Site icon Vistara News

ನನ್ನ ದೇಶ ನನ್ನ ದನಿ ಅಂಕಣ: ಶತಮಾನದಾಚೆಗೆ ವಿಸ್ತರಿಸಿದ ಪ್ರತಿಭೆ ಪ್ರೊ || ಎಲ್.ಎಸ್. ಶೇಷಗಿರಿರಾವ್

LS Sheshagiri Rao

ಈ ಅಂಕಣವನ್ನು ಇಲ್ಲಿ ಆಲಿಸಿ:

http://vistaranews.com/wp-content/uploads/2024/02/Audio-ANM-on-LSS-20TH-FEB-2024-VistaraNews.mp3

ನನ್ನ ದೇಶ ನನ್ನ ದನಿ ಅಂಕಣ: ಇತಿಹಾಸದ ವಿಷಯ ಬಂದಾಗ ಸುಪ್ರಸಿದ್ಧ ಇತಿಹಾಸಕಾರ ವಿಲ್ ಡ್ಯೂರಾಂಟ್ ನೆನಪಾಗುತ್ತಾರೆ. ವಿಲ್ ಡ್ಯೂರಾಂಟ್ ವಿಷಯ ಬಂದಾಗಲೂ ಪ್ರತಿಬಾರಿ ನನಗೆ ಎಲ್‌ ಎಸ್‌ ಶೇಷಗಿರಿ ರಾವ್‌ (ಎಲ್ಲೆಸ್ಸೆಸ್- LS Sheshagiri Rao) ಅವರ ಚಿತ್ರವೇ ಕಣ್ಮುಂದೆ ಬರುತ್ತದೆ. ಸುಮಾರು ಏಳು ದಶಕಗಳ ಹಿಂದೆ ಮಡಿಕೇರಿಯಲ್ಲಿ ಅವರು ಇಂಗ್ಲಿಷ್ ಅಧ್ಯಾಪಕರಾಗಿದ್ದರು. ಆಗ ಅಲ್ಲಿನ ಕಾಲೇಜು ಗ್ರಂಥ ಭಂಡಾರಕ್ಕೆ ವಿಲ್ ಡ್ಯೂರಾಂಟ್ ಅವರ ಪ್ರಖ್ಯಾತ “ದ ಸ್ಟೋರಿ ಆಫ್ ಸಿವಿಲೈಸೇಷನ್” ಸರಣಿಯ ಎಲ್ಲ ಸಂಪುಟಗಳೂ ಬಂದವು. ಕುತೂಹಲಕ್ಕೆ ಒಂದು ಸಂಪುಟವನ್ನು ಮನೆಗೆ ತೆಗೆದುಕೊಂಡು ಹೋಗಿ ಓದಲು ಪ್ರಾರಂಭಿಸಿದ ಅವರ ಆಸಕ್ತಿಯನ್ನು ಈ ಸರಣಿಯು ಸೆರೆ ಹಿಡಿಯಿತು. ಬೇಸಿಗೆ ರಜದಲ್ಲಿ ಬೆಂಗಳೂರಿಗೆ ಬರುವಾಗಲೂ ಒಂದೊಂದು ಸಂಪುಟವನ್ನು ಓದಲು ತರುತ್ತಿದ್ದರಂತೆ. ಸುಮಾರು ಮೂರು ವರ್ಷಗಳಲ್ಲಿ ಎಲ್ಲ ಸಂಪುಟಗಳನ್ನೂ ಓದಿ ಮುಗಿಸಿದೆ, ಎಂದಿದ್ದಾರೆ. ಎಲ್ಲೆಸ್ಸೆಸ್ ಅಂತಹ ವಿದ್ವಾಂಸರಿಗೇ ಮೂರು ಮೂರು ವರ್ಷ ಓದಲು ಹಿಡಿಯಿತು, ಎಂದರೆ ವಿಲ್ ಡ್ಯೂರಾಂಟ್ ಮತ್ತು ಅವರ ಪತ್ನಿ ಏರಿಯಲ್ ಡ್ಯೂರಾಂಟ್ ಅವರ ಮಾಹಿತಿ ಸಂಗ್ರಹ, ಸಾಧನೆ, ಪ್ರಕಟಣೆಗಳಿಗೆ ಏನೆನ್ನಬೇಕೋ ತಿಳಿಯದು. ಕುವೆಂಪು ಭಾಷಾ ಭಾರತಿಯು ಈ ಸಂಪುಟಗಳನ್ನು ಕನ್ನಡಕ್ಕೆ ಅನುವಾದಿಸಿ ಪ್ರಕಟಿಸುವ ಸಾಹಸವನ್ನು ಮಾಡಿರುವುದು ಅಭಿವಂದನೀಯ.

ಈ ಇತಿಹಾಸಾನುವಾದ ಸರಣಿಗೆ ಮುನ್ನುಡಿ ಬರೆದು ಮಾರ್ಗದರ್ಶನ ನೀಡಿದವರು ಎಲ್ಲೆಸ್ಸೆಸ್.

“ವಿಲ್ ಡ್ಯೂರಾಂಟ್ ಮೂಲತಃ ತತ್ತ್ವಶಾಸ್ತ್ರದ ಪ್ರಾಧ್ಯಾಪಕರು. ಈ ಬೃಹತ್ ಇತಿಹಾಸ ಗ್ರಂಥಗಳನ್ನು ಓದುವುದೇ ಒಂದು ವಿಶೇಷ ಅನುಭವ, ಒಂದು ಶಿಕ್ಷಣ. ವಿಲ್ ಡ್ಯೂರಾಂಟ್ ತತ್ತ್ವಶಾಸ್ತ್ರದ ತಜ್ಞರಾದುದರಿಂದ, ಸಾಮಾನ್ಯವಾಗಿ ಇತಿಹಾಸವನ್ನು ನಿರೂಪಿಸುವಂತೆ ಅವರು ನಿರೂಪಣೆ ಮಾಡುವುದಿಲ್ಲ, ನಿರೂಪಣೆಯಲ್ಲಿ ಚಿಂತನೆಯನ್ನು ಹೆಣೆಯುತ್ತಾರೆ. ಈ ಕೃತಿಯು ಮಾಹಿತಿಯ ಅದ್ಭುತ ಗಣಿ. ಜಗತ್ತಿನ ಬೇರೆ ಬೇರೆ ಭಾಗಗಳಲ್ಲಿ ನಾಗರಿಕತೆ ನಡೆದು ಬಂದ ದಾರಿಯನ್ನು ಗುರುತಿಸುವ ಮತ್ತು ವಿಶ್ಲೇಷಿಸುವ ಈ ಬೃಹತ್ ಕೃತಿಯಲ್ಲಿ, ಅವರು ನಮ್ಮ ಮುಂದಿಡುವ ಹಿಮಾಲಯ-ಸದೃಶ ಮಾಹಿತಿಯನ್ನು ಸಂಗ್ರಹಿಸಿದ್ದು ಹೇಗೆ, ಅದಷ್ಟನ್ನೂ ಅಧ್ಯಯನ ಮಾಡಿ ಒಂದು ಸ್ವರೂಪ ನೀಡಿದ್ದು ಹೇಗೆ, ಎಂದು ಬೆರಗಾಗುತ್ತೇವೆ. ಅವರು ಹಲವು ಮಂದಿ ಸಹಾಯಕರನ್ನು ಜೊತೆಗಿಟ್ಟುಕೊಂಡಿದ್ದರು, ಎಂದೇ ಭಾವಿಸೋಣ. ಆದರೆ, ಕೃತಿಯ ಕರ್ತೃತ್ವದ ಹೊಣೆಯನ್ನು ಹೊತ್ತ ವಿಲ್ ಡ್ಯೂರಾಂಟ್ ಅದಷ್ಟನ್ನೂ ಪರಿಶೀಲಿಸಿ, ವರ್ಗೀಕರಿಸಿ, ತಮ್ಮ ಯೋಜನೆಗೆ ಅನುಗುಣವಾಗಿ ವ್ಯವಸ್ಥೆ ಮಾಡಿ ನಿರೂಪಿಸಬೇಕಾಯಿತು. ಇಲ್ಲಿರುವುದು ಸೊಗಸಾಗಿ ವರ್ಗೀಕೃತವಾದ ಮಾಹಿತಿಯಷ್ಟೇ ಅಲ್ಲ. ಆ ಮಾಹಿತಿಯ ವ್ಯಾಖ್ಯಾನ, ಅದರಿಂದ ಕಲಿಯಬಹುದಾದ ಪಾಠ, ಇವೂ ಇಲ್ಲಿವೆ. ಈ ಮಹಾಪ್ರತಿಭೆಯು ಸಿದ್ಧಪಡಿಸಿ ತನ್ನದೇ ರೀತಿಯಲ್ಲಿ ನಮ್ಮ ಮುಂದಿಟ್ಟ ಸಾಮಗ್ರಿಯನ್ನು ಗ್ರಹಿಸಿ ನಮ್ಮದನ್ನಾಗಿ ಮಾಡಿಕೊಳ್ಳುವುದೇ ನಮಗೊಂದು ಸವಾಲು”.

ಇದು ಅದ್ಭುತವಾದ, ವಿಶಿಷ್ಟವಾದ ಅವರ ಭಾಷೆ, ಅವರ ಸ್ಮರಣೀಯ ಮುನ್ನುಡಿ. ಅವರ ಬರೆಹಗಳನ್ನು ಓದುವಾಗ ಆಪ್ತ ಶೈಲಿಯಲ್ಲಿ ಅವರೇ ನಿರೂಪಿಸಿದಂತಾಗುತ್ತದೆ, ಕಿವಿಯಲ್ಲಿ ಅವರದ್ದೇ ಧ್ವನಿಯ ಅನುರಣನ.

ಸ್ವತಃ ವಿಮರ್ಶಕರೂ, ವಿದ್ವಾಂಸರೂ ಆದ ಎಲ್ಲೆಸ್ಸೆಸ್ ಬರಿಯ ಹೊಗಳಿಕೆಗೆ ತಮ್ಮ ಮುನ್ನುಡಿಯನ್ನು ಮೀಸಲಾಗಿರಿಸಿಲ್ಲ. ಸರಣಿಯ ಮಿತಿಯನ್ನೂ ಹೇಳುತ್ತಾರೆ. “ವಿಲ್ ಡ್ಯೂರಾಂಟ್ ಅವರ ಇತಿಹಾಸ ನಿರೂಪಣೆ ಪರಿಪೂರ್ಣ ಎಂದು ಹೇಳುವಂತಿಲ್ಲ. ಅವರು ಈ ವೃತ್ತಾಂತಗಳನ್ನು ಬರೆದದ್ದು ಏಳೆಂಟು ದಶಕಗಳ ಹಿಂದೆ. ಅನಂತರದ ಸಂಶೋಧನೆಯು ನಮ್ಮ ಅಂದಿನ ಎಲ್ಲೆಗಳನ್ನು ವಿಸ್ತರಿಸಿದೆ, ಹಲವು ನಿರ್ಣಯಗಳನ್ನು ಮಾರ್ಪಡಿಸಿದೆ. ಅಲ್ಲದೆ, ಹಲವು ಯುಗಗಳನ್ನು ಹಲವು ದೇಶಗಳನ್ನು ಕುರಿತು ಬರೆಯುವಾಗ, ನಿರೂಪಣಕಾರನೇ ಎಲ್ಲ ಮಾಹಿತಿಯನ್ನು ಸಂಗ್ರಹಿಸುವುದು ಸಾಧ್ಯವಿಲ್ಲ. ಇತರ ಆಕರಗಳನ್ನು ನೆಚ್ಚಬೇಕಾಗುತ್ತದೆ. ಆ ಆಕರಗಳಿಂದಲೇ ಅವನಿಗೆ ತಪ್ಪು ಮಾಹಿತಿ ಅಥವಾ ವ್ಯಾಖ್ಯಾನ ಲಭ್ಯವಾಗಿರಬಹುದು ಅಥವಾ ಅವನು ಮಾಹಿತಿಯನ್ನು ಗ್ರಹಿಸುವಾಗಲೇ ತಪ್ಪಾಗಿರಬಹುದು. ವಿಲ್ ಡ್ಯೂರಾಂಟ್ ಪ್ರಸ್ತುತಪಡಿಸಿರುವ ಇತಿಹಾಸದಲ್ಲಿ, ಭಾರತದ ಭಾಗವನ್ನು ಓದುವಾಗಲೇ ನಮಗೆ ಹಲವು ತಪ್ಪುಗಳು, ತಪ್ಪು ಮಾಹಿತಿಗಳು ಕಾಣಬಹುದು….”.

ಮೆಚ್ಚಿದಂತೆಯೇ, ದೋಷಗಳನ್ನೂ ಬಿಚ್ಚಿಡುತ್ತಾರೆ ಎಲ್ಲೆಸ್ಸೆಸ್. ಅವರು ಬಹಳ ದೊಡ್ಡ ಮಾರ್ಗದರ್ಶಕರು. ಅವರ ಬರೆಹಗಳು ಕೈದೀವಟಿಗೆಗಳಂತೆ. ಎಲ್ಲೆಸ್ಸೆಸ್ ಎಂದರೆ ಶತಮಾನದ ಆಚೆಗೂ ವಿಸ್ತರಿಸಿದ ಮಹಾನ್ ಪ್ರತಿಭೆ.

ಕನ್ನಡದಿಂದ ಇಂಗ್ಲಿಷ್ ಭಾಷೆಗೆ ಧಂಡಿಯಾಗಿ ಆಗಿರುವ ಅನುವಾದಗಳ ಗುಣಮಟ್ಟವನ್ನು ನೋಡಿದಾಗ, ಬಹಳ ಜನ ಪ್ರತಿಭಾಶಾಲಿಗಳೂ ಸೋತುಹೋಗಿರುವುದು ಸ್ಪಷ್ಟವಾಗಿ ಕಾಣುತ್ತದೆ. ಅನುವಾದ, ಭಾಷಾಂತರಗಳೇ ಹಾಗೆ. ಅದು ಪುನರ್‌ಸೃಷ್ಟಿ, ಸ್ವತಃ ಬರೆಯುವುದಕ್ಕಿಂತ ಬಹಳ ಬಹಳ ಕಷ್ಟ. ಈ ಪರಿಪ್ರೇಕ್ಷ್ಯದಲ್ಲಿ, ಎಲ್ಲೆಸ್ಸೆಸ್ ಅವರ ನಿಜವಾದ ಶಕ್ತಿ ತಿಳಿಯುತ್ತದೆ. ಮೂಲದ ಸೊಗಡು, ಸೊಬಗುಗಳನ್ನು ಮುಖ್ಯವಾಗಿ ಕನ್ನಡದ ಬನಿಯನ್ನು – ಕನ್ನಡ ದೇಸಿತನವನ್ನು ಬೇರೆಯೇ ಲೋಕದ, ಬೇರೆಯೇ ಸಂಸ್ಕೃತಿಯ ಭಾಷೆಯಾದ ಇಂಗ್ಲಿಷಿಗೆ ತುಂಬ ಚೆನ್ನಾಗಿ ಅನುವಾದ ಮಾಡಿರುವುದು ಎಲ್ಲೆಸ್ಸೆಸ್ ಅವರ ಸಾಧನೆ ಮತ್ತು ಕೊಡುಗೆ.

ಇಂಗ್ಲಿಷ್ ಭಾಷೆಯ ಎಲ್ಲೆಸ್ಸೆಸ್ ಅವರ ಮಹಾಭಾರತವೂ ಸಹ ಭಾರತೀಯ ಸಾಹಿತ್ಯದ ಒಂದು ಮೈಲಿಗಲ್ಲು. ಇಂಗ್ಲಿಷ್ ಭಾಷೆಯ, ಇಂಗ್ಲಿಷ್ ಮಾಧ್ಯಮದ ಪ್ರಭಾವ – ಶಕ್ತಿಗಳು ಮಿತಿಮೀರಿಹೋಗಿರುವ ಪ್ರಸ್ತುತ ಕಾಲಘಟ್ಟದಲ್ಲಿ ವಾಲ್ಮೀಕಿ, ವ್ಯಾಸರಿಗೆ ನಿಷ್ಠರಾಗಿ ರಚಿಸಿದಂತಹ ಇಂಗ್ಲಿಷ್ ಭಾಷೆಯ ರಾಮಾಯಣ – ಮಹಾಭಾರತದ ಆವೃತ್ತಿಗಳಿಗೆ ಅಪಾರ ಬೇಡಿಕೆಯಿದೆ. ಕಳ್ಳರು, ಸುಳ್ಳರು ತುಂಬಿರುವ ಸಾಹಿತ್ಯಲೋಕದಲ್ಲಿ ಅಬದ್ಧವನ್ನೇ ಬರೆದು ಹಣ ಮಾಡುತ್ತಿರುವ ಇಂಗ್ಲಿಷ್ ಲೇಖಕರಿದ್ದಾರೆ. ಈ ಪರಿಪ್ರೇಕ್ಷ್ಯದಲ್ಲಿ, ಎಲ್ಲೆಸ್ಸೆಸ್ ಅವರ ಇಂಗ್ಲಿಷ್ ಕೃತಿಗಳು, ಇಂಗ್ಲಿಷ್ ಅನುವಾದಗಳು ದೊಡ್ಡ ಸಂಖ್ಯೆಯ ಓದುಗರಿಗೆ ತಲುಪಬೇಕಿರುವುದು ಯುಗಮಾನದ ನಿರೀಕ್ಷೆಯಾಗಿದೆ.

ತಾವು ಸ್ವಯಂಭೂ ಎಂಬಂತೆ ಪೋಜು ಕೊಡುವ ಅರೆಬೆಂದವರ ಸಂತೆಯಲ್ಲಿ, ತಮ್ಮ ಪ್ರತಿಭೆ – ವಿದ್ವತ್ತುಗಳ ಆರೈಕೆ, ಪೋಷಣೆಗಳಿಗೆ ಕಾರಣರಾದ ಹಿರಿಯರನ್ನು, ಅಧ್ಯಾಪಕರನ್ನು, ಗುರುಗಳನ್ನು ಸ್ಮರಿಸುವ ಎಲ್ಲೆಸ್ಸೆಸ್ ದೊಡ್ಡವರಾಗುತ್ತಾರೆ, ಶ್ರೇಷ್ಠತೆಯನ್ನು ಮೆರೆಯುತ್ತಾರೆ. ಈ ಬಗೆಯ ಕೃತಿಗಳೆಂದರೆ ಅಕ್ಷರಶಃ ಚಿನ್ನದ ಗಣಿಗಳು. ಈ ಬಗೆಯ ನಿಜಜೀವನದ ಕಥೆಗಳು, ಜೀವನಚಿತ್ರಗಳು ದೇವದುರ್ಲಭ. ಎಲ್ಲೆಸ್ಸೆಸ್ ಅವರಿಗೆ ನಾವು ಅದೆಷ್ಟು ಕೃತಜ್ಞರಾಗಿದ್ದರೂ ಸಾಲದು. ಸ್ವತಃ ದೊಡ್ಡವರಾದ ಅವರು ಉಳಿದ ದೊಡ್ಡವರ ವಿಶಿಷ್ಟ ಪರಿಚಯವನ್ನೂ ಕನ್ನಡದ ಓದುಗರಿಗೆ ನೀಡಿಹೋಗಿದ್ದಾರೆ. ಹಾಗೆ ಮಾಡಿ, ಎಲ್ಲೆಸ್ಸೆಸ್ ಅವರು ಇನ್ನಷ್ಟು ದೊಡ್ಡವರೂ ಅದರು. ಇದು ಕನ್ನಡ ಭಾಷೆಯ, ಕರ್ನಾಟಕದ, ಅಪರೂಪದ ನಮ್ಮ ಸಾಹಿತ್ಯ ಪರಂಪರೆಯ – ಅಪರೂಪದ ನಮ್ಮ ವಿದ್ವಲ್ಲೋಕದ ದೀವಟಿಗೆಗಳ ಇತಿಹಾಸವೂ ಹೌದು. ಕನ್ನಡಿಗನು ಋಣಿಯೂ ಹೌದು.

ನಾನು ಮತ್ತೆ ಮತ್ತೆ ಓದಿ ಬೆಳಕು ಕಂಡುಕೊಂಡ ಕೃತಿ, ಎಲ್ಲೆಸ್ಸೆಸ್ ಅವರ “ಸಿರಿಸಂಪದ”. ಅದನ್ನು ಓದಲು ನನ್ನ ಎಷ್ಟೋ ಗೆಳೆಯರಿಗೆ ನಾನು ವರಾತ ಹಚ್ಚಿದ್ದಿದೆ. “ಮೊದಲ ಮಾತು” ಗಳಲ್ಲಿ ಅವರು ಬರೆದಿರುವ “ಬದುಕು ನನಗೆ ಕರುಣಿಸಿದ ಭಾಗ್ಯಗಳಲ್ಲಿ ಒಂದು, ಹಿರಿಯ ಜೀವಗಳ ಸನ್ನಿಧಿ, ಒಡನಾಟ. ಅಂತಹ ಜೀವಗಳನ್ನು ಕೃತಜ್ಞತೆಯಿಂದ ಸ್ಮರಿಸಿಕೊಂಡ ನಮನ ಈ ’ಸಿರಿಸಂಪದ’. ಇಲ್ಲಿ ನಾನು ಸ್ಮರಿಸಿರುವ ಪ್ರಾತಃಸ್ಮರಣೀಯರನ್ನೆಲ್ಲ ಸಮೀಪದಿಂದ ಕಾಣುವ ಭಾಗ್ಯ ನನ್ನದು. ನನ್ನ ಹಿಂದಿನ ಪೀಳಿಗೆಗಳಿಗೆ ಸೇರಿದ ಅವರೆಲ್ಲ ನನ್ನ ಮೇಲೆ ನೇರವಾಗಿ ಪ್ರಭಾವ ಬೀರಿದರು. ಈ ಭಾಗ್ಯವನ್ನು ಓದುಗರೊಡನೆ ಹಂಚಿಕೊಳ್ಳುತ್ತಿದ್ದೇನೆ. ಎಂದಿಗೂ ಉಳಿಯಬೇಕಾದ ನೆನಪು ಇವರದ್ದು. ತಮ್ಮ ಕಾಲದಲ್ಲಿ ಬೆಳಕಾಗಿದ್ದ ಈ ದೀಪಗಳ (ಡಿವಿಜಿ, ಮಾಸ್ತಿ, ಎಂ.ಆರ್.ಶ್ರೀನಿವಾಸಮೂರ್ತಿ, ನಾ.ಕಸ್ತೂರಿ, ತಿ.ತಾ.ಶರ್ಮ, ಎಸ್.ವಿ.ರಂಗಣ್ಣ, ವಿ.ಸೀತಾರಾಮಯ್ಯ, ಕೆ.ಅನಂತರಾಮಯ್ಯ, ಎ.ಎನ್.ಮೂರ್ತಿ ರಾವ್, ಶಿವರಾಮ ಕಾರಂತ, ತೀ.ನಂ.ಶ್ರೀ., ಅ.ನ.ಕೃ., ವಿ.ಕೆ.ಗೋಕಾಕ್, ಬಿ.ಜಿ.ಎಲ್.ಸ್ವಾಮಿ, ಫೀಲ್ಡ್ ಮಾರ್ಷಲ್ ಕಾರ್ಯಪ್ಪ, ಆರ್.ಗುರುರಾಜ ರಾವ್) ಪ್ರಭೆ ಬಹುಕಾಲ ಬೆಳಗುತ್ತಿರಲಿ”.

ಇದನ್ನೂ ಓದಿ: ನನ್ನ ದೇಶ ನನ್ನ ದನಿ ಅಂಕಣ: ಭಾರತ- ದ್ವೇಷಿ ಹಿಟ್ಲರನ ಬಗೆಗೂ ಘನಘೋರ ಸುಳ್ಳುಗಳು

ಈ ಕೃತಿ ಕನ್ನಡದ ಇತಿಹಾಸವೂ ಹೌದು, ಇಪ್ಪತ್ತನೆಯ ಶತಮಾನದ ಕರ್ನಾಟಕದ ಇತಿಹಾಸಪುರುಷರ ಆಖ್ಯಾನವೂ ಹೌದು.

ರಾಷ್ಟ್ರೋತ್ಥಾನ ಪರಿಷತ್ತಿಗೆ ದಾಖಲೆಯ ಸಂಖ್ಯೆಯ ಪುಸ್ತಕಗಳನ್ನು ಸಂಪಾದಿಸಿಕೊಟ್ಟು, ಪುಸ್ತಕ ಪ್ರಕಟಣೆಯಲ್ಲಿ ದಾಖಲೆಯ ಇತಿಹಾಸವನ್ನೇ ಸೃಷ್ಟಿಸಿದ “ಭಾರತ – ಭಾರತಿ” ಸರಣಿಯನ್ನು ಸಂಪಾದಿಸಿಕೊಟ್ಟರೂ, ಎಲ್ಲೆಸ್ಸೆಸ್ ಅವರೇನೂ ಸಂಘ ಪರಿವಾರದವರಾಗಿರಲಿಲ್ಲ. ಆರೆಸ್ಸೆಸ್ ಚಿಂತನೆಗೆ ಮನಸೋತವರೂ ಆಗಿರಲಿಲ್ಲ. ಈ ಕಾರಣದಿಂದ ಕನ್ನಡ ಸಾಹಿತ್ಯಲೋಕದ ಕಮ್ಯೂನಿಸ್ಟ್ ಮಾಫಿಯಾದವರ ಟೀಕೆ – ಕಟಕಿಗಳಿಗೆ ಗುರಿಯಾದರೂ, ಅವರು ತಲೆಯನ್ನು ಕೆಡಿಸಿಕೊಳ್ಳಲೂ ಇಲ್ಲ.

ಪ್ರೊ|| ಎಲ್.ಎಸ್.ಶೇಷಗಿರಿರಾವ್ ಅವರ ಕನ್ನಡ ಮತ್ತು ಇಂಗ್ಲಿಷ್ ಭಾಷಣಗಳನ್ನು ಕೇಳಿದಾಗ, ದೇವರೇ, ನನಗೆ ಇಂತಹ ಗುರುಗಳನ್ನು ಏಕೆ ದಯಪಾಲಿಸಲಿಲ್ಲ, ಎಂದೆನಿಸಿದ್ದುಂಟು. ಅವರ ಇಂಗ್ಲಿಷ್ ಸಹ ನನಗೆ ಕನ್ನಡದಂತೆಯೇ ಆಪ್ಯಾಯಮಾನವಾಗಿ ಕೇಳಿಸಿದ್ದುಂಟು. ಅದು ಇಂಗ್ಲೆಂಡಿನ ಇಂಗ್ಲಿಷ್ ಆಗಿರಲಿಲ್ಲ, ಇತ್ತೀಚಿನವರು ಆಡುವ ಅಮೆರಿಕನ್ ಇಂಗ್ಲಿಷ್ ಸಹ ಆಗಿರಲಿಲ್ಲ.

ಇದೀಗ ಪ್ರೊ|| ಎಲ್.ಎಸ್.ಶೇಷಗಿರಿರಾವ್ ಅವರ ಶತಮಾನೋತ್ಸವ ವರ್ಷಾರಂಭ. ಅವರ ಸಾಹಿತ್ಯ, ಅವರ ಸಹೃದಯ ವಿಮರ್ಶೆ, ಅವರ ಕೃತಿಗಳು ನಮ್ಮ ಭಾಷಾಲೋಕವನ್ನು ಮತ್ತೊಮ್ಮೆ ಬೆಳಗಲಿ.

ಇದನ್ನೂ ಓದಿ: ನನ್ನ ದೇಶ ನನ್ನ ದನಿ ಅಂಕಣ: ಭಾರತೀಯ ಸೈನ್ಯದ ಸ್ವರೂಪ, ಪ್ರಸ್ತುತಿಗಳಲ್ಲಿ ಬದಲಾವಣೆ ಬೇಕಿದೆ

Exit mobile version