡಿಎಂಕೆ ಈ ಸಂಬಂಧವನ್ನು ಕಡಿದುಕೊಳ್ಳುವ ತೀರ್ಮಾನಕ್ಕೆ ಬಂದಿರುವುದು ಎನ್‍ಡಿಎಗೆ ಭಾರೀ ಹಿನ್ನಡೆ. ತಮಿಳುನಾಡು ಬಿಜೆಪಿ ಅಧ್ಯಕ್ಷ, ಕರ್ನಾಟಕ ಕೇಡರ್‌ನ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ, ಅಣ್ಣಾಡಿಎಂಕೆಯ ಹಿಂದಿನ ಮತ್ತು ಇಂದಿನ ತಲೆಮಾರಿನ ನಾಯಕರ ವಿರುದ್ಧ ಹರಿಯ ಬಿಟ್ಟಿರುವ ಸಡಿಲ ನಾಲಗೆ ಉಭಯ ಪಕ್ಷಗಳ ಸಂಬಂಧದ ಕೊಂಡಿ ಕಳಚುವುದಕ್ಕೆ ಅಸಲಿ ಕಾರಣ. ತಮಿಳುನಾಡು ಪ್ರದೇಶ ಬಿಜೆಪಿ ಅಧ್ಯಕ್ಷ ಸ್ಥಾನದಿಂದ ಅಣ್ಣಾಮಲೈಯವರನ್ನು ತೆಗೆದುಹಾಕಬೇಕೆಂಬ ಅಣ್ಣಾಡಿಎಂಕೆ ಬೇಡಿಕೆಗೆ ಬಿಜೆಪಿ ಹೈಕಮಾಂಡ್ ಮಣಿಯುವ ಸೂಚನೆ ಕಾಣಿಸುತ್ತಿಲ್ಲ. ಲೋಕಸಭಾ ಚುನಾವಣೆ ಹತ್ತಿರವಿರುವಾಗ ನಡೆದಿರುವ ಈ ಬೆಳವಣಿಗೆ ಗಮನಿಸಿದರೆ ಆ ರಾಜ್ಯದಲ್ಲಿ ಮೂರನೇ ಸ್ಥಾನಕ್ಕೆ ಬಿಜೆಪಿ ನಡೆಸಿರುವ ಹೋರಾಟ ಇನ್ನಷ್ಟು ವರ್ಷ ಹೀಗೆಯೇ ಮುಂದುವರಿಯಲಿದೆ ಎನ್ನುವುದು ಸ್ಪಷ್ಟ.
ತಮಿಳುನಾಡಿನಲ್ಲಿ ಕಳೆದುಕೊಂಡಿದ್ದನ್ನು ಇಲ್ಲಿ ಕರ್ನಾಟಕದಲ್ಲಿ ಎನ್‍ಡಿಎ ಪಡೆದುಕೊಂಡಿದೆ ಎಂದು ಸದ್ಯಕ್ಕೆ ಭಾವಿಸಬಹುದು. ರಾಜಕೀಯ ಮೈತ್ರಿ ಯಾವ ಕಾರಣಕ್ಕಾಗಿ ಮತ್ತು ಎಲ್ಲಿ ಘಟಿಸುತ್ತದೆಂದು ಹೇಳಲಾಗದು. ಪ್ರಸ್ತುತ ಕರ್ನಾಟಕದಿಂದ 25 ಬಿಜೆಪಿ ಸಂಸದರು ಲೋಕಸಭೆಯಲ್ಲಿದ್ದಾರೆ. ಪಕ್ಷೇತರರಾಗಿ ಗೆದ್ದ ಸುಮಲತಾ ಅಂಬರೀಷ್ ಬಿಜೆಪಿ ಜೊತೆ ಕೈ ಜೋಡಿಸಿ ಸಂಖ್ಯೆಯನ್ನು 26ಕ್ಕೆ ಹೆಚ್ಚಿಸಿದ್ದಾರೆ. ಉಳಿದ ಎರಡು ಸ್ಥಾನಗಳಲ್ಲಿ ತಲಾ ಒಂದರಂತೆ ಕಾಂಗ್ರೆಸ್, ಜೆಡಿಎಸ್ ಗೆದ್ದಿವೆ. ಹಾಸನ ಕ್ಷೇತ್ರದಿಂದ ಗೆದ್ದ ಜೆಡಿಎಸ್‍ನ ಪ್ರಜ್ವಲ್ ರೇವಣ್ಣ ಆಯ್ಕೆ ಚುನಾವಣಾ ಅಕ್ರಮ ಕಾರಣವಾಗಿ ತೂಗುಯ್ಯಾಲೆಯಲ್ಲಿದೆ. ಸುಪ್ರೀಂ ಕೋರ್ಟ್‍ನಲ್ಲಿ ಅವರು ಬಯಸಿದ ನ್ಯಾಯ ಸಿಗದೇ ಹೋದಲ್ಲಿ ಮೊಮ್ಮಗನ ಬದಲಿಗೆ ಅಜ್ಜ ಎಚ್.ಡಿ. ದೇವೇಗೌಡರೇ ಹಾಸನದಲ್ಲಿ ಕಣಕ್ಕೆ ಇಳಿದರೆ ಅದರಲ್ಲಿ ಆಶ್ಚರ್ಯಪಡುವಂಥದ್ದೇನೂ ಇಲ್ಲ.
ಅದೇನೇ ಇರಲಿ. ಜೆಡಿಎಸ್ ಬಿಜೆಪಿ ಒಂದಾಗಿರುವುದರಿಂದ ರಾಜ್ಯ ಚುನಾವಣಾ ರಾಜಕೀಯದಲ್ಲಿ ಒಂದಿಷ್ಟು ಸಂಚಲನ ಆಗುತ್ತಿರುವುದು ಸುಳ್ಳೇನೂ ಅಲ್ಲ. ಬಿಜೆಪಿ ಜೊತೆ ಜೆಡಿಎಸ್ ಹೋಗುವುದರಿಂದ ಅದರ ಜಾತ್ಯತೀತ ನಿಲುವು ಖೊಟ್ಟಿ ಎನ್ನುವುದು ಸಾಬೀತಾಗಿದೆ ಎಂಬ ಆರೋಪದೊಂದಿಗೆ ಅದರಲ್ಲಿದ್ದ ಅನೇಕ ಮುಸ್ಲಿಂ ಮುಖಂಡರು ಕಾರ್ಯಕರ್ತರು ಹೊರಕ್ಕೆ ಹೋಗಿ ಕಾಂಗ್ರೆಸ್‍ಗೆ ಸೇರುವ ಪ್ರಕ್ರಿಯೆ ಆರಂಭವಾಗಿದೆ. ರಾಜ್ಯದಲ್ಲಿ ಮುಸ್ಲಿಮರಿಗೆ ಶೇಕಡಾ ನಾಲ್ಕರ ಮೀಸಲಾತಿಯನ್ನು ಕೊಟ್ಟಿದ್ದು ದೇವೇಗೌಡರು ಮುಖ್ಯಮಂತ್ರಿ ಆಗಿದ್ದಾಗ. ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಅದನ್ನು ಹಿಂತೆಗೆದುಕೊಂಡಿತು. ದೇವೇಗೌಡರು ತಮಗೆ ಒದಗಿಸಿದ ಮೀಸಲಾತಿ ಸೌಲಭ್ಯ ಮರೆತ ಮುಸ್ಲಿಂ ಸಮುದಾಯ ಜೆಡಿಎಸ್‍ಗೆ ಕೈಕೊಟ್ಟು ಮತದಾನದ ಸಮಯದಲ್ಲಿ ಕಾಂಗ್ರೆಸ್‍ನೊಂದಿಗೆ ಗುರುತಿಸಿಕೊಂಡಿತು. ಇದೀಗ ಅದೇ ಮುಸ್ಲಿಂ ಸಮುದಾಯ, ದೇವೇಗೌಡರ ಪಕ್ಷ ತೊರೆಯಲು ಮಾಡಿರುವ ತೀರ್ಮಾನ ರಾಜ್ಯ ಗಿರಗಿಟ್ಟಿಯಲ್ಲಿ ಒಂದು.
ತೆಲಂಗಾಣದಲ್ಲಿ ನಾಲ್ಕು ಲೋಕಸಭಾ ಸೀಟು ಹೊಂದಿರುವ ಬಿಜೆಪಿ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲಿದೆಯೇ ಅಥವಾ ಕಡಿಮೆ ಮಾಡಿಕೊಳ್ಳಲಿದೆಯೇ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಆಂಧ್ರ ಪ್ರದೇಶದಲ್ಲಿ ಅದಕ್ಕೆ ವೈಎಸ್‍ಆರ್ ಕಾಂಗ್ರೆಸ್ ಸರ್ಕಾರದ ಬೆಂಬಲ ಇದೆಯಾದರೂ ಅದು ಸೀಟು ಗಳಿಕೆಗೆ ನೆರವಾಗುವ ಸಾಧ್ಯತೆ ಕಡಿಮೆ. ಕೇರಳದಲ್ಲಂತೂ ಬಿಜೆಪಿಯದು ಎಂದಿನಂತೆ ಶೂನ್ಯ ಸಂಪಾದನೆ!
ಇತ್ತ ಐ.ಎನ್.ಡಿ.ಐ.ಎ ಒಕ್ಕೂಟದಲ್ಲಿ ಎಲ್ಲವೂ ಸರಿಯಿಲ್ಲ. ಕೇರಳದ ವೈನಾಡು ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿರುವ ರಾಹುಲ್ ಗಾಂಧಿ, ಬರಲಿರುವ ಚುನಾವಣೆಯಲ್ಲಿ ಅಲ್ಲಿ ಸ್ಪರ್ಧಿಸಬಾರದು ಎಂದು ಕಳೆದ ಚುನಾವಣೆಯಲ್ಲಿ ರಾಹುಲ್ ವಿರುದ್ಧ ಸೋತಿದ್ದ ಸಿಪಿಐ ಅಭ್ಯರ್ಥಿ ಪಿ.ಪಿ.ಸುನೀರ್ ಒತ್ತಾಯಿಸಿದ್ದಾರೆ. ಈ ಮಾತಿಗೆ ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ ಆಕ್ಷೇಪಿಸಿದೆ. ಹೊಸದಾಗಿ ಉದಯಿಸಿರುವ ಐ.ಎನ್.ಡಿ.ಐ.ಎ ಒಕ್ಕೂಟದಲ್ಲಿ ಸಿಪಿಐ ದೊಡ್ಡ ಪಾತ್ರ ವಹಿಸಿರುವಾಗ ಅದೇ ಪಕ್ಷದ ಸೋತ ಅಭ್ಯರ್ಥಿಯ ಅಳಲು ಜೋರಾಗಿದೆ. ಹಾಗೆ ನೋಡಿದರೆ ಕೇರಳದಲ್ಲಿ ಮಾರ್ಕ್ಸ್‌ವಾದಿ ಕಮ್ಯೂನಿಸ್ಟ್ ಪಕ್ಷ ನೇತೃತ್ವದ ಎಡ ರಂಗಕ್ಕೆ ಕಾಂಗ್ರೆಸ್ ನೇತೃತ್ವದ ರಂಗದೊಂದಿಗೆ ಸಖ್ಯ ಬೇಕಾಗಿಯೇ ಇಲ್ಲ. ಸ್ಥಳೀಯ ಕಮ್ಯೂನಿಸ್ಟ್ ಮುಖಂಡರು ಆಗಾಗ ಈ ಮಾತನ್ನು ಹೇಳುತ್ತ ಉಭಯ ಕಮ್ಯೂನಿಸ್ಟ್ ಪಕ್ಷಗಳ ಮುಖಂಡರಿಗೆ ಇರಿಸು ಮುರಿಸು ಮಾಡುತ್ತಿದ್ದಾರೆ.
ಇದನ್ನೂ ಓದಿ: ಮೊಗಸಾಲೆ ಅಂಕಣ: ಬರಗಾಲ ಇದ್ದರೂ ಸಚಿವರ ದರಬಾರಿಗೆ ಕೊನೆಯೇ ಇಲ್ಲ!
ಕೇರಳಕ್ಕೆ ಮಾತ್ರ ಸೀಮಿತವಾಗಿರುವ ಗಿರಗಿಟ್ಟಿ ಇದು ಎಂದು ಭಾವಿಸುವ ಅಗತ್ಯವಿಲ್ಲ. ಪಶ್ಚಿಮ ಬಂಗಾಳಾದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಹಾಗೂ ಮಲ್ಲಿಕಾರ್ಜುನ ಖರ್ಗೆ ನೇತೃತ್ವದ ಕಾಂಗ್ರೆಸ್‍ನೊಂದಿಗೆ ಸಂಬಂಧ ಇಟ್ಟುಕೊಳ್ಳುವುದು ಮಾರ್ಕ್ಸ್‌ವಾದಿಗಳಿಗೆ ಬೇಕಾಗಿಲ್ಲ. ಐ.ಎನ್.ಡಿ.ಐ.ಎ ಒಕ್ಕೂಟದಲ್ಲಿ ನಾವು ಇದ್ದೇವೆ ನಿಜ ಆದರೆ ನಾವು ಅದರ ಪಾಲುದಾರ ಪಕ್ಷವಲ್ಲ ಎಂಬ ಆ ರಾಜ್ಯ ಮಾರ್ಕ್ಸ್‌ವಾದಿಗಳ ನಿಲುವು ಪಾಲಿಟ್‍ಬ್ಯೂರೋ ತಲೆನೋವನ್ನು ಮತ್ತಷ್ಟು ಹೆಚ್ಚಿಸಿದೆ. ಪಶ್ಚಿಮ ಬಂಗಾಳಾದಲ್ಲಿ ಕಾಂಗ್ರೆಸ್ ಕೂಡಾ ಟಿಎಂಸಿ ವಿರುದ್ಧ ತಿರುಗಿಬಿದ್ದಿದೆ. ಆ ರಾಜ್ಯದಲ್ಲಿ ಕಾಂಗ್ರೆಸ್ಸನ್ನು ದಶಕಗಳ ಹಿಂದೆಯೇ ಅಪ್ರಸ್ತುತಗೊಳಿಸಿದ್ದು ಮಾರ್ಕ್ಸ್‌ವಾದಿ ಕಮ್ಯೂನಿಸ್ಟ್ ಪಕ್ಷ. ನಂತರದಲ್ಲಿ ಬಂದ ಟಿಎಂಸಿ, ಕಾಂಗ್ರೆಸ್ ಜೊತೆ ಕಮ್ಯೂನಿಸ್ಟ್ ಪಕ್ಷಗಳನ್ನೂ ಅಪ್ರಸ್ತುತಗೊಳಿಸಿದೆ. ಕೈಕೈ ಮಿಲಾಯಿಸಿದ ಹಿಂದಿನದನ್ನೆಲ್ಲ ಮರೆತು ಈಗ ಕೈಕೈ ಕುಲುಕುವುದು ಅಷ್ಟೆಲ್ಲ ಸುಲಭವೇ ಎಂಬ ಕಾಂಗ್ರೆಸ್, ಕಮ್ಯೂನಿಸ್ಟ್ ಕಾರ್ಯಕರ್ತರ ಅನುಮಾನಕ್ಕೆ ಉತ್ತರ ಸಿಕ್ಕಿಲ್ಲ.
ದೆಹಲಿ ಮತ್ತು ಪಂಜಾಬ್ ಆಡಳಿತ ಸೂತ್ರ ಹಿಡಿದಿರುವ ಆಮ್ ಆದ್ಮಿ ಪಾರ್ಟಿ ಐ.ಎನ್.ಡಿ.ಐ.ಎ ಒಕ್ಕೂಟದ ಮುಖ್ಯ ಸದಸ್ಯ ಪಕ್ಷಗಳಲ್ಲಿ ಒಂದು. ಹೀಗಿದ್ದರೂ ದೆಹಲಿಯಲ್ಲಿ ಕಾಂಗ್ರೆಸ್ ಜೊತೆ ಹೆಜ್ಜೆ ಹಾಕುವುದು ಆಪ್‍ಗೆ ಬೇಕಾಗಿಲ್ಲ. ಅತ್ತ ಪಂಜಾಬದಲ್ಲಿ ಆಪ್ ಜೊತೆ ಯಾವುದೇ ಮೈತ್ರಿ ಪ್ರದೇಶ ಕಾಂಗ್ರೆಸ್‍ಗೆ ಬೇಕಿಲ್ಲ. ಪಂಜಾಬಿನಲ್ಲಿರುವುದು ಜಂಗಲ್ ರಾಜ್ಯವೆಂದು ಕಾಂಗ್ರೆಸ್ ಮಾಡಿರುವ ಗಂಭೀರ ಆರೋಪಕ್ಕೆ ಆಪ್ ಕೆಂಡಾಮಂಡಲವಾಗಿದೆ. ಏತನ್ಮಧ್ಯೆ ಪಂಜಾಬ್ ವಿಧಾನ ಸಭೆಯ ಆಪ್ ಸದಸ್ಯರಲ್ಲಿ ಮೂವತ್ತಕ್ಕೂ ಹೆಚ್ಚು ಶಾಸಕರು ಕಾಂಗ್ರೆಸ್‍ನ ಸಂಪರ್ಕದಲ್ಲಿದ್ದಾರೆಂಬ ಪ್ರದೇಶ ಕಾಂಗ್ರೆಸ್ ನಾಯಕರ ಮಾತನ್ನು ಆ ಪಕ್ಷದ ಹೈಕಮಾಂಡ್‍ಗೆ ಅರಗಿಸಿಕೊಳ್ಳಲಾಗದ ಸ್ಥಿತಿ ತಂದಿಟ್ಟಿದೆ. ಪಂಜಾಬಿನಲ್ಲಿ ದೆಹಲಿಯಲ್ಲಿ ಕಾಂಗ್ರೆಸ್-ಆಪ್ ಒಂದಾಗುವುದು ಕಷ್ಟ ಎಂಬ ಭಾವನೆ ರಾಜಕೀಯ ವಲಯದಲ್ಲಿ ಬಲಿಯುತ್ತಿದೆ.
ಸಣ್ಣಪುಟ್ಟ ಪಕ್ಷಗಳ ಮೊರೆ ಹೋಗುವ ಸ್ಥಿತಿಯಲ್ಲಿರುವ ಎನ್‍ಡಿಎ ಮತ್ತು ಐ.ಎನ್.ಡಿ.ಐ.ಎ ಒಕ್ಕೂಟಗಳು ಈಗ ಪ್ರತಿಯೊಂದೂ ರಾಜ್ಯದಲ್ಲಿ ತಮ್ಮ ಮೈತ್ರಿ ವಿಸ್ತರಿಸಿಕೊಳ್ಳುವ ಯತ್ನ ನಡೆಸಿವೆ. ಈ ಯತ್ನ ಇದೀಗ ಪೈಪೋಟಿ ಹಂತಕ್ಕೂ ಹೋಗಿದೆ. ಕರ್ನಾಟಕದಲ್ಲಿ ನಡೆದಿರುವ ಪ್ರಯೋಗ ಪಡೆಯುವ ಯಶಸ್ಸು ಅಥವಾ ಪ್ರಯೋಗ ಮುಗ್ಗರಿಸಿ ಆಗುವ ಹಿನ್ನಡೆ ಭವಿಷ್ಯ ಭಾರತದ ರಾಜಕೀಯಕ್ಕೆ ಒಂದೋ ಹೀಗೆ ಇಲ್ಲವೇ ಹಾಗೆ ದಿಕ್ಸೂಚಿಯಾಗಲಿದೆ.
ಇದನ್ನೂ ಓದಿ: ಮೊಗಸಾಲೆ ಅಂಕಣ: ಬರ ಮತ್ತು ಸಾಲ, ರೈತರ ಪಾಲಿನ ಶೂಲ