Site icon Vistara News

ಮೊಗಸಾಲೆ ಅಂಕಣ: ಕರ್ನಾಟಕದ ಸೋಲಿನ ಬಗ್ಗೆ ಮೋದಿ ಮೌನವೇಕೆ?

modi bommai bsy

ಚುನಾವಣಾ ರಾಜಕೀಯದಲ್ಲಿ ರಣಕಲಿ ತಾನೆಂಬ ಭ್ರಮೆಯಲ್ಲಿ 2014ರಿಂದ ಒಂಬತ್ತು ವರ್ಷ ಮೆರೆದ ಭಾರತೀಯ ಜನತಾ ಪಕ್ಷ, ಕರ್ನಾಟಕ ವಿಧಾನ ಸಭಾ ಚುನಾವಣೆ ಸೋಲಿನಿಂದ ಕಂಗೆಟ್ಟು ಹೋಗಿದೆ. ಸೋಲು ಗೆಲುವು ಚುನಾವಣೆಯಲ್ಲಿ ಸಹಜ. ಗೆದ್ದವರು ಬೀಗುವುದು ಸೋತವರು ಕೊರಗುವುದು ಕೂಡಾ ಸಹಜ. ಗೆದ್ದವರು ಕ್ರಮೇಣ ಅಹಂಕಾರದ ಸುಳಿಗೆ ಸಿಲುಕುವುದು, ಸೋತವರು ಮೈಕೊಡವಿಕೊಂಡು ಏಳುವುದು ಕೂಡಾ ಸಹಜವೇ. ಆದರೆ ಕರ್ನಾಟಕದ ಹಿನ್ನಡೆ ಬಿಜೆಪಿಯನ್ನು ಪಾರ್ಶ್ವವಾಯು ಸ್ಥಿತಿಗೆ ತಂದು ಮಿಸುಕಾಡದಂತೆ ಕುಕ್ಕರಬಡಿಸಿದೆ. ಆಡಳಿತಾರೂಢ ಕಾಂಗ್ರೆಸ್ ಪಕ್ಷ, ಜನಮನ ಸೆಳೆಯುವ ನಿಟ್ಟಿನಲ್ಲಿ ದೈತ್ಯ ಹೆಜ್ಜೆಯೂರುತ್ತ ಸಾಗಿದ್ದರೆ ಬಸವಳಿದಿರುವ ಬಿಜೆಪಿ, ಕುಂಟುತ್ತ ಎಡವುತ್ತ ಊರುಗೋಲಿನ ಹುಡುಕಾಟದಲ್ಲಿದೆ.

2018ರ ವಿಧಾನ ಸಭೆ ಚುನಾವಣೆಯಲ್ಲಿ ಜನ ಬಿಜೆಪಿಗೆ ಕೊಟ್ಟಿದ್ದು 104 ಸೀಟುಗಳನ್ನು ಮಾತ್ರ. ಮೊದಲ 14 ತಿಂಗಳು ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ. ನಂತರದಲ್ಲಿ ಆಪರೇಷನ್ ಕಮಲ ಕಾರ್ಯಾಚರಣೆ ಮೂಲಕ ಬಹುಮತ ಗಳಿಸಿ ಅಧಿಕಾರಕ್ಕೆ ಬಂದ ಬಿಜೆಪಿ ಮೂರೂವರೆ ವರ್ಷ ಆಡಳಿತ ನಡೆಸಿ ಈಗ ವಿರೋಧ ಪಕ್ಷವಾಗಿದೆ. ಮೇ 13ರಂದು ಫಲಿತಾಂಶ ಹೊರ ಬಿದ್ದು ಕಾಂಗ್ರೆಸ್ ಗೆದ್ದು ಸರ್ಕಾರ ರಚಿಸಿದ್ದು ತಿಂಗಳಷ್ಟು ಹಳೆಯ ಕಥೆ. ಎಲ್ಲ 34 ಸಚಿವ ಸ್ಥಾನವನ್ನೂ ಭರ್ತಿ ಮಾಡುವ ಮೂಲಕ ಕಳೆದ ಕೆಲವು ದಶಕಗಳಿಂದ ಸಂಪುಟ ಸಚಿವ ಸ್ಥಾನ ಕಾಲಿ ಉಳಿಸಿಕೊಂಡು ಶಾಸಕರ ಮೂಗಿಗೆ ತುಪ್ಪ ಸವರುತ್ತಿದ್ದ ಮುಖ್ಯಮಂತ್ರಿಗಳ ಪ್ರವೃತ್ತಿಗೆ ಸಿದ್ದರಾಮಯ್ಯ ಕೊನೆ ಹಾಡಿರುವುದನ್ನು ಮೆಚ್ಚಲೇಬೇಕು. ಕೆಲವು ಸಚಿವರು ತಮಗೆ ನೀಡಿದ ಖಾತೆ ವಿಚಾರದಲ್ಲಿ ಅಸಮಾಧಾನ ತಾಳಿದ್ದಾರೆ. ಸಿದ್ದರಾಮಯ್ಯ ಅದಕ್ಕೆ ಸೊಪ್ಪು ಹಾಕಿಲ್ಲ. ಸಚಿವರಿಗೆ ಖಾತೆ ನಿಗದಿಪಡಿಸುವುದು ಮುಖ್ಯಮಂತ್ರಿಯ ಪರಮಾಧಿಕಾರಗಳಲ್ಲಿ ಒಂದೆನ್ನುವ ನಿಯಮವನ್ನು ಅವರು ಮತ್ತೆ ಮುಂಚೂಣಿಗೆ ತಂದಿದ್ದಾರೆ. ಇದೂ ಕೂಡಾ ಪ್ರಶಂಸನೀಯವೇ.

ಮೂರೂವರೆ ವರ್ಷ ಅಧಿಕಾರದಿಂದ ದೂರವೇ ಇದ್ದ ಕಾಂಗ್ರೆಸ್ ಪಕ್ಷ, ಚುನಾವಣೆ ಬಂದಾಗ ಅದನ್ನು ಎದುರಿಸುವ ಕಾರ್ಯತಂತ್ರದ ವಿಚಾರದಲ್ಲಿ ತಲೆ ಕೆಡಿಸಿಕೊಂಡಿದ್ದು ಅಷ್ಟಿಷ್ಟಲ್ಲ. ಚುನಾವಣಾ ತಂತ್ರಜ್ಞರ ನೆರವು ಪಡೆದು ಪಕ್ಷದ ದೌರ್ಬಲ್ಯ ಗುರುತಿಸಿ ಮುಲಾಮು ಸವರಿ ಮದ್ದನ್ನೆರೆಯುವ ಕೆಲಸ ಮಾಡಿತು. ಜ್ಯೋತಿಷಿಗಳ ಅನಿಸಿಕೆ ಅಭಿಪ್ರಾಯಗಳನ್ನು ಅವು ಅವೈಜ್ಞಾನಿಕವಾದರೂ ಜನರನ್ನು ಮರುಳುಮಾಡುವ ತಂತ್ರವಾಗಿ ಬುಡುಬಡುಕೆಯವರು ಹೇಳಿದಂತೆ ನಡೆದುಕೊಂಡಿತು. ಪೂಜೆ ಹೋಮ ಹವನ; ದೇವಸ್ಥಾನ ಮಠ ಮಂದಿರಗಳಿಗೆ; ಮಸೀದಿ ದರ್ಗಾ; ಚರ್ಚ್ ಇಗರ್ಜಿ; ಗುರುದ್ವಾರಗಳಿಗೆ ಭೇಟಿ ನೀಡುತ್ತ ಮತ್ತು ಆ ಭೇಟಿಗಳಿಗೆ ವ್ಯಾಪಕ ಪ್ರಚಾರ ದೊರೆಯುವಂತೆ ಮಾಡುತ್ತ ಜನಮನ ಕಾಂಗ್ರೆಸ್ ಪಕ್ಷ ಮತ್ತು ಅದರ ಮುಖಂಡರತ್ತ ಕೇಂದ್ರೀಕರಿಸಿರುವಂತೆ ನೋಡಿಕೊಂಡಿತು.

ಮಾತ್ರವಲ್ಲ ಬಿ.ಎಸ್. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಸರ್ಕಾರದ ಅವಧಿಯಲ್ಲಿ ನಡೆಯಿತು ಎನ್ನಲಾಗಿರುವ ಬಗೆಬಗೆಯ ಭ್ರಷ್ಟಾಚಾರ ಆಧರಿತ ಹಗರಣಗಳಿಗೆ ಉತ್ತರ ಕೊಡಲಾಗದ ಸ್ಥಿತಿ ಬಿಜೆಪಿಗೆ ಎದುರಾಗುವಂತೆ ವ್ಯವಸ್ಥಿತವಾಗಿ ನೋಡಿಕೊಂಡಿತು. ಶಾಲಾ ಮಕ್ಕಳೂ ಸಹಾ ನಲವತ್ತು ಪರ್ಸೆಂಟ್ ಕಮಿಷನ್ ವಿಚಾರದಲ್ಲಿ ಸರ್ಕಾರವನ್ನು ಗೇಲಿ ಮಾಡುವಂಥ ಸನ್ನಿವೇಶ ಸೃಷ್ಟಿಯಾಯಿತು, ಇದು ಆಡಳಿತ ಪಕ್ಷಕ್ಕೆ ಮರ್ಯಾದೆ ತರುವ ಬೆಳವಣಿಗೆ ಆಗಿರಲಿಲ್ಲ. ಆಡಳಿತ ಪಕ್ಷದ ವಕ್ತಾರರು ಭ್ರಷ್ಟಾಚಾರ ಆರೋಪ ವಿಚಾರಗಳಲ್ಲಿ ಸರ್ಕಾರವನ್ನು ಸಮರ್ಥಿಸಿಕೊಳ್ಳಲೂ ಆಗದ ಸನ್ನಿವೇಶ ಸೃಷ್ಟಿಯಾಗಿದ್ದರೆ ಅದಕ್ಕೆ ಕಾರಣ ವಿರೋಧ ಪಕ್ಷವಾಗಿ ಕಾಂಗ್ರೆಸ್ ಬಳಸಿದ ಸಂವೈಧಾನಿಕ ಅಸ್ತ್ರಗಳು.

ಭಾರತೀಯ ಜನತಾ ಪಕ್ಷ ತಾನು ಅಧಿಕಾರದಲ್ಲಿ ಶಾಶ್ವತ ಎಂದು ಬೀಗಿತು. ಭ್ರಮೆ ಎನ್ನುವುದು ಯಾವ ಕಾಲಕ್ಕೂ ನೀರ ಮೇಲಣ ಗುಳ್ಳೆಯಂತೆ ಎಂಬ ಸತ್ಯ ಅದರಲ್ಲಿ ಕಾಣಿಸಲಿಲ್ಲ. ಭ್ರಮಾಧೀನ ಮನಃಸ್ಥಿತಿಯಲ್ಲಿ ಮಂತ್ರಿ ಮಹೋದಯರ ಅಹಂಕಾರ ಎಲ್ಲ ಎಲ್ಲೆಯನ್ನೂ ಮೀರಿತು. ತಾನುಂಟೋ ಮೂಲೋಕವುಂಟೋ ಎಂಬ ಮಾತಿನಂತೆ ಬಿಜೆಪಿ ಮಂತ್ರಿಗಳು ಮೆರೆದರು. ತಮ್ಮ ಸರ್ಕಾರಕ್ಕೆ ಸೋಲಿಲ್ಲ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಬರುತ್ತಾರೆ; ಪಕ್ಷವನ್ನು ಮತ್ತೆ ಅಧಿಕಾರದಲ್ಲಿ ಕೂರಿಸುತ್ತಾರೆಂಬ ಅವಾಸ್ತವ ವಿಸ್ಮೃತಿ ಅವರ ಬುದ್ಧಿ ಭಾವಕ್ಕೆ ಮಂಕು ಕವಿಯುವಂತೆ ಮಾಡಿತು. ಮೇ 13ರಂದು ಒಂದೊಂದೇ ಕ್ಷೇತ್ರದ ಫಲಿತಾಂಶ ಹೊರಬೀಳುತ್ತಿದ್ದಂತೆ ಬಿಜೆಪಿ ಕಟ್ಟಿದ್ದ ಕನಸಿನ ಸೌಧದ ಇಟ್ಟಿಗೆಗಳೂ ಒಂದೊಂದಾಗಿ ಕುಸಿದವು. ಈಗ ಪಶ್ಚಾತ್ತಾಪದಲ್ಲಿ ಬೇಯುತ್ತಿರುವ ಬಿಜೆಪಿ, ಮಾಡಿದ್ದುಣ್ಣೋ ಮಹರಾಯಾ ಎಂಬ ಸ್ಥಿತಿಯಲ್ಲಿ ಆತ್ಮಾವಲೋಕನಕ್ಕೆ ಕೈ ಹಚ್ಚಿದೆ. ಆತ್ಮಾವಲೋಕನ ಆ ಪಕ್ಷದಲ್ಲಿ ನಡೆದಿರುವ ರೀತಿಯನ್ನು ನೋಡಿದರೆ ಅಲ್ಲಿ ಪರಸ್ಪರ ದೋಷಾರೋಪ ಹೊರತುಪಡಿಸಿದರೆ ಇನ್ನೇನೂ ನಡೆಯುತ್ತಿದ್ದಂತಿಲ್ಲ.

ಬಿಜೆಪಿ ಬಿಲದಿಂದ ಹೊರಬೀಳುತ್ತಿರುವ ಮಾಹಿತಿ ಗಮನಿಸಿದರೆ ಸ್ಪಷ್ಟವಾಗುವ ಒಂದು ಮಹತ್ವದ ಸಂಗತಿ ಎಂದರೆ ಚುನಾವಣೆಯನ್ನು ಗೆಲ್ಲುವ ರಣತಂತ್ರವೇ ಆ ಪಕ್ಷದೊಳಗೆ ರೂಪುಗೊಂಡಿರಲಿಲ್ಲ ಎನ್ನುವುದು. ಮೋದಿ- ಶಾ ಜೋಡಿ ಮಾಡುವ ಮೋಡಿ ಮತ್ತೆ ಅಧಿಕಾರವನ್ನು ತರುತ್ತದೆಂಬುದರ ಆಚೆಗೆ ಬಿಜೆಪಿ ಸ್ಥಳೀಯ ಮುಖಂಡರು, ಅಭ್ಯರ್ಥಿಗಳು ಯೋಚನೆಯನ್ನೇ ಮಾಡಲಿಲ್ಲ. ಚುನಾವಣೆ ಗೆಲುವು ಸೋಲು ಫಲಿತಾಂಶೋತ್ತರದ ಮಾತು. ಪ್ರತಿ ಕ್ಷೇತ್ರವನ್ನೂ ಗೆಲ್ಲುವ ಹುಮ್ಮಸ್ಸು ಅಭ್ಯರ್ಥಿಗಳಲ್ಲಿ ಕಾಣಿಸಬೇಕು. ಇದರ ಮೊದಲ ಲಕ್ಷಣ ಕ್ಷೇತ್ರವಾರು ಅಭ್ಯರ್ಥಿಗಳು ಯಾರೆಲ್ಲ ಎನ್ನುವುದು ಸಾರ್ವಜನಿಕವಾಗಬೇಕು. ಮತ ಕ್ಷೇತ್ರದಲ್ಲಿ ಮತದಾರರ ಚರ್ಚೆಗೆ ಆ ಹೆಸರು ವಸ್ತುವಾಗಬೇಕು. ಸಾಮಾನ್ಯವಾಗಿ ಬಿಜೆಪಿ, ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುವುದರಲ್ಲಿ ಯಾವಾಗಲೂ ಮುಂದಿರುವ ಪಕ್ಷ. ಆದರೆ ಕರ್ನಾಟಕದಲ್ಲಿ ಅದು ಪಟ್ಟಿ ಬಿಡುಗಡೆ ಮಾಡಿದ್ದು ಜೆಡಿಎಸ್, ಕಾಂಗ್ರೆಸ್ ನಂತರದಲ್ಲಿ. ಇಲ್ಲಿ ಗುಜರಾತ್ ಮಾದರಿಯನ್ನು ಅನುಸರಿಸುವ ಪ್ರಸ್ತಾಪವನ್ನು ಬಿಜೆಪಿ ಹೈಕಮಾಂಡ್ ಮುಂದಿಟ್ಟಾಗ ಆ ಮಾದರಿ ಇಲ್ಲಿ ಚಲಾವಣೆಗೆ ಬಾರದ ನಾಣ್ಯ ಎನ್ನುವುದು ಎಲ್ಲ ಬಲ್ಲ ಆದರೆ ಬಿಜೆಪಿ ಅರ್ಥಮಾಡಿಕೊಳ್ಳದ ಮಾತಾಗಿ ಗಾಳಿಯಲ್ಲಿ ತೂರಿ ಹೋಯಿತು.

ಹೊಸಬರನ್ನು ರಾಜಕೀಯದ ಮುಂಚೂಣಿಗೆ ತರುವುದು ಆರೋಗ್ಯಕರ ಚುನಾವಣಾ ಜನತಂತ್ರದ ದೃಷ್ಟಿಯಿಂದ ಅಗತ್ಯವೇನೋ ಹೌದು. ಆದರೆ ಚುನಾವಣೆ ದಿನದ ಘೋಷಣೆ ಆಗುವವರೆಗೂ ಬಿಜೆಪಿ ತನ್ನ ಉಮೇದುವಾರರ ಹೆಸರನ್ನು ಬಹಿರಂಗಗೊಳಿಸಲಿಲ್ಲ, ಅದಕ್ಕೆ ಅಗತ್ಯವಿದ್ದ ಮಾನಸಿಕ ಸ್ಥೈರ್ಯವನ್ನು ತೋರಿಸಲಿಲ್ಲ ಎನ್ನುವುದು ಜಗತ್ತಿನಲ್ಲೇ ಅತ್ಯಧಿಕ ಸಂಖ್ಯಾ ಬಲದ ಸದಸ್ಯರನ್ನು ಹೊಂದಿದೆ ಎಂಬ ತುರಾಯಿಧಾರೀ ಬಿಜೆಪಿಗೆ ಶೋಭೆ ತರುವುದಾಗಿರಲಿಲ್ಲ. ನಾಮಪತ್ರ ಸಲ್ಲಿಕೆಯ ಕೊನೆ ದಿವಸ ಬಿ ಫಾರ್ಮ್ ನೀಡುವಾಗ ಅಭ್ಯರ್ಥಿಯ ಹೆಸರನ್ನು ಪ್ರಕಟಿಸಿದರೂ ಸಾಕು, ಮತದಾರರು ಅದನ್ನು ಮಹಾ ಪ್ರಸಾದವೆಂದು ಸ್ವೀಕರಿಸುತ್ತಾರೆಂಬ ಅಮಲಿನಲ್ಲಿ ಬಿಜೆಪಿ ಹೈಕಮಾಂಡ್ ಮೈಮರೆಯಿತು. (ಕಾಂಗ್ರೆಸ್ ಹೈಕಮಾಂಡ್ ಬರಬರುತ್ತ ಹೈ ಕ್ಯಾ ಮೈಂಡ್ ಎಂಬ ಗೇಲಿಗೆ ಒಳಗಾಗಿತ್ತು. ಈಗ ಅದು ಬಿಜೆಪಿ ಹೈಕಮಾಂಡ್‍ಗೂ ಅನ್ವಯ). ಈ ಮೈಮರೆವಿನ ಮೂಲ ಮೋದಿ ಎಂಬ ಹೆಸರು. ಮೋದಿ ಬಂದರೆ ಸಾಕು, ಓಟು ಪ್ರವಾಹೋಪಾದಿಯಲ್ಲಿ ಬರುತ್ತದೆಂಬ ಮಿಥ್ಯೆಯನ್ನು ಸೃಷ್ಟಿಸಿದ್ದು ಬಿಜೆಪಿ ನಾಯಕರೇ. ಆಡಳಿತ ವಿರೋಧಿ ಅಲೆ ಇರುವಾಗ ಮತದಾರರ ಮನಸ್ಸು ಹೇಗೆಲ್ಲ ಯೋಚಿಸಬಹುದೆಂಬ ಯೋಚನೆಯನ್ನೇ ಬಿಜೆಪಿ ಮಾಡಲಿಲ್ಲ. ತರ್ಕ ವಿಮರ್ಶೆಯಲ್ಲಿ ಕೆಲಸಕ್ಕೆ ಬರುತ್ತದೆ. ಮಿಥ್ಯೆ ವಿಮರ್ಶೆಯನ್ನು ಮರೆಮಾಚುತ್ತದೆ.

ಕಾಂಗ್ರೆಸ್ ಗೆಲುವಿಗೆ ಐದು ಭರವಸೆಗಳು ಕೊಟ್ಟ ಕೊಡುಗೆ ದೊಡ್ದದು. ಅಷ್ಟೇ ದೊಡ್ಡ ಪ್ರಮಾಣದಲ್ಲಿ ಅದರ ಗೆಲುವಿಗೆ ನೆರವಾಗಿದ್ದು ಶೇ.40 ಲಂಚದ ಆರೋಪ. ಈ ಆರೋಪದಲ್ಲಿ ಹುರುಳಿಲ್ಲ ಎನ್ನುವುದಕ್ಕಿಂತ ಹೆಚ್ಚಿನದು ಈ ಪ್ರಮಾಣದ ಲಂಚ ಕೊಟ್ಟಿದ್ದಕ್ಕೆ ಇಲ್ಲವೇ ಸ್ವೀಕರಿಸಿದ್ದಕ್ಕೆ ಸಾಕ್ಷ್ಯ ಇಲ್ಲ ಎನ್ನುವುದು. ಲಂಚ ಕೊಡುವವರು ಚೆಕ್ ಇಲ್ಲವೇ ಡಿಡಿ ಮೂಲಕ ಕೊಡುವುದಿಲ್ಲ; ಸ್ವೀಕರಿಸುವವರೂ ದಡ್ಡರಲ್ಲ. ಕರ್ನಾಟಕ ಸೇರಿದಂತೆ ದೇಶದಲ್ಲಿ ಅನೂಚಾನವೆಂಬಂತೆ ನಡೆದುಕೊಂಡು ಬಂದಿರುವುದು ಲಂಚ ಋಷುವತ್ತು ವಹಿವಾಟಿನ ರಹಸ್ಯ ವ್ಯವಹಾರ. ಹಿಂದೆ ಎಸ್.ನಿಜಲಿಂಗಪ್ಪ ಸರ್ಕಾರವಿದ್ದ 60ರ ದಶಕದಲ್ಲಿ ಶರಾವತಿ ಕರ್ಮಕಾಂಡ ಎನ್ನುವುದು ಭಾರೀ ಸುದ್ದಿ ಮಾಡಿತ್ತು. ಶರಾವತಿ ನದಿಗೆ ಲಿಂಗನಮಕ್ಕಿ ಎಂಬಲ್ಲಿ ಅಣೆಕಟ್ಟು ಕಟ್ಟುವಾಗ ಉಪ ಯೋಜನೆಯಾಗಿ ತಲಕಳಲೆಯಲ್ಲಿ ಸಮಾನಾಂತರ ಜಲಾಶಯವಾಗಿ ಅಣೆ ಕಟ್ಟಲಾಗಿತ್ತು. ಈ ಯೋಜನೆಯ ಕಾಂಟ್ರಾಕ್ಟ್‌ನಲ್ಲಿ ಬಹಳ ದೊಡ್ಡ ಗೋಲ್ ಮಾಲ್ ನಡೆದಿದೆ ಎಂಬ ಆರೋಪ ಅಂತಿಮವಾಗಿ ಶರಾವತಿ ಕರ್ಮಕಾಂಡ ಎಂದು ಕುಖ್ಯಾತವಾಗಿತ್ತು. ತಮ್ಮದೇ ಪಕ್ಷ ಸರ್ಕಾರದ ವಿರುದ್ಧ ಕೇಳಿಬಂದ ಭ್ರಷ್ಟಾಚಾರ ಆರೋಪದ ಖುದ್ದು ಪರಿಶೀಲನೆಗೆಂದು ಅಂದಿನ ಪ್ರಧಾನಿ ಲಾಲ್‍ಬಹದ್ದೂರ್ ಶಾಸ್ತ್ರಿಯವರೇ ಲಿಂಗನಮಕ್ಕಿ, ಕಾರ್ಗಲ್ ಪ್ರದೇಶಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದರು. ಈ ಬಗೆಯ ಪ್ರತಿಕ್ರಿಯಾತ್ಮಕ ನಡವಳಿಕೆಯನ್ನು ಅಂದಿನ ರಾಷ್ಟ್ರೀಯ ನಾಯಕರಲ್ಲಿ ಕಾಣಬಹುದಾಗಿತ್ತು.

ಇದನ್ನೂ ಓದಿ: ಮೊಗಸಾಲೆ ಅಂಕಣ: AIIMS ಸಂಸ್ಥೆ ಹೆಸರಿನಲ್ಲಿ ರಾಯಚೂರು v/s ಕಲಬುರಗಿ ಶೀತಲ ಸಮರ ಶುರು

ಮೋದಿಯವರು ಚುನಾವಣಾ ಪ್ರಚಾರಕ್ಕೆ; ಅದಕ್ಕೂ ಮೊದಲು ವಿವಿಧ ಸರ್ಕಾರಿ ಯೋಜನೆಗಳ ಉದ್ಘಾಟನೆ ಶಂಕುಸ್ಥಾಪನೆಗೆ ಎಂದು ಕರ್ನಾಟಕಕ್ಕೆ ಪದೇ ಪದೇ ಆಗಮಿಸಿದಾಗ ಬೇಡಬೇಡ ಎಂದರೂ ಅವರ ಕಿವಿಗಳನ್ನು ಅಪ್ಪಳಿಸಿದ್ದು ಅವರದೇ ಪಕ್ಷ ಸರ್ಕಾರದ ವಿರುದ್ಧ ಕೇಳಿಬಂದ ಶೇ.40ರಷ್ಟು ಋಷುವತ್ತಿನ ಆರೋಪ. ಆರೋಪ ಸುಳ್ಳು ಎಂದು ಮೋದಿ ಯಾವತ್ತೂ ಅಲ್ಲಗಳೆಯಲಿಲ್ಲ. ಪ್ರಧಾನಿ ಈ ವಿಚಾರದಲ್ಲಿ ದೂರ ಕಾಯ್ದುಕೊಂಡರೇಕೆ? ಅರ್ಥವಾಗಲಿಲ್ಲ. ಲಂಚದ ಹಾವಳಿಯಲ್ಲಿ ಬೊಮ್ಮಾಯಿ ಸರ್ಕಾರ ಇದೆ; ಅದನ್ನು ಮೋದಿ ನಂಬಿದ್ದಾರೆ ಎಂದೇ ಮತದಾರರು ಭಾವಿಸುವಂತಾಯಿತು. ಆರ್‍ಎಸ್‍ಎಸ್ ಮುಖವಾಣಿ “ಆರ್ಗನೈಜರ್” ಸಾಪ್ತಾಹಿಕ ಇದನ್ನೇ ಹೇಳಿದ್ದು. ನಾನು ತಿನ್ನೋಲ್ಲ, ಇತರರು ತಿನ್ನಲು ಬಿಡೋಲ್ಲ ಎಂಬ ಮೋದಿ ಮಾತು ಈ ಚುನಾವಣೆಯಲ್ಲಿ ಜನರಿಗೆ ನಾಟಕದ ಸಂಭಾಷಣೆಯಂತೆ ಕೇಳಿದ್ದರೆ ಅದಕ್ಕೆ ಮೊದಲ ಕಾರಣ ಸ್ವತಃ ಮೋದಿಯವರೇ. ಕಾಂಗ್ರೆಸ್ಸಿಗರು ಭ್ರಷ್ಟಾಚಾರ ವಿಚಾರದಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಮಾಡಿರುವ ಆರೋಪ ಮೋದಿಯವರ ಕಿವಿಗೆ ಸುಳ್ಳಿನ ಕಂತೆಯಾಗಿ ಕೇಳಿಸಲೇ ಇಲ್ಲ. ಹಾಗಾದರೆ ಭ್ರಷ್ಟ ಸರ್ಕಾರವನ್ನು ಪುನಃ ಗೆಲ್ಲಿಸಿ ಎಂದು ಜನಕ್ಕೆ ಮನವಿ ಮಾಡಿಕೊಂಡರೇಕೆ…? ತಮ್ಮದೇ ಪಕ್ಷದ ಸರ್ಕಾರ ಭ್ರಷ್ಟಾಚಾರದ ಕೂಪದಲ್ಲಿದೆ ಎನ್ನುವುದು ಗೊತ್ತಾದರೂ ನಿಯಂತ್ರಿಸಲಾಗದಷ್ಟು ಮೋದಿ ಅಸಹಾಯಕರಾದರೆ…? ಉತ್ತರಕ್ಕೆ ಕಾದಿರುವ ಶಂಕೆ.

ಮರಣೋತ್ತರ ಶವ ಪರೀಕ್ಷೆ ಸಾವಿನ ಕಾರಣವನ್ನು ವಿಶ್ಲೇಷಿಸುತ್ತದೆ. ಹೋದ ಪ್ರಾಣವನ್ನು ಮರಳಿಸುವುದಿಲ್ಲ. ಈ ಚುನಾವಣೆಯಲ್ಲಿ ಬಿಜೆಪಿ ಸೋತಿದೆ. ಕಾಂಗ್ರೆಸ್ ಗೆದ್ದಿದೆ. ಇಷ್ಟಂತೂ ಸತ್ಯ. ಆದರೆ ಈ ಸೋಲು ರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿಯ ಆತ್ಮಸ್ಥೈರ್ಯವನ್ನು ಉಡುಗಿಸಿದೆ. ಐದು ವರ್ಷದ ಹಿಂದೆ 2018ರಲ್ಲಿ ನಡೆದ ಚುನಾವಣೆಯಲ್ಲಿ ಮೋದಿ ಅಬ್ಬರದ ಪ್ರಚಾರ ಮಾಡಿದ್ದರು. ಪಕ್ಷ 104 ಸೀಟು ಗೆದ್ದಿತ್ತು. ಐದು ವರ್ಷದ ತರುವಾಯದಲ್ಲೂ ಮೋದಿಯವರದು ಅದೇ ಅಬ್ಬರ ಆರ್ಭಟದ ಪ್ರಚಾರ. ಬಿಜೆಪಿ ಗೆಲ್ಲಲು ಸಾಧ್ಯವಾಗಿದ್ದು 66 ಸ್ಥಾನ ಮಾತ್ರ. ಅಂದರೆ 38 ಸ್ಥಾನ ಕುಸಿತ. ಮೋದಿ ಮುಖ ಕರ್ನಾಟಕದಲ್ಲಿ ಈ ಚುನಾವಣೆಯಲ್ಲಿ ಕೆಲಸ ಮಾಡಲಿಲ್ಲ. ಪಕ್ಷ ಗೆದ್ದು ಅಧಿಕಾರ ಹಿಡಿದಿದ್ದರೆ ಅದರ ಕೀರ್ತಿ ಕಿರೀಟ ಮೋದಿ ಮುಡಿಗೇರುತ್ತಿತ್ತು. ಆದರೆ ಹೀನಾಯ ಸೋಲಿನ ಮುಳ್ಳಿನ ಕಿರೀಟ ಯಾರ ಮುಡಿಗೆ…? ಈ ಪ್ರಶ್ನೆಯನ್ನು ತರ್ಕಕ್ಕೆ ಒಡ್ಡಿದರೆ ಮೋದಿಯವರೇ ಹೊಣೆ ಹೊರಬೇಕು. ಈ ಕ್ಷಣದವರೆಗೆ ಅಂಥ ಮಾತು ಮೋದಿಯವರ ಕಡೆಯಿಂದ ಬಂದಿಲ್ಲ. ಅಂತರಾತ್ಮ ಎನ್ನುವುದು ಪ್ರತಿಯೊಬ್ಬರಲ್ಲೂ ಇರುವಂತೆ ಮೋದಿಯವರಲ್ಲೂ ಇರಲೇಬೇಕು. ಕರ್ನಾಟಕದ ಸೋಲಿನ ವಿಚಾರದಲ್ಲಿ ನರೇಂದ್ರ ಮೋದಿಯವರ ಪ್ರತಿಕ್ರಿಯೆ ಫಲಿತಾಂಶ ಹೊರಬಿದ್ದ ತಿಂಗಳ ಬಳಿಕವೂ ಬಂದಿಲ್ಲ ಎನ್ನುವುದನ್ನು ನೋಡಿದರೆ ಎಲ್ಲವೂ ಸರಿಯಾಗಿಲ್ಲ ಎಂದೇ ಅನಿಸುತ್ತದೆ.

ಇದನ್ನೂ ಓದಿ: ಮೊಗಸಾಲೆ ಅಂಕಣ: ಮುಂಬರುವ ಚುನಾವಣೆ ಗೆಲ್ಲಲು ಕಾಂಗ್ರೆಸ್‌ ಸರ್ಕಾರದಿಂದ ‘ಗ್ಯಾರಂಟಿ’ಗಳ ಚಲಾವಣೆ!

Exit mobile version