Site icon Vistara News

ನನ್ನ ದೇಶ ನನ್ನ ದನಿ ಅಂಕಣ: ಕಾಫಿರರನ್ನು ಬಿಡಿ, ಇಸ್ಲಾಂ ಅನುಸರಿಸುವವರಲ್ಲಿಯಾದರೂ ಸೋದರತ್ವ ಇದೆಯೇ?

islam

ಈ ಅಂಕಣವನ್ನು ಇಲ್ಲಿ ಆಲಿಸಿ:

https://vistaranews.com/wp-content/uploads/2024/01/WhatsApp-Audio-2023-12-28-at-9.41.19-PM.mp3

1970, 1980ರ ದಶಕಗಳಲ್ಲಿ “ನವ್ಯ”ರ ಸುವರ್ಣಯುಗ ನಡೆಯಿತು, ನಡೆಯುತ್ತಿತ್ತು. ಸಾಹಿತ್ಯಲೋಕದ ನಿಯಂತ್ರಣ ಸಾಧಿಸಿದ ಅನಂತರ ಅವರು ಮಾಧ್ಯಮಗಳನ್ನೂ ಆಪೋಶನ ತೆಗೆದುಕೊಂಡರು. ಮೊದಮೊದಲು ತಾವು ಸಮಾಜವಾದಿಗಳು ಎಂದೆಲ್ಲಾ ಗಳಹುತ್ತಿದ್ದ ಈ ಮಾಫಿಯಾ ಕೂಟದವರು ಅನಂತರ ನಿಧಾನವಾಗಿ ತಾವು ಮಾರ್ಕ್ಸ್ ವಾದಿಗಳು ಎಂದು ಘೋಷಿಸಿಕೊಳ್ಳತೊಡಗಿದರು. ಅದೇಕೋ ಅವರಿಗೂ “ಕಮ್ಯೂನಿಸ್ಟ್” ಎನ್ನುವ ಪದ ಅಷ್ಟೊಂದು ಆಪ್ಯಾಯಮಾನವಾಗಿರಲಿಲ್ಲ. ಕನ್ನಡ ಮತ್ತು ಇಂಗ್ಲಿಷ್ ಪತ್ರಿಕೆಗಳಲ್ಲೆಲ್ಲಾ ತಮ್ಮ ಶಿಷ್ಯರನ್ನು ತುಂಬಿದರು. ಅದರಲ್ಲೂ ಒಂದು ಕನ್ನಡ ದಿನಪತ್ರಿಕೆಯ ಸಾಪ್ತಾಹಿಕ ಪುರವಣಿಯಲ್ಲಿ ಒಂದು ಕವನ ಪ್ರಕಟವಾದರೆ ಸಾಕು, ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಕವಿಗಳು ಕನ್ನಡನಾಡಿನಲ್ಲಿ “ಜಗತ್-ಪ್ರಸಿದ್ಧಿ” ಪಡೆದುಬಿಡುತ್ತಿದ್ದರು. ಹಾಗಿತ್ತು ಅವರ ಕರಾಮತ್ತು. ಅವರು ಬರೆದದ್ದೇ ಸಾಹಿತ್ಯ, ಅವರು ಗೀಚಿದ್ದೇ ವಿಚಾರ, ಚಿಂತನೆ.

ಈ ಕೂಟಕ್ಕೆ ಸನಾತನ ಧರ್ಮ ಮತ್ತು ಹಿಂದೂ ಸಮಾಜಗಳೇ ಗುರಿಗಳಾಗಿದ್ದವು. ಮೂಢನಂಬಿಕೆ, ಜಾತೀಯತೆ, ಅಸಮಾನತೆಗಳಂತೂ ಕೇವಲ ಹಿಂದೂ ಸಮಾಜದ ಕಳಂಕಗಳಾಗಿದ್ದವು. ಸ್ವಾತಂತ್ರ್ಯೋತ್ತರ ಅವಧಿಯಲ್ಲಿ ಭಾರತವು ಕಣ್ಣುಬಿಡುವಷ್ಟರಲ್ಲಿಯೇ NCERT, ICHR, ICSSR ಮುಂತಾದ ಅತಿ-ಮಹತ್ತ್ವದ ಸರ್ಕಾರಿ ಸಂಸ್ಥೆಗಳನ್ನು ತಮ್ಮ ಹತೋಟಿಗೆ ತೆಗೆದುಕೊಂಡ ಈ ಮಾರ್ಕ್ಸ್ ವಾದಿಗಳು ಭಾರತದ ಇತಿಹಾಸದ, ಸಮಾಜಶಾಸ್ತ್ರದ, ರಾಜಕೀಯ ವಿಜ್ಞಾನದ ಪಠ್ಯಪುಸ್ತಕಗಳನ್ನು ವಿಕೃತಗೊಳಿಸಿ ಇಡೀ ದೇಶದ ಜನರು ತಮ್ಮದೇ ಪರಂಪರೆ, ಸಂಸ್ಕೃತಿಗಳ ಬಗೆಗೆ ತಿರಸ್ಕಾರ, ದ್ವೇಷ, ಅವಜ್ಞೆಗಳನ್ನು ಬೆಳೆಸಿಕೊಳ್ಳುವಂತೆ ಮಾಡಿಬಿಟ್ಟರು. In fact, ವಿದೇಶೀ ದಾಳಿಕೋರರಿಗಿಂತ, ಬ್ರಿಟಿಷ್ ವಸಾಹತುಶಾಹಿಗಳಿಗಿಂತ ಹೆಚ್ಚಿನ ಭಾರತ-ದ್ರೋಹವನ್ನು ಎಸಗಿದವರೇ ಇವರು.

ಸಾಹಿತ್ಯಲೋಕದಲ್ಲಿ, ಮಾಧ್ಯಮಗಳಲ್ಲಿ ಈ ನವ್ಯರ ಮಾತೇ ಸಮಾಜದ ಧ್ವನಿಯಾಗಿಬಿಟ್ಟಿತ್ತು. ಆ ಕಾಲಘಟ್ಟದಲ್ಲಿ ನಿರುದ್ಯೋಗ, ಬಡತನ, ಭ್ರಷ್ಟಾಚಾರ, ಬೆಲೆಯೇರಿಕೆಗಳಿಂದ ಇಡೀ ದೇಶ ಕಂಗೆಟ್ಟುಹೋಗಿತ್ತು. ಈ ಎಲ್ಲ ಉಪದ್ವ್ಯಾಪಗಳಿಗೆ ಕಾರಣೀಭೂತವಾದ ಕಾಂಗ್ರೆಸ್ ಪಕ್ಷದ ವಿರುದ್ಧ ಲೋಕನಾಯಕ ಜಯಪ್ರಕಾಶರು ಸಿಡಿದೆದ್ದಾಗ, ಈ ಕೂಟವು ಅದಾಗಲೇ ತಾನು ಸಮಾಜವಾದಿ ಎಂದೇ ಘೋಷಿಸಿಕೊಳ್ಳಲಾರಂಭಿಸಿತ್ತು. ಅಷ್ಟೇ ಅಲ್ಲ, ತುರ್ತುಪರಿಸ್ಥಿತಿಯಲ್ಲಿ ತಣ್ಣಗೆ ಮನೆಯಲ್ಲಿಯೇ ಮಲಗಿದ್ದ ಈ ಪ್ರಭೃತಿಗಳು, ಕಾರಣಾಂತರಗಳಿಂದ ತುರ್ತುಪರಿಸ್ಥಿತಿ ಇನ್ನೇನು ಅಂತ್ಯ ಕಾಣುತ್ತದೆ ಎನ್ನುವಾಗ, ಇದ್ದಕ್ಕಿದ್ದಂತೆ “ಜಾಣತನದಿಂದ” ಪ್ರಜಾಪ್ರಭುತ್ವ ಉಳಿಸಲು ಕೂಗಲು, ಕಿರುಚಲು ಆರಂಭಿಸಿದರು.

ಅನಂತರದ ಕಾಲಘಟ್ಟದಲ್ಲಿ ಕಾಂಗ್ರೆಸ್, ಸಮಾಜವಾದೀ ಪಕ್ಷಗಳಿಗೇ “ಮಾದರಿ”ಯಾಗುವಷ್ಟು ಮುಸ್ಲಿಂ-ಓಲೈಕೆಯನ್ನು ಆರಂಭಿಸಲಾಯಿತು. ಉರ್ದು ಭಾಷೆಗೆ ರೇಡಿಯೋ ಸ್ಟೇಷನ್ನುಗಳೇ ಇದ್ದರೂ, ಕ್ಷಣಕಾಲದ ಸಂಸ್ಕೃತ ವಾರ್ತೆಯನ್ನು ವಿರೋಧಿಸಿ ಚಳವಳಿಯನ್ನೇ ಮಾಡಿದರು. ಕೆಲವರಂತೂ, ಒಬ್ಬ ರಾಷ್ಟ್ರಪತಿ ಮತ್ತು ಒಬ್ಬ ಜಟಕಾ ಹೊಡೆಯುವವ ಇಬ್ಬರೂ ಒಟ್ಟಿಗೇ ನಮಾಜು ಮಾಡುತ್ತಾರೆ, ಇಸ್ಲಾಂ ಅಂದರೆ ಸಮಾನತೆ, ಆದರೆ ನೋಡಿ, ಹಿಂದೂ ಸಮಾಜವೆಂದರೆ ಕೇವಲ ಅಸಮಾನತೆಯ – ಜಾತೀಯತೆಯ ಕೂಪ ಎಂದು ವೇದಿಕೆಗಳಲ್ಲೇ ರೋದಿಸುತ್ತಿದ್ದರು. ಅನಂತರದ ದಶಕಗಳಲ್ಲಿಯೂ, ಇಡೀ ಹಿಂದೂ ಸಮಾಜವೇ ಜರ್ಝರಿತವಾಗುವಂತಹ, ನಿಸ್ತೇಜವಾಗುವಂತಹ, ತನ್ನ ಪರಂಪರೆ – ಸಂಸ್ಕೃತಿಗಳ ಬಗೆಗೇ ತಲೆ ತಗ್ಗಿಸುವಂತಹ ಸಾಮಾಜಿಕ ವಾತಾವರಣವೊಂದನ್ನು ಸೃಷ್ಟಿಸಿಬಿಟ್ಟರು.

ಆಗ ಪೂರ್ವ ಮತ್ತು ಪಶ್ಚಿಮ ಪಾಕಿಸ್ತಾನಗಳಲ್ಲಿ ನಿರಂತರವಾಗಿ ಆಗುತ್ತಿದ್ದ ಹಿಂದೂಗಳ ಮತ್ತು ಬೌದ್ಧರ ಮಾರಣಹೋಮ, ಅತ್ಯಾಚಾರಗಳ ಬಗೆಗೆ ಯಾರೂ ಇವರನ್ನು ಪ್ರಶ್ನಿಸುವಂತೆಯೇ ಇರಲಿಲ್ಲ. ಪತ್ರಿಕೆಗಳಲ್ಲಿ ಬಂದ ಸುದ್ದಿಗಳ ಬಗೆಗೆ ಗಮನ ಸೆಳೆದರೂ, ಅದು ಸುಳ್ಳು ಎಂದು ಕಿರುಚಿ ಬಾಯಿ ಮುಚ್ಚಿಸುತ್ತಿದ್ದರು. ಮತ್ತೆಮತ್ತೆ ನಮ್ಮ ಸಾಹಿತ್ಯಲೋಕದ ಈ ತಾರೆಯರು ಹೇಳುತ್ತಿದ್ದುದು ಒಂದೇ ಮಾತು. ಮುಸ್ಲಿಮರಲ್ಲಿ ಸಮಾನತೆ ಇದೆ, ಭೇದಭಾವ ಇಲ್ಲ, Pan-Islam ಚಳವಳಿಯು ಸೋದರತ್ವದ ಸಂಕೇತ ಎಂದೇ. ವೃತ್ತಿನಿರತ ರಾಜಕಾರಣಿಗಳಿಗಿಂತ ಹೆಚ್ಚು ಜನಮತ – ಜನಾಭಿಪ್ರಾಯಗಳನ್ನು ಘಾಸಿಗೊಳಿಸಿದವರು ಇವರೇ.

ಸ್ವಾತಂತ್ರ್ಯಪೂರ್ವದ ಮತ್ತು ಸ್ವಾತಂತ್ರ್ಯೋತ್ತರ ಭಾರತದ ಇತಿಹಾಸವನ್ನು, ಮುಖ್ಯವಾಗಿ 20ನೆಯ ಶತಮಾನದ ಕಾಲಘಟ್ಟವನ್ನು ಇಡಿಯಾಗಿ ನಿರುಕಿಸಿದಾಗ, ಈ ಅಸಾಹಿತಿಗಳೆಲ್ಲಾ ಅದೆಷ್ಟು ಸುಳ್ಳು ಹೇಳಿದರು, ಎಂತಹ ಅಂಧಕಾರವು ನಮ್ಮನ್ನು ಆವರಿಸುವಂತೆ ಮಾಡಿದರು, ಎಂಬುದು ಅಪರಿಮಿತ ವಿಷಾದವನ್ನು ತುಂಬುತ್ತದೆ.

ಇರಲಿ, ಒಂದು ಕ್ಷಣ ನಾವು ಈ ಮಾರ್ಕ್ಸ್ ವಾದಿಗಳು ಹೇಳಿದುದನ್ನು ನಿಜವೆಂದೇ ಅಂದುಕೊಳ್ಳೋಣ. ಇವರೆಲ್ಲಾ ವಿಮರ್ಶಾತ್ಮಕವಾಗಿ ಖುರಾನ್ – ಹದೀಸುಗಳನ್ನು ಓದಿದ್ದಾರೆಯೋ? ಹೋಗಲಿ, ಕನಿಷ್ಠಪಕ್ಷ ತಿರುವಿಹಾಕಿದ್ದಾರೆಯೋ? ಇವರು ಇಸ್ಲಾಮಿನ ಆಕ್ರಮಣಕಾರೀ ಇತಿಹಾಸವನ್ನೇನಾದರೂ ಗಮನಿಸಿದ್ದಾರೆಯೋ, ಹೇಗೆ?

ಹೋಗಲಿ, ಕೆಲವು ಪ್ರಮುಖ ವರದಿಗಳನ್ನು – ಸಾಕ್ಷ್ಯಾಧಾರಗಳನ್ನು ನೋಡಿದ್ದಾರೆಯೋ?

20ನೆಯ ಶತಮಾನದ ಮೊದಲಾರ್ಧದಲ್ಲಿ, ಅವಿಭಜಿತ ಭಾರತದಾದ್ಯಂತ ಕೋಮು ಗಲಭೆಗಳಾದವು. ಅತ್ಯಾಚಾರ, ನರಹತ್ಯೆ, ಕಾಫಿರರ ಆಸ್ತಿಪಾಸ್ತಿಗಳಿಗೆ ಬೆಂಕಿ ಇತ್ಯಾದಿ ಎಲ್ಲ ಪ್ರಕರಣಗಳಲ್ಲಿಯೂ ಅಹಮದೀಯರು, ಶಿಯಾಗಳು, ಸುನ್ನಿಗಳು, ಉಳಿದ ಉಪ-ಪಂಗಡಗಳಿಗೆ ಸೇರಿದವರು, ಎಲ್ಲರೂ ಎಲ್ಲರೂ ಪಾಲ್ಗೊಂಡಿದ್ದರು. ಮುಸ್ಲಿಮರಿಗಾಗಿಯೇ ಪ್ರತ್ಯೇಕ ದೇಶದ ನಿರ್ಮಾಣವಾಗಬೇಕು, ಎಂದು ಎಲ್ಲ ಪಂಗಡಗಳಿಗೆ ಸೇರಿದವರೂ ಬೀದಿ ಹೋರಾಟ ನಡೆಸಿದರು. ಗಾಂಧೀ, ನೆಹರೂ ಮುಂತಾದ ಅತಿ-ಉದಾರೀ ರಾಜಕಾರಣಿಗಳ ಮನವಿಗೆ ಓಗೊಟ್ಟು, ಬಹಳ ಜನ ಮುಸ್ಲಿಮರು ಮೊಟಕಾದ ಭಾರತದಲ್ಲಿ ಉಳಿದರಾದರೂ, ವಲಸೆ ಹೋದ ಬೇರೆ ಬೇರೆ ಪಂಗಡಗಳ ಮುಸ್ಲಿಮರು ಪಾಕಿಸ್ತಾನದಲ್ಲಿ ಸೌಹಾರ್ದದಿಂದ – ಸಮಾನತೆಯಿಂದ – ಸೋದರತ್ವದಿಂದ ಬಾಳಿ ಬದುಕಿದರೇ, ಎಂಬುದೂ ಅಧ್ಯಯನಾರ್ಹ. ಪಾಪ, ನಮ್ಮ ಅಸಾಹಿತಿಗಳು ಇದಕ್ಕೆಲ್ಲಾ ತಲೆಯನ್ನೇ ಕೆಡಿಸಿಕೊಳ್ಳಲಿಲ್ಲ.

ನ್ಯಾಯಮೂರ್ತಿ ಮೊಹಮ್ಮದ್ ಮುನೀರ್ ಅವರ ಮಹತ್ತ್ವದ ವರದಿಯೊಂದರ ಬಗೆಗಾದರೂ ಇವರಿಗೇನಾದರೂ ತಿಳಿದಿದೆಯೋ?

ಪಾಕಿಸ್ತಾನದ ಪಶ್ಚಿಮ ಪಂಜಾಬ್ ಪ್ರಾಂತದಲ್ಲಿ 1953ರಲ್ಲಿ ಅಂತಃಕಲಹದ ದಂಗೆಗಳಾದವು. ಅಹಮದೀಯರು ಒಳಸಂಚು – ಪಿತೂರಿ ಮಾಡುತ್ತಿದ್ದಾರೆಂದು ಮುಲ್ಲಾಗಳು ಜನರನ್ನು ಉದ್ರಿಕ್ತಗೊಳಿಸಿದರು. “ಈ ವಿಶ್ವಾಸದ್ರೋಹಿ ಅಹಮದೀಯರು ಇಸ್ಲಾಮನ್ನು ನಾಶಮಾಡಲು ಹವಣಿಸುತ್ತಿದ್ದಾರೆ, ಸರ್ಕಾರವು ಅವರನ್ನು ಮುಸ್ಲಿಮರಲ್ಲವೆಂದು ಘೋಷಿಸಬೇಕು, ಹಾಗೆಂದು ಕಾನೂನು ಜಾರಿಯಾಗಬೇಕು” ಎಂದೆಲ್ಲಾ ಉದ್ರಿಕ್ತ ಜನರು ಹಟಮಾಡತೊಡಗಿದರು, ಪ್ರತಿಪಾದಿಸತೊಡಗಿದರು. ಉದ್ರಿಕ್ತ ಜನರ ಗುಂಪುಗಳು ಅನೇಕ ನಗರಗಳಲ್ಲಿ – ಗ್ರಾಮಗಳಲ್ಲಿ ಅಹಮದೀಯರನ್ನು ಕ್ರೋಧಾವೇಶದಿಂದ ಅಟ್ಟಾಡಿಸಿಕೊಂಡುಹೋದರು; ಅವರ ಮನೆಗಳನ್ನು – ಮಸೀದಿಗಳನ್ನು ನಾಶಪಡಿಸಿದರು. ಈ ಗಲಭೆಗಳ ವಿಚಾರಣೆಗಾಗಿ ಪಾಕಿಸ್ತಾನ್ ಸರ್ಕಾರವು ಆಯೋಗವೊಂದನ್ನು ರಚಿಸಿತು. ಅವಿಭಜಿತ ಭಾರತದಿಂದ ಸಿಡಿದು ಬೇರೆಯಾದ ಅನಂತರ, ಈ ಪಾಕಿಸ್ತಾನದ ಅತ್ಯುತ್ತಮ ವರದಿಯೊಂದನ್ನು, ನ್ಯಾಯಮೂರ್ತಿ ಮೊಹಮ್ಮದ್ ಮುನೀರ್ ಅವರು ನೀಡಿದ್ದಾರೆ. 1954ರ ಪಂಜಾಬ್ (ಪಾಕಿಸ್ತಾನ್) ಅಧಿನಿಯಮ IIರ ಅನುಸಾರವಾಗಿ ರಚಿತವಾದ, 1953ರ ಪಂಜಾಬ್ (ಪಾಕಿಸ್ತಾನ್) ಗಲಭೆಗಳ ವಿಚಾರಣಾ ಆಯೋಗ ವರದಿ (1954ರಲ್ಲಿ, ಪಾಕಿಸ್ತಾನದ ಪಂಜಾಬ್ ಪ್ರಾಂತದ ಲಾಹೋರಿನ ಸರ್ಕಾರಿ ಮುದ್ರಣಾಲಯದ ಸೂಪರಿಂಟೆಂಡೆಂಟರಿಂದ ಈ ವರದಿಯು ಪ್ರಕಾಶಿತವಾಗಿದೆ. ಗಮನಿಸಿ, ಪುಟ 218).

ಮುಸ್ಲಿಮನೆಂದರೆ ಯಾರು, ಎಂಬುದಕ್ಕೆ ಇಸ್ಲಾಮೀ ಮೌಲ್ವಿಗಳ ಯಾವುದೇ ಗುಂಪು, ಉಳಿದ ಗುಂಪುಗಳ ಅಭಿಪ್ರಾಯಕ್ಕೆ ಸಹಮತ ನೀಡಿಲ್ಲವೆಂದು ಈ ವರದಿಯು ದಾಖಲಿಸಿದೆ. ಪ್ರತಿಯೊಂದು ಇಸ್ಲಾಮೀ ಉಪ-ಪಂಗಡದವರು, ಉಳಿದ ಉಪ-ಪಂಗಡದವರನ್ನು ಕಾಫಿರರೆಂದು, ಮತಭ್ರಷ್ಟರೆಂದು ಜರೆದಿದ್ದಾರೆ, ಹೀಯಾಳಿಸಿದ್ದಾರೆ. ಅಷ್ಟೇ ಅಲ್ಲ, ಹಾಗೆಂದು ವಿಧ್ಯುಕ್ತವಾಗಿ ಘೋಷಿಸಿದ್ದಾರೆ. ಅಂದಿನ ಪಾಕಿಸ್ತಾನದ ಅತ್ಯುನ್ನತ ಇಸ್ಲಾಮೀ ಮತಪಂಡಿತರ ಹೇಳಿಕೆಗಳನ್ನು – ವಿವರಣೆಗಳನ್ನು ಆಯೋಗವು ಪುಟಗಟ್ಟಲೆ ದಾಖಲಿಸಿ, ಕೊನೆಗೆ ಹೀಗೆ ಮುಕ್ತಾಯ ಹಾಡಿದೆ:

“ಇಸ್ಲಾಮೀ ಮತಪಂಡಿತರಾದ, ಗೌರವಾನ್ವಿತರಾದ ಅನೇಕಾನೇಕ ಉಲೇಮಾಗಳ ಹಲವಾರು ವಿವರಣೆ – ನಿರೂಪಣೆಗಳನ್ನು ಗಮನಿಸಿ ಹೇಳುವುದಾದರೆ, ಮುಸ್ಲಿಂ ಎಂದರೆ ಯಾರು, ಎಂಬುದಕ್ಕೆ ಸಂಬಂಧಿಸಿದಂತೆ, ಯಾರೇ ಇಬ್ಬರು ಉಲೇಮಾಗಳು ಒಂದೇ ಅಭಿಪ್ರಾಯವನ್ನು ಸೂಚಿಸಿಲ್ಲ ಮತ್ತು ಬೇರೆಲ್ಲ ಉಲೇಮಾಗಳ ಅಭಿಪ್ರಾಯವನ್ನೂ ಯಾರೂ ಒಪ್ಪಿಲ್ಲ. ನಾವು (ನ್ಯಾಯಮೂರ್ತಿಯವರು) ಏನಾದರೂ ನಮ್ಮದೇ ಆದ ವಿವರಣೆ – ವ್ಯಾಖ್ಯಾನ ನೀಡಲು ಹೊರಟರೆ, ಈ ಎಲ್ಲ ಗೌರವಾನ್ವಿತ ಉಲೇಮಾಗಳು ಯಾರೂ ಅದನ್ನು ಒಪ್ಪುವುದಿಲ್ಲ ಮತ್ತು ಅದು ಇಸ್ಲಾಮಿನ ವ್ಯಾಖ್ಯೆಯಿಂದಲೇ ದೂರವಾಗಿಬಿಡಬಹುದು. ಯಾರೇ ಒಬ್ಬ ಉಲೇಮಾ ಹೇಳಿದುದನ್ನು ನಾವೇನಾದರೂ (ಈ ಆಯೋಗದ ವತಿಯಿಂದ) ಒಪ್ಪಿದರೆ – ಅಂಗೀಕರಿಸಿದರೆ – ಅನುಮೋದಿಸಿದರೆ, ಅದು ಉಳಿದೆಲ್ಲ ಉಲೇಮಾಗಳ ದೃಷ್ಟಿಯಲ್ಲಿ ಕಾಫಿರ್ ಎಂದಾಗಿಬಿಡಬಹುದು” (ಆಯೋಗದ ವರದಿ, ಪುಟ 218).

ಇದನ್ನೂ ಓದಿ: ನನ್ನ ದೇಶ ನನ್ನ ದನಿ ಅಂಕಣ: ಬ್ರಿಟಿಷರಿಗಿಂತಲೂ ನೆಹರೂ ಆಡಳಿತದಲ್ಲಿಯೇ ಹೆಚ್ಚಿತು ಮತಾಂತರ

ಇದು ಮುಸ್ಲಿಂ ಎಂದರೆ ಯಾರು ಎಂಬ ಪ್ರಶ್ನೆಗೆ ಸಂಬಂಧಿಸಿದಂತೆ ಬರಿಯ ಪಂಡಿತರ – ವಿದ್ವಾಂಸರ ಮಟ್ಟದ ಚರ್ಚೆಯಲ್ಲ. ಬರಿಯ ವಿರೋಧ – ಅಸಾಂಗತ್ಯ – ಭಿನ್ನಾಭಿಪ್ರಾಯವಾಗಿ ಉಳಿಯುವ ವಿಷಯವಲ್ಲ. ಆಡಳಿತ, ಕಾನೂನು ಪಾಲನೆಗಳಿಗೆ ಸಂಬಂಧಿಸಿದಂತೆ ಜರೂರಿನ – ತುರ್ತಿನ ವಿಷಯವಿದು. ಇಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಅಸಂಖ್ಯ ಜನರಿಗೆ ಸಾವು, ಮರಣದಂಡನೆಗಳು ನಿಶ್ಚಿತ. ಪ್ರತಿಯೊಬ್ಬ ಉಲೇಮಾನ ದೃಷ್ಟಿಯಲ್ಲಿ, ಉಳಿದೆಲ್ಲ ಉಲೇಮಾಗಳು ಮತ್ತು ಅವರು ಪ್ರತಿನಿಧಿಸುವ ಪಂಗಡದ ಮುಸ್ಲಿಮರು ಮತಭ್ರಷ್ಟರು. ಆಯೋಗವು ಸಹ, ಈ ಮತಭ್ರಷ್ಟತೆಗೆ ಮರಣದಂಡನೆಯೇ ಶಿಕ್ಷೆ, ಎಂಬುದನ್ನು ಒತ್ತಿ ಹೇಳಿದೆ ಮತ್ತು ಈ ಮರಣದಂಡನೆಯ ಶಿಕ್ಷೆಯ ಈ ರೀತಿಯ ಪಾಲನೆ – ನಿರ್ವಹಣೆಗಳ ಬಗೆಗೆ, ಎಲ್ಲ ಪಂಗಡಗಳ ಉಲೇಮಾಗಳಲ್ಲಿ ಏಕಾಭಿಪ್ರಾಯಗಳಿವೆಯೆಂದು ಆಯೋಗವು ಹೇಳಿದೆ.

ಇತ್ತೀಚಿನ ವರ್ಷಗಳಲ್ಲಿ ಹನಫಿ, ಆಹ್ಲ್–ಇ-ಹದೀಸ್, ದೇವಬಂದಿ, ಬರೇಲ್ವಿ ಹಾಗೂ ಷಿಯಾ ಮುಸ್ಲಿಮರ ಮೇಲೆ ಮತ್ತು ಸೂಫಿ ಸಂಪ್ರದಾಯದ ಎಲ್ಲ ಶಾಖೆಯ ಮುಸ್ಲಿಮರ ಮೇಲೆ ಫತ್ವಾಗಳನ್ನು ಹೊರಡಿಸಲಾಗಿದೆ. ಅವರೆಲ್ಲರನ್ನು ಕಾಫಿರರೆಂದು – ಮತಭ್ರಷ್ಟರೆಂದು ಘೋಷಿಸಿ “ವಾಜಿಬ್–ಏ-ಕಾತ್ಲ್” – ಮರಣದಂಡನೆಯ ಶಿಕ್ಷೆಯನ್ನು ವಿಧಿಸಲಾಗಿದೆ. ಇಸ್ಲಾಮಿನ ಮತಪಂಡಿತರೆಂದು ಗೌರವ ಪಡೆದ ಹಾಗೂ ಖ್ಯಾತರಾದ ಎಲ್ಲ ಉಪ-ಪಂಗಡಗಳ ಮೌಲ್ವಿಗಳು – ನೇತಾರರು, ಬೇರೆಲ್ಲ ಉಪ-ಪಂಗಡಗಳ ಮುಸ್ಲಿಂ ಧುರೀಣರ ಮೇಲೆ ಇದೇ ಬಗೆಯ ಕಾಫಿರ್ – ಮತಭ್ರಷ್ಟ ಎಂಬ ಘೋಷಣೆಯನ್ನು ಹೊರಡಿಸಿದ್ದಾರೆ. ಗತ ಇತಿಹಾಸದಲ್ಲಿಯೂ ಇಂತಹ ಮುಸ್ಲಿಂ ಮತಸಿದ್ಧಾಂತಿಗಳು ಸೈಯದ್ ಅಹಮದ್ ಖಾನ್, ಮೌಲಾನಾ ಮೌದೂದಿ, ಮೊಹಮ್ಮದ್ ಇಕ್ಬಾಲ್, ಮೊಹಮ್ಮದ್ ಅಲಿ ಜಿನ್ನಾ ಮುಂತಾದ ಎಲ್ಲ ಖ್ಯಾತರ ಮೇಲೆಯೂ ಕಾಫಿರ್ – ಮುರ್ತಾದ್ ಎಂಬ ಘೋಷಣೆ (ಬರಿಯ ಆಪಾದನೆ ಅಲ್ಲ!) ಮಾಡಿದ್ದರು. ಮತಭ್ರಷ್ಟತೆಗೆ ಮರಣದಂಡನೆಯೊಂದೇ ಶಿಕ್ಷೆಯಾಗಿರುವುದರಿಂದ ಅಲ್ಲಾನ ಆಜ್ಞೆಯನ್ನು ಶಿರಸಾವಹಿಸಿ ಪಾಲಿಸಲು ಷಿಯಾ ಮುಸ್ಲಿಮರು ಸುನ್ನಿಗಳ ಮೇಲೆ ಮತ್ತು ಅದರಂತೆಯೇ ಸುನ್ನಿ ಮುಸ್ಲಿಮರು ಷಿಯಾ ಮುಸ್ಲಿಮರ ಮೇಲೆ ಸಮರ ಸಾರಿದ್ದಾರೆ, ನರಹತ್ಯಾಕಾಂಡ ನಡೆಸುತ್ತಿದ್ದಾರೆ. ಪಾಕಿಸ್ತಾನ ಮತ್ತು ಮಧ್ಯಪ್ರಾಚ್ಯ ದೇಶಗಳಲ್ಲಿ ನಿತ್ಯವೂ ಮಾರಣಹೋಮ ನಡೆಯುತ್ತಿದೆ.

ಬಿಡಿ, ಇನ್ನು ಕಾಫಿರರೊಂದಿಗೆ ಭ್ರಾತೃತ್ವ, ಸಮಾನತೆಗಳು ಅಕಲ್ಪನೀಯ, ಅಸಂಭವ.

ಇದನ್ನೂ ಓದಿ: ನನ್ನ ದೇಶ ನನ್ನ ದನಿ ಅಂಕಣ: ಸಯ್ಯಿದ್ ರಿಜ್ವಿ ಸ್ವತಃ ಹೇಳಿದ ಸೂಫಿಗಳ ನಿಜ ಕಥನ

Exit mobile version