Site icon Vistara News

ಮೊಗಸಾಲೆ ಅಂಕಣ: ರಾಜ್ಯ ಬಿಜೆಪಿ ನಾಯಕರ ಮೇಲೇಕೆ ಮೋದಿ ಕೆಂಡ ಕೋಪ?

modi bjp leaders karnataka

ಭಾರತೀಯ ಜನತಾ ಪಾರ್ಟಿಯ ಕರ್ನಾಟಕ (Karnataka bjp) ಘಟಕದ ಕಾರ್ಯವೈಖರಿ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ (PM Narendra Modi) ಮನಸ್ಸು ಕೊತಕೊತ ಕುದಿಯುವಂತೆ ಮಾಡಿರುವ ಸಿಟ್ಟು ಎಳ್ಳು ಕಾಳಿನಷ್ಟೂ ಕಡಿಮೆಯಾದಂತಿಲ್ಲ. ರಾಜ್ಯದಲ್ಲಿದ್ದ ಬಿಜೆಪಿ ಸರ್ಕಾರ ಕಿತ್ತೆದ್ದು ಹೋಗಿ, ಸಿದ್ದರಾಮಯ್ಯ (Siddaramaiah) ನೇತೃತ್ವದ ಕಾಂಗ್ರೆಸ್ ಸರ್ಕಾರ ಬಂದು ನೂರು ದಿನಕಳೆದು ಹೋಗಿದೆ. ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ಇತ್ತ ಐದು ಭರವಸೆಗಳ ಜಾರಿಯಲ್ಲಿ ಸರ್ಕಾರ ಮುನ್ನುಗ್ಗಿದೆ. ತಥಾಕಥಿತ ಗ್ಯಾರಂಟಿಗಳು ತರಬಹುದಾದ ದೂರಗಾಮಿ ಪರಿಣಾಮ ಅಥವಾ ಅಡ್ಡ ಪರಿಣಾಮಗಳ ವಿಚಾರದಲ್ಲಿ ಯಾರೂ ತಲೆಕೆಡಿಸಿಕೊಂಡಂತಿಲ್ಲ. ಗ್ಯಾರಂಟಿಗಳ ವಿರುದ್ಧ ಮಾತಾಡುವುದು ಮತಾಧಾರಿತ ಚುನಾವಣಾ ರಾಜಕೀಯಕ್ಕೆ ಗಂಡಾಂತರ ತರಬಹುದೆನ್ನುವ ಭಯ ಕಾಂಗ್ರೆಸ್ಸೇತರ ಪಕ್ಷಗಳಲ್ಲಿ ಇರುವುದರಿಂದಾಗಿ ಆ ಕಡೆಯಿಂದ ಬರುತ್ತಿರುವ ಟೀಕಾಸ್ತ್ರಗಳು ಮೊನಚು ಕಳೆದುಕೊಂಡಿದೆ. ಇದು ಸರಿ, ಇದು ಸರಿಯಲ್ಲ ಎಂದು ಕಡ್ಡಿ ಮುರಿದಂತೆ ಹೇಳಬೇಕಾದ ಪ್ರಜ್ಞಾವಂತ ಚಿಂತಕ ವಲಯವೂ ಕಾಂಗ್ರೆಸ್ ಸರ್ಕಾರದ ಮುಂದೆ ಬಾಯಿ ಮುಚ್ಚಿ ಮಂಡಿಯೂರಿರುವುದರಿಂದ ತಾನು ನಡೆದುದೇ ದಾರಿ ಎಂಬ ಭಾವನೆ ಸರ್ಕಾರದಲ್ಲಿ ಬಲಿತಿದೆ.

ಕರ್ನಾಟಕದಲ್ಲಿ ವಿರೋಧ ಪಕ್ಷ (opposition party) ಎನ್ನುವುದು ಇದೆಯೆ…? ಇದ್ದುದೇ ಹೌದಾದರೆ ಅದು ಎಲ್ಲಿದೆ ಮಾರಾಯ್ರೆ…? ಎಂದು ಜನ ಕೇಳಿದರೆ ಅದಕ್ಕೆ ಸಮರ್ಪಕ ಉತ್ತರ ಕೊಡುವ ಸ್ಥಿತಿಯಲ್ಲಿ ರಾಜ್ಯ ರಾಜಕಾರಣ ಇಲ್ಲ. ಮತದಾರರು 135 ಕಾಂಗ್ರೆಸ್ ಶಾಸಕರನ್ನು ಗೆಲ್ಲಿಸಿ “ಆಪರೇಷನ್ ಕಮಲ”ಕ್ಕೆ ಅವಕಾಶವೇ ಇಲ್ಲದಂಥ ವಾತಾವರಣ ಸೃಷ್ಟಿಮಾಡಿಟ್ಟಿದ್ದಾರೆ. ತಾನು ಗೆದ್ದಿರುವ 66 ಸ್ಥಾನದೊಂದಿಗೆ ತನ್ನ ಇರುವಿಕೆಯನ್ನು ಸಾಬೀತುಗೊಳಿಸಬೇಕಿರುವ ಬಿಜೆಪಿ ರಾಜಕೀಯ ಅಡ್ಡದಾರಿ ಹಿಡಿಯುವುದು ಅಷ್ಟೆಲ್ಲ ಸುಲಭವಾಗಿಲ್ಲ. ಮುಂದೇನೋ ಗೊತ್ತಿಲ್ಲ ಸಧ್ಯಕ್ಕಂತೂ ವಾಮಮಾರ್ಗದ ಇಬ್ಬದಿಗಳಲ್ಲೂ ಬಲವಾದ ಬೇಲಿ ಇದೆ. 66 ಸೀಟು ಗೆದ್ದಿರುವುದರಿಂದ ವಿಧಾನ ಸಭೆಯಲ್ಲಿ ಅಧಿಕೃತ ವಿರೋಧ ಪಕ್ಷವಾಗಿ ಕೆಲಸ ಮಾಡುವ ಅವಕಾಶ ಬಿಜೆಪಿಗೆ ಒದಗಿದೆ. ವಿರೋಧ ಪಕ್ಷವೆಂದರೆ ಸಾಮಾನ್ಯವಲ್ಲ, ಅದು ಜನತೆಯ ನಿಜ ಧ್ವನಿ. ಆದಾಗ್ಯೂ ತಲೆ ಇಲ್ಲದ ಮುಂಡದಂತೆ ಬಿಜೆಪಿ ಕಾಣಿಸುತ್ತಿರುವುದಕ್ಕೆ ಕಾರಣ ವಿರೋಧ ಪಕ್ಷಕ್ಕೆ ನಾಯಕನೇ ಇಲ್ಲ ಎನ್ನುವುದು. ನಾಯಕರೇ ಇಲ್ಲದ ಸ್ಥಿತಿಯನ್ನು ಅನಾಯಕತ್ವ ಎಂದು ಕರೆಯಬಹುದಾದರೆ ರಾಜ್ಯ ಬಿಜೆಪಿಯದು ಅಕ್ಷರಶಃ ಅನಾಯಕತ್ವ!

ರಾಜ್ಯದಲ್ಲಿ ಬಿಜೆಪಿಗೆ ಭವಿಷ್ಯ ಇದೆಯೋ ಇಲ್ಲವೋ ಎನ್ನುವುದನ್ನು ಇನ್ನು ಆರೆಂಟು ತಿಂಗಳಲ್ಲಿಯೇ ಎದುರಾಗಲಿರುವ ಲೋಕಸಭಾ ಚುನಾವಣೆ ವಿಷದೀಕರಿಸಲಿದೆ. ಅದಕ್ಕೂ ಮೊದಲು ಬೆಂಗಳೂರು ಮಹಾ ನಗರಪಾಲಿಕೆ (ಬಿಬಿಎಂಪಿ); ರಾಜ್ಯದ ಉದ್ದಗಲಕ್ಕಿರುವ ಸ್ಥಳೀಯ ಸಂಸ್ಥೆಗಳು; ತಾಲ್ಲೂಕು ಪಂಚಾಯತು, ಜಿಲ್ಲಾ ಪಂಚಾಯತುಗಳಿಗೆ ಚುನಾವಣೆ ನಡೆಯಬೇಕಿದೆ. ಈ ಚುನಾವಣೆಗಳಲ್ಲಿಯೂ ಆಡಳಿತಾರೂಢ ಕಾಂಗ್ರೆಸ್ಸು ಐದು ಗ್ಯಾರಂಟಿಗಳನ್ನು ಮತದಾರರ ಮುಂದಿಟ್ಟುಕೊಂಡೇ ಮತ ಯಾಚಿಸಲಿದೆ. ತನಗೆ ನೆರವಾದವರನ್ನು ಮರೆಯುವ ಗುಣ ಮತದಾರರದಲ್ಲ. ಹಾಗಾಗಿ ಬರಲಿರುವ ಈ ಚುನಾವಣೆಗಳಲ್ಲಿ ಕಾಂಗ್ರೆಸ್ ಮೇಲುಗೈ ಪಡೆಯುವುದೆನ್ನುವ ಭಾವನೆ ಕೇವಲ ಕಾಂಗ್ರೆಸ್‍ನಲ್ಲಿ ಮಾತ್ರವೇ ಅಲ್ಲ; ಬಿಜೆಪಿಯಲ್ಲೂ ಇದೆ. ತನ್ನ ಅದೃಷ್ಟ ಎಷ್ಟರಮಟ್ಟಿಗೆ ನೆಟ್ಟಗೆ ಇದೆ ಎನ್ನುವುದನ್ನು ನೋಡಿಕೊಳ್ಳಲು ಬಿಜೆಪಿಗೆ ಲೋಕಸಭೆ ಚುನಾವಣೆಯೇ ಬರಬೇಕಿದೆ.

2008ರ ಕರ್ನಾಟಕ ವಿಧಾನ ಸಭಾ ಚುನಾವಣೆಯಲ್ಲಿ (karnataka election 2023) ಬಿಜೆಪಿ ಗಳಿಸಿದ್ದು 110 ಸ್ಥಾನ. ಮೋದಿಯವರು ಆಗಿನ್ನೂ ರಾಷ್ಟ್ರ ರಾಜಕೀಯ ನಭೋಮಂಡಲದಲ್ಲಿ ಮಿನುಗುತಾರೆ ಆಗಿರಲಿಲ್ಲ. 2013ರ ಚುನಾವಣೆಯಲ್ಲಿ ಬಿಜೆಪಿ ಸರ್ಕಾರ ಹೋಗಿ ಕಾಂಗ್ರೆಸ್ ಅಧಿಕಾರಕ್ಕೆ ಬಂತು. ಅಲ್ಲಿಂದ ಕೆಲವೇ ತಿಂಗಳಲ್ಲಿ ನಡೆದ 2014ರ ಲೋಕಸಭಾ ಚುನಾವಣೆ ಬಿಜೆಪಿಗೆ ರಾಷ್ಟ್ರ ಮಟ್ಟದಲ್ಲಿ ಭರ್ಜರಿ ಗೆಲುವು ತಂದಿತ್ತ ಮುಹೂರ್ತ. ಪ್ರಧಾನ ಮಂತ್ರಿ ಅಭ್ಯರ್ಥಿ ಎಂದು ಬಿಜೆಪಿ ಘೋಷಿಸಿದ್ದ ಮೋದಿಯವರು ಗುಜರಾತ್ ಮುಖ್ಯಮಂತ್ರಿ ಸ್ಥಾನದಿಂದ ಪ್ರಧಾನಿ ಪಟ್ಟಕ್ಕೆ ಜಿಗಿದರು. ಈ ಕಥೆಗೆ ಈಗ ಹತ್ತು ವರ್ಷ. ಮೋದಿಯವರು ಮುಟ್ಟಿದ್ದೆಲ್ಲವೂ ಚಿನ್ನವಾಗುತ್ತದೆ; ಅವರದು ಮೈದಾಸ ಸ್ಪರ್ಶ ಎನ್ನುವುದು ಬಿಜೆಪಿಗರ ನಂಬಿಕೆಯಾಗಿತ್ತು. ಈ ನಂಬಿಕೆ ಆಧಾರರಹಿತವೇನೂ ಆಗಿರಲಿಲ್ಲ ಎನ್ನುವುದಕ್ಕೆ ಹತ್ತು ಹಲವು ಉದಾಹರಣೆ ಕಣ್ಮುಂದಿದೆ. ಆದರೆ ಎಲ್ಲ ಕಾಲಕ್ಕೂ ಒಂದೇ ಸಬೂಬು ಕೆಲಸ ಮಾಡುವುದಿಲ್ಲ. ಮೋದಿ ಪ್ರಧಾನಿ ಅಭ್ಯರ್ಥಿಯಾಗಿದ್ದ 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಕರ್ನಾಟಕದಲ್ಲಿ ಗೆದ್ದಿದ್ದು 28ರಲ್ಲಿ 17 ಸ್ಥಾನ. ಕಾಂಗ್ರೆಸ್ ಒಂಭತ್ತು; ಜೆಡಿಎಸ್ ಎರಡು ಸೀಟು ಗಳಿಸಿದವು.

2019ರ ಲೋಕಸಭಾ ಚುನಾವಣೆಯಲ್ಲಿ (loksabha election) ರಾಜ್ಯದಲ್ಲಿ ಬಿಜೆಪಿ ಗಳಿಸಿದ್ದು 28ರಲ್ಲಿ 25 ಸೀಟು. ಬಿಜೆಪಿ ಬೆಂಬಲಿತ ಸುಮಲತಾ ಸೇರಿದಂತೆ ಬಿಜೆಪಿ ಬಲ 26ಕ್ಕೆ ಏರಿದ್ದು ಕಣ್ಮುಂದಿರುವ ಇತಿಹಾಸ. ಆಗ 173 ವಿಧಾನ ಸಭಾ ಕ್ಷೇತ್ರಗಳಲ್ಲಿ ಬಿಜೆಪಿಗೆ ಆಶ್ಚರ್ಯಕರ ಲೀಡ್ ಸಿಕ್ಕಿತ್ತು. ಈ ದಿಗ್ವಿಜಯವನ್ನು ಕೆಲವೇ ಕೆಲವು ತಿಂಗಳ ಹಿಂದೆ ರಾಜ್ಯ ವಿಧಾನ ಸಭೆಗೆ ನಡೆದ 2018ರ ಚುನಾವಣೆ ಫಲಿತಾಂಶದೊಂದಿಗೆ ತುಲನೆ ಮಾಡುವುದು ಅಗತ್ಯ. ವಿಧಾನ ಸಭೆ ಚುನಾವಣೆಯಲ್ಲಿ ಪ್ರಧಾನಿಯಾಗಿ ಮೋದಿಯವರು ಭರ್ಜರಿ ಪ್ರಚಾರ ಮಾಡಿದರೂ ಬಿಜೆಪಿಗೆ ಗೆಲ್ಲಲು ಸಾಧ್ಯವಾಗಿದ್ದು 104 ಸೀಟು ಮಾತ್ರ. ಅವರು ಭರ್ಜರಿ ಪ್ರಚಾರ ಮಾಡದ 2018ರ ಚುನಾವಣೆಯಲ್ಲಿ ಬಿಜೆಪಿ 110 ಸೀಟು ಗೆದ್ದಿತ್ತು. ಕರ್ನಾಟಕದಲ್ಲಿ ಬಿಜೆಪಿ ಎರಡು ಮೂರು ಬಾರಿ ಅಧಿಕಾರಕ್ಕೆ ಬಂದಿದೆ. ಆದರೆ ಒಮ್ಮೆಯೂ ಅದಕ್ಕೆ ವಿಧಾನ ಸಭೆಯಲ್ಲಿ ಸರಳ ಬಹುಮತ (113 ಸೀಟು) ಬರಲಿಲ್ಲ. ಅಧಿಕಾರಕ್ಕೆ ಏರಿದ್ದು ವಾಮ ಮಾರ್ಗದಲ್ಲಿ.

ಇದನ್ನೂ ಓದಿ: ಮೊಗಸಾಲೆ ಅಂಕಣ: ರಾಜ್ಯ ಬಿಜೆಪಿ ನಾಯಕರ ಮೇಲೇಕೆ ಮೋದಿ ಕೆಂಡ ಕೋಪ?

ವಿಧಾನ ಸಭೆಯಲ್ಲಿ ಕೇವಲ ಎರಡು ಸೀಟು ಹೊಂದಿದ್ದ ಹಿನ್ನೆಲೆ ಬಿಜೆಪಿಗೆ ಇದೆ. 110 ಸ್ಥಾನಕ್ಕೇರಿದ ಇತಿಹಾಸವೂ ಆ ಇತಿಹಾಸದ ಮುಂದುವರಿದ ಭಾಗವೂ ಆಗಿದೆ. ಆದರೆ ಮೋದಿಯಂಥ ದೈತ್ಯ ಶಕ್ತಿಗೂ ಈ ರಾಜ್ಯದಲ್ಲಿ ಆ ಪಕ್ಷಕ್ಕೆ ಸರಳ ಬಹುಮತ ತಂದುಕೊಡಲಾಗಲಿಲ್ಲ. ಕರ್ನಾಟಕದ ರಾಜಕೀಯ ಪರಂಪರೆಯನ್ನು ಅವಲೋಕಿಸಿದರೆ ಇದು ಅರ್ಥವಾಗದ್ದೇನೂ ಅಲ್ಲ. ಇಲ್ಲಿ ಕರ್ನಾಟಕದಲ್ಲಿ ಬಿಜೆಪಿ ಬೀಜ ಬಿತ್ತಿದ ಶಕ್ತಿಗಳಾದ ಎ.ಕೆ. ಸುಬ್ಬಯ್ಯ, ಬಿ.ಎಸ್.ಯಡಿಯೂರಪ್ಪ ಒಂದಲ್ಲಾ ಒಂದು ಸಂದರ್ಭದಲ್ಲಿ ಸಂಘಟನೆಯ ವಿರುದ್ಧ ತಿರುಗಿ ಬಿದ್ದುದು ಬಲವಾದ ಹಿನ್ನಡೆಗೆ ಮೊದಲ ಕಾರಣ. ರಾಷ್ಟ್ರ ರಾಜಕಾರಣದಲ್ಲಿ ಮೈಮರೆತ ಎಚ್.ಎನ್. ಅನಂತಕುಮಾರ್ ರಾಜ್ಯ ಸಂಘಟನೆಯತ್ತ ಅಗತ್ಯ ಪ್ರಮಾಣದ ಒಲವು ತೋರಲಿಲ್ಲ ಎನ್ನುವುದು ಇನ್ನೊಂದು ಕಾರಣ. ಉಳಿದಂತೆ ಮೂಲ ಬಿಜೆಪಿಗರನ್ನು ಹಣಿಯುವ ಅವಕಾಶ ಕೆಲವರಿಗೆ ಸಿಕ್ಕಿ ಅದನ್ನು ಅವರೆಲ್ಲ ತಮ್ಮ ರಾಜಕೀಯ ಅನುಕೂಲಕ್ಕೆ ಬಳಸಿಕೊಂಡರೆನ್ನುವುದು ಮಗದೊಂದು ಕಾರಣ.

ಬಸವರಾಜ ಬೊಮ್ಮಾಯಿ ಸರ್ಕಾರ ಶೇ.40 ಕಮೀಷನ್ ಹೊಡೆಯುತ್ತಿದೆ ಎಂದು ರಾಜ್ಯ ಗುತ್ತಿಗೆದಾರರ ಸಂಘ ಮಾಡಿದ ಆರೋಪ ಚುನಾವಣೆ ಹೊತ್ತಿಗೆ ಹಿಮದುಂಡೆ ಸ್ವರೂಪಪಡೆದಿತ್ತು. ಆ ಆರೋಪವನ್ನು ತಡೆಯುವ ಯಾಔ ಯತ್ನಕ್ಕೂ ರಾಜ್ಯ ಬಿಜೆಪಿ ಮುಂದಾಗಲಿಲ್ಲ. ಮೋದಿ ಚುನಾವಣೆ ಪ್ರಚಾರದ 26 ರ್ಯಾಲಿಗಳನ್ನು ಕರ್ನಾಟಕದಲ್ಲಿ ಮಾಡಿದರು. ಆದರೆ ಒಮ್ಮೆಯೂ ಈ ಆರೋಪ ಸುಳ್ಳು ಆಧಾರ ರಹಿತ ಎಂದು ಜನಕ್ಕೆ ಹೇಳುವುದಕ್ಕೆ ಧೈರ್ಯ ಮಾಡಲಿಲ್ಲ. ಆರೋಪದ ವಿಚಾರದಲ್ಲಿ ಮೋದಿ ತಾಳಿದ ಮೌನ, ಆರೋಪ ನಿಜವೇ ಇರಬಹುದು ಎಂಬ ತೀರ್ಮಾನಕ್ಕೆ ಮತದಾರರು ಬರಲು ಕಾರಣವಾಯಿತು.

ಬಹುಶಃ ಚುನಾವಣೆ ಪ್ರಚಾರಕ್ಕೆ ಬಂದ ಸಮಯದಲ್ಲಿ ಭ್ರಷ್ಟಾಚಾರದ ಆರೋಪ ತಮ್ಮ ಸರ್ಕಾರಕ್ಕೇ ಮೆತ್ತಿಕೊಂಡಿದ್ದನ್ನು ಕಂಡ ಮೋದಿಯವರಲ್ಲಿ ಉದಯಿಸಿದ ಕೋಪ ಈಗ ಪರಾಕಾಷ್ಟೆಗೆ ಬಂದು ನಿಂತಂತಿದೆ. ಕರ್ನಾಟಕ ಬಿಜೆಪಿ ಸದ್ಯದಲ್ಲಿ ದುರಸ್ತಿಯಾಗುವ ಸಾಧ್ಯತೆ ಇಲ್ಲ ಎಂಬ ಭಾವನೆ ಅವರಲ್ಲಿ ಬಂದಿರಬಹುದೆ…? ಹಾಗಲ್ಲವಾದರೆ ವಿಧಾನ ಸಭೆಯಲ್ಲಿ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಒಂದು ಹೆಸರನ್ನು ಪರಿಗಣಿಸುವುದು ಆ ಪಕ್ಷಕ್ಕೆ ಕಷ್ಟವಾಗಬೇಕಿತ್ತೇ…? ತಮಿಳುನಾಡಿನಲ್ಲಿ ಬಿಜೆಪಿ ಲೆಟರ್‌ ಹೆಡ್ ಪಕ್ಷ. ಆದರೆ ಆ ರಾಜ್ಯ ಘಟಕದ ಅಧ್ಯಕ್ಷ ಅಣ್ಣಾಮಲೈಗೆ ದೆಹಲಿಯಲ್ಲಿ ಸಿಗುವ ಸ್ವಾಗತ ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳೂ ಸೇರಿದಂತೆ ಯಾರಿಗೂ ಸಿಗುತ್ತಿಲ್ಲ ಎನ್ನುವುದು ಮೋದಿ ಸಿಟ್ಟು ಕೆಂಡದ ಸ್ವರೂಪ ಪಡೆದಿರುವುದನ್ನು ಬಿಚ್ಚಿಡುತ್ತದೆ.

ಇದನ್ನೂ ಓದಿ: ಮೊಗಸಾಲೆ ಅಂಕಣ: ಈ ʼತ್ಯಾಗರಾಜʼರು ಈಗ ಯಾರಿಗೆ ಬೇಕು? ಯಾರಿಗೆ ಬೇಡ?

Exit mobile version