Site icon Vistara News

ಮೊಗಸಾಲೆ ಅಂಕಣ: ಹೆಡೆ ತುಳಿದ ಹಾವಿನಂತಾಗಿರುವ ಬಿ.ಕೆ ಹರಿಪ್ರಸಾದ್‌ ರವಾನಿಸುತ್ತಿರುವ ಸಂದೇಶವೇನು?

bk hariprasad

ಮುಖ್ಯಮಂತ್ರಿಯನ್ನು ಮಾಡುವುದೂ ಗೊತ್ತು, ಇಳಿಸುವುದೂ ಗೊತ್ತು ಎಂಬ ವಿಧಾನ ಪರಿಷತ್ ಕಾಂಗ್ರೆಸ್ ಸದಸ್ಯ ಬಿ.ಕೆ. ಹರಿಪ್ರಸಾದರ (BK Hariprasad) ಮುಚ್ಚುಮರೆ ಇಲ್ಲದ ಆದರೆ ನಿರ್ದಿಷ್ಟ ನಿರ್ಧಾರ ಸಹಿತ ಮಾಡಿರುವ ಬಹಿರಂಗ ಹೇಳಿಕೆ ರಾಜ್ಯದ ಆಡಳಿತಾರೂಢ ಕಾಂಗ್ರೆಸ್‍ನಲ್ಲಿ ತಲ್ಲಣ ತಳಮಳಕ್ಕೆ ಕಾರಣವಾಗಿದೆ. ಹರಿಪ್ರಸಾದ್, ಕರ್ನಾಟಕದಲ್ಲಿ ಆ ಪಕ್ಷದ ಹಿರಿಯ ನಾಯಕರಲ್ಲಿ ಒಬ್ಬರು ಮಾತ್ರವೇ ಅಲ್ಲ ಕಾಂಗ್ರೆಸ್ ಹೈಕಮಾಂಡ್ ಹಂತದಲ್ಲಿ ಗೌರವಾದರಕ್ಕೆ ಪಾತ್ರರಾಗಿರುವ ಅಪರೂಪದ ರಾಜಕಾರಣಿಯೂ ಹೌದೆಂಬ ಕಾರಣಕ್ಕೆ ಅವರ ಹೇಳಿಕೆ ಪಕ್ಷದ ಒಳಗೆ ಅಲ್ಲೋಲಕಲ್ಲೋಲ ಸೃಷ್ಟಿಸಿದೆ. ತಾನಾಡಿದೆ ಎಂದು ಮಾಧ್ಯಮಗಳಲ್ಲಿ ಪ್ರಕಟವಾಗಿರುವ, ಬಿತ್ತರಗೊಂಡಿರುವ ಮಾತುಗಳನ್ನು ಹರಿಪ್ರಸಾದ್ ಅಲ್ಲಗಳೆದಿಲ್ಲ. ಆಡಿರುವ ಪ್ರತಿ ಶಬ್ದಕ್ಕೂ ತಾನು ಬದ್ಧ ಎಂದು ಗಟ್ಟಿ ಧ್ವನಿಯಲ್ಲಿ ಹೇಳುವ ಮೂಲಕ “ಅಂಜುವ ಮಗ ನಾನಲ್ಲ” ಎಂಬ ಸಂದೇಶವನ್ನು ರವಾನಿಸಿದ್ದಾರೆ.

135 ಶಾಸಕ ಬಲದೊಂದಿಗೆ ಅಧಿಕಾರಕ್ಕೆ ಬರುವ ಪೂರ್ವದಲ್ಲಿ ಕಾಂಗ್ರೆಸ್ಸು ಅಧಿಕೃತ ವಿರೋಧ ಪಕ್ಷ. ಸಿದ್ದರಾಮಯ್ಯ (CM Siddaramiah) ವಿಧಾನ ಸಭೆಯಲ್ಲಿ ಹಾಗೂ ವಿಧಾನ ಪರಿಷತ್‍ನಲ್ಲಿ ಹರಿಪ್ರಸಾದ್ ವಿರೋಧ ಪಕ್ಷದ ನಾಯಕ. ಪಕ್ಷ ಅಧಿಕಾರಕ್ಕೆ ಬಂದಾಗ ಡಿ.ಕೆ.ಶಿವಕುಮಾರ್ ಹೆಸರಿನಲ್ಲಿ ಎದುರಾದ ಎಲ್ಲ ಬಗೆಯ ಕಂಟಕವನ್ನೂ ನಿವರಿಸಿಕೊಂಡು ಸಿಎಂ ಖುರ್ಚಿಯನ್ನು ಸಿದ್ದರಾಮಯ್ಯ ಕೈವಶಪಡಿಸಿಕೊಂಡರು. ಮಂತ್ರಿಗಿರಿಗಾಗಿ ಲಾಬಿ ನಡೆಸುವುದಕ್ಕೆ ಶಾಸಕರಿಗೆ ಎಳ್ಳು ಕಾಳಿನಷ್ಟೂ ಅವಕಾಶ ಇಲ್ಲದಂತೆ ಎಲ್ಲ 34 ಸಚಿವ ಸ್ಥಾನವನ್ನೂ ಭರ್ತಿಮಾಡಿ ಜೈಸಿದ ನಾಯಕ ಎನಿಸಿದರು. ಸುದೀರ್ಘ ವರ್ಷದ ರಾಜಕೀಯ ಅನುಭವವುಳ್ಳ ಸಿದ್ದರಾಮಯ್ಯ, ರಾಜಕೀಯ ವಾಸನಾಮುಕ್ತ ರಾಜಕಾರಣಿಯೇನೂ ಅಲ್ಲ. ತಾವು ಕಾಂಗ್ರೆಸ್‍ಗೆ ಸೇರುವ ಹಂತದಲ್ಲಿ ವಿರೋಧಿಸಿದವರು ಯಾರೆಲ್ಲ ಎನ್ನುವುದರ ಸಂಪೂರ್ಣ ಜಾತಕ ಅವರಲ್ಲಿದೆ. ಆ ಜಾತಕದಲ್ಲಿರುವ ಹೆಸರುಗಳಲ್ಲಿ ಹರಿಪ್ರಸಾದ್ ಅವರದು ಒಂದು. ಹಾಗೆಂದೇ ಸಂಪುಟದಲ್ಲಿ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕನಿಗೆ ಸ್ಥಾನ ಸಿಗದಂತೆ ನೋಡಿಕೊಂಡರಷ್ಟೇ ಅಲ್ಲ, “ನನ್ನನ್ನು ತಡವಿಕೊಂಡವರಿಗೆ ಭವಿಷ್ಯವಿಲ್ಲ” ಎಂಬ ಎಚ್ಚರಿಕೆ ರವಾನಿಸುವ ಕೆಲಸವನ್ನೂ ಅಷ್ಟೇ ಬಹಿರಂಗವಾಗಿ ಮಾಡಿದರು.

ಭರ್ಜರಿ ಖಾತೆಯೊಂದಿಗೆ ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದ ಹರಿಪ್ರಸಾದ್ ಹೆಡೆ ತುಳಿದ ಹಾವಿನಂತೆ ಈಗ ಬುಸುಗುಡುತ್ತಿರುವುದಕ್ಕೆ ಮೇಲ್ನೋಟಕ್ಕೆ ಕಾಣಿಸುವ ಕಾರಣವಿದು. ತಮಗಾಗಿರುವ ರಾಜಕೀಯ ಅನ್ಯಾಯಕ್ಕೆ ರಾಜಕೀಯವಾಗಿಯೇ ಸೇಡು ತೀರಿಸಿಕೊಳ್ಳುವ ಛಲ ಅವರಲ್ಲಿ ಮೊಳಕೆಯೊಡೆದಿರುವುದರಲ್ಲಿ ಆಶ್ಚರ್ಯವೇನೂ ಇಲ್ಲ. ಅವರೆಂದೂ ತಮ್ಮ ರಾಜಕೀಯ ಇತಿಹಾಸ ಹೇಳಿಕೊಂಡವರಲ್ಲ. ತಮ್ಮದು 49 ವರ್ಷದ ರಾಜಕೀಯ ಎಂದು ಇತ್ತೀಚೆಗೆ ಹೇಳಿರುವ ಅವರ ಮಾತಿನಲ್ಲಿ ಸಿದ್ದರಾಮಯ್ಯಗಿಂತ (ಅವರದು 40 ವರ್ಷದ ರಾಜಕೀಯ) ತಾವು ಸೀನಿಯರ್ ಎಂಬ ಚುರುಕು ಮುಟ್ಟಿಸುವ ಉದ್ದೇಶ ಇದೆ. ಒಂದು ವರ್ಷ ಕಡಿಮೆ ಅರ್ಧ ಶತಮಾನದ ರಾಜಕೀಯದಲ್ಲಿ ಕರಗತ ಮಾಡಿಕೊಂಡಿರುವ ಪಟ್ಟುಗಳನ್ನು ಒಂದೊಂದಾಗಿ ಬಳಸುವುದಕ್ಕೆ ಸೂಕ್ತ ಮುಹೂರ್ತದ ನಿರೀಕ್ಷೆಯಲ್ಲಿದ್ದಾರೆ.

ಜನತಾ ದಳದಲ್ಲಿದ್ದ ಕಾಲದಲ್ಲಿ ಎಚ್.ಡಿ. ದೇವೇಗೌಡರಿಗೆ ಇರಿಸುಮುರಿಸು ತರಲೆಂದೇ “ಅಹಿಂದ” (ಅಲ್ಪಸಂಖ್ಯಾತರು, ಹಿಂದುಳಿದ ವರ್ಗ, ದಲಿತ) ಸಂಘಟನೆಗೆ ಒತ್ತಾಸೆ ನೀಡಿದ್ದ ಸಿದ್ದರಾಮಯ್ಯ ಕಾಂಗ್ರೆಸ್ ಒಳಕ್ಕೆ ಬಂದು ಅಧಿಕಾರ ಹಿಡಿದ ತರುವಾಯದಲ್ಲಿ ಕುರುಬ ಸಮುದಾಯ ಹೊರತಾಗಿಸಿ ಇತರ ಹಿಂದುಳಿದ ವರ್ಗ, ಜಾತಿಗಳಿಗೆ ನ್ಯಾಯ ಒದಗಿಸುವ ಕೆಲಸ ಮಾಡುತ್ತಿಲ್ಲ ಎಂಬ ವ್ಯಾಪಕ ಟೀಕೆಗಳಿವೆ. ಈ ಟೀಕೆಗಳನ್ನು ಸಮರ್ಥಿಸುವ ರೀತಿಯಲ್ಲಿ ಹರಿಪ್ರಸಾದ್ ಗುಟುರು ಹಾಕಿದ್ದಾರೆ. ತಾವು ಹುಟ್ಟಿ ಬಂದಿರುವ ಈಡಿಗ ಸಮುದಾಯವನ್ನು ಒಳಗೊಂಡಂತೆ ವಿವಿಧ ಹಿಂದುಳಿದ ವರ್ಗಗಳನ್ನು ವ್ಯವಸ್ಥಿತವಾಗಿ ತುಳಿಯುವ ಯತ್ನ ಸಾಗಿದೆ ಎಂದು ಹರಿಪ್ರಸಾದ್ ಆರೋಪಿಸಿದ್ದಾರೆ. ಸರ್ಕಾರ ಅವರದೇ ಪಕ್ಷದ್ದು. ಹಾಗಾಗಿ ಅವರ ಗುರಿ ಮುಖ್ಯಮಂತ್ರಿಯೇ ಸೈ ಎನ್ನುವುದು ಸ್ಪಷ್ಟ. ರಾಜ್ಯ ರಾಜಕಾರಣ ಬಲ್ಲಂತೆ ಹರಿಪ್ರಸಾದ್ ಡಿಸಿಎಂ ಶಿವಕುಮಾರ್ ಬಣದಲ್ಲಿದ್ದಾರೆ. ಸಿದ್ದು-ಡಿಕೆಶಿ ಶೀತಲ ಸಮರ ಸಾಗಿರುವ ಈ ಸಮಯದಲ್ಲಿ ಡಿಸಿಎಂ ಕೈ ಇನ್ನಷ್ಟು ಬಲವಾಗುವುದು ಸಿಎಂಗೆ ಬೇಡವೇ ಬೇಡವಾಗಿದೆ. ಬೆಂಗಳೂರಿನಿಂದ ದೆಹಲಿವರೆಗೂ ಕಾಂಗ್ರೆಸ್ ನಾಯಕರೊಂದಿಗೆ ಸಹಾಯ ಸಹಕಾರದ ಸಮರಸ ಭಾವದಲ್ಲಿರುವ ಹರಿಪ್ರಸಾದ್ ಮತ್ತೆ ಚಿಗುರಿಕೊಳ್ಳುವುದು ಸಿದ್ದರಾಮಯ್ಯನವರಿಗೆ ಒಲ್ಲದ ಸಂಗತಿ.

ವಿಧಾನ ಮಂಡಲದ ಬಜೆಟ್ ಅಧಿವೇಶನದಲ್ಲಿ ಹರಿಪ್ರಸಾದ್ ಸದನಕ್ಕೆ ಹಾಜರಾಗಿದ್ದು ಇಲ್ಲ ಎಂಬಷ್ಟು ಕಡಿಮೆ. ಅನುಪಸ್ಥಿತಿಗೆ, ಸಭಾಪತಿಯವರಿಗೆ ಅವರು ಮಾಹಿತಿ ನೀಡಿ ಅನುಮತಿ ಪಡೆದಿರಬಹುದು. ವಿಧಾನ ಪರಿಷತ್‍ಗೆ ಹಾಜರಾದರೆ ರಾಜ್ಯಪಾಲರ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಪರವಾಗಿ ಚರ್ಚೆಯಲ್ಲಿ ಭಾಗವಹಿಸಬೇಕಾಗುತ್ತದೆ, ಸಿದ್ದರಾಮಯ್ಯ ಮಂಡಿಸಿರುವ ಬಜೆಟ್ ಚರ್ಚೆಯಲ್ಲಿ ಪಾಲ್ಗೊಂಡು ಸರ್ಕಾರವನ್ನು ಸಮರ್ಥಿಸಿಕೊಳ್ಳಲೇಬೇಕಾದ ಇಕ್ಕಟ್ಟಿಗೆ ಒಳಗಾಗಬೇಕಾಗುತ್ತದೆ… ಈ ರೀತಿಯ ಅಡಕೊತ್ತಿಯಿಂದ ಪಾರಾಗಲೆಂದೇ ಸದನಕ್ಕೆ ಅವರು ಗೈರಾಗಿರುವ ಸಾಧ್ಯತೆ ಹೆಚ್ಚು. ಹರಿಪ್ರಸಾದ್‍ರವರಿಗೆ ನಿಕಟವಾಗಿರುವ ಮೂಲಗಳ ಪ್ರಕಾರ ವಿಧಾನ ಮಂಡಲ ಅಧಿವೇಶನ ಮುಂದೂಡಿದ ಬಳಿಕ ಬಾಂಬ್ ಸಿಡಿಸಲು ಅವರು ತೀರ್ಮಾನಿಸಿದ್ದರು. ಅದರಂತೆ ಬಾಂಬ್ ಸಿಡಿಸಿದ್ದಾರೆ. ಅದು ಮುಂದಿನ ದಿನಗಳಲ್ಲಿ ಏನೆಲ್ಲ ಪರಿಣಾಮ, ಅಡ್ಡ ಪರಿಣಾಮ ಉಂಟುಮಾಡಲಿದೆಯೋ ನೋಡೋಣ. ಹತ್ತಿರ ಹತ್ತಿರ ಎರಡು ದಶಕ ಕಾಲ ರಾಜ್ಯಸಭಾ ಸದಸ್ಯರಾಗಿದ್ದ ಹರಿಪ್ರಸಾದ್, ಹೈಕಮಾಂಡ್‍ನೊಂದಿಗೆ ನಿಕಟ ಸಂಪರ್ಕವಿರುವ ರಾಜ್ಯದ ಕೆಲವೇ ಕೆಲವು ರಾಜಕಾರಣಿಗಳಲ್ಲಿ ಒಬ್ಬರು. ಇಂದಿರಾ ಗಾಂಧಿ, ರಾಜೀವ್ ಗಾಂಧಿಯವರಿಗೆ ನಂತರದಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿಯವರಿಗೆ ಹತ್ತಿರದ ಮನುಷ್ಯ ಎನ್ನಲಾಗಿರುವ ಹರಿಪ್ರಸಾದ್ ದುಡುಕಿ ಮಾತಾಡುವುದು ಇಲ್ಲವೇ ಇಲ್ಲ ಎಂಬಷ್ಟು ಅಪರೂಪ. ಎಂದೇ “ಮುಖ್ಯಮಂತ್ರಿ ಮಾಡುವುದೂ ಗೊತ್ತು, ಇಳಿಸುವುದೂ ಗೊತ್ತು” ಎಂಬ ಹೇಳಿಕೆ ಗಾಳಿಯಲ್ಲಿ ತೂರಿ ಹೋಗದೆ ತವಕ ತಲ್ಲಣ ಸೃಷ್ಟಿಸಿದೆ.

ಮುನಿಸಿಕೊಂಡಿರುವ ಹರಿಪ್ರಸಾದ್‍ರನ್ನು ಸಮಾಧಾನಪಡಿಸಲು ಭೇಟಿ ಆಗಿರುವವರು ಎಂದು ಮಾಧ್ಯಮದಲ್ಲಿ ಬಂದಿರುವ ಹೆಸರುಗಳನ್ನು ಗಮನಿಸೋಣ. ಡಿಕೆಶಿ ಅವರನ್ನು ಭೇಟಿ ಮಾಡಿದ್ದಾರೆ. ಸಿಎಂ-ಡಿಸಿಎಂ ಸಂಬಂಧ ಬಲ್ಲವರು ಈ ಭೇಟಿ ಕಾಲದಲ್ಲಿ ಏನು ಚರ್ಚೆ ಆಗಿರಬಹುದಂದು ಅರ್ಥ ಮಾಡಿಕೊಳ್ಳುತ್ತಾರೆ. ಗೃಹ ಸಚಿವ ಡಾ ಜಿ.ಪರಮೇಶ್ವರ ಮತ್ತು ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಭೇಟಿ ಮಾಡಿದ್ದಾಗಿಯೂ ವರದಿಯಾಗಿದೆ. 2013ರ ವಿಧಾನ ಸಭೆ ಚುನಾವಣೆಯಲ್ಲಿ ಕೊರಟಗೆರೆ ಕ್ಷೇತ್ರದಲ್ಲಿ ತಮ್ಮ ಸೋಲಿಗೆ ಕಾರಣರಾದವರು ಮತ್ತು ತಮ್ಮ ಕನಸಿನ ಸಿಎಂ ಸ್ಥಾನಕ್ಕೆ ಕೊಳ್ಳಿ ಇಟ್ಟವರು ಯಾರೆನ್ನುವುದು ಪರಮೇಶ್ವರ್ ಅವರಿಗೆ ಗೊತ್ತಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ತಮ್ಮ ಸೋಲಿಗೆ ಕಾರಣರಾದವರ ಬೆನ್ನ ಹಿಂದೆ ಒತ್ತಾಸೆಯಾಗಿ ನಿಂತವರು ಯಾರೆಲ್ಲ ಎನ್ನುವುದನ್ನು ಕೆ.ಎಚ್.ಮುನಿಯಪ್ಪ ಬಲ್ಲರು. ಈ ಮೂವರೂ ಸಿದ್ದು ವಿರೋಧಿ ಬಣದವರೇ ಆಗಿರುವುದರಿಂದ ಭೇಟಿ ಸಮಯದಲ್ಲಿ ಆಗಿರುವ ಮಾತುಕತೆ ಏನು ಎನ್ನುವುದು ಅವರವರ ಊಹೆಗೆ ಬಿಟ್ಟಿದ್ದು.

BK Hariprasad and CM Siddaramaih

ತುರ್ತು ಪರಿಸ್ಥಿತಿ ನಂತರ ಕೇಂದ್ರದಲ್ಲಿ ಅದೇ ಮೊದಲ ಬಾರಿಗೆ ಹಲವು ಪಕ್ಷಗಳ ಕೂಡುವಿಕೆಯಿಂದ ರಚನೆಯಾದ ಜನತಾ ಪಾರ್ಟಿ ಸರ್ಕಾರ ಅಸ್ತಿತ್ವಕ್ಕೆ ಬಂತು. ಹಾಗೆ ಅಧಿಕಾರಕ್ಕೆ ಬಂದ ಮುರಾರಜಿ ದೇಸಾಯಿ ಸರ್ಕಾರವನ್ನು ಕಿಚಡಿ ಸರ್ಕಾರವೆಂದು ಇಂದಿರಾಗಾಂಧಿ ಮೂದಲಿಸಿದ್ದರು. “ಕಿಚಡಿ” ಸರ್ಕಾರ ಸುಭದ್ರ ಸರ್ಕಾರವಾಗಿರಲಾರದು ಎಂಬ ಅವರ ಅನಿಸಿಕೆಯನ್ನು ಅಲ್ಪಾಯುಷಿ ಜನತಾ ಸರ್ಕಾರ ನಿಜ ಮಾಡಿತು. ಇಲ್ಲಿ ಕರ್ನಾಟಕದಲ್ಲಿ 1989ರಲ್ಲಿ ರಾಜ್ಯ ವಿಧಾನ ಸಭೆಗೆ ಚುನಾವಣೆ ನಡೆದಾಗ ಆಡಳಿತಾರೂಢ ಜನತಾದಳ ನೆಲ ಕಚ್ಚಿತು. ವೀರೇಂದ್ರ ಪಾಟೀಲರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ 178 ಸ್ಥಾನದ ಭರ್ಜರಿ ಜಯ ಸಾಧಿಸಿತು. ಬಹುಮತದ ಸರ್ಕಾರ ಸುಭದ್ರ ಸರ್ಕಾರ ಎಂದು ಜನರನ್ನು ನಂಬಿಸಿದ್ದ ಇಂದಿರಾರ ಕಾಲ ಮುಗಿದಿತ್ತು. ರಾಜೀವ್ ಗಾಂಧಿ/ ಪಿ.ವಿ.ನರಸಿಂಹ ರಾವ್ ಕಾಲದಲ್ಲಿ ಕರ್ನಾಟಕ ವಿಧಾನ ಸಭೆಯಲ್ಲಿ 178 ಸದಸ್ಯರಿದ್ದೂ ಕಾಂಗ್ರೆಸ್ ಸರ್ಕಾರ ಮೂವರು (ವೀರೇಂದ್ರ, ಬಂಗಾರಪ್ಪ, ವೀರಪ್ಪ ಮೊಯಿಲಿ) ಮುಖ್ಯಮಂತ್ರಿಗಳನ್ನು ನೋಡಬೇಕಾಗಿ ಬಂತು. ಬಹುಮತವಿದ್ದ ಮಾತ್ರಕ್ಕೆ ಸುಭದ್ರ ಸರ್ಕಾರ ಎನ್ನುವುದೇನೂ ಇಲ್ಲ ಎಂಬ ಇತಿಹಾಸವುಳ್ಳ ಈ ರಾಜ್ಯದಲ್ಲಿ ಇತಿಹಾಸ ಚಕ್ರ ಮತ್ತೆ ತಿರುಗಿದೆ.

ಇದನ್ನೂ ಓದಿ: ಮೊಗಸಾಲೆ ಅಂಕಣ: ಯಾರು ಹಿತವರು ನಮಗೆ ಈ ಎರಡು ಒಕ್ಕೂಟದೊಳಗೆ?

ಸಿದ್ದರಾಮಯ್ಯ ಸಂಪುಟದ ಇಪ್ಪತ್ತು ಸಚಿವರ ಕಾರ್ಯವೈಖರಿಗೆ ಬೇಸತ್ತಿರುವ ಆಡಳಿತ ಪಕ್ಷದ ಮೂವತ್ತು ಶಾಸಕರು ಅವರ ವಿರುದ್ಧ ಅಸಮಾಧಾನ ತೋಡಿಕೊಂಡಿದ್ದಾರೆ. ಈ ವಿಚಾರ ಶಾಸಕಾಂಗ ಪಕ್ಷದ ಚರ್ಚೆಯಲ್ಲೂ ಪ್ರಸ್ತಾಪಗೊಂಡು ಸಿದ್ದರಾಮಯ್ಯ ಗರಂ ಆಗಲು ಕಾರಣವಾಗಿದೆ. ಬಸವರಾಜ ರಾಯರೆಡ್ಡಿ, ಬಿ.ಆರ್.ಪಾಟೀಲರಂಥ ಸಿದ್ದರಾಮಯ್ಯ ಬೆಂಬಲಿಗ ಶಾಸಕರೇ ಅಳಲು ತೋಡಿಕೊಂಡಿದ್ದಾರೆ ಎನ್ನುವುದು ಸರ್ಕಾರದ ನಡವಳಿಕೆಯಲ್ಲಿ ಎಲ್ಲವೂ ಸರಿಯಾಗಿಲ್ಲ ಎನ್ನುವುದರ ಸುಳಿವನ್ನು ನೀಡುತ್ತದೆ. ಆಡಳಿತ ಪಕ್ಷದ ಶಾಸಕರಿಗೇ ಸಚಿವರು ಮರ್ಯಾದೆ ಕೊಡುತ್ತಿಲ್ಲ ಎಂಬ ದೂರು ಬಾರದಂತೆ ತಡೆಯುವುದು ಸಿದ್ದರಾಮಯ್ಯಗೆ ಆಗುತ್ತಿಲ್ಲ ಎಂಬ ಕಥೆಯನ್ನೂ ಸದ್ಯದ ಬೆಳವಣಿಗೆ ಹೇಳುತ್ತದೆ. ಕಾಂಗ್ರೆಸ್ಸು ಅಧಿಕಾರಕ್ಕೆ ಬಂದು ಇನ್ನೂ ಎರಡು ತಿಂಗಳಾಗಿರುವಾಗಲೇ ಆಡಳಿತ ಪಕ್ಷದ ಶಾಸಕರು ಸಿಡಿಯುವ ದಾರಿಯಲ್ಲಿರುವುದು ಬಹುಮತ ಇದ್ದ ಮಾತ್ರಕ್ಕೇ ಸುಭದ್ರ ಸರ್ಕಾರ ನೀಡುವುದು ಆಗದ ಹೋಗದ ಮಾತು ಎನಿಸುವಂತಾಗಿದೆ.

ತುಸು ಹೆಚ್ಚೂಕಡಿಮೆ ನೂರರ ಸಂಖ್ಯೆಯಲ್ಲಿರುವ ಬೋರ್ಡು, ಕಾರ್ಪೊರೇಷನ್‍ಗಳಿಗೆ ಅಧ್ಯಕ್ಷರ/ ನಿರ್ದೇಶಕರ ನೇಮಕ ಇನ್ನಷ್ಟೇ ಆಗಬೇಕಿದೆ. ಮಂತ್ರಿಗಿರಿ ಸಿಗದೆ ಹತಾಶೆಗೆ ಒಳಗಾಗಿರುವ ಅನೇಕ ವಿಧಾನ ಸಭೆ/ ಪರಿಷತ್ ಸದಸ್ಯರು ರಾಜ್ಯವ್ಯಾಪಿ ಅಧಿಕಾರವುಳ್ಳ ನಿಗಮ, ಬೋರ್ಡ್‍ಗಳಿಗೆ ನೇಮಕಗೊಳ್ಳಲು ಗೂಟದ ಕಾರಿನಲ್ಲಿ ಅಡ್ಡಾಡಲು ಸಜ್ಜಾಗಿದ್ದಾರೆ. ಮಂತ್ರಿ ಮಂಡಲ ರಚನೆ ಕಾಲದಲ್ಲಿದ್ದಂತೆ ಈಗಲೂ ಸಿದ್ದರಾಮಯ್ಯ ಬಣ, ಡಿಕೆಶಿ ಬಣಗಳು ಪ್ರತಿಷ್ಟಿತ ನಿಗಮ ಮಂಡಳಿಗಳ ಸ್ಥಾನಕ್ಕೆ ಪೈಪೋಟಿ ನಡೆಸಿವೆ. ವಿಧಾನ ಪರಿಷತ್‍ಗೆ ಮೂವರನ್ನು ನಾಮಕರಣ ಮಡುವ ಪ್ರಕ್ರಿಯೆ ಬಣ ಪೈಪೋಟಿ ಕಾರಣವಾಗಿಯೇ ನೆನೆಗುದಿಗೆ ಬೀಳುವಂತಾಗಿದೆ. ಪಕ್ಷದ ಮೂಲಗಳು ಹೇಳುವಂತೆ ಮೂವರ ಹೆಸರು ಶಾರ್ಟ್‍ಲಿಸ್ಟ್ ಆಗಿದೆ. ಆದರೆ ಹಗ್ಗ ಜಗ್ಗಾಟ ಮುಂದುವರಿದಿದೆ. ಏಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಏಐಸಿಸಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ. ವೇಣುಗೋಪಾಲ್, ಕರ್ನಾಟಕ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾರ ಹಿತ ವಚನ ಕೇಳುವವರು ಕರ್ನಾಟಕ ಶಾಸಕಾಂಗ ಪಕ್ಷದಲ್ಲಿ ದಿನಗಳೆದಂತೆ ಕಡಿಮೆ ಆಗುತ್ತಿದ್ದಾರೆ ಎನ್ನುವುದನ್ನು ಒಳಗುಟ್ಟು ಬಲ್ಲವರು ಆಪ್ತ ಮಾತುಕತೆ ಕಾಲದಲ್ಲಿ ರಹಸ್ಯ ಒಡೆಯುವವರಂತೆ ಆಡುತ್ತಾರೆ. ಇವೆಲ್ಲವೂ ಹೇಳುವುದು ಒಂದೇ ಕಥೆ, ಪ್ರದೇಶ ಕಾಂಗ್ರೆಸ್‍ನಲ್ಲಿ, ಆಡಳಿತ ಶಾಸಕಾಂಗ ಪಕ್ಷದಲ್ಲಿ ಸಿದ್ದು-ಡಿಕೆಶಿ ನೇತೃತ್ವದ ಸರ್ಕಾರದಲ್ಲಿ ಎಲ್ಲವೂ ಸುಸೂತ್ರವಾಗಿಲ್ಲ ಎನ್ನುವುದೇ ಆ ಕಥೆ.

ಇದನ್ನೂ ಓದಿ: ಮೊಗಸಾಲೆ ಅಂಕಣ: ಬಿಜೆಪಿಯ ಸೂತಕದ ಕಳೆ ಎಂದು ಮುಗಿದೀತು?

Exit mobile version