Site icon Vistara News

ಮೊಗಸಾಲೆ ಅಂಕಣ: ಸೋನಿಯಾ, ಬಿಎಸ್‌ವೈ ಮನಸ್ಸು ಭಾರ:ಚುನಾವಣೆ ಕಣದಿಂದ ದೂರ

mogasale-column-sonia-gandhi-and-bs-yediyurappa-in-the-final-steps-of-politics

#image_title

ಕಳೆದ ವಾರ ಇಬ್ಬರು ನಾಯಕರ ಚುನಾವಣಾ ರಾಜಕೀಯದಿಂದ ವಿದಾಯ ಪ್ರಕಟಿಸುವ ಭಾಷಣ ಹೀಗೂ ಉಂಟೆ, ಇದೂ ಆಗಬಹುದೆ ಎಂದು ಜನ ಭಾವಿಸುವಂತೆ ಮಾಡಿತು. ಚತ್ತೀಸ್‌ಘಡ ರಾಜ್ಯದ ರಾಯಪುರದಲ್ಲಿ ನಡೆದ ಏಐಸಿಸಿ ಪ್ರತಿನಿಧಿ ಸಭೆಯನ್ನುದ್ದೇಶಿಸಿ ಎಐಸಿಸಿ ಮಾಜಿ ಅಧ್ಯಕ್ಷೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಮಾಡಿದ್ದು ಒಂದು ಭಾಷಣವಾದರೆ, ಇನ್ನೊಂದು ಕರ್ನಾಟಕದ ವಿಧಾನ ಸಭೆಯಲ್ಲಿ ಬಿಜೆಪಿ ನಾಯಕ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾಡಿದ ಭಾಷಣ. ಇಬ್ಬರೂ ರಾಜಕೀಯವಾಗಿ ಪರಸ್ಪರ ವಿರುದ್ಧ ಮುಖದಲ್ಲಿ ನಿಂತವರು. ಆದರೆ ತಮ್ಮ ಮಾತಿಗೆ ಆರಿಸಿಕೊಂಡಿದ್ದು “ಇನ್ನು ಸಾಕು ಈ ಚುನಾವಣಾ ರಾಜಕೀಯ” ಎಂಬ ಸಂದೇಶ ರವಾನಿಸುವ ವಸ್ತುವನ್ನು.

ಲೋಕಸಭೆಗೆ 2004ರಲ್ಲಿ ಚುನಾವಣೆ ನಡೆದಾಗ ಅಟಲ್‌ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರದಲ್ಲಿತ್ತು. ಭಾರತ ಪ್ರಕಾಶಿಸುತ್ತಿದೆ ಎನ್ನುವುದು ಆ ಸರ್ಕಾರದ ಚುನಾವಣಾ ಪೂರ್ವ ಘೋಷಣೆಯಾಗಿತ್ತು. ಗೆದ್ದೇ ಗೆಲ್ಲುತ್ತೇವೆಂಬ ಅತಿಯಾದ ಆತ್ಮವಿಶ್ವಾಸದಲ್ಲಿ ನಿಗದಿತ ಅವಧಿಗೆ ಆರು ತಿಂಗಳು ಮೊದಲೇ ಲೋಕಸಭೆಯನ್ನು ವಿಸರ್ಜಿಸಿ ಚುನಾವಣೆ ಎದುರಿಸುವ ತೀರ್ಮಾನಕ್ಕೆ ಬಂದ ವಾಜಪೇಯಿ, ವ್ಯಕ್ತಿಗತ ರಾಜಕೀಯ ತೀರ್ಮಾನದ ಹಿನ್ನೆಲೆಯಲ್ಲಿ ಅದೇ ಮೊದಲ ಬಾರಿಗೆ ಎಡವಿದ್ದರು. ಲೋಕಸಭೆಗೆ ಚುನಾವಣೆ ನಡೆದಾಗ ಅದರ ಜೊತೆಯಲ್ಲೇ ಇಲ್ಲಿ ಕರ್ನಾಟಕದಲ್ಲೂ ವಿಧಾನ ಸಭೆಗೆ ಚುನಾವಣೆ ನಡೆಸಿದರೆ ಗೆದ್ದು ಬರುವುದು ನೂರಕ್ಕೆ ನೂರು ನಿಜ ಎಂಬ ಅತಿ ಆತ್ಮವಿಶ್ವಾಸದಲ್ಲಿ ಮುಖ್ಯ ಮಂತ್ರಿ ಎಸ್.ಎಂ. ಕೃಷ್ಣ ವಿಧಾನ ಸಭೆ ವಿಸರ್ಜಿಸುವ ತಪ್ಪು ನಿರ್ಧಾರಕ್ಕೆ ಬಂದರು. ಅಲ್ಲಿ ವಾಜಪೇಯಿ ಸರ್ಕಾರ ಇಲ್ಲಿ ಕೃಷ್ಣ ಸರ್ಕಾರ ಜನರಿಂದ ತಿರಸ್ಕೃತಗೊಂಡವು. ವಾಜಪೇಯಿ ಅವರಾಗಲೀ ಕೃಷ್ಣ ಅವರಾಗಲೀ ಮತ್ತೆ ತಾವು ಹೊಂದಿದ್ದ ಸಿಂಹಾಸನಕ್ಕೆ ಬರುವುದು ಸಾಧ್ಯವೇ ಆಗಲಿಲ್ಲ.

ವಾಜಪೇಯಿಯವರನ್ನು ಲೋಕೋತ್ತರ ನಾಯಕ ಎಂದು ಬಿಂಬಿಸುವ ಕೆಲಸವನ್ನು ಆಗ ಅವರ ಸಂಪುಟದಲ್ಲಿ ಸಚಿವರಾಗಿದ್ದ ಕೆಲವರು ಮುಖ್ಯವಾಗಿ ಪ್ರಮೋದ್ ಮಹಾಜನ್ ಕೈಗೆತ್ತಿಕೊಂಡು ವಾಜಪೇಯಿಯವರಿಗೆ ಯೋಚಿಸುವ ಅವಕಾಶವೇ ಇಲ್ಲದಂತೆ ಮಾಡಿದರು. ತಮ್ಮ ಅವಸರದ ನಿರ್ಧಾರದ ಕಾರಣವಾಗಿ ಚುನಾವಣೆಯಲ್ಲಿ ಸೋತು ವಾಜಪೇಯಿಯವರನ್ನು ಮುಳುಗಿಸಿದರಷ್ಟೇ ಅಲ್ಲ ತಾವೂ ಅಷ್ಟರ ಮಟ್ಟಿಗೆ ಮುಳುಗಿದರು. ಇಂಗ್ಲಿಷ್ ಮಾಧ್ಯಮಗಳು ದೇಶದ ನಂಬರ್ ಒನ್ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಎಂದು ಬರೆದಿದ್ದವು. ಇದನ್ನು ನಂಬಿಕೊಂಡ ಕೃಷ್ಣ, ರಾಜ್ಯದ ಮತದಾರರೂ ಹೀಗೇ ಯೋಚಿಸುತ್ತಾರೆಂದು ಭಾವಿಸಿ ಬೇಸ್ತು ಬಿದ್ದರು. ಅವರ ಸಂಪುಟದ ಇಪ್ಪತ್ತಕ್ಕೂ ಹೆಚ್ಚು ಸಚಿವರು ಚುನಾವಣೆಯಲ್ಲಿ ಸೋತು ಮನೆಗೆ ಹೋಗಬೇಕಾಗಿ ಬಂತು. ನಿಜ, ಚುನಾವಣೆ ಎಂದರೆ ಸೋಲುವವರು ಇದ್ದರೆ ಮಾತ್ರವೇ ಗೆದ್ದವರಿಗೆ ಮರ್ಯಾದೆ. ಎದುರಾಳಿ ಸೋತಾಗ ಮಾತ್ರವೇ ಗೆಲುವಿನ ಸುಖ ಪೂರ್ಣವಾಗುವುದು.
ಲೋಕಸಭೆಗೆ 2004ರಲ್ಲಿ ಚುನಾವಣೆ ನಡೆದಾಗ ಬಿಜೆಪಿ ನೇತೃತ್ವದ ಎನ್‌ಡಿಎ ಮುಗ್ಗರಿಸಿ ಕಾಂಗ್ರೆಸ್ ನೇತೃತ್ವದ ಯುಪಿಎ ಅಧಿಕಾರಕ್ಕೆ ಬಂದಾಗ ಸೋನಿಯಾ ಗಾಂಧಿ ಏಐಸಿಸಿ ಅಧ್ಯಕ್ಷೆ. ಕಾಂಗ್ರೆಸ್‌ನ ಚುನಾವಣಾ ಗೆಲುವು ಸೋನಿಯಾ ಪ್ರಧಾನಿಯಾಗುತ್ತಾರೆಂಬ ನಂಬಿಕೆ ಬಲಿಯುವಂತೆ ಮಡಿತ್ತು. ಆದರೆ ಮನಮೋಹನ್ ಸಿಂಗ್ ಪ್ರಧಾನಿಯಾದರು. 2009ರಲ್ಲಿ ಮತ್ತೆ ಚುನಾವಣೆ ನಡೆದಾಗ ಪುನಃ ಗಾದಿಗೆ ಏರಿದ್ದು ಮನಮೋಹನ್ ಸಿಂಗ್‌ರೇ. ಸೋನಿಯಾರಾಗಲೀ, ಅವರ ಮಕ್ಕಳಾಗಲೀ ಅಧಿಕಾರದ ಗದ್ದುಗೆ ಏರಲಿಲ್ಲ. ಆದರೆ ೨೦೧೪ ಮತ್ತು ೨೦೧೯ರ ಚುನಾವಣೆ ಫಲಿತಾಂಶ ಕಾಂಗ್ರೆಸ್ ಈಗಿನ ಹೀನಾಯ ಸ್ಥಿತಿಗೆ ಕನ್ನಡಿಯಗಿದ್ದು ಚುನಾವಣಾ ರಾಜಕೀಯವೇ ಸಾಕೆನ್ನುವಂತೆ ಸೋನಿಯಾರನ್ನು ಹಣ್ಣುಗಾಯಿ ನೀರುಗಾಯಿ ಮಾಡಿದೆ.

ಸುದೀರ್ಘ ಅವಧಿಗೆ ಏಐಸಿಸಿ ಅಧ್ಯಕ್ಷರಾಗಿದ್ದ ಸೋನಿಯಾ, ಈಗ ತಮ್ಮ ಆಜ್ಞಾನುವರ್ತಿ ಮಲ್ಲಿಕಾರ್ಜುನ ಖರ್ಗೆಯವರನ್ನು ಆ ಸ್ಥಾನದಲ್ಲಿ ಕುಳ್ಳಿರಿಸಿದ್ದಾರೆ. ಸೋನಿಯಾರ ಮನಸ್ಸನ್ನು ಅರ್ಥ ಮಾಡಿಕೊಂಡವರಂತೆ ಖರ್ಗೆ ಮುನ್ನಡೆಯುತ್ತಿದ್ದಾರೆ. 2024ರ ಚುನಾವಣೆಯಲ್ಲಾದರೂ ಎನ್‌ಡಿಎಯನ್ನು ಮಣಿಸಿ ಯುಪಿಎ ಅಧಿಕಾರಕ್ಕೆ ಬಂದೀತೆAಬ ನಿರೀಕ್ಷೆಯಲ್ಲಿ ಸೋನಿಯಾ ಭವಿಷ್ಯದತ್ತ ನೋಟವಿಟ್ಟು ಮುಂದೇನು ಎಂಬ ಪ್ರಶ್ನೆಯನ್ನು ತಮಗೆ ತಾವೇ ಕೇಳಿಕೊಂಡಿದ್ದಾರೆ. ನಿಜ, ಸೋನಿಯಾರ ಆರೋಗ್ಯ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ಆರಾಮ ಕುರ್ಚಿ ರಾಜಕೀಯ ಸದ್ಯಕ್ಕಂತೂ ಕೆಲಸಕ್ಕೆ ಬರಲಿಕ್ಕಿಲ್ಲ. ಜನರ ನಡುವೆ ಓಡಾಡಬೇಕು, ಅವರ ದುಃಖ ದುಮ್ಮಾನಗಳಿಗೆ ಕಿವಿಯಾಗಬೇಕು, ಮಳೆ ಛಳಿ ಗಾಳಿ ಬಿಸಿಲು ಎನ್ನದೆ ಹಗಲೂ ರಾತ್ರಿ ನೋಡದೆ ಸಂಚರಿಸಬೇಕು. ಇಷ್ಟು ಮಾಡಿದ ಮತ್ರಕ್ಕೇ ಜನ ಬೆಂಬಲಿಸಿಯಾರೆAಬುದಕ್ಕೆ ಯಾವುದೇ ಭರವಸೆಯೂ ಇಲ್ಲ. ಆದರೆ ಇದನ್ನು ಮಾಡದೆ ಅನ್ಯ ಮಾರ್ಗವಿಲ್ಲ. ಇರುವ ಏಕೈಕ ಮಾರ್ಗವೆಂದರೆ ಸಕ್ರಿಯ ಅಂದರೆ ಚುನಾವಣಾ ರಾಜಕೀಯದಿಂದ ದೂರವೇ ನಿಂತು ಹಾವು ಏಣಿ ಆಟವನ್ನು ನೋಡುವುದು.

ಪ್ರಧಾನಿಯಾಗುವ ಅವಕಾಶ ಕಾಲ ಬಳಿಗೆ ಬಂದರೂ ಸೋನಿಯಾ ಅದನ್ನು ಒಪ್ಪಿಕೊಳ್ಳಲಿಲ್ಲ. ಎರಡನೇ ಬಾರಿಯೂ ಅವರ ಅದೇ ನಿಲುವು ಮುಂದುವರಿಯಿತು. ಮೊದಲ ಬಾರಿ ಮನಮೋಹನ್ ಸಿಂಗ್ ಪ್ರಧಾನಿಯಾದಾಗ ಮಗ ರಾಹುಲ್‌ರ ವಿಚಾರದಲ್ಲಿ ಸೋನಿಯಾ ಮನಸ್ಸು ಏನನ್ನು ಯೋಚಿಸುತ್ತಿತ್ತೋ ಗೊತ್ತಿಲ್ಲ. ಆದರೆ ಮನಮೋಹನ್ ಎರಡನೇ ಬಾರಿಗೆ ಪ್ರಮಾಣ ವಚನ ಸ್ವೀಕಾರಕ್ಕೆ ಹೊರಟಾಗ ತಾಯಿ ಮನಸ್ಸಿನಲ್ಲಿ ಮಗನ ಭವಿಷ್ಯ ಕೊನರಲು ಶುರುವಾಗಿತ್ತು. ಮಗನನ್ನು ಪಕ್ಷದಲ್ಲಿ ಇರದ ಉಪಾಧ್ಯಕ್ಷ ಸ್ಥಾನಕ್ಕೆ ತಂದಿದ್ದು, ಪ್ರಧಾನ ಕಾರ್ಯದರ್ಶಿಯನ್ನಾಗಿ ಮಾಡಿದ್ದು, ಅಂತಿಮವಾಗಿ ಎಐಸಿಸಿ ಅಧ್ಯಕ್ಷ ಸ್ಥಾನದಲ್ಲಿ ಕುಳ್ಳಿರಿಸಿದ್ದೆಲ್ಲವೂ ಭವಿಷ್ಯದ ಪ್ರಧಾನಿ ರಾಹುಲ್ ಎಂದು ಬಿಂಬಿಸುವ ಕಾರ್ಯಕ್ರಮದ ಭಾಗವಾಗಿ. ೨೦೧೪ರ ಚುನಾವಣೆ ಈ ಆಸೆಯನ್ನು ನುಚ್ಚುನೂರು ಮಾಡಿತು. ಈಗ ಆರೋಗ್ಯ ಹದಗೆಟ್ಟಿರುವ ಸೋನಿಯಾ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಣಕ್ಕೆ ಇಳಿಯದಿರುವ ನಿರ್ಧಾರಕ್ಕೆ ಬಂದಿದ್ದಾರೆ. ಅವರು ಲೋಕಸಭೆಯಲ್ಲಿ ಪ್ರತಿನಿಧಿಸುತ್ತಿರುವ ಉತ್ತರ ಪ್ರದೇಶದ ರಾಯ್‌ಬರೈಲಿ ಕ್ಷೇತ್ರದಲ್ಲಿ ಮಗಳು ಪ್ರಿಯಾಂಕಾ ವಡ್ರಾ ಸ್ಪರ್ಧಿಸುವ ಸೂಚನೆ ಇದೆ.

ಯುದ್ಧ ಶುರುವಾಗುವ ಮೊದಲೇ ಶಸ್ತ್ರ ತ್ಯಾಗ ಮಾಡಿದರು ಎಂಬ ಮಾತಿದೆ. ಸೋನಿಯಾರ ನಿರ್ಧಾರವನ್ನು ಈ ಮಾತಿಗೆ ಹೋಲಿಸಿ ವ್ಯಾಖ್ಯಾನಿಸುವ ಕೆಲಸ ನಡೆದಿದೆ. ಇಷ್ಟಕ್ಕೂ ಸೋನಿಯಾ ಸ್ಪರ್ಧಿಸಬೇಕು ಅಥವ ಸ್ಪರ್ಧಿಸಬಾರದು ಎನ್ನುವುದನ್ನು ನಿರ್ಧರಿಸುವುದು ಏಐಸಿಸಿ. ಅವರೇ ನೇಮಿಸಿರುವ ಏಐಸಿಸಿ ಅವರ ಸ್ಪರ್ಧೆಗೆ ಒತ್ತಾಯ ಹೇರುವುದು ಖಚಿತ. ಸೋನಿಯಾ ಈ ಒತ್ತಾಯಕ್ಕೆ ಮಣಿಯುತ್ತಾರಾ, ತಮ್ಮ ನಿಲುವಿಗೇ ಅಂಟಿಕೊಳ್ಳುತ್ತಾರಾ…? ಮುಂದಿನದು ಪರದೆಯ ಮೇಲೆ!


ಇತ್ತ ಬಿ.ಎಸ್. ಯಡಿಯೂರಪ್ಪನವರು ತಮಗೆ ಎಂಭತ್ತು ವಯಸ್ಸಾಗಿದೆ ಎಂದು ನೆನಪಿಸಿಕೊಂಡು ಚುನಾವಣಾ ರಾಜಕೀಯದಿಂದ ಹಿಂದೆ ಸರಿಯುವ ಆದರೆ ಸಕ್ರಿಯ ರಾಜಕಾರಣದಲ್ಲಿ ಮುಂದುವರಿಯುವ ಘೋಷಣೆ ಮಾಡಿದ್ದಾರೆ. ಹಲವು ಅವಧಿಗೆ ತಾವು ಗೆದ್ದು ಬಂದಿರುವ ಶಿಕಾರಿಪುರ ಕ್ಷೇತ್ರದಲ್ಲಿ ಮಗ ಬಿ.ವೈ. ವಿಜಯೇಂದ್ರ ಕಣಕ್ಕೆ ಇಳಿಯಲಿದ್ದಾರೆಂದು ಅಪ್ಪ ಈಗಾಗಲೇ ಪ್ರಕಟಿಸಿದ್ದಾಗಿದೆ. ಯಾವ ಕ್ಷೇತ್ರದಲ್ಲಿ ಯಾರು ಅಭ್ಯರ್ಥಿ ಆಗಬೇಕೆನ್ನುವುದು ಪಕ್ಷದ ಹೈಕಮಾಂಡಿನ ಪರಮಾಧಿಕಾರವೇ ಹೌದಾದರೂ ಅದನ್ನು ಉಲ್ಲಂಘಿಸಿರುವ ಯಡಿಯೂರಪ್ಪ ಪಕ್ಷದಲ್ಲಿ ಸರ್ವ ಮಾನ್ಯರೆನಿಸಿದ್ದಾರೆ. ಕಳೆದ ವಾರ ನಡೆದ ಅವರ “ಹ್ಯಾಪಿ ಬರ್ತ್ ಡೇ” ಕಾರ್ಯಕ್ರಮದಲ್ಲಿ ಚೀಫ್ ಗೆಸ್ಟ್ ಆಗಿದ್ದವರು ಸ್ವತಃ ಪ್ರಧಾನಿ ನರೇಂದ್ರ ದಾಮೋದರ ಮೋದಿ. ಯಾರಿಗುಂಟು ಯಾರಿಗಿಲ್ಲ.

ಪಕ್ಷ ಅಧಿಕಾರಕ್ಕೆ ಬರಲು ಕಾರಣರಾಗಿದ್ದ ಯಡಿಯೂರಪ್ಪ ತಾವೇ ಕಟ್ಟಿ ಬೆಳೆಸಿದ ಪಕ್ಷದ ಸೋಲಿಗೂ ಕಾರಣರಾಗಿದ್ದುದನ್ನು ಬಿಜೆಪಿ ನೆನಪಿಟ್ಟಿಲ್ಲ. ಜಾಣ ಮರೆವು ಅದಕ್ಕಿರುವ ಲಾಭ. ಯಡಿಯೂರಪ್ಪನವರನ್ನು ಮತ್ತೆ ಪಕ್ಷಕ್ಕೆ ಕರೆತಂದು ಪಟ್ಟ ಕಟ್ಟಿದ್ದ ಪಕ್ಷ ಇದೀಗ ವೀರಶೈವ ಲಿಂಗಾಯತ ಮತದಾರರನ್ನು ಮನವೊಲಿಸುವ ಕಾರ್ಯಕ್ರಮದ ಭಾಗವಾಗಿ ಬರ್ತ್ ಡೇ ಆಚರಿಸಿದೆ. ಆ ದಿವಸ ನಾಡಿನ ಪತ್ರಿಕೆಗಳಲ್ಲಿ ಪುಟ ಪುಟ ತುಂಬ ಜಾಹೀರಾತು. ಎಲ್ಲದರಲ್ಲೂ ಯಡಿಯೂರಪ್ಪನವರಿಗೆ ಜೈಕಾರ, ಬೋಪರಾಕು. ಮೊಗಾಂಬೋ ಖುಷ್ ಹುವಾ ಎಂಬಂತೆ ಯಡಿಯೂರಪ್ಪ ಸಹ ಖುಷ್ ಆದರು. ಇದಕ್ಕಿಂತ ಹೆಚ್ಚಿನದಾಗಿ ತಮ್ಮ ಎರಡನೇ ಮಗನ ರಾಜಕೀಯ ಭವಿಷ್ಯದ ಚಕ್ರಕ್ಕೆ ಕೀಲೆಣ್ಣೆ ಲಾಭ ಸಿಕ್ಕಿದೆ ಎನ್ನುವುದು ಅವರಿಗೆ ಪಕ್ಕಾ ನೂರಕ್ಕೆ ನೂರರಷ್ಟು ಮನವರಿಕೆಯಾಗಿದೆ. ಸಂತುಷ್ಟರಾಗಿರುವ ಯಡಿಯೂರಪ್ಪ ರಾಜ್ಯದ ಎಲ್ಲ 224 ಕ್ಷೇತ್ರಗಳಲ್ಲೂ ಪ್ರವಾಸ ಪ್ರಚಾರ ಮಾಡಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುವ ಪಣ ತೊಟ್ಟಿದ್ದಾರೆ.
ಈ ಪ್ರಚಾರಕ್ಕೆ ಅನುಕೂಲವಾಗುವ ಒಂದು ಮಾರ್ಗವಾಗಿ ಯಡಿಯೂರಪ್ಪನವರನ್ನು ಕರ್ನಾಟಕ ವಿಧಾನ ಸಭೆ ಚುನವಣಾ ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿಸುವ ಸಲಹೆಯೊಂದು ದೆಹಲಿಯಲ್ಲಿ ಹೈಕಮಾಂಡ್ ಅಂಗಳದಲ್ಲಿ ಗಿರಕಿ ಹೊಡೆಯುತ್ತಿದೆ. ಅಷ್ಟೆಲ್ಲ ಅಧಿಕಾರವನ್ನು ಯಡಿಯೂರಪ್ಪನವರಿಗೆ ಕೊಟ್ಟರೆ ಅವರನ್ನು ನಿಯಂತ್ರಣದಲ್ಲಿಡುವುದು ಕಷ್ಟ ಎಂಬ ರಾಜ್ಯದ ಕೆಲವು ನಾಯಕರ ಚಾಡಿ ಮಾತಿನ ಕಾರಣವಾಗಿ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನದ ಘೋಷಣೆ ತ್ರಿಶಂಕು ಸ್ಥಿತಿಯಲ್ಲಿ ನೇತಾಡುತ್ತಿದೆ. ಇಂಥ ಹತ್ತಾರು ಘಟ್ಟಗಳನ್ನು ದಾಟಿ ಬಂದಿರುವ ಈ ಅಜ್ಜ, ರಾಜಕೀಯ ಪಟ್ಟು ಹಾಕುವುದರಲ್ಲಿ ನಿಸ್ಸೀಮ. ಅವರೂ ಕೂಡಾ ಚದುರಂಗ ಆಡಬಲ್ಲರು. ಅತ್ತ ಸೋನಿಯಾ ಮಗನಿಗಾಗಿ ಕನವರಿಸುತ್ತಿದ್ದರೆ ಇತ್ತ ಯಡಿಯೂರಪ್ಪ ಕೂಡಾ ಮಗನಿಗಾಗಿ ಕನಸು ಕಾಣುತ್ತಿದ್ದಾರೆ. ಮಕ್ಕಳನ್ನು ಪೋಷಿಸುವುದನ್ನು ಇವರಿಂದ ಕಲಿಯಬೇಕು!

Exit mobile version