Site icon Vistara News

ಮೊಗಸಾಲೆ ಅಂಕಣ: ಸುಪ್ರೀಂ ತೀರ್ಪು ನಮ್ಮ ಮನದಂಗಳಕೆ

Supreme Court

Supreme Court Strikes Down Electoral Bonds Scheme: What Are The Reasons? What is the Scheme?

mogasale logo

ದೇಶದ ಸುಪ್ರೀಂ ಕೋರ್ಟ್‍ನ ಮುಖ್ಯಸ್ಥ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡರು ಸರ್ವೋಚ್ಚ ನ್ಯಾಯಾಲಯದ ತೀರ್ಪುಗಳು ದೇಶದ ಪ್ರಾದೇಶಿಕ ಭಾಷೆಗಳಿಗೆ ಅನುವಾದಗೊಂಡು ಜನರನ್ನು ತಲುಪುವಂತಾಗಬೇಕೆಂದು ಸಲಹೆ ಮಾಡಿದ ಕೆಲವೇ ದಿವಸದಲ್ಲಿ ಕಾರ್ಯಾಂಗದ ಮುಖ್ಯಸ್ಥ ಪ್ರಧಾನಿ ನರೇಂದ್ರ ಮೋದಿಯವರು ಅದನ್ನು ಸ್ವಾಗತಿಸಿದ ಸುದ್ದಿ ಬಂದಿದೆ. ಮಾತ್ರವಲ್ಲ ಮುಖ್ಯ ನ್ಯಾಯಮೂರ್ತಿ ಆಶಯ ತಡವೇ ಆಗದ ರೀತಿಯಲ್ಲಿ ಅನುಷ್ಠಾನಕ್ಕೆ ಬಂದಿರುವುದು 74ನೇ ಗಣರಾಜ್ಯೋತ್ಸವ ದಿವಸದ ವಿಶೇಷ ಉಡುಗೊರೆ ಎನ್ನಬೇಕು. ಈ ಅನುಕೂಲ ಕನ್ನಡವೂ ಸೇರಿದಂತೆ ದೇಶದ ಹತ್ತು ಪ್ರಾದೇಶಿಕ ಭಾಷೆಗಳಲ್ಲಿ ಪ್ರಸ್ತುತ ಲಭ್ಯವಿದ್ದು ಜನರನ್ನು ಮುಟ್ಟುವ ನಿಟ್ಟಿನಲ್ಲಿ ಇದನ್ನೊಂದು “ಗುಣಾತ್ಮಕ ಬೆಳವಣಿಗೆ” ಎನ್ನಬಹುದಾಗಿದೆ. ಇತರ ಎಲ್ಲ ಭಾಷೆಗೂ ಅನುವಾದ ಭಾಗ್ಯ ಹಂತಹಂತವಾಗಿ ದೊರೆಯಲಿದೆ.

ಉತ್ತರ ಭಾರತದ ರಾಜಕಾರಣವಾಗಲೀ ರಾಜಕಾರಣಿಗಳಾಗಲೀ ಗುಣಸ್ವಭಾವ ಒಂದೇ ವರ್ಗಕ್ಕೆ ಸೇರಿದ್ದು. ಹಿಂದಿ ಭಾಷಾ ಪ್ರೇಮ, ಇತರ ಭಾಷಾ ವೈಷಮ್ಯ ಅಲ್ಲಿ ಅನೂಚಾನ ಎನ್ನಬಹುದಾದ ಚಾಳಿ. ನಮ್ಮ ಭಾಷೆ ಎನ್ನುವ ಮಮಕಾರ ಇರಬೇಕು, ಆದರೆ ಇತರ ಭಾಷೆಗಳನ್ನು ಎರಡನೆ ದರ್ಜೆಯವೆಂದು ಹೀಯಾಳಿಸಿ ತುಳಿಯುವ ಪ್ರವೃತ್ತಿ ಸಲ್ಲದು. ಉತ್ತರ ಭಾರತದ ಮತ್ತು ಉತ್ತರ ಭಾರತೀಯರ ಸಮಸ್ಯೆ ಎಂದರೆ ಶ್ರೇಷ್ಠತೆಯ ವ್ಯಸನ. ಹಿಂದಿ ಬೆಲ್ಟ್ ಎಂದೇ ಕರೆಯಲಾಗುತ್ತಿರುವ ಉತ್ತರ ಭಾರತದ ಸಿಂಹಪಾಲು ಪ್ರದೇಶದಲ್ಲಿ ಅನ್ಯ ಭಾಷೆಗಳ ವಿಚಾರದಲ್ಲಿ ತಾತ್ಸಾರ, ಅಸಹನೆ ಉಕ್ಕಿ ಹರಿಯುತ್ತಿರುವುದು ಒಕ್ಕೂಟ ವ್ಯವಸ್ಥೆಗೆ ತಕ್ಕುದಲ್ಲದ ವಿದ್ಯಮಾನ. ದೇಶದ ಎಲ್ಲ ಭಾಷೆಗಳೂ ರಾಷ್ಟ್ರಭಾಷೆಗಳೇ ಎಂದು ಜೀವಮಾನವಿಡೀ ಪ್ರತಿಪಾದಿಸಿದ ರಾಮಮನೋಹರ ಲೋಹಿಯಾ ನಿಲುವು ಸರ್ವಮಾನ್ಯವಾಗಬೇಕಾದ ದೇಶದಲ್ಲಿ ಭಾಷೆಯೇ ಒಡಕಲ ಧ್ವನಿಗೆ ಕಾರಣವಾಗಿರುವುದು ಹೀನಾಯಕರ ಬೆಳವಣಿಗೆ.

ಹಿಂದಿ ರಾಷ್ಟ್ರಭಾಷೆ ಎನ್ನುವುದು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಎಲ್ಲ ಸರ್ಕಾರಗಳೂ ಪ್ರತಿಪಾದಿಸಿಕೊಂಡು ಬಂದಿರುವ ನಿಲುವು. ಹಿಂದಿಯೇತರ ಪ್ರದೇಶಗಳಲ್ಲಿ ರಾಷ್ಟ್ರಭಾಷೆ ಎಂಬ ಹೆಸರಿನಲ್ಲಿ ಅದನ್ನು ಹೇರುವ ಕಾರ್ಯಕ್ರಮ, ಯೋಜನೆಗಳಿಗೆ ಕೇಂದ್ರ ಸರ್ಕಾರ ವರ್ಷವರ್ಷವೂ ಹೇರಳ ಹಣ ಸುರಿಯುತ್ತಿದೆ. ಬಜೆಟ್‍ನಲ್ಲಿ ಒಂದಿಷ್ಟು ಹಣ ಈ ಕೆಲಸಕ್ಕೇ ಮೀಸಲು. ತ್ರಿಭಾಷಾ ಸೂತ್ರ ಎಂಬ “ಸಿಹಿ ಲೇಪಿತ ವಿಷ” ಉಣ್ಣಿಸುವ ಕೇಂದ್ರ ನೀತಿ ವಿರುದ್ಧ ಮೊದಲಿಗೆ ತಿರುಗಿಬಿದ್ದ ರಾಜ್ಯ ಮದ್ರಾಸು (ಈಗಿನ ತಮಿಳುನಾಡು). ಹಿಂದಿಯನ್ನು ಬಯಸಿ ಕಲಿಯುವುದು ಬೇರೆ, ಹೇರುವುದು ಬೇರೆ. ಹೇರಿಕೆ ವಿರುದ್ಧ ಸಿಡಿದೆದ್ದ ತಮಿಳರು ತಮ್ಮ ಸಿಟ್ಟು ಆಕ್ರೋಶಕ್ಕೆ ಮೊದಲ ಬಲಿಯಾಗಿ ಪಡೆದುದು ಸ್ಥಳೀಯ ಕಾಂಗ್ರೆಸ್ ಸರ್ಕಾರವನ್ನು. 1967ರಲ್ಲಿ ತಮಿಳುನಾಡಿನಲ್ಲಿ ನೆಲೆ ಕಳೆದುಕೊಂಡು ಅಪ್ರಸ್ತುತವಾದ ಕಾಂಗ್ರೆಸ್ಸು ಐವತ್ತೈದು ವರ್ಷದ ಬಳಿಕವೂ ಅಲ್ಲಿ ಅಂತರಪಿಶಾಚಿ. ಸ್ಥಳೀಯರ, ಸ್ಥಳೀಯ ಸರ್ಕಾರದ ಆಶಯದಂತೆ ಆ ರಾಜ್ಯದ ಮಟ್ಟಿಗೆ ದ್ವಿಭಾಷಾ ಸೂತ್ರವನ್ನು ಕೇಂದ್ರ ಸರ್ಕಾರ ಜಾರಿಗೆ ತಂದರೂ ಅದು ಕಾಂಗ್ರೆಸ್ ಕೈಗೆ ಮತ್ತೆ ಅಧಿಕಾರ ತರಲು ವಿಫಲವಾಗಿರುವುದು ಕಣ್ಮುಂದಿರುವ ಸತ್ಯ.

ತ್ರಿಭಾಷಾ ಸೂತ್ರವೆಂಬ ಸಂಚಿನ ಯೋಜನೆ ಮೇರೆಗೆ ರಾಜ್ಯರಾಜ್ಯಗಳಲ್ಲಿ ಮುಖ್ಯವಾಗಿ ದಕ್ಷಿಣದ ರಾಜ್ಯಗಳಲ್ಲಿ ಹಿಂದಿಯನ್ನು ಹೇರುವ ವ್ಯವಸ್ಥಿತ ಯತ್ನ ಏಳೂವರೆ ದಶಕದಿಂದಲೂ ನಡೆದಿದೆ. ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಹುಟ್ಟಿಕೊಂಡಿದ್ದೇ ಈ ಕೆಲಸ ಮಾಡುವುದಕ್ಕೆ. ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳಲ್ಲದೆ, ಕೇಂದ್ರಾಡಳಿತ ಪ್ರದೇಶ ಪುದುಚೆರಿಯಲ್ಲೂ ಸಭಾ ಕಾರ್ಯಚಟುವಟಿಕೆ ಸಕ್ರಿಯವಾಗಿದೆ. ಹಿಂದಿ ಅಷ್ಟಾಗಿ ಪ್ರಚಲಿತದಲ್ಲಿಲ್ಲದ ಪಶ್ಚಿಮ ಬಂಗಾಳ, ಒಡಿಶಾ, ಮಧ್ಯಪ್ರದೇಶ, ಬಿಹಾರ, ಈಶಾನ್ಯ ರಾಜ್ಯಗಳಾದ ತ್ರಿಪುರಾ, ನಾಗಾಲ್ಯಾಂಡ್, ಮಣಿಪುರ, ಮೇಘಾಲಯ, ಅಸ್ಸಾಂಗಳಲ್ಲೂ ಹಿಂದಿಯೊಂದೇ ರಾಷ್ಟ್ರಭಾಷೆ ಎಂಬ ಪ್ರಚಾರ ಪ್ರತಿರೋಧದ ನಡುವೆಯೂ ಸಾಗಿದೆ. ಅಚ್ಚರಿಯ ಅಂಶವೆಂದರೆ ಕಾಂಗ್ರೆಸ್ಸು ಅಥವಾ ಬಿಜೆಪಿಯವರಲ್ಲದವರು ಪ್ರಧಾನಿಯಾಗಿದ್ದಾಗಲೂ ಸಭಾದ ಕರ್ಯಚಟುವಟಿಕೆಗೆ ಹಿನ್ನಡೆಯಾದ ನಿದರ್ಶನವಿಲ್ಲ; ಹಣದ ಕೊರತೆ ಆಗಲಿಲ್ಲ. ವಾಸ್ತವ ಹೀಗಿರುವಾಗ ಪ್ರಾದೇಶಿಕ ಭಾಷೆಗಳ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಆಡಿರುವ ಕೆಲವು ಮಾತುಗಳು ಚರ್ಚೆಗೆ ಯೋಗ್ಯವಾಗಿವೆ.

Court Verdict

ಹಿಂದಿ ಹೇರಿಕೆ ವಿಚಾರದಲ್ಲಿ ಕಾಂಗ್ರೆಸ್‍ಗಿಂತ ಬಿಜೆಪಿ ಒಂದು ಹೆಜ್ಜೆ ಮುಂದಿದೆ. ಜನಸಂಘ ಕಾಲದಿಂದಲೂ ಬಿಜೆಪಿಗೆ ಅಂಟಿಕೊಂಡಿರುವ ಆರೋಪಗಳಲ್ಲಿ ಒಂದು “ಉತ್ತರ ಭಾರತದ ಪಕ್ಷ” ಅದು ಎನ್ನುವುದು. ಉತ್ತರ ಭಾರತದ ಪಕ್ಷವೆಂದರೆ ಹಿಂದಿ ಬೆಲ್ಟ್‌ನ ಪಕ್ಷ ಎಂದೂ ಅರ್ಥ. ಹಿಂದಿ ಪ್ರದೇಶದ ಪಕ್ಷಕ್ಕೆ ಸಹಜವಾಗಿ ಹಿಂದಿ ಭಾಷೆಯೇ ಪರಮೋಚ್ಚ. ಹಾಗಾಗಿ ಕಾಂಗ್ರೆಸ್‍ಗೆ ಹೋಲಿಸಿದರೆ ಬಿಜೆಪಿಯದು ಒಂದು ಹೆಜ್ಜೆ ಮುಂದೆ. ಹೀಗಿರುವಾಗ ಪ್ರಾದೇಶಿಕ ಭಾಷೆಗಳ ವಿಚಾರದಲ್ಲಿ ಪ್ರಧಾನಿ ಮೋದಿ ʼಬ್ಯಾಟಿಂಗ್ʼ ಮಾಡಿರುವುದು ಒಂದಿಷ್ಟು ಸಮಾಧಾನ ತರುವ ಬೆಳವಣಿಗೆ.

ಕೆಲವು ದಿವಸದ ಹಿಂದೆ ಕಾರ್ಯಕ್ರಮವೊಂದರಲ್ಲಿ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡರು ಪಾಲ್ಗೊಂಡಿದ್ದರು. ತಮ್ಮ ಭಾಷಣದಲ್ಲಿ ಪ್ರಾಸಂಗಿಕವಾಗಿ ಅವರು ಮುಂದಿಟ್ಟ ಸಲಹೆ “ಸರ್ವೋಚ್ಚ ನ್ಯಾಯಾಲಯದ ತೀರ್ಪುಗಳು ಪ್ರಾದೇಶಿಕ ಭಾಷೆಗಳಿಗೂ ಅನುವಾದಗೊಳ್ಳಬೇಕು” ಎನ್ನುವುದು. ಪ್ರಾದೇಶಿಕ ಭಾಷೆಗಳಲ್ಲಿ ಮಹತ್ವದ ತೀರ್ಪುಗಳು ಲಭ್ಯವಾದಲ್ಲಿ ಅಧೀನ ಕೋರ್ಟ್‍ಗಳಲ್ಲಿ ನ್ಯಾಯ ದಾನ ಮಾಡುವ ಪ್ರಕ್ರಿಯೆಗೆ ಬಲಬರುತ್ತದೆ. ಸರ್ಕಾರದ ವಿವಿಧ ಕಾಯ್ದೆಗಳ ವಿಚಾರದಲ್ಲಿ ಸುಪ್ರೀಂ ವ್ಯಾಖ್ಯಾನ ಏನೆನ್ನುವುದು ಅಧೀನ ಕೋರ್ಟ್‍ಗಳಿಗೆ ಸುಲಭದಲ್ಲಿ ಮನವರಿಕೆಯಾದರೆ ಅದರಿಂದ ನ್ಯಾಯದಾನಕ್ಕೆ ಅನುಕೂಲ ಎನ್ನುವುದು ಚಂದ್ರಚೂಡರ ಆಶಯ. ಈ ಸಲಹೆ ಗಾಳಿಯಲ್ಲಿ ಹೀಗೆ ಬಂದು ಹಾಗೆ ಹೋಗಲಿಲ್ಲ ಎನ್ನುವುದಕ್ಕೆ ಉದಾಹರಣೆ ಮುಖ್ಯ ನ್ಯಾಯಮೂರ್ತಿ ಮುಂದಿಟ್ಟ ಸಲಹೆಗೆ ಪ್ರಧಾನಿ ಪ್ರತಿಕ್ರಿಯಿಸಿರುವ ರೀತಿ. ಇದೊಂದು ಒಳ್ಳೆ ಸಲಹೆ. ಸುಪ್ರೀಂ ಕೋರ್ಟ್‍ನ ತೀರ್ಪುಗಳು ಪ್ರಾದೇಶಿಕ ಭಾಷೆಗಳಿಗೆ ಅನುವಾದಗೊಂಡು ಲಭ್ಯವಾದರೆ ಅದರಿಂದ ಯುವ ಪೀಳಿಗೆಗೆ ಅನುಕೂಲವಾಗುತ್ತದೆ ಎನ್ನುವುದು ಮೋದಿ ವ್ಯಕ್ತಪಡಿಸಿರುವ ಮೆಚ್ಚುಗೆ. ಚಂದ್ರಚೂಡರು ಈ ಪ್ರಸ್ತಾಪವನ್ನು ಸಲಹೆ ರೂಪದಲ್ಲಿ ಮಂಡಿಸುವ ಹೊತ್ತಿಗೆಲ್ಲ ಅನುವಾದ ಕಾರ್ಯ ಮುಕ್ತಾಯದ ಹಂತಕ್ಕೆ ಬಂದಿತ್ತು ಎನ್ನಲು ಬೇರೆ ಸಾಕ್ಷ್ಯ ಬೇಕಿಲ್ಲ.

ಚಂದ್ರಚೂಡರ ಸಲಹೆ ನರೇಂದ್ರ ಮೋದಿಯವರ ಮೆಚ್ಚುಗೆ ಸ್ವಾಗತಾರ್ಹವೇ ಹೌದು. ಆದರೆ ಪ್ರಾದೇಶಿಕ ಭಾಷೆಗಳ ಅಳಿವು ಉಳಿವಿನ ಭವಿಷ್ಯ ಹೇಗಿದೆ ಎನ್ನುವುದನ್ನು ಯೋಚಿಸಬೇಕಿದೆ. ಹಾಗೆ ಯೋಚಿಸುವುದಕ್ಕೆ ಸಲಹೆ ಮತ್ತು ಪ್ರತಿಕ್ರಿಯೆ ಒಂದು ಮುಹೂರ್ತ ಕಲ್ಪಿಸಿದೆ. ಹಿಂದಿ ಹೇರಿಕೆ ಮತ್ತು ಇಂಗ್ಲಿಷ್‍ನ ಆಕ್ರಮಣಕಾರೀ ದಬ್ಬಾಳಿಕೆ ದೇಶದಲ್ಲಿ ಪ್ರಾದೇಶಿಕ ಭಾಷೆಗಳ ಬಲವನ್ನು ಕುಗ್ಗಿಸಿರುವ ಬೆಳವಣಿಗೆ. ಪ್ರಾಥಮಿಕ ಶಿಕ್ಷಣದಲ್ಲಿ ಆಯಾ ಪ್ರಾದೇಶಿಕ ಭಾಷೆಯನ್ನು ಕಡ್ಡಾಯಗೊಳಿಸಬೇಕು ಎನ್ನುವುದು ಬಹಳ ವರ್ಷದಿಂದಲೂ ಇರುವ ಒತ್ತಾಯ. ಕರ್ನಾಟಕವೂ ಸೇರಿದಂತೆ ಬಹುತೇಕ ಹಿಂದಿಯೇತರ ಭಾಷೆಯ ರಾಜ್ಯಗಳು ಪದೇ ಪದೇ ಕೇಂದ್ರ ಸರ್ಕಾರಕ್ಕೆ ಮಾಡಿಕೊಂಡ ಮನವಿಗಳು ಹೊಳೆಯಲ್ಲಿ ಹುಣಿಸೆ ಹಣ್ಣು ತೊಳೆದ ಅನುಭವ ತಂದಿತ್ತಿವೆ. ಪ್ರಾದೇಶಿಕ ಭಾಷೆಯನ್ನು ಪ್ರಾಥಮಿಕ ಶಿಕ್ಷಣದಲ್ಲಿ ಕಡ್ಡಾಯಗೊಳಿಸುವ ಕರ್ನಾಟಕವೂ ಸೇರಿದಂತೆ ಕೆಲವು ರಾಜ್ಯಗಳ ತೀರ್ಮಾನ ಸುಪ್ರೀಂ ಕೋರ್ಟ್‍ನ ತೀರ್ಪಿನ ಹಿನ್ನೆಲೆಯಲ್ಲಿ ನೆನೆಗುದಿಗೆ ಬಿದ್ದಿದೆ. ತಮ್ಮ ಮಗು ಯಾವ ಭಾಷೆಯಲ್ಲಿ ಕಲಿಯಬೇಕು ಅಥವಾ ಮಗುವಿಗೆ ಯಾವ ಭಾಷೆಯಲ್ಲಿ ಶಿಕ್ಷಣ ಕೊಡಿಸಬೇಕು ಎನ್ನುವುದು ಪೋಷಕರ ತೀರ್ಮಾನಕ್ಕೆ ಬಿಟ್ಟಿದ್ದು, ಸರ್ಕಾರ ಕಲಿಕಾ ಭಾಷೆಯ ವಿಚಾರದಲ್ಲಿ ಪೋಷಕರ ಮೇಲೆ ತನ್ನ ತೀರ್ಮಾನವನ್ನು ಹೇರುವುದು ಸಂವಿಧಾನದತ್ತವಾಗಿರುವ ವ್ಯಕ್ತಿಗತ ಹಕ್ಕನ್ನು ಉಲ್ಲಂಘಿಸಿದಂತಾಗುತ್ತದೆಂಬ ಸುಪ್ರೀಂ ಕೋರ್ಟ್ ತೀರ್ಪು ಪ್ರಾದೇಶಿಕ ಭಾಷೆಗಳ ಬೆಳವಣಿಗೆಗೆ ಅಡ್ಡ ಗೋಡೆಯಾಗಿದೆ ಎಂಬ ವ್ಯಾಖ್ಯಾನವಿದೆ.

ಇದನ್ನೂ ಓದಿ: ಮೊಗಸಾಲೆ ಅಂಕಣ | ಒಂಬತ್ತು ರಾಜ್ಯದಲ್ಲಿ ಚುನಾವಣೆ: ಸಿಕ್ಕೀತೆ ಮೋದಿ ಮಾತಿಗೆ ಮನ್ನಣೆ?

ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಕಲಿಕೆಯನ್ನು ಕಡ್ಡಾಯ ಮಾಡುವ ತೀರ್ಮಾನಕ್ಕೆ ಕರ್ನಾಟಕ ಸರ್ಕಾರ ಬಂದಿತ್ತು. 2008-13ರ ಅವಧಿಯಲ್ಲಿ ಕರ್ನಾಟಕದಲ್ಲಿದ್ದ ಬಿಜೆಪಿ ಸರ್ಕಾರದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾಗಿದ್ದ ಹಾಲಿ ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಈ ದಿಸೆಯಲ್ಲಿ ಅಪರೂಪದ್ದು ಎನ್ನಬಹುದಾದ ಪ್ರಯತ್ನ ನಡೆಸಿದ್ದರು. ರಾಜ್ಯದ ಇಂಗ್ಲಿಷ್ ಮಾಧ್ಯಮದಲ್ಲಿ “ಕಾನ್ವೆಂಟ್” ಹೆಸರಿನ ಶಾಲೆಗಳನ್ನು ನಡೆಸುತ್ತಿರುವ ಖಾಸಗಿ ಶಾಲಾ ಸಂಘಟನೆಗಳು ರಾಜ್ಯದ ತೀರ್ಮಾನದ ವಿರುದ್ಧ ಕೋರ್ಟ್ ಮೆಟ್ಟಿಲನ್ನೇರಿದವು. ಸುದೀರ್ಘ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‍ನ ತೀರ್ಪು ಕಾಗೇರಿಯವರ ಯತ್ನ ಕಾರ್ಯರೂಪಕ್ಕೆ ಬಾರದಂತೆ ಮಾಡಿತು ಎನ್ನುವುದು ವಿಷಾದದ ಬೆಳವಣಿಗೆ. ಇದರಲ್ಲಿ ಸುಪ್ರೀಂ ಕೋರ್ಟ್‍ನ ತಪ್ಪೇನೂ ಇಲ್ಲ. ಸಂವಿಧಾನವನ್ನು ಆಧರಿಸಿ ಅದು ತೀರ್ಪು ನೀಡುತ್ತದೆ. ತಪ್ಪು ಇರುವುದು ಕೇಂದ್ರ ಸರ್ಕಾರದಲ್ಲಿ. ಪ್ರಾಥಮಿಕ ಶಿಕ್ಷಣದಲ್ಲಿ ಪ್ರಾದೇಶಿಕ ಭಾಷಾ ಕಲಿಕೆ ಕಡ್ಡಾಯಗೊಳಿಸುವ ಸಂಬಂಧ ಸಂವಿಧಾನ ತಿದ್ದುಪಡಿಗೆ ಕೇಂದ್ರ ಮುಂದಾಗಬೇಕು ಎನ್ನುವುದು ಆಗ್ರಹ. ಅದು ತನಗೆ ಕೇಳಿಸಿಯೇ ಇಲ್ಲ ಎನ್ನುವಂತೆ ಉದ್ದಕ್ಕೂ ಅಧಿಕಾರಕ್ಕೆ ಬಂದ ಕೇಂದ್ರ ಸರ್ಕಾರಗಳು ನಡೆದುಕೊಂಡಿವೆ.

ಪ್ರಾದೇಶಿಕ ಭಾಷೆಗೆ ಪ್ರಾಥಮಿಕ ಶಿಕ್ಷಣದಲ್ಲಿ ಆದ್ಯತೆ ಸಿಗದೇ ಈಗಿನ ಇಂಗ್ಲಿಷ್ ಮಾಧ್ಯಮವೇ ಮುಂದುವರಿದಲ್ಲಿ ಪ್ರಾದೇಶಿಕ ಭಾಷೆಗಳಿಗೆ ಇಂದಲ್ಲ ನಾಳೆ ಕಂಟಕ ಎದುರಾಗಲಿದೆ ಎಂಬ ಸಂಕಟಕ್ಕೆ ಕರ್ನಾಟಕದಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಕೂಡಾ ಸಕಾರಾತ್ಮಕವಾಗಿ ಸ್ಪಂದಿಸಿದ್ದರು. 2016ರಲ್ಲಿ ರಾಯಚೂರಿನಲ್ಲಿ ನಡೆದ 82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿದ್ದ ಅವರು ಈ ಸಂಬಂಧ ಕೇಂದ್ರದ ಮೇಲೆ ಒತ್ತಡ ಹೇರುವುದಕ್ಕೆ ತಾವು ಸಿದ್ಧ ಎಂದಿದ್ದರು. ಸಮಾನಮನಸ್ಕ ಮುಖ್ಯಮಂತ್ರಿಗಳ ಸಭೆ ಕರೆದು ಅಲ್ಲಿ ನಿರ್ಣಯ ತೆಗೆದುಕೊಳ್ಳುವ ಭರವಸೆಯನ್ನೂ ನೀಡಿದ್ದರು. ಈ ಮಾತಾಡಿದ ಬಳಿಕವೂ ಎರಡು ವರ್ಷ ಸಿಎಂ ಸ್ಥಾನದಲ್ಲಿದ್ದ ಸಿದ್ದರಾಮಯ್ಯ ತಾವಿತ್ತ ಭರವಸೆಯನ್ನು ಮರೆತೇ ಹೋದರು. ಇದು ಕರ್ನಾಟಕದ ಪರಿಸ್ಥಿತಿ ಮಾತ್ರ ಎಂದು ಭಾವಿಸುವ ಅಗತ್ಯವಿಲ್ಲ. ಎಲ್ಲ ಪ್ರಾದೇಶಿಕ ಭಾಷೆಗಳೂ ಈ ಹೊತ್ತು ಇದೇ ಬಗೆಯ ಆಡಳಿತಸ್ಥರ ತಾತ್ಸಾರ ಕಾರಣವಾಗಿ ಸಂಕಟಮಯ ಸ್ಥಿತಿಯಲ್ಲಿವೆ.

ಇದನ್ನೂ ಓದಿ: ಮೊಗಸಾಲೆ ಅಂಕಣ | ಹದಗೆಡುತ್ತಿರುವ ಕೇಂದ್ರ-ರಾಜ್ಯ ಸಂಬಂಧ

ಸಂವಿಧಾನಕ್ಕೆ ತಿದ್ದುಪಡಿಯಾಗದೆ ಪ್ರಾದೇಶಿಕ ಭಾಷೆಗಳಿಗೆ ಭವಿಷ್ಯವಿಲ್ಲ ಎನ್ನುವುದನ್ನು ಕೇಂದ್ರಕ್ಕೆ ಮನವರಿಕೆ ಮಾಡಿಕೊಡುವುದಕ್ಕೆ ವ್ಯವಸ್ಥಿತವಾದ ಅಭಿಯಾನದ ಅಗತ್ಯವಿದೆ. ಈ ಸಲಹೆ ಮತ್ತು ಅದಕ್ಕೆ ಬಂದ ಪ್ರತಿಕ್ರಿಯೆ ಅಭಿಯಾನದ ದಿಸೆಯಲ್ಲಿ ಮತ್ತೊಂದು ಮುಹೂರ್ತವಾಗಿದೆ. ಬೇರೆ ಬೇರೆ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು, ಆದೇಶ ಏನೆನ್ನುವುದನ್ನು ಜನ ಸಾಮಾನ್ಯರೂ ಓದಿ ಅರ್ಥ ಮಾಡಿಕೊಳ್ಳಲು ಇದರಿಂದ ಅನುಕೂಲವಾಗಲಿದೆ. ಆದರೆ ತೀರ್ಪುಗಳ ಅನುವಾದಕ್ಕೆ ತಂತ್ರಜ್ಞಾನ ಬಳಸಿಕೊಳ್ಳುವ ಅಗತ್ಯವನ್ನು ಪ್ರಧಾನಿ ಪ್ರತಿಪಾದಿಸಿದ್ದಾರೆ. ತಂತ್ರಜ್ಞಾನವೆಂದರೇನು…? ಗೂಗಲ್ ಅನುವಾದವನ್ನು ಇಲ್ಲಿ ಉದಾಹರಣೆಯನ್ನಾಗಿ ತೆಗೆದುಕೊಳ್ಳೋಣ. ಯಾವ ಭಾಷೆಯಿಂದ ಯಾವ ಭಾಷೆಗಾದರೂ ಅನುವಾದಿಸುವ ಸವಲತ್ತು ʼಗೂಗಲ್ ಟ್ರಾನ್ಸ್‌ಲೇಷನ್ʼ ಆಪ್‍ನಲ್ಲಿದೆ. ಅದು ಮಕ್ಕಿಕಾ ಮಕ್ಕಿ ಅನುವಾದ. “ನಮ್ಮ ಕಣ್ಮುಂದೆ ಆ ಚಿತ್ರ ಬರುತ್ತದೆ” ಎಂಬ ಕನ್ನಡ ವಾಕ್ಯವನ್ನು “ದಟ್ ಫಿಲ್ಮ್ ಅಪಿಯರ್ಸ್ ಬಿಫೋರ್ ಐಸ್” ಎಂದು ಅದು ಇಂಗ್ಲಿಷ್‍ಗೆ ಅನುವಾದಿಸುತ್ತದೆ. ಈ ಬಗೆಯ ಅನುವಾದ ತಂತ್ರಜ್ಞಾನವನ್ನು ಸುಪ್ರೀಂ ಕೋರ್ಟ್ ತೀರ್ಪುಗಳಿಗೆ ಅನ್ವಯಿಸಿದರೆ ಅನುಕೂಲಕ್ಕಿಂತ ಅನಾಹುತವೇ ಹೆಚ್ಚಾಗುವ ಅಪಾಯವಿದೆ.

ಪ್ರಾಥಮಿಕ ಶಿಕ್ಷಣದಲ್ಲಿ ಆಯಾ ರಾಜ್ಯ ಭಾಷೆಗೆ ಸಾರ್ವಭೌಮತ್ವ ಕಲ್ಪಿಸುವ ಅಗತ್ಯವನ್ನು ರಾಜ್ಯಗಳು ಮುಖ್ಯವಾಗಿ ದಕ್ಷಿಣ ಭಾರತದ ರಾಜ್ಯಗಳು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವ ಜರೂರತು ಇದೆ. ನಮ್ಮ ಶಿಕ್ಷಣ ವ್ಯವಸ್ಥೆ ಈಗಿನಂತೆಯೇ ಸ್ಥಳೀಯ ಭಾಷೆಯನ್ನು ಕತ್ತು ಹಿಸುಕುವ ರೀತಿ ಮುಂದುವರಿದರೆ ಪ್ರಾದೇಶಿಕ ಭಾಷೆ ಎನ್ನುವುದು ಇತಿಹಾಸದ ಭಾಗವಾಗಬಹುದು. ತಮಿಳು ನಾಡು, ಕೇರಳ, ಆಂಧ್ರ-ತೆಲಂಗಾಣದಲ್ಲಿ ಸ್ಥಳೀಯ ಭಾಷೆ ಬಗ್ಗೆ ಸ್ಥಳೀಯರಲ್ಲಿ ಅಭಿಮಾನ ಮುಕ್ಕಾಗದೆ ಉಳಿದುಕೊಂಡಿದೆ. ಕರ್ನಾಟಕಕ್ಕೆ ಬಂದರೆ ಕನ್ನಡ, ಕನ್ನಡಿಗರಿಗೇ ಅಲರ್ಜಿಯಾಗಿದೆ. ಈ ರೋಗ ನಿವಾರಣೆಗೆ ಪ್ರಾದೇಶಿಕ ಭಾಷೆಗಳಿಗೆ ಶಿಕ್ಷಣದಲ್ಲಿ ಪಾರಮ್ಯ ಸಿಗುವ ವ್ಯವಸ್ಥೆ ಆಗಬೇಕಿದೆ. ಯಾವ ಭಾಷೆಯಿಂದ ಯಾವ ಭಾಷೆಗಾದರೂ ಅನುವಾದಿಸುವ ಸವಲತ್ತು ಗೂಗಲ್ ಟ್ರಾನ್ಸ್‌ಲೇಷನ್ ಆಪ್‍ನಲ್ಲಿದೆ. ಅದು ಮಕ್ಕಿಕಾಮಕ್ಕಿ ಅನುವಾದ. “ನಮ್ಮ ಕಣ್ಮುಂದೆ ಆ ಚಿತ್ರ ಬರುತ್ತದೆ” ಎಂಬ ಕನ್ನಡ ವಾಕ್ಯವನ್ನು “ದಟ್ ಫಿಲ್ಮ್ ಅಪಿಯರ್ಸ್ ಬಿಫೋರ್ ಐಸ್” ಎಂದು ಅದು ಇಂಗ್ಲಿಷ್‍ಗೆ ಅನುವಾದಿಸುತ್ತದೆ. ಈ ಬಗೆಯ ಅನುವಾದ ತಂತ್ರಜ್ಞಾನವನ್ನು ಸುಪ್ರೀಂ ಕೋರ್ಟ್ ತೀರ್ಪುಗಳಿಗೆ ಅನ್ವಯಿಸಿದರೆ ಅನುಕೂಲಕ್ಕಿಂತ ಅನಾಹುತವೇ ಹೆಚ್ಚಾಗುವ ಅಪಾಯವಿದೆ.

ಇದನ್ನೂ ಓದಿ: ಮೊಗಸಾಲೆ ಅಂಕಣ | ಕರ್ನಾಟಕದ ಪ್ರಾದೇಶಿಕ ಪಕ್ಷಗಳು ಮಣ್ಣು ಮುಕ್ಕಿದ ಇತಿಹಾಸ

Exit mobile version