ಒಂದಾನೊಂದು ಕಾಲದಲ್ಲಿ ಸಮರದ ಭಾಗವಾಗಿ ಗದಾಯುದ್ಧವೇ ಅಲ್ಲದೆ ದೃಷ್ಟಿ ಯುದ್ಧ, ಮುಷ್ಟಿ ಯುದ್ಧ ಇತ್ಯಾದಿಯೂ ನಡೆಯುತ್ತಿತ್ತು ಎಂದು ಓದಿದ್ದೇವೆ. ತದನಂತರದ ಜಮಾನಾದಲ್ಲಿ ವಾಕ್ ಸಮರ. ಯಾರಿಗೆ ಯಾರು ಬೇಕಾದರೂ ಏನನ್ನೂ ಅನ್ನಬಹುದು; ಅನ್ನುವುದು ಎಂದರೆ ಚಾರಿತ್ರ್ಯ ಹನನದ ಮಾತುಗಳು ಎಂದೇ ಅರ್ಥ. ಬೈಯ್ಗುಳ ಸಲ್ಲದು ಎಂಬ ಮಾತು ವಿನಯವಂತರ ಡಿಕ್ಷನರಿಯಲ್ಲಿ ಮಾತ್ರವೇ ಇದೆ. ಮರ್ಯಾದಾ ಮಿತಿಯನ್ನು ಮೀರಬೇಡ ಎಂದು ತಿಳಿ ಹೇಳುವವರ ಬಾಯನ್ನು ಬೈಯ್ದು ಮುಚ್ಚಿಸುವ ಪ್ರವೃತ್ತಿಯೂ ನಮ್ಮಲ್ಲಿದೆ. ಪಶು ಪಕ್ಷಿಗಳಲ್ಲಿ ಕಚ್ಚಾಟದ ಸ್ವಭಾವವಿದೆ. ಆ ಕಚ್ಚಾಟ ನಡೆಯುವುದು ತನ್ನ ಗಡಿ ಸಂರಕ್ಷಣೆಗೆ ಮತ್ತು ತಿನ್ನುವ ಆಹಾರಕ್ಕೆ ಸೀಮಿತಗೊಳಿಸಿ ಮಾತ್ರ. ಅದರಾಚೆಗೆ ಅವುಗಳಲ್ಲಿ ಹೇಯ ಭಾಷೆ ಬಳಕೆ ಇಲ್ಲ. ಯಾವುದನ್ನೆಲ್ಲ ಬೇಡ ಎಂದು ಶಿಷ್ಟ ಸಮಾಜ ಹೇಳುತ್ತದೆಯೋ ಅದೆಲ್ಲವನ್ನೂ ಮಾಡಿಕೊಂಡು ಬರುತ್ತಿರುವವರು ನಾವು ಮನುಷ್ಯ ಮಾತ್ರರು.
ಮನುಷ್ಯರನ್ನು “ಪೊಲಿಟಿಕಲ್ ಅನಿಮಲ್” ಎನ್ನುತ್ತದೆ ಸಮಾಜ ವಿಜ್ಞಾನ. ರಾಜಕೀಯ ಮಾಡದೆ ಮನುಷ್ಯರಿಗೆ ಉಸಿರಾಟವೇ ಇಲ್ಲ ಎಂಬ ಅರ್ಥದಲ್ಲಿ ಈ ವ್ಯಾಖ್ಯಾನ ಬಂದಿರುವ ಸಾಧ್ಯತೆ ಉಂಟು. ಇಲ್ಲವಾದರೆ ಪ್ರತಿಯೊಂದರಲ್ಲೂ ರಾಜಕೀಯ ಮಾಡುವ ಉಸಾಬರಿ ಮನುಷ್ಯರಿಗೆ ಅಗತ್ಯವಿರಲಿಲ್ಲ. ರಾಜಕೀಯ ಮಾಡುವುದೇ ರಾಜಕಾರಣದ ಗುರಿ ಎನ್ನುವುದು ಸದ್ಯದ ಸ್ಥಿತಿ. ಅಭಿವೃದ್ಧಿ ರಾಜಕಾರಣದ ಗುರಿ ಎನ್ನುವ ನೀತಿ ಸತ್ತು ಕರಕಲಾಗಿ ದಶಕಗಳೇ ಉರುಳಿ ಹೋಗಿರುವ ದೇಶದಲ್ಲಿ ಏನೆಲ್ಲ ಆಗಬಾರದೋ ಅವೆಲ್ಲವೂ ಆಗುತ್ತಿದೆ. ರಾಜಕಾರಣದ ಬಗೆಬಗೆಯ ವಿಕೃತಿಗಳಿಗೆ ವರ್ತಮಾನ ಸಾಕ್ಷಿಯಾಗಿದೆ.
ಸ್ವಾತಂತ್ರ್ಯ್ಯದ ಅಮೃತ ಮಹೋತ್ಸವದ ಗುಂಗಿನಿಂದ ದೇಶ ಇನ್ನೂ ಹೊರ ಬಂದಿಲ್ಲ. ಮುಂದಿನ ಕೆಲವು ತಿಂಗಳಾದರೂ ಅದರ ಭರಾಟೆ ಮುಂದುವರಿಯುತ್ತದೆ. ಭಾರತದಂಥ ಬೃಹತ್ ಜನಸಂಖ್ಯೆಯ, ನಗರ/ಪಟ್ಟಣ ಕೇಂದ್ರಿತ ಜನಸಾಂದ್ರತೆಯ ದೇಶದಲ್ಲಿ ಸಕಲಕ್ಕೂ ಜಾಹೀರಾತಿನ ಕವಚ. ಜನರಿಗೆ ವಾಸ್ತವದ ಮನವರಿಕೆ ಮಾಡಿಕೊಡುವ ಹೊಣೆ ಜಾಹೀರಾತಿನ ಮೇಲೆ ಈಗ ಇಲ್ಲ. ಸುಳ್ಳನ್ನು ಜನ ನಂಬುವಂತೆ ಮಾಡಲು ಸುವ್ಯವಸ್ಥಿತವಾದ ಒಂದು ಮಾರ್ಗವಾಗಿ ಜಾಹೀರಾತು ರೂಪಾಂತರಗೊಂಡು ಕಾಲವೇ ಆಗಿದೆ. ನಂಬುವವರು ನಂಬಬಹುದು, ನಂಬಲು ಒಲ್ಲದವರ ಸ್ವಾತಂತ್ರ್ಯ ಅವರ ಮನಸ್ಸಿನಲ್ಲೇ ಇದೆ. ನಂಬುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಎನ್ನುವುದು ಜಾಹೀರಾತುಗಳನ್ನು ಗಮನಿಸಿದರೆ ಮನವರಿಕೆ ಆಗುತ್ತದೆ. ಇಷ್ಟೆಲ್ಲ ಪ್ರವರದ ಮುನ್ನುಡಿಗೆ ಕಾರಣವಾದುದು ಸ್ವಾತಂತ್ರ್ಯದ ದಿವಸ ಮತ್ತು ಅದರ ಮುನ್ನಾ ದಿನ ಪ್ರಕಟವಾದ ಒಂದಿಷ್ಟು ಸರ್ಕಾರದ ಪ್ರಾಯೋಜಿತ ಜಾಹೀರಾತು.
ದೇಶದಲ್ಲಿ ಸ್ವಾತಂತ್ರ್ಯ ಪೂರ್ವದ ರಾಜಕೀಯಕ್ಕೂ ನಂತರದ ರಾಜಕಾರಣಕ್ಕೂ ತಾಳಮೇಳ ಎಂಬುದಿಲ್ಲ. ಸ್ವತಂತ್ರ ದೇಶವಾಗುವುದಷ್ಟೆ ಆಗ ಇದ್ದ ಏಕೈಕ ಆದ್ಯತೆಯಾಗಿತ್ತು. ಸ್ವಾತಂತ್ರ್ಯದೊಂದಿಗೆ ದೇಶವಾಸಿಗಳು ಕಂಡಿದ್ದ ಕನಸುಗಳೆಲ್ಲವೂ ನನಸಾಗುತ್ತವೆಂಬ ನಂಬಿಕೆ ಆಧರಿಸಿದ ಆದ್ಯತೆ ಅದಾಗಿತ್ತು. ಕ್ರಮೇಣ ಜನರ ವಿಶ್ವಾಸ ಕಮರುತ್ತ ಸಾಗಿ, ಅಭಿವೃದ್ಧಿ ಕುಂಠಿತಗೊಳ್ಳುತ್ತಿರುವುದಕ್ಕೆ ಕಾರಣಗಳ ಹುಡುಕಾಟ ಶುರುವಾಯಿತು. ಆ ಯತ್ನದ ಭಾಗವಾಗಿ ಜನ ಕಂಡುಕೊಂಡ ಮುಖ್ಯವಾದ ಸ್ಪಷ್ಟ ಕಾರಣ ಪಕ್ಷ(ಪಾತದ) ರಾಜಕಾರಣ. ಚುನಾವಣೆ ಮುಗಿಯುವವರೆಗೆ ಚುನಾವಣಾ ರಾಜಕಾರಣ, ಚುನಾವಣೋತ್ತರದಲ್ಲಿ ಅಭಿವೃದ್ಧಿ ರಾಜಕಾರಣ ನಮ್ಮ ಮಂತ್ರವಾಗಬೇಕಿತ್ತು. ಮಂತ್ರ ಮರೆತು ತಂತ್ರಕ್ಕೆ ಮನಸ್ಸು ಕೊಟ್ಟಿದ್ದು ನಮ್ಮ ರಾಜಕಾರಣ.
ಎಪ್ಪತ್ತೈದನೇ ಸ್ವಾತಂತ್ರ್ಯ ಮಹೋತ್ಸವ ಆಡಳಿತ ಪಕ್ಷಗಳ ಪಾಲಿಗೆ ಅವುಗಳ ಬೇಕು ಬೇಡಗಳಿಗೆ ಅನುಗುಣವಾಗಿ; ವಿರೋಧ ಪಕ್ಷಗಳ ಪಾಲಿಗೆ ಅವು ಬಯಸಿದ ಹಾಗೂ ಬಯಸದ ನೆಪಗಳಿಗೆ ಅನುಗುಣವಾಗಿ ನಡೆದಿದ್ದು ಅಸಹ್ಯ ರಾಜಕಾರಣದ ಕ್ರೂರ ಮಾದರಿ. ಹಲವು ಅಲ್ಲದಿದ್ದರೂ ಕೆಲವು ಸ್ವಾತಂತ್ರ್ಯೋತ್ಸವಗಳನ್ನು ದೇಶ ಆಚರಿಸಿದ ರೀತಿಯನ್ನು ನೋಡಿರುವ ಒಂದೆರಡು ಪೀಳಿಗೆಗೆ “ಜನತಂತ್ರದ ಮಾನ ಮರ್ಯಾದೆಯನ್ನು” ಹೀಗೂ ಹರಾಜಿಗೆ ಇಡಬಹುದೆ ಎಂಬ ಅನುಮಾನ ಕಾಡಿದ್ದರೆ ಅದರಲ್ಲಿ ಯಾವ ತಪ್ಪನ್ನು ಹುಡುಕಲು ಸಾಧ್ಯ?
ಇದನ್ನೂ ಓದಿ: ಸವಿಸ್ತಾರ ಅಂಕಣ | ನಮ್ಮ ನ್ಯಾಷನಲ್ ಹೀರೊಗಳನ್ನು ನಾವು ಗೌರವಿಸುವುದು ತಪ್ಪಾ?
ಕರ್ನಾಟಕದ ಬಿಜೆಪಿ ಸರ್ಕಾರ, ತನ್ನದೇ ವಾರ್ತಾ ಮತ್ತು ಸಂಪರ್ಕ ಇಲಾಖೆ ಮೂಲಕ ಪ್ರಕಟಿಸಿದ ಪೂರ್ಣ ಪುಟದ “ಸ್ವಾತಂತ್ರ್ಯ ದಿನಾಚರಣೆ”ಯ ಜಾಹೀರಾತು ರಾಜ್ಯದಲ್ಲಿ ಸಾಕಷ್ಟು ಸಂಚಲನ, ವಿವಾದಕ್ಕೆ ಕಾರಣವಾಗಿದೆ. ಆಗಸ್ಟ್ ೧೪ರಂದು ಪ್ರಕಟವಾದ ಜಾಹೀರಾತಿನಲ್ಲಿ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂರ ಭಾವಚಿತ್ರವನ್ನು ಕೈಬಿಟ್ಟಿರುವ ಇಲಾಖೆಯ ರೀತಿ ಸಹಜವಾಗಿಯೇ ವಿವಾದಕ್ಕೆ ಗ್ರಾಸವೊದಗಿಸಿದೆ. ಜಾಹೀರಾತಿನಲ್ಲಿ ನೆಹರೂರ ಚಿಕ್ಕದಾದರೂ ರೇಖಾ ಚಿತ್ರವೊಂದರ ಬಳಕೆಯಾಗಿದೆ, ನಿಜ. ಜಾಹೀರಾತು ಪ್ರಕಟವಾದ ತರುವಾಯದಲ್ಲಿ ಎದುರಾಗಬಹುದಾದ ಟೀಕೆ ವಿರೋಧಗಳಿಗೆ ಉತ್ತರ ಕೊಡಲೆಂದೇ “ಕೇವಿಯಟ್” ರೂಪದ ಕ್ರಮವಾಗಿ ರೇಖಾ ಚಿತ್ರ ಬಳಸಲಾಗಿದೆ ಎಂದು ಸರ್ಕಾರದ ನೀತಿಗೆ ವಿರೋಧ ದಾಖಲಿಸಿರುವ ಕಾಂಗ್ರೆಸ್ಸಿಗರು ನಂಬಲು ಆಧಾರವಿದೆ. ನೆಹರೂ ವಿಚಾರದಲ್ಲಿ ಬಿಜೆಪಿ ಆಕ್ರೋಶಕ್ಕೆ ನೂರು ಕಾರಣ ಇರಬಹುದು. ಆದರೆ ಮೊದಲ ಪ್ರಧಾನಿಯನ್ನು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂತಸದ ಸಮಯದಲ್ಲಿ ತೃಣೀಕರಿಸಲು ಒಂದೇ ಒಂದು ಕಾರಣವೂ ಇರಲಾರದು. ರಾಜಕೀಯ ವಿರೋಧ ಬೇರೆ; ವಸ್ತುಸ್ಥಿತಿಗೆ ಕೊಡುವ ಗೌರವ ಬೇರೆ. ಬಿಜೆಪಿ ಏನೇ ಮಾಡಿದರೂ, ನೆಹರೂ ದೇಶದ ಮೊದಲ ಪ್ರಧಾನಿ ಎನ್ನುವುದನ್ನು ಒರೆಸಿಹಾಕುವುದು ಆಗದ ಮಾತು. ಹೀಗಿರುವಾಗ ತಲೆ ಗಟ್ಟಿ ಇದೆ ಎಂದು ಬಂಡೆಗೆ ಜಜ್ಜಿಕೊಳ್ಳುವ ಉಪದ್ವ್ಯಾಪದ ಸಲಹೆಯನ್ನು ಬಿಜೆಪಿ ತಲೆಗೆ ಯಾರು ತುಂಬಿದರೋ!?
ಈ ಬಗೆಯ ಹುಚ್ಚಾಟ ಕರ್ನಾಟಕದಲ್ಲಿ ಮಾತ್ರವೇ ನಡೆಯುತ್ತಿದೆ ಎಂಬ ಭಾವನೆ ಬೇಡವೇ ಬೇಡ. ಕಾಂಗ್ರೆಸ್ ಆಳ್ವಿಕೆಯ ರಾಜ್ಯಗಳಲ್ಲಿ ಅದು ಇನ್ನೂ ಅಧ್ವಾನ. ರಾಜಸ್ತಾನದಲ್ಲಿ ಕಾಂಗ್ರೆಸ್ ಸರ್ಕಾರವಿದೆ. ಅದು ಆಗಸ್ಟ್ ೧೫ರಂದು ಪ್ರಕಟಿಸಿರುವ ಸ್ವಾತಂತ್ರ್ಯದ ಅಮೃತ ಮಹೋತ್ಸವ ಜಾಹೀರಾತಿನಲ್ಲಿ ರಾಷ್ಟ್ರಧ್ವಜ ಹಿಡಿದು ತದೇಕ ಚಿತ್ತದಲ್ಲಿ ಅದನ್ನೇ ನೋಡುತ್ತಿರುವ ನೆಹರೂ ಚಿತ್ರ ಬಿಟ್ಟರೆ ಇಡೀ ಪುಟದಲ್ಲಿರುವ ಇನ್ನೊಬ್ಬ ಗಣ್ಯ ಎಂದರೆ ಆ ರಾಜ್ಯದ ಮುಖ್ಯಮಂತ್ರಿ ಅಶೋಕ ಗೆಹ್ಲಾಟ್ ಮಾತ್ರ. ಕರ್ನಾಟಕ ಸರ್ಕಾರದ ಜಾಹೀರಾತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಚಿತ್ರವಿದೆ; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಿತ್ರವೂ ಇದೆ. ಮಹಾತ್ಮ ಗಾಂಧೀ, ಸುಭಾಷ್ ಚಂದ್ರ ಬೋಸ್, ಸರ್ದಾರ್ ಪಟೇಲ್, ಭಗತ್ ಸಿಂಗ್, ಚಂದ್ರಶೇಖರ ಆಜಾದ್, ಬಿ.ಆರ್.ಅಂಬೇಡ್ಕರ್, ಸಾವರ್ಕರ್, ಮೌಲಾನಾ ಆಜಾದ್, ಝಾನ್ಸಿರಾಣಿ ಲಕ್ಷ್ಮೀಬಾಯಿ, ಕಿತ್ತೂರು ಚನ್ನಮ್ಮ, ಸಂಗೊಳ್ಳಿ ರಾಯಣ್ಣ…..ವರ್ಷದ ಹಿಂದೆ ತೀರಿಕೊಂಡ ಎಚ್.ಎಸ್. ದೊರೆಸ್ವಾಮಿ ಸೇರಿದಂತೆ ಹಲವರ ಚಿತ್ರ ಬಳಸಲಾಗಿದೆ.
ರಾಜಸ್ತಾನ ಕಾಂಗ್ರೆಸ್ ಸರ್ಕಾರದ ಜಾಹಿರಾತಿನಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಕಾಂಗ್ರೆಸ್ ವಿರೋಧಿಗಳನ್ನು ಮಾತ್ರವೇ “ಕಿಕ್ ಔಟ್” ಮಾಡಿಲ್ಲ. ಸ್ವಾತಂತ್ರ್ಯಪೂರ್ವದ ಕಾಂಗ್ರೆಸ್ ಆಂದೋಳನದಲ್ಲಿದ್ದು ನೆಹರೂ ಜೊತೆ ಕೈಜೋಡಿಸಿದ ಎಲ್ಲರನ್ನೂ ಸಾರಾಸಗಟಾಗಿ ಹೊರ ಹಾಕಲಾಗಿದೆ. ಅದರಲ್ಲಿ ಮಹಾತ್ಮಾ ಗಾಂದಿಯವರಿಗೇ ಜಾಗ ಇಲ್ಲ ಎಂದಾದಮೇಲೆ ಉಳಿದವರ ಪಾಡು ಅರ್ಥವಾಗುವಂಥದೇ. ಬೊಮ್ಮಾಯಿ ಸರ್ಕಾರದ ನಡವಳಿಕೆಯನ್ನು ಟೀಕಿಸುವ ಸ್ಥಳೀಯ ಕಾಂಗ್ರೆಸ್ ನಾಯಕರು ತುಟಿ ಬಾಯಿಗೆ ಹೊಲಿಗೆ ಹಾಕಿಸಿಕೊಳ್ಳುವಂತೆ ಇದು ಮಾಡಿದೆ. ಕಾಂಗ್ರೆಸ್ ಸರ್ಕಾರವೇ ಇರುವ ಚತ್ತೀಸ್‌ಘಡದ ಮುಖ್ಯಮಂತ್ರಿ ಭೂಪೇಶ್ ಬಘೇಲ್, ಗೆಹ್ಲಾಟ್ ದಾರಿಯಲ್ಲೇ ಸಾಗಿದ್ದಿರಬಹುದು.
ತಮಿಳುನಾಡಿನಲ್ಲಿ ಡಿಎಂಕೆ-ಕಾಂಗ್ರೆಸ್ ಮೈತ್ರಿ ಸರ್ಕಾರವಿದೆ. ಅದೇ ರೀತಿ ಜಾರ್ಖಂಡದಲ್ಲಿ ಕಾಂಗ್ರೆಸ್-ಜಾರ್ಖಂಡ್ ಮುಕ್ತಿ ಮೋರ್ಚಾ ಸಮ್ಮಿಶ್ರ ಸರ್ಕಾರವಿದೆ. ಅದರ ಹೊರತಾಗಿ ಪಶ್ಚಿಮ ಬಂಗಾಳ, ಕೇರಳ, ದೆಹಲಿ, ಪಂಜಾಬ್, ತಮಿಳುನಾಡು, ತೆಲಂಗಾಣ, ಆಂಧ್ರ ಪ್ರದೇಶದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಸಮಾನ ಅಂತರದಲ್ಲಿಟ್ಟಿರುವ ಪಕ್ಷಗಳ ಸರ್ಕಾರಗಳೇ ಇವೆ. ಆ ಸರ್ಕಾರಗಳನ್ನು ನಡೆಸುತ್ತಿರುವ ಪಕ್ಷಗಳಿಗೆ ಕಾಂಗ್ರೆಸ್ ಅಥವಾ ಬಿಜೆಪಿ ವಿಚಾರದಲ್ಲಿ ಮತ್ತು ಆ ಎರಡೂ ಪಕ್ಷಗಳ ನಾಯಕರು ಸ್ವಾತಂತ್ರ್ಯ ಹೋರಾಟಕ್ಕೆ ನೀಡಿರಬಹುದಾದ ಕೊಡುಗೆ ವಿಚಾರದಲ್ಲಿ ಗೌರವ ಇರುವುದು ಅನುಮಾನ.
ಇದನ್ನೂ ಓದಿ: ಧೀಮಹಿ ಅಂಕಣ | ಕಾಲದೇಶದ ಸ್ಮರಣೆಯ ಮಹಾಸಂಕಲ್ಪ
ಸ್ವಾಭಿಮಾನದ ಸ್ಮರಣೆ ಕಾರ್ಯಕ್ರಮ ಸ್ವಾತಂತ್ರ್ಯೋತ್ಸವ. ಜಾಹೀರಾತು ಅಥವಾ ಪಕ್ಷ ರಾಜಕೀಯಕ್ಕೆ ಸೀಮಿತವಾಗಿರುವ ವಿಚಾರ ಇದಲ್ಲ. ರಾಜಕೀಯ ಚಸ್ಮಾ ಧರಿಸಿ ಅದರ ಮೂಲಕ ನೋಡುವುದು ಸ್ವಾತಂತ್ರ್ಯ ಹೋರಾಟಕ್ಕೆ ಅಸಂಖ್ಯರು ನೀಡಿರುವ ಕೊಡುಗೆಯನ್ನು ಅಗೌರವಿಸಿದಂತೆ ಆಗುತ್ತದೆ. ಸೀತಾ ಮಾತೆಯನ್ನು ರಕ್ಷಿಸುವ ಸಲುವಾಗಿ ಲಂಕೆಗೆ ಹೋಗುವ ಸಂದರ್ಭದಲ್ಲಿ ಸಮುದ್ರದ ಮೇಲೆ ಸೇತುವೆ ನಿರ್ಮಿಸುವ ರಾಮಚಂದ್ರನ ಯೋಜನೆಯಲ್ಲಿ ಅಳಿಲೂ ಭಾಗಿಯಾಗುತ್ತದೆಂದು ಪುರಾಣದಲ್ಲಿ ಓದಿದ್ದೇವೆ. ಅಳಿಲು ಏನು ಮಾಡಲು ಸಾಧ್ಯ…? ಅದೇನು ಬಂಡೆಗಲ್ಲನ್ನು ಹೊತ್ತು ತಂದಿತೇನು ಎಂದು ಕೇಳುವವರು ಇದ್ದಾರೆ. ಅಳಿಲು ಮಾಡಿದ್ದು ಇಷ್ಟೆ. ಸಮುದ್ರದ ನೀರಿನಲ್ಲಿ ತನ್ನ ಮೈಯನ್ನು ತೋಯಿಸಿಕೊಂಡು ಮರಳಲ್ಲಿ ಹೊರಳಾಡುವುದು; ಸೇತುವೆ ನಿರ್ಮಾಣ ಸ್ಥಳದಲ್ಲಿ ಮರಳು ಮೆತ್ತಿಕೊಂಡ ಮೈಯನ್ನು ಕೊಡವಿ ಮರಳನ್ನು ಉದುರಿಸುವುದು. ಹೀಗೆ ನಮ್ಮ ಸ್ವಾತಂತ್ರ್ಯ ಹೋರಾಟದಲ್ಲಿ ಅಳಿಲು ಸೇವೆ ಸಲ್ಲಿಸಿದವರು ಎಷ್ಟು ಜನರೋ. ಸ್ವಾತಂತ್ರ್ಯದ ಹೀರೋಗಳನ್ನು ಅಸಂಖ್ಯರ ಪ್ರತಿನಿಧಿಯಾಗಿ ನೋಡುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ. ನೆಹರೂ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರೇ ಅಲ್ಲ ಎಂಬ ಮಾತು ರಾಜ್ಯದ ಕೆಲವು ಬಿಜೆಪಿ ನಾಯಕರ ಬಾಯಿಂದ ಉದುರಿದೆ. ಅಭಿಮತ ಬೇರೆ, ಇತಿಹಾಸ ಬೇರೆ.
ರಾಜಸ್ತಾನವಿರಲಿ, ಕರ್ನಾಟಕವಿರಲಿ. ಸರ್ಕಾರದ ಜಾಹೀರಾತು ಎಂದರೆ ಭಾರೀ ಮೊತ್ತದ ಬಾಬತು. ಹಣ ಯಾವ ರಾಜ್ಯದಲ್ಲೂ ಆಕಾಶದಿಂದ ಝಣಝಣ ಉದುರುವುದಿಲ್ಲ. ಬಡವರು ಬೆವರು ಹರಿಸಿ ದುಡಿದ ಹಣದಲ್ಲಿ ಕಟ್ಟುವ ತೆರಿಗೆಯೇ ಸರ್ಕಾರದ ಬೊಕ್ಕಸದಲ್ಲಿರುವ ಹಣ. ಅದನ್ನು ತಂತಮ್ಮ ರಾಜಕೀಯ ತೆವಲಿಗೆ ವಿನಿಯೋಗ ಮಾಡುವುದು ನೈತಿಕ ಬದ್ಧತೆಯುಳ್ಳ ಯಾವುದೇ ಸರ್ಕಾರಕ್ಕೆ ಶೋಭೆ ತರುವ ಬೆಳವಣಿಗೆಯಲ್ಲ.
(ಲೇಖಕರು ಹಿರಿಯ ಪತ್ರಕರ್ತರು, ಅಂಕಣಕಾರರು. ರಾಜ್ಯ, ದೇಶ ಹಾಗೂ ಅಂತಾರಾಷ್ಟ್ರೀಯ ರಾಜಕಾರಣದ ಕುರಿತು ಬಹುವರ್ಷಗಳಿಂದ ವಿಶ್ಲೇಷಣೆ ಮಾಡುತ್ತಿದ್ದಾರೆ)