Site icon Vistara News

ಮೊಗಸಾಲೆ ಅಂಕಣ: ಖರ್ಗೆ ಹೆಸರು ಪ್ರಸ್ತಾಪ, ಹಲವರಿಗೆ ಪರಿತಾಪ

kharge next PM INDIA bloc

ಕನ್ನಡಿಗರೊಬ್ಬರ ಹೆಸರು ಪ್ರತಿಷ್ಠಿತ ಪ್ರಧಾನಿ ಪಟ್ಟಕ್ಕೆ ಸೂಚಿತವಾಗಿರುವುದು ನಿರ್ಲಕ್ಷಿಸಬಹುದಾದ ಸಣ್ಣ ರಾಜಕೀಯ ಬೆಳವಣಿಗೆಯೇನೂ ಅಲ್ಲ. ಹಾಲಿ ಎಐಸಿಸಿ ಅಧ್ಯಕ್ಷರೂ, ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕರೂ ಆಗಿರುವ ಎಂ. ಮಲ್ಲಿಕಾರ್ಜುನ ಖರ್ಗೆಯವರ (Mallikarjun Kharge) ಹೆಸರು ಈ ಪದವಿಗೆ ಡಾಟೆಡ್ ಇಂಡಿಯಾ ಒಕ್ಕೂಟದ (INDIA Bloc) ಸಭೆಯಲ್ಲಿ ಪ್ರಸ್ತಾಪವಾಗಿದೆ. ಒಕ್ಕೂಟಕದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುವುದರೊಂದಿಗೆ ಲೋಕಸಭಾ ಚುನಾವಣೆಯಲ್ಲಿ ಒಕ್ಕೂಟ ಬಹುಮತ ಪಡೆದಲ್ಲಿ ಅವರೇ ಪ್ರಧಾನಿ ಆಗಬೇಕೆಂದು ಆಗ್ರಹಿಸಿರುವವರ ಮೂಲ ಆಶಯ ಖರ್ಗೆಯಂಥ ದಲಿತ ಮುಖಂಡನ ನಾಯಕತ್ವದಲ್ಲಿ ಚುನಾವಣೆ ಎದುರಿಸಿದರೆ ಮೂರನೇ ಬಾರಿಗೆ ಪ್ರಧಾನಿಯಾಗಲು ಸಿದ್ಧತೆ ನಡೆಸಿರುವ ನರೇಂದ್ರ ಮೋದಿ (PM Narendra Modi) ಅವರಿಗೆ ಪ್ರಬಲ ಪೈಪೋಟಿ ಒಡ್ಡಬಹುದು ಎಂಬುದೇ ಆಗಿದೆ.

ಮಂಗಳವಾರ ದೆಹಲಿಯಲ್ಲಿ ನಡೆದ ಡಾಟೆಡ್ ಇಂಡಿಯಾ ಸರ್ವ ಸದಸ್ಯರ ಸಭೆಯಲ್ಲಿ ಖರ್ಗೆ ಹೆಸರು ಏಕಾಏಕಿ ಪ್ರಸ್ತಾಪಗೊಂಡು ಅಲ್ಲಿದ್ದ ನಾಯಕರಲ್ಲಿ ಅನೇಕರಿಗೆ ಇರಿಸು ಮುರಿಸು ಮಾಡಿತೆಂಬುದು ಸುಳ್ಳಲ್ಲ. ಆದರೆ ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ (Mamata banerjee) ಹಿಂದೆಮುಂದೆ ನೋಡದ ತಮ್ಮ ಪರಂಪರಾಗತ ಶೈಲಿಯಲ್ಲಿ ಖರ್ಗೆ ಹೆಸರನ್ನು ಪಟ್ಟಕ್ಕೆ ಸೂಚಿಸಿದರು. ಪೂರ್ವನಿಯೋಜಿತವೋ ಎಂಬಂತೆ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ ಕೇಜ್ರೀವಾಲ್‌ (Aravind Kejriwal) ಸೂಚನೆಯನ್ನು ಅನುಮೋದಿಸಿದರು. ಸಭೆಯಲ್ಲಿ ಹಾಜರಿದ್ದ ಜೆಡಿಯು ನಾಯಕ ನಿತಿಶ್ ಕುಮಾರ್, ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ ಯಾದವರಿಬ್ಬರೂ ತಥಾಕಥಿತ ಈ ಸೂಚನೆ ಮತ್ತು ಅನುಮೋದನೆಯಿಂದ ಕಕ್ಕಾಬಿಕ್ಕಿ ಆದರೆನ್ನುವುದು ಇಡೀ ಕಥೆಯ ವಾಚ್ಯ ಹೂರಣ.

ತಮ್ಮ ಹೆಸರನ್ನು ಏಕಾಏಕಿ ಸೂಚಿಸಿ ಅನುಮೋದಿಸಿದ್ದಕ್ಕೆ ಸ್ವತಃ ಖರ್ಗೆಯವರೇ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ಯಾರಾಗಬೇಕು ಎನ್ನುವುದು ಈ ಕ್ಷಣದ ಮುಖ್ಯವಲ್ಲ, ಲೋಕಸಭೆಯಲ್ಲಿ ಬಹುಮತ ಪಡೆಯುವುದು ಮೊದಲ ಆದ್ಯತೆ ಎಂದು ಅವರು ಸಮಜಾಯಿಶಿ ನೀಡಿದ್ದಾರೆ. ಅವರ ಈ ಮಾತು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ವಡ್ರಾ ಗಾಂಧಿಯವರಿಗೆ ತುಸುವಾದರೂ ಸಮಾಧಾನ ತಂದಿರಬಹುದಾದ ಬೆಳವಣಿಗೆ ಎನ್ನುವುದು ಸೂಚ್ಯ ಹೂರಣ.

ಖರ್ಗೆಯವರ ಹೆಸರಿನ ಪ್ರಸ್ತಾಪ ದೇಶದ ಉದ್ದಲಕ್ಕೆ ಮುಖ್ಯವಾಗಿ ಕಾಂಗ್ರೆಸ್ ವಲಯದಲ್ಲಿ ಸಂಭ್ರಮಾಚರಣೆಗೆ ಕಾರಣವಾಗಬೇಕಿತ್ತು. ಬದಲಿಗೆ ಆ ಪಕ್ಷದ ಪಾಳಯದಲ್ಲಿ ಒಂದು ಬಗೆಯ ಸ್ಮಶಾನಮೌನ ಆವರಿಸಿರುವುದನ್ನು ನೋಡಿದರೆ ಮೇಲಿನಿಂದ ಯಾರೋ ಬಾಯಿ ಬಿಡದಂತೆ ಹೊಲಿಗೆ ಹಾಕಿ ಭದ್ರ ಪಡಿಸಿದ್ದಾರೆ ಎನಿಸುತ್ತದೆ. ಖರ್ಗೆಯವರ ತೌರು ರಾಜ್ಯದಲ್ಲಿ ಈವರೆಗೆ ಬಂದಿರುವುದು ಇಬ್ಬರ ಪ್ರತಿಕ್ರಿಯೆ ಮಾತ್ರ. ಮೊದಲನೆಯದು ಅವರ ಪುತ್ರ ಪ್ರಿಯಾಂಕ್ ಖರ್ಗೆಯವರದು. ಅದರಲ್ಲಿ ವಿಶೇಷವೇನೂ ಇಲ್ಲ. ಖರ್ಗೆಯವರು ಪ್ರಧಾನಿಯಾದರೆ ಒಳ್ಳೆಯದು ಎಂಬ ಮೂರು ಶಬ್ದದ ಪ್ರತಿಕ್ರಿಯೆ ಅದು. ಪ್ರತಿಕ್ರಿಯಿಸಿರುವ ಇನ್ನೊಬ್ಬರು ಸತೀಶ ಜಾರಕಿಹೊಳಿ. ಮೋದಿ ವರ್ಸಸ್ ಯಾರೆಂಬುದು ಈವರೆಗಿನ ಪ್ರಶ್ನೆಯಾಗಿತ್ತು. ಖರ್ಗೆಯವರು ಮುಂಚೂಣಿಗೆ ಬಂದಲ್ಲಿ ಪ್ರಬಲ ಪೈಪೋಟಿ ಸಾಧ್ಯ ಎಂದಿದ್ದಾರೆ. ಅವರ ಈ ಮಾತು ಸೋನಿಯಾ ಶಿಬಿರದ ಕಣ್ಣು ಕೆಂಪಾಗಿಸಬಹುದಾದ ಗೂಢಾರ್ಥ ಹೊಂದಿದೆ.

2009ರಲ್ಲಿ ಎನ್‍ಡಿಎ ತನ್ನ ಪ್ರಧಾನಿ ಅಭ್ಯರ್ಥಿಯನ್ನಾಗಿ ಲಾಲ್‍ಕೃಷ್ಣ ಆಡ್ವಾಣಿಯವರ ಹೆಸರನ್ನು ಘೋಷಿಸಿದ ಮರು ಕ್ಷಣದಲ್ಲೇ ದೇಶದ ಉದ್ದಗಲಕ್ಕೆ ಬಿಜೆಪಿ ಕಾರ್ಯಕರ್ತರು ಮುಖಂಡರು ಸಂಭ್ರಮಿಸಿದ್ದರು. ಆದರೆ ಚುನಾವಣೆಯಲ್ಲಿ ಜನ ಮತ್ತೆ ಯುಪಿಎಯನ್ನೇ ಅಧಿಕಾರಕ್ಕೆ ತಂದರು, ಮನಮೋಹನ್ ಸಿಂಗ್ ಎರಡನೇ ಅವಧಿಗೆ ಪ್ರಧಾನಿಯಾಗಿ ಮುಂದುವರಿದರು. ಆದರೆ ಕಾಂಗ್ರೆಸ್ ಪಾಳಯ ಆನಂದಿಸಲೂ ಆಗದ ಸುದ್ದಿಯನ್ನು ಅಲ್ಲಗಳೆಯಲೂ ಆಗದ ಸಂಕಟದಲ್ಲಿ ಈಗ ತೊಳಲಾಡುತ್ತಿದೆ. ಆ ಪಕ್ಷದಲ್ಲಿ ನೆಹರೂ ಗಾಂಧಿ ಕುಟುಂಬದ ಆಚೆ ಇರುವವರು ಪ್ರಧಾನಿ ಆಗಲಾರರು ಆಗಬಾರದು ಎಂದೇನೂ ಇಲ್ಲ. ಆದರೆ ಯಾರು ಆಗಬೇಕು ಎನ್ನುವುದನ್ನು ನಿರ್ಧರಿಸುವ ಪರಮಾಧಿಕಾರ ಸೋನಿಯಾ ಮತ್ತು ಮಕ್ಕಳದು. ಸೋನಿಯಾ ಸೂಚಿಸಿದರು ಎಂಬೊಂದೇ ಕಾರಣಕ್ಕೆ ಪಕ್ಷ, ಮನಮೋಹನ್ ಸಿಂಗ್ ಅವರನ್ನು ಒಪ್ಪಿಕೊಂಡಿದ್ದು 2009ರ ಚುನಾವಣೋತ್ತರ ಇತಿಹಾಸ.

india bloc meeting mumbai

ಇಷ್ಟೆಲ್ಲ ಒಳಸುಳಿಯ ಹಿಕಮತ್ ಇರುವಾಗ ಡಾಟೆಡ್‌ ಇಂಡಿಯಾ ಸಭೆಯಲ್ಲಿ “ಯಾರೋ ಮೂರನೆಯವರು ಸೂಚಿಸಿ, ಅನುಮೋದಿಸಿದರೆ” ಅದು ಕಾಂಗ್ರೆಸ್ ಶಿಬಿರದಲ್ಲಿ ಜೀರ್ಣ ಆದೀತೇ. ಇಲ್ಲ ಇಲ್ಲ ಖಂಡಿತವಾಗಿಯೂ ಇಲ್ಲವೇ ಇಲ್ಲ. ಹಾಗಂತ ಸಭೆಯಲ್ಲಿದ್ದ ಕಾಂಗ್ರೆಸ್ಸೇತರ ಪಕ್ಷಗಳ ಮುಖಂಡರು ಮಮತಾ ಮತ್ತು ಕೇಜ್ರೀವಾಲಾ ಮಂಡಿಸಿದ ನಿರ್ಣಯಕ್ಕೆ ಚಪ್ಪಾಳೆ ತಟ್ಟಿ ಸ್ವಾಗತಿಸಿದರೆ ಎಂದರೆ ಅದೂ ಇಲ್ಲ. ಯಾರಿಗೂ ಆ ಸಂದರ್ಭ ಸನ್ನಿವೇಶದಲ್ಲಿ ಬೇಡವಾಗಿದ್ದ ಉಸಾಬರಿ ಈ ಇಬ್ಬರಿಗೆ ಮಾತ್ರವೇ ಏಕೆ ಅಮರಿಕೊಂಡಿತು ಎನ್ನುವ ವಿಚಾರದಲ್ಲಿ ಹತ್ತಾರು ಕಥೆಗಳು ಕಾಲು ಕೈ ರೆಕ್ಕೆ ಪುಕ್ಕ ಇಲ್ಲದೆ ಈಗ ಸರಿದಾಡುತ್ತಿವೆ. ಖರ್ಗೆ ವಿಚಾರದಲ್ಲಿ ಕೇಳಿಬಂದಿರುವ ಸೂಚನೆ, ಅನುಮೋದನೆ ಅಧಿಕೃತವಲ್ಲ ಎಂದು ಕೂಡಾ ಈವರೆಗೆ ಒಕ್ಕೂಟದ ಯಾರೂ ಹೇಳಿಲ್ಲ. ಹೌದು ಯಾರು ಹೇಳಬೇಕು…? ಒಕ್ಕೂಟಕ್ಕೆ ಸಂಚಾಲಕ ಇದ್ದಿದ್ದರೆ ಅವರು ಹೇಳಬಹುದಾಗಿತ್ತು. ಯುಪಿಎ ಇದ್ದಾಗ ಸೋನಿಯಾ ಗಾಂಧಿ ಅದರ ಚೇರ್ ಪರ್ಸನ್ ಆಗಿದ್ದರು. ಅದು ಸಾಂವೈಧಾನಿಕ ಸ್ಥಾನ ಅಲ್ಲದಿದ್ದರೂ ಕೇಂದ್ರ ಸರ್ಕಾರದ ಜಾಹೀರಾತುಗಳಲ್ಲಿ ಪ್ರಧಾನಿಗೆ ಸಮಸಮನಾಗಿ ಪ್ರಚಾರ ಪ್ರಸಿದ್ಧಿ ಪಡೆದರು. ಈಗ ಡಾಟೆಡ್ ಇಂಡಿಯಾ ಮುಂಡದ ಸ್ಥಿತಿಯಲ್ಲಿದೆ, ಮುಂಡದ ಜೋಡಣೆ ಇನ್ನಷ್ಟೇ ಆಗಬೇಕಿದೆ. ಹಾಗಾಗಿ ಯಾರೊಬ್ಬರೂ ಪ್ರತಿಕ್ರಿಯಿಸಲಿಲ್ಲ, ಅಲ್ಲಗಳೆಯಲಿಲ್ಲ, ನಿರಾಕರಿಸಲಿಲ್ಲ. ಎಲ್ಲರೂ ಅನ್ನದ ತುತ್ತಿನಲ್ಲಿ ಕಲ್ಲು ಹರಳು ಸಿಕ್ಕವರಂತೆ ಚಡಪಡಿಸಿದ್ದಷ್ಟೇ ಬಂತು.

ಸಭೆ ನಡೆದುದು ಮಂಗಳವಾರ. ಬುಧವಾರದ ಹೊತ್ತಿಗೆ ಸ್ಫೋಟಕ ಸ್ಥಿತಿ ನಿರ್ಮಾಣವಾಗಿತ್ತು. ಪಟನಾದಲ್ಲಿ ನಿತಿಶ್ ಕುಮಾರ್, ಲಾಲೂ ಪ್ರಸಾದರಿಬ್ಬರೂ ಕೆಂಡ ಕಾರಿಕೊಂಡರು. ಅದಕ್ಕೆ ಕಾರಣವಿತ್ತು. ಪ್ರಧಾನಿ ಮುಖ ನಿತಿಶ್ ಕುಮಾರ್‌ಗೆ ಹೊಂದುತ್ತದೆಂದು ಆಗಾಗ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿರುವ ಸುದ್ದಿ ಮಮತಾ ಹೊಟ್ಟೆಯಲ್ಲಿ ಮೊಸರು ಕಡೆಯುತ್ತಿತ್ತು. ಅವರಿಗೆ ಈ ಮುಖ ಬೇಕಿರಲಿಲ್ಲ. ಅತ್ತ ಎರಡು ರಾಜ್ಯದಲ್ಲಿ ತಮ್ಮ ಪಕ್ಷದ ಆಡಳಿತ ನಡೆಸಿರುವ ಕೇಜ್ರೀವಾಲಾರಿಗೂ ನಿತಿಶ್ ಮುಖ ಬೇಕಿರಲಿಲ್ಲ. ಡಾಟೆಡ್ ಇಂಡಿಯಾದ ಬೇರೆ ಯಾರಾದರೂ ನಾಯಕರು ಇವರ ಹೆಸರನ್ನು ಸೂಚಿಸಿ ಅನುಮೋದಿಸಿ ಭಾನಗಡಿ ಮಾಡುವುದಕ್ಕೆ ಮೊದಲೇ ಕೇವಿಯಟ್ ಹಾಕುವ ತಂತ್ರವಾಗಿ ಖರ್ಗೆ ಹೆಸರನ್ನು ಮುಂಚೂಣಿಗೆ ತರುವ ಕೆಲಸ ನಡೆಯಿತು ಎನ್ನುವುದು ನಿತಿಶ್, ಲಲ್ಲೂ ಹೊಟ್ಟೆಯಲ್ಲಿ ಬಗ್ಗಡವೇಳಿಸಿರುವ ಹಕೀಕತ್ತು.

ಇದನ್ನೂ ಓದಿ: ಮೊಗಸಾಲೆ ಅಂಕಣ: ಉತ್ತರ ಕರ್ನಾಟಕಕ್ಕೆ ಉತ್ತರ ನೀಡದ ಬೆಳಗಾವಿ ಅಧಿವೇಶನ

ಹಾಗಂತ ಒಕ್ಕೂಟದಿಂದ ಅವರಿಬ್ಬರೂ ಹೊರಕ್ಕೆ ಕಾಲಿಟ್ಟರು ಎಂದು ವ್ಯಾಖ್ಯಾನಿಸಿ ಸಂಭ್ರಮಿಸುವುದು ಕೆಟ್ಟ ಅವಸರದ ನಿಲುವಾದೀತು. ಹೊರಗೆ ಬಂದರು ಅವರು ಎಂದಿಟ್ಟುಕೊಳ್ಳೋಣ, ಹೊರಬಿದ್ದವರು ಹೋಗಬೇಕಾದರೂ ಎಲ್ಲಿಗೆ…? ಹಾಗಂತ ಅಸಮಾಧಾನ ತಾಳಿದವರು ಇವರಿರಂತೂ ಅಲ್ಲ. ಮಾರ್ಕ್ಸ್‌ವಾದಿ ಕಮ್ಯೂನಿಸ್ಟ್ ಪಕ್ಷ ಮತ್ತು ಭಾರತ ಕಮ್ಯೂನಿಸ್ಟ್ ಪಕ್ಷಗಳು ಅಸಮಾಧಾನವನ್ನು ಹೊರ ಹಾಕಿವೆ. ಇಂಥದೊಂದು ಮಹತ್ವದ ಸ್ಥಾನಕ್ಕೆ ಯಾರು ಸೂಕ್ತ ಎಂಬ ಬಗ್ಗೆ ಚರ್ಚೆಯೇ ನಡೆಯದೆ ಯಾರೋ ಇಬ್ಬರ ತೆವಲು ವಿಜೃಂಭಿಸುವುದು ಎಷ್ಟು ಮಾತ್ರಕ್ಕೂ ಒಪ್ಪಿತವಲ್ಲ ಎಂಬ ಈ ಪಕ್ಷಗಳ ನಿಲುವು ಸರಿಯಾದ ನಿರ್ಧಾರವೂ ಹೌದು; ಗಟ್ಟಿ ನಿರ್ಧಾರವೂ ಹೌದು. ಇದು ಸೋನಿಯಾ ಬಳಗಕ್ಕೆ ಒಳಗೊಳಗೇ ನೆಮ್ಮದಿ ಸಂತೋಷ ತಂದಿರುವ ವಿದ್ಯಮಾನ.

ಯಾವ ಒಕ್ಕೂಟ ಅಧಿಕಾರಕ್ಕೆ ಬರಲಿದೆ; ಯಾರು ಪ್ರಧಾನಿ ಆಗಲಿದ್ದಾರೆಂಬುದು ಮೇ ತಿಂಗಳ ಮಧ್ಯಭಾಗದ ಹೊತ್ತಿಗೆ ನಿಚ್ಚಳವಾಗುತ್ತದೆ. ಯಾವ ಪಕ್ಷ ಒಕ್ಕೂಟ ಅಧಿಕಾರಕ್ಕೆ ಬಹುಮತದೊಂದಿಗೆ ಬರಬೇಕು ಎನ್ನುವುದನ್ನು ನಿರ್ಣಯಿಸುವವರು ಮತದಾರರು. ಅವರ ಮನಸ್ಸಿನಲ್ಲಿ ಏನು ಇದೆ ಎನ್ನುವುದು ಯಾವ ಎಕ್ಸರೇಗೂ ನಿಲುಕದ ರಹಸ್ಯ. ಆಡಳಿತ ಪಕ್ಷದ ವಿರುದ್ಧ ಜನಮನ ತಿರುಗಿಬಿದ್ದಿದೆ ಎಂಬ ವಿರೋಧ ಪಕ್ಷಗಳ ನಂಬಿಕೆಯಾಗಲೀ, ಜನ ಈಗಲೂ ನಮ್ಮೊಂದಿಗೇ ಇದ್ದಾರೆಂಬ ಆಡಳಿತ ಪಕ್ಷದ ವಿಶ್ವಾಸವಾಗಲೀ ಗಟ್ಟಿ ನೆಲದ ಮೇಲೆ ನಿಂತಿಲ್ಲ. ಚುನಾವಣೆ ನಡೆಯಬೇಕು, ಮತದಾನವಾಗಿ ಮತ ಎಣಿಕೆ ಪ್ರಗತಿ ಹಂತಕ್ಕೆ ಹೊರಳಬೇಕು. ಅಲ್ಲೀವರೆಗೂ ಊಹಾಪೋಹದ್ದೇ ಪಾರಮ್ಯ.

ಇದನ್ನೂ ಓದಿ: ಮೊಗಸಾಲೆ ಅಂಕಣ: ಒಣಗಿದ ಜಿಲ್ಲೆಯಲ್ಲಿ ಜೋಗದ ಬದಲು ಕಚ್ಚಾಟದ ರೋಗ

Exit mobile version