Site icon Vistara News

ಮೊಗಸಾಲೆ ಅಂಕಣ: ವಿರೋಧಿಗಳು ಒಟ್ಟು ಸೇರುವುದೇ ಈಗ ಬಲು ತುಟ್ಟಿ ಪ್ರಶ್ನೆ

INDIA bloc

ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆ… ಎನ್ನುವ ಕುವೆಂಪು ರಚಿತ ಕವನದ ಸಾಲು ಇಲ್ಲಿ ಈಗ ನೆನಪಾಗಲು ಕಾರಣ ಮುಂಬೈಯಲ್ಲಿ ನಡೆದಿರುವ ಡಾಟೆಡ್ ಇಂಡಿಯಾ (I.N.D.I.A) ಒಕ್ಕೂಟದ ಮಿತ್ರ ಪಕ್ಷಗಳ ಸಭೆ (INDIA bloc meeting). ಸಭೆ ಎಂದು ಅದನ್ನು ಕರೆಯುವ ಬದಲಿಗೆ ಸಮಾವೇಶ ಎಂದು ಬಣ್ಣಿಸುವುದೇ ಹೆಚ್ಚು ಸೂಕ್ತವೆನಿಸುತ್ತದೆ. ಹೀಗೆ ಹೇಳಲು ಕಾರಣ ತುಸು ಹೆಚ್ಚೂ ಕಡಿಮೆ 200 ನಾಯಕರು ಭಾಗವಹಿಸಿರುವುದು. ಬೆಂಗಳೂರಿನಲ್ಲಿ ಒಕ್ಕೂಟದ ಸಭೆ ನಮ್ಮ ಸಿಎಂ ಸಿದ್ದರಾಮಯ್ಯ (CM Siddaramaiah) ಅಧ್ವೈರ್ಯದಲ್ಲಿ ನಡೆದಿತ್ತು. ಇದೀಗ ಮುಂಬೈ ಮಹಾ ನಗರಿಯಲ್ಲಿ ಯಾವುದೇ ಅಧಿಕಾರವಿಲ್ಲದ ಶಿವಸೇನೆಯ ಒಂದು ಕವಲಿನ ನಾಯಕ ಉದ್ಧವ್ ಠಾಕರೆ (Uddhav Thackeray) ಹಾಗೂ ಅಧಿಕಾರ ವಂಚಿತ ಎನ್‍ಸಿಪಿ ನಾಯಕ ಶರದ್ ಪವಾರ್ (Sharad Pawar) ಜಂಟಿ ಸಾರಥ್ಯದಲ್ಲಿ ನಡೆದಿದೆ.

ದೇಶದಲ್ಲಿ ಜನತಂತ್ರ ಸಮತೋಲನ ಕಳೆದುಕೊಳ್ಳದೆ; ಒಗ್ಗಾಲಿ ಬಂಡಿಯಾಗದೆ ಸಾಗಬೇಕೆಂದು ಬಯಸುವವರೆಲ್ಲರೂ ಪ್ರಬಲ ವಿರೋಧಿ ಒಕ್ಕೂಟದ ಪಕ್ಷಪಾತಿಗಳೇ ಹೌದು. ಇದು ಇಂದಿರಾ ಗಾಂಧಿಯವರ ಆಡಳಿತಾವಧಿಯ ಸತ್ಯವೂ ಹೌದು, ನರೇಂದ್ರ ಮೋದಿ (PM Narendra Modi) ಕಾಲದ ಸತ್ಯವೂ ಹೌದು. ಹಾಗಂತ ಪ್ರಬಲ ವಿರೋಧಿ ಒಕ್ಕೂಟದ ಪರವಾಗಿರುವವರೆಲ್ಲ ಯಾವುದೋ ಒಂದು ನಿರ್ದಿಷ್ಟ ರಾಜಕೀಯ ಸಿದ್ಧಾಂತಕ್ಕೆ ಜೋತು ಬಿದ್ದವರೇನೂ ಅಲ್ಲ. ಹಾಗೆ ನೋಡಿದರೆ ಈ ಒಕ್ಕೂಟದ 26 ಪಕ್ಷಗಳಲ್ಲೇ 126 ಬಗೆಯ ಗೊಂದಲ ಗೋಜಲು ಮನೆ ಮಾಡಿದೆ. ಸೈದ್ಧಾಂತಿಕ ವೈಪರೀತ್ಯಗಳಿವೆ. ದೊಡ್ಡ ಗುರಿ ಸಾಧನೆಗೆ ಮುನ್ನುಗ್ಗಿದಾಗ ಇಂಥ ಸಣ್ಣ ಪುಟ್ಟ ಗೊಂದಲ ಗೋಜಲು ಮುಖ್ಯವಾಗಬಾರದು.

ಲೋಕಸಭೆ ಚುನಾವಣೆ (Lok Sabha election 2024) 2024ರ ಮಾರ್ಚ್ ಏಪ್ರಿಲ್ ಮಾಹೆಯಲ್ಲಿ (ಅದಕ್ಕೂ ಮುಂಚೆ ಚುನಾವಣೆಗೆ ಹೋಗಲು ಕೇಂದ್ರ ಸರ್ಕಾರ ತೀರ್ಮಾನಿಸದೇ ಇದ್ದಲ್ಲಿ) ಘೋಷಣೆ ಆಗಲಿದೆ. ಆ ಚುನಾವಣೆಯಲ್ಲಿ ಬಿಜೆಪಿ/ ಎನ್‍ಡಿಎ ಓಟವನ್ನು ನಿಯಂತ್ರಿಸುವ; ಮೂರನೇ ಅವಧಿಗೆ ನರೇಂದ್ರ ಮೋದಿ ಪ್ರಧಾನಿಯಾಗುವುದನ್ನು ಶತಾಯಗತಾಯ ತಡೆಯುವ ಮುಖ್ಯ ಆಶಯ ಡಾಟೆಡ್ ಇಂಡಿಯಾ ಒಕ್ಕೂಟದ್ದು. ಇನ್ನೊಬ್ಬರನ್ನು ಕೂರಿಸಲೆಂದೇ ಇರುವವರ ಎತ್ತಂಗಡಿ ಕ್ರಮ ಇದಲ್ಲ ಎಂದು ಸಾಬೀತಾದಲ್ಲಿ ಜನತಂತ್ರವಾದಿಗಳು ಒಕ್ಕೂಟದ ಆಶಯ ಈಡೇರಲಿ ಎಂದು ಹಾರೈಸುತ್ತ ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆ… ಎಂದು ಹಾರೈಸಿಯಾರು.

ಈ ಒಕ್ಕೂಟ ರಚನೆಗೆ ಮುಖ್ಯ ಆಧಾರ ಸ್ತಂಭವಾಗಿದ್ದು ಕಳೆದ ಮೇ ತಿಂಗಳಲ್ಲಿ ಕರ್ನಾಟಕ ವಿಧಾನ ಸಭೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಗಳಿಸಿದ ಭರ್ಜರಿ ಜಯ. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ಆಡಳಿತಾರೂಢ ಬಿಜೆಪಿಗೆ ಮುಖಭಂಗವಾದ ಪರಾಭವ. ತನಗೊಲಿದ ಜಯಕ್ಕಿಂತ ಬಿಜೆಪಿಗೆ ಆದ ಸೋಲು ಕಾಂಗ್ರೆಸ್‍ನಲ್ಲಿ ಹೊಸ ಹುಮ್ಮಸ್ಸು ಹುರುಪು ಚಿಗುರಲು ಕಾರಣ. ಈ ಹುರುಪು ಹುಮ್ಮಸ್ಸಿನ ಮುಂದುವರಿದ ಅಧ್ಯಾಯ ಡಾಟೆಡ್ ಇಂಡಿಯಾ ಒಕ್ಕೂಟ ಸ್ಥಾಪನೆ. ಈ ಹಿಂದೆ ಕಾಂಗ್ರೆಸ್ ನೇತೃತ್ವದಲ್ಲಿದ್ದ ಯುಪಿಎ ಒಕ್ಕೂಟ ವಿಸರ್ಜನೆಗೊಂಡು ಜೀವತಳೆದ ಒಕ್ಕೂಟ ಡಾಟೆಡ್ ಇಂಡಿಯಾ. ಬಿಜೆಪಿ/ಎನ್‍ಡಿಎ “ವಿರೋಧಿ” 26 ಪಕ್ಷಗಳ ಒಕ್ಕೂಟದ ಸದಸ್ಯ ಬಲ ಮುಂಬೈ ಸಮಾವೇಶದ ಹೊತ್ತಿಗೆ 28ಕ್ಕೆ ಏರಿದೆ ಎಂದು ಶರದ್ ಪವಾರ್ ಹೇಳಿದ್ದಾರೆ.

India Bloc

ಕರ್ನಾಟಕದಲ್ಲಿ ಆಡಳಿತ ಪಕ್ಷವೊಂದು ವಿರೋಧ ಪಕ್ಷಕ್ಕೆ ಜಾಗ ಮಾಡಿಕೊಟ್ಟಿರುವುದು ಹೊಸದೇನೂ ಅಲ್ಲ. 1989ರಲ್ಲಿ ಕಾಂಗ್ರೆಸ್ 178 ಸ್ಥಾನ ಗಳಿಸಿ ಜಯಭೇರಿ ಬಾರಿಸಿತ್ತು. ಐದು ವರ್ಷದ ಬಳಿಕ ನಡೆದ ಚುನಾವಣೆಯಲ್ಲಿ ಅದು ಕೇವಲ 34 ಸ್ಥಾನದೊಂದಿಗೆ ಮೂರನೇ ಸ್ಥಾನಕ್ಕೆ ಹೋಗಿತ್ತು. 1984ರ ಚುನಾವಣೆ ಸಮಯದಲ್ಲಿ ಅಧಿಕಾರದಲ್ಲಿದ್ದ ಜನತಾ ಪರಿವಾರ ಗಳಿಸಿದ್ದು 24 ಸೀಟು ಮಾತ್ರ. ಹಾಗೆ ನೋಡಿದರೆ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯದು ಹೀನಾಯ ಎನ್ನುವಂಥ ಸೋಲೇನೂ ಅಲ್ಲ. ಐದು ವರ್ಷದ ಹಿಂದಿನ ಚುನಾವಣೆಯಲ್ಲಿ ಅದು ಗೆದ್ದಿದ್ದು 104 ಸ್ಥಾನ ಮಾತ್ರ. ನಂತರದ್ದು ಆಪರೇಷನ್ ಕಮಲದ ಪಾತ್ರ. 17 ಜನ ಕಾಂಗ್ರೆಸ್, ಜೆಡಿಎಸ್ ಶಾಸಕರು ತಮ್ಮತಮ್ಮ ಪಕ್ಷದ ಹುದ್ದೆಗೆ ರಾಜೀನಾಮೆ ನೀಡಿದ ತರುವಾಯ ಬಿಜೆಪಿಗೆ ಬೇಕಾದ ಬಹುಮತ ಸಿಕ್ಕಿ ಆಡಳಿತದ ಚುಕ್ಕಾಣಿ ಅದರ ಕೈವಶವಾಯಿತು. ಈ ಸಲದ ಚುನಾವಣೆಯಲ್ಲಿ ಜನ ತಿರುಗಿ ಬಿದ್ದರು, ಆಡಳಿತ ಪಕ್ಷದ ಬಲ 66ಕ್ಕೆ ಕುಸಿಯಿತು.

ಒಂದು ಚುನಾವಣೆಯ ಸೋಲಿನೊಂದಿಗೆ ರಾಜಕೀಯ ಪಕ್ಷದ ಅಧ್ಯಾಯ ಮುಕ್ತಾಯವಾಗುವುದಿಲ್ಲ. ಕರ್ನಾಟಕದಲ್ಲಿ ಬಿಜೆಪಿ ಸೋಲು ಒಂದು ಸೋಲು ಮಾತ್ರವೇ ಆಗಿರದೆ ಸಾವು ಎನಿಸುವಂಥ ಸ್ಥಿತಿಯಲ್ಲಿರುವುದನ್ನು ನೋಡಿದರೆ ಅಯ್ಯೋ ಎನಿಸುತ್ತದೆ. ಅದಕ್ಕೆ ಮುಖ್ಯ ಕಾರಣ ಮುಖಕ್ಕೆ ಮಡಕೆ ಕವುಚಿಕೊಂಡು ಅಡ್ಡಾಡುತ್ತಿರುವ ಅದರ ಸ್ಥಳೀಯ ನಾಯಕತ್ವ. ಆ ಪಕ್ಷದ ಅ-ನಾಯಕತ್ವ ಇನ್ನು ಮುಂದೆ ತಮಗೆ ರಾಜಕೀಯ ಭವಿಷ್ಯವಿಲ್ಲ ಎಂಬ ಭಾವನೆಯಲ್ಲಿ ಮೂಲೆ ಹಿಡಿದು ಕೂತಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತಿದೆ. ಕರ್ನಾಟಕದಲ್ಲಿ ಬಿಜೆಪಿಯ ಭವಿಷ್ಯ ಏನು ಎನ್ನುವ ಪ್ರಶ್ನೆಗೆ ಪಕ್ಕಾ ಉತ್ತರ ಸಿಗುವುದು 2024ರಲ್ಲಿ ನಡೆಯಬೇಕಿರುವ ಲೋಕಸಭಾ ಚುನಾವಣೆಯಲ್ಲಿ. ಅಲ್ಲೀವರೆಗೆ ರಾಜ್ಯ ಬಿಜೆಪಿ ಮುದುಡಿದ ತಾವರೆಯೇ! ಏಕೆಂದರೆ ಆ ಪಕ್ಷವನ್ನು ಸಮರ ಸನ್ನದ್ಧ ಸ್ಥಿತಿಯಲ್ಲಿ ಮುಂದುವರಿಸಬಲ್ಲ ಸಾಮಥ್ರ್ಯದ ಸ್ಥಳೀಯ ನಾಯಕರು ಇಲ್ಲವೆಂದು ಕೇಂದ್ರ ನಾಯಕತ್ವ ಭಾವಿಸಿದೆ. ಹಾಗಲ್ಲ ಎಂದಾದರೆ ತಿಂಗಳುಗಳ ಬಳಿಕವೂ ವಿಧಾನ ಸಭೆ, ವಿಧಾನ ಪರಿಷತ್‍ನಲ್ಲಿ ವಿರೋಧ ಪಕ್ಷದ ನಾಯಕ ಸ್ಥಾನ ತೆರವಾದ ಸ್ಥಿತಿಯಲ್ಲೇ ಇರಬೇಕಿರಲಿಲ್ಲ. ನಳೀನ್ ಕುಮಾರ್ ಕಟೀಲರ ಅಧ್ಯಕ್ಷಾವಧಿ ವಿಧಾನ ಸಭೆ ಚುನಾವಣೆ ಇನ್ನೂ ಮೂರು ತಿಂಗಳು ಇರುವಾಗಲೇ ಮುಗಿದು ಹೋಗಿದ್ದರೂ ಆ ಸ್ಥಾನಕ್ಕೂ ಅರ್ಹರು ಸಿಕ್ಕಿಲ್ಲ, ಪಕ್ಷದ ಗಪ್‍ಚುಪ್ ಕಾರ್ಯಾಚರಣೆ ನೀತಿಯಂತೆ ಒಳಗಾದರೂ ಹುಡುಕಾಟ ಸಾಗಿದೆಯೇ ಇಲ್ಲವೇ ಗೊತ್ತಿಲ್ಲ.

ಲೋಕಸಭಾ ಚುನಾವಣೆಯಲ್ಲಿ ಈ ಹಿಂದಿನ ಚುನಾವಣೆಗಳಲ್ಲಿ ಆದ ಸೋಲಿನ ಸೇಡನ್ನು ತೀರಿಸಿಕೊಳ್ಳುವ ಛಲ ರಾಜ್ಯ ಕಾಂಗ್ರೆಸ್‍ನಲ್ಲಿ ಒಡೆದು ಕಾಣಿಸುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಕುತ್ತಿರುವ ದಾಪುಗಾಲನ್ನು ನೋಡಿದರೆ ಬಿಜೆಪಿ, ಜೆಡಿಎಸ್‍ನ ನೆಲೆ ಅದುರಿಸುವ ಲಕ್ಷಣ ಕಾಣಿಸುತ್ತಿದೆ. ವಿವಿಧ ಸಮೀಕ್ಷೆ ವರದಿಗಳು ಕೇಂದ್ರದಲ್ಲಿ ಮತ್ತೆ ಎನ್‍ಡಿಎ ಆಡಳಿತಕ್ಕೆ, ಮೋದಿಯೇ ಮೂರನೇ ಬಾರಿಗೆ ಪ್ರಧಾನಿ ಎನ್ನುತ್ತಿರುವುದು ಹೌದಾದರೂ ಕಾಂಗ್ರೆಸ್ ಮತ್ತು ಅದರೊಂದಿಗೆ ಕೈಜೋಡಿಸಿರುವ ವಿವಿಧ ಪಕ್ಷಗಳ ನಿಲುವೇ ಬೇರೆಯದಾಗಿದೆ. ಕರ್ನಾಟಕ, ಹಿಮಾಚಲ ಪ್ರದೇಶ ವಿಧಾನ ಸಭಾ ಚುನಾವಣೆಯಲ್ಲಿ (Vidhanasabha Election) ಹೊರಬಿದ್ದ ಫಲಿತಾಂಶವೇ ರಾಜಸ್ತಾನ, ಮಧ್ಯ ಪ್ರದೇಶ, ತೆಲಂಗಾಣಾ, ಚತ್ತೀಸ್‍ಘಡ, ಮಿಜೋರಾಂ ವಿಧಾನ ಸಭಾ ಚುನಾವಣೆಯಲ್ಲೂ ಮರುಕಳಿಸಲಿದೆ ಎನ್ನುವುದು ಡಾಟೆಡ್ ಇಂಡಿಯಾ ಒಕ್ಕೂಟದ ನಿಶ್ಚಿತ ತೀರ್ಮಾನ.

India Bloc

ಇದನ್ನೂ ಓದಿ: ಮೊಗಸಾಲೆ ಅಂಕಣ: ರಾಜ್ಯ ಬಿಜೆಪಿ ನಾಯಕರ ಮೇಲೇಕೆ ಮೋದಿ ಕೆಂಡ ಕೋಪ?

40 ಸದಸ್ಯ ಸ್ಥಾನ ಬಲದ ಮಿಜೋರಾಂ ವಿಧಾನಸಭೆಗೆ ಇದೇ ವರ್ಷದ ಕೊನೆ ತಿಂಗಳಲ್ಲಿ, ಚತ್ತೀಸ್‍ಘಡ (90 ಸೀಟು); ಮಧ್ಯಪ್ರದೇಶ (230 ಸದಸ್ಯ ಬಲ); ರಾಜಸ್ತಾನ (200 ಸ್ಥಾನ ಬಲ); ತೆಲಂಗಾಣಾ (119 ಸ್ಥಾನ) ವಿಧಾನ ಸಭಾ ಚುನಾವಣೆ 2024ರ ಜನವರಿ ತಿಂಗಳಲ್ಲಿ ನಡೆಯಬೇಕಿದೆ. ಅಲ್ಲಿಂದ ನಾಲ್ಕೈದು ತಿಂಗಳಲ್ಲೇ ಲೋಕಸಭಾ ಚುನಾವಣೆ. ಈ ಚುನಾವಣೆಗಳು ಲೋಕಸಭಾ ಚುನಾವಣೆಗೆ ಮುನ್ನುಡಿಯಂತೆ. ಬಿಜೆಪಿಗೆ ಕೈಲಿರುವ ರಾಜ್ಯಗಳನ್ನು ಉಳಿಸಿಕೊಂಡು ಇನ್ನಷ್ಟು ಬಾಚಿಕೊಳ್ಳುವ ತರಾತುರಿ, ಕಾಂಗ್ರೆಸ್‍ಗೆ ಹೆಚ್ಚು ಗೆದ್ದು ಹಿಮಾಚಲ ಪ್ರದೇಶ, ಕರ್ನಾಟಕದ ಗೆಲುವು ಆಕಸ್ಮಿಕವಲ್ಲ ಎಂದು ತೋರುವ ಛಲ ಈಗಾಗಲೇ ಕೆಲಸ ಮಾಡಲಾರಂಭಿಸಿವೆ. ಕರ್ನಾಟಕವನ್ನು ಜೈಸಲು ಮುಖ್ಯ ಕಾರಣವಾದ ಐದು ಭರವಸೆಗಳನ್ನು ಈ ಐದು ರಾಜ್ಯ ಚುನಾವಣೆಗಳಲ್ಲೂ ಕಾಂಗ್ರೆಸ್ ಪಕ್ಷ ಜನರಿಗೆ ಕೊಡಲಿದೆ. ಚುನಾವಣಾ ಪೂರ್ವದಲ್ಲಿ ಈ ಬಗೆಯ ಆಮಿಶ ಸ್ವರೂಪದ ಭರವಸೆ ಕೊಡುವುದಕ್ಕೆ ವಿರೋಧವಾಗಿರುವ ಬಿಜೆಪಿ ಬಾಯಲ್ಲಿ ಬಿಸಿ ತುಪ್ಪ ಇಟ್ಟುಕೊಂಡ ರೀತಿಯಲ್ಲಿ ಚಡಪಡಿಸುತ್ತಿದೆ. ಈಗಾಗಲೇ ಗೃಹ ಬಳಕೆ ಅಡುಗೆ ಅನಿಲದ ಬೆಲೆಯನ್ನು ಇನ್ನೂರು ರೂಪಾಯಿಯಷ್ಟು ಇಳಿಸಿರುವ ಕೇಂದ್ರ ಸರ್ಕಾರದ ತೀರ್ಮಾನದ ಹಿಂದೆ ಕಾಂಗ್ರೆಸ್‍ನ ಐದು ಗ್ಯಾರಂಟಿ ಸೃಷ್ಟಿಸಿರುವ ಭಯ ಆತಂಕ ಖಂಡಿತ ಕೆಲಸ ಮಾಡಿದೆ ಎನ್ನಲು ಪ್ರತ್ಯೇಕ ಪುರಾವೆಯ ಅಗತ್ಯವಿಲ್ಲ.

ಕರ್ನಾಟಕದ ಸೋಲು ಮೋದಿ ಸೇರಿದಂತೆ ಬಿಜೆಪಿ ಹೈಕಮಾಂಡಿನ ಎಲ್ಲ ನಾಯಕರ ಜಂಘಾಬಲವನ್ನು ಉಡುಗಿಸಿದೆ. ಹುಸಿ ಆತ್ಮವಿಶ್ವಾಸ ಚುನಾವಣಾ ರಾಜಕೀಯದಲ್ಲಿ ಎಲ್ಲ ಕಾಲಕ್ಕೂ ಕೆಲಸಕ್ಕೆ ಬರುವುದಿಲ್ಲವೆಂಬ ಸತ್ಯವನ್ನು ಮನಗಾಣಿಸಿರುವ ಸಾಧ್ಯತೆ ಇದೆ. ಶತ್ರು (ಕರ್ಣ) ಬಲಹೀನನಾಗಿರುವಾಗ ಶಸ್ತ್ರ ಪ್ರಯೋಗಿಸು ಎಂದು ಮಹಾಭಾರತ ಕಾಲದ ಕುರುಕ್ಷೇತ್ರ ಯುದ್ಧದಲ್ಲಿ ಅರ್ಜುನನಿಗೆ ಶ್ರೀಕೃಷ್ಣ ಹೇಳಿದಂಥ ಸನ್ನಿವೇಶ ವರ್ತಮಾನ ಭಾರತದಲ್ಲಿ ಮರು ಸೃಷ್ಟಿಯಾಗಿರುವ ಲಕ್ಷಣ ಅಸ್ಪಷ್ಟವಾಗಿಯಾದರೂ ಕಾಣಿಸುತ್ತಿದೆ. ಇದಕ್ಕೆ ಅಣಿಯಾಗುವ ಉದ್ದೇಶದೊಂದಿಗೆ ಮುಂಬೈಯಲ್ಲಿ ಸೇರಿರುವ ಬಿಜೆಪಿ ವಿರೋಧಿಗಳು ತಮ್ಮ ನಡುವಿನ ಗೊಂದಲ ಗೋಜಲು ನಿವಾರಿಸಿಕೊಂಡು “ಜಗ್ಗದೆಯೆ ಕುಗ್ಗದೆಯೆ ಹಿಗ್ಗಿ ನಡೆಮುಂದೆ” ಎಂಬ ಪದ್ಯದ ಸಾಲನ್ನು ನಿಜಗೊಳಿಸಿಯಾರೆ…? ಎತ್ತು ಏರಿಗೆ ಕೋಣ ನೀರಿಗೆ ಎಂಬಂತಿರುವ ಹಾಲಿ ಸನ್ನಿವೇಶದಲ್ಲಿ ಮಿಲಿಯನ್ ಡಾಲರ್ ಕ್ವಶ್ಚನ್ ಎನ್ನುತ್ತಾರಲ್ಲ ಹಾಗೆ ಬಹು ತುಟ್ಟಿ ಪ್ರಶ್ನೆ ಇದು.

ಇದನ್ನೂ ಓದಿ: ಮೊಗಸಾಲೆ ಅಂಕಣ: ಈ ʼತ್ಯಾಗರಾಜʼರು ಈಗ ಯಾರಿಗೆ ಬೇಕು? ಯಾರಿಗೆ ಬೇಡ?

Exit mobile version