Site icon Vistara News

ಮೊಗಸಾಲೆ ಅಂಕಣ | ಏರುತ್ತಿರುವ ಅದಾನಿ ಸಾಲ ಸಂಪತ್ತಿನ ಜ್ವರ, ಯಾರ ವರ?

gautham adani

ಅದಾನಿ ಉದ್ಯಮ ಸಮೂಹದ ಒಡೆಯ ಗೌತಮ್ ಅದಾನಿ, ವಿಶ್ವದಲ್ಲೆ ಮೂರನೇ ಅತ್ಯಂತ ಶ್ರೀಮಂತ ಎಂಬ ಸುದ್ದಿ ಜನರನ್ನು ಒಂಥರಾ ಸಂಭ್ರಮಿಸುವಂತೆ ಮಾಡಿದೆ. ದೇಶದ ಬಹುತೇಕ ಮುದ್ರಣ ಮಾಧ್ಯಮದಲ್ಲಿ ಇದು ಮುಖಪುಟದ ಸುದ್ದಿಯಾಗಿ ಆದ್ಯತೆ ಪಡೆದಿದೆ. ಅದೇ ಕಾಲಕ್ಕೆ ಅದಾನಿ ಉದ್ಯಮ ಸಮೂಹ ಹೊಂದಿರುವ ಸಾಲದ ಮೊತ್ತ ಎರಡು ಲಕ್ಷ ಕೋಟಿಗೂ ಅಧಿಕ ಎಂಬ ಸುದ್ದಿ ಹೌದೋ ಅಲ್ಲವೋ ಎಂಬಂತೆ ಅದೇ ಸುದ್ದಿ ಗರ್ಭದಲ್ಲಿ ಹೂತು ಹೋಗಿದೆ. “ಸಾಲ ಮಾಡಿ ತುಪ್ಪ ತಿಂದರು” ಎನ್ನುವುದು ಪ್ರಾಚೀನ ಆದರೆ ಎಲ್ಲ ಕಾಲ, ಸಂದರ್ಭಕ್ಕೂ ಸಲ್ಲುವ ಗಾದೆ. ಗೌತಮ್ ಅದಾನಿ, ಸಾಲ ತಂದು ತುಪ್ಪ ತಿನ್ನುತ್ತಿದ್ದಾರೆಯೆ…? ದೇಶವಾಸಿಗಳು ಈ ಹೊತ್ತು ಕೇಳಬೇಕಿರುವ ಪ್ರಶ್ನೆ ಇದು.

ಅದಾನಿ, ಅಂಬಾನಿ ಮುಂತಾದವರ ಕುರಿತಾಗಿ ನಡೆಯುವ ಯಾವುದೇ ಚರ್ಚೆ ಪ್ರಧಾನಿ ನರೇಂದ್ರ ಮೋದಿಯವರತ್ತ ಬೆರಳು ತೋರಿಸುತ್ತದೆ. ಮೋದಿ ಮತ್ತು ಅವರ ಸಂಪುಟದ ಗೃಹ ಸಚಿವ ಅಮಿತ್ ಶಾ ಇಬ್ಬರೂ ಗುಜರಾತಿಗಳು. ಅಂಬಾನಿ, ಅದಾನಿ ಕೂಡಾ ಗುಜರಾತಿಗಳೇ. ಗುಜರಾತಿಗಳು ಗುಜರಾತಿಗಳೊಂದಿಗೆ ನಿಲ್ಲುತ್ತಾರೆ ಎಂಬ ಮಾತಿದೆ. ಸಾಂದರ್ಭಿಕ ಸಾಕ್ಷ್ಯಗಳನ್ನು ಆಧರಿಸಿ ಹೇಳಬಹುದಾದರೆ ಗುಜರಾತಿನ ಈ ಉದ್ಯಮಿಗಳಿಗೆ ಕೇಂದ್ರ ರಾಜಕಾರಣದ ಉನ್ನತ ವಲಯದ ಆಶೀರ್ವಾದ ಬೆಂಬಲವಿದೆ. ಹಾಗಿಲ್ಲವಾದರೆ ಈ ಎರಡು ಉದ್ಯಮಿಗಳು ಇಷ್ಟೆಲ್ಲ ಬೆಳೆಯುವುದು ಸಾಧ್ಯವಾಗದ ಮಾತು ಎನ್ನುತ್ತದೆ ಮೋದಿ ಟೀಕಾ ವಲಯ. ಹೌದೆ…? ಅಲ್ಲವೆ…? ಒಂದಿಷ್ಟು ಗೊಂದಲ ಯಾರನ್ನೂ ಕಾಡುತ್ತದೆ.

ಮೋದಿ, ಅಮಿತ್ ಶಾ ಕಾಲದಲ್ಲಿ ನಿಂತಿರುವ ನಾವು, ಕತ್ತನ್ನು ಒಂದಿಷ್ಟು ಹಿಂದಿರುಗಿಸಿ ನೋಡಿ ಮುಂದೆ ನೋಡುವ ಕೆಲಸ ಮಾಡಿದರೆ ಒಳಿತಾಗಬಹುದೋ ಏನೋ. ಇಂದಿರಾ ಗಾಂಧಿ ಪ್ರಧಾನಿಯಾಗಿದ್ದ ಸಮಯದಲ್ಲಿ ಬಹಳ ವರ್ಷ ಕಾಲ ಅವರ ಸಂಪುಟದಲ್ಲಿ ಅರ್ಥ ಸಚಿವರಾಗಿದ್ದವರು ಮುರಾರ್ಜಿ ದೇಸಾಯಿ. ಒಂದೇ ಪಕ್ಷದಲ್ಲಿದ್ದರೂ ಉತ್ತರ ಧ್ರುವ, ದಕ್ಷಿಣ ಧ್ರುವದಂತೆ ಅವರಿಬ್ಬರ ನಡವಳಿಕೆ. ಲಾಲ ಬಹದ್ದೂರ್ ಶಾಸ್ತ್ರಿ ರಷ್ಯಾ ಪ್ರವಾಸ ಕಾಲದಲ್ಲಿ ತಾಷ್ಕೆಂಟ್‌ನಲ್ಲಿ ಅನುಮಾನಾಸ್ಪದ ರೀತಿಯಲ್ಲಿ ನಿಧನರಾದ ತರುವಾಯದಲ್ಲಿ ಪ್ರಧಾನಿ ಹುದ್ದೆಗೆ ಏರಿದ ಇಂದಿರಾ ಹಾಗೂ ಸಚಿವ ಮುರಾರ್ಜಿ ನಡುವಣ ಎಣ್ಣೆ ಶೀಗೇಕಾಯಿ ಸಂಬಂಧ ಬಹಿರಂಗವಾಗುವುದಕ್ಕೆ ಬಹಳ ಕಾಲ ಹಿಡಿಯಲಿಲ್ಲ. 1969ರಲ್ಲಿ ಬೆಂಗಳೂರು ಲಾಲ್‌ಬಾಗ್ ಗಾಜಿನ ಮನೆಯಲ್ಲಿ ಏಐಸಿಸಿ ಅಧಿವೇಶನ. ಅಲ್ಲಿ ಕಾಂಗ್ರೆಸ್ ಇಬ್ಭಾಗವಾಯಿತು. ಇಂದಿರಾ ಕವಲು, ಮುರಾರ್ಜಿ ಕವಲು ಎಂದು ಪಕ್ಷ ಇಬ್ಭಾಗವಾಯಿತು. ಪ್ರಧಾನಿ ಹುದ್ದೆಯಲ್ಲಿದ್ದ ಇಂದಿರಾ ಗಾಂಧಿ, ಹೆಚ್ಚು ತಡಮಾಡದೆ ಖಾಸಗಿ ಬ್ಯಾಂಕುಗಳಲ್ಲಿ ಪ್ರಮುಖವಾದ ಅನೇಕವನ್ನು ರಾಷ್ಟ್ರೀಕರಣಗೊಳಿಸಿ “ಬಡವರ ಬಂಧು” ಎಂದು ಕರೆಸಿಕೊಂಡರು. ಇಂದಿರಾ ನೇತೃತ್ವದ ಪಕ್ಷದ ಕವಲಿನಿಂದ, ಸರ್ಕಾರದಿಂದ ಸಂಬಂಧ ಕಡಿದುಕೊಂಡ ಮುರಾರ್ಜಿ ಮತ್ತು ಅವರ ಜೊತೆಗಾರರು “ಬಂಡವಾಳಶಾಹಿಗಳ ಗುಲಾಮರು” ಎಂಬ ಕಳಂಕ ಹೊತ್ತರು.

ಮುಂದೆ ಎಪ್ಪತ್ತರ ದಶಕದಲ್ಲಿ ದೇಶದ ಮೇಲೆ ಅಸೌಂವಿಧಾನಿಕವಾಗಿ ತುರ್ತು ಪರಿಸ್ಥಿತಿ ಹೇರಿದ ಇಂದಿರಾ ಗಾಂಧಿ, ಜಗತ್ತಿನ ಅತ್ಯಂತ ಪ್ರಬಲ ಪ್ರಧಾನಿಯೂ ಆದರು. ಸರ್ವಾಧಿಕಾರಿ ಎಂಬ ಆರೋಪ ಅವರ ಕಿರೀಟಕ್ಕೆ ಮಸಿ ಅಂಟಿಸಿತಾದರೂ ಅದಕ್ಕೆಲ್ಲ ಅವರು ತಲೆ ಕೆಡಿಸಿಕೊಳ್ಳಲಿಲ್ಲ. ಇಂದಿರಾ ಪ್ರಧಾನಿಯಾಗಿದ್ದ ಕಾಲಾವಧಿಯಲ್ಲಿ ಶರವೇಗದಲ್ಲಿ ಸಂಪತ್ತನ್ನು ವೃದ್ಧಿಸಿಕೊಂಡ ಬಹುಮುಖ್ಯ ಉದ್ಯಮಿ ಧೀರೂಭಾಯಿ ಅಂಬಾನಿ. ಸಾಮಾನ್ಯ ನೌಕರನಾಗಿದ್ದ ಧೀರೂಭಾಯಿ, ತಾವು ಸಾಯುವ ಹೊತ್ತಿಗೆ 60 ಸಾವಿರ ಕೋಟಿ ಸಂಪತ್ತಿನ ಒಡೆಯರಾಗಿದ್ದರು. ಈಗ ನಾವು ಚರ್ಚಿಸಲಿರುವ ಮುಖೇಶ್ ಅಂಬಾನಿ ಅವರ ತಂದೆ ಧೀರೂಭಾಯಿ. ರಿಲಯನ್ಸ್ ಸಮೂಹದ ಸಂಸ್ಥಾಪಕ. 1966ರಲ್ಲಿ ಶಾಸ್ತ್ರಿ ನಿಧನಾಬಳಿಕ ಪ್ರಧಾನಿಯಾದ ಇಂದಿರಾ, ಜನತಾ ಪಾರ್ಟಿ ಆಳ್ವಿಕೆ ಅವಧಿಯಲ್ಲಿ ಎರಡು ವರ್ಷದ “ವಿಶ್ರಾಂತಿ” ಬಳಿಕ ಮತ್ತೆ ಪ್ರಧಾನಿ ಆದರು. ಉದ್ದಕ್ಕೂ ಅವರು ಬೆಂಬಲಿಸಿ ಪೋಷಿಸಿದ ಉದ್ಯಮಿ ಧೀರೂಭಾಯಿ.

ಇದನ್ನೂ ಓದಿ | ಮೊಗಸಾಲೆ ಅಂಕಣ | ಸಂಕಟ ಬಂದಾಗಲೆಲ್ಲ ವೆಂಕಟರಮಣ, ಕಾಂಗ್ರೆಸ್‍ನ ಹಳೆ ಚಾಳಿ

ಮುರಾರ್ಜಿಯವರಿಗೆ ಧೀರೂಭಾಯಿ ಸಹಿಸುತ್ತಿರಲಿಲ್ಲ. ಅವರಿಗೆ ಬೇಕಾಗಿದ್ದ ಉದ್ಯಮಿ ನಸ್ಲಿ ವಾಡಿಯಾ. ಧೀರೂಭಾಯಿ, ಗುಜರಾತಿಯಾದರೆ ನಸ್ಲಿ, ಪಾರ್ಸಿ ಉದ್ಯಮಿ. ಮುರಾರ್ಜಿ ಅರ್ಥ ಸಚಿವರಾಗಿದ್ದಾಗ, ಪ್ರಧಾನಿಯಾಗಿದ್ದಾಗ ಬೆಂಬಲ, ಪ್ರೋತ್ಸಾಹ, ಉತ್ತೇಜನ ನೀಡಿದ್ದು ನಸ್ಲಿ ಉದ್ಯಮಕ್ಕೆ. ರಾಜಕಾರಣದಲ್ಲಿ ಮುರಾರ್ಜಿಗೆ ಹಿನ್ನಡೆಯಾಗಿದ್ದು ನಸ್ಲಿಗೂ ಹಿನ್ನಡೆ ಆಗಲು ಕಾರಣವಾಯಿತು. ಇಂದಿರಾರ ಕೈ ಹಿಡಿದ ರಾಜಕೀಯ ತೇಜಿ, ಧೀರೂಭಾಯಿಗೆ ವರದಾನವಾಯಿತು. ಇಂದಿರಾ ಬಳಿಕವೂ ಕೇಂದ್ರ ಸರ್ಕಾರದ ಸೂತ್ರಧಾರರೊಂದಿಗೆ ಅಂಬಾನಿ ಸಮೂಹದ ಗಳಸ್ಯಕಂಠಸ್ಯ ಮಿತ್ರತ್ವ ಮುಂದುವರಿದಿದೆ. ಮುಖೇಶ್ ಅಂಬಾನಿ, ಅನಿಲ್ ಅಂಬಾನಿ ಸಹೋದರರು “ಬೇರೆ ಬೇರೆ” ಆಗಿದ್ದಾರೆ. ಆದರೆ “ಬ್ಲಡ್ ಈಸ್ ಥಿಕ್ಕರ್ ದ್ಯಾನ್ ವಾಟರ್” ಎನ್ನುವುದನ್ನು ನಾವು ಮರೆಯಬಾರದು. ಮುಖೇಶ್ ಅಂಬಾನಿ, ತಮ್ಮ ಒಡೆತನದ ಸಾಮ್ರಾಜ್ಯದ ಆಡಳಿತವನ್ನು ತಮ್ಮ ಮಕ್ಕಳ ಕೈಗೆ ಇದೀಗ ಹಸ್ತಾಂತರಿಸಿದ್ದಾರೆ. ಮೇಲ್ವಿಚಾರಣೆ ಎಂಬ ಹೆಸರಿನಲ್ಲಿ ಉದ್ಯಮದ ಮೇಲಿನ ಹಿಡಿತವನ್ನು ಮಾತ್ರ ತಮ್ಮ ಮುಷ್ಟಿಯಲ್ಲೆ ಇರಿಸಿಕೊಂಡಿದ್ದಾರೆ. ಕೇಂದ್ರದೊಂದಿಗೆ ಮುಂದುವರಿಸಬೇಕಾಗಿರುವ ಸ್ನೇಹದ ಪಾಠವನ್ನು ಮಕ್ಕಳಿಗೆ ತಪ್ಪದೆ ಕಲಿಸಿದ್ದಾರೆ. ಉದ್ಯಮಿಗಳಿಗೆ ಅವರದೇ ಆಯ್ಕೆಯ ಪಕ್ಷ ಇರುವುದು ಅಪರೂಪ. ಅವರು ಸದಾಕಾಲಕ್ಕೂ ಆಡಳಿತ ಪಕ್ಷಕ್ಕೆ ಸೇರಿದವರು. ರಾಮ ಅಧಿಕಾರಕ್ಕೆ ಬಂದರೆ ರಾಮನಿಗೆ ಜೈ, ರಾವಣ ಅಧಿಕಾರಕ್ಕೆ ಬಂದರೆ ರಾವಣನಿಗೆ ಜೈ ಎನ್ನುವ “ರಾಮಾಯ ಸ್ವಸ್ಥಿ, ರಾವಣಾಯ ಸ್ವಸ್ಥಿ” ನಮ್ಮ ಉದ್ಯಮಿಗಳ ನೀತಿ.

ಎಚ್.ಡಿ. ದೇವೇಗೌಡರು, ಅತ್ತ ಬಿಜೆಪಿಯವರೂ ಅಲ್ಲ, ಇತ್ತ ಕಾಂಗ್ರೆಸ್ಸಿಗರೂ ಅಲ್ಲ. ಈ ಎರಡೂ ಪಕ್ಷಗಳನ್ನು ಹೊರಗಿಟ್ಟು ಬಹುತೇಕ ಎಲ್ಲ ವಿರೋಧ ಪಕ್ಷಗಳು ಒಂದಾಗಿ ರಚಿಸಿಕೊಂಡ ಸಂಯುಕ್ತ ರಂಗ, 1996ರಲ್ಲಿ ಸರ್ಕಾರ ರಚಿಸಲು ಮುಂದಾದಾಗ ಅದರ ಪ್ರಧಾನ ಮಂತ್ರಿ ಅಭ್ಯರ್ಥಿ ದೇವೇಗೌಡರು. ದೆಹಲಿಯಲ್ಲಿ ಸಂಯುಕ್ತ ರಂಗ ಸಭೆ ಸೇರಿ ತನ್ನ ತೀರ್ಮಾನ ಪ್ರಕಟಿಸಿದ ಬಳಿಕ ಗೌಡರು ಬೆಂಗಳೂರಿಗೆ ಬಂದಿಳಿದಿದ್ದು ರಿಲಯನ್ಸ್ ಒಡೆತನದ ವಿಶೇಷ ವಿಮಾನದಲ್ಲಿ! ಗೌಡರು, ಪಿಎಂ ಸ್ಥಾನಕ್ಕೆ ಆಯ್ಕೆ ಆಗಿರದಿದ್ದರೆ…? ರಿಲಯನ್ಸ್ ಅಂಬಾನಿ ಒಡೆತನದ ಉದ್ಯಮ ಎನ್ನುವುದು ಯಾರಿಗೆ ಗೊತ್ತಿಲ್ಲ. ಯಾರು ಅಧಿಕಾರಕ್ಕೆ ಬರುತ್ತಾರೋ ಅವರ ಸುತ್ತ ಸೊಣೆಯುವುದು ಉದ್ಯಮಪತಿಗಳ ಚಾಳಿ.

ಇದನ್ನೂ ಓದಿ | ಸವಿಸ್ತಾರ ಅಂಕಣ | ಇತಿಹಾಸದ ಕಣ್ತೆರೆಸಿ ಸ್ವಾತಂತ್ರ್ಯ ಜ್ಯೋತಿ ಬೆಳಗಿಸಿದವರು ಸಾವರ್ಕರ್

ಕರ್ನಾಟಕದಲ್ಲಿ 1980ರಲ್ಲಿ ಘಟಿಸಿದ ಅನಿರೀಕ್ಷಿತ ರಾಜಕೀಯ ಬೆಳವಣಿಗೆಯಲ್ಲಿ ದೇವರಾಜ ಅರಸು ಅಧಿಕಾರ ಕಳೆದುಕೊಳ್ಳುವಂತಾಯಿತು. ಸಂಜಯ್ ಗಾಂಧಿಯವರ “ಆಯ್ಕೆ” ಆರ್. ಗುಂಡೂರಾವ್ ಮುಖ್ಯಮಂತ್ರಿಯಾದರು. ಎಂಟು ವರ್ಷ ಕಾಲ “ಅಜೇಯ” ಮುಖ್ಯಮಂತ್ರಿಯಾಗಿದ್ದ ಅರಸು ಜೊತೆ ಗುರುತಿಸಿಕೊಂಡಿದ್ದ ಉದ್ಯಪತಿಗಳನೇಕರು ಗುಂಡೂರಾಯರನ್ನು, ಅರಸು ಸಂಪುಟದಲ್ಲಿ ಅವರು ಸಚಿವರಾಗಿದ್ದರೂ ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಅರಸು ತಮ್ಮ ಜೊತೆ ಇರುವಾಗ ಗುಂಡೂರಾವ್ ಯಾವ ಲೆಕ್ಕ ಎನ್ನುವುದು ಅವರ ತೀರ್ಮಾನವಾಗಿತ್ತು ಎಂದು ಯಾರೂ ತರ್ಕ ಮಾಡಬಹುದು. ಅಂಥ ಉದ್ಯಮಿಗಳಲ್ಲಿ ಒಬ್ಬರು ಹರಿ ಖೋಡೆ. ಗುಂಡೂರಾವ್ ಸಿಎಂ ಆದ ಬಳಿಕ ಅವರ ಅಧಿಕೃತ ನಿವಾಸದ ಮುಂದೆ ಮುಖ್ಯಮಂತ್ರಿ ಭೇಟಿಗಾಗಿ ಖೋಡೆ ಆರು ತಿಂಗಳು “ಗೇಟು ಕಾದಿದ್ದರು”. ತಮ್ಮ ಆಪ್ತ ವಲಯದಲ್ಲಿ ಗುಂಡೂರಾಯರು “ಇವರಿಗೆ ಪಾಠ ಕಲಿಸುವ” ಮಾತನ್ನು ಆಡಿದ್ದರು. ಮುಂದೆ ಉಭಯಸಮ್ಮತ ರೀತಿಯಲ್ಲಿ ಹೊಂದಾಣಿಕೆ ಆಯಿತು ಎನ್ನುವುದು ಮುಂದುವರಿದ ರಾಜಕಾರಣ.

ಬರೋಬ್ಬರಿ 13 ವರ್ಷ ಗುಜರಾತ್ ಮುಖ್ಯಮಂತ್ರಿಯಾಗಿದ್ದವರು ನರೇಂದ್ರ ಮೋದಿ. ಮುಖ್ಯಮಂತ್ರಿ ಸ್ಥಾನಕ್ಕೆ ವಿದಾಯ ಹೇಳಿ 2014ರಲ್ಲಿ ಪ್ರಧಾನಿಯಾಗಿ ಅವರು ಪ್ರಮಾಣ ವಚನ ಸ್ವೀಕರಿಸಿದ ಸಮಾರಂಭದಲ್ಲಿ “ಅದು ತಮ್ಮ ಮನೆ ಕಾರ್ಯಕ್ರಮ” ಎಂಬಂತೆ ಮುಖೇಶ್ ಅಂಬಾನಿ ಮತ್ತು ಅವರ ಪತ್ನಿ ನೀತು ಅಂಬಾನಿ ಓಡಾಡಿ ಸಂಭ್ರಮಿಸಿದ್ದು ಟಿವಿಯಲ್ಲೂ ಪ್ರಸಾರವಾಗಿತ್ತು. ಅದಕ್ಕೂ ಪೂರ್ವದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ. ಮನಮೋಹನ್ ಸಿಂಗ್ ಪ್ರಧಾನಿ. ಆದರೆ ಅಂಬಾನಿ ವ್ಯವಹಾರವೇನಿದ್ದರೂ ಸೋನಿಯಾ ಗಾಂಧಿ ಬಳಿ. ನಿಜವಾದ ಅಧಿಕಾರ ಯಾರ ಕೈಲಿರುತ್ತದೆ ಎನ್ನುವುದು ಉದ್ಯಮಕ್ಕೆ ಗೊತ್ತಿರುತ್ತದೆ!

ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿರುವಂತೆ ಅಂಬಾನಿ ಮತ್ತು ಅದಾನಿ ಸಂಪತ್ತು ಜ್ವರದಂತೆ ಏರುತ್ತಿದೆ. ಮುಖೇಶ್ ಅಂಬಾನಿ ಸಂಪತ್ತು 2020ರಲ್ಲಿ 59 ಶತಕೋಟಿ ಡಾಲರ್ ಇದ್ದುದು 2022ರ ಆಗಸ್ಟ್ ವೇಳೆಗೆ 91.9 ಶತಕೋಟಿ ಡಾಲರ್‌ಗೆ ಏರಿದೆ. ಗೌತಮ್ ಅದಾನಿ ‌2020ರಲ್ಲಿ ಹತ್ತು ಶತಕೋಟಿ ಡಾಲರ್ ಸಂಪತ್ತಿನ ಒಡೆಯ. 2022ರ ಆಗಸ್ಟ್ ಹೊತ್ತಿಗೆ 137 ಶತಕೋಟಿ ಡಾಲರ್‌ಗೆ ಆ ಸಂಪತ್ತಿನ ಏರಿಕೆಯಾಗಿದ್ದು ಆರ್ಥಿಕ ಪವಾಡಗಳಲ್ಲಿ ಒಂದು. ನಿಜ, ಇದು ಶೇರು ಪೇಟೆಯಲ್ಲಿ ಅವರ ಉದ್ಯಮಗಳು ಗಳಿಸಿರುವ ಹೂಡಿಕೆ ಆಧರಿಸಿದ ಸಂಪತ್ತಿನ ಲೆಕ್ಕಾಚಾರ. ಶೇರು ಮಾರ್ಕೆಟ್‌ನಲ್ಲಿ ತೇಜಿ, ಉದ್ಯಮಪತಿಗಳ ಲಾಭ ಹೆಚ್ಚಿಸುತ್ತದೆ. ನಷ್ಟ, ಹೂಡಿಕೆದಾರರ ಕೈ ಕಚ್ಚುತ್ತದೆ. ಈ ಸತ್ಯ ಮನದಟ್ಟಾದರೆ ಉದ್ಯಮಪತಿಗಳ ಶ್ರೀಮಂತಿಕೆಯ ಮರ್ಮ ಅರ್ಥವಾಗುವ ಸಾಧ್ಯತೆ ಇರುತ್ತದೆ.

ಭಾರತ, ವಿಶ್ವದ ಇತರ ರಾಷ್ಟ್ರಗಳಂತೆ ಕೋವಿಡ್ ಮಾರಿಯ ದವಡೆಯಲ್ಲಿ ನಲುಗಿದ್ದು 2020, 2021ರ ಅವಧಿಯಲ್ಲಿ. ಉದ್ಯಮಗಳು ನೆಲಕಚ್ಚಿದವು. ಕಾರ್ಮಿಕರು ಕೆಲಸ ಕಳೆದುಕೊಂಡರಷ್ಟೇ ಅಲ್ಲ ಬದುಕಿನಲ್ಲಿ ಭರವಸೆಯನ್ನೂ ಕಳೆದುಕೊಂಡರು. ಲಾಕ್‌ಡೌನ್ ದೇಶದ ಸಾಮಾಜಿಕ, ಆರ್ಥಿಕ, ಔದ್ಯಮಿಕ, ಶೈಕ್ಷಣಿಕ ವ್ಯವಸ್ಥೆಗೆ ಗರ ಬಡಿದ ಕಾಲಘಟ್ಟದಲ್ಲಿ ಈ ಇಬ್ಬರು ಉದ್ಯಮಪತಿಗಳ ಸಂಪತ್ತು ವೃದ್ಧಿಯಾಗಿದ್ದರ ರಹಸ್ಯ ಬಯಲಾಗಬೇಕಿರುವುದು ದೇಶದ ಆರ್ಥಿಕ ಭದ್ರತೆಯ ದೃಷ್ಟಿಯಿಂದ ಜರೂರಿನದಾಗಿದೆ. ವಿದೇಶದಿಂದ ಗಣನೀಯ ಪ್ರಮಾಣದಲ್ಲಿ ಇವರು ಕಡಿಮೆ ಬಡ್ಡಿದರದಲ್ಲಿ ಆರ್ಥಿಕ ನೆರವು ಪಡೆದಿದ್ದಾರೆ. ಅದಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್‌ನ ಗ್ಯಾರಂಟಿ ಬೇಕಾಗುತ್ತದೆ. ಭಾರತದ ಬ್ಯಾಂಕುಗಳು ಇಂಥವರಿಗೆ ಸಾಲ ನೀಡುವುದಕ್ಕೆ ಕ್ಯೂ ಹಚ್ಚಿ ನಿಲ್ಲುತ್ತವೆ. ಬಡ ತೆರಿಗೆದಾರರ ಹಣ ಅದಾಗಿರುವುದರಿಂದ ಹೆಚ್ಚಿನ ಜಾಗರೂಕತೆ ಅಗತ್ಯ. “ಕೊಟ್ಟವ ಕೋಡಂಗಿ, ಇಸಕೊಂಡವ ಈರಭದ್ರ” ಆಗಬಾರದು ಎಂದಿದ್ದರೆ ಸರ್ಕಾರದ ಎಚ್ಚರ ಅಗತ್ಯ.

ಇದನ್ನೂ ಓದಿ | ಮೊಗಸಾಲೆ ಅಂಕಣ | ರಾಜಕಾರಣದ ತೆವಲಿಗೆ ತೆರಿಗೆ ಹಣದ ದುಂದು

Exit mobile version