ಈ ಅಂಕಣವನ್ನು ಇಲ್ಲಿ ಆಲಿಸಿ:
ನನ್ನ ದೇಶ ನನ್ನ ದನಿ ಅಂಕಣ: ಮನೆ, ಸ್ಕೂಲು, ಕಾಲೇಜು, ಕೆಲಸ, ಸಂಸಾರ ಇವುಗಳ ಆಮೆಚಿಪ್ಪುಗಳ ಒಳಗೇ ಹುದುಗಿಕೊಂಡವರಿಗೆ ಹೊರಗಡೆಯ ಭಯಾನಕ ನಿಜ-ಪ್ರಪಂಚದ ಅರಿವೂ ಇರುವುದಿಲ್ಲ, ಅನುಭವವೂ ಇರುವುದಿಲ್ಲ. ಅಷ್ಟೇ ಅಲ್ಲ, ಹಾಗೆ ನೋಡಿದರೆ, ಇನ್ನೊಬ್ಬರ ಅನುಭವ ನಮ್ಮದಾಗುವುದೂ ಇಲ್ಲ. ಕಟುವಾಸ್ತವ ಪ್ರಪಂಚ ಇರುವುದೇ ಹಾಗೆ. ಪೊಲೀಸು, ಕಾನೂನು, ಲಾಯರುಗಳು, ನ್ಯಾಯಾಲಯಗಳು….. ಈ ವರ್ತುಲದಲ್ಲಿ ಪ್ರವೇಶಿಸಿದಾಗ ಮುಗ್ಧಜೀವಿಗಳು ನಲುಗಿಹೋಗಿಬಿಡುತ್ತಾರೆ. ಮೆದುಹೃದಯಗಳು ಒಡೆದುಹೋಗಿಬಿಡುತ್ತವೆ ಮತ್ತು ಎಂದೂ ಮಾಯದ ಆಳವಾದ ಗಾಯಗಳು ಶಾಶ್ವತ ಕಲೆಗಳನ್ನು ಉಳಿಸಿಬಿಡುತ್ತವೆ. ನನ್ನ ಸಮಕಾಲೀನರಿಗೆ ಮತ್ತು ರಾಷ್ಟ್ರೀಯ (Nationalist) ವಿಚಾರಧಾರೆಯವರಿಗೆ, ತುರ್ತುಪರಿಸ್ಥಿತಿಯ (emergency) ಕರಾಳ ಅನುಭವಗಳು ಈ ಅನೂಹ್ಯ ಜಗತ್ತಿನ ಅಪರಿಚಿತ ಆಯಾಮಗಳನ್ನು ಪರಿಚಯಿಸಿದವು.
ನವಂಬರ್ 1975ರಲ್ಲಿ ನಾನು ಮತ್ತು ನನ್ನ ಹಲವಾರು ಗೆಳೆಯರು DIR ಅಡಿ ಬಂಧಿತರಾದಾಗ, ಸಕಾಲದಲ್ಲಿ ಜಾಮೀನು ದೊರೆತು ದೈಹಿಕ ಹಿಂಸೆಯ ದುರಂತದಿಂದ ಪಾರಾದುದೇನೋ ನಿಜ. ಆದರೆ, ತದನಂತರ ಯಾರೂ ನಮ್ಮನ್ನು ಮಾತನಾಡಿಸುತ್ತಿರಲಿಲ್ಲ. ನನಗೆ ಬರುವ ಪತ್ರಗಳು ಪೊಲೀಸರಿಂದ ಸೆನ್ಸಾರ್ ಆಗುತ್ತಿದ್ದವು. ಅನಂತರ ಪತ್ರಗಳು ಬರುವುದೇ ನಿಂತುಹೋಯಿತು. ನಾಲ್ಕು ವರ್ಷಗಳ ದುರ್ಭರ ನಿರುದ್ಯೋಗ ಪರ್ವದ ಅನಂತರ ಸಿಕ್ಕ ಕೆಲಸ ಹೋಗಿಬಿಡುತ್ತದೆಯೋ ಎಂಬ ಆತಂಕ ನನ್ನದಾದರೆ, ಉಳಿದ ಸ್ವಯಂಸೇವಕ ಬಂಧುಗಳದ್ದೂ ಅಂತಹುದೇ ಆತಂಕ, ಅನಿಶ್ಚಿತ ಭವಿಷ್ಯ.
ಕನ್ನಡಿಗರಿಗೇ ಅಪರಿಚಿತನಾಗಿದ್ದ ಅಪ್ರತಿಮ ಯೋಧ ಧೊಂಡಿಯ ಬಗೆಗೆ ಅಪರೂಪದ ಇತಿಹಾಸ-ಕೃತಿ “ಕರುನಾಡ ಹುಲಿ ಧೊಂಡಿಯ” ನೀಡಿದ ಲೇಖಕ ಕ.ವೆಂ.ನಾಗರಾಜರ “ಬಾಳೊಂದು ಬಣ್ಣದ ಬುಗುರಿ ” ಆತ್ಮಕಥಾ ಸಂಕಲನ ಓದುವಾಗ, ಅಂದಿನ ಆ ಕರಾಳ ತುರ್ತುಪರಿಸ್ಥಿತಿಯ ಅನುಭವಗಳ ಕಹಿನೆನಪುಗಳು ನುಗ್ಗಿ ನುಗ್ಗಿ ಬರತೊಡಗಿದವು. ತುರ್ತುಪರಿಸ್ಥಿತಿಯ ನೇರಾನೇರ ಅನುಭವಗಳಿಲ್ಲದ ಇಂದಿನ ಯುವಪೀಳಿಗೆಯು ವಿಶೇಷವಾಗಿ ಗಮನಿಸಬೇಕಾದ ಕೃತಿಯಿದು. ಅಂತೆಯೇ, ಹಿರಿಯ ಓದುಗರೂ ಇತಿಹಾಸವನ್ನು ಮತ್ತೆ ಕಣ್ಮುಂದೆ ತಂದುಕೊಳ್ಳಲು ಓದಲೇಬೇಕಾದ ಕಥನಗಳಿಲ್ಲಿವೆ. ಅಷ್ಟೇ ಅಲ್ಲ, ಅನ್ಯಾನ್ಯ ಕಾರಣಗಳಿಗೂ ಇದೊಂದು ಓದಲೇಬೇಕಾದ ಕೃತಿ.
“…….ನಾನು ಎಷ್ಟು ರೋಸಿ ಹೋಗಿದ್ದೆ, ಎಂದರೆ ಕೇಸುಗಳ ಭರಾಟೆಯಿಂದ ನನಗೆ ನೌಕರಿ ಹೋಗುವುದೆಂದೇ ಭಾವಿಸಿದ್ದೆ. ನನ್ನ ಸ್ನೇಹಿತರು, ಕಚೇರಿಯ ಸಹೋದ್ಯೋಗಿಗಳು, ಅಕ್ಕಪಕ್ಕದವರು ನನ್ನೊಂದಿಗೆ ಮಾತನಾಡಲು ಹೆದರುತ್ತಿದ್ದರು. ಎಲ್ಲಿ ಅವರನ್ನೂ ನನ್ನೊಂದಿಗೆ ಸೇರಿಸಿಬಿಡುತ್ತಾರೋ ಎಂಬ ಭಯ ಅವರಿಗೆ. ತುರ್ತುಪರಿಸ್ಥಿತಿ ಮುಗಿಯುವವರೆಗೆ ಮಾತನಾಡಿಸಬೇಡ, ಎಂದು ಕೈಮುಗಿದು ಹೇಳಿದವರೂ ಕಡಿಮೆಯಿರಲಿಲ್ಲ. ನಾನು ಒಂಟಿಯಾಗಿದ್ದೆ. ನಾನು ಮನೆಯಿಂದ ಹೊರಗೆಹೋದರೆ ಮತ್ತೆ ಬರುತ್ತೀನೋ ಇಲ್ಲವೋ, ಎಂದು ಮನೆಯವರು ಆತಂಕ ಪಡುತ್ತಿದ್ದರು………” (ಪುಟ 11).
ಇದು ಅಂದಿನ ಅನೇಕಾನೇಕ ಸ್ವಯಂಸೇವಕರು ಪಟ್ಟ ದಾರುಣ ಅನುಭವಗಳ ಒಂದು ಮಜಲು. ಬೇರೆ ಬೇರೆ ಸೆರೆಮನೆಗಳಲ್ಲಿದ್ದ ನಮ್ಮ ಅನೇಕ ಸ್ವಯಂಸೇವಕ ಸಹವರ್ತಿಗಳು “ಈ ತುರ್ತುಪರಿಸ್ಥಿತಿ ಅದೆಷ್ಟು ಕಾಲ ಇರುತ್ತದೆ, ನಮ್ಮ ಬಿಡುಗಡೆ ಎಂದಿಗೆ, ನಮ್ಮ ದೇಶಕ್ಕೆ ಸಹಜಸ್ಥಿತಿ ಎಂದಿಗಾದರೂ ಬರುವುದೇ?…” ಎಂದು ಆತಂಕಿತರಾಗಿದ್ದರು. “ಸೆರೆಮನೆಯ ಜೀವನಕ್ಕಿಂತ, ಈ ಅನಿಶ್ಚಿತ ಸ್ಥಿತಿ ಹೆಚ್ಚು ದುರ್ಭರವಾಗಿತ್ತು” ಎಂದರು, ಗೆಳೆಯರು, ಕೊನೆಗೊಮ್ಮೆ ಬಿಡುಗಡೆಯಾದಮೇಲೆ. “ಆತ್ಮಾಹುತಿ” ಕೃತಿಯಿಂದ ಪರಿಚಿತವಾದ ಸಾವರ್ಕರ್ ಮತ್ತು ಅಂಡಮಾನ್ ಹಾಗೂ “ಅಜೇಯ” ಮೂಲಕ ಪರಿಚಯವಾದ ಕ್ರಾಂತಿಕಾರಿಗಳ ದುಸ್ತರ ಅನುಭವಗಳ ತೀವ್ರತೆಯ ಆಯಾಮಗಳು ನಮ್ಮಂತಹವರಿಗೆಲ್ಲಾ ಒಂದಿಷ್ಟಾದರೂ ಅರ್ಥವಾಗುತ್ತಹೋದುದು ಹೀಗೆ.
ಇಲ್ಲಿ ನಾಗರಾಜರು ಉಲ್ಲೇಖಿಸಿರುವ ಪ್ರಭಾಕರ ಕೆರೆಕೈ ಅವರ ಪ್ರಕರಣ ಓದುವಾಗ ಕಣ್ಣುಗಳು ಹನಿಗೂಡುತ್ತವೆ. ಇದನ್ನು, ಇಂತಹ ಆಖ್ಯಾಯಿಕೆಗಳನ್ನು ಓದಿಯಾದರೂ ನಮ್ಮ ಜನ ಪ್ರಜಾಪ್ರಭುತ್ವದ ಬೆಲೆ ಅರಿಯುವರೆಂದು ಆಶಿಸುತ್ತೇನೆ.
“……ಪ್ರಭಾಕರ ಕೆರೆಕೈ ಅವರನ್ನು ಇಲ್ಲಿ ಸ್ಮರಿಸಲೇಬೇಕು. ನಮ್ಮ ಜೊತೆ ಸಹಬಂದಿಯಾಗಿದ್ದ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಪೂರ್ಣಾವಧಿ ಪ್ರಚಾರಕರಾಗಿ ಹಿಂದೂ ಸಮಾಜದ ಸಲುವಾಗಿ ಸಮರ್ಪಿತರಾಗಿದ್ದವರು. ನಮ್ಮ ಬಿಡುಗಡೆಯಾದರೂ ಕೆರೆಕೈ ಅವರನ್ನು ಮೀಸಾ MISA (Maintenance of Internal Security Act) {ಆಂತರಿಕ ಭದ್ರತಾ ನಿರ್ವಹಣೆಯ ಅಧಿನಿಯಮ} ಕಾಯಿದೆಯನ್ವಯ ಬಳ್ಳಾರಿ ಜೈಲಿಗೆ ಸಾಗಿಸಿದ್ದರು. ತುರ್ತುಪರಿಸ್ಥಿತಿಯ ಹಿಂದೆಗೆತವಾಗುವವರೆಗೂ ಅವರು ಜೈಲಿನಲ್ಲಿಯೇ ಇದ್ದರು. ತುರ್ತುಪರಿಸ್ಥಿತಿಯು ದೇಶದ ಸಾವಿರಾರು ಜನರ ಜೀವನವನ್ನು ಸಂಪೂರ್ಣವಾಗಿ ನಾಶ ಮಾಡಿತು. ಮನೆ, ಮಠ, ಜೀವನಾಧಾರ ವೃತ್ತಿಗಳನ್ನು ಕಳೆದುಕೊಂಡವರೆಷ್ಟೋ, ಪ್ರಾಣ ಕಳೆದುಕೊಂಡವರೆಷ್ಟೋ, ಅಂಗವಿಕಲರಾದವರೆಷ್ಟೋ ಲೆಕ್ಕವಿಲ್ಲ. ಪ್ರಭಾಕರ ಕೆರೆಕೈ ಅವರು ತುರ್ತುಪರಿಸ್ಥಿತಿಯ ಕಾಲದಲ್ಲಿ ಅನುಭವಿಸಿದ ಕಷ್ಟನಷ್ಟ, ತೊಂದರೆಗಳು, ದೈಹಿಕ ಹಿಂಸೆ ಮುಂತಾದವು, ಅವರ ಮೇಲೆ ಮಾಯಲಾರದ ಗುರುತು ಉಳಿಸಿತ್ತು. ತುರ್ತುಪರಿಸ್ಥಿತಿಯ ಅನಂತರದಲ್ಲಿ ಅವರು ಮರಳಿ ಊರಿಗೆ ಹೋಗಿ, ಎಲ್ಲವನ್ನೂ ಮರೆತು ಎಲ್ಲರಂತೆ ಜೀವಿಸುವ ಇಚ್ಛೆ ಹೊಂದಿದ್ದರೂ ಮತಿಭ್ರಮಿತರಾಗಿ ಅನಂತರದ ಕೆಲವೇ ವರ್ಷಗಳಲ್ಲಿ ಇಹಲೋಕದ ವ್ಯಾಪಾರ ಮುಗಿಸಿದ್ದರು. ಸದಾ ಹಸನ್ಮುಖಿಯಾಗಿ ಎಲ್ಲರೊಡನೆ ಸ್ನೇಹವಿಶ್ವಾಸಗಳಿಂದ ಬೆರೆಯುತ್ತಿದ್ದ ಅವರು ತೀರಿಹೋದಾಗ ಅವರ ವಯಸ್ಸು ಬಹುಶಃ 30-32ರ ಆಸುಪಾಸಿನಲ್ಲಿ ಇದ್ದಿರಬಹುದು…..” (ಪುಟ 20).
ಸರ್ವಾಧಿಕಾರದ ವಿರುದ್ಧ ಪ್ರತಿಭಟಿಸಿದ ನಮ್ಮ ಕಾರ್ಯಕರ್ತರಿಗೆ ಬಿದ್ದ ಏಟುಗಳ ಮಾರ್ದನಿ 49 ವರ್ಷಗಳ ಅನಂತರವೂ ಇಂದಿಗೂ ಅನುರಣಿಸುತ್ತದೆ. ಇಂತಹ ಪ್ರಕರಣಗಳನ್ನು, ಸತ್ಯಕಥನಗಳನ್ನು, ದಾರುಣ ಅನುಭವಗಳನ್ನು ಮೆಲುಕು ಹಾಕುವಾಗ, ಆ ಕಾಲದ ಭಯಾನಕ ಇತಿಹಾಸವು ಧುತ್ತೆಂದು ಕಣ್ಮುಂದೆ ಬರುತ್ತದೆ. ಅರಸು ಅವರು ಕರ್ನಾಟಕದಲ್ಲಿ ಆಗ ಇದ್ದ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿಯಾಗಿದ್ದರು. ತುರ್ತುಪರಿಸ್ಥಿತಿಯ ವಿಕೃತಿಗಳು, ಚಿತ್ರಹಿಂಸೆಗಳು ಗಣನೀಯವಾಗಿದ್ದವು. ಅತಿಹೆಚ್ಚು ಹಿಂಸೆ – ಕಿರುಕುಳಗಳಿಗೆ ಒಳಗಾದವರು ನಮ್ಮ ಸ್ವಯಂಸೇವಕರೇ. ಪ್ರಜಾಪ್ರಭುತ್ವದ ಬಗೆಗೆ ನಮ್ಮ ಬಳಿ ದೊಡ್ಡ ದೊಡ್ಡ ಮಾತು ಆಡುತ್ತಿದ್ದ ನಮ್ಮ ನವ್ಯ ಲೇಖಕರು – ಸಮಾಜವಾದಿಗಳು – ಹುಸಿಕ್ರಾಂತಿಕಾರಿಗಳು ಯಾವ ಪ್ರತಿಭಟನೆಯನ್ನೂ ಮಾಡದೆಯೇ ಅವಿತುಕೊಂಡು ಪೂರ್ತಿಯಾಗಿ ಮಲಗಿಬಿಟ್ಟರು. ಕೆಲವರು ಸಿನಿಮಾ ತೆಗೆದರೆ, ಇನ್ನು ಕೆಲವರು ಕಾಡಿನಲ್ಲಿ ಕ್ರಿಮಿಕೀಟಗಳ ಫೋಟೋ ತೆಗೆಯುವಲ್ಲಿ ಮಗ್ನರಾಗಿದ್ದರು. ಬಹುಪಾಲು ಈ ಗುಂಪಿನ ಜನ ಬರೆವಣಿಗೆ, ಭಾಷಣಗಳನ್ನೇ ನಿಲ್ಲಿಸಿ “ಜಾಣ”ರಾದರು. 1977ರ ಅನಂತರ ತುರ್ತುಪರಿಸ್ಥಿತಿ ಹಿಂತೆಗೆಯಲ್ಪಟ್ಟ ಮೇಲೆ, ಸಹಜಸ್ಥಿತಿ ಮರಳಿದಮೇಲೆ, ಮತ್ತೆ ತಮ್ಮ ಉಪದ್ವ್ಯಾಪಗಳನ್ನು ಮುಂದುವರಿಸಿದರು. ಅರಸು ಅವರನ್ನು ಹಾಡಿಹೊಗಳಲು ಪ್ರಾರಂಭಿಸಿ, ಬಕೆಟ್ ಹಿಡಿಯಲು ಉದ್ಯುಕ್ತರಾದರು.
ಇದನ್ನು ಬಿಡಿ, ಕ್ಷಮಿಸಬಹುದು! ಆದರೆ, ಇವರೆಲ್ಲರೂ ಅಪ್ಪಿತಪ್ಪಿಯೂ ಅರಸು ಕಾಲದ ತುರ್ತುಪರಿಸ್ಥಿತಿಯ ಅತಿರೇಕಗಳ ಬಗೆಗೆ ಉಸಿರೆತ್ತುತ್ತಿರಲಿಲ್ಲ. ಉತ್ತರ ಭಾರತದಂತೆ ಇಲ್ಲಿ ಕರ್ನಾಟಕದಲ್ಲಿ ಯಾವ ಅತಿರೇಕಗಳೂ ಆಗಲಿಲ್ಲವೆಂದೇ ವಾದಿಸುತ್ತಿದ್ದರು, ನಿಜ, “ಈ ಮಾಫಿಯಾ ತಂಡದವರಿಗೆ ಮಾತ್ರ ಏನೂ ಆಗಲೇ ಇಲ್ಲ”. ಹಿಂಸೆಗೆ ಒಳಗಾದವರು ಪ್ರಭಾಕರ ಕೆರೆಕೈ ಅವರಂತಹ ಕಾರ್ಯಕರ್ತರು, ಪ್ರಚಾರಕರು. ಮಾಫಿಯಾ ತಂಡದ ಒಬ್ಬ ಪತ್ರಕರ್ತನೂ ಕರ್ನಾಟಕದ ತುರ್ತುಪರಿಸ್ಥಿತಿಯ ಹಿಂಸಾಪರ್ವವನ್ನು ದಾಖಲಿಸಲೇ ಇಲ್ಲ. ಪಾಪ, ಅವರ ಎರಡೂ ಕೈಗಳಲ್ಲಿ ಬಕೆಟ್ಟುಗಳ ಭಾರವಿತ್ತು.
ತುರ್ತುಪರಿಸ್ಥಿತಿಯ ಅವಧಿಯಲ್ಲಿ ಜೈಲಿನಲ್ಲಿ ಕೈದಿಯಾಗಿದ್ದ ಲೇಖಕ ಕ.ವೆಂ.ನಾಗರಾಜರು ಮುಂದೆ ಉಪ-ತಹಸೀಲ್ದಾರ್ ಆದರು. ಹೊಳೆನರಸೀಪುರಕ್ಕೆ ವರ್ಗವಾದಾಗ ಅಲ್ಲಿ ಪದನಿಮಿತ್ತ (Ex-officio) ಅಲ್ಲಿದ್ದ ಉಪ-ಕಾರಾಗೃಹದ ಅಧೀಕ್ಷಕರಾಗಿಯೂ ಕೆಲಸ ಮಾಡಬೇಕಾಯಿತು. “ಒಂದೊಮ್ಮೆ ಕೈದಿಯಾಗಿದ್ದ ನನಗೆ ಜೈಲಿನ ಅಧೀಕ್ಷಕನ ಹುದ್ದೆಯನ್ನು ನಿರ್ವಹಣೆ ಮಾಡುವ ಅನಿರೀಕ್ಷಿತ ಅವಕಾಶ ಸಿಕ್ಕಿದ್ದು ಸಂತೋಷದ ಮತ್ತು ಆಶ್ಚರ್ಯದ ವಿಷಯವಾಗಿತ್ತು” (ಪುಟ 27) ಎನ್ನುವ ಲೇಖಕರು, “ಜೈಲಿನಲ್ಲಿದ್ದವನು ಜೈಲಿನ ಅಧೀಕ್ಷಕನಾದ!” ಎಂಬ ಮಹತ್ತ್ವದ ಅಧ್ಯಾಯವನ್ನು ಬರೆದಿದ್ದಾರೆ. ಜೈಲುಗಳ ಮತ್ತು ಕೈದಿಗಳ ಸುಧಾರಣೆಯ ಅವರ ಪ್ರಾಮಾಣಿಕ ಪ್ರಯತ್ನಗಳು ಮೆಚ್ಚುಗೆ ಮೂಡಿಸುತ್ತವೆ.
ಇದನ್ನೂ ಓದಿ: ನನ್ನ ದೇಶ ನನ್ನ ದನಿ ಅಂಕಣ: ವಾರಾಣಸಿಯ ನಂದಿ ಮುಖ ಮಾಡಿದ ಕಡೆಗೆ ಶಿವ ಬರಲು ಇನ್ನೆಷ್ಟು ಕಾಯಬೇಕು?
ಸರಳ, ಪ್ರಾಮಾಣಿಕ ಕಳಕಳಿಯ ಅನುಭವಗಳನ್ನು ಹಂಚಿಕೊಂಡಿರುವ ಈ “ಬಾಳೊಂದು ಬಣ್ಣದ ಬುಗುರಿ” ಓದುವಾಗ ಮತ್ತು ಓದಿದಾಗ, ಕಟು ಅನುಭವಗಳ ಹೆದ್ದೆರೆಗಳು ಎದೆಯಾಳದಲ್ಲಿ ಅಪ್ಪಳಿಸುತ್ತವೆ, ಮಾರ್ದನಿಸುತ್ತವೆ. ದೇಶದಾದ್ಯಂತ ಘಟಿಸಿದ ತುರ್ತುಪರಿಸ್ಥಿತಿಯ ಭಯಾನಕ ಪ್ರಕರಣಗಳ ನೆನಪಾಗಿ ಮನಸ್ಸು ಭಾರವಾಗುತ್ತದೆ. ಕೆಲ “ಮುಗ್ಧರು” ಎಲ್ಲ ಹಿಂಸೆ, ಅತಿರೇಕಗಳಿಗೂ ಇಂದಿರಾ ಗಾಂಧಿ (Indira Gandhi) ಅವರನ್ನೇ ದೂಷಿಸಬಹುದೇ, ಎಂದು ಪ್ರಶ್ನಿಸುತ್ತಾರೆ!
ಇಂದಿರಾ ಮತ್ತು ಅಂತಹವರ ಸರ್ವಾಧಿಕಾರವು, ಇಡೀ ಆಡಳಿತ ಯಂತ್ರದ ಮತ್ತು ಅಧಿಕಾರಶಾಹಿಗೆ ಸೇರಿದ ಮನುಷ್ಯರ ಒಳಗಿನ ಪಾಶವೀ ಪ್ರವೃತ್ತಿ, ನೀಚತನಗಳು ಹೊರಹೊಮ್ಮುವಂತೆ ಮಾಡುತ್ತದೆ. ಆ ದುಷ್ಟರ ಅಂತರಂಗದಲ್ಲಿ ಹುದುಗಿದ್ದ ಸುಪ್ತವಾದ ವಿಷ ಹೊರಹರಿಯುತ್ತದೆ, ಸಮಾಜದ ಎಲ್ಲ ಸಾಂಸ್ಕೃತಿಕ ಆಯಾಮಗಳನ್ನೂ ಸರ್ವನಾಶ ಮಾಡುತ್ತದೆ. ಸ್ವಾರ್ಥಿಗಳು, ಹೊಗಳುಭಟರು, ಸಮಯಸಾಧಕರು ವಿಜೃಂಭಿಸುತ್ತಾರೆ. ಸರ್ವಾಧಿಕಾರ ಎನ್ನುವುದು ಒಂದು ಬಹಳ ದೊಡ್ಡ ಸರಪಳಿ-ಕ್ರಿಯೆ; ಹಿಮದ ಉಂಡೆ ಕೆಳಗುರುಳುತ್ತ ಉರುಳುತ್ತ ಕ್ಷಣಕ್ಷಣಕ್ಕೆ ದೊಡ್ಡದಾಗುವಂತಹ ಪರಿಣಾಮಕಾರಿ ಪ್ರಕ್ರಿಯೆ.
ನಮ್ಮ ಜನ ಈ ಕೃತಿಯನ್ನು, ಇಂತಹ ಕೃತಿಗಳನ್ನು ಓದಿ ಪ್ರಜಾಪ್ರಭುತ್ವದ ಮಹತ್ತ್ವವನ್ನು ಅರಿತರೆ, ಸರ್ವಾಧಿಕಾರದ ಕೆಟ್ಟ ಆಯಾಮವನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ, ಲೇಖಕರ ಶ್ರಮ ಸಾರ್ಥಕವಾಗುತ್ತದೆ. Of course, ಆ ಕೆಟ್ಟ ಅನುಭವಗಳು ನಮ್ಮವೇ ಆಗಿರಬೇಕಿಲ್ಲ, ದೇಶಭಕ್ತ ಕಾರ್ಯಕರ್ತರ ನೋವನ್ನು ಅರ್ಥಮಾಡಿಕೊಳ್ಳುವ ಸಹೃದಯ ಮಾತ್ರ ಓದುಗರಿಗೆ ಇರಬೇಕು, ಅಷ್ಟೇ.
ಇದನ್ನೂ ಓದಿ: ನನ್ನ ದೇಶ ನನ್ನ ದನಿ ಅಂಕಣ: ಇತಿಹಾಸದ ಸಂಕ್ರಮಣ ಕಾಲದಲ್ಲಿ ಹಿಂದೂಗಳ ಸಹಾಯ ನಿರೀಕ್ಷಿಸಿದ್ದ ಪರ್ಷಿಯನ್ನರು