Site icon Vistara News

ನನ್ನ ದೇಶ ನನ್ನ ದನಿ ಅಂಕಣ: ನೆಹರೂ ಮನಸ್ಸು ಮಾಡಿದ್ದರೆ, ಗಾಂಧೀ ಹತ್ಯೆಯನ್ನು ತಪ್ಪಿಸಬಹುದಿತ್ತು!

nehru gandhi

ಈ ಅಂಕಣವನ್ನು ಇಲ್ಲಿ ಆಲಿಸಿ:

https://vistaranews.com/wp-content/uploads/2023/11/ANM-ON-Gandhi-RSS-Nehru-7th-November-2023.mp3

ಅದು ನವದೆಹಲಿ. ಜನವರಿ 1948, ಭಯಾನಕ ಚಳಿ. ಎಪ್ಪತ್ತೆಂಟು ದಾಟಿದ್ದ ಮಹಾತ್ಮಾ ಗಾಂಧೀ (Mahatma Gandhi) ಉಪವಾಸ ಕುಳಿತುಬಿಟ್ಟಿದ್ದರು. ಪಾಕಿಸ್ತಾನದಿಂದ ಮನೆ ಮಠ ಮಾನ ಮರ್ಯಾದೆ ಎಲ್ಲವನ್ನೂ ಕಳೆದುಕೊಂಡು ದಿವಾಳಿಯಾಗಿ ಕಂಗೆಟ್ಟು, ಬಂದಿದ್ದ ಹಿಂದೂ ಮತ್ತು ಸಿಖ್ ನಿರಾಶ್ರಿತರ ಆಕ್ರಂದನ ದೆಹಲಿಯಾದ್ಯಂತ ಕೇಳಿಬರುತ್ತಿತ್ತು. ದೇಶವಿಭಜನೆ (Partition), ಹತ್ಯಾಕಾಂಡ, ಅತ್ಯಾಚಾರ, ಲೂಟಿ, ಎಲ್ಲ ಭೀಕರ ಘಟನೆಗಳಿಗೂ ಗಾಂಧೀ- ನೆಹರೂ (Jawaharalal nehru) ಮತ್ತು ಕಾಂಗ್ರೆಸ್ ಕಾರಣವೆಂದು ನಿರಾಶ್ರಿತರು ಆಕ್ರೋಶ ವ್ಯಕ್ತಪಡಿಸುತ್ತಿದ್ದರು. ಗಾಂಧೀ- ನೆಹರೂ ಅವರ ಜನಪ್ರಿಯತೆ, ಖ್ಯಾತಿಗಳು ಪಾತಾಳಕ್ಕೆ ಇಳಿದಿದ್ದವು.

ಕಾಂಗ್ರೆಸ್ಸಿನ ನಾಯಕರಾದ ಜಿ.ಎನ್. ಸಿನ್ಹಾ ಅವರು ಸ್ವತಃ ದೆಹಲಿಯ ಪ್ರಮುಖ ಪ್ರದೇಶಗಳಾದ ಕನಾಟ್ ಪ್ಲೇಸ್, ಚಾಂದನೀ ಚೌಕ್ ಮುಂತಾದ ಕಡೆ ಹೋಗಿ ಜನರ ನಾಡಿಮಿಡಿತವನ್ನು ಅರಿಯುವ, ದಾಖಲಿಸುವ ಪ್ರಯತ್ನ ಮಾಡುತ್ತಿದ್ದರು. ಮಹಾತ್ಮರನ್ನು ಉಳಿಸುವ, ಉಳಿಸಿಕೊಳ್ಳುವ ಮಾತನ್ನು ಯಾರೂ ಆಡುತ್ತಿರಲಿಲ್ಲ. ದೇಶದ ಜನರು ಗಾಂಧೀಜಿಯವರ ಅತಿಯಾದ ಮುಸ್ಲಿಂ ಓಲೈಕೆಗೆ ಬೇಸತ್ತು ಹೋಗಿದ್ದರು; ಪಾಕಿಸ್ತಾನಕ್ಕೆ 55 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲು ಒತ್ತಾಯಿಸುತ್ತಿದ್ದ ಗಾಂಧೀಜಿಯವರ ಉಪವಾಸ ಸತ್ಯಾಗ್ರಹದ ವಿರುದ್ಧ, ನಿರಾಶ್ರಿತರು ದೆಹಲಿಯ ಮುಖ್ಯ ಭಾಗಗಳಲ್ಲಿ ದಿನವೂ ಸೇರಿ ಪ್ರತಿಭಟನೆ ಮಾಡುತ್ತಿದ್ದರು, ಗಲಾಟೆ ಮಾಡುತ್ತಿದ್ದರು.

ಅತ್ತ ಬಿರ್ಲಾ ಭವನದಲ್ಲಿ (ಮುಂದೆ ಅದೇ “ಗಾಂಧೀ ಸ್ಮೃತಿ” ಎನಿಸಿಕೊಂಡು ಸ್ಮಾರಕವಾಗಿದೆ) ಚಾರಪಾಯಿಯೊಂದರ ಮೇಲೆ ಕೃಶ ಶರೀರಿಯಾಗಿ ಮಲಗಿದ್ದ ಗಾಂಧೀಜಿಯವರಿಗೆ ಅದೇನೋ ಗಲಾಟೆ, ಘೋಷಣೆಗಳು ಕೇಳಿಬರುತ್ತಿವೆ ಎನ್ನಿಸಿ, ತಮ್ಮ ಕಾರ್ಯದರ್ಶಿ ಪ್ಯಾರೇಲಾಲರಿಗೆ ನೋಡಿಕೊಂಡು ಬರಲು ಹೇಳಿದರು. ಮರಳಿ ಬಂದ ಪ್ಯಾರೇಲಾಲರು ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗುತ್ತಿದ್ದಾರೆ, ಎಂದರು. ಅದೇನು, ಎಂದು ಮತ್ತೆ ಕೇಳಿದರು ಗಾಂಧೀಜಿ. ಮೆಲುವಾದ ದನಿಯಲ್ಲಿ ಪ್ಯಾರೇಲಾಲರು “ಗಾಂಧೀ ಸಾಯಲಿ” ಎಂದು ಕೂಗುತ್ತಿದ್ದಾರೆ, ಎಂದು ಹೇಳಿದರು.

1940ರ ದಶಕವೇ ಹಾಗಿತ್ತು. ಗಾಂಧೀ, ನೆಹರೂ ಅವರ ಮುಸ್ಲಿಂ ಓಲೈಕೆ ಮೇರೆ ಮೀರುತ್ತಾ ಸಾಗುತ್ತಿತ್ತು. ತಮ್ಮ ಜನಪ್ರಿಯತೆ, ಖ್ಯಾತಿಗಳು ಕುಗ್ಗುತ್ತಿದ್ದುದು ಗೊತ್ತಾದರೂ, ಇವರು ಯಾರೂ ಓಲೈಕೆ ತಪ್ಪಿಸಲಿಲ್ಲ. ನೆಹರೂ ಅವರಿಗೆ ತಾವು ಹಿಂದೂ ಎನ್ನುವ ಅಭಿಮಾನವಾಗಲೀ, ಪ್ರೀತಿಯಾಗಲೀ ಇರಲೇ ಇಲ್ಲ. RSS (ರಾಷ್ಟ್ರೀಯ ಸ್ವಯಂಸೇವಕ ಸಂಘ) ಕಂಡರೆ ಅವರಿಗೆ ಆಗುತ್ತಲೂ ಇರಲಿಲ್ಲ. ದೇಶ ವಿಭಜನೆ, ಪಾಕಿಸ್ತಾನದ ನಿರ್ಮಾಣ, ಹಿಂದೂ – ಸಿಖ್ ಹತ್ಯಾಕಾಂಡ, ಕೋಟಿಕೋಟಿ ಜನ ನಿರಾಶ್ರಿತರ ವಲಸೆ, ಇತ್ಯಾದಿ ಎಲ್ಲವೂ ಹಿಂದೆಂದೂ ಕಾಣದ, ಊಹಿಸಲಾಗದ ಘಟನಾವಳಿಗಳಾಗಿದ್ದವು. ಬ್ರಿಟಿಷರಿಂದ ಅಧಿಕಾರ ಹಸ್ತಾಂತರವಾದ ಮೇಲೆ, ದೇಶದ ನವ-ಪ್ರಧಾನಮಂತ್ರಿ ಜವಾಹರಲಾಲರು ಎಲ್ಲವನ್ನೂ ನಿಭಾಯಿಸುವುದರಲ್ಲಿ ಸಾಕಾಗಿಹೋಗಿದ್ದರು, ಹೈರಾಣಾಗಿಹೋಗಿದ್ದರು. ಇದೇ ಕಾಲಘಟ್ಟದಲ್ಲಿ ದೇಶದ ಜನರು ಸಂಘವನ್ನು ಮೆಚ್ಚಲಾರಂಭಿಸಿದ್ದರು. ಸಂಘವನ್ನು ತಮ್ಮ ಆಪದ್ಬಾಂಧವ ಎಂದು ಪರಿಗಣಿಸಿಬಿಟ್ಟಿದ್ದರು. ಸಂಘದ ಜನಪ್ರಿಯತೆ ಹೆಚ್ಚಾಗಿ ವಿಸ್ತೃತ ರೂಪದಲ್ಲಿ ಅದರ ಚಟುವಟಿಕೆಗಳೂ ಪ್ರಾರಂಭವಾಗುತ್ತ ಹೋದವು. ಇದರಿಂದ RSS ಕುರಿತ ನೆಹರೂ ಅವರ ತಿರಸ್ಕಾರ, ಕೋಪಗಳು ದ್ವೇಷಕ್ಕೆ ತಿರುಗಿಬಿಟ್ಟವು.

ನೆಹರೂ ಅವರ ಕುರಿತಾದ ಗ್ರಂಥಗಳು, ನೆಹರೂ ಅವರ ಪತ್ರಗಳು ಇತ್ಯಾದಿ ಎಲ್ಲವನ್ನೂ ಸರಕಾರವೇ ಪ್ರಕಟಿಸಿದೆ. ಅವುಗಳ ಅಧ್ಯಯನವು ನಮ್ಮ ಮುಂದೆ ಬೇರೆಯೇ ಲೋಕವನ್ನು ತೆರೆದಿಡುತ್ತದೆ. ದೇಶವಿಭಜನೆಯ ಕ್ಲಿಷ್ಟ ಸಮಯದಲ್ಲಿ, ಅಜ್ಮೀರಿನಲ್ಲಿ ಕೋಮು ಗಲಭೆಗಳಾದಾಗ ನೆಹರೂ, ಗೃಹಮಂತ್ರಿ ಸರದಾರ್ ವಲ್ಲಭಭಾಯಿ ಪಟೇಲರಿಗೆ ತಿಳಿಸದೆಯೇ, ತಮ್ಮ ಪ್ರತಿನಿಧಿಯೊಬ್ಬನನ್ನು ಅಜ್ಮೀರಿಗೆ ಕಳುಹಿಸಿದರು. ಹಿಂದೂಗಳ ವಿರುದ್ಧ ಆರೋಪ ಹೊರಿಸಲು ನೆಹರೂ ಸಿದ್ಧತೆ ಮಾಡಿಕೊಂಡುಬಿಟ್ಟಿದ್ದರು. ಆದರೆ ವಿಷಯ ತಿಳಿದ ಪಟೇಲರು ಕುದ್ದುಹೋದರು. ತಮ್ಮ ರಾಜೀನಾಮೆ ಪತ್ರವನ್ನು ಗಾಂಧೀಜಿಯವರಿಗೆ ಕಳುಹಿಸಿದರು. ಮುಂಗೋಪದ ಸ್ವಭಾವದ ನೆಹರೂ ಸಹ ತಮ್ಮ ರಾಜೀನಾಮೆ ಪತ್ರವನ್ನು ಗಾಂಧೀಜಿಯವರಿಗೆ ಕಳುಹಿಸಿದರು. ಗಾಂಧೀಜಿಯವರಿಗೆ ಸಾಕೋಸಾಕಾಯಿತು.

ಸಂಘದ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ ಡಾ।। ಎಸ್.ರಾಧಾಕೃಷ್ಣನ್ ಅವರಿಗೆ ನೆಹರೂ ತಮ್ಮ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಇದರಿಂದ ನೆಹರೂ ಆಪ್ತರೇ ಆಗಿದ್ದ ರಾಧಾಕೃಷ್ಣನ್ ಅವರಿಗೆ ದಿಕ್ಕೇ ತೋಚಲಿಲ್ಲ.

ಅಂದಿನ ಮದ್ರಾಸ್ ಪ್ರಾಂತ್ಯದ (erstwhile Madras Government) ಸರ್ಕಾರದಲ್ಲಿ ಸುಬ್ಬರಾಯನ್ ಅವರು ಗೃಹಮಂತ್ರಿಯಾಗಿದ್ದರು. ಅವರಿಗೆ 5ನೆಯ ಜನವರಿ 1948ರಲ್ಲಿ ನೆಹರೂ ಅವರು, “RSSನವರು ತೊಂದರೆ ಕೊಡುತ್ತಿದ್ದಾರೆ. ಈ ಕೋಮುವಾದಿ RSS ಅನ್ನು ನಿರ್ಬಂಧಿಸಬೇಕು. ಅದರ ಚಟುವಟಿಕೆಗಳನ್ನು ನಿಲ್ಲಿಸಬೇಕು. ಮುಸ್ಲಿಂ ಲೀಗಿನ ಸಭೆಗಳಿಗೆ ಪ್ರತಿಬಂಧ ಹಾಕುವುದು ಬೇರೆಯೇ ವಿಷಯ. ಮುಸ್ಲಿಂ ಲೀಗಿನ ಸಭೆಗಳಿಂದ ದಂಗೆಗಳಾಗುತ್ತವೆ, ಎಂದು ಯಾರೂ ಹೇಳಲಾರರು. ಇಂದು ಭಾರತದಲ್ಲಿ ಮುಸಲ್ಮಾನರು ಭಯದಲ್ಲಿ ಬದುಕುತ್ತಿದ್ದಾರೆ. ಮುಸ್ಲಿಂ ಲೀಗಿಗೆ ಪ್ರತಿಬಂಧ ಹೇರುವುದು ತಪ್ಪು ಎಂದು ನನಗನ್ನಿಸುತ್ತಿದೆ, ಪ್ರತಿಬಂಧ ಹೇರಲು ಯಾವುದೇ ಕಾರಣ ಸಿಕ್ಕುತ್ತಿಲ್ಲ” ಎಂಬುದಾಗಿ ಪತ್ರವನ್ನು ಬರೆದರು. ಓದಿದವರಿಗೆ ದಿಕ್ಕೇ ತೋಚಲಿಲ್ಲ. ಗಾಂಧೀ ಹತ್ಯೆಗೆ ಮೂರ್ನಾಲ್ಕು ದಿನ ಮೊದಲು ಅಮೃತಸರದಲ್ಲಿ, RSS ಅನ್ನು ಹೊಸಕಿಹಾಕುತ್ತೇನೆ, ಎಂದು ನೆಹರೂ ಅಬ್ಬರಿಸಿದರು.

partition

ಗಾಂಧೀ – ನೆಹರೂ ಅವರು ಭಾರತೀಯ ರಾಜಕಾರಣದ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾಗಲೇ, ಸ್ವಾತಂತ್ರ್ಯ ಪೂರ್ವದಲ್ಲಿ 1946ರ ಆಗಸ್ಟ್ 16ರಿಂದ ಜಿನ್ನಾ ಮತ್ತು ಸುಹ್ರವರ್ದಿ ನೇತೃತ್ವದ ಮುಸ್ಲಿಂ ಲೀಗ್, ಕೋಲ್ಕತ್ತಾದಲ್ಲಿ ಹಿಂದೂ ಹತ್ಯಾಕಾಂಡಕ್ಕೆ ಕರೆಕೊಟ್ಟಿತು. ನರಹತ್ಯೆ, ಅತ್ಯಾಚಾರ, ಬೆಂಕಿ ಹಚ್ಚುವುದು, ಲೂಟಿ ಮಾಡುವುದು ಸೇರಿದಂತೆ, ಮಾರಕಾಸ್ತ್ರಗಳಿಂದ ದಾಳಿ ಮಾಡಿ ಹಿಂದುಗಳನ್ನು ಕತ್ತರಿಸಿ ಕತ್ತರಿಸಿ ಹಾಕಿದರು. ಭಾರತ ದೇಶ ಮೂರು ತುಂಡಾದುದೇ ಮುಸ್ಲಿಂ ಲೀಗಿನಿಂದ. ಹೀಗಿದ್ದೂ ನೆಹರೂ ಅವರು ಅಷ್ಟು ಬೇಗ ಅದು ಹೇಗೆ ಇವೆಲ್ಲವನ್ನೂ “ಮರೆತರೋ” ತಿಳಿಯುವುದಿಲ್ಲ.

ಗಾಂಧೀ ಹತ್ಯೆಯ ಪ್ರಯತ್ನಗಳ ಬಗೆಗೆ ಸರ್ಕಾರಕ್ಕೆ ಬೇಹುಗಾರರ ಮಾಹಿತಿಯಿತ್ತು. ಅಷ್ಟೇಕೆ, ಗಾಂಧೀಜಿಯವರ ಉಪವಾಸ ಸತ್ಯಾಗ್ರಹದ ಅವಧಿಯಲ್ಲಿಯೇ, 1948ರ ಜನವರಿ 20ರಂದು ಸಂಜೆ ಮದನಲಾಲ್ ಪಾಹವಾ ಎಂಬ, ಪಾಕಿಸ್ತಾನದಿಂದ ಎಲ್ಲವನ್ನೂ ಕಳೆದುಕೊಂಡು ಬಂದ ನಿರಾಶ್ರಿತ, ಪ್ರಾರ್ಥನಾ ಸಭೆಯ ವೇಳೆ ಬಾಂಬ್ ಹಾಕಿ ಹತ್ಯೆಯ ಪ್ರಯತ್ನ ಮಾಡಿದನಾದರೂ ಅದು ವಿಫಲವಾಯಿತು. ಪೊಲೀಸರು ಮದನಲಾಲ್ ತಂಡದ ಬಹುತೇಕರನ್ನು ಹಿಡಿದರು. ಅತ್ಯಂತ ಭಯಾನಕ ಚಿತ್ರಹಿಂಸೆ ನೀಡಿ, ಹತ್ಯೆಯ ಯೋಜನೆಯ ವಿವರಗಳನ್ನು ಪಡೆದುಕೊಂಡರು (ಈ ವಿವರಗಳನ್ನು “Freedom at Midnight” ಕೃತಿಯಲ್ಲಿ ಓದಬಹುದು). ಹೆಚ್ಚಿನ ಭದ್ರತೆಯನ್ನು ನಿಯೋಜಿಸಿ, ಬೇಹುಗಾರರನ್ನು ಆಯೋಜಿಸಿದ್ದರೆ ಹತ್ಯೆಯನ್ನು ತಪ್ಪಿಸಬಹುದಿತ್ತು.

ನಿಜ, ನೆಹರೂ ಅವರು ಮನಸ್ಸು ಮಾಡಿದ್ದರೆ, ಗಾಂಧೀ ಹತ್ಯೆಯನ್ನು ತಪ್ಪಿಸಬಹುದಿತ್ತು!! ಅಷ್ಟೇ ಅಲ್ಲ, ಗಾಂಧೀಜಿಯವರ ಅಮೂಲ್ಯ ಪ್ರಾಣದ ಜೊತೆಗೆ, ಸಾವಿರ ಸಾವಿರ ನಿರಪರಾಧಿಗಳ ಪ್ರಾಣವೂ ಉಳಿಯುತ್ತಿತ್ತು. ಜನವರಿ 30ರಂದು ನಡೆದ ಗಾಂಧೀ ಹತ್ಯೆ ಅತ್ಯಂತ ನಿಂದನೀಯ. ಭಯಾನಕ.

ಅಂದಿನ ರಾಜಕಾರಣವೂ ಬಹುಪಾಲು ಮುಸ್ಲಿಮರ ಪರವಾಗಿಯೇ ಇತ್ತು. ಈ ಹಿನ್ನೆಲೆಯಲ್ಲಿ, ಮುಸ್ಲಿಮರನ್ನು ತಮ್ಮ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಗಾಂಧೀ – ನೆಹರೂ ಮತ್ತು ಉಳಿದ ಯಾರಿಗೂ ಮುಸ್ಲಿಮರಿಂದ ಯಾವುದೇ ಪ್ರಾಣಾಪಾಯವಿರಲಿಲ್ಲ. ಆದರೂ, ಮುಸ್ಲಿಮರಿಗೆ ಎಳ್ಳಷ್ಟೂ ತೊಂದರೆಯಾಗದಂತೆ ಎಚ್ಚರಿಕೆ ವಹಿಸಲಾಯಿತು. ಆ ಕಾಲಘಟ್ಟದಲ್ಲಿ ತಕ್ಷಣದ ಸುದ್ದಿ ಜನರಿಗೆ ತಲುಪಬೇಕೆಂದರೆ, ರೇಡಿಯೋದಿಂದ ಮಾತ್ರ ಸಾಧ್ಯವಿತ್ತು. ಅಂದು ಸಂಜೆ 6 ಘಂಟೆಗೆ ವಿಶೇಷವಾದ ಸುದ್ದಿಯನ್ನು ಪ್ರಸಾರ ಮಾಡಲಾಯಿತು.

“ಇಂದು ಸಂಜೆ 5.20ಕ್ಕೆ ಮಹಾತ್ಮಾ ಗಾಂಧಿಯವರ ಹತ್ಯೆಯಾಯಿತು. ಹಂತಕನು ಓರ್ವ ಹಿಂದೂ”.

partition

ಗಾಂಧೀ ಹತ್ಯೆಯ ಪರಿಣಾಮಗಳು, ದುಷ್ಪರಿಣಾಮಗಳು, ಬಹಳ ಬಹಳ ಘೋರ. 1948ರ ಗಾಂಧೀ ಹತ್ಯೆಯ ಅನಂತರವಾಗಲೀ, 1984ರ ಶ್ರೀಮತಿ ಇಂದಿರಾ ಗಾಂಧಿಯವರ ಹತ್ಯೆಯ ಅನಂತರವಾಗಲೀ ನಡೆದ ಜನಾಂಗೀಯ ಹತ್ಯೆಗಳು ಭಯಾನಕವಾಗಿದ್ದವು. ಹುತಾತ್ಮರ ಬಗೆಗಾಗಲೀ, ಹಂತಕರ ಬಗೆಗಾಗಲೀ ಏನೇನೂ ಗೊತ್ತಿಲ್ಲದ ಮುಗ್ಧ ಜನರು ಹತ್ಯೆಗೆ, ಆಕ್ರಮಣಕ್ಕೆ ತುತ್ತಾಗಬೇಕಾಯಿತು. ಹುಡುಕಿ ಹುಡುಕಿ ಒಂದು ಸಮುದಾಯದವರ ಮನೆಗಳಿಗೆ ಬೆಂಕಿ ಹಚ್ಚಲಾಯಿತು. ಯಾರ ಹೆಸರೂ ಕೇಳಿರದ, ಏನೇನೂ ಗೊತ್ತಿರದ ಪುಟ್ಟ ಮಕ್ಕಳನ್ನು, ಮಹಿಳೆಯರನ್ನು ಸಹ ಸುಟ್ಟು ಹಾಕಲಾಯಿತು, ಕೊಂದುಹಾಕಲಾಯಿತು. ಆಕ್ರಮಣಕ್ಕೆ ಗುರಿಯಾದ ಬಹುಪಾಲು ಜನರಿಗೆ ಏಕೆ ಈ ಆಕ್ರಮಣವೆಂಬುದೂ ಗೊತ್ತಿರಲಿಲ್ಲ, ಗಾಂಧೀ ಹತ್ಯೆಯ ವಿಷಯವೂ ತಿಳಿದಿರಲಿಲ್ಲ. ಜನಾಂಗೀಯ ಹತ್ಯೆಗಳೇ ಹಾಗೆ; ನತದೃಷ್ಟ ಸಾಮಾನ್ಯರೇ ಅತಿ ಹೆಚ್ಚು ಹಿಂಸೆ, ಹತ್ಯಾಕಾಂಡಗಳಿಗೆ ತುತ್ತಾಗುತ್ತಾರೆ.

ಗಾಂಧೀ ಹತ್ಯೆಯ ಅನಂತರ ನೆಹರೂ ಅವರು ಗೃಹಮಂತ್ರಿ ಪಟೇಲರ ಮೇಲೆ ಇನ್ನಿಲ್ಲದಷ್ಟು ಒತ್ತಡ ಹೇರಿ ಸಂಘವನ್ನು ನಿಷೇಧಿಸಿದರು. ಪಟೇಲರು ಸಂಘದ ಮೇಲೆ ಅನುಮಾನ ಪಡಲು, ಆರೋಪ ಹೊರಿಸಲು ಯಾವುದೇ ಸಾಕ್ಷ್ಯಾಧಾರಗಳಿಲ್ಲ, ಎಂದು ಮೊದಲೇ ಎಚ್ಚರಿಸಿದರು. ತಪ್ಪು ನಿರ್ಧಾರ ತೆಗೆದುಕೊಂಡರೆ, ನ್ಯಾಯಾಲಯದಲ್ಲಿ ಅವಮಾನವಾಗುತ್ತದೆ, ಎಂದು ಪಟೇಲರು ಪತ್ರ ಬರೆದೇ ಸೂಚಿಸಿದರು. ಆದರೆ, ದುರದೃಷ್ಟವಶಾತ್, ನೆಹರೂ ಯಾರ ಮಾತನ್ನೂ ಕೇಳಲು ಸಿದ್ಧರಿರಲಿಲ್ಲ. RSS ಅನ್ನು ಹೊಸಕಿಹಾಕಲು ಅವರು ಮೊದಲೇ ತೀರ್ಮಾನಿಸಿಬಿಟ್ಟಿದ್ದರು.

ಇದನ್ನೂ ಓದಿ: ನನ್ನ ದೇಶ ನನ್ನ ದನಿ ಅಂಕಣ: ಉಪ್ಪಿನ ಸತ್ಯಾಗ್ರಹದ ವೈಭವೀಕರಣವೇನೋ ಸರಿ, ಉಪ್ಪಿನ ಮೇಲಿನ ತೆರಿಗೆ ಕಡಿಮೆಯಾಯಿತೇ?

ಸಾವಿರಾರು ಕಾರ್ಯಕರ್ತರ ಬಂಧನವಾಯಿತು. ಗಾಂಧೀ ಹತ್ಯೆಯ ವಿಚಾರಣೆಯ ನ್ಯಾಯಿಕ ಪ್ರಕ್ರಿಯೆ ಸುಮಾರು ಎರಡು ವರ್ಷಗಳ ಕಾಲ ನಡೆಯಿತು. ಗಾಂಧೀ ಹತ್ಯೆಯಲ್ಲಿ ಸಂಘದ ಮತ್ತು ಸಂಘದ ನಾಯಕರ ಯಾವ ಪಾತ್ರವೂ ಇಲ್ಲವೆಂಬುದು ನ್ಯಾಯಾಲಯದಲ್ಲಿಯೇ ರುಜುವಾತಾಯಿತು. ಸಂಘದ ಎಲ್ಲರ ಬಿಡುಗಡೆಯೂ ಆಯಿತು.

ನೆಹರೂ ಹದಿನೇಳು ವರ್ಷಗಳಷ್ಟು ದೀರ್ಘಕಾಲ ಪ್ರಧಾನಮಂತ್ರಿಯಾಗಿದ್ದರು. ತಮ್ಮ ಅಂತಿಮ ಸಮಯದವರೆಗೆ ಅವರೇ ಪ್ರಧಾನಮಂತ್ರಿ. ಎಷ್ಟೆಷ್ಟು ಪ್ರಯತ್ನಿಸಿದರೂ, ಅವರು ಸಂಘದ ವಿರುದ್ಧ ಕ್ರಮ ತೆಗೆದುಕೊಳ್ಳಲು ಆಗಲೇ ಇಲ್ಲ. ಏಕೆಂದರೆ, ಅಂತಹ ಶಿಕ್ಷಾರ್ಹವಾದ ಯಾವ ಅಪರಾಧವನ್ನೂ ಸಂಘವು ಮಾಡಿರಲೇ ಇಲ್ಲ. 1962ರ ಚೀನಾ ಆಕ್ರಮಣದ ಕಾಲಘಟ್ಟದಲ್ಲಿ ಸಂಘವು ನಿರ್ವಹಿಸಿದ ಪಾತ್ರ, ಸೇವೆಗಳನ್ನು ನೆಹರೂ ಅವರು ಸಹ ಪರಿಗಣಿಸಲೇಬೇಕಾಯಿತು. ಪ್ರತಿವರ್ಷ ನಡೆಯುವ ಗಣರಾಜ್ಯೋತ್ಸವವು ಸೇನಾ – ಅರೆಸೇನಾ ಪಡೆಗಳ ಪಥಸಂಚಲನದ ವಿಶಿಷ್ಟ ಉತ್ಸವ. 1963ರ ಗಣರಾಜ್ಯೋತ್ಸವದ ಪಥಸಂಚಲನಕ್ಕೆ, ಕೇಂದ್ರದ ಕಾಂಗ್ರೆಸ್ ಸರ್ಕಾರದಿಂದ ಸಂಘಕ್ಕೆ ಆಹ್ವಾನ ಸಿಕ್ಕಿದುದು, ಶತಮಾನದ ಇತಿಹಾಸದ ಪರಿಪ್ರೇಕ್ಷ್ಯದಲ್ಲಿ ಆಶ್ಚರ್ಯದ ಸಂಗತಿಯೆಂದೇ ಹೇಳಬಹುದು.

ಪ್ರತಿವರ್ಷ ನವೆಂಬರ್ 14ರಂದು, ನೆಹರೂ ಜನ್ಮದಿನದ ಅಂಗವಾಗಿ “ಮಕ್ಕಳ ದಿನಾಚರಣೆ”. 1950ರ ದಶಕದಲ್ಲಿ ನಾವೆಲ್ಲಾ “ಚಾಚಾ ನೆಹರೂ ಜಿಂದಾಬಾದ್” ಎನ್ನುತ್ತಾ ಕುಣಿದು ಕುಪ್ಪಳಿಸಿ ಸಂಭ್ರಮಿಸುತ್ತಿದ್ದೆವು. 1964ರಲ್ಲಿ ಅವರು ನಿಧನರಾದಾಗ ನಾವು ಇಡೀ ಶಾಲೆಯ ಮಕ್ಕಳೆಲ್ಲಾ ಅತ್ತಿದ್ದೆವು. ಆದರೆ, ಇಂದು ನಿಜ-ಇತಿಹಾಸದ ದಾಖಲೆಗಳು ಬೇರೆಯೇ ಸತ್ಯದರ್ಶನ ಮಾಡಿಸುತ್ತಿವೆ, ಎದೆಯ ತುಂಬ ವಿಷಾದಭಾವವನ್ನೂ ಮೂಡಿಸುತ್ತಿವೆ.

ಇದನ್ನೂ ಓದಿ: ನನ್ನ ದೇಶ ನನ್ನ ದನಿ ಅಂಕಣ: ಮಹಾನ್ ಬೌದ್ಧಿಕ ಕ್ಷತ್ರಿಯ ಸೀತಾರಾಮ ಗೋಯಲ್

Exit mobile version