ಈ ಅಂಕಣವನ್ನು ಇಲ್ಲಿ ಆಲಿಸಿ :
ಅದ್ಭುತ ಇತಿಹಾಸ – ಪರಂಪರೆಗಳ ಭಾರತವರ್ಷವಿಂದು ಸಂಕ್ರಮಣ ಸ್ಥಿತಿಯಲ್ಲಿದೆ. ಸುಷುಪ್ತಾವಸ್ಥೆಯಲ್ಲಿದ್ದ ನಮ್ಮ ದೇಶವನ್ನು ಎಚ್ಚರಿಸಿದ, ಸ್ವಾಮಿ ವಿವೇಕಾನಂದರು ಹೊಸ ಪರ್ವದ ಅಧ್ವರ್ಯುವಾದರು. “ಆರ್ಯ ಸಮಾಜ”ವನ್ನಾರಂಭಿಸಿದ ಸ್ವಾಮಿ ದಯಾನಂದ ಸರಸ್ವತಿಗಳು, ಮಹರ್ಷಿ ಅರವಿಂದರು ಬೆಳಕು ತೋರಿದರು. 19 ಮತ್ತು 20ನೆಯ ಶತಮಾನಗಳಲ್ಲಿ, ಬ್ರಿಟಿಷರು – ಕಮ್ಯೂನಿಸ್ಟರು – ಕಾಂಗ್ರೆಸ್ಸಿಗರು ವಿಕೃತಗೊಳಿಸಿದ್ದ “ಭಾರತೀಯ ಇತಿಹಾಸ”ವನ್ನು ಅಪಾರವಾದ ಪರಿಶ್ರಮದಿಂದ ಸರಿದಾರಿಗೆ ತರಲು ಬಹಳ ದೊಡ್ಡ ಕೊಡುಗೆ ನೀಡಿದವರು ಇತಿಹಾಸ ರಚನಶಾಸ್ತ್ರಜ್ಞರಾದ ಸೀತಾರಾಮ ಗೋಯಲ್ ಮತ್ತು ಪತ್ರಕರ್ತ ಅರುಣ್ ಶೌರಿ ಅವರು. ಕೋಟ್ಯಂತರ ಭಾರತೀಯರಲ್ಲಿ ಇಂದು ಜಾಗೃತಿ ಮೂಡಿದ್ದರೆ, ಹೊಸ ಪ್ರೇರಣೆ ದೊರೆತಿದ್ದರೆ, ಅದಕ್ಕೆ ಪ್ರಮುಖವಾಗಿ – ಪ್ರತ್ಯಕ್ಷವಾಗಿ – ಪರೋಕ್ಷವಾಗಿ ಕಾರಣರಾದವರು ಸೀತಾರಾಮ ಗೋಯಲ್ ಮತ್ತು ಪತ್ರಕರ್ತ ಅರುಣ್ ಶೌರಿ.
ಸೀತಾರಾಮ ಗೋಯಲ್ ಅವರು ಜನಿಸಿದ್ದು 1921ರ ಅಕ್ಟೋಬರ್ 16ರಂದು. ಅವರ “ವಾಯ್ಸ್ ಆಫ್ ಇಂಡಿಯಾ” ಸರಣಿಯ ಗ್ರಂಥಗಳು ಮತ್ತೆ ಭಾರತವನ್ನು ಪರಮ ವೈಭವದ ದಿನಗಳಿಗೆ ಕೊಂಡೊಯ್ಯುವಂತಹ ಪ್ರೇರಣೆಯನ್ನು ಭಾರತೀಯರಲ್ಲಿ ತುಂಬುವಷ್ಟು ಮಹತ್ತ್ವಪೂರ್ಣವಾದಂತಹವು. ಭಾರತೀಯ “ಇತಿಹಾಸ”ವು ಪ್ರಾರಂಭವಾಗುವುದೇ ವಿದೇಶೀ ಆಕ್ರಮಣಗಳಿಂದ! ಅಲೆಕ್ಸಾಂಡರನಿಂದ ಆರಂಭವಾಗಿ ಬ್ರಿಟಿಷರವರೆಗೆ ನಮ್ಮ ಇತಿಹಾಸವು ಬರಿಯ ಸೋಲಿನ ಕಥೆಯಾಗಿಹೋಗಿದೆ, ಅಳುಬುರುಕರ ರೋದನವಾಗಿಹೋಗಿದೆ! ಭಾರತದ ಕಲೆ – ಸಾಹಿತ್ಯ – ಸಂಸ್ಕೃತಿ – ವಿಜ್ಞಾನ – ಆಡಳಿತ ಎಲ್ಲವೂ ಎಲ್ಲವೂ ಮೊಘಲರ ಇಲ್ಲವೇ ಬ್ರಿಟಿಷರ ಕೊಡುಗೆಗಳು ಮಾತ್ರ, ಎನ್ನುವಂತಾಗಿದೆ. ದೇಶವೆಲ್ಲ ಹೆಮ್ಮೆಪಡುವ ಇತಿಹಾಸ-ಸಂಗತಿಗಳನ್ನೂ, ಪರಂಪರೆಯನ್ನೂ ಅಲ್ಲಗಳೆಯುವುದು ಮತ್ತು ಸಂಕುಚಿತವೂ-ಹಿಂಸಾಪ್ರಧಾನವೂ ಆದ ಆಳ್ವಿಕೆಗಳನ್ನು ವೈಭವೀಕರಿಸುವುದು ಈ ದೇಶದ ಮಾರ್ಕ್ಸ್‌ವಾದಿ “ಇತಿಹಾಸಕಾರ”ರ ದುರುದ್ದೇಶವಾಗಿತ್ತು, ಷಡ್ಯಂತ್ರವಾಗಿತ್ತು. ಭಾರತೀಯರ ಅಸ್ಮಿತೆ – ಆತ್ಮಾಭಿಮಾನಗಳನ್ನು ನಾಶಮಾಡಿಬಿಡುವ ಬ್ರಿಟಿಷರ “ವಾರಸಿಕೆ”ಯನ್ನು ಈ ಕಾಂಗ್ರೆಸ್-ಕಮ್ಯೂನಿಸ್ಟ್ ಜೋಡಿಯು ಸ್ವಾತಂತ್ರ್ಯೋತ್ತರ ಪರ್ವದಲ್ಲಿ ಮುಂದುವರಿಸಿಕೊಂಡುಹೋಯಿತು.
ಸೀತಾರಾಮ ಗೋಯಲ್ ಅವರು ಅಕ್ಷರಶಃ ಸಾವಿರಾರು ಸಾಕ್ಷ್ಯಾಧಾರಗಳನ್ನು, ದಾಖಲೆಗಳನ್ನು ನೀಡಿ, ಈ ಕಮ್ಯೂನಿಸ್ಟ್ – ಇಸ್ಲಾಂ – ಕ್ರೈಸ್ತಮತಗಳ ಕುತಂತ್ರ, ದ್ರೋಹಗಳನ್ನು ಬಯಲಿಗೆಳೆದಿದ್ದಾರೆ. ಅಪಾರವಾದ ಅಧ್ಯಯನದಿಂದ ಭಾರತೀಯ ಇತಿಹಾಸದ ನಿಜಸ್ವರೂಪವನ್ನು ಜನರ ಮುಂದೆ ಪ್ರಸ್ತುತಪಡಿಸಿದ್ದಾರೆ. ಮೂರು ದಶಕಗಳ ಹಿಂದೆಯೇ, ಗೋಯಲ್ ಅವರು ಅಕ್ರಮ ನುಸುಳುಕೋರರ (illegal intruders) ಬಗೆಗೆ, ಫಿಫ್ತ್ (FIFTH COLUMN) ಕಾಲಂ – ಸ್ಲೀಪರ್ ಸೆಲ್‍ಗಳ ಬಗೆಗೆ ಎಚ್ಚರಿಕೆ ನೀಡಿರುವುದು ಅಚ್ಚರಿ ಹುಟ್ಟಿಸುತ್ತದೆ. ಹಾಗೆ ಬೆಳೆದುನಿಂತ ಅಪಾಯಗಳ ವಿಷಫಲಗಳನ್ನು ನಾವಿಂದು ನಿತ್ಯ ಉಣ್ಣುತ್ತಿದ್ದೇವೆ, ಹಬ್ಬುತ್ತಲೇ ಇರುವ ವಿಷವೃಕ್ಷಗಳ ಬಿಳಲು-ಬೇರುಗಳನ್ನು ಪ್ರತಿದಿನ ನಾವು ಎಡವುತ್ತಿದ್ದೇವೆ, ಎಡತಾಕುತ್ತಿದ್ದೇವೆ.
ಹಿಂದೀ, ಉರ್ದು, ಬಂಗಾಳಿ, ಸಂಸ್ಕೃತ, ಪರ್ಷಿಯನ್ ಹಾಗೂ ಇಂಗ್ಲಿಷ್ ಭಾಷೆಗಳನ್ನು ಕಲಿತ ಸೀತಾರಾಮ ಗೋಯಲ್‍ರು ಸಾಹಿತ್ಯ, ಅಧ್ಯಾತ್ಮ, ತತ್ತ್ವಜ್ಞಾನ, ಧರ್ಮ, ಮತ, ಇತಿಹಾಸ, ಸಮಾಜಶಾಸ್ತ್ರ ಮತ್ತು ಪ್ರಾಚೀನ – ಮಧ್ಯಕಾಲೀನ – ಆಧುನಿಕ ಸಂಸ್ಕೃತಿ – ನಾಗರಿಕತೆಗಳನ್ನು ಆಳವಾಗಿ ಅಧ್ಯಯನ ಮಾಡಿದ್ದರು. ಮಹಾಭಾರತ, ಸುತ್ತಪಿಟಕ, ಪ್ಲೇಟೋ ಮತ್ತು ಮಹರ್ಷಿ ಅರವಿಂದರಿಂದ ಗೋಯಲ್‍ರು ಸ್ಫೂರ್ತಿ ಪ್ರೇರಣೆಗಳನ್ನು ಪಡೆದುಕೊಂಡರು. ಇಸ್ಲಾಂ, ಕ್ರ್ರೈಸ್ತಮತ ಮತ್ತು ಕಮ್ಯೂನಿಸ್ಟ್ ವಿಚಾರಧಾರೆಗಳ ಬಗೆಗೆ ವಿಸ್ತೃತ ಅಧ್ಯಯನ ಮಾಡಿದ ಗೋಯಲ್‍ರು ದಾಖಲೆ – ಸಾಕ್ಷ್ಯಾಧಾರಗಳಿಗೆ ತುಂಬ ಮಹತ್ತ್ವ ನೀಡಿದಂತಹವರು. ನಿಸ್ಸಂದಿಗ್ಧವಾದ, ಸಂದೇಹಕ್ಕೆ ಅವಕಾಶವಿಲ್ಲದಂತಹ ಅಧ್ಯಯನ – ಪರಿಶ್ರಮಗಳಿಂದ ಅವರು 30ಕ್ಕೂ ಹೆಚ್ಚು ಸಂಖ್ಯೆಯ ಗ್ರಂಥಗಳನ್ನು ಇಂಗ್ಲಿಷ್ – ಹಿಂದಿ ಭಾಷೆಗಳಲ್ಲಿ ಪ್ರಕಟಿಸಿದ್ದಾರೆ. ಹಿಂದೀ ಭಾಷೆಗೆ ಕೆಲವು ಮಹತ್ತ್ವದ ಕೃತಿಗಳನ್ನು ಅನುವಾದಿಸಿಯೂ ಇದ್ದಾರೆ.
“ಹಿಂದೂಯಿಸಂ ಟುಡೆ”, “ಇಂಡಿಯನ್ ಎಕ್ಸ್‌ಪ್ರೆಸ್” ಮತ್ತು “ಆರ್ಗನೈಸರ್” ಪತ್ರಿಕೆಗಳಲ್ಲಿ, ಗೋಯಲ್ ಅವರ ವಿಚಾರ ಸರಣಿ ಪ್ರಕಟವಾಗಿದೆ. ಈ ಲೇಖನಗಳು – ಅಂಕಣಗಳು ಮುಂದೆ ಗ್ರಂಥರೂಪದಲ್ಲಿಯೂ ಹೊರಬಂದಿವೆ. ಮೂಲತಃ ಕ್ರ್ರೈಸ್ತಮತದ ವಿರುದ್ಧವಾಗಿ ಯೂರೋಪಿನಲ್ಲಿ ಆಧುನಿಕ ಕಾಲದಲ್ಲಿ ಹುಟ್ಟಿದ “ಸೆಕ್ಯುಲರಿಸಂ”, ಭಾರತದಲ್ಲಿ ವಿಕೃತ ರೂಪವನ್ನು ತಳೆದಿರುವುದನ್ನು ಗೋಯಲ್ ಟೀಕಿಸಿದ್ದಾರೆ. ಭಾರತದಲ್ಲಿ ಸೆಕ್ಯುಲರಿಸಂ ಎನ್ನುವುದು ಬರಿಯ ಹಿಂದೂದ್ವೇಷದ ವಾದವಾಗಿದೆ, ಅದು ಇಸ್ಲಾಮಿನ ಬಗೆಗೆ ಮಾತೇ ಆಡುವುದಿಲ್ಲ, ಎನ್ನುತ್ತಾರೆ ಗೋಯಲ್.
ಇದನ್ನೂ ಓದಿ | ನನ್ನ ದೇಶ ನನ್ನ ದನಿ | ರಾಣಿಯ ಸಿಂಹಾಸನದ ಕಾಲಿಗೆ ತಮ್ಮನ್ನೇ ತಾವು ಕಟ್ಟಿಕೊಂಡವರು
1982ರಲ್ಲಿ ರಾಮಸ್ವರೂಪರೊಂದಿಗೆ, ದೆಹಲಿಯಲ್ಲಿ “ವಾಯ್ಸ್ ಆಫ್ ಇಂಡಿಯಾ” ಸಂಸ್ಥೆಯನ್ನು ಗೋಯಲ್ ಸ್ಥಾಪಿಸಿದರು. ನಿಜ ಇತಿಹಾಸವನ್ನು ದಾಖಲಿಸುವ, ದಾಖಲಿಸಿರುವ ಈ ಸಂಸ್ಥೆಯು ಲಾಭ ಮಾಡುವ ಉದ್ದೇಶವಿಟ್ಟುಕೊಂಡಿಲ್ಲ. ಕೆ.ಎಸ್. ಲಾಲ್, ಕೊನ್ರಾಡ್ ಎಲ್ಸ್ಟ್, ಹರ್ಷ ನಾರಾಯಣ್, ಸುಹಾಸ್ ಮಜುಮದಾರ್, ರಾಜೇಂದ್ರ ಸಿಂಗ್, ಡೇವಿಡ್ ಫ್ರಾಲಿ (ವಾಮದೇವ ಶಾಸ್ತ್ರೀ), ಸಂತ ಆರ್.ಎಸ್. ನಿರಾಲಾ, ಶ್ರೀಕಾಂತ ತಲಗೇರಿ, ನವರತ್ನ ಎಸ್. ರಾಜಾರಾಮ್, ಎ.ಕೆ. ಚಟರ್ಜಿ, ಮುಂತಾದ ವಿದ್ವಾಂಸರ ಮಹತ್ತ್ವದ ಗ್ರಂಥಗಳನ್ನು ಈ ಸಂಸ್ಥೆಯು ಪ್ರಕಟಿಸಿದೆ. ಸೀತಾರಾಮ ಗೋಯಲ್ ಅವರು ಸತ್ಯಸಂಗತಿಗಳ ಬಗೆಗೆ ರಾಜಿ ಮಾಡಿಕೊಳ್ಳುವವರಲ್ಲ. ಕೃತಕತೆಯ ನಯನಾಜೂಕುಗಳೂ ಅವರಿಗೆ ಹಿಡಿಸುವುದಿಲ್ಲ. ಹಿಂದೂ ಬೌದ್ಧಿಕ ವಲಯಗಳಲ್ಲಿ, ತುಂಬ ಅಪರೂಪ ಎನ್ನುವಂತಹ ಬೌದ್ಧಿಕ ನಿಷ್ಠುರತೆ ಸೀತಾರಾಮ ಗೋಯಲ್‍ರದ್ದು, ಎಂದಿದ್ದಾರೆ ಡೇವಿಡ್ ಫ್ರಾಲಿ. “ಸ್ವಾತಂತ್ರ್ಯೋತ್ತರ ಭಾರತದ ಬಹುಮುಖ್ಯ ಚಿಂತಕರಲ್ಲೊಬ್ಬರು ಗೋಯಲ್”, “ಆಧುನಿಕ ಭಾರತದ ಮಹಾನ್ ಬೌದ್ಧಿಕ ನವಕ್ಷತ್ರಿಯ ಈ ಸೀತಾರಾಮ ಗೋಯಲ್”, ಎನ್ನುತ್ತಾರೆ ಫ್ರಾಲಿ. ಸೀತಾರಾಮ ಗೋಯಲ್ 2003ರಲ್ಲಿ ನಿಧನರಾದರು. ಅವರು ಬರೆದಿಟ್ಟುಹೋಗಿರುವ ವಿದ್ವತ್ಪೂರ್ಣವಾದ ಸಾಹಿತ್ಯವನ್ನು – ವೈಚಾರಿಕ ಬರಹಗಳನ್ನು ಮೂಲದಲ್ಲಿಯೇ ಓದುವುದು ಅತ್ಯುತ್ತಮವೆನಿಸಿದರೂ, ಕನ್ನಡದ ಓದುಗರಿಗೆ ಅಂತಹ ಬೆಳಕಿಂಡಿಯನ್ನು ಪರಿಚಯಿಸುವ ಪ್ರಾಮಾಣಿಕ ಪ್ರಯತ್ನವೂ ನಡೆಯುತ್ತಿದೆ.
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಆಗುವುದು ಮಹತ್ತ್ವದ್ದು ನಿಜ, ಆದರೆ, ಅದನ್ನು – ಆ ಪರಂಪರೆಯನ್ನು ಉಳಿಸಿಕೊಂಡು, ಕಾಪಾಡಿಕೊಂಡು ಹೋಗುವಷ್ಟು ಭಾರತೀಯ ಸಮಾಜ ಸಶಕ್ತವಾಗಬೇಕು, ಜಾಗೃತಿಯನ್ನು ಮೂಡಿಸಿಕೊಳ್ಳಬೇಕು, ಎಂದಿದ್ದರು ಗೋಯಲ್. ಕಳೆದ ವರ್ಷ ಜಿಹಾದಿಗಳು, ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ನೂತನ ರಾಮಮಂದಿರದಲ್ಲಿಯೇ “ಅಲ್ಲಾ ಹೋ ಅಕ್ಬರ್” ಎಂದು ಕೂಗುತ್ತೇವೆ ಎಂದು ಸಾರ್ವಜನಿಕವಾಗಿ ಘೋಷಿಸಿದರು. ಇಂತಹುದೇ ಪ್ರತಿಧ್ವನಿ ನಮ್ಮ ಶ್ರೀರಂಗಪಟ್ಟಣದಲ್ಲಿಯೂ ಆಯಿತು. ಈ ಪರಿಪ್ರೇಕ್ಷ್ಯದಲ್ಲಿ ಗೋಯಲ್ ಅವರ ಚಿಂತನೆಗಳು, ವಿಚಾರಗಳು ಇನ್ನಷ್ಟು ಮಹತ್ತ್ವ ಗಳಿಸುತ್ತವೆ.
ಇದನ್ನೂ ಓದಿ | ನನ್ನ ದೇಶ ನನ್ನ ದನಿ ಅಂಕಣ | ವಿಷಸರ್ಪಗಳನ್ನು ಓಲೈಸುವ ರಾಜಕಾರಣ ಇನ್ನು ಬೇಕಿಲ್ಲ
ಕಲಾವಿದರು, ವೇದ – ಶಾಸ್ತ್ರ ಪಾರಂಗತರು, ಋಷಿಗಳು, ಆಡಳಿತಗಾರರು, ನರ್ತಕರು, ವೀರರು, ನೀವು ಯಾವ ಕ್ಷೇತ್ರವನ್ನೇ ನೋಡಿ, ನಮ್ಮಲ್ಲಿ ಮಹಾನ್ ಸಾಧಕರು ಸಿಕ್ಕುತ್ತಾರೆ. ಅಷ್ಟೇ ಅಲ್ಲ; ಜ್ಞಾನಿಗಳು, ವಿರಾಗಿಗಳು, ಯೋಗಿಗಳು, ಅವಧೂತರು, ನಮ್ಮಲ್ಲಿರುವಷ್ಟು ಬೇರೆಲ್ಲೂ ಇರಲಾರರೋ ಏನೋ! ವೇದಗಳು, ಉಪನಿಷತ್ತುಗಳು, ಮಹಾಕಾವ್ಯಗಳು, ನಮ್ಮ ಪರಂಪರೆ, ಅಧ್ಯಾತ್ಮ – ಯೋಗ ಮುಂತಾದವುಗಳ ಬಗೆಗೆ ಗೌರವದಿಂದ – ಪ್ರೀತಿಯಿಂದ ಮೆಚ್ಚಿ ಮಾತನಾಡುವವರು ತುಂಬ ಜನ. ನಮ್ಮ ಹಿಂದೂ ಸಂಸ್ಕೃತಿಯ ಬಗೆಗೆ ಅನೇಕ ವಿದೇಶೀಯರೂ ನಮ್ಮಂತೆಯೇ ಅಭಿಮಾನವಿಟ್ಟುಕೊಂಡಿದ್ದಾರೆ. ಆದರೆ ನಾವು ಅನೇಕ ಬಾರಿ ಗಮನಿಸದ, ಗಂಭೀರವಾಗಿ ಪರಿಗಣಿಸದ ವಿಷಯವೊಂದಿದೆ. ಹಿಂದೂ ಸಮಾಜವು ಉಳಿಯದೇ ಹೋದರೆ, ಈ ನಮ್ಮ ಕಲೆ, ಶಿಲ್ಪಗಳು, ನೃತ್ಯ, ಚಿತ್ರಕಲೆ, ಭಾಷೆಗಳು, ಸಾಹಿತ್ಯ ಉಳಿಯುತ್ತವೆಯೇ ಎಂಬುದನ್ನು ಪ್ರಶ್ನಿಸಿಕೊಳ್ಳಲು ನಾವು ಮರೆತುಬಿಡುತ್ತೇವೆ. ಸಾರಾಂಶ ಇಷ್ಟೇ. ಹಿಂದೂ ಸಮಾಜವನ್ನು ಉಳಿಸಿಕೊಳ್ಳಲೇಬೇಕಾದ ಅನಿವಾರ್ಯತೆಯಿದೆ. ಹಿಂದೆಂದಿಗಿಂತಲೂ ಇಂದು ಈ ಅನಿವಾರ್ಯತೆ ತುಂಬ ಹೆಚ್ಚಾಗಿದೆ.
(ಲೇಖಕರು ಹಿರಿಯ ಅಂಕಣಕಾರರು, “ವಾಯ್ಸ್ ಆಫ್ ಇಂಡಿಯಾ” ಸಾಹಿತ್ಯ ಸರಣಿಯ ಗೌರವ ಸಂಪಾದಕರು)