ಭಾರತಕ್ಕೆ ಸ್ವಾತಂತ್ರ್ಯ ನೀಡಿದರೆ ಅದರ ಆಡಳಿತ ಪುಂಡುಪೋಕರಿಗಳ, ರ್‍ಯಾಸ್ಕಲ್‍ಗಳ ಕೈವಶವಾಗುತ್ತದೆ. ಆ ದೇಶದ ನಾಯಕರು ಕೊಳ್ಳೆ ಹೊಡೆಯುವ ಮನಃಸ್ಥಿತಿಯವರು, ಪರಸ್ಪರ ಅಧಿಕಾರಕ್ಕಾಗಿ ಕಚ್ಚಾಡುವ ಲಾಲಸಿಗಳು. ಆಂತರಿಕ ಕಚ್ಚಾಟದಲ್ಲಿ ಭಾರತವೇ ಕಳೆದುಹೋಗುವ ಅಪಾಯವಿದೆ. ನೀರು ಗಾಳಿಗೂ ತೆರಿಗೆ ವಿಧಿಸುವ ಸ್ಥಿತಿ ಅಲ್ಲಿ ಒಂದಲ್ಲ ಒಂದು ದಿವಸ ಎದುರಾಗಬಹುದು…. ಇದು ಬ್ರಿಟನ್ ಎಂದು ಕರೆಯಲಾಗುವ ಯುನೈಟೆಡ್ ಕಿಂಗ್‍ಡಮ್‍ಗೆ ಒಂಬತ್ತು ವರ್ಷ ಪ್ರಧಾನಿಯಾಗಿದ್ದ ವಿನ್‍ಸ್ಟನ್ ಚರ್ಚಿಲ್ ಹೇಳಿದ ಮಾತು. ಒಂದು ದೇಶ ಮತ್ತು ದೇಶವಾಸಿಗಳ ವಿಚಾರದಲ್ಲಿ ತಾವಾಡಿದ ಅನುಚಿತ ಮಾತುಗಳಿಗೆ ಮುಂದೊಂದು ದಿನ ಚರ್ಚಿಲ್ ವಿಷಾದ ವ್ಯಕ್ತಪಡಿಸಿದರು ಎಂದ ಮಾತ್ರಕ್ಕೆ ಅವರ ಮನಃಪರಿವರ್ತನೆ ಆಗಿ ಪ್ರಾಯಶ್ಚಿತ್ತ ರೂಪದಲ್ಲಿ ಹೇಳಿಕೆ ಬಂತೆಂದು ಭಾವಿಸಲು ಆಧಾರಗಳಿಲ್ಲ. ಭಾರತೀಯರ ವಿಚಾರದಲ್ಲಿ ಅವರು ತೋರಿದ ಅಸಹನೆಯ ಹಿಂದೆ ಇದ್ದುದು ಜನಾಂಗ ದ್ವೇಷವಲ್ಲದೆ ಮತ್ತೇನೂ ಅಲ್ಲ.
ಅಂದೂ ಸೈ ಇಂದೂ ಸೈ, ಬಿಳಿವರ್ಣದ ಶ್ರೇಷ್ಠತೆಯ ವ್ಯಸನ ಬ್ರಿಟನ್ನಿನಲ್ಲಿ ವ್ಯಾಪಕವಾಗಿದೆ. ಜನಾಂಗ ದ್ವೇಷ ಅವರ ಕಣಕಣದಲ್ಲೂ ಇರುವುದಕ್ಕೆ ಒಂದಲ್ಲ ನೂರಲ್ಲ ಸಹಸ್ರ ಸಹಸ್ರ ನಿದರ್ಶನ ಲಭ್ಯ. ಬಿಳಿಯರಲ್ಲದವರನ್ನು ಎರಡನೆ ದರ್ಜೆ ಮನುಷ್ಯರನ್ನಾಗಿ ನೋಡುವ ಗುಣ ಆ ದೇಶದಲ್ಲಿ ಹಾಸುಹೊಕ್ಕಾಗಿದೆ. ಚರ್ಚಿಲ್ ಈಗ ಇಲ್ಲ, ಸತ್ತು ಹೋಗಿದ್ದಾರೆ ನಿಜ, ಆದರೆ ಚರ್ಚಿಲ್‍ರಲ್ಲಿದ್ದ ಜನಾಂಗ ದ್ವೇಷ ಮನಃಸ್ಥಿತಿ ಸತ್ತಿಲ್ಲ, ಸಾಯುವುದೂ ಇಲ್ಲ. ಭಾರತೀಯರಿಗೆ ಆಳುವುದಕ್ಕೆ ಬರುವುದಿಲ್ಲ ಎಂಬ ಚರ್ಚಿಲ್‍ರ ಮಾತನ್ನು ಸಂಪೂರ್ಣವಾಗಿ ಅಲ್ಲಗಳೆಯುವ ಸ್ಥಿತಿಯಲ್ಲಿ ಭಾರತೀಯರು ಇಲ್ಲ. ನಮ್ಮ ದೇಶ ಸಾಗಿರುವ ರೀತಿ ನೋಡಿದರೆ, ಇಲ್ಲಿಯ ರಾಜಕೀಯ ಪಕ್ಷಗಳ ಆಟಮೇಲಾಟ ಗಮನಿಸಿದರೆ ಚರ್ಚಿಲ್ ಮಾತಲ್ಲಿ ಒಂದಿಷ್ಟಾದರೂ ನಿಜವಿರುವುದು ಸ್ಪಷ್ಟವಾಗುತ್ತದೆ. ಅವರು ಅಂದೆಂದೋ ಈ ವಿಚಾರವಾಗಿ ಆಡಿದ ಮಾತನ್ನು ಸುಳ್ಳುಮಾಡುವ ಪ್ರಾಮಾಣಿಕ ಪ್ರಯತ್ನ ನಮ್ಮಲ್ಲಿ 75 ವರ್ಷದ ಬಳಿಕವೂ ನಡೆದಿಲ್ಲ, ಜಗತ್ತಿನ ಎಲ್ಲ ಪ್ರಜಾಪ್ರಭುತ್ವ ದೇಶಗಳಲ್ಲಿ ಸಾಮಾನ್ಯವಾಗಿರುವ ದೌರ್ಬಲ್ಯ ಭಾರತದಲ್ಲೂ ಮುಂದುವರಿದಿದೆ ಎಂಬ ಸತ್ಯವನ್ನು ಒಪ್ಪಿಕೊಂಡೇ ಹೊಸ ಕ್ಯಾಪ್ಟನ್ ಆಳ್ವಿಕೆ ಬ್ರಿಟನ್ನು ಎದುರಿಸುತ್ತಿರುವ ಸಮಸ್ಯೆಗಳಿಗೆ ಹೇಗೆ ಪರಿಹಾರ ದೊರಕಿಸಲಿದೆ ಎನ್ನುವುದನ್ನು ನೋಡಬೇಕಿದೆ.
“ಭಾರತೀಯರು ಸ್ವಾತಂತ್ರ್ಯಕ್ಕೆ ಅನರ್ಹರು, ಅವರಿಗೆ ಆಡಳಿತ ನಡೆಸುವುದಕ್ಕೆ ಬರುವುದಿಲ್ಲ” ಎಂದು ಚರ್ಚಿಲ್ ಹೇಳಿದ ನಂತರದ ಇಷ್ಟು ವರ್ಷದಲ್ಲಿ ಅತ್ತ ಥೇಮ್ಸ್ ನದಿಯಲ್ಲಿ ಹರಿದ ನೀರಿಗೂ ಲೆಕ್ಕವಿಲ್ಲ, ಇತ್ತ ಗಂಗೆಯಲ್ಲಿ ಹರಿದ ನೀರಿಗೂ ಲೆಕ್ಕವಿಲ್ಲ. ಮಾತು ಆಡಿದರೆ ಹೋಯಿತು; ಮುತ್ತು ಒಡೆದರೆ ಹೋಯಿತು ಎಂಬ ಆರ್ಷೇಯ ಮಾತು ಈ ಸಂದರ್ಭದಲ್ಲಿ ನೆನಪಿಗೆ ಬರುವುದಕ್ಕೆ ಕಾರಣ ರಿಷಿ ಸುನಕ್ ಎಂಬ ಭಾರತೀಯ ಸಂಜಾತ ಅದೇ ಚರ್ಚಿಲ್ ಕೂತಿದ್ದ ಆಸನದಲ್ಲಿ ವಿರಾಜಮಾನರಾಗಿರುವುದು. ಭಾರತೀಯರಿಗೆ ಆಡಳಿತ ನಡೆಸುವುದಕ್ಕೆ ಬರುವುದಿಲ್ಲ ಎಂದು ತಮ್ಮವನೇ ಆಡಿದ ಮಾತಿಗೆ ವರ್ತಮಾನದ ಬ್ರಿಟನ್ನು ಕವಡೆಕಾಸಿನ ಕಿಮ್ಮತ್ತನ್ನೂ ನೀಡುತ್ತಿಲ್ಲ ಎನ್ನುವುದು ಚರ್ಚಿಲ್ ಆತ್ಮ (ಹಾಗಂತ ಏನಾದರೂ ಇದ್ದರೆ) ವಿಲಿವಿಲಿ ಒದ್ದಾಡಲು ಸಾಕು.
ಸಾಮ್ರಾಜ್ಯಶಾಹಿ ಬ್ರಿಟನ್ನು ಯವತ್ತೂ ತನ್ನ ಸ್ವಂತ ಬಲದ ಮೇಲೆ ಬೆಳೆದ ದೇಶವಲ್ಲ. ಈಸ್ಟ್ ಇಂಡಿಯಾ ಕಂಪೆನಿಯಾಗಿ ವ್ಯಾಪಾರ ವಹಿವಾಟು ಎಂದು ಭಾರತ ನೆಲಕ್ಕೆ ಬಂದಿಳಿದ ಫರಂಗೀಯರು ಕಾಲಕ್ರಮೇಣ ಇಡೀ ಭಾರತವನ್ನು ಕಬ್ಜಾ ಮಾಡಿಕೊಂಡ ರೀತಿಯಲ್ಲೇ ಇತರ 55 ದೇಶಗಳನ್ನು ಸಾಧ್ಯವಿರುವಷ್ಟೂ ಕಾಲ ದೋಚಿದವರು ಅವರು. ಭಾರತದಲ್ಲಿ ಎರಡು ಶತಮಾನಕ್ಕೂ ಹೆಚ್ಚಿನ ಅವಧಿ ಆಡಳಿತ ನಡೆಸಿದ್ದು, ಅನಕ್ಷರತೆ, ಅಜ್ಞಾನ, ಮೂಢನಂಬಿಕೆ, ಅವಿವೇಕವೇ ಮೈವೆತ್ತಿದ್ದ ಈ ನೆಲದಲ್ಲಿ ಒಡೆದು ಆಳುವ ಕುತಂತ್ರ ರಾಜಕೀಯದಿಂದಲೇ ದೇಶವನ್ನು ದೋಚಿದ್ದು…ಒಂದೇ ಎರಡೇ. ಡೇರೆಯೊಳಗೆ ಒಂಟೆ ನುಗ್ಗಿದರೆ ಏನಾಗುತ್ತದೋ ಬ್ರಿಟಿಷರು ಭಾರತದೊಳಕ್ಕೆ ನುಗ್ಗಿದಾಗ ಆಗಿದ್ದೂ ಅದೇ. ಕುತಂತ್ರ ರಾಜಕಾರಣದ ಮೂಲಕವೇ ದೇಶದೇಶಗಳನ್ನು ವಶಕ್ಕೆ ಪಡೆದು ಅವೆಲ್ಲವನ್ನೂ ದೋಚಿ ಶ್ರೀಮಂತವಾದ ಬ್ರಿಟನ್ನು ಆಕಾಶದತ್ತ ನೋಡುವಂಥ ಸ್ಥಿತಿ ಇಂದು ನಿರ್ಮಾಣವಾಗಿದೆ. ಮಾಡಿದ್ದುಣ್ಣೋ ಮಹರಾಯ ಎನ್ನುವುದು ಇಂಥ ಅಪಸವ್ಯದ ಕಾರಣವಾಗಿಯೇ.
ಇಂದು ರಿಷಿ ಸುನಕ್ ಪ್ರಧಾನಿಯಾಗಿರುವುದು ಕನ್ಸರ್ವೇಟಿವ್ ಪಕ್ಷದ ಸಂಸದರಾಗಿ. ಚರ್ಚಿಲ್ ಕೂಡಾ ಕನ್ಸರ್ವೇಟಿವ್ ಪಕ್ಷದ ನಾಯಕರೇ ಆಗಿದ್ದರು. ಎರಡನೆ ಮಹಾಯುದ್ಧದಲ್ಲಿ ಜರ್ಮನಿಯ ಅಡಾಲ್ಫ್ ಹಿಟ್ಲರ್ ವಿರುದ್ಧ ಸೆಣೆಸಿದ ಖ್ಯಾತಿ ಚರ್ಚಿಲ್ ಹೆಸರಲ್ಲಿದೆ. ಅದೇ ಯುದ್ಧದಲ್ಲಿ ಭಾರತೀಯ ಸೈನಿಕರನ್ನು ಕದನ ಕ್ಷೇತ್ರದಲ್ಲಿ ಮುಂದಕ್ಕೆ ತಳ್ಳಿ ಸಹಸ್ರ ಸಹಸ್ರ ಭಾರತೀಯರ ಮಾರಣಹೋಮಕ್ಕೆ ಕಾರಣರಾದ ಕುಖ್ಯಾತಿಯೂ ಅದೇ ಚರ್ಚಿಲ್ ಹೆಸರಿಗೆ ಮೆತ್ತಿಕೊಂಡಿದೆ. 19 ಮತ್ತು 20ನೇ ಶತಮಾನ ಕಂಡು ಅನುಭವಿಸಿದ ಯುದ್ಧಗಳಿಗೂ 21ನೇ ಶತಮಾನ ಕಾಣುತ್ತಿರುವ ಯುದ್ಧಗಳಿಗೂ ವ್ಯತ್ಯಾಸ ಬಹಳವಿದೆ. ಆದರೆ ಯುದ್ಧದ ಪರಿಣಾಮ ಮಾತ್ರ ಒಂದೇ.
ಇದನ್ನೂ ಓದಿ | ಮೊಗಸಾಲೆ ಅಂಕಣ | ಏಳು ಸುತ್ತಿನ ಕೋಟೆಯೊಳಗೆ ಮಲ್ಲಿಕಾರ್ಜುನ ಖರ್ಗೆ
ವರ್ತಮಾನದ ಜಗತ್ತು ಆರ್ಥಿಕ ಸಂಕಷ್ಟವೆಂಬ ಮಹಾಯುದ್ಧದಿಂದ ಪಾರಾಗಲು ಹೆಣಗಾಟ ನಡೆಸಿದೆ. ದೋಚಲು ದೇಶವೇ ಉಳಿಯದ ಸಂಕಟ ಬ್ರಿಟನ್ನಿನದು. ಒಂದು ಕಾಲದಲ್ಲಿ ಇತರ ದೇಶಗಳ ಸಂಪತ್ತನ್ನೇ ತನ್ನ ಬಂಡವಾಳವನ್ನಾಗಿಸಿಕೊಂಡಿದ್ದ ಬ್ರಿಟನ್ನು ಇದೀಗ ಆರ್ಥಿಕ ಸಂಕಷ್ಟದ ಸಂಕೋಲೆಯಲ್ಲಿ ಸ್ವತಃ ಬಂಧಿಯಾಗಿದೆ. ಕಳೆದ ಆರು ವರ್ಷದಲ್ಲಿ ರಿಷಿ ಸೇರಿದಂತೆ ಐವರು ಪ್ರಧಾನಿಗಳನ್ನು ದೇಶ ನೋಡಬೇಕಾಗಿರುವುದಕ್ಕೆ ಕಾರಣ ರಾಜಕೀಯವಲ್ಲ; ಬದಲಿಗೆ ದೂರದೃಷ್ಟಿಯಿಲ್ಲದ ಆರ್ಥಿಕ ದಿವಾಳಿತನದ ಆಳ್ವಿಕೆ.
ಮಾಜಿ ಪ್ರಧಾನಿಗಳಾದ ಬೋರಿಸ್, ಟ್ರಸ್ ಸೋತು ಕೈಚೆಲ್ಲಲು ಕಾರಣಗಳು ಸಣ್ಣವೂ ಅಲ್ಲ ನಿರ್ಲಕ್ಷಿಸಬಹುದಾದವೂ ಅಲ್ಲ. ಆ ಒಂದೊಂದೂ ಕಾರಣವನ್ನು ಮುಂದಕ್ಕೆ ತಂದು ವಿಶ್ಲೇಷಿಸಿ ಪರಿಹಾರ ಒದಗಿಸುವುದು ಎಂದರೆ ಸಾಮಾನ್ಯ ಸಾಹಸವಲ್ಲ. ಬ್ರಿಟನ್ನು ಕೂಡಾ ಇತರ ಅನೇಕ ದೇಶಗಳಂತೆ ನಿರುದ್ಯೋಗ, ಬಡತನ, ಹಸಿವು,ಅಸಹನೆ ಮುಂತಾದವುಗಳ ಕಾರಣವಾಗಿ ಅಸ್ತವ್ಯಸ್ತವಾಗಿದೆ. ನಿರುದ್ಯೋಗ ನಿವಾರಣೆ ಎನ್ನುವುದು ಬಡತನ, ಹಸಿವನ್ನು ನಿವಾರಿಸಿಹಾಕಬಲ್ಲ ರಾಮಬಾಣ. ಆದರೆ ಉದ್ಯೋಗ ಸೃಷ್ಟಿಗೆ ಮಂತ್ರದಂಡ ಎನ್ನುವುದಿಲ್ಲ. ಚುನಾವಣೆ ಸಮಯದಲ್ಲಿ ಕೊಡುವ ಆಶ್ವಾಸನೆಯ ಭಾಗವಾಗಿ ಉದ್ಯೋಗದ ಮಾತು ಬರುತ್ತದೆಯೇ ಹೊರತೂ ಕಾರ್ಯರೂಪಕ್ಕೆ ಬರುವ ಅಥವಾ ತರುವ ಮಾರ್ಗಗಳ ಶೋಧ ಇನ್ನೂ ಯಶಸ್ವಿಯಾಗಿಲ್ಲ.
ಭಾರತದಲ್ಲಿ 2014ರ ಲೋಕಸಭಾ ಚುನಾವಣೆಗೆ ಮೊದಲು ಭಾರತೀಯ ಜನತಾ ಪಕ್ಷ ಬಿಡುಗಡೆ ಮಾಡಿದ ಪ್ರಣಾಳಿಕೆಯಲ್ಲಿ ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆಯನ್ನು ನೀಡಲಾಗಿತ್ತು. ಜನ ಆ ಪಕ್ಷವನ್ನು ಮೂರನೇ ಎರಡಕ್ಕಿಂತ ಅಧಿಕ ಬಹುಮತದೊಂದಿಗೆ ಆಯ್ಕೆ ಮಾಡಿದರು. ಐದು ವರ್ಷದ ಬಳಿಕ 2019ರಲ್ಲಿ ಮತ್ತೆ ಅಗಾಧ ಬಹುಮತದೊಂದಿಗೆ ಬಿಜೆಪಿಯನ್ನೇ ಅಧಿಕಾರಕ್ಕೆ ತಂದರು. 2019ರ ಚುನಾವಣಾ ಪ್ರಣಾಳಿಕೆಯಲ್ಲಿ ಉದ್ಯೋಗ ಸೃಷ್ಟಿಯ ಭರವಸೆ ಇರಲಿಲ್ಲ. ಬಿಜೆಪಿ ಅಧಿಕಾರಕ್ಕೆ ಬಂದು ಹತ್ತಿರ ಹತ್ತಿರ ಒಂಬತ್ತು ವರ್ಷ. ವರ್ಷಕ್ಕೆ ಎರಡು ಕೋಟಿಯಂತೆ ಎಷ್ಟು ಉದ್ಯೋಗ ಸೃಷ್ಟಿಯಾಗಬೇಕಿತ್ತು…? ಅಧಿಕಾರಕ್ಕೆ ಬಂದ ಪಕ್ಷ ತಾನು ಕೊಟ್ಟ ಇಂಥ ಭರವಸೆಗಳನ್ನು ಸುಲಭದಲ್ಲಿ ಮರೆಯುತ್ತದೆ. ಆದರೆ ಜನರೂ ಮರೆತರೆ…? ಬ್ರಿಟನ್ನಿನಲ್ಲೂ ಜನರ ಮೂಗಿಗೆ ತುಪ್ಪ ಸವರುವ ಕೆಲಸವನ್ನು ರಿಷಿ ಮಾಡುತ್ತಾರೆಯೋ ಅಥವಾ ನಿಜ ಅರ್ಥದಲ್ಲಿ ಜನರ ಸಂಕಷ್ಟಗಳಿಗೆ ಪರಿಹಾರ ದೊರಕಿಸುವ ನಿಟ್ಟಿನಲ್ಲಿ ಸ್ಪಂದಿಸುತ್ತಾರೋ.. ಕಾದು ನೋಬೇಕಿದೆ. ಥಿಯರಿ, ಪ್ರಾಕ್ಟಿಕಲ್ ಯಾವಾಗಲೂ ಬೇರೆ ಬೇರೆ. ಬೆಲೆ ಏರಿಕೆಯನ್ನೂ ಹಣದುಬ್ಬರವನ್ನೂ ರಿಷಿ ಹೇಗೆ ನಿಯಂತ್ರಿಸಲಿದ್ದಾರೆ ಎನ್ನುವುದರ ಮೇಲೆ ಪ್ರಧಾನಿಯಾಗಿರುವ ಅವರ ಅರ್ಹತೆ ಅನರ್ಹತೆ ನಿರ್ಧಾರವಾಗಲಿವೆ.
ಇದನ್ನೂ ಓದಿ | ಮೊಗಸಾಲೆ ಅಂಕಣ | ಸೋನಿಯಾರನ್ನು ತತ್ತರಗೊಳಿಸಿದ ಅನಿರೀಕ್ಷಿತ ಬಂಡಾಯ
ಇದೇ ಮೊದಲ ಬಾರಿಗೆ ಬಿಳಿಯರಲ್ಲದ ಮತ್ತು ಬಿಳಿಯರು ಸುತರಾಂ ಇಷ್ಟಪಡದ ಕಂದುವರ್ಣದ ಮುಖಂಡರೊಬ್ಬರು, ಶ್ವೇತವರ್ಣ ಪಕ್ಷಪಾತಿ ಮತ್ತು ಜನಾಂಗ ದ್ವೇಷದ ನಾಡಿನ ಮುಖ್ಯಸ್ಥರಾಗಿರುವುದು ಲಂಡನ್ನಿನಿಂದ ಸಾಕಷ್ಟು ದೂರದಲ್ಲಿರುವ ಭಾರತದಲ್ಲಿ ಸಂಭ್ರಮಾಚರಣೆಗೆ ಕಾರಣ ಆಗಿದೆ. ಅವರು ಭಾರತೀಯ ಸಂಜಾತ ವಂಶದ ಕುಡಿ ಎನ್ನುವುದು ಮತ್ತು ಕರ್ನಾಟಕದ ಕನ್ನಡ ಹೆಣ್ಣು ಮಗಳನ್ನು ಮದುವೆಯಾದವರು ಎನ್ನುವುದು, ಅವರ ಅತ್ತೆ ಸುಧಾಮೂರ್ತಿ, ಮಾವ ನಾರಾಯಣ ಮೂರ್ತಿ ಇನ್ಫೋಸಿಸ್ ಸಂಸ್ಥೆ ಮೂಲಕ ಬೆಂಗಳೂರಿಗೆ ಕೀರ್ತಿ ತಂದವರು ಎನ್ನುವುದು, ಬೆಂಗಳೂರಿಗೆ ರಿಷಿ ಬಂದಿದ್ದಾಗ ವಿದ್ಯಾರ್ಥಿ ಭವನದಲ್ಲಿ ಗರಿಗರಿ ಮಸಾಲೆ ದೋಸೆ ಸವಿದರು ಎಂಬಿತ್ಯಾದಿ ಅಂಶಗಳು ಅವರ ಬಗೆಗೆ ಇಲ್ಲಿ ಗೌರವ ಇಮ್ಮಡಿಯೋ ಮುಮ್ಮಡಿಯೋ ಆಗುವುದಕ್ಕೆ ದೊಡ್ಡ ಕಾರಣಗಳೇ ಹೌದು. ಆದರೆ ಇಂಗ್ಲೆಂಡಿನಲ್ಲಿ….? ಅಲ್ಲಿ ಇವ್ಯಾವುದೂ ಚಲಾವಣೆಗೆ ಬಾರದ ಮುಖಮೌಲ್ಯ ಕಳೆದುಕೊಂಡ ನಾಣ್ಯ ಮಾತ್ರ.
ದೆಹಲಿ ಸೇರಿದಂತೆ ಉತ್ತರ ಭಾರತದಲ್ಲಿ ದಕ್ಷಿಣ ಭಾರತೀಯರನ್ನು ಗುರುತಿಸುವುದು “ಮದ್ರಾಸಿ” ಎಂದೇ. ಬೆಂಗಳೂರು, ತಿರುವನಂತಪುರ, ಹೈದರಾಬಾದ್ ಅವರಿಗೆ ಗೊತ್ತೇ ಇಲ್ಲ. ಗೊತ್ತಿರುವುದೆಂದರೆ ತುಸು ಕಪ್ಪು/ ಕಂದು ಬಣ್ಣದವರನ್ನು ಮದ್ರಾಸಿ ಎಂದು ಬ್ರ್ಯಾಂಡ್ ಮಾಡುವುದು. ಇದೇ ಪದ್ಧತಿ ಬ್ರಿಟನ್ನಿನ ಶ್ವೇತ ವರ್ಣೀಯರಲ್ಲಿದೆ. ತಾವು ದೋಚಿ ಇನ್ನೇನೂ ಉಳಿದಿಲ್ಲ ಎಂದು ಭಾವಿಸಿ ಬಿಟ್ಟು ಬಂದಿರುವ ಭಾರತ ಈ ಹೊತ್ತು ಜಗತ್ತಿನ ಬಲಿಷ್ಠ ಪ್ರಜಾಪ್ರಭುತ್ವಗಳಲ್ಲಿ ಒಂದೆನಿಸಿರುವುದು ಮತ್ತು 136 ಕೋಟಿ ಜನಸಂಖ್ಯೆಯೊಂದಿಗೆ ಅದರ ಆರ್ಥಿಕ ಪರಿಸ್ಥಿತಿ ಇನ್ನೂ ಭರವಸೆಯನ್ನು ಕಳೆದುಕೊಳ್ಳದೆ ಇರುವುದು ಮೂಲಭೂತವಾದಿ ಬ್ರಿಟಿಷರ ಅಸಹನೆಯನ್ನು ಕೆರಳಿಸಲು ಸಾಕು. ಭಾರತೀಯ ಸಂಜಾತನೊಬ್ಬ ತಮ್ಮ ಮೇಲೆ ಅಧಿಕಾರ ಚಲಾಯಿಸುತ್ತಿದ್ದಾನೆ ಎನ್ನುವುದನ್ನು ಸುಲಭದಲ್ಲಿ ಜೀರ್ಣಿಸಿಕೊಳ್ಳಲಾಗದ ಮನಃಸ್ಥಿತಿ ಅವರದು.
ಬ್ರಿಟನ್ನು ಖಂಡಿತವಾಗಿಯೂ ಅಮೆರಿಕಾ ಅಲ್ಲ. ಅಲ್ಲಿ ಕರಿಯರು ಅಧ್ಯಕ್ಷರಾಗಿರುವ ಹಲವು ಉದಾಹರಣೆಗಳಿವೆ. ಹಾಲಿ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಭಾರತೀಯ ಸಂಜಾತ ಹೆಣ್ಣು ಮಗಳು. ಮತ್ತದೇ ಕಪ್ಪು ವರ್ಣದ ಮದ್ರಾಸಿ. ಅಮೆರಿಕಾದಲ್ಲಿ ಕರಿಯರನ್ನು ದೂರವಿಟ್ಟು ಮಾಡುವ ಯಾವ ಕೆಲಸವನ್ನೂ ಜನ ಮೆಚ್ಚುವುದಿಲ್ಲ ಎಂಬಂಥ ಜ್ಞಾನೋದಯವಾಗಿದೆ. ಆದರೆ ಬ್ರಿಟನ್ನಿನಲ್ಲಿ ಇನ್ನೂ ಆ ಜ್ಞಾನೋದಯವಾಗಿಲ್ಲ. ತಮ್ಮದು ಸೂರ್ಯ ಮುಳುಗದ ಸಾಮ್ರಾಜ್ಯ ಎಂಬ ಹಳಹಳಿಕೆಯಲ್ಲಿರುವ ಬ್ರಿಟಿಷರಿಗೆ ರಿಷಿ ಪ್ರಧಾನಿಯಾಗಿರುವುದು ಹುಳಿಹುಳಿ ಆಗಿದೆ. ನುಂಗಲೂ ಆಗದ ಉಗುಳಲೂ ಆಗದ ಬಿಸಿ ತುಪ್ಪ. ದೇಶ ತತ್ತರ ಸ್ಥಿತಿಯಲ್ಲಿರುವಾಗ ಯಾರಾದರೂ ಅವತರಿಸಿ ಕಾಪಾಡಬಾರದೆ ಎನ್ನುವ ಸಾಮಾನ್ಯ ಮೊರೆ ಅಲ್ಲಿ ರಿಷಿಯವರನ್ನು ಕರೆದು ಕೈಹಿಡಿದು ಕುಳ್ಳಿರಿಸಿದೆ.
ಇದನ್ನೂ ಓದಿ | ಮೊಗಸಾಲೆ ಅಂಕಣ | ಸದನಗಳಲ್ಲಿ ಹಂಗಾಮಾ, ಜನಹಿತಕ್ಕೆ ಮೂರ್ನಾಮ
ಬ್ರಿಟನ್ನಿನ ಅವ್ಯವಸ್ಥೆಗೆ ತಾವೇನು ಮದ್ದನ್ನು ಅರೆಯಲು ಸಾಧ್ಯ ಎನ್ನುವುದು ರಿಷಿಯವರಿಗೆ ಗೊತ್ತಿರಲು ಸಾಕು. ಸಕ್ರಿಯ ರಾಜಕಾರಣಕ್ಕೆ ಬಂದು ಎಂಟು ವರ್ಷ ಇನ್ನೂ ಆಗದ ರಿಷಿಯವರ ರಾಜಕೀಯ ಪ್ರಧಾನಿ ಪಟ್ಟಕ್ಕೆ ಬರುವುದರೊಂದಿಗೆ ಕೊನೆಯಾಗಬೇಕಿಲ್ಲ. ಇದನ್ನು ರಾಜಕೀಯ ಪ್ರವೇಶಾರಂಭ ಎಂದು ಅವರು ಭಾವಿಸಿದರೆ ಅವರ ರಾಜಕೀಯಕ್ಕೂ ಭವಿಷ್ಯವಿದೆ; ಅವರು ನೆಲೆಸಿರುವ ಬ್ರಿಟನ್ನಿಗೂ ಭವಿಷ್ಯವಿದೆ. ಅದಕ್ಕಿಂತ ಹೆಚ್ಚಾಗಿ ಜನಾಂಗ ದ್ವೇಷೀ ಬ್ರಿಟಿಷರು ತಮ್ಮ ಕೈಯಲ್ಲಿ ಆಗದ ಉದ್ಧಾರದ ಕೆಲಸಕ್ಕೆ ಬಂದವರೊಂದಿಗೆ ಮನಸ್ಸು ಪೂರಕವಾಗಿ ಕೈ ಜೋಡಿಸಿದರೆ ಬಯಸಿದ್ದು ಬರಬಹುದು.