ರಾಜ್ಯದಲ್ಲಿ ದೂಳನ್ನೆಬ್ಬಿಸಿ ರಾಜಕೀಯ ಆರೋಪ ಪ್ರತ್ಯಾರೋಪದ ಸಂಚಲನಕ್ಕೆ ಕಾರಣವಾಗಿರುವ ಸಾಮಾಜಿಕ, ಶೈಕ್ಷಣಿಕ ಆರ್ಥಿಕ ಸಮೀಕ್ಷಾ ವರದಿಯ ಮೂಲಪ್ರತಿ (kantharaju panel report) ನಾಪತ್ತೆಯಾಗಿ ಯಾರ ಮಡಿಲಲ್ಲಿ ಬೆಚ್ಚಗೆ ಕೂತಿರಬಹುದು…? ತುಸು ಹೆಚ್ಚೂ ಕಡಿಮೆ 170 ಕೋಟಿ ರೂಪಾಯಿ ವೆಚ್ಚದಲ್ಲಿ ಸಿದ್ಧವಾಗಿರುವ ವರದಿಯ ಮೂಲ ಪ್ರತಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಕಚೇರಿಯ ಭದ್ರತಾ ಸಿಬ್ಬಂದಿಯ ಕಣ್ಣಿಗೆ ಮಣ್ಣೆರಚಿ, ಆವರಣದಿಂದ ಹೊರಕ್ಕೆ ಹೋಯಿತಾದರೂ ಹೇಗೆ…? ಹಗಲು ಐದರವರೆಗೂ ಚಟುವಟಿಕೆಯಲ್ಲಿರುವ ಕಚೇರಿ ಸಂಜೆ ಬಂದ್ ಆಗುತ್ತದೆ. ನಂತರದಲ್ಲಿ ನಡೆದಿರಬಹುದಾದ ಅಪಹರಣ ಕೃತ್ಯ ಆವರಣದಲ್ಲಿರುವ ಸಿಸಿ ಕ್ಯಾಮೆರಾದಲ್ಲಿ ಸೆರೆ ಆಗಿರಬೇಕಲ್ಲವೇ… ಸಿಸಿ ಕ್ಯಾಮೆರಾ ಕೆಲಸ ಮಾಡುತ್ತಿರಲಿಲ್ಲವೆಂದು ಆಯೋಗ ಹೇಳಬಹುದು; ಅದು ಆಡಳಿತ ಸಿಬ್ಬಂದಿಯ ನಿರ್ಲಕ್ಷ್ಯವೇ ಪ್ರಧಾನವಾದ ಕರ್ತವ್ಯಲೋಪ ಅಲ್ಲವೇ…? ಅದಕ್ಕೆ ಕಾರಣರಾದವರ ಮೇಲೇನು ಶಿಸ್ತುಕ್ರಮ ಜಾರಿಯಾಗಿದೆ…? ವರದಿಯ ಮೂಲಪ್ರತಿ ನಾಪತ್ತೆಯಾಗಿದೆಯೆಂಬ ಸುದ್ದಿ ಕೆಲ ಪತ್ರಿಕೆಗಳಲ್ಲಿ ಇದೇ ವರ್ಷದ ಅಕ್ಟೋಬರ್ ಮೊದಲ ವಾರ ಪ್ರಕಟವಾದಾಗ ಆಯೋಗದ ಹಾಲಿ ಅಧ್ಯಕ್ಷ ಕೆ. ಜಯಪ್ರಕಾಶ ಹೆಗ್ಡೆ ಅದನ್ನು ಅಲ್ಲಗಳೆದಿದ್ದರೇಕೆ…? ಅದಾಗಿ ಒಂದು ತಿಂಗಳ ಬಳಿಕ ನವೆಂಬರ್ ಮಾಸದಲ್ಲಿ ಮೂಲಪ್ರತಿ ನಾಪತ್ತೆಯಾಗಿರುವುದು ದಿಟ ಎಂದು ಸ್ವತಃ ಅವರೇ ಒಪ್ಪಿಕೊಂಡರೇಕೆ…? ನಡೆದಿರುವ ಘಟನೆಯನ್ನು ಮುಚ್ಚಿ ಹಾಕುವ ಯತ್ನ ಅವರಿಂದ ನಡೆದಿರುವುದಕ್ಕೆ ಇರಬಹುದಾದ ಬಲವತ್ತರವಾದ ಕಾರಣಗಳು ಏನೆಲ್ಲ ಇರಬಹುದು….?
2013-18ರ ಐದು ವರ್ಷದ ಅವಧಿಯಲ್ಲಿ ಅಧಿಕಾರದಲ್ಲಿದ್ದ ಸಿದ್ದರಾಮಯ್ಯ (CM Siddaramaiah) ನೇತೃತ್ವದ ಕಾಂಗ್ರೆಸ್ ಸರ್ಕಾರ ಎಚ್.ಕಾಂತರಾಜರ ನೇತೃತ್ವದಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ರಚಿಸಿ ರಾಜ್ಯದ ಜನತೆಯ ಸಾಮಾಜಿಕ, ಶೈಕ್ಷಣಿಕ ಆರ್ಥಿಕ ಸಮೀಕ್ಷಾ ವರದಿ ಸಿದ್ಧಪಡಿಸುವ ಹೊಣೆ ಒಪ್ಪಿಸಿತು. ಜನರ ಮಗ್ಗಲು ಮುರಿದು ವಸೂಲಿ ಮಾಡಿದ ತೆರಿಗೆ ಹಣದಲ್ಲಿ 170 ಕೋಟಿ ಖರ್ಚು ಮಾಡಿಸಿದ ಸರ್ಕಾರ ನಿರುಮ್ಮಳ ಭಾವದಲ್ಲಿ ಬೀಗಿತು. ತನಗೆ ಒಪ್ಪಿಸಿದ ಕೆಲಸ ಪೂರೈಸಿದ ಆಯೋಗ ವರದಿಯನ್ನು ಸರ್ಕಾರಕ್ಕೆ ಒಪ್ಪಿಸಿತು. ಆಯೋಗದ ವರದಿಗೆ ಮಹತ್ವ ಬರಬೇಕಿದ್ದರೆ ಸದಸ್ಯ ಕಾರ್ಯದರ್ಶಿ ಎನ್.ವಿ. ಪ್ರಸಾದ್‍ರ ಸಹಿ ಅಗತ್ಯ. ಮೂರು ಸಂಪುಟಗಳಿಗೆ ಸಹಿ ಹಾಕಿದ ಇವರು ಉಳಿದ ಸಂಪುಟಗಳಿಗೆ ತನ್ನ ಸಹಿ ಹಾಕಲಿಲ್ಲ ಏಕೆ…? ಸಹಿ ಹಾಕುವಂತೆ ಪದೇ ಪದೇ ಆಯೋಗ ಪತ್ರ ಮುಖೇನ ಮಾಡಿಕೊಂಡ ಮನವಿಯನ್ನು ಆ ಮನುಷ್ಯ ಒಪ್ಪಿ ತನ್ನ ಹೊಣೆಗಾರಿಕೆ ನಿಭಾಯಿಸದೆ ದೂರ ಸರಿದರೇಕೆ…? ಸಹಿ ಹಾಕದೇ ಇರುವಂತೆ ಅವರನ್ನು ತಡೆದ ಶಕ್ತಿ ಇಲ್ಲವೇ ಶಕ್ತಿಗಳು ಯಾವವು…?
2021ರಲ್ಲಿ ಅಂದಿದ್ದ ಬಿಜೆಪಿ ಸರ್ಕಾರಕ್ಕೆ ಆಯೋಗ ಬರೆದ ಪತ್ರದಲ್ಲಿ ಮೂಲಪ್ರತಿ ನಾಪತ್ತೆಯಾಗಿರುವುದರ ಉಲ್ಲೇಖವಿದೆ. ಅಧಿಕೃತ ಪತ್ರವನ್ನು ಅಧಿಕೃತವಾಗಿ ಸ್ವೀಕರಿಸಿರುವ ಸರ್ಕಾರ ಕಳೆದು ಹೋಗಿರುವುದನ್ನು ಹುಡುಕುವ ಯಾವುದೇ ಯತ್ನಕ್ಕೆ ಮುಂದಾಗಲಿಲ್ಲವೇಕೆ…? ಇಷ್ಟೆಲ್ಲ ರಾದ್ಧಾಂತವಾಗಿದ್ದರೂ ಆಯೋಗ ಈ ಕ್ಷಣದವರೆಗೂ ಕಳವಿನ ವಿರುದ್ಧ ಪೊಲೀಸ್ ದೂರು ದಾಖಲಿಸಲಿಲ್ಲವೇಕೆ…? ಪೊಲೀಸಿಗೆ ದೂರು ನೀಡದಂತೆ ಆಯೋಗವನ್ನು ತಡೆದವರು ಯಾರಿರಬಹುದು…? ಸ್ವಾಯತ್ತಾಧಿಕಾರದ ಆಯೋಗ ಎಲ್ಲವುದಕ್ಕೂ ಸರ್ಕಾರದ ಮುಖ ನೋಡಬೇಕಾಗಿಲ್ಲ; ಆಳುವವರ ಮುಲಾಜು ಮರ್ಜಿಗೆ ಮಣಿಯಬೇಕಾದುದಿಲ್ಲ. ಹೀಗಿದ್ದೂ ಪೊಲೀಸರಿಗೆ ದೂರು ಕೊಡುವ ಧೈರ್ಯವನ್ನು ಆಯೋಗ ಪ್ರದರ್ಶಿಸಲಿಲ್ಲವೇಕೆ…?
ತಮ್ಮ ಅಧಿಕಾರಾವಧಿಯಲ್ಲೇ ವರದಿ ಸಿದ್ಧವಾಗಿದ್ದರೂ ಅದು ಸದಸ್ಯ ಕಾರ್ಯದರ್ಶಿ ಸಹಿ ಸಹಿತ ಸರ್ಕಾರಕ್ಕೆ ಸಲ್ಲಿಸಬೇಕೆಂದು ಸಿದ್ದರಾಮಯ್ಯ ಬಯಸದೆ ಮೌನಕ್ಕೆ ಶರಣಾದುದರ ರಹಸ್ಯವಾದರೂ ಏನು…? ಆ ಹೊತ್ತಿಗೆಲ್ಲ ಆಯೋಗದ ವರದಿಯ ಪ್ರಮುಖಾಂಶಗಳು ನಾಡಿನ ಒಂದೆರಡು ಪತ್ರಿಕೆಗಳಿಗೆ ಸೋರಿಕೆಯಾಗಿತ್ತು. ಆ ವರದಿ ಹೇಳಿದಂತೆ ಆಯೋಗದ ವರದಿಯ ಪ್ರತಿ ಆ ಪತ್ರಿಕೆಗಳ ಸ್ವಾಧೀನದಲ್ಲಿತ್ತು. ಸುದ್ದಿ ರೂಪದಲ್ಲಿ ಪ್ರಕಟವಾದ ಆ ವರದಿ ಅಧಿಕೃತವಲ್ಲ ಎಂದು ಸರ್ಕಾರವಾಗಲೀ ಆಯೋಗವಾಗಲೀ ಸ್ಪಷ್ಟೀಕರಣ ನೀಡುವ ಗೋಜಿಗೆ ಹೋಗಲಿಲ್ಲ. ಆಶ್ಚರ್ಯಕರವೆನಿಸುವ ಈ ಮೌನವನ್ನು ಸಮ್ಮತಿ ಲಕ್ಷಣ ಎಂದು ರಾಜ್ಯದ ಜನತೆ ಭಾವಿಸಿದ್ದು ಯಾವ ರೀತಿಯಿಂದಲೂ ತಪ್ಪಲ್ಲ ಅಲ್ಲವೇ…? ಇದು ಜಾತಿ ಗಣತಿ ವರದಿಯಲ್ಲ, ರಾಜ್ಯದ ಸಾಮಾಜಿಕ, ಶೈಕ್ಷಣಿಕ ಆರ್ಥಿಕ ಸಮೀಕ್ಷಾ ವರದಿ ಎಂದು ಸರ್ಕಾರ ಮತ್ತು ಆಯೋಗ ಎಷ್ಟೇ ಗಂಟಲು ಹರಿದುಕೊಂಡರೂ ಇದು ಜಾತಿ ಗಣತಿಯೇ ಹೌದೆಂಬ ತೀರ್ಮಾನಕ್ಕೆ ಜನ ಬರುವುದಕ್ಕೆ ಸರ್ಕಾರ ಮತ್ತು ಆಯೋಗ ಅನುಮಾನಾಸ್ಪದ ರೀತಿಯಲ್ಲಿ ನಡೆದುಕೊಂಡ ರೀತಿಯೇ ಕಾರಣವಾಗಿರುವುದು ಸುಳ್ಳೇ…?
ಸಿದ್ದರಾಮಯ್ಯನವರು ಪದೇ ಪದೇ ಆಪಾದಿಸಿರುವಂತೆ ವರದಿಯನ್ನು ಒಪ್ಪಿಕೊಳ್ಳುವ ಬದಲಿಗೆ ಪಕ್ಕಕ್ಕೆ ತಳ್ಳಿಹಾಕಿದ್ದು ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ ಆಗಿದ್ದ ಎಚ್.ಡಿ. ಕುಮಾರಸ್ವಾಮಿಯವರು. ಆಗ ಸಿದ್ದರಾಮಯ್ಯನವರು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರೂ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಸಂಚಾಲಕರೂ ಆಗಿದ್ದರು. ಅವರ ಪ್ರತಿನಿಧಿ ಸಚಿವರಲ್ಲಿ ಒಬ್ಬರಾಗಿದ್ದ ಸಮಾಜ ಕಲ್ಯಾಣ ಸಚಿವ ಸಿ. ಪುಟ್ಟರಂಗಶೆಟ್ಟಿಯವರು ಆಯೋಗದ ವರದಿಯನ್ನು ಶಾಸನ ಸಭೆ ಅಧಿವೇಶನದಲ್ಲಿ ಮಂಡಿಸುವ ಪ್ರಸ್ತಾವ ಮಂಡಿಸಿದಾಗ ಕುಮಾರಸ್ವಾಮಿ ಅದು ಕಾರ್ಯರೂಪಕ್ಕೆ ಬಾರದಂತೆ ನೋಡಿಕೊಂಡರೆನ್ನುವುದು ಸಿದ್ದರಾಮಯ್ಯ ಆಕ್ಷೇಪ, ಆರೋಪ. ಸಿದ್ದರಾಮಯ್ಯ ಸಿಎಂ ಆಗಿದ್ದ ಸಮಯದಲ್ಲಿ ಸದಸ್ಯ ಕಾರ್ಯದರ್ಶಿ ಸಹಿ ಇಲ್ಲದೆ ಅಪೂರ್ಣವಾಗಿತ್ತೆಂಬ ಕಾರಣಕ್ಕೆ ವರದಿಯನ್ನು ಒಪ್ಪಲು ಸರ್ಕಾರ ಹಿಂದೆಮುಂದೆ ನೋಡಿತಾದರೆ ಯಾವ ಸಹಿಯ ಅಗತ್ಯವಿತ್ತೊ ಅದೇ ಇಲ್ಲದ ವರದಿಯನ್ನು ಕುಮಾರಸ್ವಾಮಿ ಸರ್ಕಾರ ಸದನದಲ್ಲಿ ಮಂಡಿಸಬೇಕೆಂದು ಯಾವ ಆಧಾರದಲ್ಲಿ ಸಿದ್ದರಾಮಯ್ಯ ಬಯಸಿದ್ದರು ಎನ್ನುವುದು ನಾಡಿನ ಜನರಿಗೆ ಗೊತ್ತಾಗಬೇಡವೇ….?
ಪತ್ರಿಕೆಗಳಲ್ಲಿ ಪ್ರಕಟವಾದ ವರದಿಯಲ್ಲಿ ಉಲ್ಲೇಖವಾದ ಮತ್ತು ಸರ್ಕಾರ ಹಾಗೂ ಆಯೋಗ ಹೇಳುವಂತೆ ಅನಧಿಕೃತವಾದ ಅಂಶಗಳನ್ನು ಖರೆ ಎಂದು ನಂಬಬಹುದಾದರೆ ರಾಜ್ಯದಲ್ಲಿ ಪರಿಶಿಷ್ಟ ಜಾತಿಗೆ ಸೇರಿದವರು ಅತ್ಯಧಿಕ ಸಂಖ್ಯೆಯಲ್ಲಿದ್ದಾರೆನ್ನುವುದು ಬಯಲಾಗುತ್ತದೆ. ಚುನಾವಣೆ ಬಂದಾಗಲೆಲ್ಲ ಲಿಂಗಾಯತರು, ಒಕ್ಕಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಟಿಕೆಟ್ ಪಡೆಯುವುದು ಮತ್ತು ಆಯ್ಕೆಯಾಗಿ ಬರುವುದು ಸಾಮಾನ್ಯ. ಹಿಂದುಳಿದ ವರ್ಗಗಳ ಪೈಕಿ ಅತ್ಯಂತ ಹಿಂದುಳಿದ ಜಾತಿ ವರ್ಗಗಳಿಗೆ ಕಿಮ್ಮತ್ತೇ ಇಲ್ಲದ ಕಾಂಗ್ರೆಸ್ ಪಕ್ಷದಲ್ಲಿ ಹಿಂದುಳಿದವರು ಎಂದರೆ ಕುರುಬರು ಮತ್ತು ಈಡಿಗರು ಮಾತ್ರ. ವಿಧಾನ ಸಭೆಯಲ್ಲಿ ಒಕ್ಕಲಿಗ, ಲಿಂಗಾಯತ ಸ್ಥಾನಬಲ ತಗ್ಗುವುದು ಆ ಎರಡೂ ಸಮುದಾಯಗಳಿಗೆ ಎಳ್ಳಷ್ಟೂ ಬೇಕಿಲ್ಲ. ಅದೇ ರೀತಿ ಕುರುಬ ಈಡಿಗ ಸಮುದಾಯದ ಪ್ರಾತಿನಿಧ್ಯ (ಮುಖ್ಯವಾಗಿ ಕುರುಬ ಸಮುದಾಯ) ಕಡಿಮೆಯಾಗುವುದು ಕೂಡಾ ಸಿದ್ದರಾಮಯ್ಯ ಒಳಗೊಂಡಂತೆ ಕಾಂಗ್ರೆಸ್ ನಾಯಕರನೇಕರಿಗೆ ಬೇಕಿರಲಿಲ್ಲ. ಆ ಪಕ್ಷದಲ್ಲಿರುವ ಲಿಂಗಾಯತ, ಒಕ್ಕಲಿಗ, ಕುರುಬ ಈಡಿಗ ಸಮುದಾಯದ ಶಾಸಕರು, ಸಚಿವರು, ಮುಖಂಡರು ಒತ್ತಡ ಹೇರಿ ವರದಿ ಬಹಿರಂಗ ಆಗುವುದನ್ನು ತಡೆದರು ಮತ್ತು ಅವರ ಯತ್ನಕ್ಕೆ ಯಾವುದೇ ಬಗೆಯ ಆಕ್ಷೇಪ ಸಿದ್ದರಾಮಯ್ಯನವರಿಂದ ಬರಲಿಲ್ಲ ಎನ್ನುವುದು ಸತ್ಯವೋ ಸುಳ್ಳೋ….?
ವರದಿಯ ಮೂಲ ಪ್ರತಿ ಬರೋಬ್ಬರಿ 1800 ಪುಟಗಳಷ್ಟಿದೆ ಎಂದು ಮಾಹಿತಿ. ಅದರ ಜೆರಾಕ್ಸ್ ಪ್ರತಿ ಸದ್ಯ ಆಯೋಗದಲ್ಲಿದೆ, ಕಂಪ್ಯೂಟರಿನಲ್ಲಿ ಕೂಡಾ ಅದು ಸುರಕ್ಷಿತವಾಗಿದೆ, ಆತಂಕಕ್ಕೆ ಕಾರಣವಿಲ್ಲ ಎಂಬಿತ್ಯಾದಿ ಸವಕಲು ಸಬೂಬು ಕೇಳಿ ಬರುತ್ತಿದೆ. ಜೆರಾಕ್ಸ್ ಪ್ರತಿಗಳನ್ನು ಆಯೋಗದ ಕಚೇರಿಯಲ್ಲೇ ತೆಗೆಯಲಾಯಿತೇ ಅಥವಾ ಹೊರಗಿನವರಿಗೆ ಔಟ್ ಸೋರ್ಸ್ ಮಾಡಿ ಫೋಟೋ ಕಾಪಿ ಮಾಡಿಸಲಾಯಿತೇ…? ಕಚೇರಿ ಒಳಗೇ ಸಿಬ್ಬಂದಿ ಮೂಲಕ ಈ ಕೆಲಸ ಮಾಡಿಸಿದ್ದೇ ಹೌದಾದರೆ 1800 ಪುಟ ಪ್ರತಿ ತೆಗೆಯಲು ಎಷ್ಟು ಜನ ಕೆಲಸ ಮಾಡಿದರು…? ಪ್ರತಿ ತೆಗೆಯಲು ಅಗತ್ಯವಾದ 1800 ಬಿಳಿ ಹಾಳೆ ಖರೀದಿಸಿದ್ದಕ್ಕೆ ಬಿಲ್ಲು ಇರಲೇಬೇಕಲ್ಲವೆ…? ಒಂದೆರಡು ರೂಪಾಯಿ ವೆಚ್ಚ ಮಾಡಬೇಕಾದ ಸಂದರ್ಭದಲ್ಲೂ ಹತ್ತಿಪ್ಪತ್ತು ರೂಪಾಯಿ ಬಿಲ್ ಮಾಡಿಸುವುದರಲ್ಲಿ ನಿಷ್ಣಾತರಾಗಿರುವ ಬಹುತೇಕ ಸರ್ಕಾರಿ ಸಿಬ್ಬಂದಿ ಈ ಪ್ರಕರಣದಲ್ಲಿ ಧರ್ಮರಾಯರಾಗಿದ್ದಾದರೂ ಹೇಗೆ ಮತ್ತು ಯಾಕೆ….?
ಕಚೇರಿಯಲ್ಲಿ ಪ್ರತಿ ತೆಗೆಯದೆ ಔಟ್ ಸೋರ್ಸ್ ಮಾಡಿದ್ದರೆ ಅದಕ್ಕೆ ಮಾಡಿದ ಪಾವತಿಯ ರಸೀತಿ ಕಚೇರಿ ಲೆಕ್ಕಪತ್ರ ವಿಭಾಗದ ದಾಖಲೆಗಳಲ್ಲಿ ಇರಬೇಕಲ್ಲವೇ…? ಆಯೋಗದ ಮೇಲಿನ ಮಮಕಾರದಿಂದ ಔಟ್‍ಸೋರ್ಸ್‍ನಲ್ಲಿ ಕೆಲಸ ಮಾಡಿ ಪೂರೈಸಿಕೊಟ್ಟ ಜೆರಾಕ್ಸ್ ಅಂಗಡಿಯಾತನಿಗೆ/ಳಿಗೆ ಬಿಟ್ಟಿ ಕೆಲಸ ಮಾಡುವುದರಿಂದ ಸಿಕ್ಕ ಪುಣ್ಯ ಪುರುಷಾರ್ಥವಾದರೂ ಏನು…? ಕಂಪ್ಯೂಟರಿನಲ್ಲಿ ಸುರಕ್ಷಿತವಾಗಿರುವ ವರದಿಯನ್ನು ಜೆರಾಕ್ಸ್ ಮಾಡಿಸಿದ್ದರ ಹಿಂದಿನ ಅಸಲಿ ಉದ್ದೇಶ ಏನು…? ಆಯೋಗದ ಅಧ್ಯಕ್ಷರಾಗಿದ್ದ ಎಚ್. ಕಾಂತರಾಜ್ ಅಧಿಕಾರಾವಧಿಯಲ್ಲೆ 1800 ಪುಟದ ಜೆರಾಕ್ಸ್ ಪ್ರತಿಗಳನ್ನು ತೆಗೆಸಲಾಯಿತು ಎನ್ನುವುದು ಕೇಳಿಬರುತ್ತಿರುವ ಮಾತು. ಜೆರಾಕ್ಸ್ ಮಾಡಿಸುವ ಅಗತ್ಯ ಆ ಸಮಯದಲ್ಲಿ ಆಯೋಗಕ್ಕೆ ಬಂತೇಕೆ…? ಆಯೋಗದ ಅಧ್ಯಕ್ಷರು ಅದಕ್ಕೆ ಸಮ್ಮತಿಸಿದರೇಕೆ…? ಅಗತ್ಯ ವೆಚ್ಚಕ್ಕೆ ಸದಸ್ಯ ಕಾರ್ಯದರ್ಶಿ ಒಪ್ಪಿದ್ದರೆ…? ಇಷ್ಟೆಲ್ಲಾ ರಾಮಾರಾದ್ಧಾಂತ ನಡೆದಿದ್ದರೂ ಸದಸ್ಯ ಕಾರ್ಯದರ್ಶಿಯಾಗಿದ್ದ ಪ್ರಸಾದ್ ಎಂಬ ನಾಮಧೇಯದ ಆ ಮಹಾಶಯ ಬಾಯಿಗೆ ಬೀಗ ಜಡಿದುಕೊಂಡು ಯಾವ ಮೂಲೆ ಹಿಡಿದು ಕೂತಿದ್ದಾರೆ…? ಅವರನ್ನು ಕರೆಸಿ ಸಹಿ ಹಾಕಲಿಲ್ಲವೇಕೆಂಬ ಶಂಕೆಗೆ ಉತ್ತರ ಪಡೆಯುವುದರೊಂದಿಗೆ ಆಯೋಗದ ಮೂಲ ಪ್ರತಿ ನಾಪತ್ತೆ, ಜೆರಾಕ್ಸ್ ಮುಂತಾಗಿ ಹುಟ್ಟಿಕೊಂಡಿರುವ ಬಗೆಬಗೆ ಅನುಮಾನಗಳಿಗೆ ಪರಿಹಾರ ಪಡೆಯಲಾಗದಷ್ಟು ಸರ್ಕಾರ ಶಕ್ತಿಹೀನ ಆಗಿದೆಯೇ ಹೇಗೆ…? ಏನೋ ಎಡವಟ್ಟಾಗಿದೆ ಎನ್ನುವಷ್ಟು ಸಂಶಯಗಳನ್ನು ಜನ ಸಮುದಾಯದಲ್ಲಿ ಹುಟ್ಟು ಹಾಕಿರುವ ಬೆಳವಣಿಗೆಗಳಿಗೆ ಸಮರ್ಥ ಪರಿಹಾರಕ ಉತ್ತರ ಕೊಡುವ ಬದಲಿಗೆ ವಿರೋಧ ಪಕ್ಷಗಳಂತೆ ರಾಜಕೀಯ ಸಮಜಾಯಿಶಿ ನೀಡುತ್ತಿರುವ ಸರ್ಕಾರ ನಡೆಸುವವರ “ಹೇಗೂ ನಡೆಯುತ್ತದೆ” ಎಂಬ ಧೋರಣೆಯ ಹಿಂದಡಗಿರುವ ಮರ್ಮಗಳ ಮತಿತಾರ್ಥವಾದರೂ ಏನು…?
ಇದನ್ನೂ ಓದಿ: ಮೊಗಸಾಲೆ ಅಂಕಣ: ಸ್ಥಳೀಯ ಕಮಾಂಡ್‌ಗೆ ಬಾಗಿದ ಬಿಜೆಪಿ ಹೈಕಮಾಂಡ್
ಆಯೋಗದ ಮೂಲಪ್ರತಿಯ ಜೆರಾಕ್ಸ್ ಮಾಡಿಸಿದವರು ಅದನ್ನು ಒಯ್ಯದೆ ಮೂಲಪ್ರತಿಯನ್ನೇ ಹೊತ್ತೊಯ್ದು ಇಷ್ಟೆಲ್ಲ ಭಾನಗಡಿಗೆ ಕಾರಣವಾಗಿರುವುದರ ಒಳಗುಟ್ಟು ಬಯಲಾಗಬೇಕಿದೆ. ನಿವೃತ್ತ ನ್ಯಾಯಮೂರ್ತಿ ನೇಮಕವಾದರೆ ಅದನ್ನು ಕಣ್ಣೊರೆಸುವ ಮತ್ತೊಂದು ತಂತ್ರವೆನ್ನಬೇಕಾಗುತ್ತದೆ. ಹಾಲಿ ನ್ಯಾಯಮೂರ್ತಿ ಆಯೋಗಕ್ಕೆ ಸತ್ಯ ಶೋಧನೆಯ ಅವಕಾಶ ಕಲ್ಪಿಸಿ ಖಳರನ್ನು ಬಗ್ಗು ಬಡಿಯುವ ಅಧಿಕಾರ ನೀಡುವ ನೈತಿಕ ಬಲವನ್ನೂ ಇಚ್ಛಾಶಕ್ತಿಯನ್ನೂ ಸಿದ್ದರಾಮಯ್ಯ ಸರ್ಕಾರ ಪ್ರದರ್ಶಿಸಬಲ್ಲುದೇ…?
ಏತನ್ಮಧ್ಯೆ ಜಾತಿ ಗಣತಿಯ ಕಾಂತರಾಜ ಆಯೋಗದ ವರದಿ ಜಾರಿಗೆ ತಾವು ಬದ್ಧ ಎಂದು ಸಿದ್ದರಾಮಯ್ಯ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಮುಖ್ಯಮಂತ್ರಿ ಖಾತೆಯಲ್ಲಿ ಅವರು ಬರೆಯದೆ ತಮ್ಮ ವೈಯಕ್ತಿಕ ಖಾತೆಯಲ್ಲಿ ಘೋಷಿಸಿಕೊಂಡಿದ್ದಾರೆ. ಒಕ್ಕಲಿಗ ಸಮುದಾಯ ಮಠಾಧೀಶರ ನೇತೃತ್ವದಲ್ಲಿ ಕಾಂತರಾಜ ವರದಿ ಅನುಷ್ಟಾನದ ವಿರುದ್ಧ ಕೈಗೊಂಡ ನಿರ್ಣಯಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಹಿ ಹಾಕಿ ಸಿದ್ದರಾಮಯ್ಯ ನಿಲುವಿನ ವಿರುದ್ಧ ಬಂಡಾಯದ ಬಾವುಟ ಹಾರಿಸಿದ್ದಾರೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ತಮ್ಮ ನಿಲುವು ಹೇಳಿಕೊಂಡಿಲ್ಲ. ಡಿಕೆಶಿ ಉಪ ಮುಖ್ಯಮಂತ್ರಿಯಾಗಿ ಸಹಿ ಮಾಡಿಲ್ಲವೆಂದೂ ಅದು ತಮ್ಮ ವೈಯಕ್ತಿಕ ನಿಲುವೆಂದೂ ಹೇಳಿಕೊಂಡಿದ್ದಾರೆ. ಇದು ತಮಾಶೆ ಎನಿಸದೆ..? ಈ ಇಬ್ಬರೂ ನಾಯಕರು ಎಷ್ಟು ಕಾಲ ಡಬಲ್ ಆಕ್ಟಿಂಗ್ ಮಾಡುತ್ತಾರೆ…? ಮಾಡಲು ಸಾಧ್ಯ…? ಎಷ್ಟು ಕಾಲ ರಾಜ್ಯದ ಜನತೆಯ ಮನಸ್ಸಿನ ಮೇಲೆ ಮಣ್ಣೆರೆಚುವ ಕೆಲಸ ಮಾಡುತ್ತಾರೆ…? ಕುತೂಹಲವಿದೆ, ನೋಡಬೇಕು.
ಇದನ್ನೂ ಓದಿ: ಮೊಗಸಾಲೆ ಅಂಕಣ: ಲೋಕಸಭೆ ಫೈನಲ್‌ಗೂ ಮುನ್ನ ಪಂಚರಾಜ್ಯ ಸೆಮಿಫೈನಲ್