ಪ್ರಸ್ತುತದ ವಿಧಾನ ಮಂಡಲ ಅಧಿವೇಶನ ಮುಕ್ತಾಯದ ಹಂತ ಮುಟ್ಟಿದೆ. ಹಂಗಾಮಿ ಸಭಾಪತಿಯೇ ವಿಧಾನ ಪರಿಷತ್ ಕಲಾಪವನ್ನು ನಡೆಸಿದ್ದು ಮತ್ತು ಪರಿಷತ್‌ನಲ್ಲಿ ಆಡಳಿತಾರೂಢ ಭಾರತೀಯ ಜನತಾ ಪಕ್ಷಕ್ಕೆ ನಿಚ್ಚಳ ಬಹುಮತವಿದ್ದೂ ಸಭಾಪತಿ ಆಯ್ಕೆ ಕಗ್ಗಂಟಾಗಿದ್ದು ರೂಲಿಂಗ್ ಪಾರ್ಟಿಯಲ್ಲಿ “ಎಲ್ಲವೂ ಸರಿಯಾಗಿಲ್ಲ” ಎಂಬ ಸಂದೇಶ ರವಾನೆಯಾಗುವಂತೆ ಮಾಡಿದೆ. ಎಲ್ಲವೂ ಸರಿಯಾಗಿದ್ದಿದ್ದರೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಂದುಕೊಂಡಂತೆಯೇ ಎಲ್ಲವೂ ನಡೆದಿದ್ದರೆ ಈ ಹೊತ್ತಿಗೆಲ್ಲ ಬಸವರಾಜ ಶಿವಲಿಂಗಪ್ಪ ಹೊರಟ್ಟಿಯವರು ಸಭಾಪತಿಯಾಗಿರಬೇಕಿತ್ತು. ಯಾಕೆ ಆಗಲಿಲ್ಲವೆಂದರೆ ಎಲ್ಲವೂ ಅಂದುಕೊಂಡಂತೆಯೇ ನಡೆಯುತ್ತಿಲ್ಲ ಎನ್ನುವುದು ಸರಳ ಉತ್ತರ.
ಹೊರಟ್ಟಿಯವರದು ಸುದೀರ್ಘಾವಧಿ ಶಾಸಕತ್ವದ ಅನುಭವ. ೧೯೮೦ರಲ್ಲಿ ಮೊದಲ ಬಾರಿಗೆ ವಿಧಾನ ಪರಿಷತ್‌ನೊಳಗೆ ಪಾದ ಊರಿದ ಅವರು ಅಂದಿನಿಂದ ಇಂದಿನವರೆಗೂ ಜಯವೆಂಬ ಕುದುರೆ ಸವಾರಿಯನ್ನು ಅಡೆತಡೆ ಇಲ್ಲದೆ ಮುಂದುವರಿಸಿದ್ದಾರೆ. ಕರ್ನಾಟಕ ವಿಧಾನ ಸಭೆ ಅಥವಾ ವಿಧಾನ ಪರಿಷತ್‌ನಲ್ಲಿ ಹೊರಟ್ಟಿಯವರಷ್ಟು ದೀರ್ಘಾವಧಿ ಹಿನ್ನೆಲೆಯುಳ್ಳ ಸದಸ್ಯ ಮತ್ತೊಬ್ಬರಿಲ್ಲ. ವಿಧಾನ ಸಭೆಯಲ್ಲಿ ಎಂಟು ಬಾರಿ ಶಾಸಕರಾದವರು ಇದ್ದಾರೆ. ಅವರ ಪ್ರತಿ ಶಾಸಕ ಸ್ಥಾನದ ಅವಧಿ ಐದು ವರ್ಷ. ಎಂಟು ಬಾರಿ ಪೂರೈಸಿದರೆ ಒಟ್ಟು ನಲವತ್ತು ವರ್ಷವಾಗುತ್ತದೆ. ಆದರೆ ಪರಿಷತ್ ಸದಸ್ಯತ್ವದ ಅವಧಿ ಆರು ವರ್ಷ. ಆರನ್ನು ಎಂಟರಿಂದ ಗುಣಿಸಿದರೆ ೪೮ ವರ್ಷ. ಈಗ ಹೊರಟ್ಟಿ ಹೊಂದಿರುವ ಶಾಸಕ ಸ್ಥಾನ ಮುಗಿಯುವ ಹೊತ್ತಿಗೆ ೪೮ ವರ್ಷ ಮುಗಿದಿರುತ್ತದೆ. ಹೇಗೇ ಲೆಕ್ಕ ಹಾಕಿದರೂ, ಗುಣಿಸಿ ಕೂಡಿಸಿ ಭಾಗಿಸಿದರೂ ಹೊರಟ್ಟಿಯವರಿಗೇ ನಂಬರ್ ಒನ್ ಸ್ಥಾನ.
ಜನತಾ ಪರಿವಾರದಲ್ಲಿ ರಾಜಕೀಯ ಆರಂಭಿಸಿದ ಹೊರಟ್ಟಿ, ಶಾಸಕರಾಗಿ ಗಳಿಸಿದ ಅನುಭವ ಒಂದಷ್ಟು. ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ಸಚಿವರಾಗಿ ಗಳಿಸಿದ ಅನುಭವ ಮತ್ತೊಂದಷ್ಟು. ಒಂದಲ್ಲ ಎರಡು ಬಾರಿ ವಿಧಾನ ಪರಿಷತ್ ಸಭಾಪತಿಯಾಗಿ ಗಳಿಸಿದ ಅನುಭವ ಮಗದೊಂದಷ್ಟು. ಮೂಟೆಮೂಟೆ ಅನುಭವವಿದ್ದರೂ ಅವರ ರಾಜಕೀಯದಲ್ಲಿ ಅದು ಕೆಲಸಕ್ಕೆ ಬಾರದಂತಾಗಿರುವುದು ಸದ್ಯದ ವಿಶೇಷ. ಸಭಾಪತಿಯಾಗಲಿ, ಸಭಾಧ್ಯಕ್ಷರಾಗಲಿ ಆ ಹುದ್ದೆಗೆ ಚುನಾಯಿತರಾದ ಮರುಕ್ಷಣದಲ್ಲೇ ತಾವು ಆರಿಸಿ ಬಂದ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಕೊಡುವುದು ನಮ್ಮ ಜನತಂತ್ರದಲ್ಲಿ ಸಾಮಾನ್ಯವಾಗಿರುವ ಸತ್ಪರಂಪರೆಗಳಲ್ಲಿ ಒಂದು. ಶಾಸನ ಸಭೆಯ ಆ ಸ್ಥಾನ ಒಂದಿಷ್ಟು ರಾಜಕೀಯ ಸಂಯಮವನ್ನು ಮಾದರಿಯನ್ನು ಬಯಸುತ್ತದೆ. ಆ ಸ್ಥಾನದಲ್ಲಿ ಕೂರುವವರು ಪಕ್ಷಾತೀತರು ಎಂಬ ಸಂದೇಶ ಸಾರ್ವಜನಿಕರಿಗೆ ಮುಟ್ಟಿಸುವುದು ಆಶಯ.
ಕೆಲವರು ಆಯ್ಕೆಯಾಗುವ ಮೊದಲೇ ರಾಜೀನಾಮೆ ಕೊಟ್ಟು ಮಾದರಿಯಾದ ನಿದರ್ಶನವೂ ದೇಶದ ಪಾರ್ಲಿಮೆಂಟರಿ ಇತಿಹಾಸದಲ್ಲಿ ದಾಖಲಾಗಿದೆ. ಹೊರಟ್ಟಿಯವರು ಸಭಾಪತಿ ಹುದ್ದೆಗೆ ಆಯ್ಕೆಯಾದ ಮರು ಘಳಿಗೆಯಲ್ಲೇ ತಾವು ಆರಿಸಿ ಬಂದಿದ್ದ ಜಾತ್ಯತೀತ ಜನತಾ ದಳದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಕೊಟ್ಟಿದ್ದರು. ಕಾಲಕ್ರಮದಲ್ಲಿ ಅದೇನು ರಾಜಕೀಯ ಬದಲಾವಣೆ ಆಯಿತೋ, ಸ್ಪಷ್ಟವಾಗಿಲ್ಲ. ಈ ಬಾರಿ ಪಶ್ಚಿಮ ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್‌ಗೆ ಚುನಾವಣೆ ನಡೆಯುವ ಪೂರ್ವದಲ್ಲಿ ಜೆಡಿಎಸ್ಸನ್ನು “ತಾಂತ್ರಿಕ” ಕಾರಣಕ್ಕಲ್ಲದೆ ರಾಜಕೀಯ ಕಾರಣಕ್ಕೆ ತೊರೆದ ಹೊರಟ್ಟಿ ಬಿಜೆಪಿಗೆ ಸೇರಿದರು. ಅವರು ಆ ಪಕ್ಷ ಬಿಡುತ್ತಾರೆ, ಈ ಪಕ್ಷ ಸೇರುತ್ತಾರೆಂಬ ವದಂತಿ ಕೆಲವು ತಿಂಗಳಿಂದ ಇದ್ದುದು ಅಂತಿಮವಾಗಿ ದಿಟವೇ ಆಯಿತು.
ಬಿಜೆಪಿಗೆ ಹೊರಟ್ಟಿ ಸೇರುವ ಕಾರ್ಯಾಚರಣೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಷಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯ ಮಂತ್ರಿ ಜಗದೀಶ ಶೆಟ್ಟರ್ ಪಾತ್ರ ಬಹಳವಿದೆ ಎನ್ನಲಾಗುತ್ತಿದೆ. ಬಿ.ಎಸ್. ಯಡಿಯೂರಪ್ಪನವರ ಭಾವನೆಯೂ ಇದರಲ್ಲಿ ಮಿಳಿತವಾಗಿದೆ ಎಂಬ ಮಾತೂ ಇದೆ. ಜೆಡಿಎಸ್ ಬಿಡುವಂತೆ ಮಾಡಿ ಬಿಜೆಪಿಗೆ ಸೇರಿಸಿಕೊಳ್ಳುವ ಮುನ್ನ ಈ ನಾಯಕರು ಕೊಟ್ಟ ವಚನ ಮುಂದಿನ ಅವಧಿಗೆ ಬಸವರಾಜ ಹೊರಟ್ಟಿಯವರನ್ನೇ ಸಭಾಪತಿ ಸ್ಥಾನದಲ್ಲಿ ಕುಳ್ಳಿರಿಸುವುದು.
ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಈ ಸಂಬಂಧ ಆಗಿರುವ ನಡಾವಳಿ ವಿವರ ಲಭ್ಯವಿಲ್ಲ. ಪಕ್ಷದ ಮುಖಂಡರ ಸಭೆಯಲ್ಲಿ ಏನೆಲ್ಲ ಚರ್ಚೆಯಾಗಿದೆಯೋ ಗೊತ್ತಿಲ್ಲ. ಹೊರಟ್ಟಿ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ವಿಚಾರದಲ್ಲಿ ಬಿಜೆಪಿ ಕೇಂದ್ರ ನಾಯಕತ್ವದ ಒಲವು ನಿಲುವು ಏನಿತ್ತೋ ಮಾಹಿತಿಯಿಲ್ಲ. ಲಭ್ಯವಿರುವ ಸುದ್ದಿ ಎಂದರೆ ಹೊರಟ್ಟಿಯವರಿಗೆ ಯಾವುದೇ ಸ್ಥಾನಮಾನವೂ ಸದ್ಯಕ್ಕೆ ಲಭ್ಯವಿಲ್ಲ ಎನ್ನುವುದು ಮಾತ್ರ. ಈ ಹಿನ್ನಡೆಯನ್ನು ಹೊರಟ್ಟಿ ಖಂಡಿತವಾಗಿಯೂ ನಿರೀಕ್ಷಿಸಿರಲಾರರು ಅಥವಾ ಖಂಡಿತವಾಗಿಯೂ ನಿರೀಕ್ಷಿಸಿದ್ದರು. ಶಾಸಕರಾಗಿ ಆಯ್ಕೆ ಆಗುವ ಪೂರ್ವದಲ್ಲಿ ಅಂದರೆ ಮೂರೂವರೆ ನಾಲ್ಕು ದಶಕದ ಹಿಂದೆ ದೈಹಿಕ ಶಿಕ್ಷಕರಾಗಿದ್ದವರು ಹೊರಟ್ಟಿ. ದೈಹಿಕ ಪಟುತ್ವದ ಆ ಸಾಮು, ಪಟ್ಟು ರಾಜಕೀಯದಲ್ಲಿ ಕೆಲಸಕ್ಕೆ ಬರುವುದಿಲ್ಲ ಎನ್ನುವುದು ಹೊರಟ್ಟಿಯಂಥವರಿಗೆ ಅರ್ಥವಾಗಲು ಇಷ್ಟೆಲ್ಲ ದಶಕ ಬೇಕಾಯಿತೆ ಎನ್ನುವುದು ಅವರನ್ನು ಬಲ್ಲ ಅನೇಕರ ಪ್ರಶ್ನೆ.
ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿ ಮೊದಲಬಾರಿಗೆ ಸಚಿವ ಸ್ಥಾನದ ರುಚಿ ಕಂಡವರು ಹೊರಟ್ಟಿ. ನಂತರದಲ್ಲಿ ಅವರಿಗೆ ಸಚಿವ ಸ್ಥಾನಮಾನದ ಗೌರವವನ್ನು ಜೆಡಿಎಸ್ ವರಿಷ್ಠರು ನೀಡಲಿಲ್ಲ. ಮತ್ತೊಮ್ಮೆ ಕಾಂಗ್ರೆಸ್ ಕೋರಿಕೆಯಂತೆ ಎಚ್.ಡಿ. ದೇವೇಗೌಡರು ಸಮ್ಮತಿಸಿದ ತರುವಾಯದಲ್ಲಿ ಪುನಃ ಕುಮಾರಸ್ವಾಮಿ ಸಿಎಂ ಆದ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಲಿಂಗಾಯತ ಕೋಟಾದಡಿ ಹೊರಟ್ಟಿ ಮಂತ್ರಿಯಾಗುತ್ತಾರೆಂಬ ಮಾತು ಬಹು ಜೋರಾಗೇ ಕೇಳಿಬಂದಿತ್ತು. ಉತ್ತರ ಕರ್ನಾಟಕ ಭಾಗದಲ್ಲಿ ಜೆಡಿಎಸ್ ಇನ್ನೂ ಉಸಿರಾಡುತ್ತಿದ್ದರೆ ಅದರಲ್ಲಿ ತಮ್ಮ ಕೊಡುಗೆಯೂ ಇದೆ ಎಂದು ಹೊರಟ್ಟಿ ನಂಬಿದ್ದರು. ಜೆಡಿಎಸ್‌ನಿಂದ ಒಮ್ಮೆ ವಿಧಾನ ಸಭೆಗೆ ಆಯ್ಕೆಯಾಗಿದ್ದ ಕೋನ ರೆಡ್ಡಿ ಅವರೂ ಆ ಭಾಗದಲ್ಲಿ ಜೆಡಿಎಸ್ ಸಂಘಟನೆಗೆ ಶ್ರಮಿಸಿದವರು. ಭ್ರಮನಿರಸನವೋ ಹತಾಶೆಯೋ ಮುನಿಸೋ ಎಷ್ಟು ಮಾಡಿದರೂ ಅಷ್ಟೆ ಎಂಬ ಉದರ ವೈರಾಗ್ಯವೋ…ಕೋನರೆಡ್ಡಿ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದಾರೆ. ಬರಲಿರುವ ಚುನಾವಣೆಯಲ್ಲಿ ಆ ಪಕ್ಷದ ಟಿಕೆಟ್ ಆಕಾಂಕ್ಷಿಗಳಲ್ಲಿ ಅವರೂ ಒಬ್ಬರು. ಹೊರಟ್ಟಿಯವರು ತಮ್ಮ ರಾಜಕೀಯ ಜೀವನದಲ್ಲಿ ಯಾವತ್ತೂ ವಿಧಾನ ಸಭೆಗೆ ಸ್ಪರ್ಧಿಸಿದವರಲ್ಲ. ಆದಾಗ್ಯೂ ಉತ್ತರ ಕರ್ನಾಟಕ ಭಾಗದಲ್ಲಿ ಜನತಾ ಪರಿವಾರವನ್ನು ಬೆಳೆಸುವ ನಿಟ್ಟಿನಲ್ಲಿ ಅವರ ಕೊಡುಗೆ ನಗಣ್ಯವಾಗಿದ್ದೂ ಇಲ್ಲ.
ಇದನ್ನೂ ಓದಿ | ಮೊಗಸಾಲೆ ಅಂಕಣ | ಭಾರತದಲ್ಲಿ ಪಾದಯಾತ್ರೆ ಪಾಲಿಟಿಕ್ಸ್
ಹೊರಟ್ಟಿಯವರು ಗಟ್ಟಿ ಮನಸ್ಸು ಮಾಡಿ ಬಾಯೊಡೆದು ಹೇಳದೇ ಇದ್ದರೂ ತಮ್ಮನ್ನು ಜೆಡಿಎಸ್ ನಿರ್ಲಕ್ಷಿಸುತ್ತಿರುವುದಕ್ಕೆ ಮುಖ್ಯ ಕಾರಣ ತಾವು ಲಿಂಗಾಯತ ಎನ್ನುವುದು ಎಂದು ಭಾವಿಸಿರುವುದು ಸ್ಪಷ್ಟ. ಸರ್ಕಾರ ರಚಿಸುವ ಅವಕಾಶ ಸಿಕ್ಕಾಗಲೆಲ್ಲ ತಮ್ಮನ್ನು ಹೊರಕ್ಕೆ ಇಟ್ಟೇ ಮುಂದುವರಿಯುವ ಆ ಪಕ್ಷದ ಒಳ ರಾಜಕೀಯ ಹೊರಟ್ಟಿ ಮಟ್ಟಿಗೆ ಸಾಕುಸಾಕೆನಿಸಿರಲು ಸಾಕು. ವೀರಶೈವ-ಲಿಂಗಾಯತ ಸಮುದಾಯ ರಾಜ್ಯದಲ್ಲಿ ನೆಚ್ಚಿಕೊಂಡಿರುವುದು ಭಾರತೀಯ ಜನತಾ ಪಾರ್ಟಿಯನ್ನು. ಬಹುಷಃ ಇದೇ ಕಾರಣವಾಗಿ ಹೊರಟ್ಟಿ ಆ ಪಕ್ಷಕ್ಕೆ ಸೇರಿರಲೂಬಹುದು. ತಮಗೆ ಮಾತು ಕೊಟ್ಟು ವಂಚಿಸಲಾಗಿದೆ ಎಂದು ಬಿಜೆಪಿ ವಿರುದ್ಧ ಹೊರಟ್ಟಿ ಅಸಮಾಧಾನದ ಮಾತನ್ನು ಆಡಿದ್ದು ವರದಿಯಾಗಿಲ್ಲ. ಬಿಜೆಪಿಗೆ ಸೇರಿಸಿಕೊಳ್ಳವಾಗ ಮಾತು ಕೊಟ್ಟಿದ್ದು ಹೌದು ಎಂದಷ್ಟೇ ಹೇಳಿರುವ ಅವರು ಸಮಯಕ್ಕೆ ಕಾದಿರುವ ಸಾಧ್ಯತೆ ಇದ್ದೇ ಇದೆ.
ಸಮಯ ಎಂದರೆ ಯಾವುದು? ಬಲ್ಲ ವಲಯಗಳ ಪ್ರಕಾರ ಹೊರಟ್ಟಿಯವರಲ್ಲಿ ಬೇರೆಯದೇ ಆದೊಂದು ದೂರಾಲೋಚನೆಯೂ ಇದ್ದು ಅದಕ್ಕೆ ಬಿಜೆಪಿ ವರಿಷ್ಠ ವಲಯ ಸಮ್ಮತಿ ಸೂಚಿಸುವ ನಿರೀಕ್ಷೆ ಹೊರಟ್ಟಿ ಆಪ್ತವಲಯದಲ್ಲಿದೆ ಎಂಬ ಸುದ್ದಿ ಬಂದಿದೆ. ಒಂದೆರಡು ತಿಂಗಳ ಹಿಂದಷ್ಟೇ ಮತ್ತೆ ಶಾಸಕರಾಗಿ ಆಯ್ಕೆಯಾಗಿರುವ ಅವರ ಸದಸ್ಯತ್ವ ಅವಧಿ ಮುಂದಿನ ಆರು ವರ್ಷ ಕಾಲ ಊರ್ಜಿತವಾಗಿರಲಿದೆ. ಸಚಿವರಾಗಿ, ಸಭಾಪತಿಯಾಗಿರುವ ಅವರಿಗೆ ಈಗ ವಯಸ್ಸು ಎಪ್ಪತ್ತಾರು. ಬಿಜೆಪಿಯಲ್ಲಿ ೭೫ ವಯಸ್ಸಾದವರಿಗೆ ಒಂದು ರಾಜಕೀಯ ಗಡುವು ಇದೆ. ಕೆಲವರ ವಿಚಾರದಲ್ಲಿ ಕಾನೂನು ಸಡಿಲಗೊಳ್ಳುತ್ತದೆ ಎನ್ನುವುದು ಹೌದಾದರೂ ಬಹುತೇಕರ ವಿಚಾರದಲ್ಲಿ ೭೫ರ ಬಳಿಕ ಯಾರೊಬ್ಬರಿಗೂ ಚುನಾಯಿತ ಅಧಿಕಾರ ಸ್ಥಾನಕ್ಕೆ “ಅರ್ಹತೆ” ಇಲ್ಲ. ಬಿಜೆಪಿಗೆ ಸೇರುವ ಮುಂಚೆ ಇದನ್ನೆಲ್ಲ ಹೊರಟ್ಟಿಯವರು ಯೋಚಿಸಿಯೇ ತೀರ್ಮಾನ ತೆಗೆದುಕೊಂಡಿರುತ್ತಾರೆ, ಅನುಮಾನ ಬೇಡ.
ದೂರಾಲೋಚನೆ ಎಂದರೆ ಏನು…? ಹೊರಟ್ಟಿಯವರ ಮಗ ಪ್ರಬುದ್ಧ ವಯಸ್ಸಿನಲ್ಲಿದ್ದಾರೆ. ತಂದೆ ಆರಂಭಿಸಿರುವ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತ ಹೊಣೆಗಾರಿಕೆಯನ್ನು ವಹಿಸಿಕೊಳ್ಳತ್ತಿದ್ದಾರೆ. ತಂದೆ ತುಳಿದಿರುವ ಪಥದಲ್ಲಿ ರಾಜಕೀಯಕ್ಕೆ ಧುಮುಕುವ ಉತ್ಸಾಹದಲ್ಲಿದ್ದಾರೆ. ಅಪ್ಪನ ಆಶ್ರಯದಲ್ಲಿ ರಾಜಕೀಯ ರಂಗ ತಾಲೀಮು ಪಡೆದಿರುವ ಅವರು ಸೂಕ್ತ ಕ್ಷೇತ್ರದ ಹುಡುಕಾಟ ನಡೆಸಿದ್ದು ಬಿಜೆಪಿ ಟಿಕೆಟ್ ಪಡೆದು ವಿಧಾನ ಸಭೆ ಪ್ರವೇಶಿಸುವ ಕನಸಿನಲ್ಲಿ ಕಾರ್ಯತತ್ಪರರಾಗಿದ್ದಾರೆ ಎಂಬ ಸುದ್ದಿ ಇದೆ. ನೇರ ಚುನಾವಣೆಯಲ್ಲಿ ಗೆದ್ದು ಬಂದರೆ ಅದಕ್ಕೆ ಇರುವ ರಾಜಕೀಯ ಮಹತ್ವ ವಿಧಾನ ಪರಿಷತ್‌ಗೆ ಆಯ್ಕೆಯಾಗುವ/ ನಾಮಕರಣಗೊಳ್ಳುವವರಿಗೆ ಇರುವುದಿಲ್ಲ. ಇದನ್ನು ಸ್ವತಃ ಬಲ್ಲ ಹೊರಟ್ಟಿಯವರು ಮಗನಿಗೆ ರಾಜಮಾರ್ಗದಲ್ಲಿ ರಾಜಕೀಯಕ್ಕೆ ತರುವ ಇರಾದೆ ಇದ್ದು ಅದಕ್ಕೆ ಬಿಜೆಪಿ ವರಿಷ್ಠರ ಆಶೀರ್ವಾದ ಬೆಂಬಲ ಬೇಕಾಗಿದೆ. ಈ ಕಾರಣವಾಗಿ ಸಭಾಪತಿ ಹುದ್ದೆಯ ವಿಚಾರದಲ್ಲಿ ಅವರು ತಗಾದೆ ತೆಗೆದಿಲ್ಲ ಎನ್ನಲಾಗುತ್ತಿದೆ.
ಇದನ್ನೂ ಓದಿ | ಮೊಗಸಾಲೆ ಅಂಕಣ | ಸಿಪಿಎಂ ಮತ್ತು ತೋಳ ಕುರಿಮರಿ ಕಥೆ
೨೦೧೮ರಲ್ಲಿ ರಾಜ್ಯ ವಿಧಾನ ಸಭೆಗೆ ಚುನಾವಣೆ ನಡೆದಾಗ ಬಿಜೆಪಿಗೆ ನಿಚ್ಚಳ ಬಹುಮತ ಬಂದಿರಲಿಲ್ಲ. ಬಹುಮತವನ್ನು ದಯಪಾಲಿಸಿದ್ದು ಕಾಂಗ್ರೆಸ್, ಜೆಡಿಎಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೊರಕ್ಕೆ ಬಂದ “ತ್ಯಾಗ ರಾಜರು”. ತಾವು ರಾಜೀನಾಮೆ ಕೊಟ್ಟ ಕ್ಷೇತ್ರದಲ್ಲಿ ನಡೆದ ಉಪ ಚುನಾವಣೆಯಲ್ಲಿ ಬಹುತೇಕರು ಬಿಜೆಪಿ ಟಿಕೆಟ್ ಹಿಡಿದು ಗೆದ್ದು ಬಂದು ಮಂತ್ರಿಗಳಾದರು. ಎಚ್.ವಿಶ್ವನಾಥರಂಥ ಕೆಲವರಿಗೆ ಕೋರ್ಟ್ ಒಡ್ಡಿದ ತಡೆ ಕಾರಣವಾಗಿ ಸಚಿವ ಭಾಗ್ಯ ಒಲಿಯಲಿಲ್ಲ. ಈ ಹಂತದಲ್ಲಿ ಬಿಜೆಪಿ ಅಧಿಕಾರದಲ್ಲಿ ಭದ್ರವಾಗಿದ್ದಕ್ಕೆ ಅದರಿಂದ ಪ್ರಯೋಜನ ಪಡೆದವರು ಯೋಚಿಸಿದ ರೀತಿಯೇ ಒಂದು. ಕಾರ್ಯಕರ್ತ ಸಮುದಾಯ ಯೋಚಿಸಿದ್ದೇ ಬೇರೊಂದು.
ಅಧಿಕಾರದಲ್ಲಿರುವ ಪಕ್ಷಕ್ಕೆ ಬೇರೆ ಬೇರೆ ಪಕ್ಷದಲ್ಲಿ ಇರುವವರು ಬರುವುದರಲ್ಲಿ ಯಾವ ವಿಶೇಷವೂ ಇಲ್ಲ. ಬೆಲ್ಲ ಇರುವೆಡೆ ಇರುವೆ, ನೊಣಗಳು ಬರುವುದು ಸಹಜ. ಪಕ್ಷಕ್ಕೆ ಎಲ್ಲೆಲ್ಲಿಂದಲೋ ಹಾರಿ ಬಂದು ಕುರ್ಚಿ ಹಿಡಿದು ಕೂರುವವರಿಗೆಲ್ಲ ಸಚಿವ ಹುದ್ದೆ ಸ್ಥಾನಮಾನ ನೀಡುತ್ತ ಹೋದರೆ ಪಕ್ಷ ಸಂಘಟನೆಗಾಗಿ ದಶಕಗಳಿಂದ ಮಣ್ಣು ಹೊತ್ತವರಿಗೆ ಏನು ಕೊಡುತ್ತೀರಿ ಎಂಬ ಪ್ರಶ್ನೆ ಬಿಜೆಪಿ ಕಾರ್ಯಕರ್ತರ ವಲಯದಲ್ಲಿ ಗಟ್ಟಿ ಧ್ವನಿಯಾಗಿ ಕೇಳಲಾರಂಭವಾಗಿದೆ. ಇದು ಪಕ್ಷದಲ್ಲಿ ಬಿಕ್ಕಟ್ಟನ್ನು ಮೂಡಿಸುವ ನಿಟ್ಟಿನಲ್ಲಿ ಗಂಭೀರ ಆಯಾಮ ಪಡೆದುಕೊಳ್ಳಬಹುದೆಂಬ ಆತಂಕ ಎದುರಾಗಿದೆ.
ವಿಧಾನ ಪರಿಷತ್ ಸಭಾಪತಿ ಆಯ್ಕೆ ಇನ್ನೇನು ಆಗೇ ಹೋಯಿತೆಂಬ ಸನ್ನಿವೇಶದಲ್ಲಿ ಈ ಆತಂಕ ಬಿಜೆಪಿ ವಲಯದಲ್ಲಿ ಸ್ಫೋಟಿಸಿದ್ದನ್ನು ಗಮನಿಸಬೇಕು. ಸಭಾಪತಿಯದು ಕ್ಯಾಬಿನೆಟ್ ದರ್ಜೆ ಸಚಿವ ಸ್ಥಾನಮಾನದ ಹುದ್ದೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಗೆದ್ದು ಸರ್ಕಾರ ರಚಿಸದೆ ಇದ್ದ ಮಾತ್ರಕ್ಕೆ ಈ ಹುದ್ದೆ ತೆರವಾಗುವುದಿಲ್ಲ. ಅಧಿಕಾರಕ್ಕೆ ಬರುವ ಪಕ್ಷಕ್ಕೆ ಬಿಜೆಪಿ ಸಂಖ್ಯಾಬಲ ಮೀರುವ ಬಹುಮತ ಬರುವವರೆಗೆ ಬಿಜೆಪಿ ಆಡಳಿತದಲ್ಲಿ ಆಯ್ಕೆಯಾದ ಸಭಾಪತಿಯೇ ಮುಂದುವರಿಯುತ್ತಾರೆ. ವಿಧಾನ ಸಭಾ ಚುನಾವಣೆ ಬಳಿಕವೂ ಆರೆಂಟು ತಿಂಗಳ ನಂತರದ ವಿದ್ಯಮಾನ ಬಲಾಬಲದಲ್ಲಿ ಆಗುವ ಏರುಪೇರು. ಹೀಗಿರುವಾಗ “ವಲಸೆ” ಬಂದವರಿಗೆ ಕ್ಯಾಬಿನೆಟ್ ದರ್ಜೆ ಸಚಿವ ಸ್ಥಾನಮಾನದ ಸವಲತ್ತನ್ನು ಕೊಡಬೇಕೆ ಅಥವಾ ಬಿಜೆಪಿಯಲ್ಲಿದ್ದು ಪಕ್ಷಕ್ಕಾಗಿ ದುಡಿದವರಿಗೆ ಮೀಸಲಿಡಬೇಕೆ ಎಂಬ ಜಿಜ್ಞಾಸೆ ಇದೀಗ ಸಾಗಿದೆ. ಈ ಜಿಜ್ಞಾಸೆ ಒಳ ಒತ್ತಡವಾಗಿಯೂ ಆಡಳಿತ ಪಕ್ಷದಲ್ಲಿ ಕೆಲಸ ಮಾಡುತ್ತಿದೆ.
ಹೊರಟ್ಟಿಯವರಲ್ಲಿ ಮೇಲ್ನೋಟಕ್ಕೆ ಅಂಥ ದುಗುಡ ದುಮ್ಮಾನ ಕಾಣಿಸುತ್ತಿಲ್ಲ. ಅವಕಾಶ ಕಲ್ಪಿಸಬೇಕಾದ ಸಂದರ್ಭದಲ್ಲೆಲ್ಲ ತಾವು ದಶಕಗಳ ಕಾಲ ದುಡಿದ ಜೆಡಿಎಸ್ ಪಕ್ಷ ತಮಗೆ ಕೈ ಕೊಟ್ಟಿರುವುದರ ಅನುಭವ ಅವರನ್ನು ಮಾಗುವಂತೆ ಮಾಡಿದೆ. ಆ ಅನುಭವದ ಮೂಸೆಯಲ್ಲಿ ಅವರ ಭವಿಷ್ಯದ ರಾಜಕೀಯ ವರಸೆ ಮುಂದುವರಿಯುತ್ತದೆ. ಅವರ ಮುಂದೆ ಚಾಚಿರುವ ರಸ್ತೆಯಲ್ಲಿ ಭಾರೀ ಅಡೆತಡೆಗಳು ಇಲ್ಲ ಎನ್ನುವುದು ವಿಶೇಷ.
ಇದನ್ನೂ ಓದಿ | ಮೊಗಸಾಲೆ ಅಂಕಣ | ಏರುತ್ತಿರುವ ಅದಾನಿ ಸಾಲ ಸಂಪತ್ತಿನ ಜ್ವರ, ಯಾರ ವರ?