Site icon Vistara News

ಮೊಗಸಾಲೆ ಅಂಕಣ | ಒಂಬತ್ತು ರಾಜ್ಯದಲ್ಲಿ ಚುನಾವಣೆ: ಸಿಕ್ಕೀತೆ ಮೋದಿ ಮಾತಿಗೆ ಮನ್ನಣೆ?

Today is National Voters Day, what is the significance and purpose of this celebration?

ಮೂರ್ನಾಲ್ಕು ತಿಂಗಳಲ್ಲಿ ಕರ್ನಾಟಕವೂ ಸೇರಿದಂತೆ ಒಂಬತ್ತು ರಾಜ್ಯ ವಿಧಾನ ಸಭೆಗೆ ಚುನಾವಣೆ ನಡೆಯಬೇಕಿದ್ದು ಈಶಾನ್ಯ ಮೂಲೆಯ ಮೂರು ರಾಜ್ಯಗಳಾದ ತ್ರಿಪುರಾ, ಮೇಘಾಲಯ, ನಾಗಾಲ್ಯಾಂಡ್ ಚುನಾವಣೆಗೆ ವೇಳಾಪಟ್ಟಿಯನ್ನು ಚುನಾವಣಾ ಆಯೋಗ ಪ್ರಕಟಿಸಿದೆ. ತ್ರಿಪುರಾದಲ್ಲಿ ಬಿಜೆಪಿ ಆಡಳಿತವಿದೆ. ಇನ್ನೆರಡು ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷದೊಂದಿಗೆ ಕೈ ಜೋಡಿಸಿರುವ ಬಿಜೆಪಿ ಸಮ್ಮಿಶ್ರ ಸರ್ಕಾರವಿದೆ. ಮೂರೂ ವಿಧಾನ ಸಭೆಯ ಸದಸ್ಯ ಸಾಮರ್ಥ್ಯ ತಲಾ ಅರವತ್ತು ಸ್ಥಾನ. ಒಗ್ಗೂಡಿಸಿದರೆ 180 ಸ್ಥಾನ. ಅತ್ಯಂತ ಚಿಕ್ಕ ರಾಜ್ಯಗಳೇ ಆದರೂ ಅವುಗಳ ಭೌಗೋಳಿಕ ಆಯಕಟ್ಟು ಸುಭದ್ರತೆ ದೃಷ್ಟಿಯಿಂದ ಮಹತ್ವದ್ದಾಗಿದೆ. ಮಗ್ಗಲು ಹೊರಳಿದರೆ ಚೀನಾ ಭೂಪ್ರದೇಶ ಈ ರಾಜ್ಯಗಳನ್ನು ಅರ್ಧಚಂದ್ರಾಕೃತಿಯಲ್ಲಿ ಸುತ್ತಿರುವ ಗಡಿ. ಭಾರತದ ಗಡಿಯೊಳಗೆ ಚೀನೀಯರ ವಲಸೆ ಸಮಸ್ಯೆ ಇಲ್ಲ. ಆದರೆ ಬಾಂಗ್ಲಾ ದೇಶ, ಬರ್ಮಾ, ಮಯನ್ಮಾರ್‌ನಂಥ ದೇಶಗಳ ಜನರ ನುಸುಳುವಿಕೆ ದೊಡ್ಡ ತಲೆನೋವು ತಂದಿರುವ ಸಮಸ್ಯೆಯೇ ಆಗಿದೆ. ವಲಸಿಗರನ್ನು ಮತಗಳಿಕೆಗಾಗಿ ಅವಲಂಬಿಸಿರುವ ರಾಜಕಾರಣವೂ ಈ ಮೂರೂ ರಾಜ್ಯಗಳಲ್ಲಿ ಹುಲುಸಾಗಿರುವುದರಿಂದ “ಯಾರು ಹಿತವರು” ಎಂಬ ಪ್ರಶ್ನೆ ಉದ್ಭವಿಸಿದೆ.

ತ್ರಿಪುರಾದಲ್ಲಿ ಎರಡೂವರೆ ದಶಕಕ್ಕೂ ಹೆಚ್ಚು ಕಾಲ ಆಡಳಿತ ನಡೆಸಿದ್ದ ಮಾರ್ಕ್ಸ್‌ವಾದಿ ಕಮ್ಯೂನಿಸ್ಟ್ ಪಕ್ಷ ಆ ರಾಜ್ಯ ವಿಧಾನ ಸಭೆಯಲ್ಲಿ ಪ್ರಮುಖ ವಿರೋಧ ಪಕ್ಷ. ಆಡಳಿತ ಪಕ್ಷ ಬಿಜೆಪಿ 33 ಸ್ಥಾನ ಹೊಂದಿದ್ದರೆ ಸಿಪಿಎಂ ಹದಿನೈದು ಸ್ಥಾನದೊಂದಿಗೆ ಪ್ರಬಲ ಪೈಪೋಟಿ ನೀಡಲು ಸನ್ನದ್ಧವಾಗಿದೆ. ಪಶ್ಚಿಮ ಬಂಗಾಳ ಕೈತಪ್ಪಿ ಹೋದ ಬೆನ್ನಲ್ಲೇ ತ್ರಿಪುರಾ ಕೂಡಾ ಕೈ ಜಾರಿದ್ದು ಅಧಿಕಾರ ಮರಳಿ ಪಡೆಯುವ ನಿಟ್ಟಿನಲ್ಲಿ ಸಿಪಿಎಂ ಶತಾಯಗತಾಯ ಪ್ರಯತ್ನ ನಡೆಸಿದೆ. ಬಿಜೆಪಿಗೂ ತ್ರಿಪುರಾ ಮಹತ್ವದ್ದು. ಈಶಾನ್ಯ ಗಡಿ ಪ್ರದೇಶದಲ್ಲಿ ಬಿಜೆಪಿ ಇನ್ನೂ ಬೇರೂರುತ್ತಿರುವ ಪಕ್ಷ. ಕಳೆದ ಚುನಾವಣೆಯಲ್ಲಿ ತಾನು ತ್ರಿಪುರಾ ಗೆದ್ದುದು ಒಂದು ಆಕಸ್ಮಿಕವಲ್ಲ ಎನ್ನುವುದನ್ನು ಸಾಬೀತು ಮಾಡುವುದಕ್ಕೆ ಈ ಬಾರಿಯೂ ಗೆಲ್ಲುವ ಅಗತ್ಯ ಅದಕ್ಕೆ ಇದೆ. ಬೇರೆ ಯಾವುದೇ ಪಕ್ಷದ ವಿರುದ್ಧ ಸೋಲುವುದು ಬಿಜೆಪಿಗೆ ಅಂಥ ಮುಜುಗರದ ವಿಷಯವಲ್ಲ. ಸೈದ್ಧಾಂತಿಕವಾಗಿ ರಾಜಕೀಯ ಬದ್ಧವೈರಿ ಮಾರ್ಕ್ಸ್‌ವಾದಿಗಳ ಮುಂದೆ ಸೋತು ಮಂಡಿಯೂರುವುದು ಬಿಜೆಪಿ ಪಾಲಿಗೆ ಊಹಿಸಿಕೊಳ್ಳಲೂ ಆಗದ ಸಂಕಟದ ಸಂಗತಿ.

ಆ ರಾಜ್ಯದಲ್ಲಿ ಒಂದಾನೊಂದು ಕಾಲದಲ್ಲಿ ಆಡಳಿತ ಪಕ್ಷವಾಗಿದ್ದ ಕಾಂಗ್ರೆಸ್ ಒಬ್ಬ ಶಾಸಕರನ್ನು ಹೊಂದಿದ್ದು ಆ ಸ್ಥಾನವನ್ನು ಕಾಪಾಡಿಕೊಂಡರೆ ಸಾಕೆಂಬ ಸ್ಥಿತಿಯಲ್ಲಿದೆ. ಪ್ರಾದೇಶಿಕ ಪಕ್ಷ ಐಪಿಎಫ್‍ಟಿ 4 ಸ್ಥಾನ ಹೊಂದಿದೆ. ಏಳು ಸ್ಥಾನ ತೆರವಾಗಿದೆ. ಕಳೆದುಕೊಂಡಿದ್ದನ್ನು ಕಳೆದುಕೊಂಡಲ್ಲೆ ಹುಡುಕ ಹೊರಟಿರುವ ಸಿಪಿಎಂ, ಈಗಾಗಲೇ ಜೋರುಗತಿಯ ಪ್ರಚಾರ ನಡೆಸಿರುವುದು ವರದಿಗಳಿಂದ ಸ್ಪಷ್ಟವಾಗುತ್ತಿದೆ. ಬಿಜೆಪಿಯನ್ನು ಸೋಲಿಸಿದ ತುರಾಯಿಯನ್ನು ತನ್ನ ಮುಡಿಗೇರಿಸಿಕೊಳ್ಳುವ ಅದರ ತವಕ ಮತದಾರರ ಮನಸ್ಸು ತಟ್ಟುವ ಅದರ ಕ್ರಿಯೆಯಲ್ಲಿ ವ್ಯಕ್ತವಾಗುತ್ತಿದೆ.

ನಾಗಾಲ್ಯಾಂಡ್‍ನಲ್ಲಿ ಪ್ರಾದೇಶಿಕ ಪಕ್ಷ ಎನ್‍ಡಿಡಿಪಿ ಹಾಲಿ ವಿಧಾನ ಸಭೆಯಲ್ಲಿ 60 ಸ್ಥಾನದ ಪೈಕಿ 42 ಸ್ಥಾನದೊಂದಿಗೆ ಮೂರನೇ ಎರಡು ಬಹುಮತದಲ್ಲಿದೆ. ಆ ಆಡಳಿತದಲ್ಲಿ ಬಿಜೆಪಿ ಪಾಲುದಾರ ಪಕ್ಷ. ಅದು ಗಳಿಸಿದ್ದು 12 ಸ್ಥಾನ ಮಾತ್ರವೇ ಹೌದಾದರೂ ಆಡಳಿತದ ಭಾಗವಾಗಿ ಎದುರಾಗಿರುವ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರಕ್ಕೆ ತಾಲೀಮು ನಡೆಸಿದೆ. ಸರಳ ಬಹುಮತಕ್ಕೆ ಅಗತ್ಯವಿರುವ 31 ಸ್ಥಾನವನ್ನಾದರೂ ಗೆಲ್ಲುವ ಗುರಿ ಬಿಜೆಪಿಯದು. ನಾಗಾಲ್ಯಾಂಡ್‍ನಲ್ಲಿ ಬಹುತೇಕರ ಮುಖ್ಯ ಆಹಾರ ಗೋಮಾಂಸ. ಮಾಂಸಕ್ಕಾಗಿ ಗೋವುಗಳನ್ನು ಹತ್ಯೆ ಮಾಡುತ್ತಿರುವುದರ ವಿರುದ್ಧ ದೇಶವ್ಯಾಪಿ ಸಮರ ಸಾರಿರುವ ಬಿಜೆಪಿ, ನಾಗಾಲ್ಯಾಂಡ್‍ನಲ್ಲಿ ತನ್ನ ನೀತಿಗೆ ತದ್ವಿರುದ್ಧವಾಗಿರುವ ನಿಲುವಿಗೆ ಬಂದು ನಿಂತಿದ್ದು ಕಳೆದ ಚುನಾವಣೆ ಸಂದರ್ಭದ ವಿಶೇಷವಾಗಿತ್ತು. ರಾಜ್ಯದಲ್ಲಿ ಗೋ ಹತ್ಯಾ ಕಾಯ್ದೆ ಜಾರಿಗೆ ತರುವುದಿಲ್ಲ ಎಂದು ಆ ಸಮಯದಲ್ಲಿ ಮತದಾರರ ಮನಸ್ಸು ಗೆಲ್ಲಲು ರಾಜ್ಯ ಬಿಜೆಪಿ ನಾಯಕರು ಘೋಷಿಸಿದ್ದು ಇನ್ನೂ ನೆನಪಿನಲ್ಲಿ ಹಸಿರಾಗಿರುವ ಅಂಶ.

ಇದನ್ನೂ ಓದಿ | ಮೊಗಸಾಲೆ ಅಂಕಣ | ಹದಗೆಡುತ್ತಿರುವ ಕೇಂದ್ರ-ರಾಜ್ಯ ಸಂಬಂಧ

ಮೇಘಾಲಯದಲ್ಲೂ ಆಹಾರದ ವಿಚಾರ ಕಳೆದ ಚುನಾವಣೆಯಲ್ಲಿ ಸಾರ್ವಜನಿಕ ಚರ್ಚೆಗೆ ಹೂರಣವಾಗಿತ್ತು. ಅಲ್ಲಿ ಪ್ರಾದೇಶಿಕ ಪಕ್ಷ ಎನ್‍ಪಿಪಿ ಜೊತೆ ಬಿಜೆಪಿಯದು ಸಮ್ಮಿಶ್ರ ಸರ್ಕಾರ. ಮೇಘಾಲಯದಲ್ಲಿ ಐದು ವರ್ಷದ ಹಿಂದೆ ತೃಣಮೂಲ ಕಾಂಗ್ರೆಸ್ ಗೆದ್ದುದು ಎಂಟು ಸ್ಥಾನ. ಅದು ಸಣ್ಣ ಸಾಧನೆಯೇನೂ ಅಲ್ಲ. ಪಶ್ಚಿಮ ಬಂಗಾಳದ ಆಚೆಗೂ ತನ್ನ ಹೆಜ್ಜೆ ಗುರುತನ್ನು ಮೂಡಿಸಲು ಟಿಎಂಸಿ ಯತ್ನ ನಡೆಸಿದ್ದು ನಾಯಕಿ ಮಮತಾ ಬ್ಯಾನರ್ಜಿ ಬಿಜೆಪಿಯನ್ನು ಹಿಮ್ಮೆಟ್ಟಿಸುವ; ಮಣಿಸುವ ಸಂಕಲ್ಪದಲ್ಲಿ ಕಣ ಪ್ರವೇಶ ಮಾಡಿದ್ದಾರೆ. “ಕೋಮುವಾದದ ಬಿಜೆಪಿಯನ್ನು ಅಧಿಕಾರದಿಂದ ಹೊರಗಿಡುವ ಛಲ” ಅವರ ಮಾತು ಭಾಷಣ ಹೇಳಿಕೆಗಳಲ್ಲಿ ವ್ಯಕ್ತವಾಗುತ್ತಿದೆ.

ಗುಜರಾತ್, ಹಿಮಾಚಲ ಪ್ರದೇಶ ಚುನಾವಣೆ ಬಿಜೆಪಿ ಪಾಲಿಗೆ ಸಿಹಿ-ಕಹಿ ಅನುಭವ ಕೊಟ್ಟಿದೆ. ಎರಡೂ ರಾಜ್ಯದಲ್ಲಿ ಸಿಹಿಯನ್ನು ಮಾತ್ರವೇ ನಿರೀಕ್ಷಿಸಿದ್ದ ಪಕ್ಷ ಕಹಿ ತಿನ್ನಬೇಕಾಗಿ ಬಂದುದು ಭಾರೀ ಹಿನ್ನಡೆ. ಗುಜರಾತ್‍ನಂತೆ ಹಿಮಾಚಲ ಪ್ರದೇಶದಲ್ಲೂ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ, ಗೃಹ ಸಚಿವ ಅಮಿತ್ ಶಾ ರ್ಯಾಲಿ ಬಳಿಕ ರ್ಯಾಲಿ ನಡೆಸಿದರೂ ಮತದಾರರು ಕಾಂಗ್ರೆಸ್ ಕೈಹಿಡಿದುದು ಈ ಮೂವರೂ ನಾಯಕರಿಗೆ ಅರಗಿಸಿಕೊಳ್ಳಲಾಗದ ಬೆಳವಣಿಗೆ. ಹಿಮಾಚಲ ಪ್ರದೇಶ, ನಡ್ಡಾರ ತೌರು ರಾಜ್ಯ. ರಾಜ್ಯದಲ್ಲಿದ್ದ ಬಿಜೆಪಿ ಸರ್ಕಾರವನ್ನು ಉಳಿಸಿಕೊಳ್ಳಲಾಗದ ಅಧ್ಯಕ್ಷ ಎಂಬ ಮೂದಲಿಕೆ ನಡ್ಡಾರನ್ನು ಹಣ್ಣುಗಾಯಿ ನೀರುಗಾಯಿ ಮಾಡಿದೆ. ಆದರೆ ನಡ್ಡಾರನ್ನು ಬಿಜೆಪಿ ರಾಷ್ಟ್ರೀಯ ನಾಯಕರು ನೆಚ್ಚಿಕೊಂಡಿದ್ದಾರೆ ಎನ್ನುವುದಕ್ಕೆ ಅವರ ಅಧ್ಯಕ್ಷ ಕಾರ್ಯಾವಧಿ 1924ರ ಲೋಕಸಭಾ ಚುನಾವಣೆವರೆಗೂ ವಿಸ್ತರಣೆಯಾಗಿರುವುದು ನಿದರ್ಶನ.

ತ್ರಿಪುರಾ, ಮೇಘಾಲಯ, ನಾಗಾಲ್ಯಾಂಡ್ ಚುನಾವಣೆ ದಿನಾಂಕ ಘೋಷಣೆಯಾದ ದಿನದ ವಿಶೇಷ ಖಂಡಿತಕ್ಕೂ ಅದಾಗಿರಲಿಲ್ಲ. ಪ್ರಧಾನಿ ಮೋದಿಯವರು ಬಿಜೆಪಿ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಾತಾಡುತ್ತ ಮುಸ್ಲಿಂ ಸಮುದಾಯವನ್ನು ಒಳಗೊಂಡು ಮುನ್ನಡೆಯಬೇಕಾದ ಅಗತ್ಯದತ್ತ ಕಾರ್ಯಕರ್ತರ ಮುಖಂಡರ ಗಮನ ಸೆಳೆದಿದ್ದು ದಿನದ ವಿಶೇಷದಲ್ಲಿ ವಿಶೇಷ. “ಸಬ್ ಕಾ ಸಾಥ್, ಸಬ್ ಕಾ ವಿಶ್ವಾಸ್, ಸಬ್ ಕಾ ವಿಕಾಸ್” ಎನ್ನುವುದು ಪ್ರಧಾನಿ ಘೋಷಣೆ. ಅವರು ಆ ಸ್ಥಾನಕ್ಕೆ ಬಂದು ವರ್ಷ ಒಂಬತ್ತಾಗುತ್ತಿದೆ. ಅದಕ್ಕೂ ಮೊದಲು ಹದಿಮೂರು ವರ್ಷ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಅನುಭವ ಅವರ ಕಿಸೆಯಲ್ಲಿದೆ. ಅಧಿಕಾರದಲ್ಲಿ ಸತತ ಎರಡು ದಶಕಕ್ಕೂ ಹೆಚ್ಚು ಅವಧಿ ಪೂರೈಸಿರುವ ಅವರ ಬಾಯಿಂದ ಮುಸ್ಲಿಮರನ್ನು ಒಳಗೊಂಡು ಮುನ್ನಡೆಯುವ ಮಾತು ಬಂದಿರುವುದು ಈಶಾನ್ಯ ರಾಜ್ಯ ಚುನಾವಣೆ ದೃಷ್ಟಿಯಿಂದ ಮಹತ್ವದ ತಿರುವು ಎಂದೇ ವ್ಯಾಖ್ಯಾನಿಸಲಾಗುತ್ತಿದೆ. ಮಹತ್ವದ ತಿರುವು ಎನ್ನುವುದಕ್ಕೆ ಕಾರಣ ಈ ಮೂರೂ ರಾಜ್ಯದ ಮತದಾರರಲ್ಲಿ ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರದು ನಿರ್ಣಾಯಕ ಪಾತ್ರ ಎನ್ನುವುದು. ಮುಸ್ಲಿಮರಂತೆ ಕ್ರಿಶ್ಚಿಯನ್ ಸಮುದಾಯದ ಮುಖ್ಯ ಆಹಾರವೂ ಗೋಮಾಂಸವೇ. ಸ್ಥಳೀಯರ ಆಹಾರ ಸಂಸ್ಕೃತಿ ವಿರುದ್ಧ (ಕಡೇ ಪಕ್ಷ ಚುನಾವಣೆ ಮುಗಿಯುವವರೆಗೆ) ಬಾಯಿ ಬಿಡದಂತೆ ಪಕ್ಷದ ಮುಖಂಡರಿಗೆ, ಸ್ಟಾರ್ ಕ್ಯಾಂಪೈನರ್‌ಗಳಿಗೆ ಬಿಜೆಪಿ ವರಿಷ್ಠರು ತಾಕೀತು ಮಾಡಿರುವುದು ವರದಿಯಾಗಿದೆ. “ಎಲ್ಲರನ್ನೂ ಒಳಗೊಂಡು ಮುನ್ನಡೆಯಬೇಕೆಂಬ” ಪ್ರಧಾನಿ ಮಾತಿನಲ್ಲಿಯೂ ಈ ಸೂಕ್ಷ್ಮವನ್ನು ನಿಚ್ಚಳವಾಗಿ ಗುರುತಿಸಬಹುದಾಗಿದೆ.

ಇದನ್ನೂ ಓದಿ | ಮೊಗಸಾಲೆ ಅಂಕಣ | ಕರ್ನಾಟಕದ ಪ್ರಾದೇಶಿಕ ಪಕ್ಷಗಳು ಮಣ್ಣು ಮುಕ್ಕಿದ ಇತಿಹಾಸ

ರಾಷ್ಟ್ರ ರಾಜಕೀಯಕ್ಕೆ ದೊಡ್ಡ ರೀತಿಯಲ್ಲಿ ಮೋದಿ ಪ್ರವೇಶವಾದುದು 2014ರಲ್ಲಿ. ಬಿಜೆಪಿ/ ಎನ್‍ಡಿಎ ಪ್ರಧಾನ ಮಂತ್ರಿ ಅಭ್ಯರ್ಥಿಯಾಗಿ ದೇಶದ ಗಮನ ಸೆಳೆದ ಮೋದಿ 2014, 2019ರ ಲೋಕಸಭಾ ಚುನಾವಣೆಯನ್ನು ತನ್ನಿಷ್ಟದಂತೆ ಗೆದ್ದರು. ಕೇಂದ್ರದಲ್ಲಿ ಮೂವತ್ತು ವರ್ಷ ಬಿಜೆಪಿ ನೇತೃತ್ವದ ಎನ್‍ಡಿಎ ಇಲ್ಲವೇ ಕಾಂಗ್ರೆಸ್ ನೇತೃತ್ವದ ಯುಪಿಎ ಕಿಚಡಿ ಸರ್ಕಾರವೇ ಇದ್ದ ಸ್ಥಿತಿ ಬದಲಾಗಿದ್ದು ಮೋದಿ ಅಲೆಯ ವಿಶೇಷಗಳಲ್ಲಿ ಒಂದು. ಯಾರ ಹಂಗೂ, ಲಗಾಮೂ ಇಲ್ಲದೆ ಆಡಳಿತ ನಡೆಸುವ ಅವಕಾಶ ಲಭ್ಯವಾಗಿದ್ದು ಮೋದಿಯವರಿಗೆ. 2014 ಮತ್ತು 2019ರ ಲೋಕಸಭಾ ಚುನಾವಣೆ, ಈ ನಡುವಿನ ಅವಧಿಯಲ್ಲಿ ಉತ್ತರ ಪ್ರದೇಶವೂ ಸೇರಿದಂತೆ ವಿವಿಧ ರಾಜ್ಯ ವಿಧಾನ ಸಭೆಗಳಿಗೆ ಚುನಾವಣೆ ನಡೆದಿದೆ. ಆದರೆ ಎಲ್ಲೂ ಬಿಜೆಪಿ ಚುನಾವಣಾ ಪ್ರಕ್ರಿಯೆ ಮುಸ್ಲಿಮರನ್ನಾಗಲೀ, ಕ್ರಿಶ್ಚಿಯನ್ನರನ್ನಾಗಲೀ ಒಳಗೊಂಡಿರಲಿಲ್ಲ ಎನ್ನುವುದು “ಎಲ್ಲರನ್ನೂ ಒಳಗೊಂಡು ಮುನ್ನಡೆಯಬೇಕು” ಎಂಬ ಕಿವಿ ಮಾತಿಗೆ ವಿರುದ್ಧವಾಗಿರುವ ವಿದ್ಯಮಾನ.

ಕೋಳಿ ಮೊದಲೋ ಮೊಟ್ಟೆ ಮೊದಲೋ ಅಥವಾ ವೃಕ್ಷ ಮೊದಲೋ ಬೀಜ ಮೊದಲೋ ಎಂಬ ಜಿಜ್ಞಾಸೆ ಅನಾದಿ ಕಾಲದಿಂದಲೂ ಇದೆ. ಬಿಜೆಪಿಯಲ್ಲಿ ಮುಸ್ಲಿಮರಿಗೆ ಇಲ್ಲವೇ ಕ್ರಿಶ್ಚಿಯನ್ ಸಮುದಾಯದವರಿಗೆ ಟಿಕೆಟ್ ಕೊಡದೇ ಇರುವುದಕ್ಕೆ ಆ ಸಮುದಾಯದ ಕಾರ್ಯಕರ್ತರು ಪಕ್ಷದಲ್ಲಿಲ್ಲ ಎಂಬ ಸಾಮಾನ್ಯ ವಿವರಣೆ ಬಿಜೆಪಿ ವಲಯದಿಂದ ಬರುತ್ತದೆ. ಆ ಸಮುದಾಯದವರ ಪ್ರಕಾರ ತಮ್ಮನ್ನು ಬಿಜೆಪಿ ಒಳಕ್ಕೆ ಬಿಟ್ಟುಕೊಳ್ಳುತ್ತಿಲ್ಲ ಎಂಬ ವಿವರಣೆ ಕೇಳಿಬರುತ್ತದೆ. ಕೇಂದ್ರದ ಬಿಜೆಪಿ ಸರ್ಕಾರದಲ್ಲಿ ಎಂ.ಜೆ. ಅಕ್ಬರ್, ಶಹಾ ನವಾಜ್ ಖಾನ್, ಮುಖ್ತಾರ್ ಅಹಮದ್ ನಖ್ವಿ ಸಚಿವರಾಗಿದ್ದರು. ಈಗ ನಖ್ವಿ ಮಾತ್ರ ಇದ್ದಾರೆ. ಅಸೆಂಬ್ಲಿಗೆ ಟಿಕೆಟ್ ನೀಡಿದರೂ ಅವರು ಗೆಲ್ಲುವುದು ಕಷ್ಟ ಎಂದಾದರೆ ವಿಧಾನ ಪರಿಷತ್, ರಾಜ್ಯಸಭೆಗೆ ಆಯ್ಕೆ ಮಾಡುವ ಅವಕಾಶ ಇದ್ದೇ ಇದೆ. ಆದರೆ ಬಿಜೆಪಿಯಲ್ಲಿ ಅಂಥ ಯೋಚನೆ ಹುಟ್ಟುವುದಕ್ಕೆ ಇನ್ನಷ್ಟು ಕಾಲವೇ ಬೇಕು ಎನಿಸುತ್ತದೆ.

ಹಾಗಂತ ಈ ವಿಚಾರಕ್ಕಾಗಿ ಬಿಜೆಪಿಯನ್ನು ಸಾರಾಸಗಟಾಗಿ ದೂರಲು ಅವಕಾಶವಿಲ್ಲದಂತೆ ತಂತ್ರಗಾರಿಕೆಯ ರಾಜಕೀಯವನ್ನು ಪಕ್ಷ ಮಾಡುತ್ತಿದೆ. ಗೋವಾ ವಿಧಾನ ಸಭೆಗೆ ಚುನಾವಣೆ ನಡೆದಾಗ ಒಟ್ಟು 40 ಸ್ಥಾನದ ಪೈಕಿ ಹನ್ನೆರಡು ಟಿಕೆಟ್‍ಗಳನ್ನು ಕ್ರಿಶ್ಚಿಯನ್ ಸಮುದಾಯಕ್ಕೆ ಬಿಜೆಪಿ ನೀಡಿತ್ತು. ಆದರೆ ಮೋದಿ ಸಂಪುಟದಲ್ಲಿ ದೇಶದಲ್ಲಿ ಅಜಮಾಸು ಮೂರು ಕೋಟಿ ಸಂಖ್ಯೆಯಲ್ಲಿರುವ ಕ್ರಿಶ್ಚಿಯನ್ನರಿಗೆ ಪ್ರವೇಶ ಸಿಕ್ಕಿಲ್ಲ. ಬಿಜೆಪಿ ಸಂಸದೀಯ ಮಂಡಳಿಯಲ್ಲೋ ಅಥವಾ ಚುನಾವಣಾ ಸಮಿತಿಯಲ್ಲೋ ಸಮುದಾಯಕ್ಕೆ ಸ್ಥಾನ ಸಿಕ್ಕಿಲ್ಲ. ಹೀಗಿರುವಾಗ 20 ಕೋಟಿಯಷ್ಟು ಜನಸಂಖ್ಯೆಯುಳ್ಳ ಮುಸ್ಲಿಮರಿಗೆ “ಸಬ್ ಕಾ ಸಾಥ್, ಸಬ್ ಕಾ ವಿಶ್ವಾಸ್, ಸಬ್ ಕಾ ವಿಕಾಸ್” ಘೋಷಣೆಯಲ್ಲಿ ವಿಶ್ವಾಸ ಭರವಸೆ ಮೂಡುವುದಾದರೂ ಹೇಗೆ?

ಇದನ್ನೂ ಓದಿ | ಮೊಗಸಾಲೆ ಅಂಕಣ | ಗಡಿ ತಂಟೆ: ಕೇಂದ್ರದ ತಾರಮ್ಮಯ್ಯ ನೀತಿಯ ಫಲ

ಹೀಗಿದ್ದೂ ಒಂದು ಬಗೆಯ “ಒಳಗೊಳ್ಳುವ ರಾಜಕೀಯ” ಬಿಜೆಪಿಯಲ್ಲಿ ಶುರುವಾಗಿರುವುದನ್ನು ಗಮನಿಸಬೇಕು. ಕೇರಳದಲ್ಲಿ ಪುರಸಭೆ, ನಗರ ಸಭೆ, ನಗರ ಪಾಲಿಕೆಗಳಿಗೆ ಇತ್ತೀಚೆಗೆ ಚುನಾವಣೆ ನಡೆಯಿತು. ಆರು ನೂರು ಜನ ಮುಸ್ಲಿಮರು ಮತ್ತು ಐದು ನೂರು ಜನ ಕ್ರಿಶ್ಚಿಯನ್ನರಿಗೆ ಆ ಪಕ್ಷದ ಟಿಕೆಟ್ ನೀಡಲಾಯಿತು. ಗೆದ್ದವರು ಎಷ್ಟು ಎಂದರೆ ಶೂನ್ಯ ಸಂಪಾದನೆ. ಆದರೆ ತಾನು ಈ ಸಮುದಾಯವನ್ನು ದೂರ ಮಾಡಿಲ್ಲ ಎಂಬ ಸಂದೇಶ ರವಾನಿಸುವುದು ಬಿಜೆಪಿ ಉದ್ದೇಶವಾಗಿತ್ತು ಮತ್ತು ಅದರಲ್ಲಿ ಸಾಕಷ್ಟು ಯಶಸ್ವಿಯೂ ಆಯಿತು. ಮಧ್ಯ ಪ್ರದೇಶದಲ್ಲಿ ಬಿಜೆಪಿ ಸರ್ಕಾರವಿದ್ದು ಶಿವರಾಜ ಸಿಂಗ್ ಚೌಹಾಣ್ ಮುಖ್ಯಮಂತ್ರಿ. ಅಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಇತ್ತೀಚೆಗೆ ನಡೆಯಿತು. ಒಟ್ಟು 6671 ಸ್ಥಾನದಲ್ಲಿ ಬಹುತೇಕ ಬಿಜೆಪಿ ವಶವಾಯಿತು. ಪಕ್ಷದ ಟಿಕೆಟ್ ಪಡೆದ ಮುಸ್ಲಿಮರಲ್ಲಿ 92 ಜನ ಗೆದ್ದರು. ಅಚ್ಚರಿಯ ಬೆಳವಣಿಗೆಯೆಂದರೆ ಆ 92 ಜನರಲ್ಲಿ 25 ಜನ ಮುಸ್ಲಿಮ್ ಅಭ್ಯರ್ಥಿಗಳು ಕಾಂಗ್ರೆಸ್ ಟಿಕೆಟ್ ಪಡೆದು ಕಣದಲ್ಲಿದ್ದ ಹಿಂದೂ ಅಭ್ಯರ್ಥಿಗಳನ್ನು ಸೋಲಿಸಿದರು ಎನ್ನುವುದು! ಬಿಜೆಪಿ ಜೊತೆಗೆ ಹೆಜ್ಜೆ ಹಾಕುವುದಕ್ಕೆ ಅಲ್ಪಸಂಖ್ಯಾತ ಸಮುದಾಯ ಮನಸ್ಸು ಮಾಡಲು ಇಷ್ಟು ಸಾಕೆ? ಅನುಮಾನ. ಈ ವರ್ಷ ನಡೆಯುವ ಒಂಬತ್ತು ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ “ಎಲ್ಲರನ್ನೂ ಒಳಗೊಂಡು ಮುನ್ನಡೆಯುವ” ಮೋದಿ ಮಾತು ಅನುಷ್ಠಾನಕ್ಕೆ ಬಂದುದೇ ಹೌದಾದರೆ ಅದು ಖಂಡಿತವಗಿಯೂ ಹೊಸ ಶಕೆಯೊಂದರ ಉಗಮಕ್ಕೆ ಕರಣವಾಗಬಹುದು.

Exit mobile version