Site icon Vistara News

ನನ್ನ ದೇಶ ನನ್ನ ದನಿ ಅಂಕಣ: ಲೂಟಿ ಮಾಡಿದವರು, ಬೇಟೆಯಾಡಿದವರು ಉದ್ಧಾರಕರಾಗಿ ಹೋದ ʼನಮ್ಮʼ ಇತಿಹಾಸ

british rule

ಈ ಅಂಕಣವನ್ನು ಇಲ್ಲಿ ಆಲಿಸಿ:

http://vistaranews.com/wp-content/uploads/2024/01/ANM-British-Golf-16th-January-2024-vistaranews.mp3

ಬ್ರಿಟಿಷರೇ ತಮ್ಮ ಬಗೆಗೆ ಬರೆದಿಟ್ಟ ಪುಸ್ತಕಗಳು, ಬ್ರಿಟಿಷರ ಪ್ರೀತಿಪಾತ್ರರು ಮುಂದುವರಿಸಿಕೊಂಡು ಬಂದ ಅಂತಹುದೇ “ಪರಂಪರೆ”, ಇವುಗಳ ವಿಲಾಸ- ವೈಚಿತ್ರ್ಯಗಳೇ ಕೆಲವೊಮ್ಮೆ ತಮಾಷೆಯಾಗಿರುತ್ತವೆ. ಬ್ರಿಟಿಷರೇ ನಮ್ಮ ಉದ್ಧಾರಕರು, ಬ್ರಿಟಿಷರು ಬಾರದಿದ್ದರೆ ಭಾರತದಲ್ಲಿ ಆಸ್ಪತ್ರೆಗಳು, ಶಾಲೆಗಳು, ಉದ್ಯಮಗಳು, ಆಡಳಿತ ವ್ಯವಸ್ಥೆ ಏನೂ ಇರುತ್ತಿರಲಿಲ್ಲ; ನಾವೆಲ್ಲಾ ಇನ್ನೂ ಅಂಧಕಾರದಲ್ಲಿಯೇ ಇರುತ್ತಿದ್ದೆವು, ಇತ್ಯಾದಿ, ಇತ್ಯಾದಿ. ನಮ್ಮ ಶಿಕ್ಷಣ, ಕೃಷಿ, ಉದ್ಯಮಗಳನ್ನು ಧ್ವಂಸ ಮಾಡಿ ಟ್ರಿಲಿಯನ್ನುಗಳಷ್ಟು ಸಂಪತ್ತನ್ನು ದೋಚಿಕೊಂಡುಹೋದವರು, ಶ್ರೀಮಂತ ರಾಷ್ಟ್ರವೊಂದನ್ನು ಭಿಕಾರಿಗಳ ಕೊಂಪೆಯನ್ನಾಗಿ ಮಾಡಿದವರು, ಮೆಕಾಲೆವಾದಿ ಪುಸ್ತಕಗಳಲ್ಲಿ ನಮ್ಮ “ಉದ್ಧಾರಕ”ರಾಗಿಬಿಟ್ಟಿದ್ದಾರೆ.

ಕೃಷಿ ವಿಜ್ಞಾನಿ ಹಾಗೂ ಪರಿಸರತಜ್ಞರಾದ ಅಪರೂಪದ ಲೇಖಕರೊಬ್ಬರು, ತಮ್ಮ ಅಧ್ಯಯನಗಳ ಆಧಾರದ ಮೇಲೆ, ಇತ್ತೀಚೆಗೆ ಹೇಳಿದ ಕೆಲವು ವಿಚಾರಗಳು ಕಣ್ಣು ತೆರೆಸುವಂತಿದ್ದವು. ಸ್ವಾತಂತ್ರ್ಯೋತ್ತರ ಸರಕಾರಗಳು ನಮ್ಮ ಬಹಳಷ್ಟು ಅರಣ್ಯ ಸಂಪತ್ತನ್ನು ನಾಶ ಮಾಡಿವೆ ಎಂದುಕೊಂಡಿರುತ್ತೇವೆ. ವಾಸ್ತವವೆಂದರೆ, ಭಾರತದ ಅರಣ್ಯ ಸಂಪತ್ತನ್ನು ಇವರೆಲ್ಲರಿಗಿಂತ ಹೆಚ್ಚಾಗಿ ಬ್ರಿಟಿಷರೇ ನಾಶಮಾಡಿದರು, ಲೂಟಿಮಾಡಿದರು, ಕೊಳ್ಳೆಹೊಡೆದರು. ಅವರಿಗೆ ಕಾಡನ್ನು ಸಂರಕ್ಷಿಸುವ ದೃಷ್ಟಿಕೋನವೇ ಇರಲಿಲ್ಲ. ಇಡೀ ದೇಶದಲ್ಲಿ ಅವರು ರೈಲುವ್ಯವಸ್ಥೆಯನ್ನು ಸಂಸ್ಥಾಪಿಸಿದುದೇ ಈ ವೃಕ್ಷ ಸಂಪತ್ತನ್ನು ನಾಶಮಾಡಲು, ಮರಮುಟ್ಟುಗಳನ್ನು ಇಂಗ್ಲೆಂಡಿಗೆ ಸಾಗಿಸಲು. ಈ ಲೂಟಿ ಮಿತಿಮೀರಿದ್ದು, ಎರಡನೆಯ ಮಹಾಯುದ್ಧದ ಕಾಲದಲ್ಲಿ. ಯುದ್ಧಕ್ಕೆ ಬೇಕಾದ ಆಹಾರ, ಸೈನಿಕರು, ಮರಮುಟ್ಟು ಎಲ್ಲವನ್ನೂ ಎಲ್ಲವನ್ನೂ ಭಾರತದಿಂದಲೇ ಸಾಗಿಸಿದರು, ಕೊಳ್ಳೆಹೊಡೆದರು. ನಮ್ಮ ಪಕ್ಕದ ಮಯನ್ಮಾರ್ (ಬರ್ಮಾ) ದೇಶವನ್ನೂ ಹೀಗೆಯೇ ಖಾಲಿಮಾಡಿದರು.

ಭಾರತದ ವನ್ಯಮೃಗಗಳನ್ನು ಬೇಕಾಬಿಟ್ಟಿ ಬೇಟೆಯಾಡಿ ನಾಶಮಾಡಿದರು. ಹಾಗೆ ಬೇಟೆಯಾಡಿದವರನ್ನು, ಪ್ರಾಣಿಗಳನ್ನು ಕೊಂದು ಕೊಂದು ಹಾಕಿದವರನ್ನು, ತಿಂದು ಹಾಕಿದವರನ್ನು ಆರಾಧಿಸುವ ತಂಡವೇ ನಮ್ಮಲ್ಲಿದೆ.

ಇಬ್ಬರು ಶ್ವೇತವರ್ಣೀಯ ಧೂರ್ತರು, ಲ್ಯಾರಿ ಕಾಲಿನ್ಸ್ ಮತ್ತು ಡೊಮಿನಿಕ್ ಲೇಪಿಯರ್ ಎಂಬವರು ʼಫ್ರೀಡಮ್ ಅಟ್ ಮಿಡ್‍ನೈಟ್ʼ (1979) ಎಂಬ ಪುಸ್ತಕ ಬರೆದಿದ್ದಾರೆ. ಅದರ ಮೊದಲ ಅಧ್ಯಾಯದ ಹೆಸರು ʼಎ ರೇಸ್ ಡೆಸ್ಟೈನ್‍ಡ್ ಟು ಗವರ್ನ್ ಅಂಡ್ ಸಬ್‍ಡ್ಯೂʼ (A Race destined to Govern and Subdue). ಬರೆದವರೂ ಬಿಳಿಯರೇ, ಬರೆದದ್ದೂ ಬಿಳಿಯರ ಬಗ್ಗೆಯೇ. ಯಾವ ಪುಸ್ತಕವನ್ನಾದರೂ ಓದಲಿ, ಬಿಡಲಿ. ಇದನ್ನಂತೂ ಓದಲೇಬೇಕು. ಅದರಲ್ಲೂ ಈ ಮೊದಲ ಅಧ್ಯಾಯ ಮರೆಯಲಾಗದಂತಹುದು. ಇಲ್ಲಿ ತಮ್ಮ ಶ್ವೇತವರ್ಣೀಯ ಜನಾಂಗವನ್ನು – ಬ್ರಿಟಿಷರನ್ನು ಅದೆಷ್ಟು ಹೊಗಳಿದ್ದಾರೆಂದರೆ, ಕೊನೆಕೊನೆಗೆ ನಗು ಬರುತ್ತದೆ, ಅನಂತರ ಅಸಹ್ಯವಾಗುತ್ತದೆ. ಕ್ರಿಮಿಕೀಟಗಳನ್ನು, ಹುಳು ಹಂದಿಗಳನ್ನು ಸಹ ಪ್ರತಿಸಾಲಿನಲ್ಲೂ ಮಹಾಪುರುಷರೆಂಬಂತೆ ವೈಭವೀಕರಿಸುತ್ತಾರೆ. ಕೆಲವೆಡೆ ಈ ಲೇಖಕರ ದುರಹಂಕಾರವಂತೂ ಮಿತಿ ಮೀರುತ್ತದೆ.

ನಮ್ಮ ಅಂತಃಕಲಹಗಳು, ನಮ್ಮ ಮೂರ್ಖತನ, ವ್ಯಾಪಾರಕ್ಕೆಂದು ಬಂದ ಬ್ರಿಟಿಷರು ಇಡಿಯ ದೇಶವನ್ನೇ ಆಪೋಶನ ತೆಗೆದುಕೊಳ್ಳುವಂತೆ ಮಾಡಿದವು. ವ್ಯಾಪಾರಕ್ಕೆಂದು ಬಂದವರು ಈ ದೇಶವನ್ನೇ ಆಳಬಹುದು, ನಮ್ಮ ತಲೆಯ ಮೇಲೆಯೇ ಕೂರಬಹುದು, ಎಂಬುದನ್ನು ನಾವು ಊಹಿಸಿಕೊಳ್ಳಲೇ ಇಲ್ಲ. ಇಂಗ್ಲೆಂಡಿನಲ್ಲಿ ಶಾಲೆ ಮುಗಿಸಿದ ಪಡ್ಡೆ ಹುಡುಗರು, ಇಲ್ಲಿ ಭಾರತದಲ್ಲಿ (ಅಲ್ಲಿನ ಸ್ಕಾಟ್ಲೆಂಡ್‍ಗಿಂತ ವಿಶಾಲವಾದ ಪ್ರದೇಶಗಳ) ಜಿಲ್ಲಾಧಿಕಾರಿಗಳಾದರು, ಕಲೆಕ್ಟರುಗಳಾದರು, ಆಳಿದರು, ಅಧಿಕಾರ ಚಲಾಯಿಸಿದರು. ನಮ್ಮನ್ನು ಆಳಲೆಂದೇ “ವಿಧಿ ನಿಶ್ಚಯಿಸಿದ ಜನಾಂಗ”ವಲ್ಲವೇ! ಇಲ್ಲಿಗೆ ಬಂದ ಬ್ರಿಟಿಷ್ ವ್ಯಕ್ತಿ, ತಾನು ಸಂಪಾದಕನಾಗಿರಲಿ, ಸಹಾಯಕ ವೃತ್ತಿಯವನಾಗಿರಲಿ ಅಥವಾ ಮುಖ್ಯ ಕಮಿಷನರನ ಹುದ್ದೆಯಲ್ಲಿಯೇ ಇರಲಿ, ಅವನ ಮನಸ್ಸಿನಲ್ಲಿದ್ದುದು “ಈ ಜನರನ್ನು ಆಳಲು, ಅಂಕೆಯಲ್ಲಿಡಲು ಸ್ವತಃ ಗಾಡ್ ನಿಗದಿ ಮಾಡಿದ ಜನಾಂಗವೊಂದಕ್ಕೆ ಸೇರಿದವ ತಾನು” ಎಂಬ ಭಾವನೆಯೇ.

ಈ ದೇಶವನ್ನು ಆಳಲು, ಆಡಳಿತದ ಚುಕ್ಕಾಣಿ ಹಿಡಿಯಲು, ಅನನುಭವಿ ಇಂಗ್ಲಿಷ್ ತರುಣರ ದೊಡ್ಡ ಪಡೆಯೇ ಬಂದಿತು. ಅವರು ಹೇಳಿದ್ದೇ ನಿಯಮ. ಮಾಡಿದ್ದೇ ಕಾಯಿದೆ. ನಮ್ಮನ್ನು ಆಳಲೆಂದೇ “ಗಾಡ್ ತೀರ್ಮಾನಿಸಿದ್ದ” ಈ ಜನಾಂಗದಲ್ಲಿ ಜನರು ಸಾಲದೆ, 1918ರಿಂದ ಐ.ಸಿ.ಎಸ್. ಪರೀಕ್ಷೆಗೆ ಕೂರಲು ಅಭ್ಯರ್ಥಿಗಳೇ ಇಲ್ಲದೆ, ಅನಿವಾರ್ಯವಾಗಿ ಇಂಡಿಯಾ ದೇಶದ ಗುಲಾಮರಿಗೆ ಅವಕಾಶ ನೀಡಲಾರಂಭಿಸಿದರಂತೆ! ಇವರು ಏನಾದರೂ ಹೇಳಿಕೊಳ್ಳಲಿ, ಏನಾದರೂ ಬರೆದಿಟ್ಟಿರಲಿ, ತಮ್ಮ ಚಲನಚಿತ್ರಗಳಲ್ಲಿ ಏನನ್ನೇ ತೋರಿಸಲಿ, ಪೂರ್ವಾಪರ ಜ್ಞಾನ ನಮಗೆ ಇರಬೇಕಾಗಿತ್ತು – ಇರಬೇಕಾಗಿದೆ. ಇತಿಹಾಸವನ್ನು ಕಣ್ಣು ತೆರೆದೇ ಓದುವ ಪರಾಮರ್ಶೆಯ ಅಗತ್ಯವಿದೆ. ನಮ್ಮ ಪರಂಪರೆಯ ಕುರಿತಾದ ಅರಿವಿನ ಬೆಳಕು ಬೇಕಾಗಿದೆ.

“ಸೂರ್ಯ ಮುಳುಗದ ಸಾಮ್ರಾಜ್ಯ” ಎಂಬ ಖ್ಯಾತಿಯ ಈ ಐದು ಕೋಟಿ ಬ್ರಿಟಿಷರು ಅಂದಿನ ಜಗತ್ತಿನ 56 ಕೋಟಿ ಜನರನ್ನು ಆಳಿದರಂತೆ. ಸಾಮಾನ್ಯ ಜನರು ಭಿಕ್ಷುಕರಿಗಿಂತ ಕಡೆಯಾಗಿ ಬದುಕುತ್ತಿದ್ದರೂ, ಅದನ್ನು ಬಿಟ್ಟು ತಮ್ಮ ವಿಲಾಸಕ್ಕೆ ಕ್ರಿಕೆಟ್, ಹಾಕಿ, ಪೋಲೋ, ಟೆನ್ನಿಸ್ ಮುಂತಾದ ಕ್ರೀಡೆಗಳನ್ನು ಇಲ್ಲಿ ಪ್ರಾರಂಭಿಸಿದುದನ್ನು ಈ ದುಷ್ಟ ಲೇಖಕರು ಭಾರತಕ್ಕೆ ಮಾಡಿದ ಒಂದು ಮಹದುಪಕಾರ ಎಂಬಂತೆ ಚಿತ್ರಿಸಿದ್ದಾರೆ.

ವಿವೇಚನೆ, ಅಂಕೆ, ನಿಯಂತ್ರಣಗಳಿಲ್ಲದಂತೆ ಅದೆಷ್ಟು ಬೇಟೆ ಆಡಿ ಆಡಿ ನಮ್ಮ ವನ್ಯಮೃಗ ಸಂಪತ್ತನ್ನು ನಾಶಮಾಡಿದರೆಂದರೆ, ಓದುವಾಗ ವ್ಯಥೆಯಾಗುತ್ತದೆ. ಅದೆಷ್ಟು ಸಲಗಗಳನ್ನು ಕೊಂದು ಹಾಕಿದರೆಂದರೆ, ಅವುಗಳ ಶಿಶ್ನಗಳ ತೊಗಲಿನಿಂದ ಮಾಡಿದ ಚೀಲಗಳನ್ನು, ತಮ್ಮ ಶೋಕಿಗಾಗಿ ಗಾಲ್ಫ್ (Golf) ಆಟದ ಚೆಂಡುಗಳನ್ನು ಹಾಕಲು ಬಳಸುತ್ತಿದ್ದರಂತೆ. ಇಂತಹ ನೂರೆಂಟು ಲೋಕಹಿತದ ಕೆಲಸಗಳ ವಿವರಗಳನ್ನು ಸ್ವತಃ ಈ ಲೇಖಕರೇ ದಾಖಲಿಸಿದ್ದಾರೆ. ಅಚ್ಚರಿಪಡುವಷ್ಟು ದಾಖಲೆಗಳನ್ನು ಒಟ್ಟುಮಾಡಿ ಪುಸ್ತಕ ಬರೆದಿದ್ದಾರೆ. ನಿಜ. ತಮ್ಮ ಶ್ವೇತವರ್ಣೀಯ ಜನಾಂಗದ ಬಡಾಯಿ ಕೊಚ್ಚಿಕೊಳ್ಳಲು ಪಾಪ, ತುಂಬ ʼಶ್ರಮʼವಹಿಸಿದ್ದಾರೆ (Page 16).

ಇದನ್ನೂ ಓದಿ: ನನ್ನ ದೇಶ ನನ್ನ ದನಿ ಅಂಕಣ: ಬ್ರಿಟಿಷರಿಗಿಂತಲೂ ನೆಹರೂ ಆಡಳಿತದಲ್ಲಿಯೇ ಹೆಚ್ಚಿತು ಮತಾಂತರ

ತಿನ್ನಲು ಅನ್ನವಿಲ್ಲದೆ ಕೋಟಿಕೋಟಿ ಭಾರತೀಯರು ದಿನವೂ ಸಾಯುತ್ತಿದ್ದರೆ, ಬ್ರಿಟಿಷರು ಬಾಂಬೆ, ಕೋಲ್ಕತ್ತಾ, ಲಾಹೋರ್, ಡೆಲ್ಲಿ, ಶಿಮ್ಲಾಗಳಲ್ಲಿ ಅಕ್ಷರಶಃ ವಿಲಾಸದಲ್ಲಿ ತೊಡಗಿದ್ದರು. ಅವರ ಕ್ಲಬ್ಬುಗಳ ಎಂಬತ್ತು ಅಡಿ ಉದ್ದದ ಡ್ರಾಯಿಂಗ್ ರೂಮುಗಳಲ್ಲಿ ಪ್ರತಿಯೊಬ್ಬ ಬ್ರಿಟಿಷನಿಗೂ ಸೇವೆ ಸಲ್ಲಿಸಲು ಪ್ರತ್ಯೇಕ ಆಳುಗಳು ಇರುತ್ತಿದ್ದರು. ಆದರೆ, ಈ ಆಳುಗಳನ್ನು ಬಿಟ್ಟು ಬೇರೆ ಭಾರತೀಯರಿಗೆ ಪ್ರವೇಶಾವಕಾಶವೇ ಇರಲಿಲ್ಲ. ನಮ್ಮ ದೇಶದಲ್ಲಿಯೇ “ನಾಯಿಗಳಿಗೆ, ಭಾರತೀಯರಿಗೆ ಪ್ರವೇಶವಿಲ್ಲ” ಎಂಬ ಬೋರ್ಡುಗಳನ್ನು ಹಾಕಿದ್ದರು.

ನಮ್ಮ ವನ್ಯಸಂಪತ್ತನ್ನು ಅದೆಷ್ಟು ಕೊಳ್ಳೆಹೊಡೆದರೆಂದರೆ, ಅದೆಷ್ಟು ಸಾವಿರ ಹಡಗುಗಳಲ್ಲಿ ತೇಗ, ಬೀಟೆ ಮರಗಳ ಸಂಪತ್ತನ್ನು ಸಾಗಿಸಿದರೆಂದರೆ, ಲಂಡನ್ನಿನಲ್ಲಿ ಮನೆಗಳ ಒಳಗೆ ಫರ್ನಿಚರ್ ಇಟ್ಟುಕೊಳ್ಳಲು ಜಾಗವಿಲ್ಲದೆ, ಮನೆಯಿಂದಾಚೆ ಹೊರಗಡೆ ಪೇರಿಸುತ್ತಿದ್ದರಂತೆ.

ಆದರೂ, ಇಂದಿಗೂ ನಮ್ಮಲ್ಲಿ ಬಹಳಷ್ಟು ಜನರಿಗೆ ಬ್ರಿಟಿಷರ ಬಗೆಗೆ ತುಂಬಾ ತುಂಬಾ ವ್ಯಾಮೋಹ, ಪ್ರೀತಿ. ನಾವು ಬ್ರಿಟಿಷರ ಗುಣಗಾನವನ್ನು ನಿಲ್ಲಿಸಿಲ್ಲ. ಇನ್ನೂ ನಿಲ್ಲಿಸಿಲ್ಲ. ಇನ್ನು, ಬ್ರಿಟಿಷರ ಭಾಷೆ ನಮ್ಮನ್ನು ಇಂದಿಗೂ ಆಳುತ್ತಿದೆ, ಮುಂದೆಯೂ ಆಳುತ್ತದೆ.

ಇದನ್ನೂ ಓದಿ: ನನ್ನ ದೇಶ ನನ್ನ ದನಿ ಅಂಕಣ: ಕಾಫಿರರನ್ನು ಬಿಡಿ, ಇಸ್ಲಾಂ ಅನುಸರಿಸುವವರಲ್ಲಿಯಾದರೂ ಸೋದರತ್ವ ಇದೆಯೇ?

Exit mobile version