Site icon Vistara News

ಮೊಗಸಾಲೆ ಅಂಕಣ | ಸಿಪಿಎಂ ಮತ್ತು ತೋಳ ಕುರಿಮರಿ ಕಥೆ

shailaja k k

ಏಷ್ಯಾದ ನೊಬೆಲ್ ಎಂದೇ ಖ್ಯಾತವಾಗಿರುವ ರಾಮೊನ್ ಮ್ಯಾಗ್ಸೇಸೆ ಪ್ರಶಸ್ತಿ ಪ್ರಶ್ನಾರ್ಹ ಕಾರಣಕ್ಕಾಗಿ ಈ ಬಾರಿ ಚರ್ಚೆಗೆ ಒಳಗಾಗಿದೆ. ೧೯೫೭ರಲ್ಲಿ ಆರಂಭವಾದ ಈ ಪ್ರಶಸ್ತಿಯನ್ನು ಜಗತ್ತಿನ ನೂರಾರು ಗಣ್ಯರು ಸ್ವೀಕರಿಸಿ ಅದರ ಮೌಲ್ಯ ವೃದ್ಧಿಗೆ ನೆರವಾಗಿದ್ದಾರೆ. ವಿನೋಬಾ ಭಾವೆ, ಮದರ್ ತೆರೆಸಾ, ವರ್ಗಿಸ್ ಕುರಿಯನ್, ಜಯಪ್ರಕಾಶ್ ನಾರಾಯಣ, ಸತ್ಯಜಿತ್ ರಾಯ್, ಕಮಲಾದೇವಿ ಚಟ್ಟೋಪಾಧ್ಯಾಯ, ಎಂ.ಎಸ್.ಸ್ವಾಮಿನಾಥನ್, ಎಂ.ಎಸ್.ಸುಬ್ಬುಲಕ್ಷ್ಮಿ, ಅರುಣ್ ಶೌರಿ, ಆರ್.ಕೆ. ಲಕ್ಷ್ಮಣ್, ಬಾಬಾ ಅಮ್ಟೆ, ಅರವಿಂದ ಕೇಜ್ರಿವಾಲ್, ಕೆ.ವಿ.ಸುಬ್ಬಣ್ಣ, ರವಿಶಂಕರ್, ಮಹಾಶ್ವೇತಾದೇವಿ, ಹರೀಶ್ ಹಂದೆ ಮುಂತಾದ ಭಾರತೀಯರೂ ಪ್ರಶಸ್ತಿ ಪುರಸ್ಕೃತರ ಪಟ್ಟಿಯಲ್ಲಿ ಸೇರಿದ್ದಾರೆ. ಸಂಗೀತ, ಕಲೆ, ಸಿನಿಮಾ, ಸಾಹಿತ್ಯ, ರಂಗ ಭೂಮಿ, ವಿಜ್ಞಾನ, ಸಾಮಾಜಿಕ ಸೇವೆ ಮುಂತಾದ ಹಲವು ಪ್ರಕಾರಗಳಲ್ಲಿ ಗಣನೀಯವೂ ಅನುಕರಣೀಯವೂ ಆದ ಸೇವಾವ್ರತಿಗಳನ್ನು ಪ್ರತಿವರ್ಷವೂ ಗುರುತಿಸಿ ಪುರಸ್ಕರಿಸುವ ಪರಂಪರೆಯನ್ನು ಪ್ರಶಸ್ತಿ ಸಮಿತಿ ಪಾಲಿಸಿಕೊಂಡು ಬಂದಿದೆ. ಈ ಬಾರಿ ಅದರ ತೀರ್ಮಾನ ಮಾತ್ರ ಮೊದಲೇ ಪ್ರಸ್ತಾಪಿಸಿದಂತೆ ವಿವಾದಕ್ಕೆ ಕಾರಣವಾಗಿದೆ.

ಎಲ್ಲವೂ ಸರಿಯಾಗಿ ನಡೆದಿದ್ದರೆ ಭಾರತಕ್ಕೆ ಈ ಬಾರಿ ಮತ್ತೊಮ್ಮೆ ಮ್ಯಾಗ್ಸೆಸೆ ಪ್ರಶಸ್ತಿ ಬರುವ ಭರವಸೆ ಇತ್ತು. ಕೋವಿಡ್ ಸಮಯದಲ್ಲಿ ಕೇರಳ ಎಡರಂಗ ಸರ್ಕಾರದಲ್ಲಿ ಆರೋಗ್ಯ ಸಚಿವರಾಗಿ ಕಾರ್ಯನಿರ್ವಹಿಸಿ ಜಗತ್ತಿನ ಗಮನ ಸೆಳೆದಿದ್ದ ಕೆ.ಕೆ. ಶೈಲಜಾ ಅವರನ್ನು ಪುರಸ್ಕರಿಸಲು ಮುಂದಾಗಿದ್ದ ಸಮಿತಿ, ಮಾರ್ಕ್ಸ್‌ವಾದಿ ಕಮ್ಯೂನಿಸ್ಟ್ ಪಕ್ಷ ತಾಳಿರುವ ಎಡಬಿಡಂಗಿ ನಿಲುವಿನ ಕಾರಣವಾಗಿ ಮುಂದೇನು ಎಂಬಂತೆ ಅಡ್ಡ ದಾರಿಯಲ್ಲಿ ನಿಂತಿದೆ. ಪ್ರಶಸ್ತಿ ಕೊಡುವ ಸಮಿತಿ ಯಾವತ್ತೂ ಒಂದೇ ಹೆಸರನ್ನು ನೆಚ್ಚಿಕೊಂಡಿರುವುದಿಲ್ಲ. ಆಯ್ದ ಒಂದಿಷ್ಟು ಹೆಸರುಗಳಲ್ಲಿ ಒಂದನ್ನು ಅಂತಿಮಗೊಳಿಸುತ್ತದೆ. ಆ ವ್ಯಕ್ತಿ ಒಲ್ಲೆ ಎಂದಾಗ ಮತ್ತೊಂದು ಹೆಸರು ಮುನ್ನೆಲೆಗೆ ಬರುತ್ತದೆ. ಕೆ.ಕೆ. ಶೈಲಜಾ ಬದಲಿಗೆ ಮತ್ತೊಬ್ಬ ಅರ್ಹರನ್ನು ಸಮಿತಿ ಹೆಸರಿಸಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಬಹುದು; ಈ ವರ್ಷ ಬೇರೆ ಯಾರಿಗೂ ಪ್ರಶಸ್ತಿಯನ್ನು ಕೊಡದೆಯೂ ಇರಬಹುದು. ಆದರೆ ಭಾರತಕ್ಕೆ ಒಲಿದಿದ್ದ ಪ್ರಶಸ್ತಿ “ಕೈಯಲ್ಲಿನ ತುತ್ತು ಬಾಯಿಗೆ ಎಟುಕದಂತೆ” ಆಗಿರುವುದಕ್ಕೆ ಸಿಪಿಎಂ ತಾಳಿರುವ ನಿಲುವೇ ಕಾರಣವಾಗಿದೆ.

ಕೋವಿಡ್ ಹಾವಳಿ ಮೇರೆ ಮೀರಿದ್ದ ೨೦೧೯-೨೦೨೨ರ ಸಮಯದಲ್ಲಿ ಶೈಲಜಾ ಆರೋಗ್ಯ ಸಚಿವರಾಗಿ ಮಾಡಿದ ಕೆಲಸ ಕೇರಳದ ಕಮ್ಯೂನಿಸ್ಟ್ ಸರ್ಕಾರಕ್ಕೂ ಹೆಸರನ್ನು ತಂದಿತ್ತು. ಕೇರಳದ್ದು ವಿಚಿತ್ರ ರಾಜಕೀಯ. ಅಲ್ಲಿ ಒಂದು ಅವಧಿಗೆ ಜನ ಕಾಂಗ್ರೆಸ್ ನೇತೃತ್ವದ ಒಕ್ಕೂಟವನ್ನು ಅಧಿಕಾರಕ್ಕೆ ತರುತ್ತಾರೆ. ಮತ್ತೊಮ್ಮೆ ಸಿಪಿಎಂ ನೇತೃತ್ವದ ಒಕ್ಕೂಟಕ್ಕೆ ಅಧಿಕಾರದ ಹೊಣೆ ವಹಿಸುತ್ತಾರೆ. ನಾಲ್ಕು ದಶಕದ ಈ ಪರಂಪರೆ ತುಂಡಾಗಿದ್ದು ಈ ಬಾರಿ, ೨೦೨೧ರ ಚುನಾವಣೆಯಲ್ಲಿ. ೨೦೧೬ರಲ್ಲಿ ಸಿಪಿಎಂ ನೇತೃತ್ವದ ಎಡರಂಗ ಗಳಿಸಿದ್ದಕ್ಕಿಂತ ಈ ಸಲ ಹೆಚ್ಚುವರಿ ಎಂಟು ಸೀಟನ್ನು ಬಾಚಿಕೊಂಡಿತು. ಪಿಣರಾಯಿ ವಿಜಯನ್ ನೇತೃತ್ವದ ಸಿಪಿಎಂ ಒಕ್ಕೂಟದ ಸರ್ಕಾರ ಕೇರಳದಲ್ಲಿ ಮತ್ತೆ ಆಯ್ಕೆಯಾಗಿದ್ದು ನಿಜಕ್ಕೂ ಐತಿಹಾಸಿಕ ಬೆಳವಣಿಗೆ ಎನ್ನುವುದರಲ್ಲಿ ಎರಡು ಅಭಿಪ್ರಾಯವಿಲ್ಲ. ಕೇರಳ ಮತದಾರರು ಮತ್ತೊಮ್ಮೆ ಪಿಣರಾಯಿ ನೇತೃತ್ವದ ಸರ್ಕಾರವನ್ನು ಆಯ್ಕೆ ಮಾಡಿದ್ದಕ್ಕೆ ಹಲವು ಕಾರಣಗಳಿವೆ. ಶೈಲಜಾ ಕಾರ್ಯದಕ್ಷತೆ ಇವುಗಳಲ್ಲಿ ನಿಸ್ಸಂಶಯವಾಗಿ ಒಂದು ಮತ್ತು ಬಹಳ ಮುಖ್ಯವಾದುದು. ಶೈಲಜಾರ ಕಾರ್ಯವೈಖರಿ ಮತ್ತು ಕಾರ್ಯದಕ್ಷತೆಗೆ ಕೋವಿಡ್ ಪೀಡಿತ ಜಗತ್ತು ಮೆಚ್ಚುಗೆ ಸೂಚಿಸಿ ಹರಿಸಿದ ಹೊಗಳಿಕೆಯನ್ನು ಜೀರ್ಣಿಸಿಕೊಳ್ಳಲಾಗದ ಸಿಪಿಎಂ ನಾಯಕತ್ವದ ಮನಃಸ್ಥಿತಿಯೇ ಪ್ರತಿಷ್ಠಿತ ಪ್ರಶಸ್ತಿಯನ್ನು ಶೈಲಜಾ ಸ್ವೀಕರಿಸುವುದಕ್ಕೆ ಅಡ್ಡಗೋಡೆಯಾಯಿತು ಎನ್ನುವುದು ವಿಪರ್ಯಾಸ.

ಆರೋಗ್ಯ ಸಚಿವರಾಗಿ ಶೈಲಜಾ ಮಾಡಿದ ಕರ್ತವ್ಯದಲ್ಲಿ ವಿಶೇಷವೇನೂ ಇಲ್ಲ ಎಂದು ಸಿಪಿಎಂ ಮಂಡಿಸುತ್ತಿರುವ ವಾದ ಒಪ್ಪಿತವೇ. ಕೋವಿಡ್ ವಿರುದ್ಧ ಕೇರಳ ತೆಗೆದುಕೊಂಡ ಕಾರ್ಯಕ್ರಮ ಸರ್ಕಾರದ ಸಾಮೂಹಿಕ ಕಾರ್ಯಕ್ರಮವೇ ಹೊರತು ವ್ಯಕ್ತಿಗತವಾದುದಲ್ಲ ಎನ್ನುವ ಮಾತನ್ನೂ ಒಪ್ಪೋಣ. ಮುಖ್ಯಮಂತ್ರಿಯ ಅಪೇಕ್ಷೆಯಂತೆ ಸಚಿವ ಹುದ್ದೆ ಪಡೆದವರಿಗೆ ನಿರ್ದಿಷ್ಟ ಜವಾಬ್ದಾರಿ ನಿಗದಿಯಾಗುತ್ತದೆ. ವಹಿಸಿಕೊಂಡ ಜವಾಬ್ದಾರಿಯನ್ನು ಸಚಿವರು ಹೇಗೆ ನಿಭಾಯಿಸುತ್ತಾರೆ ಎನ್ನುವುದು ತದನಂತರದಲ್ಲಿ ಸಾರ್ವಜನಿಕವಾಗಿ ನಿಕಷಕ್ಕೆ ಒಳಗಾಗುತ್ತದೆ. ಶೈಲಜಾ, ಆರೋಗ್ಯ ಸಚಿವರಾಗಿ ಅಧಿಕಾರ ವಹಿಸಿಕೊಂಡಾಗ ಇನ್ನೂ ಕೋವಿಡ್ ಹಾವಳಿ ಭಯಂಕರವಾಗಿರಲಿಲ್ಲ. ನಂತರದಲ್ಲಿ ಅದು ದೇಶಕ್ಕೆ ಅಮರಿಕೊಂಡ ರೀತಿ ಸರ್ವವೇದ್ಯ. ಆರೋಗ್ಯ ಸಚಿವರಾಗಿದ್ದ ಶೈಲಜಾ ಕೋವಿಡ್ ವಿರುದ್ಧದ ಹೋರಾಟದ ನೇತೃತ್ವವನ್ನು ಸಂತೋಷದಿಂದಲೆ ವಹಿಸಿಕೊಂಡರು. ಬೇರೆ ಬೇರೆ ರಾಜ್ಯಗಳಲ್ಲಿ ಕರ್ನಾಟಕವೂ ಸೇರಿದಂತೆ ಆರೋಗ್ಯ ಸಚಿವರ ಅದಕ್ಷತೆ, ಕರ್ತವ್ಯ ಲೋಪ, ಕೋವಿಡ್ ಹೆಣದ ಹೆಸರಲ್ಲಿ ಹಣ ಎತ್ತುವ ಭ್ರಷ್ಟಾಚಾರ ಸುದ್ದಿಯಾಗುತ್ತಿದ್ದರೆ ಕೇರಳದಲ್ಲಿ ಶೈಲಜಾ ನಿರ್ವಹಿಸಿದ ಹೊಣೆಗಾರಿಕೆ ಲೋಕಪ್ರಿಯವಾಯಿತು. ಆ ನಿರ್ವಹಣೆಯಲ್ಲಿ ಶೈಲಜಾ ವಹಿಸಿದ ಪಾತ್ರ ಎಷ್ಟರ ಮಟ್ಟಿಗೆ ಜನಮೆಚ್ಚುಗೆಗೆ ಪಾತ್ರವಾಗಿತ್ತೆಂದರೆ ಆಡಳಿತ ಪಕ್ಷದಲ್ಲೇ ಅಸೂಯೆ ಸ್ಫೋಟಿಸುವಂತಾಯಿತು. ಸಿಪಿಎಂ ಸರ್ಕಾರದ್ದು ಒಂದು ತೂಕವಾದರೆ ಶೈಲಜಾರದ್ದೇ ಒಂದು ತೂಕ ಎನ್ನುವಂತಾಗಿದ್ದನ್ನು ಅರಗಿಸಿಕೊಳ್ಳಲಾಗದೆ ಅಸಹ್ಯ ರಾಜಕೀಯಕ್ಕೆ ಕಾರಣವಾಯಿತು. ಅದರ ಪರಿಣಾಮವನ್ನು ಗತಮನಿಸಬೇಕು, ೨೦೨೧ರಲ್ಲಿ ಸಿಪಿಎಂ ನೇತೃತ್ವದ ಎಡರಂಗ ಅಧಿಕಾರಕ್ಕೆ ಮರಳಿದಾಗ ಶೈಲಜಾರಿಗೆ ಮಂತ್ರಿ ಸ್ಥಾನ ದೊರೆಯದಂತೆ ವ್ಯವಸ್ಥಿತವಾಗಿ ನೋಡಿಕೊಳ್ಳಲಾಯಿತು.

ಇದನ್ನೂ ಓದಿ | ಮೊಗಸಾಲೆ ಅಂಕಣ | ಏರುತ್ತಿರುವ ಅದಾನಿ ಸಾಲ ಸಂಪತ್ತಿನ ಜ್ವರ, ಯಾರ ವರ?

ಹಗಲೂ ರಾತ್ರಿ ಎನ್ನದೆ ಶೈಲಜಾ ಅವರು ಮಾಡಿದ ಸೇವೆ ಅನುಕರಣೀಯವಾಗಿತ್ತೆಂದೇ ಕರ್ನಾಟಕವೂ ಸೇರಿದಂತೆ ಬೇರೆ ಬೇರೆ ರಾಜ್ಯಗಳಲ್ಲಿ ಸದಭಿಪ್ರಾಯದ ಚರ್ಚೆಗೆ ಒಳಗಾಗಿತ್ತು. ಸಿಪಿಎಂ ನೇತೃತ್ವದ ಸರ್ಕಾರವನ್ನು ಮೆಚ್ಚುವುದಾದರೂ ಹೇಗೆಂಬ ರಾಜಕೀಯ ಕಾರಣಕ್ಕಾಗಿ ಬಿಜೆಪಿ, ಕಾಂಗ್ರೆಸ್ ಮುಂತಾದ ಪಕ್ಷಗಳು, ಸರ್ಕಾರಗಳು ಬಹಿರಂಗವಾಗಿ ಕಮ್ಯೂನಿಸ್ಟ್ ಸರ್ಕಾರಕ್ಕಾಗಲೀ ಶೈಲಜಾ ಅವರಿಗಾಗಲೀ ಕ್ರೆಡಿಟ್ ಕೊಡುವ ಔದಾರ್ಯ ತೋರಲಿಲ್ಲ. ಅದನ್ನು ಮೂರನೇ ದರ್ಜೆ ರಾಜಕೀಯ ಎನ್ನದೆ ಬೇರೆ ಶಬ್ದವಿಲ್ಲ. ಆದರೆ ಸ್ವತಃ ಕಮ್ಯೂನಿಸ್ಟ್ ಪಕ್ಷವೇ ತನ್ನ ಸದಸ್ಯರೊಬ್ಬರಿಗೆ ಅವರು ಸಲ್ಲಿಸಿದ ಸಮಾಜ ಸೇವೆಗಾಗಿ ಪ್ರಶಸ್ತಿ ಬಾರದಂತೆ ತಡೆಯುವುದನ್ನು ಮೂರನೇ ದರ್ಜೆ ರಾಜಕೀಯ ಎನ್ನಬಾರದು ಎಂದಾದರೆ ಏನೆಂದು ಕರೆಯೋಣ?

ದೇಶಕ್ಕೆ ಸ್ವಾತಂತ್ರ್ಯ ಬಂದ ೧೯೪೭ರ ಸಮಯದಲ್ಲಿ ಕಮ್ಯೂನಿಸ್ಟ್ ಸಂಘಟನೆಯಲ್ಲಿ ಅಂಥ ಬಿರುಕು ಕಾಣಿಸಿಕೊಂಡಿರಲಿಲ್ಲ. ಆದರೆ ೧೯೬೪ರಲ್ಲಿ ಭಾರತ ಕಮ್ಯೂನಿಸ್ಟ್ ಪಕ್ಷ ಅಡಿಯಿಂದ ಮುಡಿವರೆಗೆ ಇಬ್ಭಾಗವಾಯಿತು. ಅಂದಿನಿಂದ ಇಂದಿನವರೆಗೂ ಸಿಪಿಐ ಮತ್ತು ಸಿಪಿಎಂ ಎಂಬ ಆ ಎರಡು ಹೋಳನ್ನು ಜೋಡಿಸುವ ಮಾತು ಮೇ ಒಂದರ ಕಾರ್ಮಿಕ ದಿನಾಚರಣೆ ಸಂದರ್ಭದಲ್ಲಿ ಕೇಳಿಬರುತ್ತದೆ. ಮೈಕ್‌ನಲ್ಲಿ ಕೇಳಿಬರುವ ಭಾಷಣದ ಆ ಮಾತು ಸ್ಪೀಕರ್‌ನಲ್ಲಿ ಹೊರಬಿದ್ದು ಗಾಳಿಯಲ್ಲಿ ಲೀನವಾಗಿ ಹೋಗುತ್ತದೆ. ಸಿಪಿಐ-ಸಿಪಿಎಂಗಳನ್ನು ಒಂದುಗೂಡಿಸಿ ನೋಡುವ ಉಮೇದಿನಲ್ಲಿದ್ದ ಹಲವರು ಇತಿಹಾಸದ ಪುಟಗಳಲ್ಲಿ ಸಂದು ಹೋಗಿದ್ದಾರೆ. ಅಲ್ಲಿ ಇಲ್ಲಿ ಉಳಿದಿರುವ ಕೆಲವರು ಐತಿಹಾಸಿಕ ಪ್ರಮಾದಕ್ಕೆ ಪರಿಹಾರವೇ ಇಲ್ಲವೇ ಎಂಬ ಸಂಕಟದಲ್ಲಿದ್ದಾರೆ.

ಐತಿಹಾಸಿಕ ಪ್ರಮಾದ ೧೯೬೪ರ ನಂತರದಲ್ಲಿ ಮತ್ತೆ ಸಿಪಿಎಂನಲ್ಲಿ ಘಟಿಸಿದ್ದು ೧೯೯೬ರಲ್ಲಿ. ಕೇಂದ್ರದಲ್ಲಿ ಸರ್ಕಾರ ರಚಿಸುವ ಅವಕಾಶ ಕಾಂಗ್ರೆಸ್, ಬಿಜೆಪಿಯೇತರ ರಾಷ್ಟ್ರೀಯ ರಂಗಕ್ಕೆ ಒದಗಿ ಬಂದಾಗ ಪ್ರಧಾನಿ ಸ್ಥಾನಕ್ಕೆ ಮೊದಲಿಗೆ ಪ್ರಸ್ತಾಪವಾದ ಹೆಸರು ಜ್ಯೋತಿ ಬಸು ಅವರದು. ದಶಕಗಳಿಂದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿದ್ದ ಸಿಪಿಎಂನ ಹಿರಿಯ ನಾಯಕ ಜ್ಯೋತಿ ಬಸು, ಪ್ರಧಾನಿಯಾಗಿದ್ದರೆ ಭಾರತದ ಸ್ಥಿತಿಗತಿಯ ಸ್ವರೂಪ ಈಗಿನಂತೆ ಇರುತ್ತಿರಲಿಲ್ಲ ಎನ್ನುವುದು ರಾಜಕೀಯ ಬಲ್ಲವರೆಲ್ಲರ ಅಭಿಮತ. ರಾಷ್ಟ್ರೀಯ ರಂಗ ಈ ಹೆಸರನ್ನು ಸೂಚಿಸಿದಾಗ ಸಂತೋಷ ಸಂಭ್ರಮಾತಿರೇಕದಲ್ಲಿ ಕುಣಿದಾಡಬೇಕಿದ್ದ ಸಿಪಿಎಂನ ತಥಾಕಥಿತ ನಾಯಕತ್ವ ಜ್ಯೋತಿ ದಾ ಹೆಸರಿನ ಪ್ರಸ್ತಾಪಕ್ಕೆ ತಿರುಗಿಬಿದ್ದು ಅದಕ್ಕೆ ನೇಣು ಹಾಕುವುದು ಹೇಗೆ ಎಂದು ಯೋಚಿಸಿದ್ದು ಆತ್ಮಹತ್ಯಾಕಾರಿಯಾಗಿತ್ತು. ತಮ್ಮ ಹೆಸರಿನ ಪ್ರಸ್ತಾಪಕ್ಕೆ ಅನುಮೋದನೆ ನೀಡದ ಸಿಪಿಎಂ ನಾಯಕತ್ವದ ನಿಲುವನ್ನು ಸ್ವತಃ ಜ್ಯೋತಿ ಬಸು ಅವರೇ ಮುಂದೊಂದು ದಿನ ಐತಿಹಾಸಿಕ ಪ್ರಮಾದ ಎಂದು ಕಟು ಶಬ್ದಗಳಲ್ಲಿ ಬಣ್ಣಿಸಿದರು.

ಇದನ್ನೂ ಓದಿ | ಮೊಗಸಾಲೆ ಅಂಕಣ | ಸಂಕಟ ಬಂದಾಗಲೆಲ್ಲ ವೆಂಕಟರಮಣ, ಕಾಂಗ್ರೆಸ್‍ನ ಹಳೆ ಚಾಳಿ

ಮೂರನೆ ಬಾರಿಗೆ ಮಾಡಿದ ತಪ್ಪನ್ನೇ ಮತ್ತೆ ಮಾಡಿರುವ ಸಿಪಿಎಂ, ರಾಮೊನ್ ಮ್ಯಾಗ್ಸೇಸೆ ಪ್ರಶಸ್ತಿಯನ್ನು ಒಲ್ಲೆ ಎನ್ನುವಂತೆ ಶೈಲಜಾರ ಮೇಲೆ ಒತ್ತಡ ಹಾಕಿದೆ. ಶೈಲಜಾ ಪಕ್ಷದ ಆಣತಿಯಂತೆ ನಡೆದುಕೊಂಡಿದ್ದಾರೆ. ಇತಿಹಾಸದಿಂದ ಏನನ್ನೂ ಕಲಿಯದವರು ಇತಿಹಾಸಕ್ಕೆ ಏನನ್ನೂ ಜೋಡಿಸಲಾರರು ಎಂಬ ಮಾತು ಇದೆ. ಸಿಪಿಎಂ ಈಗ ಈ ಆರೋಪವನ್ನು ತಾನೇ ತಾನಾಗಿ ಮೈಮೇಲೆ ಎಳೆದುಕೊಂಡಿದೆ. ಇಷ್ಟಕ್ಕೂ ಆ ಪಕ್ಷ ಪ್ರಶಸ್ತಿ ತಿರಸ್ಕಾರಕ್ಕೆ ಕೊಟ್ಟಿರುವ ಕಾರಣವಾದರೂ ಏನೆಂದು ನೋಡಿದರೆ ಅದರ ಆತ್ಮಹತ್ಯಾಕಾರಿ ನಿಲುವಿಗೆ ಅಯ್ಯೋ ಎನಿಸುತ್ತದೆ. ರಾಮೊನ್ ಮ್ಯಾಗ್ಸೇಸೆ, ಫಿಲಿಪೀನ್ಸ್ ಅಧ್ಯಕ್ಷರಾಗಿದ್ದ ಐವತ್ತರ ದಶಕದ ಸಮಯದಲ್ಲಿ ಆ ದೇಶದಲ್ಲಿ ಕಮ್ಯೂನಿಸ್ಟ್ ಆಂದೋಳನವನ್ನು ಬಗ್ಗು ಬಡಿಯುವ ಕೆಲಸ ಮಾಡಿದ್ದರು. ಇದೀಗ ಅವರ ಹೆಸರಿನ ಪ್ರಶಸ್ತಿ ಪಡೆಯುವುದು ಅನುಚಿತವಾಗುತ್ತದೆ ಎನ್ನುವುದು ಸಿಪಿಎಂ ವಿವರಣೆ. ಇರಬಹುದು. ಎಂದೋ ಮಾಡಿದ ತಪ್ಪನ್ನು ತಿದ್ದಿಕೊಳ್ಳಲು ಅವಕಾಶವೇ ಇಲ್ಲ ಎನ್ನುವುದು ಆ ಪಕ್ಷದ ನಿಲುವಾದರೆ ಅದನ್ನು ಒಪ್ಪೋಣ. ಆದರೆ ಅದರ ಒಲವು ನಿಲುವು ನೀತಿ ನಿರ್ಧಾರ ಒಂದೇ ರೀತಿಯದಾಗಿಲ್ಲ ಎನ್ನಲು ಸಾಕಷ್ಟು ಕಾರಣ ಕೊಡಬಹುದು. ಅದರಲ್ಲಿ ಮುಖ್ಯವಾದುದು ೧೯೫೯ರಲ್ಲಿ ಅಂದಿದ್ದ ಜವಾಹರಲಾಲ್ ನೆಹರೂ ಸರ್ಕಾರ, ಸಿಪಿಎಂ ನೇತೃತ್ವದ ಕೇರಳ ಸರ್ಕಾರವನ್ನು ಸಂವಿಧಾನದ ೩೫೬ನೇ ವಿಧಿ ಬಳಸಿ ವಜಾ ಮಾಡಿದ ಪ್ರಕರಣ.

ಜಗತ್ತಿನಲ್ಲಿ ಜನರಿಂದ ಆಯ್ಕೆಯಾದ ಮೊದಲ ಕಮ್ಯೂನಿಸ್ಟ್ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು ೧೯೫೭ರಲ್ಲಿ, ಕೇರಳದಲ್ಲಿ. ಬಂದೂಕಿನ ನಳಿಕೆಯನ್ನು ತೋರಿಸಿ ಅಧಿಕಾರ ಹಿಡಿಯುವ ನೀತಿಗೆ ಭಿನ್ನವಾಗಿ ಮತಪೆಟ್ಟಿಗೆಯಲ್ಲಿ ಆಯ್ಕೆ ಮಂಡಿಸುವ ಜನತಂತ್ರದ ಮೂಲಕ ಅಧಿಕಾರಕ್ಕೆ ಬಂದ ಕೇರಳದ ಮಾದರಿ ಕಮ್ಯೂನಿಸ್ಟ್ ವಿರೋಧಿ ಜಗತ್ತನ್ನು ತಲ್ಲಣಕ್ಕೆ ಈಡು ಮಾಡಿತ್ತು. ದೆಹಲಿಯಲ್ಲಿದ್ದ ನೆಹರೂ ಸರ್ಕಾರ ಈ ವಿಚಾರದಲ್ಲಿ ಅಷ್ಟೆಲ್ಲ ತಲೆ ಕೆಡಿಸಿಕೊಂಡಿರಲಿಲ್ಲ. ಆದರೆ ಅಮೆರಿಕದ ಅಂದಿನ ಅಧ್ಯಕ್ಷ ಐಸೆನ್ ಹೂವರ್ ಮಾತ್ರ ನೆಹರೂರಂತೆ ಕೈ ಕಟ್ಟಿ ಕೂತಿರಲಿಲ್ಲ. ಕಮ್ಯೂನಿಸಂ ಎನ್ನುವುದು ಜನತಂತ್ರ ವಿರೋಧಿ ಎನ್ನುವುದು ಅಮೆರಿಕದ ಮತ್ತು ಅಮೆರಿಕಾದ ಬೇಹುಗಾರಿಕೆ ದಳ ಸಿಐಎ ವಾದ. ಪ್ರಜಾಪ್ರಭುತ್ವ ಆಧಾರದಲ್ಲಿ ಕಮ್ಯೂನಿಸ್ಟರು ಅಧಿಕಾರ ಹಿಡಿಯುವ ಕ್ರಮ ಕಮ್ಯೂನಿಸಂ ದ್ವೇಷವನ್ನೇ ಉಸಿರಾಡುವ ಅಮೆರಿಕಾ ಪಾಲಿಗೆ ದುಃಸ್ವಪ್ನವಾಗಿತ್ತು. ನೆಹರೂ ಮಗಳು ಇಂದಿರಾ ಗಾಂಧಿ ಏಐಸಿಸಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುವುದಕ್ಕೆ ಕಾದಿದ್ದ ಅಮೆರಿಕಾ, ಪುತ್ರಿಯ ಮೂಲಕ ತಂದೆಯ ಮೇಲೆ ಒತ್ತಡ ತಂದು ತನ್ನ ಕಾರ್ಯ ಸಿದ್ಧಿಯಾಗುವಂತೆ ನೋಡಿಕೊಂಡಿತು ಎನ್ನುವುದು ನಮ್ಮ ಐತಿಹಾಸಿಕ ದಾಖಲೆಗಳಲ್ಲಿ ಬೆಚ್ಚಗೆ ಕೂತಿರುವ ವಿವರ. ಜನರಿಂದಲೇ ಚುನಾಯಿತವಾಗಿದ್ದ ಎ.ಎಂ.ಎಸ್. ನಂಬೂದರಿಪಾಡ್ ಸರ್ಕಾರವನ್ನು ಸುಳ್ಳುಸುಳ್ಳು ನೆಪದ ಮೇಲೆ ವಜಾ ಮಾಡಿದ ಕಾಂಗ್ರೆಸ್ ಕ್ರಮಕ್ಕೆ ಆಗ ಕೆಂಡಾಮಂಡಲವಾಗಿದ್ದು ಭಾರತ ಕಮ್ಯೂನಿಸ್ಟ್ ಪಕ್ಷ.

ಮುಂದೆ ಭಾರತ ಕಮ್ಯೂನಿಸ್ಟ್ ಪಕ್ಷ ಹೋಳಾಗುವುದರಲ್ಲಿಯೂ ಕಾಂಗ್ರೆಸ್/ಇಂದಿರಾ ಗಾಂಧಿ ಕೈ ಇದೆ ಎನ್ನುವುದು ಸಿಪಿಎಂ ಸಂದೇಹಿಸಿ ಮಾಡಿರುವ ಆರೋಪ. ೧೯೭೫ರಲ್ಲಿ ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿದ ಇಂದಿರಾ ಗಾಂಧಿ ಮತ್ತು ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಸಿಪಿಐ ಅಖಂಡ ಬೆಂಬಲ ಕೊಟ್ಟಿದ್ದನ್ನು ಈ ಮಾತಿಗೆ ಉದಾಹರಣೆಯಾಗಿ ನೀಡಲಾಗುತ್ತಿದೆ. ತುರ್ತು ಪರಿಸ್ಥಿತಿ ವಿರುದ್ಧ ಧೀಮಂತ ನೆಲೆಯಲ್ಲಿ ಪ್ರತಿಭಟಿಸಿದ ರಾಜಕೀಯ ಪಕ್ಷಗಳಲ್ಲಿ ಸಿಪಿಎಂ ಮುಂಚೂಣಿಯಲ್ಲಿದೆ. ಅಲ್ಲಿಂದ ಮುಂದಕ್ಕೆ ಬಂದರೆ ಪಿ.ವಿ. ನರಸಿಂಹ ರಾವ್ ಪ್ರಧಾನಿ ಆಗಿದ್ದಾಗ ಮನಮೋಹನ್ ಸಿಂಗ್ ಅರ್ಥ ಸಚಿವರು. ಅವರು ಮುಂದಿಟ್ಟ ಹೊಸ ಆರ್ಥಿಕ ನೀತಿ, ಬಡತನವನ್ನಲ್ಲ ಬಡವರನ್ನು ಇನ್ನಷ್ಟು ಬಡವರನ್ನಾಗಿಸುವ ನೀತಿ ಎಂದು ಟೀಕಿಸಿದ್ದು ಇದೇ ಸಿಪಿಎಂ. ಹೊಸ ಆರ್ಥಿಕ ನೀತಿ ವಿರುದ್ಧ ಸಂಘಟಿತ ಹೋರಾಟವನ್ನೂ ಅದು ನಡೆಸಿತು, ಆ ಹೋರಾಟ ತನ್ನ ಗಮ್ಯವನ್ನು ತಲುಪಲಿಲ್ಲ ಎನ್ನುವುದು ಬೇರೆ ಮಾತು. ಮುಂದೆ ಇದೇ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ ಎರಡನೆ ಅವಧಿಯಲ್ಲಿ ಅವರು ಕುಳಿತಿದ್ದ ಪಲ್ಲಕ್ಕಿಯನ್ನು ಹೊತ್ತಿದ್ದು ಇದೇ ಸಿಪಿಎಂ. ಮನಮೋಹನ್ ಸಿಂಗರನ್ನು ಬೆಂಬಲಿಸಿ; ಅವರು ಅನುಷ್ಠಾನಕ್ಕೆ ತಂದ ಹೊಸ ಆರ್ಥಿಕ ನೀತಿಯನ್ನು ವಿರೋಧಿಸುವುದಾಗಿ ಸಿಪಿಎಂ ಹೇಳಿದರೆ ಕೇಳಲು ಯಾರಾದರೂ ತಯಾರಿದ್ದಾರೆಯೇ…?

೧೯೫೯ರಲ್ಲಿ ಇಎಂಎಸ್ ಸರ್ಕಾರವನ್ನು ಉರುಳಿಸಿ ಕಮ್ಯೂನಿಸಮ್ಮನ್ನು ದೇಶದಿಂದಲೇ ಒರೆಸಿ ಹಾಕಲು ಹೊರಟಿದ್ದ ಕಾಂಗ್ರೆಸ್ ಈಗ ಸಿಎಎಂಗೆ ಒಂಥರಾ ಮಿತ್ರ ಪಕ್ಷ. ೧೯೫೭ರಲ್ಲಿ ಫಿಲಿಪೀನ್ಸ್‌ನಲ್ಲಿ ಕಮ್ಯೂನಿಸಮ್ಮನ್ನು ಒರೆಸಿ ಹಾಕಲು ಯತ್ನಿಸಿದ ರಾಮೊನ್ ಮ್ಯಾಗ್ಸೇಸೆ ಮಾತ್ರ ಈಗಲೂ ಶತ್ರು! ರಾಜಕೀಯದಲ್ಲಿ ಶಾಶ್ವತ ಶತ್ರುವಾಗಲೀ ಮಿತ್ರರಾಗಲೀ ಇರುವುದಿಲ್ಲ ಎನ್ನುತ್ತದೆ ರಾಜಕೀಯ ಶಾಸ್ತ್ರ. ಇಂಡಿಯಾದ ಮಟ್ಟಿಗೆ ಸಿಪಿಎಂ ಇದನ್ನು ಒಪ್ಪಿಕೊಂಡು ಕಾಂಗ್ರೆಸ್ ಜೊತೆ ಹೆಜ್ಜೆ ಹಾಕುವ ಯತ್ನದಲ್ಲಿದೆ. ಅದೇ ಫಿಲಿಪೀನ್ಸ್‌ನ ವಿಚಾರದಲ್ಲಿ ಹಳೆ ಹಳವಂಡದಲ್ಲಿ ತನ್ನನ್ನು ತಾನೇ ಮುಳುಗೇಳಿಸುತ್ತಿದೆ. ವಾಸ್ತವದ ನೆಲೆಯಲ್ಲಿ ರಾಜಕೀಯ ಮಾಡುವುದನ್ನು ಸಿಪಿಎಂ ಇನ್ನಾದರೂ ರೂಢಿ ಮಾಡಿಕೊಳ್ಳುವ ಅಗತ್ಯವಿರುವುದನ್ನು ಶೈಲಜಾ ವಿಚಾರದಲ್ಲಿ ಅದು ನಡೆದುಕೊಂಡ ರೀತಿ ಹೇಳುತ್ತದೆ.

ಇದನ್ನೂ ಓದಿ | ಸವಿಸ್ತಾರ ಅಂಕಣ | ಗಡಿಗಳ ಎಲ್ಲೆ ಮೀರಿ ಮನ್ನಣೆ ಗಳಿಸಿದ್ದ ಸಾವರ್ಕರ್! ಅವರ ಪರ ಹೋರಾಡಿದ್ದ ಮಾರ್ಕ್ಸ್ ಮೊಮ್ಮಗ!

ಜಾಗತಿಕ ನೆಲೆಯಲ್ಲಿ ಕಮ್ಯೂನಿಸಂ ಅಪ್ರಸ್ತುತವಾಗುತ್ತಿದೆ. ಸೋವಿಯತ್ ಒಕ್ಕೂಟ ಛಿದ್ರಛಿದ್ರವಾಗಿದೆ. ಇನ್ನಿತರ ಅನೇಕ ದೇಶಗಳಲ್ಲಿ ಅದು ಆಮ್ಲಜನಕ ಆಧರಿಸಿದೆ. ಭಾರತದಲ್ಲೇ ಅದು ಪಶ್ಚಿಮ ಬಂಗಾಳ, ತ್ರಿಪುರಾದಲ್ಲಿ “ಮಾಜಿ” ಆಗಿದೆ. ಕೇರಳದಲ್ಲಿ ಇರುವ ಸರ್ಕಾರವನ್ನು ಜನ ಮೆಚ್ಚುವ ರೀತಿಯಲ್ಲಿ ನಡೆಸುವ ಅವಕಾಶ ಅದಕ್ಕೆ ಜನಾಶೀರ್ವಾದದಿಂದಲೇ ಒದಗಿ ಬಂದಿದೆ. ಜನ ಮೆಚ್ಚಿ ಹಾರೈಸಿದ ಶೈಲಜಾ ಅವರಂಥ ಪಕ್ಷನಿಷ್ಠ, ಸಿದ್ಧಾಂತನಿಷ್ಠರನ್ನು ಅಗೌರವಿಸುವುದರಿಂದ ಮಾರ್ಕ್ಸ್‌ವಾದಿ ಕಮ್ಯೂನಿಸ್ಟ್ ಪಕ್ಷ ಪಾಸ್ ಮಾರ್ಕ್ಸ್ ಕೂಡಾ ಪಡೆಯದ ಸ್ಥಿತಿಗೆ ಬರಬಹುದು.

Exit mobile version