Site icon Vistara News

ಮನಿ ಕಹಾನಿ ಅಂಕಣ | ಅವರಿಗೆ ಹಣದ ಬದಲು ಒಂದಷ್ಟು ಸಮಯ ಕೊಡಿ

money kahani

ಇನ್ನೂ ಏನ್ ಮಾಡಲಿ ಸಾರ್? ಮೊನ್ನೆ ತಾನೆ ನಲವತ್ತು ಗ್ರಾಮಿನ ಸರ ಮಾಡಿಸಿದೆ, ಬಟ್ಟೆ ತೊಳೆಯೋಕಾಗಲ್ಲ ಅಂತ ವಾಷಿಂಗ್ ಮಷೀನ್ ಕೊಡಿಸಿದೆ, ಅವಳ ಬರ್ತಡೇಗೆ ನಾನ್ ಬ್ಯುಸಿ ಇದ್ರೂ ಏನಾದ್ರೂ ತಗೊ ಅಂತ ಅಕೌಂಟಿಗೆ ಹಣ ಹಾಕಿದೆ, ಅವಳು ಎಷ್ಟು ಖರ್ಚು ಮಾಡಿದ್ರೂ ನಾನು ಲೆಕ್ಕ ಕೇಳಲ್ಲ ಇದಕ್ಕಿಂತ ಇನ್ನೇನು ಬೇಕು ಸಾರ್? ಮಧ್ಯಮ ವರ್ಗದ ಮನುಷ್ಯ ಇದಕ್ಕಿಂತ ಇನ್ನೇನು ಕೊಡೋಕಾಗುತ್ತೆ ಸಾರ್ ಹೆಂಡತಿಗೆ? ನನ್ನ ಬಳಿ ಉತ್ತರವಿರುವುದಿಲ್ಲ ಎಂಬಂತೆ ಕೇಳಿ ಅಮಾಯಕನಂತೆ ನಿಂತಿದ್ದ ವ್ಯಕ್ತಿಗೆ ಹೇಳಲು ನನ್ನ ಬಳಿ ಉತ್ತರವಿತ್ತು. ಆ ಉತ್ತರವೇ ʻಸಮಯ’. ಟೈಮ್ ಅಂತಾರಲ್ಲ ಅದು ಹಣಕ್ಕಿಂತ ಒಂದು ಕೈ ಜಾಸ್ತಿ. ಇತ್ತೀಚೆಗೆ “ಟೈಮ್ ಈಸ್ ಮನಿ” ಎಂಬ ಇಂಗ್ಲೀಷಿನ ಗಾದೆ ಅದೆಷ್ಟು ಸತ್ಯ ಅಲ್ವಾ ಎನಿಸುತ್ತದೆ. ಆದರೆ ಸತ್ಯ ಏನಪ್ಪಾ ಅಂದ್ರೆ “ಟೈಮ್ ಈಸ್ ಮೋರ್ ದ್ಯಾನ್ ಮನಿ” ಅನ್ನೋದು.

ಹೌದು, ಸಂಬಂಧಗಳು ಬದುಕುಳಿಯಬೇಕಾದರೆ ಅಲ್ಲಿ ಹಣಕ್ಕೆ ಬಹಳ ದೊಡ್ಡ ಮಹತ್ವವಿದೆ. ಆದರೆ ಯಾವುದೇ ಸಂಬಂಧಕ್ಕಾಗಿಯೂ ನೀವು ಬರಿಗೈ ಮಾಡಿಕೊಳ್ಳುವಷ್ಟು ಹಣ ಸುರಿಯಬಾರದು. ಹಾಗೆ ಸುರಿಯಲೇ ಬೇಕು ಎನಿಸಿದರೆ ಹಣ ಎಲ್ಲಿ ಸುರಿದರೆ ಹೆಚ್ಚು ಹೆಚ್ಚು ವಾಪಾಸು ಬರುತ್ತದೆಯೋ ಅಲ್ಲಿಗೇ ಸುರಿಯಿರಿ. ಸಂಬಂಧಗಳಿಗೆ ಸುರಿಯಬೇಕಾದುದು ಹಣವನ್ನಲ್ಲ ಬದಲಾಗಿ ಸಮಯವನ್ನ.

ಬಹಳಷ್ಟು ಜನ ಇದೊಂದು ತಪ್ಪು ಕಲ್ಪನೆಯಲ್ಲಿ ಬದುಕುತ್ತಿದ್ದಾರೆ. ಅವರಿಗೆ ಸತ್ಯ ಅರ್ಥವಾಗುವುದೇ ಇಲ್ಲ. ಅವರು ಹಣ ಖರ್ಚು ಮಾಡುವುದನ್ನೇ ಪ್ರೀತಿ ಎಂದುಕೊಂಡಿರುತ್ತಾರೆ. ಯಾವುದಾದರೂ ಮಗು ಸ್ಟೇಜ್ ಮೇಲೆ ಚೆಂದ ಹಾಡಿದರೆ ಕರೆದು ಸಾವಿರ ರೂಪಾಯಿ ಕೊಡುತ್ತಾರೆ. ಅವರು ಮನೆಯಲ್ಲಿ ಹೆಂಡತಿಯನ್ನೂ ಹಾಗೆಯೇ ನೋಡುತ್ತಾರೆ. ಅವಳಿಗೆ ಖರ್ಚಿಗೆ ಸಾಕಷ್ಟು ಹಣ, ಒಡವೆ, ಆಗಾಗ ಶಾಪಿಂಗು, ಹೀಗೆ ಹಣ ಖರ್ಚು ಮಾಡುವುದೇ ಗಂಡನಾಗಿ ನಾನು ಮಾಡಬಹುದಾದ ಅತಿದೊಡ್ಡ ಕೆಲಸ ಎಂದುಕೊಂಡಿದ್ದಾರೆ. ಸ್ವಂತ ಮಕ್ಕಳಿಗಾದರೂ ಇನ್ನೇನು, ಅವರಿಗೂ ಅಷ್ಟೇ, ಸ್ಕೂಲ್ ಫೀಸು ಕಟ್ಟುತ್ತೇನೆ, ಪ್ರತೀ ಹಬ್ಬಕ್ಕೂ ಬಟ್ಟೆ ಕೊಡಿಸುತ್ತೇನೆ, ಪಾಕೆಟ್ ಮನಿ ಅಂತ ಆಗಾಗ ಹಣ ಕೊಡ್ತೇನೆ ಇನ್ನೇನು ಬೇಕು? ಇದು ಅಂಥವರು ಕೇಳುವ ಪ್ರಶ್ನೆ. ಅವರು ಹೀಗೆ ಮಾಡುವ ಮೂಲಕ ಅವರೂ ನೆಮ್ಮದಿಯಾಗಿರುವುದಿಲ್ಲ, ಅವರ ಮನೆಯವರನ್ನೂ ನೆಮ್ಮದಿಯಾಗಿಟ್ಟುಕೊಂಡಿರುವುದಿಲ್ಲ. ಅವರ ಪ್ರಕಾರ ಹಣ ಖರ್ಚು ಮಾಡುವುದೇ ಪ್ರೀತಿ ತೋರಿಸುವ ಏಕೈಕ ಮಾರ್ಗವಾಗಿರುತ್ತದೆ. ಆದರೆ ಸಂಬಂಧಗಳು ಅದಕ್ಕಿಂತ ಹೆಚ್ಚಿನದೇನನ್ನೋ ಬೇಡುತ್ತಿರುತ್ತವೆ. ಅದನ್ನ ಸುಲಭವಾಗಿ ಸಮಯ ಎನ್ನಬಹುದು. ಇಂಗ್ಲಿಷಿನಲ್ಲಿ ಅದನ್ನು “ಗಿವಿಂಗ್ ಟೈಮ್” ಎನ್ನುತ್ತಾರೆ. ಅದು ಬಹಳ ದೊಡ್ಡ ವಿಚಾರ.

ಪ್ರತಿದಿನ ನಮಗಾಗಿ ತುಡಿಯುವ ಜೀವ ಖಾಯಿಲೆ ಬಂದು ಮಲಗಿದರೆ ಆಸ್ಪತ್ರೆಗೆ ಹೋಗು ಅಂತ ಹಣ ಕೊಡುವ ಬದಲು ಪಕ್ಕದಲ್ಲಿ ಕುಳಿತು ಒಂದೆರಡು ಪ್ರೀತಿಯ ಮಾತಾಡುವುದು ಬೇಸಿಕ್ ನೀಡ್ ಆಗಿರುತ್ತದೆ. ವಯಸ್ಸಾದ ಅಪ್ಪ ಅಮ್ಮನಿಗೆ ಪ್ರತೀ ತಿಂಗಳೂ ಹಣ ಹಾಕ್ತೀನಲ್ಲ ಇನ್ನೇನು ಅಂತ ಕೇಳುವ ಬದಲು ಆಗಾಗ ಸಮಯ ಮಾಡಿಕೊಂಡು ಅವರ ಪಕ್ಕ ಕುಳಿತು ಎರಡು ಪ್ರೀತಿಯ ಮಾತಾಡುವುದು ಮುಖ್ಯ. ಮಕ್ಕಳಿಗೆ ಫೀಸ್ ಕಟ್ಟಿ ಪಾಕೆಟ್ ಮನಿ ಕೊಡುವುದಕ್ಕಿಂತ ಅವರೊಂದಿಗೆ ಒಂದಷ್ಟು ಹೊತ್ತು ಆಟವಾಡುವುದು ಮುಖ್ಯ. ಹೆಂಡತಿಗೆ ಮೇಲೆ ಹೇಳಿದ ಎಲ್ಲವನ್ನೂ ಕೊಡುವುದಕ್ಕಿಂತ ಅವಳೊಂದಿಗೆ ಸಮಯ ಕಳೆಯುವುದು ಮುಖ್ಯ. ಇಲ್ಲಿ ಹಣಕ್ಕಿಂತ ಸಮಯ ದುಬಾರಿ ವಸ್ತುವಾಗಿದೆ.

ಇದನ್ನೂ ಓದಿ | ಮನಿ ಕಹಾನಿ ಅಂಕಣ | ಕೋವಿಡ್ ಕಲಿಸಿದ ಸಣ್ಣದೊಂದು ಪಾಠ

ಹಾಗಾದರೆ ಹಣ ಮುಖ್ಯವಲ್ಲವೇ ಎಂದರೆ ಖಂಡಿತಾ ಹಣ ಮುಖ್ಯ. ದುಡಿಯದ ಗಂಡಸು ಸದಾ ಹಂಡತಿಯ ಸುತ್ತಲೇ ಸುತ್ತಿದರೂ ಅವಳಿಗೆ ಕ್ಷಣಕಾಲ ಸುಖವಿರುವುದಿಲ್ಲ. ಮಕ್ಕಳ ಸ್ಕೂಲ್ ಫೀಸ್ ಕಟ್ಟದ ತಂದೆ ಸದಾಕಾಲ ಮಕ್ಕಳೊಂದಿಗೇ ಆಟವಾಡಿದರೆ ಅವನನ್ನ ಸಮಾಜ ಮಾನಸಿಕ ಅಸ್ವಸ್ಥ ಎಂದೇ ನೋಡುತ್ತದೆ. ಹಣ ಎಲ್ಲಕ್ಕಿಂತ ಮುಖ್ಯವಾದುದು. ಸಮಯ ಹಣಕ್ಕಿಂತಲೂ ಮುಖ್ಯವಾದುದು. ಸಾಲ ಮಾಡಿ ಸಂಬಂಧಗಳಿಗಾಗಿ ಹಣ ಸುರಿಯುವ ಬದಲು ಅದೇ ಹಣವನ್ನು ಬೇರೆಡೆಗೆ ತೊಡಗಿಸಬಹುದು. ಆ ಹಣ ನಮ್ಮ ಬದಲು ದುಡಿಯುತ್ತಿರುವಂತೆ ಮಾಡಿ ಆ ಸಮಯವನ್ನು ಮನೆಯವರೊಂದಿಗೆ ನಾವು ಕಳೆಯಬಹುದು. ಇದು ಬುದ್ಧಿವಂತರು ಯೋಚಿಸಬೇಕಾಗಿರುವ ದಾರಿ. ಸಾಲ ಮಾಡಿ ಬಂಗಾರ ಕೊಡಿಸಿದೆ, ಖರ್ಚಿಗೆ ಹಣ ಕೊಟ್ಟೆ, ಲಕ್ಷಾಂತರ ರೂಪಾಯಿ ಶಾಪಿಂಗ್ ಮಾಡಿಸಿದೆ ಎಂದು ಹೇಳುವವರು ಆ ಹಣವನ್ನೆಲ್ಲಾ ಬೇರೆಡೆಗೆ ಇನ್ವೆಸ್ಟ್ ಮಾಡಿ ಇವರು ಬಿಡುವು ಮಾಡಿಕೊಂಡು ಹೆಂಡತಿಯ ಜೊತೆ ಒಂದು ಸಿನಿಮಾ ನೋಡಿಕೊಂಡು ಬಂದರೆ ಹೆಂಡತಿಯೂ ಖುಷಿಯಾಗಿರುತ್ತಿದ್ದರು, ಇವರಿಗೂ ಖುಷಿಯಾಗುತ್ತಿತ್ತು.

ಅನವಶ್ಯಕವಾಗಿ ಯಾರಿಗೂ ಹಣ ಖರ್ಚು ಮಾಡಬಾರದು. ಅದೇ ಹಣದಿಂದ ಮತ್ತಷ್ಟು ಹಣ ಮಾಡಿ ಅವರನ್ನೇ ಜೀವನ ಪೂರ್ತಿ ಸುಖವಾಗಿಟ್ಟುಕೊಳ್ಳಬಹುದು. ಏಕೆಂದರೆ ಹಣ ಜೀವನವೆಂಬ ಗಾಡಿಗೆ ಪೆಟ್ರೋಲ್ ಇದ್ದಹಾಗೆ. ಅದು ಒಮ್ಮೆಲೇ ಒಂದು ಗಾಡಿಗೆ ಒಂದು ಸಾವಿರ ಲೀಟರ್ ಪೆಟ್ರೋಲ್ ಹಾಕಿದರೂ ಅದು ಎಷ್ಟು ಬೇಕೋ ಅಷ್ಟನ್ನೇ ಬಳಸಿಕೊಳ್ಳುತ್ತದೆ. ಅದರ ಬದಲು ಅದಕ್ಕೊಂದಷ್ಟು ಸಮಯ ಕೊಟ್ಟು ಪೆಟ್ರೋಲ್ ಖಾಲಿಯಾದಾಗ ಮತ್ತೆ ತುಂಬಿಸಿದರೆ ನಾವೂ ಹೆಚ್ಚು ಓಡಾಡಬಹುದು, ಗಾಡಿಯೂ ಚೆನ್ನಾಗಿರುತ್ತದೆ. ಸಂಬಂಧಗಳೂ ಹಾಗೆಯೇ, ಅವು ಯಾವಾಗಲೂ ಹಣವನ್ನೇ ಕೇಳುವುದಿಲ್ಲ. ಬಹಳಷ್ಟು ಬಾರಿ ಹಣದ ಬದಲು ನಾವು ಸಮಯ ಕೊಡುವುದು ದೊಡ್ಡ ವಿಷಯವಾಗಿರುತ್ತದೆ. ಎಷ್ಟು ಬೇಕೋ ಅಷ್ಟೇ ಹಣ ಖರ್ಚು ಮಾಡಿ ಅವರಿಗಾಗಿಯೇ ಉಳಿದ ಹಣವನ್ನು ಬೇರೆಡೆಗೆ ಇನ್ವೆಸ್ಟ್ ಮಾಡುವುದು ಜಾಣತನ ಅಲ್ಲವೇ? ಒಮ್ಮೆ ಯೋಚಿಸಿ ನೋಡಿ.

(ಲೇಖಕರು ಫಿನ್‌ಪ್ಲಸ್.ಕಾಮ್ ಮುಖ್ಯಸ್ಥರು)

ಇದನ್ನೂ ಓದಿ | ಮನಿ ಕಹಾನಿ ಅಂಕಣ | ಹೆತ್ತವರ ಋಣಕ್ಕೊಂದು ಲೆಕ್ಕಚಾರ ಬೇಡವೇ?

Exit mobile version