ನಾಲ್ಕು ವರ್ಷದ ಹಿಂದೆ ಬಿ.ಎಸ್. ಯಡಿಯೂರಪ್ಪನವರನ್ನು (B.S Yediyurappa) ಮುಖ್ಯಮಂತ್ರಿ ಮಾಡಲೆಂದೇ ತಮ್ಮತಮ್ಮ ಪಕ್ಷದಲ್ಲಿ ಹೊಂದಿದ್ದ ಹುದ್ದೆಯನ್ನು ತ್ಯಜಿಸಿ ಬಿಜೆಪಿ ಜೊತೆ ತಾವು ನಿಂತಿದ್ದಾಗಿ ಹೇಳಿಕೊಂಡಿದ್ದ ಕಾಂಗ್ರೆಸ್/ ಜೆಡಿಎಸ್‍ನ ಸ್ವಯಂ ಘೋಷಿತ “ತ್ಯಾಗ”ರಾಜ ಹದಿನೇಳು ಶಾಸಕರಲ್ಲಿ ಬಹುತೇಕರು ಪುನಃ ಆವಾಗಿನ ಸ್ವರೂಪವೇ ಮರು ಕಳಿಸಬಹುದೇನೋ ಎಂಬ ಭಯಂಕರ ಸುದ್ದಿಗೆ ಕಾರಣರಾಗಿದ್ದಾರೆ. ಅವತ್ತು ಇವರೆಲ್ಲರ ರಾಜೀನಾಮೆ ರಾಜ್ಯದಲ್ಲಿ ರಾಷ್ಟ್ರದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸಿತ್ತು. ಸಾಂವೈಧಾನಿಕ ಕಟ್ಟುಪಾಡುಗಳನ್ನು ಒಡೆದು ಹಾಕಿದ ಘಟನೆ ಇದು ಎಂದು ಜನ ಭಾವಿಸಿದ್ದ ಆ ಸಮಯದಲ್ಲಿ ಪಕ್ಷಾಂತರ ನಿಷೇಧ ಕಾಯ್ದೆಯಡಿಯಲ್ಲಿ (Anti-Defection Law) ಇವರನ್ನೆಲ್ಲ ಅನರ್ಹಗೊಳಿಸುವ ಪ್ರಕ್ರಿಯೆ ಕೂಡಾ ಒಂದು ದೊಡ್ಡ ಪ್ರಹಸನದಂತೆ ನಡೆದು ಹೋಯಿತು.
ರಾಜ್ಯದಲ್ಲಿ ಬಿಜೆಪಿ ಈಗ ಅಧಿಕಾರ ಕಳೆದುಕೊಂಡ ಪಕ್ಷ. ಅಧಿಕಾರವಿರುವ ಪಕ್ಷಗಳತ್ತ ವಾಲುವ ಮನೋಧರ್ಮದ ರಾಜಕಾರಣಿಗಳ ಪ್ರಕಾರ ರಾಜ್ಯದಲ್ಲಿ ಆ ಪಕ್ಷ ಈಗ ಬಂಜೆ ಹಸು. ಬಿಜೆಪಿ ಹಾಲು ಕರೆಯುವ ಹಸುವಾಗಿದ್ದ ನಾಲ್ಕು ವರ್ಷದ ಹಿಂದೆ ಬಂದು ಕೊಟ್ಟಿಗೆ ಸೇರಿಕೊಂಡಿದ್ದ ಎಲ್ಲ ಹದಿನೇಳು “ತ್ಯಾಗ” ರಾಜರ ಪೈಕಿ ಬಹುತೇಕರು ಮರಳಿ ಗೂಡನ್ನು ಸೇರಿಕೊಳ್ಳುವ ಸನ್ನಾಹದಲ್ಲಿದ್ದಾರೆ ಎನ್ನುವುದು ಈಗ ರಾಜ್ಯವನ್ನು ಕಂಗಾಲು ಮಾಡುತ್ತಿರುವ ಸುದ್ದಿ.
ತಥಾಕಥಿತ “ತ್ಯಾಗ”ರಾಜರ ಪೈಕಿ ಒಬ್ಬರಾಗಿರುವ ಎಚ್. ವಿಶ್ವನಾಥ್, ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಮನೆ ಮುಂದೆ, ಕಾಂಗ್ರೆಸ್ ಕಚೇರಿ ಎದುರು ನಿಂತು “ಬಾಗಿಲನು ತೆರೆದು ಸೇವೆಯನು ಕೊಡ್ರೋ” ಎಂದು ದುಂಬಾಲು ಬಿದ್ದಿದ್ದಾರೆ. ಸಿಎಂ ಹೋದಲ್ಲಿ ಬಂದಲ್ಲಿ ಅವರೊಂದಿಗೆ ಕ್ಯಾಮೆರಾದಲ್ಲಿ ಕಾಣಿಸಿಕೊಳ್ಳುವ ಒಂದಿಷ್ಟು ಜನರಿದ್ದಾರೆ. ಆ ಸಾಲಿಗೆ ಈಗ ವಿಶ್ವನಾಥ್ ಕೂಡಾ ಸೇರಿದ್ದಾರೆಂಬ ಭಾವನೆ ಮೂಡುವ ರೀತಿಯಲ್ಲಿ ಅವರ ಒಡನಾಟ ಒಡೆದು ಕಾಣಿಸುತ್ತಿದೆ. ವಿಶ್ವನಾಥ್ ಬಣ ಬಿತ್ತುತ್ತಿರುವ ಮಾಹಿತಿ ಪ್ರಕಾರ ಮಗ ಯತೀಂದ್ರ ಮೂಲಕ ತಂದೆ ಸಿದ್ದರಾಮಯ್ಯನವರಿಗೆ ಹತ್ತಿರವಾಗುವ ಯತ್ನವನ್ನು ವಿಶ್ವನಾಥ್ ನಡೆಸಿದ್ದಾರೆ. ತಮ್ಮ ವಿರುದ್ಧ ಸಣ್ಣ ಟೀಕೆ ಮಾಡಿದವರನ್ನೂ ಸಹಿಸದ ಸಿದ್ದರಾಮಯ್ಯ, ವಿಶ್ವನಾಥ್ ಈ ಹಿಂದೆ ಮಾಡಿದ ಭಾನಗಡಿಯನ್ನೆಲ್ಲ ಮರೆತು ಕ್ಷಮಿಸುತ್ತಾರೆಯೇ ಎನ್ನುವ ಪ್ರಶ್ನೆ ಇದ್ದೇ ಇದೆ.
ವಿಶ್ವನಾಥ್ ಪ್ರಸ್ತುತ ವಿಧಾನ ಪರಿಷತ್ ಸದಸ್ಯ. ಅಕ್ಕಿಯ ಮೇಲೆ ಆಸೆ, ನೆಂಟರ ಮೇಲೆ ಪ್ರೀತಿ ಎಂಬಂತೆ ಅವರ ಸ್ಥಿತಿ. ತಾವಾಗಿ ಬಿಜೆಪಿಗೆ ರಾಜೀನಾಮೆ ಕೊಟ್ಟರೆ ಅವರ ಸದಸ್ಯತ್ವ ಪಕ್ಷಾಂತರ ನಿಷೇಧ ಕಾಯ್ದೆಯನ್ವಯ ರದ್ದಾಗುತ್ತದೆ. ಪಕ್ಷವೇ ಅವರನ್ನು ಉಚ್ಚಾಟಿಸಿದರೆ ಸದಸ್ಯತ್ವ ಯಥಾಸ್ಥಿತಿಯಲ್ಲಿ ಮುಂದುವರಿಯುತ್ತದೆ. ತಮ್ಮನ್ನು ಉಚ್ಚಾಟಿಸಲಿ ಎಂದು ಕಂಡ ಕಂಡಲ್ಲಿ ಹರಕೆ ಹೊರುತ್ತಿರುವ ವಿಶ್ವನಾಥ್, ಬಿಜೆಪಿ ನಾಯಕರನ್ನೂ, ಪಕ್ಷದ ನೀತಿ ನಿಲುವುಗಳನ್ನೂ ಎಲ್ಲಕ್ಕಿಂತ ಮಿಗಿಲಾಗಿ ಪ್ರಧಾನಿ ನರೇಂದ್ರ ಮೋದಿಯವರನ್ನೂ ಕಿಚಾಯಿಸುತ್ತ ಟೀಕಿಸುತ್ತ ಖಂಡಿಸುತ್ತ ಪ್ರತಿಕ್ರಿಯೆ ರೂಪವಾಗಿ ತಮ್ಮನ್ನು ಪಕ್ಷದಿಂದ ಉಚ್ಚಾಟಿಸಿದ ಸುದ್ದಿ ಬರಬಹುದೆಂದು ಚಾತಕ ಪಕ್ಷಿಯಂತೆ ಒಂದೆರಡು ವರ್ಷದಿಂದ ಕಾಯುತ್ತಲೇ ಇದ್ದಾರೆ. ವಿಶ್ವನಾಥರ ಅಂತರಂಗವನ್ನು ಅರ್ಥ ಮಾಡಿಕೊಂಡಿರುವ ಬಿಜೆಪಿ ಅವರನ್ನು ಉಚ್ಚಾಟಿಸದೇ ಸತಾಯಿಸುವ ತೀರ್ಮಾನಕ್ಕೆ ಬಂದಿರುವಂತಿದೆ.
ಉಳಿದಂತೆ ಹಲವು “ತ್ಯಾಗ” ರಾಜರು ಮತ್ತೊಮ್ಮೆ ಹಳೆ ಪಾತ್ರ ಹೊಸ ಪೋಷಾಕು ಎಂಬಂತೆ ಮತ್ತದೇ ಪಾತ್ರ ನಿರ್ವಹಣೆಗೆ ಅಣಿಯಾಗಿರುವಂತಿದೆ. ಈ ಬಾರಿ ಅವರು ಬಿಜೆಪಿಯನ್ನು “ತ್ಯಾಗ” ಮಾಡಲಿದ್ದು ಕಾಂಗ್ರೆಸ್ ಸೇರಿ “ರಾಜ” ರಾಗುವ ಪಥದಲ್ಲಿ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಮ್ಮುಖದಲ್ಲಿ ಅಹವಾಲು ಹಿಡಿದು ಸಾಲುಗಟ್ಟಿ ನಿಂತಿದ್ದಾರೆ ಎನ್ನುವುದು ಅಡಬಡ ಸುದ್ದಿ. ಕೆಪಿಸಿಸಿ ಪ್ರಕಾರ ಪಕ್ಷದ ಸಿದ್ಧಾಂತವನ್ನು ಒಪ್ಪಿ ಬರುವ ಎಲ್ಲರಿಗೂ ಪಕ್ಷದ ದ್ವಾರ ಮುಕ್ತವಾಗಿದೆ. ಸಿದ್ಧಾಂತವನ್ನು ಒಪ್ಪುವುದು ಎಂದರೇನು…? ಹನುಮಂತ ಎದೆ ಬಿರಿದು ಸೀತಾ ಲಕ್ಷ್ಮಣ ಸಮೇತ ರಾಮನನ್ನು ಹೃದಯದಲ್ಲಿ ತೋರಿದಂತೆ ಅಲ್ಲ ಇದು. ಅಷ್ಟೆಲ್ಲ ಕಷ್ಟಪಡಬೇಕಾಗಿಯೂ ಇಲ್ಲ. ಕಾಂಗ್ರೆಸ್ ಸಿದ್ಧಾಂತದಲ್ಲಿ ಮತ್ತು ಅದರ ನಾಯಕತ್ವದಲ್ಲಿ ನಂಬಿಕೆ ಇದೆ ಎಂದರಾಯಿತು. ಕಮ್ಯೂನಿಸ್ಟ್ ಪಕ್ಷಗಳನ್ನು ಹೊರತಾಗಿಸಿ ಎಲ್ಲ ಪಕ್ಷಗಳಲ್ಲೂ ಇದೇ ನಾಟಕ. ಸಿದ್ಧಾಂತದಲ್ಲಿ ನಂಬಿಕೆ ಇದೆ ಎಂದರೆ ಸಾಕು ಕ್ಯೂ ನಿಂತವರ ಎಲ್ಲ ಅಪರಾಧಗಳಿಗೂ ಬಾರಾಕೂನ್ ಮಾಫ್.
ಏತನ್ಮಧ್ಯೆ ಯಾವುದೇ ಕಾರಣಕ್ಕೂ ಬಿಜೆಪಿಯನ್ನು ಬಿಡುವುದಿಲ್ಲ, ರಾಜಕೀಯದಿಂದ ದೂರ ಉಳಿದೇನು ಆದರೆ ಬಿಜೆಪಿ ಬಿಡಲಾರೆ ಎಂಬ ಮಾತು ಬೆಂಗಳೂರಿನ ರಾಜರಾಜೇಶ್ವರಿ ಕ್ಷೇತ್ರದ ಶಾಸಕ ಮುನಿರತ್ನ ನಾಯ್ಡು ಅವರಿಂದ ಬಂದಿದೆ. ಮುನಿರತ್ನ ಹೀಗೆ ಹೇಳುವುದಕ್ಕೆ ಕಾರಣ ಬಿಜೆಪಿ ಮೇಲೆ ಅವರಿಗೆ ಇರುವ ವಿಶ್ವಾಸವಲ್ಲ. ಡಿಕೆಶಿ ಮತ್ತು ಅವರ ತಮ್ಮ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಲೋಕಸಭಾ ಸದಸ್ಯ ಡಿ.ಕೆ. ಸುರೇಶ್ ಜೊತೆ ಮುನಿರತ್ನ ಅವರದು ಹಾವು ಮುಂಗಸಿ ಸ್ನೇಹ! ಮೂವರೂ ಪರಸ್ಪರ ಯಾವತ್ತೂ ರಾಜಕೀಯ ವಿರೋಧಿಗಳು. ತಾವು ಕಾಂಗ್ರೆಸ್ ಒಳಗೆ ಸೇರುವುದಕ್ಕೆ ಅಸಲಿಗೆ ಅಣ್ಣತಮ್ಮ ಬಿಡುವುದಿಲ್ಲ, ಪ್ರಯತ್ನ ಮಾಡಿ ಒಳ ಸೇರಿದರೂ ಅರ್ಧ ಚಂದ್ರ ಪ್ರಯೋಗಕ್ಕೆ ತಾವು ಬಲಿಆಗಬೇಕಾಗುತ್ತದೆ ಎನ್ನುವ ಸ್ಪಷ್ಟ ಅರಿವು ಮುನಿರತ್ನ ಅವರಲ್ಲಿದೆ. ಹಾಗಾಗಿ ಅವರಿಗೆ ಬಿಜೆಪಿ ಬಿಟ್ಟರೆ ಬೇರೆ ಗತಿ ಇಲ್ಲ ಎಂಬಂತಾಗಿದೆ.
ರಾಜಕೀಯವಾಗಿ ತಾವು ಯಾವುದೇ ತೀರ್ಮಾನ ತೆಗೆದುಕೊಳ್ಳುವುದಿದ್ದರೂ ಅದು ಕಾರ್ಯಕರ್ತರ, ಮತದಾರರ ಬೇಕು ಬೇಡ ಅವಲಂಬಿಸಿರುತ್ತದೆಂದು ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಯಲ್ಲಾಪುರದ ಶಾಸಕ ಶಿವರಾಮ ಹೆಬ್ಬಾರರು ಹೇಳಿದ್ದಾರೆ. ಒಗಟಿನಂಥ ತಮ್ಮ ಮಾತಿನ ಮತಿತಾರ್ಥ ಗೊತ್ತಾಗುವವರಿಗೆ ಗೊತ್ತಾಗುತ್ತದೆ ಎನ್ನುವುದು ಹೆಬ್ಬಾರರ ನಿಲುವು ಎನ್ನಬಹುದು. ಯಡಿಯೂರಪ್ಪನವರಿಗಾಗಿ ಕಾಂಗ್ರೆಸ್ ತ್ಯಜಿಸಿ ಬಿಜೆಪಿಗೆ ಬಂದ ಹೆಬ್ಬಾರರು ಆಗ ನಡೆದ ಉಪ ಚುನಾವಣೆಯಲ್ಲಿ ಮೂವತ್ತು ಸಾವಿರಕ್ಕೂ ಅಧಿಕ ಬಹುಮತದೊಂದಿಗೆ ಭರ್ಜರಿ ಜಯ ಗಳಿಸಿದ್ದರು. ಆದರೆ ಮೊನ್ನೆ ಮೊನ್ನೆ ನಡೆದ ಚುನಾವಣೆಯಲ್ಲಿ ಗೆಲುವಿನ ಅಂತರ ತುಸು ಹೆಚ್ಚೂ ಕಡಿಮೆ ಮೂರು ಸಾವಿರಕ್ಕೆ ಕುಸಿಯಿತು. ಕೇತ್ರದಲ್ಲಿ ಎಲ್ಲರೊಂದಿಗೂ ಸ್ನೇಹ ಸಂಬಂಧ ಕಾಪಾಡಿಕೊಂಡು ಬಂದರೂ ಯಾಕೆ ಹೀಗಾಯಿತು ಎನ್ನುವುದಕ್ಕೆ ಅವರ ಬೆಂಬಲಿಗರಲ್ಲೂ ನಿಕರವಾದ ಉತ್ತರವಿಲ್ಲ. ಜಯದ ಮತ ಪ್ರಮಾಣ ಮೂರು ಸಾವಿರಕ್ಕೆ ಕುಸಿದುದು ಕ್ಷೇತ್ರದ ಕೆಲವು ಬಿಜೆಪಿ ಮುಖಂಡರ ಕಾರಣವಾಗಿ ಎನ್ನುವುದು ಹೆಬ್ಬಾರರ ಆರೋಪ. ಕುಸಿದ ಮತ ಗಮನಿಸಿದರೆ ಮುಂದಿನ ಚುನಾವಣೆ ಹೊತ್ತಿಗೆ ಏನೂ ಆಗಬಹುದು ಎಂಬ ಭಯ ಅವರಲ್ಲಿ ಕಾಡುತ್ತಿರುವಂತಿದೆ.
ಬೆಂಗಳೂರು ಯಶವಂತಪುರ ಕ್ಷೇತ್ರದ ಬಿಜೆಪಿ ಶಾಸಕ ಎಸ್.ಟಿ. ಸೋಮಶೇಖರ್ ತಮ್ಮ ಬೆಂಬಲಿಗರೆಲ್ಲರೂ ಕಾಂಗ್ರೆಸ್ ಸೇರುವಂತೆ ಒತ್ತಾಯಿಸುತ್ತಿದ್ದಾರೆ ಎಂದಿದ್ದಾರೆ. ತಮ್ಮನ್ನು ಪಕ್ಷದಿಂದ ಹೊರ ಹಾಕುವ ಮುಹೂರ್ತಕ್ಕೆ ಕ್ಷೇತ್ರದ ಬಿಜೆಪಿ ಮುಖಂಡರು ಕಾರ್ಯಕರ್ತರು ಎದುರು ನೋಡುತ್ತಿದ್ದಾರೆಂಬ ಆರೋಪವನ್ನೂ ಅವರು ಮಾಡಿದ್ದಾರೆ. ಅದೇನೇ ಇರಲಿ, “ತ್ಯಾಗ” ರಾಜರ ಪೈಕಿ ಬಿಜೆಪಿ ತೊರೆದು ಕಾಂಗ್ರೆಸ್ ಕೈ ಹಿಡಿಯುವ ಮೊದಲಿಗ ಸೋಮಶೇಖರ್ ಆಗಬಹುದೆಂಬ ಊಹಾಪೋಹ ಬೆಂಗಳೂರು ನಗರದಲ್ಲಿ ಹೊರ ಬೀಳುತ್ತಿರುವ ಪರಿಸರ ಮಾಲಿನ್ಯಕ್ಕಿಂತ ಜೋರಾಗಿ ಹರಡುತ್ತಿದೆ. ರಾಜಕೀಯದಲ್ಲಿ ಇವತ್ತು ತಾನು ಏನೆಲ್ಲ ಆಗಿದ್ದೇನೆಯೋ ಅದೆಲ್ಲವಕ್ಕೂ ಡಿಕೆಶಿಯವರೇ ಕಾರಣ ಪುರುಷ ಎಂದು ಸೋಮಶೇಖರ್ ಶಬ್ದ ನುಂಗದೆ ಪ್ರಶಂಸಿಸಿದ್ದಾರೆ. ಇದನ್ನು ನೋಡಿದರೆ ಕಾಂಗ್ರೆಸ್ ಸೇರುವುದಕ್ಕೆ ಅಗತ್ಯವಿರುವ “ವೀಸಾ” ಅವರಿಗೆ ಸಿಕ್ಕಿರುವಂತಿದೆ. ಇವರಲ್ಲದೆ ಇನ್ನೂ ಕೆಲವರು ಈ ಪಟ್ಟಿಯಲ್ಲಿದ್ದಾರೆ; ಕೆಲವರು ಪಕ್ಷಾಂತರದ ಸಾಧ್ಯತೆ ಇಲ್ಲ ಎಂದಿದ್ದಾರೆ. ಇಲ್ಲ ಎಂದು ರಾಜಕಾರಣಿಗಳು ಹೇಳಿದರೆ ಅದನ್ನು ಅದೇ ಅರ್ಥದಲ್ಲಿ ನೋಡಬೇಕಿಲ್ಲ ಎನ್ನುವುದು ಜನರ ಅನುಭವ.
ಮೇ ತಿಂಗಳ ಹತ್ತರಂದು ನಡೆದ ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ “ತ್ಯಾಗ”ರಾಜರ ಪೈಕಿ ಬಹುತೇಕರನ್ನು ಮತದಾರರು ತಿರಸ್ಕರಿಸಿದ್ದಾರೆ. ಗೆದ್ದ ಕೆಲವರ ಮತಗಳ ಅಂತರ ಅವರಿಗೇ ಗಾಬರಿ ಹುಟ್ಟಿಸಿದೆ. ಬಿಜೆಪಿಯಲ್ಲಿ ಉಳಿದರೆ ಸನಿಹದಲ್ಲಿ ರಾಜಕೀಯ ಭವಿಷ್ಯವಿಲ್ಲ ಎಂಬ ತೀರ್ಮಾನಕ್ಕೆ ಇವರೆಲ್ಲ ಬರಲು ಇದೂ ಒಂದು ಕಾರಣ. ಹಾಗೆ ನೋಡಿದರೆ ವಲಸಿಗರು ಬಿಜೆಪಿಯೊಳಗೆ ತೂರಿಕೊಂಡಿರುವುದು ಮೂಲ ಬಿಜೆಪಿಗರಿಗೆ ಸ್ವಲ್ಪವೂ ಇಷ್ಟವಿಲ್ಲದ ಬೆಳವಣಿಗೆಯಾಗಿತ್ತು ಎನ್ನಲು ಸಾಕಷ್ಟು ಸಾಂದರ್ಭಿಕ ಸಾಕ್ಷ್ಯಗಳಿವೆ. ಯಡಿಯೂರಪ್ಪ ಹಾಕಿದ ಪಟ್ಟಿಗೆ ಬಿಜೆಪಿ ಹೈಕಮಾಂಡ್ ಮಣಿದ ಸಂದರ್ಭದಲ್ಲೇ ಬಿಜೆಪಿ ಶವ ಪೆಟ್ಟಿಗೆಗೆ ಮೊಳೆ ಹೊಡೆಯುವ ಕೆಲಸ ಶುರುವಾಗಿತ್ತು. ಯಡಿಯೂರಪ್ಪ ಹಟದ ಮುಂದೆ ಮೋದಿ ಇಲ್ಲವೇ ಅಮಿತ್ ಶಾ ಅಸಹಾಯಕರಂತೆ ನಿಂತರೆನ್ನುವುದು ಸುಳ್ಳಿನ ಮಾತೇನೂ ಅಲ್ಲ.
ಮೊನ್ನೆ ಮೊನ್ನೆ ನಡೆದ ಚುನಾವಣೆಯಲ್ಲಿ ಮೂಲ ಬಿಜೆಪಿಗರು “ತ್ಯಾಗ”ರಾಜ ಅಭ್ಯರ್ಥಿಗಳ ಪರವಾಗಿ ಕೆಲಸ ಮಾಡಲಿಲ್ಲ ಎಂಬ ದೂರು ವ್ಯಾಪಕವಾಗಿದೆ. ಮೂಲ ಬಿಜೆಪಿಗರ ಪ್ರಕಾರ ವಲಸಿಗರು ಯಾವತ್ತೂ ಪಕ್ಷಕ್ಕೆ ಸ್ಥಿರಾಸ್ತಿಯಾಗುವ ಸಾಧ್ಯತೆ ಇಲ್ಲವೇ ಇಲ್ಲ. ನಾಲ್ಕು ವರ್ಷದ ಹಿಂದೆ ಈ ವಲಸಿಗರನ್ನು ಪಕ್ಷದೊಳಕ್ಕೆ ಸೇರಿಸಿಕೊಂಡಾಗಲೇ ಸೆರಗಿಗೆ ಕೆಂಡ ಕಟ್ಟಿ ಕೊಂಡಂತಾಗಿತ್ತು ಎನ್ನುವುದು ಮೂಲ ಬಿಜೆಪಿಗರ ಅಭಿಮತ. ವಿಧಾನ ಸಭೆ ಚುನಾವಣೆ ಸೋಲಿನ ಗಂಟನ್ನು ಹೊತ್ತುಕೊಂಡೇ ಲೋಕಸಭೆ ಚುನಾವಣೆಯನ್ನು ಬಿಜೆಪಿ ಈಗ ಎದುರಿಸಬೇಕಿದೆ. ಮೋದಿ ಬರುತ್ತಾರೆ, ನಮ್ಮನ್ನು ಗೆಲ್ಲಿಸಿ ವಿಧಾನ ಸಭೆಗೆ ಕಳುಹಿಸುತ್ತಾರೆಂದು ನಂಬಿದ್ದ ಅಭ್ಯರ್ಥಿಗಳಲ್ಲಿ 66 ಜನ ಮಾತ್ರವೇ ತೇಲಿದ್ದಾರೆ. 2018ರಲ್ಲಿ ಬಿಜೆಪಿ ಗೆದ್ದುದು 104 ಸೀಟು. ನಂತರದಲ್ಲಿ ಅದು ಅಧಿಕಾರ ಹಿಡಿಯಲು ಒದಗಿಬಂದವರು “ತ್ಯಾಗ” ರಾಜರು. ಈ ವಲಸಿಗರ ಕಾರಣಕ್ಕಾಗಿ ಮೂಲ ಬಿಜೆಪಿಗರನ್ನು ಪಕ್ಕಕ್ಕೆ ತಳ್ಳಿ ಅಧಿಕಾರ ಅನುಭವಿಸಿದ್ದು ಯಡಿಯೂರಪ್ಪ ಮತ್ತು ನಂತರದಲ್ಲಿ ಬಸವರಾಜ ಬೊಮ್ಮಾಯಿ.
2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಕರ್ನಾಟಕದ 28 ಕ್ಷೇತ್ರದ ಪೈಕಿ 25 ಸೀಟು ಗೆದ್ದುದು ರಾಜಕೀಯ ದಾಖಲೆ. ಕೆಲವೇ ತಿಂಗಳ ಹಿಂದೆ 104 ಸೀಟು ಗೆದ್ದಿದ್ದ ರಾಜ್ಯ ಬಿಜೆಪಿಗೆ ಲೋಕಸಭಾ ಚುನಾವಣೆಯಲ್ಲಿ 170ಕ್ಕಿಂತ ಅಧಿಕ ವಿಧಾನ ಸಭಾ ಕ್ಷೇತ್ರದಲ್ಲಿ ಲೀಡ್ ಸಿಕ್ಕಿದ್ದು ಸ್ಥಳೀಯ ಬಿಜೆಪಿ ಮುಖಂಡರ ತಲೆಯನ್ನು ಮುಂಡದ ಮೇಲೆ ನಿಲ್ಲದಂತೆ ಮಾಡಿತು.ಈಗ ಲೋಕಸಭಾ ಚುನಾವಣೆ ಮತ್ತೆ ಎದುರಾಗಿದೆ. ಯಾರು ಏನೇ ಹೇಳಲಿ ಬಿಜೆಪಿ ಕಂಗಾಲಾಗಿದೆ. ದೆಹಲಿ ವರಿಷ್ಟರಿಗೆ ಕರ್ನಾಟಕ ಬಿಜೆಪಿ ಕಾಲ ಕಸವಾಗಿರುವ ಲಕ್ಷಣ ಸ್ಪಷ್ಟವಾಗಿದೆ. ಹಾಗಿಲ್ಲವಾದರೆ ವಿಧಾನ ಸಭೆಯಲ್ಲಿ ವಿರೋಧ ಪಕ್ಷದ ನಾಯಕನನ್ನು ಹೆಸರಿಸುವುದು ಅದಕ್ಕೆ ಕಷ್ಟವಾಗಬೇಕಿರಲಿಲ್ಲ. ನಳೀನ್ ಕುಮಾರ್ ಕಟೀಲರು ಹೊಂದಿರುವ ಪಕ್ಷದ ಅಧ್ಯಕ್ಷ ಅವಧಿ ಮುಗಿದು ಆರೇಳು ತಿಂಗಳಾಗಿವೆ. ಅಲ್ಲಿ ಯಾರನ್ನು ಕೂರಿಸಬೇಕೆನ್ನುವುದು ಕೂಡಾ ಇತ್ಯರ್ಥವಾಗಿಲ್ಲ. ಇದೆಲ್ಲ ಏನನ್ನು ತೋರಿಸುವ ಬೆಳವಣಿಗೆ…?
ಇದನ್ನೂ ಓದಿ: ಮೊಗಸಾಲೆ ಅಂಕಣ: ಬಾಣಲೆಯಿಂದ ಬೆಂಕಿಗೇ ಬಿದ್ದ ರಾಜ್ಯದ ಮತದಾರ
ಬಿಜೆಪಿಯ ಹೀನಾಯ ಸ್ಥಿತಿಯನ್ನು ಕಾಂಗ್ರೆಸ್ ಪಕ್ಷ ತನ್ನ ಅನುಕೂಲಕ್ಕೆ ಬಳಸಿಕೊಳ್ಳಲು ಮುಂದಾಗಿರುವುದರಲ್ಲಿ ತಪ್ಪೇನೂ ಇಲ್ಲ. ಕಾಂಗ್ರೆಸ್ ಕಳೆದ ಚುನಾವಣೆಯಲ್ಲಿ ಗೆದ್ದಿದ್ದು ಒಂದೇ ಒಂದು ಲೋಕಸಭಾ ಕ್ಷೇತ್ರವನ್ನು. ಈ ಸಲ ಇಪ್ಪತ್ತು ಕ್ಷೇತ್ರ ಗೆದಿಯುವ ಉಮೇದಿನಲ್ಲಿ ಅದು ಮುಂದುವರಿದಿದೆ. ಈ ಅಪೇಕ್ಷಿತ ಜಯ, ಕಾಂಗ್ರೆಸ್‍ಗಿಂತ ಹೆಚ್ಚಾಗಿ ಡಿಕೆಶಿಯವರಿಗೆ ಅಗತ್ಯವಾಗಿದೆ. ಕಾಂಗ್ರೆಸ್ ಆಳ್ವಿಕೆಯ ಮೊದಲರ್ಧ ಪೂರೈಸುವುದರೊಂದಿಗೆ ಸಿದ್ದರಾಮಯ್ಯ ಸ್ಥಾನ ತೆರವು ಮಾಡುತ್ತಾರೆಂದು “ನಂಬಿರುವ” ಡಿಕೆಶಿ ತಾವು ಕನಸಿ ಕನವರಿಸುತ್ತಿರುವ ಸಿಎಂ ಗಾದಿಯನ್ನು ನನಸು ಮಾಡಿಕೊಳ್ಳಲು ಅತ್ಯಧಿಕ ಲೋಕಸಭಾ ಕ್ಷೇತ್ರ ಗೆಲ್ಲುವ ಅನಿವಾರ್ಯ ಸೃಷ್ಟಿಯಾಗಿದೆ. ಇದಕ್ಕೆ ಪೂರಕವಾಗಿ ಬೇರೆ ಪಕ್ಷಗಳಲ್ಲಿ ಅದರಲ್ಲೂ ಮುಖ್ಯವಾಗಿ ಬಿಜೆಪಿಯಲ್ಲಿರುವ ಬಲಾಢ್ಯ ಮುಖಂಡರಿಗೆ ಗಾಳ ಹಾಕುವ ಸಿದ್ಧತೆ ಇದೀಗ “ಆಪರೇಷನ್ ಹಸ್ತ” ಎಂಬಲ್ಲಿಗೆ ಬಂದು ನಿಂತಿದೆ.
ಬಿಜೆಪಿಗೆ ವಲಸೆ ಹೋದ ಕಾಂಗ್ರೆಸ್ಸಿಗರಿಗೆ ಯಾವುದೇ ಕಾರಣಕ್ಕೂ ಪ್ರವೇಶ ಇಲ್ಲ ಎಂದು ಸಿದ್ದರಾಮಯ್ಯ ನಾಲ್ಕು ವರ್ಷದ ಹಿಂದೆ ವಿಧಾನ ಸಭೆಯಲ್ಲೇ ಘೋಷಿಸಿದ್ದರು. ಈಗ ಅರ್ಜಿ ಹಿಡಿದು ನಿಂತಿರುವವರ ವಿಚಾರದಲ್ಲಿ ಸಿದ್ದರಾಮಯ್ಯ ಮೃದುವಾಗುವ ಲಕ್ಷಣ ಕಾಣಿಸುತ್ತಿಲ್ಲ. ಇವರೆಲ್ಲರೂ ಒಳಕ್ಕೆ ಬಂದು ಡಿಕೆಶಿ ಕೈ ಬಲವಾಗುವುದು ಸಿದ್ದರಾಮಯ್ಯ ಅವರಿಗೆ ಇಷ್ಟವಿಲ್ಲ. ಈ ಇಬ್ಬರ ಹಗ್ಗ ಜಗ್ಗಾಟ ತಾರ್ಕಿಕ ಅಂತ್ಯ ಕಾಣಬೇಕಿದ್ದು ಸಖತ್ ಆಶ್ಚರ್ಯ ಹುಟ್ಟು ಹಾಕಿದೆ.
ಇದನ್ನೂ ಓದಿ: ಮೊಗಸಾಲೆ ಅಂಕಣ: ಇರುವೆ ಬಿಟ್ಟುಕೊಂಡ್ರಾ… ಆರಗ ಜ್ಞಾನೇಂದ್ರ?