Site icon Vistara News

ನನ್ನ ದೇಶ ನನ್ನ ದನಿ ಅಂಕಣ: ಲೋಹಿಯಾರನ್ನೇ ಮರೆತ ಸಮಾಜವಾದಿಗಳು

Dr. ram manohar lohia

ಈ ಅಂಕಣವನ್ನು ಇಲ್ಲಿ ಕೇಳಿ:

https://vistaranews.com/wp-content/uploads/2023/09/WhatsApp-Audio-2023-09-01-at-20.42.19.mp3

ಡಾ।। ರಾಮಮನೋಹರ ಲೋಹಿಯಾ ಅವರು ಭಾರತದ ವಿಶಿಷ್ಟ ರಾಜಕಾರಣಿ. ಸಮಾಜವಾದಿ. ಅಷ್ಟೇ ಅಲ್ಲ. ಅವರು ಭಾರತವನ್ನು ಅರ್ಥಮಾಡಿಕೊಂಡಿದ್ದ ಮತ್ತು ಕಮ್ಯೂನಿಸ್ಟ್ ವಿಚಾರಧಾರೆಯನ್ನು ವಿರೋಧಿಸುತ್ತಿದ್ದ ಅಪರೂಪದ ರಾಜಕಾರಣಿ. ಲೋಹಿಯಾ ಅವರು ನೆಹರೂ-ರಾಜಕಾರಣದ ಉಗ್ರ ಟೀಕಾಕಾರರಾಗಿದ್ದರು. ಅರ್ಧ ಶತಮಾನದ ಹಿಂದೆ, ನಮ್ಮ ಕನ್ನಡ ಸಾಹಿತಿಗಳಿಗೆ, ವಿಶೇಷವಾಗಿ ನವ್ಯರಿಗೆ, ಸಮಾಜವಾದವು ಅಚ್ಚುಮೆಚ್ಚಿನ ಸಿದ್ಧಾಂತವಾಗಿತ್ತು. ಬಹುಪಾಲು ಅವರೆಲ್ಲರೂ ನೆಹರೂ ಅವರನ್ನು ಮತ್ತು ಕಾಂಗ್ರೆಸ್ ಪಕ್ಷವನ್ನು ಖಂಡತುಂಡವಾಗಿ ವಿರೋಧಿಸುತ್ತಿದ್ದರು. ಲೋಹಿಯಾ ಅವರು ಒಳ್ಳೆಯ ಲೇಖಕರೂ, ಚಿಂತಕರೂ, ಆಗಿದ್ದರು. ಅವರ ಕಣ್ಣೆದುರಿಗೇ ಸಮಾಜವಾದಿಗಳೆಂದು pose ಕೊಡುತ್ತಿದ್ದ ಬಹಳ ಜನ ರಾಜಕಾರಣಿಗಳು ಲಾಭವಿರುವ ಪಕ್ಷಗಳನ್ನು ಸೇರಿಕೊಂಡರು. ಅನಂತರವಂತೂ ಸಮಾಜವಾದದ ಶತ್ರುಗಳೂ ಕಣ್ಣೀರು ಹಾಕುವಂತೆ, ಸಮಾಜವಾದಿ ರಾಜಕಾರಣ ಗಬ್ಬೆದ್ದುಹೋಯಿತು.

ಲೋಹಿಯಾ ಅವರ “Interval during Politics” ಒಂದು ಒಳ್ಳೆಯ ಕೃತಿ. ಅದನ್ನು ಕೆ.ವಿ.ಸುಬ್ಬಣ್ಣನವರು “ರಾಜಕೀಯದ ಮಧ್ಯೆ ಬಿಡುವು” ಎಂಬ ಹೆಸರಿನಲ್ಲಿ ಕನ್ನಡಕ್ಕೆ ತಂದರು.

1960ರ ದಶಕದಲ್ಲಿ “ಸಮಾಜವಾದಿ ಯುವಜನ ಸಭಾ” ಹುಟ್ಟಿಕೊಂಡಿತು. ನಾವು ಆರಾಧಿಸುತ್ತಿದ್ದ ನವ್ಯ ಲೇಖಕರು, ವಿದ್ಯಾರ್ಥಿಗಳು, ಕಲಾವಿದರು, ನ್ಯಾಯವಾದಿಗಳು ಈ ಸಂಘಟನೆಯಲ್ಲಿ ಪಾಲ್ಗೊಂಡರು. ಜಾತೀಯತೆ, ಮೌಢ್ಯ, ಅಸಮಾನತೆಗಳನ್ನು ತೊಡೆದುಹಾಕಲು ಎಲ್ಲರೂ ಕಟಿಬದ್ಧರಾದರು. Of Course, ಈ ಎಲ್ಲ ಸಂಗತಿಗಳು ಹಿಂದೂ ಸಮಾಜಕ್ಕೆ ಮಾತ್ರ ಅನ್ವಯವಾಗುತ್ತಿದ್ದವು. ಅಂದಿಗೂ, ಇಂದಿಗೂ, ಎಂದೆಂದಿಗೂ ಇಸ್ಲಾಮೀ ಮತ್ತು ಕ್ರೈಸ್ತ ಸಮುದಾಯಗಳಲ್ಲಿ ಸಮಾನತೆ, ಭ್ರಾತೃಪ್ರೇಮ, ವೈಜ್ಞಾನಿಕ ದೃಷ್ಟಿಕೋನಗಳು ತಾಂಡವವಾಡುತ್ತಿದ್ದುದರಿಂದ (ಈಗಲೂ ತಾಂಡವವಾಡುವುದರಿಂದ) ಅವುಗಳ ವಿಷಯಗಳನ್ನು ಯಾರೂ ಎತ್ತುತ್ತಿರಲೇ ಇಲ್ಲ, ಎತ್ತುವುದೂ ಇಲ್ಲ.

ಆ ಕಾಲದಲ್ಲಿ ನಮಗೆ ತುಂಬಾ ಆಕರ್ಷಣೆ ಎನ್ನಿಸಿದ್ದ ಈ ನಮ್ಮ ನವ್ಯ ಸಾಹಿತಿಗಳು ಅದೆಷ್ಟು ವೈಭವೀಕರಿಸಿ ಹೊಗಳುತ್ತಿದ್ದರೆಂದರೆ ಈ “ರಾಜಕೀಯದ ಮಧ್ಯೆ ಬಿಡುವು” ಪುಸ್ತಕ ಓದದಿದ್ದರೆ, ನಮಗೆ ಬದುಕಿದ್ದಾಗ ಮತ್ತು ಸತ್ತಮೇಲೆ ಸ್ವರ್ಗ ಸಿಗುವುದು ಸಾಧ್ಯವಿಲ್ಲ ಎನ್ನಿಸಿತು. ಸಾಮಾನ್ಯವಾಗಿ ನಾವು ಬಾಲ್ಯದ ಗೆಳೆಯರು, ಒಬ್ಬೊಬ್ಬರು ಒಂದೊಂದು ಪುಸ್ತಕ ಕೊಂಡುಕೊಂಡು, ಅನಂತರ ಎಲ್ಲರೂ ಎಲ್ಲ ಪುಸ್ತಕಗಳನ್ನೂ ಹಂಚಿಕೊಂಡು ಓದುತ್ತಿದ್ದೆವು. ಈ ಪದ್ಧತಿಯು, ನಮ್ಮ ಸಶರೀರ ಸ್ವರ್ಗಪ್ರಾಪ್ತಿಗೆ ಇನ್ನು ಸಹಾಯ ಮಾಡಲಾರದು ಎನ್ನಿಸಿ ಬೆದರಿ, ರಾಜಕೀಯದ ಮಧ್ಯೆ ಬಿಡುವು, ಅವಸ್ಥೆ, ಭಾರತೀಪುರ, ಸಂಸ್ಕಾರ, ಸಂಕ್ರಾಂತಿ ಮುಂತಾದವುಗಳನ್ನು ನಾವು ಪ್ರತಿಯೊಬ್ಬರೂ ಕೊಂಡುಕೊಳ್ಳಬೇಕಾಯಿತು. ಹಾಗೆ ಮಾಡಲು ನಮ್ಮ ಜೇಬು ಅವಕಾಶ ಕೊಡುತ್ತಿರಲಿಲ್ಲ. ಆದರೇನು, ಇದು ನಮ್ಮ ಜೀವನ್ಮರಣಗಳ ಪ್ರಶ್ನೆಯಾಗಿತ್ತು.

ಒಮ್ಮೆಯೂ ನಾವು ಶೆಹನಾಯ್ ವಾದನವನ್ನು ಕೇಳಿರದಿದ್ದರೂ, ನಮಗೆ ಬಿಸ್ಮಿಲ್ಲಾ ಖಾನರ ಹೆಸರು ಸುಪರಿಚಿತವಾಗಿತ್ತು. ಅಂತೆಯೇ, ಸಮಾಜವಾದದ ಪ್ರಾಥಮಿಕ ಸಂಗತಿಗಳು ನಮಗೆ ಗೊತ್ತಿರದಿದ್ದರೂ ಡಾ।। ರಾಮಮನೋಹರ ಲೋಹಿಯಾ ಅವರ ಹೆಸರು ನಮ್ಮಲ್ಲಿ ಜನಜನಿತವಾಗಿತ್ತು. ನಮ್ಮ ಸಾಹಿತಿವರೇಣ್ಯರು 1951ರ (ಶಿವಮೊಗ್ಗ ಜಿಲ್ಲೆಯ, ಸಾಗರ ತಾಲ್ಲೂಕಿನ) ಕಾಗೋಡು ಸತ್ಯಾಗ್ರಹದಲ್ಲಿ ಲೋಹಿಯಾ ಅವರು ಭಾಗವಹಿಸಿ ಬಂಧನಕ್ಕೆ ಒಳಗಾದುದನ್ನು ಮಾತ್ರ ಹೇಳುತ್ತಿದ್ದರು. ಆದರೆ, ಅಪ್ಪಿತಪ್ಪಿಯೂ ಲೋಹಿಯಾ ಅವರ “GUILTY MEN OF PARTITION” ಕೃತಿಯ ಹೆಸರು ಎತ್ತುತ್ತಿರಲಿಲ್ಲ.

ಕರ್ನಾಟಕದಲ್ಲಿ ಸಮಾಜವಾದಿ ರಾಜಕಾರಣಿ ಶಾಂತವೇರಿ ಗೋಪಾಲ ಗೌಡರನ್ನು ಬಿಟ್ಟರೆ, ಬೇರಾವ ರಾಜಕಾರಣಿಗಳ ಹೆಸರುಗಳನ್ನೂ ಇವರು ಎತ್ತುತ್ತಿರಲಿಲ್ಲ. ಎಲ್ಲ ಲೇಖಕರೂ ಸಮಾಜವಾದಿಗಳೇ, ಎಲ್ಲ ರಾಜಕಾರಣಿಗಳೂ ಲೇಖಕರೇ ಆಗಿ, ರಾಜಕಾರಣಿಗಳು ಯಾರು – ಸಾಹಿತಿಗಳು ಯಾರು ಎಂಬುದೇ ನಮ್ಮಂತಹವರಿಗೆ ತಿಳಿಯುತ್ತಿರಲಿಲ್ಲ.

ನಾಲ್ಕು ದಶಕಗಳ ಹಿಂದೆ, ಸಮಾಜವಾದಿ ಒಲವಿನ ಫ್ರಾನ್ಸ್ವಾ ಮಿತ್ತರಾ (François Mitterrand) ಅವರು, ಫ್ರಾನ್ಸ್ ದೇಶದ ಅಧ್ಯಕ್ಷರಾದಾಗ ನಮ್ಮ ಕನ್ನಡ ಪತ್ರಕರ್ತರು – ಸಾಹಿತಿಗಳು ಅದೆಷ್ಟು ಬಣ್ಣಿಸಿದರೆಂದರೆ, ನನಗೆ ಮಿತ್ತರಾ ಅವರು ಭಾರತದ ಅಧ್ಯಕ್ಷರೇನಾದರೂ ಆಗಿಬಿಟ್ಟರೇ ಎಂಬ ಅನುಮಾನ ಹುಟ್ಟಿಬಿಟ್ಟಿತು!


ಸುಭಾಷ್ ಚಂದ್ರ ಬೋಸರು ಜಪಾನ್ ದೇಶದೊಂದಿಗೆ ಸೇರಿ ಬ್ರಿಟಿಷರ ಮೇಲೆ ಯುದ್ಧ ಸಾರಿದ್ದರು. ರಾಷ್ಟ್ರೀಯ ಸೈನ್ಯವನ್ನೇ ಸಂಘಟಿಸಿದ್ದರು. ಸುಭಾಷರ ಮೇಲೆ ನೆಹರೂ ಅವರಿಗೆ ಅದೆಷ್ಟು ಹೊಟ್ಟೆಕಿಚ್ಚು, ಉರಿ ಎಂದರೆ ೧೯೪೨ ರಲ್ಲಿಯೇ ಜಪಾನ್ ಮತ್ತು ಬೋಸ್ ವಿರುದ್ಧ ಲಕ್ಷಾಂತರ ಗೆರಿಲ್ಲಾಗಳನ್ನು ಒಟ್ಟು ಮಾಡುತ್ತೇನೆ, ಎಂದು ಹ್ಞೂಂಕರಿಸಿದ್ದರು. ಅವರ ಆ ಎಲ್ಲ ಮಾತುಗಳೂ, ಹೇಳಿಕೆಗಳೂ, ಘರ್ಜನೆಗಳೂ ಬ್ರಿಟಿಷರ ಸೇವೆಯನ್ನೇ ತಮ್ಮ ಜೀವನದ ಪರಮೋದ್ದೇಶ ಎಂಬಂತೆ ನೆಹರೂ ಪರಿಗಣಿಸಿದ್ದರು (GUILTY MEN OF PARTITION, ಪ್ರಕಟಣೆ 1960, ಪುಟ 13) ಎಂಬುದನ್ನು ಸಾರುತ್ತವೆ, ಎಂದಿದ್ದಾರೆ ಲೋಹಿಯಾ.

ಭಾರತದ ಸಹಸ್ರಾರು ವರ್ಷಗಳ ಇತಿಹಾಸದಲ್ಲಿ ದೇಶವಿಭಜನೆಯದ್ದು ಕರಾಳ ಅಧ್ಯಾಯ. ಕನಿಷ್ಠ ಇಪ್ಪತ್ತು ಲಕ್ಷ ಜನರು ನರಹತ್ಯಾಕಾಂಡಕ್ಕೆ ಬಲಿಯಾದರು. ಅಂದಿನ ಒಟ್ಟಾರೆ ಜನಸಂಖ್ಯೆಗೆ ಹೋಲಿಸಿದಾಗ ಎರಡು ಕೋಟಿ ಜನರು ಮನೆಮಠ ಆಸ್ತಿಪಾಸ್ತಿ ಮಾನಮರ್ಯಾದೆ ಕಳೆದುಕೊಂಡು ನಿರ್ಗತಿಕರಾದುದು, ನಿರಾಶ್ರಿತರಾದುದು ಮರೆಯಲಾಗದ ದುರಂತ. ಇನ್ನು ಹೆಣ್ಣುಮಕ್ಕಳ ಮೇಲಾದ ಅತ್ಯಾಚಾರ, ಬರ್ಬರ ಹಿಂಸೆಗಳು ಅನೂಹ್ಯ, ಅಸಹನೀಯ, ಅಕ್ಷಮ್ಯ.

ದೇಶವಿಭಜನೆಗೆ ಕಾಂಗ್ರೆಸ್ಸಿಗರು ಬೇರೆ ಯಾರುಯಾರನ್ನೋ ದೂರುತ್ತಾರೆ. ಡಾ।। ಲೋಹಿಯಾ ತಮ್ಮ ಈ GUILTY MEN OF PARTITION ಗ್ರಂಥದಲ್ಲಿ ದಾಖಲಿಸಿರುವ ಸಂಗತಿಗಳು ಓದಿದವರ ರಕ್ತವನ್ನೇ ಹೆಪ್ಪುಗಟ್ಟಿಸುತ್ತವೆ. ವಿಭಜನೆಯ ನಿರ್ಧಾರದ ಮುಖ್ಯ ಪಾತ್ರಧಾರಿಗಳಾದ ನೆಹರೂ ಮತ್ತು ಇನ್ನಿತರ ಕಾಂಗ್ರೆಸ್ಸಿಗರನ್ನು ಲೋಹಿಯಾ ಖಂಡತುಂಡವಾಗಿ ಟೀಕಿಸಿದ್ದಾರೆ. ದೇಶವನ್ನು ತುಂಡು ತುಂಡು ಮಾಡಲು ಕಾತರರಾಗಿದ್ದ ಮತ್ತು ಅಧಿಕಾರ ಗ್ರಹಣಕ್ಕೆ ಹಾತೊರೆಯುತ್ತಿದ್ದ ಕಾಂಗ್ರೆಸ್ ವರ್ಕಿಂಗ್ ಕಮಿಟಿಯ ಆ ಐತಿಹಾಸಿಕ (ಜೂನ್ 1947) ಸಭೆಗೆ ಸಮಾಜವಾದಿಗಳಾದ ಲೋಹಿಯಾ ಮತ್ತು ಜಯಪ್ರಕಾಶ ನಾರಾಯಣರು ವಿಶೇಷ ಆಹ್ವಾನಿತರಾಗಿ ಹೋಗಿದ್ದರು. ಈರ್ವರೂ ವಿಭಜನೆಯನ್ನು ವಿರೋಧಿಸಿದರು (ಪುಟ 9). ನೆಹರೂ, ಪಟೇಲ್ ನೇತೃತ್ವವು ಆ ಸಭೆಗೆ ಮೊದಲೇ ಎಲ್ಲವನ್ನೂ ತೀರ್ಮಾನಿಸಿಬಿಟ್ಟಿತ್ತು. ಆ ಸಭೆಯು ಕೇವಲ ಔಪಚಾರಿಕವಾಗಿಹೋಗಿತ್ತು. ಅಧಿಕಾರಕ್ಕಾಗಿ ನೆಹರೂ (ಪುಟ 12) ಬ್ರಿಟಿಷರೊಂದಿಗೆ ಕೈಜೋಡಿಸಿಬಿಟ್ಟಿದ್ದರು, ಎಂದು ವಿಷಾದಿಸಿದ್ದಾರೆ, ಡಾ।। ಲೋಹಿಯಾ.


1969ರ ಹೊತ್ತಿಗೇ ಇಂದಿರಾ ಅವರು ಹಳೆಯ ಕಾಂಗ್ರೆಸ್ಸಿಗರನ್ನು ಗುಡಿಸಿ ತಿಪ್ಪೆಗೆ ಎಸೆದಿದ್ದರು. ಕಮ್ಯೂನಿಸ್ಟರಿಗೆ ಮಣೆ ಹಾಕಿದರು. ಆಯಕಟ್ಟಿನ ಸ್ಥಾನಗಳನ್ನೂ ನೀಡಿದರು. ಅನಂತರದ ಕಾಲಾವಧಿಯಲ್ಲಿ, ಕಮ್ಯೂನಿಸ್ಟರು ಬಹಳ ಮಹತ್ತ್ವದ NCERT, ICHR, ICSSR ಇತ್ಯಾದಿ ಎಲ್ಲವನ್ನೂ ಆಪೋಶನ ತೆಗೆದುಕೊಂಡುಬಿಟ್ಟರು.

ನಮ್ಮ ಸಾಹಿತ್ಯ ಲೋಕದ ತಾರೆಯರು ತುಂಬ ತುಂಬ “ಬುದ್ಧಿವಂತರು”. ಕರ್ನಾಟಕದ “ಸಂದರ್ಭ”ದಲ್ಲಿ ಲೋಹಿಯಾ ಮತ್ತು ಸಮಾಜವಾದಗಳು ಚಿನ್ನದ ಮೊಟ್ಟೆ ಇಡುವ ಕೋಳಿಗಳಲ್ಲ, ಎಂಬುದನ್ನು ಅರಿತರು. ಲೋಹಿಯಾ ಅವರನ್ನು ನೇಪಥ್ಯಕ್ಕೆ ಸರಿಸಲಾಯಿತು. ಬದಲಾದ “ಸನ್ನಿವೇಶ”ದಲ್ಲಿ, ಕಾಂಗ್ರೆಸ್ಸಿನ ಮತ್ತು ಕಾಂಗ್ರೆಸ್ ಮೂಲದ ರಾಜಕಾರಣಿಗಳನ್ನು ಓಲೈಸತೊಡಗಿದರು.

ತಾವು ಸಮಾಜವಾದಿಗಳೆಂದು ದಿನವೂ ಐದು ಬಾರಿ ಒದರುತ್ತಿದ್ದ ನಮ್ಮ ಈ ಸಾಹಿತಿಗಳು ಅನಂತರ ನೇರವಾಗಿ ಕಾರ್ಲ್ ಮಾರ್ಕ್ಸ್ ಆರಾಧನೆಗೆ ತೊಡಗಿದರು. ತಾವು ಕಮ್ಯೂನಿಸ್ಟರೆಂದೇ ಸ್ಪಷ್ಟವಾಗಿಯೂ ಘೋಷಿಸತೊಡಗಿದರು. ಈ paradigm shift ನಮ್ಮಂತಹ ಅಭಿಮಾನಿಗಳನ್ನು ಕಂಗೆಡಿಸಿತು.

ಇದನ್ನೂ ಓದಿ: ನನ್ನ ದೇಶ ನನ್ನ ದನಿ ಅಂಕಣ: ದುರದೃಷ್ಟವಶಾತ್ ಬಾಲವೇ ನಾಯಿಯನ್ನು ಅಲ್ಲಾಡಿಸುವಂತಾಯಿತು!

ಪ್ರಸ್ತುತ ಕಾಲಘಟ್ಟದಲ್ಲಿ ಹಿಂತಿರುಗಿ ಭಾರತದ ರಾಜಕಾರಣದ ಪರಿಪ್ರೇಕ್ಷ್ಯದಲ್ಲಿ ಕನ್ನಡ ಸಾಹಿತ್ಯಲೋಕವನ್ನು ನೋಡಿದರೆ ವಿಷಾದಭಾವವೇ ಮೂಡುತ್ತದೆ. ಹುಟ್ಟಾ ಕಾಂಗ್ರೆಸ್ಸಿಗ ರಾಮಕೃಷ್ಣ ಹೆಗ್ಗಡೆ ಅವರನ್ನು ಸ್ಮರಿಸುವವರು, ಕಮ್ಯೂನಿಸಂ ಒಲವಿನ ಕಾಂಗ್ರೆಸ್ಸಿಗ ದೇವರಾಜ ಅರಸು ಅವರನ್ನು ನೆನಪು ಮಾಡಿಕೊಳ್ಳುವವರು ಮತ್ತು ಪ್ರತಿವರ್ಷ ಇಂತಹವರ ವಾರ್ಷಿಕ ಕಾರ್ಯಕ್ರಮಗಳನ್ನೂ ಆಚರಿಸುವವರು, ಅಪ್ಪಿತಪ್ಪಿಯೂ ಡಾ।। ರಾಮಮನೋಹರ ಲೋಹಿಯಾ ಅವರನ್ನು ಸ್ಮರಿಸುವುದಿಲ್ಲ. ಇನ್ನು ಅವರ ಸಾಹಿತ್ಯವನ್ನು, ಅವರ ವಿಚಾರಗಳನ್ನು ಕುರಿತು ವಿಚಾರ ಸಂಕಿರಣಗಳನ್ನು ಮಾಡುತ್ತಿದ್ದವರು ಈಗ ಅಂತರ್ಧಾನರಾಗಿಬಿಟ್ಟಿದ್ದಾರೆ!

ನಮ್ಮ ಬೀಚಿ ಅವರಂತೆ, ಜಾರ್ಜ್ ಬರ್ನಾರ್ಡ್ ಶಾ ಅವರೂ ಸಹ ಹಾಸ್ಯದ ಮಾತಿನೊಳಗೆ ವಿಶಿಷ್ಟ ಚಿಂತನೆಯ ಹೂರಣ ಹುದುಗಿಸಿರುತ್ತಿದ್ದರು. ಅವರು ಹೇಳಿದ “Entire Europe would have been socialist, but for socialists” ಎಂಬ ಮಾರ್ಮಿಕವಾದ ಮಾತು, ವಿಶೇಷತಃ ನಮ್ಮ ಕರ್ನಾಟಕದ ಸಾಹಿತಿಗಳಿಗೆ ಮತ್ತು ಸಮಾಜವಾದಿ ರಾಜಕಾರಣಿಗಳಿಗೆ ಹೆಚ್ಚು ಅನ್ವಯವಾಗುತ್ತದೆ.

ಇದನ್ನೂ ಓದಿ: ನನ್ನ ದೇಶ ನನ್ನ ದನಿ ಅಂಕಣ: ಸಾಬ್, ಇದರ ಮೇಲೆಯೇ ದೇಶವಿಭಜನೆಯ ಡೀಲ್ ಆದದ್ದು!

Exit mobile version