Site icon Vistara News

ಪುರಾಣ ಕತೆ: ಬ್ರಹ್ಮಚಾರಿ ಹನುಮಂತನಿಗೂ ಒಬ್ಬ ಮಗನಿದ್ದ!

hanuman

ಸದಾ ಬ್ರಹ್ಮಚಾರಿಯಾಗಿದ್ದ ರಾಮಾಯಣದ ಹನುಮಂತನಿಗೆ ಮಗ ಇರಲು ಹೇಗೆ ಸಾಧ್ಯ ಎಂದು ನೀವು ಪ್ರಶ್ನಿಸಬಹುದು. ಆ ಅನುಮಾನಕ್ಕೆ ಉತ್ತರವಾಗಿ ಈ ಕಥೆ.

ಸೀತೆಯನ್ನು ರಾವಣ ಅಪಹರಿಸಿ ಲಂಕೆಗೆ ಕೊಂಡೊಯ್ಯುತ್ತಾನೆ. ಆಕೆಯನ್ನು ಹುಡುಕುತ್ತಾ ಬಂದ ರಾಮ ಲಕ್ಷ್ಮಣರು ಕಿಷ್ಕಿಂದೆಯಲ್ಲಿ ಸುಗ್ರೀವನ ಗೆಳೆತನ ಬೆಳೆಸಿದರು. ವಾಲಿಯನ್ನು ರಾಮ ಸಂಹರಿಸಿ, ಸುಗ್ರೀವ ಕಪಿಗಳ ದೊರೆಯಾಗುವಂತೆ ಮಾಡಿದ. ಪ್ರತಿಯಾಗಿ ಸುಗ್ರೀವ, ಎಲ್ಲ ಕಪಿಗಳನ್ನೂ ಸೇರಿಸಿ, ಸೀತೆ ಎಲ್ಲಿದ್ದರೂ ಹುಡುಕಿ ವರ್ತಮಾನ ತರುವಂತೆ ಅಪ್ಪಣೆ ಮಾಡಿದ. ಎಂಟು ಕಡೆಗೂ ಕಪಿಗಳ ದಂಡು ಹೊರಟಿತು.

ಜಾಂಬವರ ನೇತೃತ್ವದಲ್ಲಿ ದಕ್ಷಿಣ ದಿಕ್ಕಿನತ್ತ ಹೊರಟ ದಂಡಿನಲ್ಲಿ ಹನುಮಂತನಿದ್ದ. ಲಂಕೆಗೆ ಸೀತೆಯನ್ನು ರಾವಣ ಒಯ್ದಿದ್ದಾನೆ ಎಂಬುದು ಜಟಾಯುವಿನಿಂದ ಗೊತ್ತಾಗಿತ್ತು. ಹೀಗಾಗಿ ಹನುಮಂತ ಸಮುದ್ರವನ್ನು ಲಂಘಿಸಿ ಲಂಕೆಗೆ ಹೋಗುವುದೆಂದಾಯಿತು. ಸರಿಯೆಂದು ಹನುಮಂತ ಮಹೇಂದ್ರಾಚಲವನ್ನು ಏರಿ, ದೇಹವನ್ನು ಪರ್ವತದೆತ್ತರಕ್ಕೆ ಬೆಳೆಸಿ, ಅಲ್ಲಿಂದ ಜಿಗಿದು ಹಾರಿದ. ಮುಂದೆ ಸೀತೆಯನ್ನು ಕಂಡ. ರಾವಣನ ಮಗ ಇಂದ್ರಜಿತು ಆತನನ್ನು ಬ್ರಹ್ಮಾಸ್ತ್ರದಲ್ಲಿ ಕಟ್ಟಿಹಾಕಿ ಸಭೆಗೆ ತಂದ. ಹನುಮನ ಬಾಲಕ್ಕೆ ಬಟ್ಟೆ ಸುತ್ತಿ ಎಣ್ಣೆ ಸುರಿದು ಬೆಂಕಿ ಕೊಟ್ಟರು. ಆತ ಅಲ್ಲಿಂದ ಹಾರಿ ಲಂಕೆಯ ಮನೆಗಳಿಗೆಲ್ಲಾ ಬೆಂಕಿ ಕೊಟ್ಟ. ಇದರಿಂದ ಅವನ ಮೈಯಲ್ಲಿ ಬೆವರಿಳಿಯಿತು. ಅಲ್ಲಿಂದ ಮರಳಿ ಬರುವಾಗ, ಸಮುದ್ರದಲ್ಲಿ ಮುಳುಗಿ ಮೈ ತಂಪು ಮಾಡಿಕೊಂಡು, ಬಾಲದ ಬೆಂಕಿಯನ್ನೂ ಆರಿಸಿಕೊಂಡ.

ಸಮುದ್ರದಲ್ಲಿ ಬಿದ್ದ ಹನುಮನ ಬೆವರನ್ನು ಒಂದು ಹೆಣ್ಣು ಮಕರ (ಮೊಸಳೆ) ನುಂಗಿತು. ಆ ಮೊಸಳೆಯಲ್ಲಿ ಕಪಿಮುಖದ ಒಬ್ಬ ವೀರ ಜನಿಸಿದ. ಅವನೇ ಮಕರಧ್ವಜ. ಈತ ಅಂದಿನ ರಾಕ್ಷಸರಿಗೆ ಸಹಜವಾಗಿದ್ದ ಗುಣದಂತೆ ಕೆಲವೇ ದಿನಗಳಲ್ಲಿ ಬೆಳೆದು ದೊಡ್ಡವನಾದ.

ಮುಂದೆ ರಾಮ ಸಮುದ್ರಕ್ಕೆ ಸೇತುವೆ ಕಟ್ಟಿ, ಲಂಕೆಗೆ ಬಂದ. ರಾಕ್ಷಸರಿಗೂ ಕಪಿಗಳಿಗೂ ಘೋರ ಯುದ್ಧ ಆರಂಭವಾಯಿತು. ಒಂದು ಹಂತದಲ್ಲಿ ಇವರನ್ನು ಗೆಲ್ಲುವುದು ಅಸಾಧ್ಯವೆಂದು ಕಂಡಾಗ, ಪಾತಾಳದಲ್ಲಿದ್ದ ತನ್ನ ಸ್ನೇಹಿತನಾದ ಅಹಿರಾವಣನನ್ನು ರಾವಣ ನೆನೆದ. ಆತ ಬಂದ. ಆತ ಮಾಯಾಯುದ್ಧ ಪ್ರವೀಣ. ರಾತ್ರಿ ಬಿಡಾರದಲ್ಲಿ ಮಲಗಿದ್ದ ರಾಮ ಲಕ್ಷ್ಮಣರನ್ನು, ಅವರಗೆ ಅರಿವೇ ಆಗದಂತೆ ಎತ್ತಿಕೊಂಡು ಪಾತಾಳಕ್ಕೆ ಹೋಗಿ ಸೆರೆಮನೆಯಲ್ಲಿಟ್ಟ. ಬೆಳಗಾದ ಮೇಲೆ ಅವರನ್ನು ಬಲಿಕೊಡುವುದು ಅವನ ಉದ್ದೇಶ.

ಇದನ್ನೂ ಓದಿ: ಪುರಾಣ ಕತೆ: ದ್ರೌಪದಿಗೆ ಯಾಕೆ ಐವರು ಗಂಡಂದಿರು?

ಇದು ವಿಭೀಷಣನ ಮೂಲಕ ಹನುಮನಿಗೆ ಗೊತ್ತಾಯಿತು. ರಾಮ ಲಕ್ಷ್ಮಣರನ್ನು ಬಿಡಿಸಿಕೊಂಡು ಬರಲು ಹನುಮನಲ್ಲದೇ ಬೇರೆ ಸಮರ್ಥರಿರಲಿಲ್ಲ. ಆಂಜನೇಯನೇ ಹೊರಟ. ಪಾತಾಳಕ್ಕೆ ಆತ ಹೋದಾಗ ಅಲ್ಲಿನ ದ್ವಾರದಲ್ಲಿ ಅವನನ್ನು ಒಬ್ಬ ವೀರ ತಡೆದ. ಇಬ್ಬರಿಗೂ ಹೋರಾಟ ಆರಂಭವಾಯಿತು. ಆ ದೈತ್ಯ ಯುವಕ ಹನುಮನಿಗೆ ಸಮಾನವಾದ ಬಲದಿಂದ ಸೆಣಸಿದ. ಇದನ್ನು ನೋಡಿ ಹನುಮಂತನಿಗೆ ಆಶ್ಚರ್ಯವಾಯಿತು. ʻʻಯಾರು ನೀನು? ನಿನ್ನ ತಂದೆ ತಾಯಿ ಯಾರು?ʼʼ ಎಂದು ಪ್ರಶ್ನಿಸಿದ.

ʻʻನನ್ನ ಹೆಸರು ಮಕರಧ್ವಜ. ನನ್ನ ತಂದೆ ಹನುಮಂತʼʼ ಎಂದನವನು.

ʻʻಅಯ್ಯಾ, ಹನುಮಂತ ಬ್ರಹ್ಮಚಾರಿಯಲ್ಲವೇ, ಅವನಿಗೆ ನೀನು ಮಗ ಹೇಗಾದೆ?ʼʼ ಎಂದು ಚಕಿತನಾದ ಆಂಜನೇಯ ಪ್ರಶ್ನಿಸಿದ. ಇದಕ್ಕೆ ಉತ್ತರವಾಗಿ ಆತ ತನ್ನ ಜನ್ಮದ ಕತೆಯನ್ನು ಹೇಳಿದ.

ʻʻಮಗೂ, ನಾನೇ ಆ ಹನುಮಂತʼʼ ಎಂದು ಆಂಜನೇಯ ನಿಜರೂಪ ತೋರಿದ. ಇಬ್ಬರಿಗೂ ಸಂತೋಷವಾಯಿತು. ತಂದೆ ಮಕ್ಕಳು ಆಲಂಗಿಸಿಕೊಂಡರು. ತಾನು ಇಲ್ಲಿಗೇಕೆ ಬಂದೆ ಎಂಬ ವಿಚಾರವನ್ನು ಹನುಮಂತ ಮಗನಿಗೆ ತಿಳಿಸಿದ. ಮಕರಧ್ವಜನೇ ಪಾತಾಳದ ಕಾವಲುಗಾರನಾಗಿದ್ದ. ಅಹಿರಾವಣನೇ ಆತನನ್ನು ಸಾಕಿ ಸಲಹಿದ್ದ. ಹನುಮನನ್ನು ಒಳಗೆ ಬಿಟ್ಟು ತನ್ನ ದೊರೆಗೆ ದ್ರೋಹ ಮಾಡಲು ಮಕರಧ್ವಜ ಸಿದ್ಧನಿರಲಿಲ್ಲ. ತಂದೆಯಾದರೇನು, ತಾನು ಒಳಗೆ ಬಿಡುವುದಿಲ್ಲ, ಬೇಕಿದ್ದರೆ ನನ್ನನ್ನು ಸೋಲಿಸಿ ಒಳಗೆ ಹೋಗುʼ ಎಂದ.

ಹಾಗೆ ಇಬ್ಬರಿಗೂ ಮತ್ತೆ ಕದನವಾಯಿತು. ಮಕರಧ್ವಜನನ್ನು ಹನುಮ ಸೋಲಿಸಿ ಕಟ್ಟಿಹಾಕಿದ. ಮುಂದೆ ಸಾಗಿ ಅಹಿರಾವಣನನ್ನು ಕೊಂದು, ರಾಮ ಲಕ್ಷ್ಮಣರನ್ನು ಮರಳಿ ಕರೆತಂದ. ಆಗ ಮಕರಧ್ವಜನನ್ನು ಗಮನಿಸಿದ ರಾಮ, ಇವನ್ಯಾರು ಎಂದು ಕೇಳಿದಾಗ, ಆತನ ಕತೆಯನ್ನು ಹನುಮ ಹೇಳಿದ. ಮನಕರಗಿದ ರಾಮ, ಪಾತಾಳದ ರಾಜನನ್ನಾಗಿ ಮಕರಧ್ವಜನನ್ನು ಮಾಡಿದ.

ಇದನ್ನೂ ಓದಿ: ಹೊಸ ಪುಸ್ತಕ: ಭಾರತದ ಆರ್ಯರು ಇರಾನಿನಿಂದ ಬಂದವರೇ?

Exit mobile version