Site icon Vistara News

ಮೊಗಸಾಲೆ ಅಂಕಣ: ಉತ್ತರ ಕರ್ನಾಟಕಕ್ಕೆ ಉತ್ತರ ನೀಡದ ಬೆಳಗಾವಿ ಅಧಿವೇಶನ

belgavi session

ಉತ್ತರ ಕರ್ನಾಟಕದ (North Karnataka) ಜನತೆ ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳನ್ನು ಚರ್ಚಿಸುವ ಮುಖ್ಯ ಅಜೆಂಡಾದೊಂದಿಗೆ ಬೆಳಗಾವಿ ಸುವರ್ಣ ಸೌಧದಲ್ಲಿ (Belagavi Suvarna Soudha) ಹನ್ನೊಂದು ದಿನ ಕಾಲ ನಡೆದ ರಾಜ್ಯ ವಿಧಾನ ಮಂಡಲದ ಅಧಿವೇಶನ (Winter Session) ಮುಖ್ಯ ಅಜೆಂಡಾದ ಮೇಲೆ ವ್ಯಾಪಕ ವಿಸ್ತೃತ ಚರ್ಚೆಯನ್ನೇ ನಡೆಸಲಿಕ್ಕಾಗದೆ ಸರ್ಕಾರ ನೀಡುವ ಮತ್ತೊಂದು ಮಾಮೂಲಿ ಭರವಸೆಯೊಂದಿಗೆ ಮುಕ್ತಾಯಗೊಂಡಿದೆ. ಅಧಿವೇಶನವನ್ನು ಕರೆದುದೇ ಉತ್ತರ ಕರ್ನಾಟಕದ ಸಮಸ್ಯೆ ಚರ್ಚಿಸಲೆಂದೇ ಆಗಿತ್ತು. ಆದರೆ ಅಧಿವೇಶನ ನಾಳೆ ಮುಗಿಯುತ್ತದೆ ಎಂದಾಗ ಹಿಂದಿನ ದಿವಸ ಚರ್ಚಿಸುವ ಅವಕಾಶ ಕಲ್ಪಿಸಲಾಯಿತು. ಹಿರಿಯ ಸದಸ್ಯರಾದ ಬಿ.ಆರ್.ಪಾಟೀಲ, ಲಕ್ಷ್ಮಣ ಸವದಿ, ಎನ್.ಎಚ್. ಕೋನರೆಡ್ಡಿ, ಪ್ರಕಾಶ್ ಕೋಳೀವಾಡ, ಅಲ್ಲಮ ಪ್ರಭು ಪಾಟೀಲ ಮುಂತಾದವರು ಸಂಕಷ್ಟ ಕುರಿತಂತೆ ಚರ್ಚೆಯನ್ನು ಗಂಭೀರ ಸ್ವರೂಪದಲ್ಲಿಯೇ ಶುರು ಮಾಡಿದರಾದರೂ ಉತ್ತರ ಕೊಡಬೇಕಾದ ಸರ್ಕಾರದಿಂದ ಹರಶಿವ ಬಾರದೆ ಇಡೀ ಚರ್ಚೆಯೇ ʼತೌಡು ಕುಟ್ಟುವ ಪ್ರಹಸನʼ ಆಗಿದ್ದು ಜನ ಗಮನಿಸಿರುವ ಬೆಳವಣಿಗೆ.

ಬೆಂಗಳೂರಿನಲ್ಲಿರುವ ವಿಧಾನ ಸೌದದ ಮಾದರಿಯಲ್ಲಿ ಬೆಳಗಾವಿಯಲ್ಲೊಂದು ಸುವರ್ಣ ಸೌಧ ನಿರ್ಮಿಸುವುದರ ಹಿಂದೆ ಮಹತ್ವದ ಎರಡು ಆಶಯ ಕೆಲಸ ಮಾಡಿತ್ತು. ಬೆಳಗಾವಿ, ಖಾನಾಪುರ, ಕಾರವಾರ, ಕಿತ್ತೂರು ಸೇರಿದಂತೆ ಕರ್ನಾಟಕಕ್ಕೆ ಮಹಾಜನ ವರದಿ ರೀತ್ಯ ಸೇರಿರುವ ಹತ್ತಾರು ಊರು ಕೇರಿಗಳ ಮೇಲೆ ವಕ್ರದೃಷ್ಟಿ ಬೀರಿ ಅವುಗಳನ್ನು ಕಿತ್ತು ಕಬಳಿಸುವ ಮಹಾರಾಷ್ಟ್ರದ ಸರ್ವಪಕ್ಷ ರಾಜಕಾರಣವನ್ನು ಬಗ್ಗು ಬಡಿಯುವ ಆಶಯ ಒಂದು. ಪ್ರತಿ ವರ್ಷವೂ ಸುವರ್ಣ ಸೌಧದಲ್ಲಿ ವಿಧಾನ ಮಂಡಲದ ಅಧಿವೇಶನ ನಡೆಸಿ ಉತ್ತರ ಕರ್ನಾಟಕದ ಜನತೆಯ ಗೋಳು ದುಃಖ ದುಮ್ಮಾನ ಸಂಕಷ್ಟಗಳಿಗೆ ಸ್ಥಳದಲ್ಲೇ ಪರಿಹಾರ ಕಂಡುಕೊಳ್ಳುವ ಆಶಯ ಮತ್ತೊಂದು.

ಕರ್ನಾಟಕದ ನೆಲ ಕಬಳಿಸುವ ಮಹಾರಾಷ್ಟ್ರದ ನೆಲದಾಹ ಸುವರ್ಣ ಸೌಧ ಅಸ್ತಿತ್ವಕ್ಕೆ ಬಂದಿದೆ ಎಂಬ ಕಾರಣಕ್ಕೆ ಶಮನವಾಗಿಲ್ಲ ಎನ್ನುವುದಕ್ಕೆ ಹತ್ತಾರು ಬಗೆಯ ಪುರಾವೆಗಳಿವೆ. ಅಧಿವೇಶನ ಬೆಳಗಾವಿಯಲ್ಲಿ ನಡೆಯುವ ಸಂದರ್ಭದಲ್ಲೆ ಮಹಾರಾಷ್ಟ್ರ ಏಕೀಕರಣ ಸಮಿತಿಯೂ ಸೇರಿದಂತೆ ಅಲ್ಲಲ್ಲಿ ಇರುವ ಮಹಾರಾಷ್ಟ್ರ ಪರ ಸಂಘಟನೆಗಳು “ಮಹಾ ಮೇಳಾವ” ನಡೆಸಿ ನಾವ್ಯಾರು ಸತ್ತಿಲ್ಲ, ಬದುಕಿದ್ದೇವೆ, ನಮ್ಮ ಗುರಿ ಸಾಧಿಸುತ್ತೇವೆಂಬ ಎಚ್ಚರಿಕೆಯನ್ನು ರವಾನಿಸುತ್ತಲೇ ಇವೆ. ಮಹಾ ಮೇಳಾವ ತನ್ನ ಮೂಲ ಸತ್ವವನ್ನು ಕಳೆದುಕೊಂಡಿದೆ ಎನ್ನುವುದು ನಿಜವಾದರೂ ಅದೊಂದು ಬಗೆಯಲ್ಲಿ ಕ್ರಿಶ್ಚಿಯನ್ ಪುರಾಣಗಳಲ್ಲಿ ಬರುವ ಡ್ರಾಕುಲಾದಂತೆ. ಸತ್ತಂತೆ ಮಲಗಿರುವ ಡ್ರಾಕುಲಾದ ಮೇಲೆ ರಕ್ತ ಸಿಂಚನವಾದರೆ ಅದು ಪ್ರಾಣ ಸಹಿತ ಎದ್ದು ಕ್ರಿಯಾಶೀಲವಾಗುತ್ತದೆಂಬ ಕಥೆಯಂತೆ ಮಹಾ ಮೇಳಾವದ ಪುರಾಣ.

ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ ಒಳಗೊಂಡ ಉತ್ತರ ಕರ್ನಾಟಕದ್ದು ಸುದೀರ್ಘ ಗೋಳಿನ (north karnataka development) ಕಥನ. ಆ ಭಾಗದಿಂದ ಆಯ್ಕೆಯಾಗಿ ಬರುವ ಶಾಸಕರು ತಮ್ಮ ಸಂಕಟದ ಕಥೆಯನ್ನು “ಹೇಳತೇನ ಕೇಳಾ” ಎಂದರೂ ಕಿವಿಗೊಡಲು ತಯಾರಿಲ್ಲದ ಆಡಳಿತ ವ್ಯವಸ್ಥೆ ನಮ್ಮದು. ವಿಧಾನ ಮಂಡಲ ಅಧಿವೇಶನ ಬೆಳಗಾವಿಯಲ್ಲಿ ಇಂಥ ದಿನದಿಂದ ಇಷ್ಟು ದಿನ ಕಾಲ ನಡೆಯುತ್ತದೆ ಎನ್ನುವುದನ್ನು ವಿಧಾನ ಪರಿಷತ್ ಸಭಾಪತಿ ಮತ್ತು ವಿಧಾನ ಸಭೆ ಅಧ್ಯಕ್ಷರು ಪ್ರಕಟಿಸುತ್ತಾರೆ. ಅದೊಂದು ವಾರ್ಷಿಕ ವಿಧಿ. ಅದೇ ಕಾಲಕ್ಕೆ ಉತ್ತರ ಕರ್ನಾಟಕದ ಸಮಸ್ಯೆ ಚರ್ಚೆ ಈ ಅಧಿವೇಶನದಲ್ಲಿ ಮುಖ್ಯವಾಗಿ ನಡೆಯುತ್ತದೆಂದು ಅವರು ಹೇಳುತ್ತಾರೆ, ಸರ್ಕಾರವೂ ಅದನ್ನು ಅನುಮೋದಿಸುತ್ತದೆ. ಆದರೆ ಅಧಿವೇಶನ ಶುರುವಾದಾಗ ಸರ್ಕಾರಕ್ಕೆ ತನ್ನ ಮಾತು ಮರೆತು ಹೋಗುತ್ತದೆ. ಉಭಯ ಸದನಗಳ ಮುಖ್ಯಸ್ಥರು ಚರ್ಚೆಯನ್ನು ನಿಯಂತ್ರಿಸಲಾಗದೆ ಅಸಹಾಯಕತೆಯಿಂದ ಕೈ ಚೆಲ್ಲುತ್ತಾರೆ. ಅಲ್ಲಿಗೆ ಅಧಿವೇಶನ ಸಮಾಪನಗೊಳ್ಳುತ್ತದೆ.

ಇಷ್ಟು ವರ್ಷದಿಂದ ನಡೆಯುತ್ತ ಬಂದಿರುವ ಈ ಪ್ರಹಸನದ ಪ್ರಧಾನ ಪಾತ್ರಧಾರಿಗಳು ರಾಜ್ಯವನ್ನು ಉದ್ದಕ್ಕೂ ಆಳಿಕೊಂಡು ಬಂದಿರುವ ಕಾಂಗ್ರೆಸ್, ಬಿಜೆಪಿ ಮತ್ತು ಜನತಾ ಪರಿವಾರ ಪಕ್ಷಗಳು. ಅಧಿಕಾರದಲ್ಲಿ ಇರದ ಪಕ್ಷಗಳು ಈ ಲೋಪಕ್ಕೆ ಆಡಳಿತ ಪಕ್ಷವನ್ನು ಹೊಣೆ ಮಾಡುತ್ತವೆ. ಅಧಿಕಾರದಲ್ಲಿರುವ ಪಕ್ಷ ಕುರ್ಚಿ ಕಳೆದುಕೊಂಡಾಗ ಇದೇ ಆರೋಪವನ್ನು ಆಗ ಇರುವ ಆಡಳಿತ ಪಕ್ಷದ ಮೇಲೆ ಮಾಡುತ್ತದೆ. ಇವು ಪರಸ್ಪರ ದೂಷಿಸಿದಂತೆ ಕಂಡರೂ ವಾಸ್ತವದಲ್ಲಿ ಅದು ಜನರ ಕಣ್ಣಿಗೆ ಮಣ್ಣನ್ನೆರಚಲು ಇವು ಪಾಲಿಸಿಕೊಂಡು ಬಂದಿರುವ ರಾಜಕೀಯ ತಂತ್ರಗಾರಿಕೆ ಮಾತ್ರ. ಇದನ್ನು ಜನ ಇನ್ನೂ ಅರ್ಥ ಮಾಡಿಕೊಂಡಿಲ್ಲ ಎನ್ನುವುದೇ ರಾಜಕೀಯ ಪಕ್ಷಗಳ ಅಸಲಿ ಬಂಡವಾಳ. ಬಂಡವಾಳ ಬಯಲಾಗದೆ ಇಂಥ ಮೂರನೇ ದರ್ಜೆ ರಾಜಕೀಯ ಕೊನೆಯಾಗದು. ಆದರೆ ಬೆಕ್ಕಿನ ಕೊರಳಿಗೆ ಘಂಟೆ ಕಟ್ಟುವವರು ಯಾರು…?

ಮೈಸೂರು ರಾಜಾಡಳಿತದಲ್ಲಿದ್ದಾಗ ಮೈಸೂರು ರಾಜಧಾನಿಯಾಗಿತ್ತು. ಬ್ರಿಟಿಷರ ಆಳ್ವಿಕೆ ಶುರುವಾದ ತರುವಾಯದಲ್ಲಿ ಬೆಂಗಳೂರಿಗೆ ಆದ್ಯತೆ ದೊರೆಯಿತು. ಸ್ವಾತಂತ್ರ್ಯ ಬರುವ ವೇಳೆಗೆ ಹೊಸ ರಾಜ್ಯದ ರಾಜಧಾನಿ ಯಾವುದಾಗಿರಬೇಕೆಂಬ ಚರ್ಚೆ ನಡೆದುದು ಕೆಲವರ ನೆನಪಿನಲ್ಲಾದರೂ ಇರಬಹುದು. ಆಗ ಪ್ರಸ್ತಾಪವಾದ ನಗರಗಳಲ್ಲಿ ಮುಖ್ಯವಾದುದು ತುಂಗಭದ್ರಾ ನದಿ ದಂಡೆ ಊರು ಹರಿಹರ. ಭೌಗೋಳಿಕವಾಗಿ ರಾಜ್ಯದ ಮಧ್ಯ ಭಾಗದಲ್ಲಿರುವ ಹರಿಹರ ಇತ್ತ ಚಾಮರಾಜನಗರಕ್ಕೂ ಅತ್ತ ಬೀದರ್‌ಗೂಗೂ ಮಧ್ಯದಲ್ಲಿ ಬರುವ ಕಾರಣ ರಾಜಧಾನಿಗೆ ಕೆಲಸ ಕಾರ್ಯ ನಿಮಿತ್ತ ಹೋಗಿ ಬರುವವರಿಗೆ ಅನುಕೂಲವಾಗುತ್ತದೆ; ನದಿ ದಂಡೆ ಊರಾಗಿರುವುದರಿಂದ ನೀರಿನ ಸಮಸ್ಯೆ ಕಾಡಲಾರದು ಎಂಬ ಹತ್ತು ಹಲವು ಕಾರಣಗಳನ್ನು ನೀಡಲಾಗಿತ್ತು. ಆಗ ಧುತ್ತೆಂದು ಎದುರಾಗಿದ್ದು ಲಿಂಗಾಯತ ಒಕ್ಕಲಿಗ ಪಾರಮ್ಯದ ಪ್ರಶ್ನೆ.

ಹರಿಹರ ರಾಜಧಾನಿ ಆದರೆ ಲಿಂಗಾಯತರ ಪ್ರಾಬಲ್ಯ ಹೆಚ್ಚಬಹುದೆಂಬ ಶಂಕೆ ಆಗ ಮೂಡಿತು. ಆ ಹೊತ್ತಿಗೆ ಬೆಂಗಳೂರು ಪ್ರಗತಿ ಪಥದಲ್ಲಿ ಇದ್ದುದು ಸುಳ್ಳಲ್ಲ. ಅದನ್ನೇ ನೆಪ ಮಾಡಿಕೊಂಡು ರಾಜಧಾನಿ ನಗರವಾಗಿ ಬೆಂಗಳೂರು ಆದ್ಯತೆ ಪಡೆಯಿತು. ಕರ್ನಾಟಕದ ದಕ್ಷಿಣ ಮೂಲೆಯಲ್ಲಿರುವ ಬೆಂಗಳೂರು ಉತ್ತರ ಕರ್ನಾಟಕದವರಿಗೆ ಬಾಯಿಗೆ ಎಟುಕದಿರುವುದು ಹುಳಿ ದ್ರಾಕ್ಷಿ ಎಂಬಂತಾಗಿದೆ. ಇದನ್ನೇ ಬಿ.ಆರ್.ಪಾಟೀಲರು ಸದನದಲ್ಲಿ ಪ್ರಸ್ತಾಪಿಸಿದ್ದು. ಇನ್ನು ಉತ್ತರ ಕರ್ನಾಟಕದ ಅಭಿವೃದ್ಧಿ ಮಾತು ಬಂದರೆ ಎಲ್ಲ ಪಕ್ಷದ ಎಲ್ಲ ರಾಜಕಾರಣಿಗಳೂ ಉಲ್ಲೇಖಿಸುವುದು ಡಾ.ಡಿ.ಎಂ. ನಂಜುಂಡಪ್ಪ (Nanjundappa Report) ವರದಿಯನ್ನು. ಪ್ರಾದೇಶಿಕ ಅಸಮತೋಲನವನ್ನು (ಆ ವರದಿ ಎಳೆಎಳೆಯಾಗಿ ವರ್ಣಿಸಿದೆ. ಅದರ ನಿವಾರಣಗೆ ತಕ್ಕುದಾದ ಪರಿಹಾರೋಪಾಯಗಳನ್ನೂ ಸೂಚಿಸಿದೆ. ತಾವು ನೀಡಿದ ಉತ್ತರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇದನ್ನು ಪ್ರಸ್ತಾಪಿಸಿ ವರದಿ ಬಂದು 23 ವರ್ಷವಾಗಿದೆ ಪರಿಹಾರ ಮಾತ್ರ ಮರೀಚಿಕೆ ಆಗಿದೆ ಎಂದಿದ್ದಾರೆ. ಈ 23 ವರ್ಷದಲ್ಲಿ ಸಿದ್ದರಾಮಯ್ಯನವರೇ ಐದು ವರ್ಷ ಎಂಟು ತಿಂಗಳು ಅಧಿಕಾರದಲ್ಲಿದ್ದರು ಎನ್ನುವುದು ಗಮನಿಸಬೇಕಾದ ಸಂಗತಿ.

ಅವರೇ ಹೇಳಿರುವಂತೆ ಲೋಪಕ್ಕೆ ಕಾರಣ ಕಂಡು ಹಿಡಿಯಲು ಮತ್ತೊಬ್ಬ ಅರ್ಥ ಶಾಸ್ತ್ರಜ್ಞರ ನೇತೃತ್ವದಲ್ಲಿ ಮತ್ತೊಂದು ಉನ್ನತಾಧಿಕಾರ ಸಮಿತಿಯನ್ನು ಸರ್ಕಾರ ರಚಿಸಲಿದೆ. ಆರು ತಿಂಗಳಲ್ಲಿ ವರದಿ ಕೊಡುವಂತೆ ಸೂಚಿಸಲಾಗುವುದು ಎಂದಿದ್ದಾರಾದರೂ ಸಮಿತಿ ಯಾವಾಗ ಅಸ್ತಿತ್ವಕ್ಕೆ ಬರುತ್ತದೋ ಗೊತ್ತಿಲ್ಲ. ಎಷ್ಟು ಸಮಯದಲ್ಲಿ ತನ್ನ ವರದಿಯನ್ನು ಅದು (ಅವಧಿ ವಿಸ್ತರಣೆ ಇಂಥ ಸಮಿತಿಗಳಲ್ಲಿ ಸಾಮಾಣ್ಯ) ಒಪ್ಪಿಸುತ್ತದೋ ಹೇಳಲಾಗದು. ಸರ್ಕಾರ ಆ ವರದಿಯನ್ನು ಒಪ್ಪಿ ಅಂಗೀಕರಿಸಿ ಅನುಷ್ಟಾನಕ್ಕೆ ಆದೇಶಿಸುತ್ತದೆ ಎನ್ನುವುದಕ್ಕೂ ಖಚಿತ ಭರವಸೆ ಇಲ್ಲ. (ಇಂಥ ಎಷ್ಟು ವರದಿಗಳು ವಿಧಾನ ಸೌದದ ಕಪಾಟುಗಳ ತುಂಬ ಶೇಖರಗೊಂಡು ದೂಳು ಗೆದ್ದಲು ಹಿಡಿಯುತ್ತಿರುವುದನ್ನು ಕಡೇ ಪಕ್ಷ ಸತತ ಅನ್ಯಾಯಕ್ಕೆ ಒಳಗಾಗಿರುವ ಈಶಾನ್ಯ, ಕಿತ್ತೂರು ಕರ್ನಾಟಕದ ಜನರಾದರೂ ಗಮನಿಸಿದರೆ….?). ಇನ್ನು ವಿಧಾನ ಮಂಡಲದ ಉಭಯ ಸದನಗಳಲ್ಲಿ ನಡೆದ ಚರ್ಚೆಗೆ ಸಿಎಂ ನೀಡಿರುವ ಉತ್ತರ ಗಮನಿಸಿದರೆ ಪ್ರಾದೇಶಿಕ ಅಸಮತೋಲನಕ್ಕೆ ಶಾಶ್ವತ ಪರಿಹಾರದ ಬದಲಿಗೆ ಮುಂದಿನ ಐದಾರು ತಿಂಗಳಲ್ಲಿ ಎದುರಾಗಲಿರುವ ಲೋಕಸಭೆ ಚುನಾವಣೆ ಮೇಲೆ ದೃಷ್ಟಿ ನೆಟ್ಟಿರುವ ಹೇಳಿಕೆಯಂತೆ ಭಾಸವಾಗುತ್ತದೆ.

ಇದನ್ನೂ ಓದಿ: ಮೊಗಸಾಲೆ ಅಂಕಣ: ಒಣಗಿದ ಜಿಲ್ಲೆಯಲ್ಲಿ ಜೋಗದ ಬದಲು ಕಚ್ಚಾಟದ ರೋಗ

ಹೋರಾಟವೆಂಬ ಅಂಕುಶವನ್ನು ಬಳಸಿ ತಿವಿದಾಗಲೇ ಆಡಳಿತ ಯಂತ್ರ ಕ್ರಿಯಾಶೀಲವಾಗುತ್ತದೆಂಬ ಬಿ.ಆರ್. ಪಾಟೀಲರ ಹೇಳಿಕೆ ಅಕ್ಷರಶಃ ಸತ್ಯ. ಅವರು ಹೇಳಲು ಮರೆತ ಇನ್ನೊಂದು ಅಂಶವೆಂದರೆ ಪ್ರಾದೇಶಿಕ ಹಿಂದುಳಿದಿರುವಿಕೆಗೆ ಕುಮ್ಮಕ್ಕು ನೀಡುತ್ತಿರುವ ಪಕ್ಷ ರಾಜಕಾರಣ. ಉತ್ತರ ಕರ್ನಾಟಕ ಭಾಗದ ಆಡಳಿತ ಪಕ್ಷದ ಶಾಸಕರು ಬಾಯಿ ಬಿಟ್ಟು ಸರ್ಕಾರವನ್ನು ಟೀಕಿಸುವುದು ಇಲ್ಲವೇ ಇಲ್ಲ ಎಂಬಷ್ಟು ಅಪರೂಪ. ಅದು ವಿರೋಧ ಪಕ್ಷದ ಕೆಲಸ ಎಂಬಷ್ಟರ ಮಟ್ಟಿಗೆ ಅವರು ಅನುಕೂಲಸಿಂಧು ರಾಜಕೀಯ ಮಾಡುತ್ತಾರೆ. ಅಲ್ಲೊಬ್ಬ ಇಲ್ಲೊಬ್ಬ ಪಾಟೀಲರು ಇರಬಹುದು. ಅಂಥವರ ಗಟ್ಟಿ ಧ್ವನಿಯನ್ನು ಹತ್ತಿಕ್ಕುವುದು ಹೇಗೆ ಎಂಬ ತಂತ್ರ ಆಡಳಿತಕ್ಕೆ ಗೊತ್ತಿರುತ್ತದೆ.

ಈಶಾನ್ಯ ಕರ್ನಾಟಕ ಹೈದರಾಬಾದ್ ಕರ್ನಾಟಕವಾಗಿದ್ದ ಸಂದರ್ಭದ ನಾಯಕರಲ್ಲಿ ಒಬ್ಬರಾಗಿದ್ದ ವೈಜನಾಥ ಪಾಟೀಲರು ಅನ್ಯಾಯದ ವಿರುದ್ಧ ಪ್ರತ್ಯೇಕ ರಾಜ್ಯದ ಬೇಡಿಕೆಯನ್ನು ಮಂಡಿಸಿ ಸರ್ಕಾರದ ಕಣ್ಣು ಕೆಂಪಾಗುವಂತೆ ಮಾಡಿದ್ದರು. ಈಗ ಯಾರೂ ಆ ರೀತಿಯ ಹೋರಾಟದಲ್ಲಿಲ್ಲ. ಒಂದಿಷ್ಟು ರಾಜಿ ವಸೂಲಿಬಾಜಿಯೂ ಕೆಲಸ ಮಾಡಿ ಹಕ್ಕೊತ್ತಾಯಗಳನ್ನು ಹತ್ತಿಕ್ಕುತ್ತದೆ. ಉತ್ತರ ಕರ್ನಾಟಕದ ಶಾಸಕರು ಪಕ್ಷ ರಾಜಕಾರಣ ಮರೆತು ಸರ್ಕಾರದ ಮೇಲೆ ಒತ್ತಡ ಹೇರದಿದ್ದರೆ ಯಥಾಸ್ಥಿತಿ ಇನ್ನಷ್ಟು ವರ್ಷ ಕಾಲ ಹೀಗೆಯೇ ಮುಂದುವರಿಯುವುದು ಖಚಿತ. ಗೋಳು ಸಂಕಟ ದುಃಖ ದುಮ್ಮಾನ ಮುಂದುವರಿಯುವುದು ನೂರಕ್ಕೆ ನೂರು ಪರ್ಸೆಂಟ್ ನಿಜ. ಈ ವಿಚಾರದಲ್ಲಿ ಎಳ್ಳು ಕಾಳಿನಷ್ಟೂ ಅನುಮಾನ ಬೇಡವೇ ಬೇಡ.

ಇದನ್ನೂ ಓದಿ: ಮೊಗಸಾಲೆ ಅಂಕಣ: ಲೋಕಸಭೆ ಚುನಾವಣೆಗೆ ತಯಾರಿ ಮತ್ತು ರಾಜ್ಯ ಬಿಜೆಪಿಯ ತಳಮಳ

Exit mobile version