Site icon Vistara News

ನನ್ನ ದೇಶ ನನ್ನ ದನಿ ಅಂಕಣ: ಪಂಜಾಬ್ ನಾಶವಾಗುವುದು ಒಳ್ಳೆಯ ಲಕ್ಷಣವಲ್ಲ

Amritpal

#image_title

ಈ ಅಂಕಣವನ್ನು ಇಲ್ಲಿ ಕೇಳಿ:

https://vistaranews.com/wp-content/uploads/2023/03/ANM-ON-Punjab-Sikhs-vistara-news.mp3

ಭಾರತದ ಶತ್ರುಗಳೇ ಹಾಗೆ. ಬಹಳ ಶಕ್ತಿಶಾಲಿಗಳು. ಶತಶತಮಾನಗಳಿಂದ ನಡೆಯುತ್ತಿರುವ ಈ ಪರೋಕ್ಷ ದಾಳಿಯನ್ನು, ಅವರ ವ್ಯೂಹವನ್ನು, ಅವರ ಕುತಂತ್ರಗಳನ್ನು ನಾವು ಅರ್ಥ ಮಾಡಿಕೊಳ್ಳಲೇಬೇಕಾದ ಮತ್ತು ಸಮಸ್ಯಾ ಪರಿಹಾರಕ್ಕೆ ಸನ್ನದ್ಧರಾಗಬೇಕಾದ ಸ್ಥಿತಿ ಬಂದೊದಗಿದೆ. ಬ್ರಿಟಿಷರು, ಬ್ರಿಟಿಷರ “ಪ್ರೀತಿಪಾತ್ರರು”, ಜಿಹಾದಿಗಳು, ಕ್ರುಸೇಡಿಗರು, ಮೆಕಾಲೆ-ವಾದಿಗಳು, ಕಮ್ಯೂನಿಸ್ಟರು… ಹೀಗೆ ಶತ್ರು ಸೈನ್ಯವು ದೊಡ್ಡದಿದೆ, ಅನೇಕ ಆಯಾಮಗಳಲ್ಲಿ ಭಾರತವನ್ನು ಧ್ವಂಸ ಮಾಡಲು ಈಗಲೂ ಕಾಯುತ್ತಿದೆ.

ಸಿಖ್ ಮತೀಯರನ್ನು, ಸಿಖ್ ಸಮುದಾಯವನ್ನು ನಾವು ಅರ್ಥ ಮಾಡಿಕೊಳ್ಳಲು ಸೋತಿದ್ದೇವೆ. ಸಭೆಯೊಂದರಲ್ಲಿ ಕೋಡಂಗಿ ಭಾಷಣಕಾರನೊಬ್ಬ “ಒಬ್ಬ ಸರ್ದಾರ್ಜಿ ಇದ್ದ…..” ಎಂದು ಶುರು ಹಚ್ಚಿಕೊಂಡನೋ ನಾವೆಲ್ಲಾ ನಾಚಿಕೆಯಿಲ್ಲದೇ ನಗಲಾರಂಭಿಸುತ್ತೇವೆ. ಜೋಕು ಹೇಳುವ ಮೊದಲೇ ನಮಗೆ ಅದರಲ್ಲಿ ಹಾಸ್ಯ ಕಾಣುತ್ತದೆ. ಈ ಸಿಖ್ಖರು ಹುಟ್ಟಾ ವೀರಯೋಧರು, ರಜಪೂತರಂತೆ ಕ್ಷಾತ್ರಕ್ಕೇ ಹೆಸರಾದವರು. ಶತಶತಮಾನಗಳ ಕಾಲ ಭಾರತದ ಮೇಲಿನ ಜಿಹಾದಿಗಳ – ಬ್ರಿಟಿಷರ ದಾಳಿಗೆ ಎದೆಯೊಡ್ಡಿದವರು, ಶತ್ರುಗಳಿಗೆ ಸಿಂಹ-ಸ್ವಪ್ನರೆನಿಸಿದವರು. ಸಿಖ್ಖರ 9ನೆಯ ಗುರು ತೇಗ್ ಬಹಾದುರ್ ಅವರನ್ನು ಔರಂಗಜೇಬನು ಅಮಾನುಷವಾಗಿ ಕೊಲ್ಲಿಸಿದ. ಅವರ ಮಗ ಗುರು ಗೋವಿಂದ ಸಿಂಹರು ತಮ್ಮ 9ನೆಯ ವಯಸ್ಸಿನಲ್ಲಿಯೇ ಸಿಖ್ಖರ 10ನೆಯ ಗುರು ಆದರು. ಅವರ ಕಣ್ಣೆದುರಿಗೇ ಅವರ ನಾಲ್ಕೂ ಮಕ್ಕಳ ಬಲಿದಾನವಾಯಿತು. ಸ್ವತಃ ಅವರನ್ನು ಸಹ ಅವರ 41ನೆಯ ವಯಸ್ಸಿನಲ್ಲಿ ಜಿಹಾದಿಗಳು ಮೋಸದಿಂದ ಕೊಂದರು. ಸಾಮಾನ್ಯಯುಗದ 17ನೆಯ ಶತಮಾನದಲ್ಲಿ ಗುರು ಗೋವಿಂದ ಸಿಂಹರು ಇಡೀ ಸಿಖ್ ಸಮುದಾಯವನ್ನೇ ವೀರರ ಪಡೆಯನ್ನಾಗಿ ಬೆಳೆಸಿದರು.

ಗುರು ನಾನಕರು, ಗುರು ಗೋವಿಂದ ಸಿಂಹರು

ಇತ್ತೀಚಿನ ಶತಮಾನಗಳಲ್ಲಿ ಜಿಹಾದಿಗಳ ವಿರುದ್ಧ, ಬ್ರಿಟಿಷ್ ವಸಾಹತುಶಾಹಿಯ ವಿರುದ್ಧ ಅದ್ಭುತವಾದ ಹೋರಾಟವನ್ನು ಮಾಡಿದವರೇ ಈ ಸಿಖ್ಖರು. 19ನೆಯ ಶತಮಾನದಲ್ಲಿ ಪಂಜಾಬಿನ ಸಿಂಹ ಎಂದೇ ಹೆಸರಾದ ಮಹಾರಾಜಾ ರಣಜಿತ್ ಸಿಂಹರು ಸಿಖ್ ಸಾಮ್ರಾಜ್ಯವನ್ನೇ ನಿರ್ಮಿಸಿದರು. ಅವರಿರುವವರೆಗೆ ಬ್ರಿಟಿಷರು ಭಾರತವನ್ನು ಆಪೋಶನ ತೆಗೆದುಕೊಳ್ಳಲು ಬಿಟ್ಟಿರಲಿಲ್ಲ. ತಮ್ಮ ಸಿಖ್ ಸೈನಿಕರಿಗೆ ಜಮೀನು ನೀಡಿ, ಶಾಂತಿಕಾಲದಲ್ಲಿ ಕೃಷಿಕರಾಗಲು ಅನುವು ಮಾಡಿಕೊಟ್ಟವರೇ ಈ ರಣಜಿತ್ ಸಿಂಹರು. ನಾವೋ ಇವೆಲ್ಲಾ ಮರೆತು ಸಿಖ್ಖರು ದಡ್ಡರು, ಪೆದ್ದರು, ಮೂರ್ಖರು ಎಂದುಕೊಂಡುಬಿಟ್ಟಿದ್ದೇವೆ. ಹಾಗೆ ಪರಿಭಾವಿಸುವ ನಾವು ಮೂರ್ಖರು, ಅಷ್ಟೇ. ಈ ಸಿಖ್ಖರು ಎಂತಹ ಶ್ರಮಜೀವಿಗಳೆಂದರೆ, ಭಿಕ್ಷೆ ಬೇಡುವ ಒಬ್ಬ ಸಿಖ್ಖನೂ ಎಲ್ಲಿಯೂ ಸಿಕ್ಕುವುದಿಲ್ಲ, ಎಂಬ ಖ್ಯಾತಿಯೇ ಇದೆ.

ಹೀಗಿದ್ದೂ ಸಿಖ್ಖರ ಕುರಿತಾಗಿ ನಕಾರಾತ್ಮಕವಾದ ಮತ್ತು ತೀರಾ ಲಘುವಾದ ಅಭಿಪ್ರಾಯಗಳು ಹುಟ್ಟುವಂತೆ ಮಾಡಲಾಗಿದೆ. ಸಿಖ್ಖರ ಕುರಿತ ಜೋಕುಗಳ ಪುಸ್ತಕಗಳೇ ಬಂದಿವೆ. ಹೀಗೆಯೇ, ಸಿಂಧಿಗಳ ಬಗೆಗೂ ನಕಾರಾತ್ಮಕವಾದ ಮತ್ತು ಅಶ್ಲೀಲವಾದ ಜೋಕುಗಳನ್ನು ಹುಟ್ಟಿಹಾಕಲಾಗಿದೆ, ಕೆಟ್ಟ ವಾತಾವರಣವನ್ನೇ ಸೃಷ್ಟಿಸಲಾಗಿದೆ. ಶತಶತಮಾನಗಳ ಕಾಲ ಜಿಹಾದಿಗಳ ಹಿಂಸೆಗೆ, ಅತ್ಯಾಚಾರಕ್ಕೆ ತುತ್ತಾಗಿ, ಸಾಲದೆಂಬಂತೆ ಮತ್ತೆ ದೇಶವಿಭಜನೆಯ ಕಾಲದಲ್ಲಿ ಇನ್ನಷ್ಟು ನರಹತ್ಯಾಕಾಂಡ, ಅತ್ಯಾಚಾರಗಳಿಗೆ ಬಲಿಯಾದ ಸಿಂಧಿಗಳ ಬಗೆಗೂ ಇದೇ ಬಗೆಯ ಅನಗತ್ಯ ದ್ವೇಷ, ವಿರೋಧಗಳನ್ನು ಗಮನಿಸಿ, ನಾನೇ ಸ್ವತಃ ಅಚ್ಚರಿಪಟ್ಟಿದ್ದೇನೆ. ಭಾರತದ್ವೇಷಿಗಳ ಕಬಂಧ ಬಾಹುಗಳು ಎಷ್ಟು ಉದ್ದ ಎಂದರೆ, ನಮ್ಮ ಕೆಲವು ಕನ್ನಡ ಹೋರಾಟಗಾರರು ಕೆಲವು ದಶಕಗಳ ಹಿಂದೆ, ಸಿಂಧಿಗಳ ಬಗೆಗೆ ಕೆಂಡ ಕಾರುತ್ತಿದ್ದರು ಮತ್ತು ಕನ್ನಡವನ್ನು ನಾಶ ಮಾಡಿ ಪರ್ಷಿಯನ್ ಭಾಷೆಯನ್ನು ಆಡಳಿತ ಭಾಷೆಯನ್ನಾಗಿ ಮಾಡಿದ ಟಿಪ್ಪುವನ್ನು ಹೊಗಳಿಹಾಡುತ್ತಿದ್ದರು.

ಇವೆಲ್ಲಾ ಸರಳವಾಗಿ ಕಾಣುವುದಿಲ್ಲ. ಇವೆಲ್ಲಾ ಭಾರತ-ದ್ವೇಷಿ ಮಾಫಿಯಾದ ಅಗೋಚರ ಕೈಗಳು.

ನೂರಾರು ವರ್ಷಗಳಿಂದ ಸಿಖ್ ಸಮುದಾಯವನ್ನು ಪಕ್ಕಕ್ಕೆ ಸರಿಸುವ, ಹಿಂದುಗಳಿಂದ ಬೇರೆ ಮಾಡುವ, ಪ್ರತ್ಯೇಕತಾಭಾವವನ್ನು ಬೆಳೆಸುವ ಷಡ್ಯಂತ್ರವು ನಡೆಯುತ್ತಲೇ ಇದೆ. ಮಹಾರಾಜಾ ರಣಜಿತ್ ಸಿಂಹರ ಮರಣಾನಂತರ ಕುತಂತ್ರಿ ಬ್ರಿಟಿಷರು, 19ನೆಯ ಶತಮಾನದಲ್ಲಿಯೇ “ಸಿಖ್ ರೆಜಿಮೆಂಟ್” ಸ್ಥಾಪಿಸಿ, ಎರಡು ಮಹಾಯುದ್ಧಗಳೂ ಸೇರಿದಂತೆ, ಅನೇಕ ಯುದ್ಧಗಳಲ್ಲಿ ಬಳಸಿಕೊಂಡು ಬಿಸಾಡಿದರು. ಸಿಖ್ಖರಿಗೆ ಕೊಡಬೇಕಾಗಿದ್ದ ಗೌರವವನ್ನು, ಮಹತ್ತ್ವವನ್ನು, ಅಧಿಕಾರವನ್ನು ನೀಡಲೇ ಇಲ್ಲ. ಗುಟ್ಟಾಗಿ ತಮ್ಮ ಪ್ರೀತಿಪಾತ್ರ ದಳ್ಳಾಳಿಗಳನ್ನೇ ಬೆಳೆಸಿದರು. ದೇಶವಿಭಜನೆಯಾದಾಗ ಜಿಹಾದಿಗಳಿಗೆ ಪಾಕಿಸ್ತಾನ ಸಿಕ್ಕಿತು. ನೂರಾರು ವರ್ಷಗಳ ಕಾಲ ಬ್ರಿಟಿಷರಿಗೆ ಸೇವೆ ಸಲ್ಲಿಸಿದ ಸಿಖ್ಖರು ಬರೀ ನರಹತ್ಯಾಕಾಂಡ, ಅತ್ಯಾಚಾರಗಳನ್ನು ಎದುರಿಸಬೇಕಾಯಿತು.

ಭಿಂದ್ರಾನ್‌ ವಾಲೆ

ಇದನ್ನೂ ಓದಿ: ನನ್ನ ದೇಶ ನನ್ನ ದನಿ ಅಂಕಣ: ಅಂತಃಸ್ಫೋಟದ ಅಂಚಿನಲ್ಲಿ ಪಾಪಿಸ್ತಾನ

ಅಕಾಲಿದಳವನ್ನು ನಿಗ್ರಹಿಸಲು ಇಂದಿರಾ ಗಾಂಧಿಯವರು ಭಿಂದ್ರನ್ ವಾಲೆ ಎಂಬ ಪ್ರತ್ಯೇಕತಾವಾದಿಯನ್ನು ಬೆಳೆಸಿದರು. ಅದು ಇನ್ನೊಂದು “ಫ್ರಾಂಕೆನ್‌ಸ್ಟೈನ್ ಕತೆ”ಯಾಯಿತು. ಆತ ಅಮೃತಸರದ ಸ್ವರ್ಣಮಂದಿರವನ್ನೇ ಖಲಿಸ್ತಾನಿಗಳ ಅಡ್ಡಾ ಮಾಡಿಕೊಂಡುಬಿಟ್ಟ. ಅನಂತರದ ಜೂನ್ 1984ರಲ್ಲಿ ನಡೆದ “ಆಪರೇಷನ್ ಬ್ಲೂಸ್ಟಾರ್” ನಮಗೆಲ್ಲಾ ಗೊತ್ತೇ ಇದೆ. ಅನಂತರ ಇಂದಿರಾ ಗಾಂಧಿಯವರ ಹತ್ಯೆಯೇ ನಡೆದುಹೋಯಿತು. ಅನಂತರ ಕಾಂಗ್ರೆಸ್ಸಿಗರು ನಡೆಸಿದ ಅಕ್ಷಮ್ಯ “ಸಿಖ್ ಹತ್ಯಾಕಾಂಡ” ಅತ್ಯಂತ ಅಮಾನುಷವಾಗಿತ್ತು. ಇದು ಸಹ 1948ರಲ್ಲಿ ಗಾಂಧೀ ಹತ್ಯೆಯ ಅನಂತರ, ನಿರ್ದಿಷ್ಟ ಸಮುದಾಯವೊಂದನ್ನು ಗುರಿ ಮಾಡಿಕೊಂಡು ಕಾಂಗ್ರೆಸ್ಸಿಗರೇ ನಡೆಸಿದ ಯೋಜಿತ ನಿರ್ಮಮ ಹತ್ಯಾಕಾಂಡದಂತೆಯೇ ಇತ್ತು. ಇಂತಹ ಹತ್ಯಾಕಾಂಡಗಳೇ ಹಾಗೆ. ಬಲಿಪಶುಗಳಾದ (ಹೆಂಗಸರೂ ಮಕ್ಕಳೂ ಸೇರಿದಂತೆ) ಮುಗ್ಧಜೀವಗಳಿಗೆ ಯಾರು, ಯಾವ ಕಾರಣಕ್ಕೆ, ಕೊಲ್ಲಲು, ಸುಟ್ಟುಹಾಕಲು, ಅತ್ಯಾಚಾರ ಮಾಡಲು ಬಂದಿದ್ದಾರೆ, ಎಂಬುದು ಗೊತ್ತೇ ಇರುವುದಿಲ್ಲ.

ಮತ್ತೆ ಈಗ ಪಂಜಾಬ್ ದಳ್ಳುರಿಯಲ್ಲಿ ಸಿಲುಕಿಕೊಳ್ಳುತ್ತಿದೆ. ಪಾಕಿಸ್ತಾನ್ ಮೂಲದ ಜಿಹಾದಿಗಳು ತಮ್ಮ ಭಾರತ-ದ್ವೇಷದ ಇನ್ನೊಂದು ವರಸೆಯನ್ನು ಪ್ರಾರಂಭಿಸಿದ್ದಾರೆ. ಒಂದೆಡೆ ಅಗಾಧ ಪ್ರಮಾಣದಲ್ಲಿ ಮಾದಕ ದ್ರವ್ಯಗಳನ್ನು ಕಳ್ಳ ಸಾಗಾಣಿಕೆ ಮಾಡಿ ಪಂಜಾಬಿನ ಯುವಜನಾಂಗವನ್ನು ನಾಶ ಮಾಡುತ್ತಿದ್ದಾರೆ. ಇನ್ನೊಂದೆಡೆ ಪ್ರತ್ಯೇಕತಾವಾದಿ ಖಲಿಸ್ತಾನಿಗಳನ್ನು ಬೆಂಬಲಿಸಿ ಪ್ರತ್ಯಕ್ಷ – ಪರೋಕ್ಷ ಯುದ್ಧವನ್ನೇ ಮಾಡಿಸುತ್ತಿದ್ದಾರೆ. ಯಾರು ತಮ್ಮ ಗುರುಗಳನ್ನು ಅಮಾನುಷವಾಗಿ ಹತ್ಯೆ ಮಾಡಿದರೋ, ಅಂತಹ ಜಿಹಾದಿಗಳ ಬೆಂಬಲ ಪಡೆದು, ಮೂರ್ಖ ಖಲಿಸ್ತಾನಿಗಳು ಭಾರತದ ವಿರುದ್ಧ ಸಮರವನ್ನೇ ಸಾರಿದ್ದಾರೆ.

ಈ ನಡುವೆ, ಕ್ರೈಸ್ತ ಕ್ರುಸೇಡಿಗರು ಅಪಾರ ಸಂಖ್ಯೆಯಲ್ಲಿ ಸಿಖ್ಖರ ಮತಾಂತರ ಮಾಡುತ್ತಿದ್ದಾರೆ. ಶತ್ರುಗಳ ಬಹು-ಆಯಾಮದ ಇಂತಹ ಚಕ್ರವ್ಯೂಹದಲ್ಲಿ ಸಿಲುಕಿಕೊಂಡಿರುವ ಸಿಖ್ಖರಿಗೆ ಮಿತ್ರರು ಯಾರು, ಶತ್ರುಗಳು ಯಾರು ಎಂಬ ಸರಳ ಸಂಗತಿಗಳೂ ತಿಳಿಯುತ್ತಿಲ್ಲ.

ಇದನ್ನೂ ಓದಿ: ನನ್ನ ದೇಶ ನನ್ನ ದನಿ ಅಂಕಣ: ಸಾಂಚಿ ಎಂಬ ಅಚ್ಚರಿ

ಅಣ್ಣಾ ಹಜಾರೆ ಎಂಬ “ಮುಗ್ಧ” ಗಾಂಧೀವಾದಿಗೆ ಉಂಡೆನಾಮ ತಿಕ್ಕಿ, ಅನಂತರ ಅವರ ಬೆನ್ನಿಗೆ ಚೂರಿ ಹಾಕಿದ ಕುತಂತ್ರಿಯೊಬ್ಬ ದೆಹಲಿಯನ್ನೇ ಆಪೋಶನ ತೆಗೆದುಕೊಂಡುಬಿಟ್ಟ. ಅವನ ಅಗ್ಗದ ವಾಗ್ದಾನಗಳಿಗೆ ಮರುಳಾದ ದೆಹಲಿಯ ಮತದಾರರು ಮತ್ತೆ ಮತ್ತೆ ಅವನನ್ನೇ ಬೆಂಬಲಿಸುತ್ತಿರುವುದು ವಿಷಾದದ ಸಂಗತಿಯಾಗಿದೆ. “ಭ್ರಷ್ಟಾಚಾರ ವಿರೋಧೀ ಆಂದೋಲನ” ಎಂಬ ಮೆಟ್ಟಿಲು ಬಳಸಿಕೊಂಡ ಈತ ಸ್ವತಃ ಬಹಳ ದೊಡ್ಡ ಭ್ರಷ್ಟಾಚಾರಿ. ಅದಕ್ಕೂ ಹೆಚ್ಚಿನದೆಂದರೆ ಅಧಿಕಾರಕ್ಕಾಗಿ ಈತ ಯಾವುದೇ ಮಟ್ಟಕ್ಕೂ ಇಳಿಯಬಲ್ಲ. ಯಾರೊಂದಿಗೆ ಮೈತ್ರಿ ಮಾಡಿಕೊಳ್ಳಲೂ ಹೇಸುವುದಿಲ್ಲ. “ಭಾರತ್ ತೇರೇ ತುಕಡೇ ಹೋಂಗೆ” ಗ್ಯಾಂಗ್ ಜೊತೆಗೂ ಸೇರಿಕೊಳ್ಳುತ್ತಾನೆ. ಪಂಜಾಬಿನ ಮುಗ್ಧ ಮತದಾರರು ಅಕಾಲಿ ದಳ, ಕಾಂಗ್ರೆಸ್ ಪಕ್ಷಗಳಿಗೆ ಬೇಸತ್ತು ಇವನನ್ನು ಬೆಂಬಲಿಸಿಬಿಟ್ಟರು. ಈತ ತನ್ನ ಚೇಲಾ ಒಬ್ಬನನ್ನು (ಕುಡುಕ, ಜೋಕರ್) ಮುಖ್ಯಮಂತ್ರಿಯನ್ನಾಗಿ ಮಾಡಿ ಪರೋಕ್ಷವಾಗಿ ತಾನೇ ಆಡಳಿತ ನಡೆಸುತ್ತಿದ್ದಾನೆ. ಪ್ರತ್ಯೇಕತಾವಾದಿಗಳ ಕಾಲದಲ್ಲಿ ತುಂಬ ತೊಂದರೆಗೊಳಗಾದ ಪಂಜಾಬ್, ಈಗ ಈ ಕುತಂತ್ರಿಯ ಕೈಗೆ ಸಿಲುಕಿ ಮತ್ತೆ ನರಳುತ್ತಿದೆ. ಪತ್ರಿಕೆಗಳಿರಲಿ‌, ಟ್ವಿಟ್ಟರ್, WhatsApp, Facebookಗಳಲ್ಲಿ ಇವನ ಪಕ್ಷವನ್ನು, ಇವನ ಕಾರ್ಯನೀತಿಗಳನ್ನು ಟೀಕಿಸುವ ಪತ್ರಕರ್ತರನ್ನು ಬೇಟೆಯಾಡಲಾಗುತ್ತಿದೆ. ಪತ್ರಕರ್ತರು ಈಗ ವರದಿ ಮಾಡಲು ಸಹ ಭಯ ಪಡುತ್ತಿದ್ದಾರೆ. ಕೆಲವು ಭ್ರಷ್ಟಾತಿಭ್ರಷ್ಟ ಪೊಲೀಸ್ ಅಧಿಕಾರಿಗಳಿಗೆ ಬಡ್ತಿ ನೀಡಲಾಗುತ್ತಿದೆ ಮತ್ತು “ಮಹತ್ತ್ವದ” ಸ್ಥಾನಗಳನ್ನು ನೀಡಲಾಗುತ್ತಿದೆ. ವಿಚಿತ್ರವೆಂದರೆ, ಈ ಕುತಂತ್ರಿಯ ಬೆಂಬಲ ಪಡೆದ ಕ್ರಿಮಿನಲ್ ಗೂಂಡಾಗಳು, ಇತ್ತೀಚೆಗೆ ದಕ್ಷ ಪೊಲೀಸ್ ಅಧಿಕಾರಿಗಳ ಮೇಲೆಯೇ ದಾಳಿ ಮಾಡಿದರು. ಅಮೃತಸರದ ಜೈಲಿನ ಮೇಲೆ NIA ದಾಳಿ ಮಾಡಿದಾಗ, ಅಲ್ಲಿ ಮಾದಕ ದ್ರವ್ಯಗಳ ದಾಸ್ತಾನೇ ಸಿಕ್ಕಿತು. 12 ವರ್ಷಗಳ ಹುಡುಗನೊಬ್ಬನ ಬಳಿ ಎಂಟು ಲಕ್ಷ ರೂ ನಗದು, ಮೂರು ಕೆಜಿ ಹೆರಾಯಿನ್ ಸಿಕ್ಕಾಗ, NIA ಅಧಿಕಾರಿಗಳೇ ದಂಗುಬಡಿದುಹೋದರು.

ಕಾಂಗ್ರೆಸ್ ಪಕ್ಷವು ನಾಶ ಮಾಡಿದ್ದು ಸಾಲದೆಂದು, ಈಗ ಈ ಕುತಂತ್ರಿ ಪಂಜಾಬನ್ನು ನಾಶ ಮಾಡುತ್ತಿದ್ದಾನೆ. ಕ್ಷಾತ್ರ-ಭಾರತದ ಹೆಬ್ಬಾಗಿಲು ಈ ಪಂಜಾಬ್. ಅಂತಹ ಪಂಜಾಬ್ ನಾಶವಾಗುತ್ತಿರುವುದನ್ನು ತುರ್ತಾಗಿ ತಪ್ಪಿಸಲೇಬೇಕಾಗಿದೆ.

ಇದನ್ನೂ ಓದಿ: ನನ್ನ ದೇಶ ನನ್ನ ದನಿ: ಒಂದೆಡೆ ಭೂಮಿಯ ಕೇಂದ್ರ ಮಹಾಕಾಲ, ಇನ್ನೊಂದೆಡೆ ಕಾಲಭೈರವನಿಗೆ ಮದ್ಯಾರ್ಪಣೆ: ಸೋಜಿಗದ ಉಜ್ಜಯಿನಿ 

Exit mobile version