Site icon Vistara News

Muharram 2023 : ಮುಹರಂ ಕೇವಲ ಮುಸ್ಲಿಮರ ಹಬ್ಬವಲ್ಲ, ಅದು ಎಲ್ಲರೂ ಸೇರಿ ಆಚರಿಸುವ ಭಾವೈಕ್ಯದ ಹಬ್ಬ

Muharram 2023

✍️ಹಾಶಿಂ ಬನ್ನೂರು
(ಲೇಖಕರು ಡಾಕ್ಟರ್ ಎಪಿಜೆ ಅಬ್ದುಲ್ ಕಲಾಂ ಫೌಂಡೇಶನ್ ಕರ್ನಾಟಕ ಇದರ ರಾಜ್ಯ ಪ್ರಧಾನ ಕಾರ್ಯದರ್ಶಿ)

ಮುಹರಮ್ (Muharram 2023) ಇದು ಮುಸ್ಲಿಮರ ಹೊಸ ವರ್ಷದ ಪ್ರಾರಂಭ (New year of Islamic Calender). ಮುಸ್ಲಿಮರಿಂದ ಆಚರಿಸಲ್ಪಡುವ ಪ್ರಮುಖ ಹಬ್ಬಗಳಲ್ಲಿ ಮುಹರಮ್ ಕೂಡ ಒಂದು. ಹತ್ತು ದಿನಗಳ ಕಾಲ ನಡೆಯುವ ಮುಹರಮ್ ಹಬ್ಬಕ್ಕೆ ಹಿಂದೂ ಮುಸ್ಲಿಮರು ಜತೆಯಾಗಿ ಸೌಹಾರ್ದತೆಯಿಂದ (Harmonius festival) ಆಚರಿಸುವ ಭಾವೈಕ್ಯ ಪರಂಪರೆಯ ಇತಿಹಾಸವಿದೆ. ಗ್ರಾಮೀಣ ಪ್ರದೇಶದಲ್ಲಿ ಮುಹರಮ್ ಹಬ್ಬವನ್ನು ಬಾಬಯ್ಯ ಹಬ್ಬ (Babayya Habba) ಎಂದು ಕರೆಯುತ್ತಾರೆ. ಈ ಬಾರಿ 2023ರ ಜುಲೈ 19ರಂದು ಆರಂಭಗೊಂಡಿದ್ದು 10 ದಿನ ನಡೆಯುತ್ತದೆ.

ಮುಹರಮ್ ಎಂದರೆ ಇಸ್ಲಾಮಿಕ್ ಮುಸಲ್ಮಾನರ ಹಿಜರಿ ಕ್ಯಾಲೆಂಡರ್ (Islamic Hijri Calender) ಪ್ರಕಾರ ಮೊದಲನೇ ತಿಂಗಳು. ಮುಸ್ಲಿಮರಿಗೆ ಇದು ಹೊಸ ವರ್ಷ. ಇದನ್ನು ದು:ಖದಿಂದ, ಗೌರವದಿಂದ ಆಚರಿಸುತ್ತಾರೆ . ಮುಹರಮ್ ಎಂಬುವುದು ಅರೇಬಿಕ್ ಪದವಾಗಿದ್ದು ʻನಿಷಿದ್ಧʼ ಎಂಬ ಅರ್ಥವನ್ನು ಸೂಚಿಸುತ್ತದೆ. ಈ ತಿಂಗಳು ಯಾವುದೇ ರೀತಿಯ ಶುಭ ಕಾರ್ಯಗಳಿಗೆ ಸೂಕ್ತವಲ್ಲ. ಮುಹರಂನಲ್ಲಿ 9 ತಾಸು ಮತ್ತು 10ನೇ ಆಶುರಾ ದಿನದಂದು ಉಪವಾಸವಿರುವುದು ಮತ್ತು ಸತ್ಕರ್ಮಗಳನ್ನು ಮಾಡುವುದು, ಮನೆ ಹಾಗೂ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ಮಾಡುವುದು ಈ ತಿಂಗಳ ವಿಶೇಷತೆ.

ಮುಹರಮ್ ತಿಂಗಳ ಆಚರಣೆಗೆ ಬಹಳ ದುಖಃಕರವಾದ ಸಂಗತಿ ಮತ್ತು ಐತಿಹಾಸಿಕ ಘಟನೆಗಳೂ ಇದೆ. ಪ್ರವಾದಿ ಪೈಗಂಬರ್ ಮುಹಮ್ಮದ್ ಮುಸ್ತಫಾ ಸ.ಅ ಅವರ ಮಗಳಾದ ಫಾತಿಮಾ ಬೀವಿ ಹಾಗೂ ನಾಲ್ಕನೇ ಖಲೀಫರಾಗಿದ್ದ ಇಮಾಮ್ ಅಲಿ ರ.ಅ ಈ ದಂಪತಿಗಳ ಮಕ್ಕಳಾದ ಇಮಾಮ್ ಹಸನ್ ಮತ್ತು ಹುಸೈನ್ ಅವರು ಧರ್ಮ ಪ್ರಚಾರಕ್ಕಾಗಿ ಶತ್ರುವಿನ ಮುಂದೆ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಹೋರಾಡಿ ಕರ್ ಬಲಾ ಮಣ್ಣಿನಲ್ಲಿ ಶಹೀದರಾದ ದಿನವಾಗಿದೆ ಮುಹರಮ್ ಹತ್ತು. ಈ ಘಟನೆಯ ನೆನಪು ಮತ್ತು ಸ್ಮರಣೆಯೇ ಈ ಆಚರಣೆಯ ಪ್ರಮುಖ ಉದ್ದೇಶ. ಹೀಗಾಗಿ ಇದು ದುಃಖದ ಪ್ರತೀಕವೂ ಹೌದು.

ಮುಹರಂ ತಿಂಗಳಲ್ಲಿ ಕೃತಜ್ಞತೆಯನ್ನು ಸಲ್ಲಿಸುವುದು, ಶೋಕಾಚರಣೆಗಳಲ್ಲಿ ತೊಡಗಿಕೊಳ್ಳುವುದು ಮತ್ತು ಸಾರ್ವಜನಿಕ ಆಚರಣೆಗಳನ್ನು ಮಾಡಲಾಗುತ್ತದೆ. ಈ ವೇಳೆ ಆಲಾಯಿ ಕುಣಿತ, ಮುಹರಮ್ ಪದಗಳು ಹಾಡುವುದು, ದೇವರ ಕುಣಿತ, ಬೆಂಕಿಯಲ್ಲಿ ನಡೆದಾಡುವುದು ಸೇರಿದಂತೆ ಕೆಲವು ಆಚರಣೆಯನ್ನು ಮಾಡಲಾಗುತ್ತದೆ.

ಮುಹರಮ್ ಹೆಸರಿನಲ್ಲಿ ನಡೆಯುವ ಈ ಎಲ್ಲಾ ಆಚರಣೆಗಳು ಸಾಂಪ್ರದಾಯಿಕವಾಗಿ ನಡೆಸಲ್ಪಡುತ್ತಾ ಬಂದಿವೆ ಹೊರತು ಇದಕ್ಕೆ ಯಾವುದೇ ಧಾರ್ಮಿಕವಾದ ಪುರಾವೆಗಳು ಇಲ್ಲ. ನಮ್ಮ ನಾಡಿನ ಹಲವೆಡೆ ಜಾತಿ ಮತ ಧರ್ಮ ಬೇಧವಿಲ್ಲದೆ ಎಲ್ಲರೂ ಒಟ್ಟಾಗಿ ಮುಹರಮ್ ಆಚರಿಸುವುದು ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಒಂದು ಪದ್ಧತಿ. ಇದನ್ನು ಶಾಂತಿ ಸೌಹಾರ್ದತೆಯ ಸಂಕೇತ ಎಂದರೂ ತಪ್ಪಾಗಲಾರದು.

ರಾಯಚೂರ ಜಿಲ್ಲೆಯ ಮುದಗಲ್ಲ ಗ್ರಾಮದಲ್ಲಿ ಮೊಹರಂ ಆಚರಣೆಯಲ್ಲಿ ಮುಸ್ಲಿಮೇತರರೇ ಹೆಚ್ಚಾಗಿ ಭಾಗವಹಿಸುತ್ತಾರೆ. ಹರಕೆ ಹೊತ್ತ ಹಿಂದೂ- ಮುಸ್ಲಿಮರು ಹುಲಿ ವೇಷ, ಅಳ್ಳಳ್ಳಿ ಬಪ್ಪಾ ವೇಷ ಹಾಕಿ ಕುಣಿದು ಕುಪ್ಪಳಿಸುತ್ತಾರೆ. ಕಂದೂರಿ ಮಾಡಿ ಎಡೆ ನೀಡಿ ಮನಸ್ಸಿಗೆ ನೆಮ್ಮದಿ ತಂದುಕೊಳ್ಳುತ್ತಾರೆ. ದೀರ್ಘ ದಂಡ ನಮಸ್ಕಾರ ಹಾಕಿ ಧನ್ಯರಾಗುತ್ತಾರೆ.

ಹತ್ತನೆಯ ದಿನ ಹೊರಡುವ ಕಾಸೀಮ ಅಲಂ ಮತ್ತು ಹಸನ ಅಲಂ ಒಂದಕ್ಕೊಂದು ಭೇಟಿಯಾದಾಗ ನೆರೆದ ಜನ ಸಾಮೂಹ ತೇರಿನ ಮೇಲೆ ಹಣ್ಣುಕಾಯಿ ಎಸೆಯುವಂತೆ ಸೂರ ಮಾಡಿ ಭಯ ಭಕ್ತಿಯಿಂದ ಕೈಮುಗಿದು ತೃಪ್ತರಾಗುತ್ತಾರೆ. ಹಿಂದುಗಳ ಜಾತ್ರೆಯ ಸಂಭ್ರಮವನ್ನು ನೆನಪಿಸುವ ಮುದಗಲ್ಲ ಮುಹರಂ ಪ್ರಚಲಿತವಾಗಿದೆ.

ಹೊಸಪೇಟೆಯ ರಾಮುಲಸ್ವಾಮಿ ಇಂದಿಗೂ ಸರ್ವರ ಇಷ್ಟಾರ್ಥಗಳನ್ನು ಪೂರೈಸುವ ಪುಣ್ಯ ಕ್ಷೇತ್ರೋತ್ಸವವೆಂದೇ ಪ್ರಸಿದ್ಧ. ಬಳ್ಳಾರಿ ಜಿಲ್ಲೆಯ ಹೊಸಪೇಟೆಯಲ್ಲಿ ಕೂಡಿಸುವ ಮೌಲಾಲಿ ಅಲಮ್ ಗಳಿಗೆ ಹಿಂದೂ ಮುಸ್ಲಿಮರು ರಾಮುಲಸ್ವಾಮಿ ಎಂದೇ ಕರೆಯುತ್ತಾರೆ. ಒಂಬತ್ತನೆಯ ದಿನ ರಾತ್ರಿ ಎಡೆ ಕೊಡುವಾಗ ಉಪ್ಪನ್ನು ಒಯ್ದು ಅಲಾವಿಯಲ್ಲಿ ಚೆಲ್ಲಿ ಹುರುಕು ಕಜ್ಜಿಗಳನ್ನು ವಾಸಿ ಮಾಡಿಕೊಳ್ಳುತ್ತಾರೆ.

ಕೋಲಾರ ಜಿಲ್ಲೆಯ ನಾಗಸಂದ್ರದ ಮೊಹರಂ ಬಾಬಯ್ಯನ ಹಬ್ಬವೆಂದೇ ಪ್ರಸಿದ್ಧಿ ಪಡೆದಿದೆ. ಧಾರವಾಡ ಜಿಲ್ಲೆಯ ಯರಗುಪ್ಪಿ ಗ್ರಾಮದ ಮೊಹರಂ ಸುತ್ತ ಹತ್ತು ಹಳ್ಳಿಗಳಲ್ಲಿ ಮುಹರಮ್ ಜಾತ್ರೆಯೆಂದೇ ಹೆಸರಾಗಿದೆ. ಊರಿನ ಹಿಂದೂ- ಮುಸ್ಲಿಮರು ವಿಶೇಷವಾಗಿ ಬ್ರಾಹ್ಮಣರು ತಮ್ಮ ಶಕ್ತ್ಯಾನುಸಾರ ದೇವರ ಚಾಕರಿ ಮಾಡುತ್ತಾರೆ. ಹರಕೆ ತೀರಿಸುತ್ತಾರೆ.

ಗದಗ ಬೆಟಗೇರಿಯಲ್ಲಿ ನಡೆಯುವ ಮುಹರಮ್ ಮೆರವಣಿಗೆಯಲ್ಲಿ ಹಿಂದೂ- ಮುಸ್ಲಿಂ ಭಕ್ತರು ಪಾಲ್ಗೊಂಡು ಮೈ ತುಂಬಿದ ದೇವರಿಂದ ಮಳೆ ಬೆಳೆ ಕುರಿತು ಹೇಳಿಕೆ- ಕೇಳಿಕೆ ಮಾಡುತ್ತಾರೆ. ಸೊಟಕನ ಹಾಳದ ಡೋಲಿ ಮತ್ತು ಕೈ ದೇವರು ದ್ಯಾಮವ್ವನ ಗುಡಿಗೆ ಭೇಟಿಯಿತ್ತಾಗ ಊರ ಜನ ಇಮಾಮ ಹುಸೇನರು ತಂಗಿ ದ್ಯಾಮವ್ವನ ದರ್ಶನಕ್ಕೆ ಬಂದಿದ್ದಾರೆಂದೇ ತಿಳಿಯುತ್ತಾರೆ. ಹೀಗೆ ರಾಜ್ಯದ ಹಲವು ಗ್ರಾಮ ಪ್ರದೇಶಗಳಲ್ಲಿ ಮತ್ತು ದೇಶ ವಿದೇಶಗಳಲ್ಲಿ ಮುಹರಮ್ ಆಚರಣೆಯು ವಿಜ್ರಂಭಣೆಯಿಂದ ಆಚರಿಸುತ್ತಾರೆ.

ಒಟ್ಟಿನಲ್ಲಿ ಮುಹರಮ್ ಆಚರಣೆಯ ಹೆಸರಿನಲ್ಲಿ ನಡೆಯುವ ಅನಾಚಾರಗಳು ಅನಾಹುತಗಳಿಗೆ ಕಾರಣವಾಗದಿರಲಿ ಶಾಂತಿ ಸೌಹಾರ್ದತೆ ಸಂತೋಷ ಸಾರುವುದೇ ಎಲ್ಲಾ ಹಬ್ಬದ ಮೂಲ ಉದ್ದೇಶ.

ಇದನ್ನೂ ಓದಿ: ಸೌಹಾರ್ದ ಸಂಭ್ರಮ| ಈ ಊರಲ್ಲಿ ಒಂದೇ ಒಂದು ಮುಸ್ಲಿಂ ಕುಟುಂಬವಿಲ್ಲ, ಹಿಂದೂಗಳಿಂದಲೇ ಮೊಹರಂ!

Exit mobile version