Site icon Vistara News

ಮೊಗಸಾಲೆ ಅಂಕಣ | ಸೋನಿಯಾರನ್ನು ತತ್ತರಗೊಳಿಸಿದ ಅನಿರೀಕ್ಷಿತ ಬಂಡಾಯ

mogasale column

ಬಂಡಾಯದ ಬಾವುಟ ತನ್ನ ಮತ್ತು ತನ್ನಿಬ್ಬರು ಮಕ್ಕಳ ವಿರುದ್ಧವೇ ಹಾರಾಡಬಹುದೆಂದು ಸೋನಿಯಾ ಗಾಂಧಿ ಖಂಡಿತವಾಗಿಯೂ ನಿರೀಕ್ಷಿಸಿರಲಾರರು. ರಾಜಸ್ಥಾನದ ಮುಖ್ಯಮಂತ್ರಿಯನ್ನಾಗಿ ತಾವೇ ಕರೆದು ಕೂರಿಸಿ ಪೋಷಿಸಿದ ಅಶೋಕ್ ಗೆಹ್ಲೋಟ್ ಎಂಬ ಹಳೆ ತಲೆಮಾರಿನ ಕಾಂಗ್ರೆಸ್ ನಾಯಕ ಸೋನಿಯಾ ಪರಿವಾರದ ಋಣಕ್ಕೆ ಬಿದ್ದವರಂತೆ ನಡೆದುಕೊಳ್ಳಲಿಲ್ಲ, ಸಾಲ ಮಾಡಿದವರಂತೆ ತಲೆ ಮರೆಸಿಕೊಂಡು ಓಡಾಡಲೂ ಇಲ್ಲ. ಎಲ್ಲವೂ ನೇರಾನೇರ. ಹೈಕಮಾಂಡ್ ಹೇಳಿದ ಮಾತ್ರಕ್ಕೆ ಅದು ಸರಿಯಲ್ಲದಿದ್ದರೂ ಒಪ್ಪಿ ಗೋಣು ಆಡಿಸಲೇಬೇಕೆಂಬ ಷರತ್ತು ಎಲ್ಲಾದರೂ ಇದೆಯೇ ಎಂದು ಅವರು ಬಾಯಿ ತೆರೆದು ಕೇಳಲಿಲ್ಲ. ಆದರೆ ಅವರ ವರ್ತನೆಯಲ್ಲಿ ಯಾವುದೇ ಮುಲಾಜೂ ಇಲ್ಲದ ಬಂಡಾಯದ ರಾಜಕಾರಣ ವಿಜೃಂಭಿಸಿತು.

ಮೂರು ವರ್ಷದ ಹಿಂದೆ 2019ರಲ್ಲಿ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ಗಾಂಧಿ ರಾಜೀನಾಮೆ ಕೊಟ್ಟ ಬಳಿಕ 137 ವರ್ಷದ ಪಕ್ಷಕ್ಕೆ ಪೂರ್ಣಾವಧಿ ಅಧ್ಯಕ್ಷರೇ ಇಲ್ಲದ ಸ್ಥಿತಿ ನಿರ್ಮಾಣವಾಗಿರುವುದು ದೇಶದ ರಾಜಕೀಯ ವಿಪರ್ಯಾಸಗಳಲ್ಲಿ ಒಂದು. 2014 ಮತ್ತು 2019ರ ಲೋಕಸಭಾ ಚುನಾವಣೆ ಸೇರಿದಂತೆ ಆ ಮಧ್ಯಂತರದ ಅವಧಿಯಲ್ಲಿ ನಡೆದ ಬಹುತೇಕ ಎಲ್ಲ ಚುನಾವಣೆಗಳಲ್ಲೂ ಪಕ್ಷ ಸೋತಿದ್ದಕ್ಕೆ ನೈತಿಕ ಹೊಣೆ ಹೊತ್ತು ರಾಜೀನಾಮೆಯನ್ನು ರಾಹುಲ್ ಗಾಂಧಿ ನೀಡಿದ ನಂತರದಲ್ಲಿ ಹಂಗಾಮಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಸೋನಿಯಾ ತಮ್ಮ ರಾಜಕೀಯ ಜೀವಮಾನದಲ್ಲಿ ಕಾಣದಂಥ ಸೋಲನ್ನು ಉಣ್ಣುವಂತೆ ಮಾಡಿದ್ದು ಅವರದೇ ಪಕ್ಷದ ಅವರದೇ ನಾಯಕ ಗಣ. ತೆರವಾಗಿರುವ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸುವ ಕಾರ್ಯತಂತ್ರದ ಭಾಗವಾಗಿ ಗರಿಗೆದರಿದ ರಾಜಕೀಯ ಚಟುವಟಿಕೆ ಒಂದರ್ಥದಲ್ಲಿ ಸಮಾಪನಗೊಂಡಿದ್ದು ಹೈಕಮಾಂಡ್ ವಿರುದ್ಧ ಬಹಿರಂಗವಾಗಿ ಸಾರಿದ ಬಂಡಾಯದಲ್ಲಿ.

ಸೋನಿಯಾ ಗಾಂಧಿ, ಬರೋಬ್ಬರಿ ಎರಡು ದಶಕ ಕಾಲ ಎಐಸಿಸಿ ಅಧ್ಯಕ್ಷರಾಗಿದ್ದವರು. ಸ್ವಾತಂತ್ರ್ಯಾನಂತರದಲ್ಲಿ ಇಷ್ಟು ದೀರ್ಘಾವಧಿಗೆ ಎಐಸಿಸಿ ಅಧ್ಯಕ್ಷರಾದ ಇನ್ನೊಬ್ಬರಿಲ್ಲ. ಅವರ ಅಧಿಕಾರಾವಧಿಯಲ್ಲಿ ಪಕ್ಷ ಕಾಂಗ್ರೆಸ್/ಯುಪಿಎ 2004 ಮತ್ತು 2009ರಲ್ಲಿ ಎರಡು ಬಾರಿ ಲೋಕಸಭೆ ಗೆದ್ದು ಅಧಿಕಾರ ನಿರ್ವಹಿಸಿದ್ದು ನಿಜ. ಆದರೆ ಸ್ವತಂತ್ರವಾಗಿ ಸರ್ಕಾರ ರಚಿಸುವ ಸಮರ್ಥ ಬಲ ಆ ಪಕ್ಷಕ್ಕೆ ಲಭ್ಯವಾಗಲಿಲ್ಲ ಎನ್ನುವುದೂ ಅಷ್ಟೆ ನಿಜ. ದಿನೇ ದಿನೇ ಹದಗೆಟ್ಟಿರುವ ಆರೋಗ್ಯದ ಕಾರಣವಾಗಿ ಸೋನಿಯಾರ ಕ್ರಿಯಾಶೀಲತೆ ಕಡಿಮೆಯಾಗಿದೆ. ಹೊಣೆಯನ್ನು ಬೇರೆಯವರಿಗೆ ವಹಿಸುವುದಕ್ಕೆ ತಯಾರಿ ನಡೆಸಿದ್ದಾರೆ. ಐವತ್ತು ವರ್ಷಕ್ಕೂ ಹೆಚ್ಚು ಕಾಲ ದೇಶದ ಆಡಳಿತ ಸೂತ್ರ ಹಿಡಿದಿದ್ದ ಕಾಂಗ್ರೆಸ್ ಕೂಡಾ ರೋಗಗ್ರಸ್ತವಾಗಿದೆ. ಸಂಜೀವಿನಿ ಸಿಂಪಡಿಸಿ ಪುನಃಶ್ಚೇತನಗೊಳಿಸುವ “ಭಾರತ್ ಜೋಡೋ” ಕಾರ್ಯಕ್ರಮ ಸಾಗಿದೆ. ರಾಹುಲ್‍ರನ್ನು ಮತ್ತೆ ಭವಿಷ್ಯದ ಪ್ರಧಾನಿ ಎಂದು ಬಿಂಬಿಸುವ ಈ ಪಾದಯಾತ್ರೆಯ ಫಲಾಫಲ 2024ರ ಲೋಕಸಭಾ ಚುನಾವಣಾ ಫಲಿತಾಂಶದ ಮೇಲೆ ನಿಂತಿದೆ. ಇಷ್ಟೆಲ್ಲ ಇದ್ದರೂ ತಾನು ಬಯಸದ ಕಿರಿಕಿರಿಯನ್ನು ಪಕ್ಷದ ನಾಯಕತ್ವ ಅನೂಹ್ಯ ಮೂಲೆಗಳಿಂದ ಎದುರಿಸುವಂತಾಗಿದೆ.

ಸೋನಿಯಾ ಪರಿವಾರ ಅಂದುಕೊಂಡಂತೆಯೇ ಎಲ್ಲವೂ ನಡೆದಿದ್ದರೆ ಅಶೋಕ್ ಗೆಹ್ಲೋಟ್ ಎಐಸಿಸಿ ಅಧ್ಯಕ್ಷ ಸ್ಥಾನದ ಅಧಿಕೃತ ಅಭ್ಯರ್ಥಿಯಾಗಬೇಕಾಗಿತ್ತು. ಅವರನ್ನು ಮಾಡಿದರೆ ಹೇಗೆ…? ಇವರಿಗೆ ಪಟ್ಟ ಕಟ್ಟಿದರೆ ಹೇಗೆ… ಎಂಬ ಚಿಂತನಮಂಥನದಲ್ಲಿ ಮೂಡಿದ ಹೆಸರು ಗೆಹ್ಲೋಟ್‍ರದು. ರಾಜಸ್ಥಾನ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ಆಗಿರುವ ಅವರಿಗೆ ನಾಮಪತ್ರ ಸಲ್ಲಿಕೆ ಪೂರ್ವದಲ್ಲಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಹೈಕಮಾಂಡ್ ಸೂಚಿಸಿದ್ದೆ ಮುಂದಿನ ಎಲ್ಲ ರಾದ್ಧಾಂತಗಳಿಗೆ ನಾಂದಿಯಾಯಿತು. ರಾಜಸ್ಥಾನದ ರಾಜಕೀಯದಲ್ಲಿ ಗೆಹ್ಲೋಟ್ ಪಾಲಿನ ಪ್ರಮುಖ ವಿರೋಧಿ ನಾಯಕ ಆಡಳಿತ ಪಕ್ಷದ ಶಾಸಕರೇ ಆಗಿರುವ ಮಾಜಿ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್. ಮೂರು ವರ್ಷದ ಹಿಂದೆ ರಾಜ್ಯ ವಿಧಾನ ಸಭೆಗೆ ಚುನಾವಣೆ ನಡೆಯುವುದಕ್ಕೆ ಪೂರ್ವದಿಂದಲೂ ತನ್ನನ್ನು ಸಿಎಂ ಅಭ್ಯರ್ಥಿ ಎಂದು ಬಿಂಬಿಸಿಕೊಂಡು ಬಂದವರು ಸಚಿನ್. ಅವರ ಆಸೆಗೆ ನೀರು ಗೊಬ್ಬರ ಹಾಕಿ ಬೆನ್ನು ಸವರಿದ್ದು ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿ.

ಚುನಾವಣೆ ನಡೆದು 200 ಸ್ಥಾನ ಬಲದ ವಿಧಾನ ಸಭೆಯಲ್ಲಿ 108 ಸ್ಥಾನ ಗಳಿಸಿದ ಕಾಂಗ್ರೆಸ್ಸು ಸ್ವಂತ ಬಲದ ಮೇಲೆ ಸರ್ಕಾರ ರಚಿಸುವ ಸಕಲ ಸಾಮರ್ಥ್ಯವನ್ನೂ ತನ್ನದನ್ನಾಗಿಸಿಕೊಂಡಿತ್ತು. ಆದರೆ ಆ ಹಂತದಲ್ಲಿ ಬಂಡಾಯದ ಬಾವುಟ ಹಾರಿಸಿದವರು ಸಚಿನ್ ಪೈಲಟ್. ಕಾಂಗ್ರೆಸ್ ಶಾಸಕಾಂಗ ಪಕ್ಷದ ಒಲವು ಗೆಹ್ಲೋಟ್‍ರತ್ತ ಇರುವುದು ಖಚಿತ ಆಗುತ್ತಿದ್ದಂತೆಯೇ ಸಚಿನ್, ಶಾಸಕಾಂಗ ಪಕ್ಷದ 16-17 ಶಾಸಕರೊಂದಿಗೆ ದೆಹಲಿಗೆ ದೌಡಾಯಿಸಿ ರಾಹುಲ್ ಗಾಂಧಿ ಮನೆ ಬಾಗಿಲು ಬಡಿದರು. ಚುನಾವಣೆ ನಂತರ ಚುನಾವಣೆ ಸೋಲುತ್ತ; ಒಂದು ರಾಜ್ಯದ ನಂತರ ಮತ್ತೊಂದನ್ನು ಕಳೆದುಕೊಳ್ಳುತ್ತಿದ್ದ ಕಾಂಗ್ರೆಸ್ ಮತ್ತೆ ದಿಗಿಲು ಬೀಳಲು ಕಾರಣವಾಗಿದ್ದು ಸಚಿನ್ ಪೈಲಟ್, ರಾಹುಲ್ ಮನೆ ಬಾಗಿಲು ಬಡಿದ ಸದ್ದು. ತಾಯಿ, ಮಗ, ಮಗಳು ಗಲಿಬಿಲಿಗೆ ಈಡಾದರು. ಆಕಾಶ ತಲೆ ಮೇಲೆ ಬಿದ್ದಂತೆ; ನಿಂತ ನೆಲ ನಡುಗಿದಂತೆ; ಸಿಡಿಲು ಅಪ್ಪಳಿಸಿದಂತೆ ಕಂಗಾಲಾಗಿ ಹೋದರು. ಇದಕ್ಕೆ ಮಧ್ಯಪ್ರದೇಶ ರಾಜ್ಯ ಕಾಂಗ್ರೆಸ್‍ನಲ್ಲಿ ಆಗಿದ್ದ ಅಲ್ಲೋಲಕಲ್ಲೋಲ ಕಾರಣವಾಗಿತ್ತು.

ಮಧ್ಯ ಪ್ರದೇಶದ ರಾಜಕಾರಣ ಬಹುತೇಕ ಗಿರಕಿ ಹೊಡೆಯುವುದು ಅಲ್ಲಿಯ ರಾಜ ಮಹಾರಾಜರ ಖಯಾಲಿಯಲ್ಲಿ. ಕಾಂಗ್ರೆಸ್‍ನ ದಿಗ್ವಿಜಯ ಸಿಂಗ್, ಬಿಜೆಪಿಯ ವಿಜಯರಾಜೇ ಸಿಂಧ್ಯಾ ಹೀಗೆ. ದಿಗ್ವಿಜಯ್ ಸಿಂಗ್ ಅಲ್ಲಿ ಮೂರು ಬಾರಿ ಮುಖ್ಯಮಂತ್ರಿ ಆಗಿದ್ದವರು. ವಿಜಯರಾಜೇ ಬಿಜೆಪಿಯ ಸಂಸ್ಥಾಪಕರಲ್ಲಿ ಒಬ್ಬರು. ಅವರ ಮಗ ಮಾಧವರಾವ್ ಸಿಂಧ್ಯಾ ಕಾಂಗ್ರೆಸ್ ನಾಯಕ. ರಾಜಸ್ತಾನದ ರಾಜೇಶ ಪೈಲಟ್, ಮಾಧವರಾವ್ ಸಿಂಧ್ಯಾ ರಾಜೀವ ಗಾಂಧಿಯವರ ಗೆಳೆಯರು. ರಾಜೀವ್ ಗಾಂಧಿ ಹತ್ಯೆಗೊಳಗಾದರೆ ಮಾಧವರಾವ್ ಸಿಂಧ್ಯಾ ಆಕಸ್ಮಿಕದಲ್ಲಿ ಅಸು ನೀಗಿದರು. ಸಿಂಧ್ಯಾರ ಮಗ ಜ್ಯೋತಿರಾದಿತ್ಯ ಸಿಂಧ್ಯಾ ಮುಖ್ಯಮಂತ್ರಿಯಾಗುವ ಕನಸು ಕಂಡವರು. ಅದಕ್ಕೆ ಕಲ್ಲು ಹಾಕಿದ್ದು ಅದೇ ಪಕ್ಷದ ಹಿರಿಯ ಮುಖಂಡರಲ್ಲಿ ಒಬ್ಬರಾಗಿರುವ ಕಮಲನಾಥ್. ಕಾಂಜಿಪೀಂಜಿ ರಾಜಿಗೆ ಜ್ಯೋತಿರಾದಿತ್ಯ ಮುಂದಾಗಲಿಲ್ಲ. ಪಕ್ಷಕ್ಕೆ ರಾಜೀನಾಮೆ ಕೊಟ್ಟು ಬಿಜೆಪಿ ಪಾಳಯಕ್ಕೆ ಜಿಗಿದರು. ಈಗ ಅವರು ನರೇಂದ್ರ ಮೋದಿ ಸಂಪುಟದಲ್ಲಿ ನಾಗರಿಕ ವಿಮಾನಯಾನ ಖಾತೆ ಸಚಿವ. ಮಧ್ಯ ಪ್ರದೇಶದಲ್ಲಿ ಚೇತರಿಸಿಕೊಳ್ಳುವ ಲಕ್ಷಣವಿದ್ದ ಕಾಂಗ್ರೆಸ್ ಮತ್ತೆ ಸಂಕಟದ ಯಥಾಸ್ಥಿತಿಗೆ ಮರಳಿದೆ; ರಾಜ್ಯ, ಬಿಜೆಪಿ ಕೈ ವಶವಾಗಿ ಹೋಗಿದೆ.

ಇದನ್ನೂ ಓದಿ | ಸವಿಸ್ತಾರ ಅಂಕಣ | ‘ಭಾರತದ ಜಾತ್ಯತೀತತೆʼ ಎನ್ನುವುದು ʼತುಷ್ಟೀಕರಣʼಕ್ಕೆ ಹೊದಿಸಿದ ಕವಚ

ಮಧ್ಯಪ್ರದೇಶದಲ್ಲಾದ ಅನಾಹುತ ರಾಜಸ್ಥಾನದಲ್ಲೂ ಆಗಿಬಿಡಬಹುದು ಎಂಬ ಭಯವೇ ಸೋನಿಯಾ ಪರಿವಾರ ನಿಂತ ನೆಲ ನಡುಗಿಸಿದ ಕಾರಣ. ಸಚಿನ್ ಪೈಲಟ್, ತಮ್ಮ ಬೆಂಬಲಿಗ ಶಾಸಕರೊಂದಿಗೆ ಬಿಜೆಪಿಗೆ ಪಕ್ಷಾಂತರಗೊಳ್ಳುವ ಯೋಚನೆಗೆ ಬಂದಿದ್ದಷ್ಟೇ ಅಲ್ಲದೆ ಒಂದು ಹೆಜ್ಜೆಯನ್ನು ಆ ಪಕ್ಷದ ಹೊಸ್ತಿಲ ಒಳಗೆ ಇಟ್ಟಿದ್ದರು ಕೂಡಾ. ಅವರನ್ನು ಆಗ ಕರೆದು ಸಮಾಧಾನ ಪಡಿಸಿದ್ದ ರಾಹುಲ್ ಕೊಟ್ಟಿದ್ದು “ಸೂಕ್ತ ಕಾಲದಲ್ಲಿ ರಾಜಸ್ತಾನಕ್ಕೆ ನೀವೇ ಸಿಎಂ ಆಗುತ್ತೀರಿ” ಎಂಬ ವಚನ. ಮಗ ರಾಹುಲ್ ಇತ್ತ ವಚನ ಗಾಳಿಯಲ್ಲಿ ಹಾರಿ ಹೋಗಬಾರದು ಎಂಬುದು ಸೋನಿಯಾ ಮನಸ್ಸು. ಎಂದೇ ಅವರು ಸಿಎಂ ಸ್ಥಾನ ತೆರವು ಮಾಡುವಂತೆ ಗೆಹ್ಲೋಟ್‍ಗೆ ಆದೇಶಿಸಿದರು. ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸುವ ಮೊದಲು ಸಿಎಂ ಹುದ್ದೆಗೆ ರಾಜೀನಾಮೆ ನೀಡುವಂತೆ ಬಂದ ಸೂಚನೆ ಗೆಹ್ಲೋಟ್‍ರಿಗೆ “ಮರಣ ಮೃದಂಗ”ದ ಸದ್ದಾಗಿ ಕೇಳಿಸಿತು. ತಮ್ಮ ರಾಜೀನಾಮೆ ಪಡೆದು ಆ ಜಾಗದಲ್ಲಿ ಸಚಿನ್ ಪೈಲಟ್‍ರನ್ನು ಕುಳ್ಳಿರಿಸುವ ಹೈಕಮಾಂಡ್‍ನ ದೂರಗಾಮಿ ಷಡ್ಯಂತ್ರವನ್ನು ಅವರು ಅಲ್ಲಿ ಕಂಡರು.

ಅಸಲಿಗೆ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಬೇಕೆಂಬ ಹೈಕಮಾಂಡ್ ಸಲಹೆಯನ್ನು ಗೆಹ್ಲೋಟ್ ಏಕಾಏಕಿ ಒಪ್ಪಿಕೊಂಡಿರಲೇ ಇಲ್ಲ. ಸಿಎಂ ಹುದ್ದೆಯಲ್ಲಿದ್ದುಕೊಂಡೇ ಅಧ್ಯಕ್ಷ ಸ್ಥಾನ ನಿಭಾಯಿಸುವುದಕ್ಕೆ ತಮಗೆ ಅವಕಾಶ ಕೊಡಬೇಕೆಂಬ ಅವರ ಷರತ್ತಿನ ಕೋರಿಕೆಗೆ ಪೂರಕವಾಗಿ ಹೈಕಮಾಂಡ್ ಸ್ಪಂದಿಸಲಿಲ್ಲ. “ಒಬ್ಬರಿಗೆ ಒಂದೇ ಹುದ್ದೆ” ನೀತಿಯನ್ನು ಪಕ್ಷ ಆಗಾಗ ನೆನಪು ಮಾಡಿಕೊಳ್ಳುತ್ತದೆ. ಆ ನೆನಪು ಮರುಕಳಿಸಿದ್ದು ಗೆಹ್ಲೋಟ್ ವಿಚಾರದಲ್ಲಿ. ಇದನ್ನೆಲ್ಲ ಹೇಳಿದರೆ ಗೆಹ್ಲೋಟ್ ಸುಲಭದಲ್ಲಿ ಮಣಿಯುತ್ತಾರೆಂಬುದು ಹೈಕಮಾಂಡ್ ಯೋಚನೆ ಆಗಿತ್ತು. ಗೆಹ್ಲೋಟ್ ಮಣಿಯಲಿಲ್ಲ ಬದಲಾಗಿ ಪ್ರತಿತಂತ್ರ ಹೆಣೆದರು. ರಾಜಸ್ಥಾನ ವಿಧಾನ ಸಭೆಯ ಸ್ಪೀಕರ್ ಸಿ.ಪಿ. ಜೋಷಿ, ಗೆಹ್ಲೋಟರ ಪರಮಾಪ್ತ. ಅವರನ್ನು ಸಿಎಂ ಸ್ಥಾನಕ್ಕೆ ಆಯ್ಕೆ ಮಾಡಬೇಕೆಂದೂ, ಕಾಂಗ್ರೆಸ್ ವಿರುದ್ಧ ತಿರುಗಿ ಬಿದ್ದು ಸರ್ಕಾರವನ್ನು ಉರುಳಿಸುವ ಯತ್ನ ನಡೆಸಿದ್ದ ಸಚಿನ್‍ರನ್ನು ಯಾವುದೇ ಕಾರಣಕ್ಕೂ ಶಾಸಕಾಂಗ ಪಕ್ಷದ ನಾಯಕನಾಗಿ ಒಪ್ಪಲು ಸಾಧ್ಯವೇ ಇಲ್ಲವೆಂದೂ ಸ್ಪಷ್ಟ ಸಂದೇಶವನ್ನು ಸೋನಿಯಾ ಪರಿವಾರಕ್ಕೆ ರವಾನಿಸಿದರು.

ಇದನ್ನೂ ಓದಿ | ಮೊಗಸಾಲೆ ಅಂಕಣ | ಸದನಗಳಲ್ಲಿ ಹಂಗಾಮಾ, ಜನಹಿತಕ್ಕೆ ಮೂರ್ನಾಮ

ಪಕ್ಷದ ಸರ್ಕಾರವನ್ನೇ ಉರುಳಿಸಿ, ಬಿಜೆಪಿ ಜೊತೆ ಕೈಜೋಡಿಸಿ ಜನಾದೇಶಕ್ಕೆ ವಿರುದ್ಧವಾಗಿ ಹೊಸ ಸರ್ಕಾರ ರಚಿಸುವುದಕ್ಕೆ ಮುಂದಾಗಿದ್ದ ಸಚಿನ್ ವಿಚಾರದಲ್ಲಿ ಗೆಹ್ಲೋಟ್ ತೆಗೆದುಕೊಂಡ ನಿಲುವು ಪಕ್ಷದ ಸಿದ್ಧಾಂತದ ದೃಷ್ಟಿಯಿಂದ ಸರಿಯಾದುದೇ ಆಗಿತ್ತು. ಆದರೆ ಸೋನಿಯಾ ಪರಿವಾರಕ್ಕೆ ಅದು ಪಥ್ಯವಾಗಲಿಲ್ಲ. ಪಂಜಾಬ್‍ನಲ್ಲಿ ರಾಹುಲ್-ಪ್ರಿಯಾಂಕಾ ಜೋಡಿ ಮಾಡಿದ ಎಡವಟ್ಟು ರಾಜಸ್ಥಾನದಲ್ಲಿ ಪುನರಾವರ್ತನೆ ಆಗಬಾರದೆಂದು ಯತ್ನಿಸಿದ ಗೆಹ್ಲೋಟ್‍ರ “ಪಕ್ಷ ಹಿತ” ನಿರ್ಧಾರದಲ್ಲಿ ಸೋನಿಯಾ ಗಾಂಧಿ ಕಂಡಿದ್ದು ಬಂಡಾಯವನ್ನು!

ರಾಜಸ್ಥಾನ ಕಾಂಗ್ರೆಸ್ ಶಾಸಕಾಂಗ ಪಕ್ಷಕ್ಕೆ ಯಾರನ್ನು ನಾಯಕನನ್ನಾಗಿ ಆಯ್ಕೆ ಮಾಡಬೇಕೆಂಬ ನಿರ್ಧಾರ ತೆಗೆದುಕೊಳ್ಳುವ ಅಧಿಕಾರವನ್ನು ಸೋನಿಯಾ ಗಾಂಧಿಯವರಿಗೆ ಬಿಡುವ ಒಂದು ಸಾಲಿನ ನಿರ್ಣಯವನ್ನು ಅಂಗೀಕರಿಸುವುದಕ್ಕೆ ಗೆಹ್ಲೋಟ್ ಬೆಂಬಲಿಗ ಶಾಸಕರು ಒಪ್ಪಲಿಲ್ಲ ಎನ್ನುವುದು ಹೈಕಮಾಂಡ್ ದೃಷ್ಟಿಯಿಂದ ಸಣ್ಣ ಅಪರಾಧವಲ್ಲ. ಈ ನಿರ್ಣಯವನ್ನು ಪಾಸು ಮಾಡಿಸಲೆಂದೇ ದೆಹಲಿಯಿಂದ ಜೈಪುರಕ್ಕೆ ಬಂದಿದ್ದ ಮಲ್ಲಿಕಾರ್ಜುನ ಖರ್ಗೆ ಮತ್ತು ಅಜಯ್ ಮಾಕೆನ್ ಸಮ್ಮುಖದಲ್ಲಿ ನಡೆಯಬೇಕಿದ್ದ ಸಭೆಗೆ ಗೆಹ್ಲೋಟ್ ಬೆಂಬಲಿಗ ಶಾಸಕರು ಗೈರು ಹಾಜರಾದರು. ದೊಡ್ಡ ನಿರೀಕ್ಷೆಯಲ್ಲಿ ಬಂದಿದ್ದ ಖರ್ಗೆ, ಮಾಕೆನ್ ಬರಿಗೈಲಿ ಮರಳಿದರು. ಇದು ಸೋನಿಯಾರಿಗೆ ಎದುರಾದ ಸಣ್ಣ ಸವಾಲಲ್ಲ. ಸೋನಿಯಾ ಬಯಸಿದ ಹಾಗೆ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಗೆಹ್ಲೋಟ್ ಸ್ಪರ್ಧಿಸಲಿಲ್ಲ. ಗೆಹ್ಲೋಟ್ ಬಯಸಿದಂತೆ ಅವರ ಸಿಎಂ ಸ್ಥಾನ ಅವರಲ್ಲೇ ಸದ್ಯದ ಮಟ್ಟಿಗಾದರೂ ಉಳಿದಿದೆ. ಏನು ಇದರ ಅರ್ಥ?

ಇದನ್ನೂ ಓದಿ | ಮೊಗಸಾಲೆ ಅಂಕಣ | ಬಸವರಾಜ ಹೊರಟ್ಟಿಯವರ ಮುಂದಿನ ನಡೆ?

ಕಾಂಗ್ರೆಸ್‍ನಲ್ಲಿ ಸೋನಿಯಾ ಮತ್ತು ಪರಿವಾರ ಮತ್ತಷ್ಟು ದುರ್ಬಲವಾಗುತ್ತಿರುವುದರ ಇಂಗಿತ ರಾಜಸ್ತಾನ ಕಾಂಗ್ರೆಸ್ ವಿದ್ಯಮಾನದಲ್ಲಿ ಅಡಗಿದೆ. ಗೆಹ್ಲೋಟರ ಬಂಡಾಯವನ್ನು ಸೋನಿಯಾ ಗಾಂಧಿಯವರು ಕ್ಷಮಿಸುವ ಸಾಧ್ಯತೆ ಬಹು ಕಡಿಮೆ. ಗೆಹ್ಲೋಟ್ ಬೆಂಬಲಿಗ ಸಚಿವರೊಬ್ಬರು ಇಷ್ಟೆಲ್ಲ ರಾದ್ಧಾಂತದ ಬಳಿಕವೂ ಸಚಿನ್ ಪೈಲಟರನ್ನು ಭೇಟಿಯಾಗಿರುವುದು ಅಲ್ಲಿ ಎಲ್ಲವೂ ಸರಿಯಾಗಿಲ್ಲ ಎನ್ನುವುದನ್ನು ಹೇಳುತ್ತದೆ. ಏತನ್ಮಧ್ಯೆ ಕಾಂಗ್ರೆಸ್ ಹೈಕಮಾಂಡ್‍ಗೆ ಮರ್ಮಾಘಾತ ನೀಡುವ ಸುದ್ದಿಯೊಂದು ರಾಜಸ್ಥಾನದಿಂದ ಹೊರ ಬಿದ್ದಿದೆ. ಜಗತ್ತಿನ ಅತ್ಯಂತ ಶ್ರೀಮಂತ ಉದ್ಯಮಿ ಗೌತಮ್ ಅದಾನಿ, ರಾಹುಲ್ ಗಾಂಧಿಯವರ ರಾಜಕೀಯ ಟಾರ್ಗೆಟ್‍ಗಳಲ್ಲಿ ಒಬ್ಬರು. ಪ್ರಧಾನಿ ಮೋದಿಯವರ ಬೆಂಬಲಾಶೀರ್ವಾದದಿಂದ ಬೆಳೆದಿರುವ ಅದಾನಿ, ದೇಶದ ಬಡವರ ರಕ್ತ ಹೀರುತ್ತಿದ್ದಾರೆಂದು ರಾಹುಲ್ ಗಾಂಧಿ ಪದೇ ಪದೆ ಆರೋಪ ಮಾಡುತ್ತಿದ್ದಾರೆ. ಇದೀಗ ಗೆಹ್ಲೋಟ್ ಸರ್ಕಾರ ಅದಾನಿ ಉದ್ಯಮ ಸಮೂಹಕ್ಕೆ ರಾಜಸ್ಥಾನದಲ್ಲಿ ಕೈಗಾರಿಕೆ ಆರಂಭಿಸಲು ಆಹ್ವಾನಿಸಿ ಅನುಮತಿಯನ್ನೂ ನೀಡಿದೆ. ಅದಾನಿ ಪ್ರಕಟಿಸಿರುವ ಪ್ರಕಾರ ಆರಂಭಿಕವಾಗಿ ಅವರು ಅಲ್ಲಿ 60 ಸಾವಿರ ಕೋಟಿ ಬಂಡವಾಳ ಹೂಡಲಿದ್ದಾರೆ. ಇದು ರಾಹುಲ್ ಗಾಂಧಿಯವರ ಬಾಯನ್ನು ಮುಚ್ಚಿಸಲು ಗೆಹ್ಲೋಟ್ ತೆಗೆದುಕೊಂಡಿರುವ ಚಾಣಾಕ್ಷ ಕ್ರಮ ಎಂದೇ ವಿಶ್ಲೇಷಿಸಲಾಗುತ್ತಿದೆ.

ಗೆಹ್ಲೋಟರನ್ನು ಮಣಿಸಲು ಯಾವೆಲ್ಲ ಕ್ರಮಗಳನ್ನು ಪಕ್ಷದ ಹೈಕಮಾಂಡ್ ಯೋಚಿಸುತ್ತಿದೆಯೋ ಗೊತ್ತಿಲ್ಲ. ಅದು ಸುಮ್ಮನೆ ಇರುವ ಸಾಧ್ಯತೆ 10/90 ಮಾತ್ರ. ಎಂಬತ್ತರ ದಶಕದಲ್ಲಿ ಅತ್ತೆ ಇಂದಿರಾ ಗಾಂಧಿ ಅಂದಿನ ಕರ್ನಾಟಕದ ಮುಖ್ಯಮಂತ್ರಿ ದೇವರಾಜ ಅರಸರನ್ನು ಮೂಲೆಗೊತ್ತಲು ಬಳಸಿದ ತಂತ್ರವನ್ನು ಈ ಹೊತ್ತು ಸೊಸೆ ಸೋನಿಯಾ ಗಾಂಧಿ ಬಳಸಲಿದ್ದಾರೆಯೆ…? ಈ ಕೆಲಸಕ್ಕೆ ಹೊಸ ಏಐಸಿಸಿ ಅಧ್ಯಕ್ಷರನ್ನು ಬಳಸಿಕೊಳ್ಳಲಿದ್ದರೆಯೇ? ಕುತೂಹಲ ಸಣ್ಣದಲ್ಲ.

Exit mobile version