Site icon Vistara News

ಮೊಗಸಾಲೆ ಅಂಕಣ: ಬಿಜೆಪಿಯಲ್ಲಿ ನಾಯಕರಿಲ್ಲ, ಕಾಂಗ್ರೆಸ್‌ನಲ್ಲಿ ನಾಯಕರಿದ್ದರೂ ಸುಖವಿಲ್ಲ!

congress bjp

ರಾಜ್ಯದ 28 ಲೋಕಸಭಾ ಸ್ಥಾನಗಳ ಪೈಕಿ 20ಕ್ಕೆ ಕಡಿಮೆ ಇಲ್ಲದಂತೆ ಗೆದ್ದೇಗೆಲ್ಲುವ ಛಲದಲ್ಲಿ ಕರ್ನಾಟಕದ ಆಡಳಿತ ಸೂತ್ರ ಹಿಡಿದಿರುವ ಪ್ರದೇಶ ಕಾಂಗ್ರೆಸ್ ಪಕ್ಷ ಮತ್ತು ಅದರದೇ ಸರ್ಕಾರ ಮುನ್ನುಗ್ಗುತ್ತಿದ್ದರೆ 2019ರ ಲೋಕ ಸಭಾ ಚುನಾವಣೆಯಲ್ಲಿ 28 ಸೀಟು ಗೆದ್ದು ತಾನುಂಟೋ ಮೂರು ಲೋಕವುಂಟೋ ಎಂದು ಬೀಗಿದ್ದ ಭಾರತೀಯ ಜನತಾ ಪಕ್ಷ ಸಣ್ಣ ಗಾಳಿಗೂ ಅದುರುವ ಗೆದ್ದಲು ಹಿಡಿದ ಮರದಂತೆ ಮುಲುಗುತ್ತಿದೆ. 2024ರ ಮೇ ತಿಂಗಳ ಮೂರನೇ ವಾರದ ಹೊತ್ತಿಗೆ ಹೊಸ ಲೋಕಸಭೆ ಅಸ್ತಿತ್ವಕ್ಕೆ ಬರಬೇಕಿದೆ. ಅದಕ್ಕೂ ಪೂರ್ವದ ಚುನಾವಣೆಯಲ್ಲಿ ತನ್ನ ಕೊಡುಗೆ ಎಷ್ಟು ಸ್ಥಾನ ಎಂಬ ವಿಚಾರದಲ್ಲಿ ರಾಜ್ಯ ಬಿಜೆಪಿ ಏನನ್ನೂ ಹೇಳಲಾಗದ ದುರ್ಬಲ ಸ್ಥಿತಿಯಲ್ಲಿದೆ.

ಮೇ 13ರಂದು ರಾಜ್ಯ ಬಿಜೆಪಿ ತನ್ನ ಕೈಲಿದ್ದ ಸರ್ಕಾರವನ್ನು ಸ್ವಯಂಕೃತಾಪರಾಧಕ್ಕೆ ತೆತ್ತ ತಲೆದಂಡವೋ ಎಂಬಂತೆ ಹಸ್ತಾಂತರಿಸಿತು. ಆಡಳಿತ ಪಕ್ಷವಿರುವ ವಿಧಾನ ಸಭೆಯಲ್ಲಿ ಅಧಿಕೃತ ವಿರೋಧ ಪಕ್ಷವೊಂದು ಇರಬೇಕು ಎನ್ನುವುದು ಸಾಂವೈಧಾನಿಕ ನಿಯಮ. ಅಧಿಕೃತ ವಿರೋಧ ಪಕ್ಷದ ಮಾನ್ಯತೆ ಪಡೆಯಲಾಗದಂತೆ ಸದಸ್ಯ ಬಲದ ಕೊರತೆಯಿದ್ದಲ್ಲಿ ಅದು ಬೇರೆ ಮಾತು. ಕರ್ನಾಟಕ ವಿಧಾನ ಸಭೆಯಲ್ಲಿ ಆ ಪರಿಸ್ಥಿತಿ ಇಲ್ಲ, 66 ಬಿಜೆಪಿ ಶಾಸಕರ ಆಯ್ಕೆಯೊಂದಿಗೆ ಆ ಅರ್ಹತೆ ಆ ಪಕ್ಷಕ್ಕೆ ಇದೆ. ವಿರೋಧ ಪಕ್ಷದ ನಾಯಕರಾದವರಿಗೆ ಕ್ಯಾಬಿನೆಟ್ ದರ್ಜೆ ಸಚಿವರ ಸ್ಥಾನಮಾನವಿರುತ್ತದೆ. ಗೂಟದ ಕಾರು, ಬಂಗಲೆ, ಆಪ್ತ ಕಾರ್ಯದರ್ಶಿ, ಆಳುಕಾಳು, ಭತ್ಯೆ ಇತ್ಯಾದಿ ಇತ್ಯಾದಿ ಸಕಲವೂ ಕಾಲ ಬುಡದಲ್ಲಿ ಬಂದು ಬೀಳುತ್ತವೆ. ಬಿಜೆಪಿ ಆಯ್ಕೆ ಮಾಡಿಕೊಳ್ಳುವ ಶಾಸಕರೊಬ್ಬರಿಗೆ ಇದನ್ನು ನೀಡಲು ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ ಅವರೇನೋ ಸಿದ್ಧವಾಗಿದ್ದಾರೆ. ಆದರೆ ಅದನ್ನು ಸ್ವೀಕರಿಸುವ ಲಕ್ಷಣವೇ ಬಿಜೆಪಿಯಲ್ಲಿ ಐದು ತಿಂಗಳ ಬಳಿಕವೂ ಕಾಣಿಸುತ್ತಿಲ್ಲ. ಇದನ್ನು ಯಾವ ಪದ ಬಳಸಿ ವರ್ಣಿಸಬೇಕೋ ಗೊತ್ತಾಗುತ್ತಿಲ್ಲ.

ನಿಮ್ಮ ಪಕ್ಷದ ನಾಯಕ ಯಾರು ಎಂದು ಮುಖ್ಯಮಂತ್ರಿಯಾದಿಯಾಗಿ ಸಚಿವರು ಆಡಳಿತ ಪಕ್ಷದ ಶಾಸಕರಿಂದ, ವಕ್ತಾರರಿಂದ ವ್ಯಂಗ್ಯವಾಗಿ ತಿವಿಸಿಕೊಂಡಿರುವ ರಾಜ್ಯ ಬಿಜೆಪಿ ನಾಯಕರು ಅವಮಾನದಲ್ಲಿ ಅಧೋಮುಖಿಗಳಾಗಿದ್ದಾರೆ. ತೆನಾಲಿ ರಾಮನಂತೆ ಮುಖಕ್ಕೆ ಮಡಿಕೆ ಕವಿಚಿಕೊಂಡು ಓಡಾಡುವಂಥ ಹೀನಾಯ ಸ್ಥಿತಿ ಬಿಜೆಪಿ ನಾಯಕರದು. ಬಿಜೆಪಿ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡಿರುವ ಕಾಂಗ್ರೆಸ್ಸಿಗರು “ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ಯಾರು” ಎಂದು ಕೇಳುವುದನ್ನೇ ಕೈಬಿಟ್ಟಿದ್ದಾರೆನಿಸುತ್ತದೆ. ಹೀಗನ್ನಿಸಲು ವಿಧಾನ ಸಭೆ ಅಧಿವೇಶನ ಮುಂದೂಡಿಕೆಯಾದ ತರುವಾಯದಲ್ಲಿ ಈ ಪ್ರಶ್ನೆ ಕಾಂಗ್ರೆಸ್ ವಲಯದಿಂದ ಕೇಳಿಬಂದಿಲ್ಲ ಎನ್ನುವುದು ಕಾರಣ!

ವಿಧಾನ ಸಭೆಯದೇ ಸ್ಥಿತಿ ವಿಧಾನ ಪರಿಷತ್‍ನದು ಕೂಡಾ. ಅಲ್ಲಿಯೂ ಅಧಿಕೃತ ವಿರೋಧ ಪಕ್ಷವಾಗುವ ಸ್ಥಾನಬಲ ಕಮಲ ಪಡೆಯಲ್ಲಿದೆ. ಸದನದ ಸಭಾಪತಿಯಾಗಿ ಇನ್ನೂ ಮುಂದುವರಿದಿರುವ ಬಸವರಾಜ ಹೊರಟ್ಟಿ ಸ್ವತಃ ಬಿಜೆಪಿಯಿಂದ ಆಯ್ಕೆಯಾಗಿರುವವರು. ಸದನದಲ್ಲಿ ತನ್ನ ನಾಯಕನನ್ನು ಬಿಜೆಪಿ ಹೆಸರಿಸಿದರೆ ಕ್ಯಾಬಿನೆಟ್ ದರ್ಜೆ ಸ್ಥಾನಮಾನದೊಂದಿಗೆ ಅಧಿಕೃತ ಮನ್ನಣೆ ನೀಡಲು ಅವರು ತಯಾರಿದ್ದಾರೆ. ಆದರೆ ಆ ಗೌರವವನ್ನು ಸ್ವೀಕರಿಸುವ ಮುಖ ಯಾವುದು ಎನ್ನುವುದು ವಿಧಾನ ಸಭೆ ರೀತಿಯಲ್ಲೇ ಈ ಸದನದಲ್ಲೂ ನೆನಗುದಿಗೆ ಬಿದ್ದಿದೆ.

siddaramaiah govt

ಬಿಜೆಪಿ ಶಾಸಕಾಂಗ ಪಕ್ಷದ ಕಥೆ-ವ್ಯಥೆ ಇದಾದರೆ ರಾಜ್ಯ ಬಿಜೆಪಿ ಘಟಕದ್ದು ಇನ್ನೊಂದು ರೀತಿಯ ವ್ಯಥೆ ಕಥೆ. ನಳೀನ್ ಕುಮಾರ್ ಕಟೀಲರ ಅಧ್ಯಕ್ಷಾವಧಿ ಪೂರ್ಣಗೊಂಡು ವರ್ಷವೇ ಕಳೆದುಹೋಗಿದೆ. ವಿಧಾನ ಸಭೆ ಚುನಾವಣೆ ದೃಷ್ಟಿಯಿಂದ ಅವರನ್ನು ಅವಧಿ ಪೂರೈಸಿದ ಬಳಿಕವೂ ಕೆಲವು ತಿಂಗಳ ಮಟ್ಟಿಗೆ ಮುಂದುವರಿಸುವ ತೀರ್ಮಾನಕ್ಕೆ ಬಿಜೆಪಿ ಕೇಂದ್ರ ವರಿಷ್ಟರು ಬಂದದ್ದೇನೋ ಸರಿಯಾದ ನಿರ್ಧಾರವೇ ಆಗಿತ್ತು. ಚುನಾವಣೆಯಲ್ಲಿ ಪಕ್ಷ ಸೋತ ಬಳಿಕ ಅದರ ನೈತಿಕ ಹೊಣೆ ಹೊತ್ತು ಕಟೀಲರು ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ ಎಂಬ ಸುದ್ದಿ ತೇಲಿತು. ಆದರೆ ಆ ಸುದ್ದಿಯನ್ನು ನಿರಾಕರಿಸಲಾಯಿತು. ಕಟೀಲರನ್ನೇ ಮುಂದುವರಿಸುವ ತೀರ್ಮಾನಕ್ಕೆ ಬಿಜೆಪಿ ಬಂದರೆ ಅದರ ಬಗ್ಗೆ ತಕರಾರು ಇಲ್ಲ. ಅವರ ಪಕ್ಷ ಅವರ ತೀರ್ಮಾನ ಎನ್ನಬಹುದು. ಆದರೆ ಅವರನ್ನೇ ಮುಂದುವರಿಸಿದ್ದಾಗಿ ಹೇಳಬೇಕಾದ ಹೈಕಮಾಂಡ್ ತನಗೂ ಪಕ್ಷದ ಕರ್ನಾಟಕ ಘಟಕಕ್ಕೂ ಸಂಬಂಧವೇ ಇಲ್ಲ ಎಂಬಂತೆ ಬಾಯಿ ಮುಚ್ಚಿ ಕುಳಿತಿರುವುದು ಇಲ್ಲಸಲ್ಲದ ಊಹಾಪೋಹಗಳಿಗೆ ಸರಕು ಒದಗಿಸಿದೆ.

ಬಿಜೆಪಿ ಕಥೆ ಇದಾದರೆ 135 ಶಾಸಕರ ಭೀಮ ಬಲದೊಂದಿಗೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿಯಾಗಿಲ್ಲ ಎನ್ನುವುದು ಇನ್ನೊಂದು ಕಥೆ ವ್ಯಥೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಹಲವು ಬಗೆಯ ಗೊಂದಲ ಗೋಜಲಿನಲ್ಲಿದೆ. ಕೆಲವು ವಿಚಾರದಲ್ಲಿ ಅದರ ಸ್ಥಿತಿ ಸಿಂಬಳದಲ್ಲಿ ಸಿಕ್ಕುಬಿದ್ದಿರುವ ನೊಣದಂತಾಗಿದೆ. ಆಡಳಿತ ಪಕ್ಷದ ಅನೇಕ ಶಾಸಕರಲ್ಲಿ ಅಸಮಾಧಾನ ಜ್ವಾಲಾಮುಖಿ ಸ್ವರೂಪದಲ್ಲಿದ್ದು ಅಲ್ಲಲ್ಲಿ ಸ್ಫೋಟಿಸಲಾರಂಭವಾಗಿದೆ. ಅಂಥವರ ಅಸಮಾಧಾನಕ್ಕೆ ಕಾರಣ ಹುಡುಕಿ ಕುದಿಯುತ್ತಿರುವ ಮನಸ್ಸನ್ನು ತಣಿಸುವ ಯಾವ ಕೆಲಸವೂ ಆಗುತ್ತಿಲ್ಲ. ಸಿದ್ದರಾಮಯ್ಯನವರ ಸಂಪುಟ ಭರ್ತಿಯಾಗಿದೆ. ಹೌಸ್‍ಫುಲ್ ಎನ್ನುತ್ತರಲ್ಲ ಹಾಗೆ. ಇನ್ನೊಬ್ಬರನ್ನು ಸಚಿವ ಸ್ಥಾನಕ್ಕೆ ತರಬೇಕು ಎಂದಾದರೆ ಒಳಗಿರುವ ಒಬ್ಬರನ್ನು ಹೊರಕ್ಕೆ ಅಟ್ಟಬೇಕಾಗುತ್ತದೆ. ಸಚಿವ ತಾವಾಗಬೇಕೆಂದು ಕನಸು ಕಂಡಿದ್ದ ಹಲವು ಶಾಸಕರು ಸಂಪುಟದ ಬಾಗಿಲು ಬಂದ್ ಆಗಿರುವ ಕಾರಣ ನಿಗಮ, ಮಂಡಳಿಗಳ ಮೇಲೆ ದೃಷ್ಟಿ ನೆಟ್ಟಿದ್ದಾರೆ. ಆ ನೇಮಕ ವೃಥಾ ವಿಳಂಬ ಆಗುತ್ತಿದೆ ಎನ್ನುವುದು ಅವರ ಅಸಮಾಧಾನ ಹೆಚ್ಚಿಸುತ್ತಿರುವ ಬೆಳವಣಿಗೆ.

ಇದು ಸುಳ್ಳಲ್ಲ. ಸರ್ಕಾರ ರಚನೆಯಾಗಿ ಐದು ತಿಂಗಳು ಕಳೆದು ಹೋಗಿದೆ. ಇದರರ್ಥ ಸಿದ್ದರಾಮಯ್ಯನವರ ಎರಡೂವರೆ ವರ್ಷ ಸಿಎಂಗಿರಿಯಲ್ಲಿ ಐದು ತಿಂಗಳು ಸಂದು ಹೋಗಿದೆ. ಬೋರ್ಡ್ ನಿಗಮಕ್ಕೆ ನೇಮಕವಾಗಿದ್ದರೆ ಅಂಥವರು ಐದು ತಿಂಗಳ ಅಧಿಕಾರ ಅನುಭವಿಸಿರುತ್ತಿದ್ದರು. ಆದರೆ ನೇಮಕದ ಪಟ್ಟಿಯೇ ಅಂತಿಮವಾಗಿಲ್ಲ, ಸನಿಹದಲ್ಲಿ ಆಗುವ ಲಕ್ಷಣವೂ ಇಲ್ಲ. ಸಿದ್ದರಾಮಯ್ಯ ಹಾಗೂ ಡಿಕೆಶಿ ಬಣದಿಂದ ಯಾರೆಲ್ಲ ಇದಕ್ಕೆ ನೇಮಕವಾಗಬೇಕೆನ್ನುವುದು ಅಷ್ಟು ಸುಲಭದಲ್ಲಿ ಇತ್ಯರ್ಥವಾಗುವ ಸಣ್ಣ ಸಮಸ್ಯೆ ಅಲ್ಲ.

siddaramaiah govt

ಕಾಂಗ್ರೆಸ್ ಪಕ್ಷದಲ್ಲಿ 2013ರಕ್ಕೆ ಮೊದಲು ಮುಖ್ಯಮಂತ್ರಿಯಾದವರು ನಿಗಮ ಮಂಡಳಿಗಳ ನೇಮಕದಲ್ಲಿ ಸ್ವತಃ ನಿರ್ಧಾರ ತೆಗೆದುಕೊಳ್ಳುವ ಸ್ವಾತಂತ್ರ್ಯ ಅಧಿಕಾರ ಹೊಂದಿದ್ದರು. ಸಿದ್ದರಾಮಯ್ಯ ಮೊದಲಬಾರಿಗೆ ಸಿಎಂ ಆದಾಗ ಅತ್ಯಂತ ಬಲಿಷ್ಟ ಮುಖ್ಯಮಂತ್ರಿ ಎಂದು ಕರೆಸಿಕೊಂಡಿದ್ದರು. ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿಸುವುದರಿಂದ ಸರ್ಕಾರದೊಳಗೇ ಪರ್ಯಾಯ ಶಕ್ತಿ ಕೇಂದ್ರದ ಹುಟ್ಟಿಗೆ ಅವಕಾಶ ಕಲ್ಪಸಿದಂತಾಗುತ್ತದೆಂಬ; ಇದರಿಂದ ಸರ್ಕಾರದ ಸುಗಮ ಚಲನೆಗೆ ಅಡ್ಡಿ ಆತಂಕ ಎದುರಾಗುತ್ತದೆಂಬ ವಾದ ಮಂಡಿಸಿ ಗೆದ್ದವರು ಸಿದ್ದರಾಮಯ್ಯ. ಅಷ್ಟೆಲ್ಲ ಬಲಿಷ್ಟ ಎನಿಸಿದರೂ ಬೋರ್ಡು-ನಿಗಮಗಳಿಗೆ ಪಕ್ಷದ ಶಾಸಕರು ಕಾರ್ಯಕರ್ತರನ್ನು ನೇಮಿಸುವ ವಿಚಾರದಲ್ಲಿ ಅನಗತ್ಯ ಎನ್ನಬಹುದಾದಷ್ಟು ವಿಳಂಬ ನೀತಿ ಅನುಸರಿಸಿ ಅದಕ್ಕಾಗಿ ಕಾದಿದ್ದವರಲ್ಲಿ ಅಸಮಾಧಾನ ಹೆಚ್ಚಿಸಿದ್ದರು. ಕೊನೆಯಲ್ಲಾದರೂ ಅವರು ನೇಮಕ ನಿರ್ಧಾರ ಮಾಡಿದರೆ ಎಂದರೆ ಇಲ್ಲ ಮಾಡಲಿಲ್ಲ. ಬದಲಿಗೆ ಉಸಾಬರಿಯೇ ತಮಗೆ ಬೇಡವೆಂದು ಕೈಚೆಲ್ಲಿ ಅದನ್ನು ಹೈಕಮಾಂಡ್ ತೀರ್ಮಾನಕ್ಕೆ ಒಪ್ಪಿಸಿದ್ದರು.

ಇದನ್ನೂ ಓದಿ: ಮೊಗಸಾಲೆ ಅಂಕಣ: ಶಾಸಕರ ಸಿಟ್ಟಿನ ನಡುವೆ ಸಬೂಬುಗಳ ತಲಾಶೆ

ಮುಖ್ಯಮಂತ್ರಿ, ಮಂತ್ರಿ ನೇಮಕದಲ್ಲಿ ನೇರ ಪ್ರವೇಶ ಮಾಡುತ್ತಿದ್ದ ಕಾಂಗ್ರೆಸ್ ಹೈಕಮಾಂಡ್‍ನ ಕೈಗೆ ಬಯಸದೇ ಬಂದ ಉಡುಗೊರೆ ಇದಾಯಿತು. ಬೋರ್ಡು ನಿಗಮಗಳಿಗೆ ಕೂಡಾ ಯಾರನ್ನು ನೇಮಿಸಬೇಕು ಯಾರನ್ನು ದೂರವೇ ಇಡಬೇಕೆಂಬ ಅಧಿಕಾರ ಸಿಕ್ಕ ಸಂತೋಷ ಅದರದಾಯಿತು. ಆ ಸಂತೋಷವನ್ನು ಅಂದು ಕೊಟ್ಟ ಸಿದ್ದರಾಮಯ್ಯ ಈಗ ಹೇಗೆ ತಾನೇ ಹಿಂತೆಗೆದುಕೊಳ್ಳುತ್ತಾರೆ. ಹಿಂತೆಗೆದುಕೊಳ್ಳುವ ತೀರ್ಮಾನಕ್ಕೆ ಇವರು ಬಂದರು ಎನ್ನೋಣ ಹೈಕಮಾಂಡ್ ಪರತ್ ಕೊಡುತ್ತದೆಯೇ…ಇಲ್ಲವೇ ಇಲ್ಲ. ಅದೊಂದು ರೀತಿಯಲ್ಲಿ ಸ್ಮಶಾನಕ್ಕೆ ಹೋದ ಹೆಣ, ಹುಂಡಿಗೆ ಬಿದ್ದ ಹಣ ತಿರುಗಿ ಬರೋದು ಕಷ್ಟ ಅಂತಾರಲ್ಲ ಹಾಗೆ.

ಬೋರ್ಡ್ ಕಾರ್ಪೊರೇಷನ್‍ಗೆ ನೇಮಕದ ವಿಚಾರವನ್ನು ಹೈಕಮಾಂಡ್‍ಗೆ ಬಿಡುವುದಾಗಿ ಸಿದ್ದರಾಮಯ್ಯ ಈಗಾಗಲೇ ಹೇಳಿದ್ದಾರೆ. ಮಧ್ಯಪ್ರದೇಶ, ರಾಜಸ್ತಾನ, ಚತ್ತೀಸಘಡ, ತೆಲಂಗಾಣಾ, ಮಿಜೋರಾಂ ವಿಧಾನ ಸಭಾ ಚುನಾವಣೆ ಘೋಷಣೆಯಾಗಿರುವ ಈ ಸಮಯದಲ್ಲಿ ಕರ್ನಾಟಕದ ಈ ಸಮಸ್ಯೆ ಪರಿಹರಿಸುವ ವ್ಯವಧಾನವಾಗಲೀ ಆಸಕ್ತಿಯಾಗಲೀ ಕಾಂಗ್ರೆಸ್ ವರಿಷ್ಟರಲ್ಲಿಲ್ಲ. ನವೆಂಬರ್ ಮೂವತ್ತರವರೆಗೂ ಈ ಸಮಸ್ಯೆಯತ್ತ ಅದು ಕಣ್ಣು ಹಾಯಿಸುವುದಿಲ್ಲ. ಬಿಡುವು ಸಿಗುವುದು ಡಿಸೆಂಬರ್ ತಿಂಗಳಲ್ಲಿ. ಆಗ ಅದು ಮೊದಲಿಗೆ ತೆಗೆದುಕೊಳ್ಳಬೇಕಾದುದು ಸಿದ್ದರಾಮಯ್ಯ ಪಟ್ಟಿ, ಡಿ.ಕೆ. ಶಿವಕುಮಾರ್ ಪಟ್ಟಿಯನ್ನು. ಆದರೆ ಈ ಸಲ ಏಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಪಟ್ಟಿಯೂ ಇದೆ. ಕಾಂಗ್ರೆಸ್‍ನಲ್ಲಿ ಯುದ್ಧ ಮುಂದುವರಿಕೆಗೆ ಇಷ್ಟು ಸಾಕು.

ಇದನ್ನೂ ಓದಿ: ಮೊಗಸಾಲೆ ಅಂಕಣ: ಚುನಾವಣೆಯ ಬಿರುಗಾಳಿಯಲ್ಲಿ ರಾಜಕೀಯದ ಗಿರಿಗಿಟ್ಟಿ

Exit mobile version