Site icon Vistara News

ಮೊಗಸಾಲೆ ಅಂಕಣ: ಸನಾತನ ಧರ್ಮ ಮತ್ತು ಸಿಎಂ ಕಾವೇರಿ ಗೃಹಪ್ರವೇಶ!

Siddaramaiah at Chamundi hills

ಸಿದ್ದರಾಮಯ್ಯನವರು ಮುಖ್ಯಮಂತ್ರಿಯ ಅಧಿಕೃತ ನಿವಾಸ ಕಾವೇರಿಯಲ್ಲಿ ವಾಸಾರಂಭ ಮಾಡಿದ್ದಾರೆ. ಅಧಿಕಾರಕ್ಕೆ ಬಂದ ಮೂರು ತಿಂಗಳ ತರುವಾಯ ಈ ಗೃಹಪ್ರವೇಶವಾಗಿದೆ. ವಿಧಾನ ಸಭೆ ಚುನಾವಣಾ ಫಲಿತಾಂಶ ಬರುವವರೆಗೂ ಬಿಜೆಪಿ ನಾಯಕ ಬಿ.ಎಸ್. ಯಡಿಯೂರಪ್ಪ ಆ ಬಂಗಲೆಯಲ್ಲಿದ್ದರು. ಮುಖ್ಯಮಂತ್ರಿಯ ಅಧಿಕೃತ ನಿವಾಸ ಅದಾಗಿದ್ದರೂ ತಮ್ಮನ್ನು ಮುಖ್ಯಮಂತ್ರಿ ಪಟ್ಟಕ್ಕೇರಿಸಿದ ಯಡಿಯೂರಪ್ಪನವರನ್ನು ಬಂಗಲೆ ಬಿಡುವಂತೆ ಬಸವರಾಜ ಬೊಮ್ಮಾಯಿ ಕೇಳಿರಲಿಲ್ಲ. ಸಿದ್ದರಾಮಯ್ಯ ಸಿಎಂ ಆದ ಬಳಿಕ ಅದೇ ಮನೆಯಲ್ಲಿ ಠಿಕಾಣೆ ಹೂಡಲು ಕಾರಣ ಅಥವಾ ಅವಕಾಶವಿಲ್ಲದ ಯಡಿಯೂರಪ್ಪ ತೆರವು ಮಾಡಿದರು. ಆದರೆ ಗೃಹ ಪ್ರವೇಶಕ್ಕೆ ಸಿದ್ದರಾಮಯ್ಯ ಬರೋಬ್ಬರಿ ಮೂರು ತಿಂಗಳು ತೆಗೆದುಕೊಂಡರು.

ವದಂತಿಗಳನ್ನು ನಂಬಬಹುದಾದರೆ ವಾಸ್ತು ಶಾಸ್ತ್ರ ತಜ್ಞರು ಸೂಚಿಸಿದ ಪರಿಹಾರದಂತೆ ಮನೆಯನ್ನು ನವೀಕರಿಸಲಾಗಿದೆಯಂತೆ. ಗೃಹ ಪ್ರವೇಶವೂ ಕೂಡಾ ವಾಸ್ತು ಹೋಮವೇ ಮುಂತಾದ ಬಗೆಬಗೆಯ ಶಾಸ್ತ್ರ ರೀತ್ಯ ನೆರವೇರಿದೆಯಂತೆ. ಒಂದೇ ಮಾತಿನಲ್ಲಿ ಹೇಳುವುದಾದರೆ ಹಿಂದೂ ಸನಾತನ ಧರ್ಮ ಒಂದು ಗೃಹ ಪ್ರವೇಶಕ್ಕೆ ಏನೆಲ್ಲ ಕ್ರಮಗಳನ್ನು ಸೂಚಿಸುತ್ತದೆಯೋ ಅವೆಲ್ಲವನ್ನೂ ಸಿದ್ದರಾಮಯ್ಯ ಕುಟುಂಬ ಪಾಲಿಸಿದ್ದು ಐದು ವರ್ಷ ನಿರಾತಂಕ ಸಿಎಂ ಪಟ್ಟಕ್ಕೆ ಭದ್ರ ಬುನಾದಿ ಹಾಕುವ ಕೆಲಸ ಅಲ್ಲಿ ನಡೆದಿದೆ ಎನ್ನಲಾಗಿದೆ.

ಸಿದ್ದರಾಮಯ್ಯ ಸಮಾಜವಾದಿ ಸಿದ್ಧಾಂತ ಪ್ರೇರಿತ ರಾಜಕಾರಣಿ. ರಾಮಮನೋಹರ ಲೋಹಿಯಾ ಸಿದ್ಧಾಂತ ಮತ್ತು ಸಮಾಜವಾದಿ ಎಂ.ಡಿ. ನಂಜುಂಡಸ್ವಾಮಿಯವರ ಸಹವಾಸದಲ್ಲಿ ಬೆಳೆದ ಸಿದ್ದರಾಮಯ್ಯ, ದೇವರು ಧರ್ಮ ಶಾಸ್ತ್ರ ಮುಂತಾದವುಗಳಿಂದ ದೂರ ಕಾಯ್ದುಕೊಂಡವರು. ಈ ವಿಚಾರದಲ್ಲಿ ಅವರು ಒಳಗೊಂದು ಹೊರಗೊಂದು ಮಾಡಿದವರಲ್ಲ. ಆದರೆ ಬರಬರುತ್ತ ಅವರ ವಿಚಾರಧಾರೆಯಲ್ಲಿ ಕಣ್ಣುಕುಕ್ಕುವಂಥ ವ್ಯತ್ಯಾಸ ಕಂಡುಬಂದಿದ್ದರೆ ಅದಕ್ಕೆ ನಾವು ನೀವು ಊಹಿಸಬಹುದಾದ ಸ್ಪಷ್ಟ ಕಾರಣ ರಾಜಕಾರಣ. ಅಧಿಕಾರಸ್ಥ ರಾಜಕಾರಣಿ ಅಭಿವೃದ್ಧಿ ಕೆಲಸ ಮಾಡದಿದ್ದರೂ ನಡೆದುಹೋಗುತ್ತದೆ. ಆದರೆ ಗುಡಿ, ಮಸೀದಿ, ಇಗರ್ಜಿಗಳಲ್ಲಿ ದೇವರ ಮುಂದೆ ಮಂಡಿಯೂರದಿದ್ದರೆ ಅನಾಹುತ ಒಕ್ಕರಿಸುವ ಸಾಧ್ಯತೆ ಬಹಳ. ಇದು ಎಲ್ಲ ಧರ್ಮಗಳಲ್ಲೂ ಪ್ರಧಾನವಾಗಿರುವ ಮತ್ತು ಆಯಾ ಧರ್ಮಾನುಯಾಯಿಗಳು ಅನೂಚಾನವಾಗಿ ಪಾಲಿಸಿಕೊಂಡು ಬಂದಿರುವ ನಡಾವಳಿ.

ಜೆಡಿಎಸ್ ತೊರೆದು ಕಾಂಗ್ರೆಸ್‍ಗೆ ಸಿದ್ದರಾಮಯ್ಯ ಬಂದಾಗ ಅವರೊಂದಿಗೆ ಇನ್ನೂ ಕೆಲವರು ಜೆಡಿಎಸ್‍ಗೆ ಬೈಬೈ ಹೇಳಿದರು. ಅವರಲ್ಲಿ ಸತೀಶ ಜಾರಕಿಹೊಳಿ ಮತ್ತು ಸಿ.ಎಂ. ಇಬ್ರಾಹಿಂ ಪ್ರಮುಖರು. ಸತೀಶ ಜಾರಕಿಹೊಳಿ ಮೂಢನಂಬಿಕೆಗಳ ವಿರುದ್ಧ ಸಮರ ಸಾರಿದವರು. ಅವರ ನಡವಳಿಕೆಯಲ್ಲಿ ಇವತ್ತಿಗೂ ಅಂಥ ವ್ಯತ್ಯಾಸ ಕಂಡುಬಂದಿಲ್ಲ. ತಮ್ಮ ಹುಟ್ಟು ಹಬ್ಬವನ್ನು ಅವರು ಸ್ಮಶಾನದಲ್ಲಿ ಆಚರಿಸಿಕೊಳ್ಳುತ್ತಾರೆ. ಚುನಾವಣಾ ನಾಮಪತ್ರವನ್ನು ಅಮಾವಾಸ್ಯೆ ದಿವಸ ರಾಹುಕಾಲದಲ್ಲಿ ಸಲ್ಲಿಸುತ್ತಾರೆ. ಅವರ ಈ ಉದ್ಧಟ ನಡವಳಿಕೆಗೆ ಯಾವ ದೇವರೂ ಸಿಟ್ಟಾದಂತಿಲ್ಲ. ಸಿದ್ದರಾಮಯ್ಯ ಇಷ್ಟೆಲ್ಲ ಅಲ್ಲದಿದ್ದರೂ ದೇವರಿಂದ ಸುರಕ್ಷಿತ ಅಂತರ ಕಾಯ್ದುಕೊಂಡವರೆಂಬ ಮಾತು ಚಲಾವಣೆಯಲ್ಲಿತ್ತು.

ಕಾಂಗ್ರೆಸ್ ಸೇರಿ ಶಾಸಕರಾದಾಕ್ಷಣವೇ ಅವರು ವಿಧಾನ ಸಭೆಯಲ್ಲಿ ವಿರೋಧ ಪಕ್ಷದ ನಾಯಕರಾದರು. ವಿಧಾನ ಸಭೆ ಚುನಾವಣೆ ಹತ್ತಿರ ಬಂದಾಗ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಬಹುತೇಕ ಖಚಿತವಾಗಿತ್ತು. ಆ ಸಮಯದಲ್ಲಿ ಹರಕೆ ಹೊತ್ತು ಅವರು ಹೋಗಿದ್ದು ಅಜ್ಮೀರ್ ದರ್ಗಾಕ್ಕೆ. ಅಲ್ಲಿ ಹೋಗಿ ಹರಕೆ ಹೊತ್ತು ಬಂದರೆ ಕೋರಿದ್ದು ಈಡೇರುತ್ತದೆ ಎಂಬ ನಂಬಿಕೆ ಹಲವರಲ್ಲಿದೆ. ಸಿದ್ದರಾಮಯ್ಯನವರಲ್ಲಿ ಈ ನಂಬಿಕೆ ಇತ್ತೋ ಇಲ್ಲವೋ ಗೊತ್ತಿಲ್ಲ; ಇಬ್ರಾಹಿಂ ಅವರಲ್ಲಿತ್ತು. ಸಿಎಂ ಕ್ಯಾಂಡಿಡೇಟನ್ನು ಅಲ್ಲಿಗೆ ಕರೆದೊಯ್ಯುವ ಯತ್ನದಲ್ಲಿ ಇಬ್ರಾಹಿಂ ಯಶಸ್ವಿಯದರು. ಮುಸ್ಲಿಮ್ ಸಮುದಾಯ ಸಾಂಪ್ರದಾಯಿಕವಾಗಿ ಧರಿಸುವ ಟೋಪಿ ಧರಿಸಿದ ಸಿದ್ದರಾಮಯ್ಯ ದರ್ಗಾಕ್ಕೆ ಹಸಿರು ಛಾದ್ರಾ ಅರ್ಪಿಸಿ ಬೇಡಿಕೊಂಡ ಚಿತ್ರ ಆ ದಿನಗಳಲ್ಲಿ ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು. ದರ್ಗಾದ ಮಹಿಮೆಯೋ ಇಬ್ರಾಹಿಂ ಪ್ರಾರ್ಥನೆಯೋ ಸಿದ್ದರಾಮಯ್ಯನವರಲ್ಲಿದ್ದ ಟು..ಗೋ..ಆರ್..ನಾಟ್..ಟು.. ಗೊ ಎಂಬಂಥ ಗೊಂದಲ ಗೋಜಲೋ… ಯಾವುದೋ ಒಂದು ಇಲ್ಲವೇ ಎಲ್ಲವೂ ಸಂಯೋಜಿತಗೊಂಡು ಸಿದ್ದರಾಮಯ್ಯ ಸಿಎಂ ಪಟ್ಟಕ್ಕೆ ಏರಿದರು. ಮೂಲ ಕಾಂಗ್ರೆಸ್ಸಿಗರು ರಾಜಭವನದ ಆಚೆ ನಿಂತು ಎದೆ ಎದೆ ಬಡಿದುಕೊಂಡರೆ ಅತ್ತ ಸಿದ್ದರಾಮಯ್ಯ ಪ್ರಮಾಣ ವಚನ ಸ್ವೀಕರಿಸಿದರು!

ಗಟ್ಟಿಗ ಸಿದ್ದರಾಮಯ್ಯ, ಮುಖ್ಯಮಂತ್ರಿ ಸ್ಥಾನಾಕಾಂಕ್ಷಿ ಡಿ.ಕೆ.ಶಿವಕುಮಾರ್ ಅವರನ್ನು ಪಕ್ಕ ತಳ್ಳಿ ಮತ್ತೊಮ್ಮೆ ಸಿಎಂ ಗಾದಿಗೇರಿ ಇದೀಗ ಕಾವೇರಿ ಗೃಹ ಪ್ರವೇಶ ಮಾಡಿದ್ದಾರೆ. ಮುಖ್ಯ ಮಂತ್ರಿಯಾದವರು ನೇರವಾಗಿ ವಾಸ್ತವ್ಯ ಹೂಡುವಷ್ಟು ಸರ್ವಸುಸಜ್ಜಿತ ನಿವಾಸ ಕಾವೇರಿ. ಆದರೆ ವಾಸ್ತು ಭೂತ ಕಾಡುವ ರಾಜಕಾರಣಿಗಳಿಗೆ ಅಲ್ಲಿ ಏನೇನೋ ಮಾರ್ಪಾಡು ಆಗಬೇಕೆನಿಸುತ್ತದೆ. ಎಚ್.ಡಿ. ದೇವೇಗೌಡರು ಸಿಎಂ ಆದಾಗ ಕಾವೇರಿ ಪ್ರವೇಶಕ್ಕೆ ಮುನ್ನ ವಾಸ್ತು ವಿಶೇಷವೆಲ್ಲವೂ ಅಲ್ಲಿ ನಡೆಯಿತು. ಗೌಡರ ಗೃಹ ಪ್ರವೇಶಕ್ಕೆ ಮೊದಲು ವಾಸ್ತು ಪ್ರಕಾರ ಅದನ್ನು ಸಜ್ಜುಗೊಳಿಸಿದ್ದು ಅವರ ಮಗ ಎಚ್.ಡಿ. ರೇವಣ್ಣ. ವಾಸ್ತು ವಿಚಾರದಲ್ಲಿ ರೇವಣ್ಣನವರಷ್ಟು ಪರಿಣಿತರು ಇನ್ನೊಬ್ಬರಿಲ್ಲ ಎನ್ನುವುದು ವಿಧಾನ ಸೌಧದ ಮೊಗಸಾಲೆಯಲ್ಲಿ ಅಡ್ಡಾಡುವವರೆಲ್ಲರ ಅಭಿಮತ. ಗೌಡರು ಪ್ರಧಾನಿಯಾಗಿ ದೆಹಲಿಗೆ ಹೋದಾಗ ಇಲ್ಲಿ ಸಿಎಂ ಆದವರು ಜೆ.ಎಚ್.ಪಟೇಲರು. ಆದರೆ ಅವರಿಗೆ ಕಾವೇರಿ ವಾಸ್ತವ್ಯದ ಯೋಗ ಒಲಿಯಲೇ ಇಲ್ಲ. ಕಾರಣ ರೇವಣ್ಣ ಆ ಮನೆಯಲ್ಲೇ ತಾವು ಇರಲು ನಿರ್ಧರಿಸಿದ್ದು. ಅದಕ್ಕೆ ಕಾರಣ ವಾಸ್ತು ಪ್ರಕಾರ ಕಾವೇರಿ ಪ್ರಶಸ್ತ ಎಂಬುದು ರೇವಣ್ಣನವರಿಗೆ ಮನವರಿಕೆಯಾಗಿದ್ದು.

CM Siddaramaiah infront of vidhanasoudha

ಅಲ್ಲಿಂದ ಇಲ್ಲೀವರೆಗೂ ಸಿಎಂ ಆದವರು ಆ ಮನೆಗೆ ಬರುವ ಪೂರ್ವದಲ್ಲಿ ವಾಸ್ತು ಪ್ರಕಾರ ಒಂದಿಷ್ಟು ದುರಸ್ತಿ ಮಾಡಿಸಿಕೊಂಡೇ ಒಳಕ್ಕೆ ಕಾಲಿಡುವುದು ಒಂದು ಪರಂಪರೆ ಎಂಬಂತೆ ನಡೆದುಕೊಂಡು ಬಂದಿದೆ. ಹೀಗೆಂದ ಮಾತ್ರಕ್ಕೆ ಎಚ್.ಡಿ. ಕುಮಾರಸ್ವಾಮಿಯವರು ಎರಡು ಬಾರಿ ಸಿಎಂ ಆದರೂ ಅವರು ಜೆಪಿ ನಗರದ ಮನೆ ಮತ್ತು ವೆಸ್ಟ್‌ಎಂಡ್ ಹೋಟೆಲಿಗೆ ತಮ್ಮ ವಾಸ್ತವ್ಯವನ್ನು ಸೀಮಿತಗೊಳಿಸಿಕೊಂಡರು. ಇದಕ್ಕೂ ಮೊದಲು ರಾಮಕೃಷ್ಣ ಹೆಗಡೆಯವರು ಸಿಎಂ ಆಗಿದ್ದ ಕಾಲದಲ್ಲಿ ಅವರು ಸರ್ಕಾರಿ ಬಂಗಲೆಯನ್ನು ವಾಸಕ್ಕೆ ಬಳಸಲಿಲ್ಲ, ಬದಲಿಗೆ ರಾಜಮಹಲ್‍ನಲ್ಲಿರುವ ತಮ್ಮ ಸ್ವಂತ ಮನೆಯನ್ನೇ ಸಿಎಂ ಅಧಿಕೃತ ನಿವಾಸವನ್ನಾಗಿಸಿಕೊಂಡಿದ್ದರು. ದೇವರಾಜ ಅರಸು ಅವರ ಅಧಿಕೃತ ನಿವಾಸ ಬಾಲಬ್ರೂಯಿ ಅತಿಥಿ ಗೃಹವಾಗಿತ್ತು. ಇದುವರೆಗಿನ ದಾಖಲೆ ತೆಗೆದರೆ ಕವೇರಿಯಲ್ಲಿ ವಾಸವಿದ್ದವರೆಲ್ಲರೂ ಗಣ್ಯಾತಿಗಣ್ಯರೇ. ಅವರ ವಾಸದ ಅವಧಿಯಲ್ಲಿ ಆ ಗೃಹ ಅಗತ್ಯಕ್ಕಿಂತ ಹೆಚ್ಚು ಸುಸಜ್ಜಿತವಾಗಿತ್ತೆನ್ನುವುದು ಎಲ್ಲ ಬಲ್ಲ ಸಂಗತಿ. ಹೀಗಿದ್ದೂ ಯಡಿಯೂರಪ್ಪ ವಾಸ್ತು ಪ್ರಕಾರ ಅನುಕೂಲ ಕಲ್ಪಿಸಿಕೊಂಡು ನಂತರದಲ್ಲಿ ತೆರವು ಮಾಡಿದ ಕಾವೇರಿಯಲ್ಲಿ ಮತ್ತೆ ದುರಸ್ತಿ ಕಾರ್ಯ ನಡೆಯಿತು ಎಂದರೆ ಸಾರ್ವಜನಿಕ ಬೊಕ್ಕಸಕ್ಕೆ ಕನ್ನ ಹಾಕಿದಂತೆ. ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ ಎಂದಂತೆ!‌

ಇದನ್ನೂ ಓದಿ: ಮೊಗಸಾಲೆ ಅಂಕಣ: ವಿರೋಧಿಗಳು ಒಟ್ಟು ಸೇರುವುದೇ ಈಗ ಬಲು ತುಟ್ಟಿ ಪ್ರಶ್ನೆ

ಸನಾತನ ಧರ್ಮವನ್ನು ನಾಶ ಮಾಡಬೇಕೆಂಬ ಮತ್ತು ಅದನ್ನು ಯಥಾಸ್ಥಿತಿಯಲ್ಲಿ ಉಳಿಸಿಕೊಳ್ಳಬೇಕೆಂಬ ವಾಕ್ಸಮರ ದೇಶದ ಉದ್ದಗಲಕ್ಕೆ ಕಾಳ್ಗಿಚ್ಚಿನಂತೆ ಹಬ್ಬುತ್ತಿದೆ. ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಸನಾತನ ಧರ್ಮ ಎನ್ನುವುದು ಸಾಂಕ್ರಾಮಿಕ ಪಿಡುಗಾಗಿದ್ದು ಅದನ್ನು ನಾಶ ಮಾಡಬೇಕಿದೆ ಎಂದಿದ್ದಾರೆ. ಅವರದೇ ಡಿಎಂಕೆ ಸಂಸದ ಡಿ.ರಾಜಾ ಆ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ತಮ್ಮ ಮಗ ಉದಯನಿಧಿ ಹೇಳಿದ್ದರಲ್ಲಿ ತಪ್ಪೇನೂ ಇಲ್ಲ ಎಂಬ ವಕೀಲಿ ನಡೆಸಿದ್ದಾರೆ. ಸನಾತನ ಧರ್ಮದ ವಿಚಾರವನ್ನು ಪ್ರಧಾನಿ ನರೇಂದ್ರ ಮೋದಿ ಗಂಭೀರವಾಗಿ ಪರಿಗಣಿಸಿ ತಮ್ಮ ಸಂಪುಟದ ಸಚಿವರಿಗೆ ಧರ್ಮ ರಕ್ಷಣೆ ಜವಾಬ್ದಾರಿ ವಹಿಸಿದ್ದಾರೆ. ಎಂಥ ವಿಚಾರದಲ್ಲೂ ತಕ್ಷಣದಲ್ಲಿ ಪ್ರತಿಕ್ರಿಯೆ ನೀಡದ ಪ್ರಧಾನಿ ಈ ವಿಚಾರದಲ್ಲಿ ತೆಗೆದುಕೊಂಡಿರುವ ನಿಲುವು ನೋಡಿದರೆ ಮುಂಬರಲಿರುವ ಲೋಕಸಭಾ ಚುನಾವಣೆಯಲ್ಲಿ ಇದೂ ಒಂದು ಮತಗಳಿಕೆ ವಿಷಯ ಆಗಬಹುದೇ ಎಂಬ ಅನುಮಾನ ಮೂಡುತ್ತಿದೆ.

ಕರ್ನಾಟಕದ ಸಚಿವರಾದ ಜಿ.ಪರಮೇಶ್ವರ ಮತ್ತು ಪ್ರಿಯಾಂಕ್ ಖರ್ಗೆ, ಸನಾತನ ದರ್ಮದ ವಿಚಾರದಲ್ಲಿ ಬಾಯಿಬಿಟ್ಟು ಬಣ್ಣಗೇಡಾಗುವ ಸೂಚನೆ ಇದೆ. ಈ ವಿಚಾರದಲ್ಲಿ ಯಾರೂ ಮಾತಾಡತಕ್ಕದ್ದಲ್ಲ ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಅಪ್ಪಣೆ ಕೊಡಿಸಿದ್ದಾರೆ. ಈ ಸಚಿವರಿಬ್ಬರೂ ತಾವು ಹಾಗೆ ಹೇಳೇ ಇಲ್ಲ ಎಂದು ಸಮಜಾಯಿಶಿ ನೀಡುವ ಯತ್ನ ನಡೆಸಿದ್ದಾರೆ. ಸಿದ್ದರಾಮಯ್ಯ ಮಾತ್ರ ತುಟಿಪಿಟಿಕ್ ಎನ್ನದೆ ಕಾವೇರಿಯಲ್ಲಿ ವಾಸ್ತವ್ಯ ಹೂಡಿ ಮುಂದಿನ ರಾಜಕೀಯದ ಲೆಕ್ಕಾಚಾರ ಹಾಕುತ್ತಿದ್ದಾರೆ.

ಇದನ್ನೂ ಓದಿ: ಮೊಗಸಾಲೆ ಅಂಕಣ: ರಾಜ್ಯ ಬಿಜೆಪಿ ನಾಯಕರ ಮೇಲೇಕೆ ಮೋದಿ ಕೆಂಡ ಕೋಪ?

Exit mobile version