ಅಂಕಣ
ನನ್ನ ದೇಶ ನನ್ನ ದನಿ ಅಂಕಣ: ಪಂಜಾಬ್ ನಾಶವಾಗುವುದು ಒಳ್ಳೆಯ ಲಕ್ಷಣವಲ್ಲ
ಪಾಕಿಸ್ತಾನದ ಜಿಹಾದಿಗಳು ಒಂದೆಡೆ ಮಾದಕ ದ್ರವ್ಯ ಕಳ್ಳ ಸಾಗಣೆ ಮೂಲಕ, ಇನ್ನೊಂದೆಡೆ ಪ್ರತ್ಯೇಕತಾವಾದಿ ಖಲಿಸ್ತಾನಿಗಳಿಗೆ ಬೆಂಬಲಿಸುವ ಮೂಲಕ ಭಾರತದ ವಿರುದ್ಧ ಪರೋಕ್ಷ ಯುದ್ಧವನ್ನೇ ಸಾರಿದ್ದಾರೆ. ಪಂಜಾಬ್ ಸರ್ಕಾರ ಕುತಂತ್ರಿಗಳ ಕೈಯಲ್ಲಿದೆ. ಪಂಜಾಬ್ ನಾಶವಾಗುತ್ತಿರುವುದನ್ನು ತುರ್ತಾಗಿ ತಪ್ಪಿಸಲೇಬೇಕಾಗಿದೆ.
ಈ ಅಂಕಣವನ್ನು ಇಲ್ಲಿ ಕೇಳಿ:
ಭಾರತದ ಶತ್ರುಗಳೇ ಹಾಗೆ. ಬಹಳ ಶಕ್ತಿಶಾಲಿಗಳು. ಶತಶತಮಾನಗಳಿಂದ ನಡೆಯುತ್ತಿರುವ ಈ ಪರೋಕ್ಷ ದಾಳಿಯನ್ನು, ಅವರ ವ್ಯೂಹವನ್ನು, ಅವರ ಕುತಂತ್ರಗಳನ್ನು ನಾವು ಅರ್ಥ ಮಾಡಿಕೊಳ್ಳಲೇಬೇಕಾದ ಮತ್ತು ಸಮಸ್ಯಾ ಪರಿಹಾರಕ್ಕೆ ಸನ್ನದ್ಧರಾಗಬೇಕಾದ ಸ್ಥಿತಿ ಬಂದೊದಗಿದೆ. ಬ್ರಿಟಿಷರು, ಬ್ರಿಟಿಷರ “ಪ್ರೀತಿಪಾತ್ರರು”, ಜಿಹಾದಿಗಳು, ಕ್ರುಸೇಡಿಗರು, ಮೆಕಾಲೆ-ವಾದಿಗಳು, ಕಮ್ಯೂನಿಸ್ಟರು… ಹೀಗೆ ಶತ್ರು ಸೈನ್ಯವು ದೊಡ್ಡದಿದೆ, ಅನೇಕ ಆಯಾಮಗಳಲ್ಲಿ ಭಾರತವನ್ನು ಧ್ವಂಸ ಮಾಡಲು ಈಗಲೂ ಕಾಯುತ್ತಿದೆ.
ಸಿಖ್ ಮತೀಯರನ್ನು, ಸಿಖ್ ಸಮುದಾಯವನ್ನು ನಾವು ಅರ್ಥ ಮಾಡಿಕೊಳ್ಳಲು ಸೋತಿದ್ದೇವೆ. ಸಭೆಯೊಂದರಲ್ಲಿ ಕೋಡಂಗಿ ಭಾಷಣಕಾರನೊಬ್ಬ “ಒಬ್ಬ ಸರ್ದಾರ್ಜಿ ಇದ್ದ…..” ಎಂದು ಶುರು ಹಚ್ಚಿಕೊಂಡನೋ ನಾವೆಲ್ಲಾ ನಾಚಿಕೆಯಿಲ್ಲದೇ ನಗಲಾರಂಭಿಸುತ್ತೇವೆ. ಜೋಕು ಹೇಳುವ ಮೊದಲೇ ನಮಗೆ ಅದರಲ್ಲಿ ಹಾಸ್ಯ ಕಾಣುತ್ತದೆ. ಈ ಸಿಖ್ಖರು ಹುಟ್ಟಾ ವೀರಯೋಧರು, ರಜಪೂತರಂತೆ ಕ್ಷಾತ್ರಕ್ಕೇ ಹೆಸರಾದವರು. ಶತಶತಮಾನಗಳ ಕಾಲ ಭಾರತದ ಮೇಲಿನ ಜಿಹಾದಿಗಳ – ಬ್ರಿಟಿಷರ ದಾಳಿಗೆ ಎದೆಯೊಡ್ಡಿದವರು, ಶತ್ರುಗಳಿಗೆ ಸಿಂಹ-ಸ್ವಪ್ನರೆನಿಸಿದವರು. ಸಿಖ್ಖರ 9ನೆಯ ಗುರು ತೇಗ್ ಬಹಾದುರ್ ಅವರನ್ನು ಔರಂಗಜೇಬನು ಅಮಾನುಷವಾಗಿ ಕೊಲ್ಲಿಸಿದ. ಅವರ ಮಗ ಗುರು ಗೋವಿಂದ ಸಿಂಹರು ತಮ್ಮ 9ನೆಯ ವಯಸ್ಸಿನಲ್ಲಿಯೇ ಸಿಖ್ಖರ 10ನೆಯ ಗುರು ಆದರು. ಅವರ ಕಣ್ಣೆದುರಿಗೇ ಅವರ ನಾಲ್ಕೂ ಮಕ್ಕಳ ಬಲಿದಾನವಾಯಿತು. ಸ್ವತಃ ಅವರನ್ನು ಸಹ ಅವರ 41ನೆಯ ವಯಸ್ಸಿನಲ್ಲಿ ಜಿಹಾದಿಗಳು ಮೋಸದಿಂದ ಕೊಂದರು. ಸಾಮಾನ್ಯಯುಗದ 17ನೆಯ ಶತಮಾನದಲ್ಲಿ ಗುರು ಗೋವಿಂದ ಸಿಂಹರು ಇಡೀ ಸಿಖ್ ಸಮುದಾಯವನ್ನೇ ವೀರರ ಪಡೆಯನ್ನಾಗಿ ಬೆಳೆಸಿದರು.
ಇತ್ತೀಚಿನ ಶತಮಾನಗಳಲ್ಲಿ ಜಿಹಾದಿಗಳ ವಿರುದ್ಧ, ಬ್ರಿಟಿಷ್ ವಸಾಹತುಶಾಹಿಯ ವಿರುದ್ಧ ಅದ್ಭುತವಾದ ಹೋರಾಟವನ್ನು ಮಾಡಿದವರೇ ಈ ಸಿಖ್ಖರು. 19ನೆಯ ಶತಮಾನದಲ್ಲಿ ಪಂಜಾಬಿನ ಸಿಂಹ ಎಂದೇ ಹೆಸರಾದ ಮಹಾರಾಜಾ ರಣಜಿತ್ ಸಿಂಹರು ಸಿಖ್ ಸಾಮ್ರಾಜ್ಯವನ್ನೇ ನಿರ್ಮಿಸಿದರು. ಅವರಿರುವವರೆಗೆ ಬ್ರಿಟಿಷರು ಭಾರತವನ್ನು ಆಪೋಶನ ತೆಗೆದುಕೊಳ್ಳಲು ಬಿಟ್ಟಿರಲಿಲ್ಲ. ತಮ್ಮ ಸಿಖ್ ಸೈನಿಕರಿಗೆ ಜಮೀನು ನೀಡಿ, ಶಾಂತಿಕಾಲದಲ್ಲಿ ಕೃಷಿಕರಾಗಲು ಅನುವು ಮಾಡಿಕೊಟ್ಟವರೇ ಈ ರಣಜಿತ್ ಸಿಂಹರು. ನಾವೋ ಇವೆಲ್ಲಾ ಮರೆತು ಸಿಖ್ಖರು ದಡ್ಡರು, ಪೆದ್ದರು, ಮೂರ್ಖರು ಎಂದುಕೊಂಡುಬಿಟ್ಟಿದ್ದೇವೆ. ಹಾಗೆ ಪರಿಭಾವಿಸುವ ನಾವು ಮೂರ್ಖರು, ಅಷ್ಟೇ. ಈ ಸಿಖ್ಖರು ಎಂತಹ ಶ್ರಮಜೀವಿಗಳೆಂದರೆ, ಭಿಕ್ಷೆ ಬೇಡುವ ಒಬ್ಬ ಸಿಖ್ಖನೂ ಎಲ್ಲಿಯೂ ಸಿಕ್ಕುವುದಿಲ್ಲ, ಎಂಬ ಖ್ಯಾತಿಯೇ ಇದೆ.
ಹೀಗಿದ್ದೂ ಸಿಖ್ಖರ ಕುರಿತಾಗಿ ನಕಾರಾತ್ಮಕವಾದ ಮತ್ತು ತೀರಾ ಲಘುವಾದ ಅಭಿಪ್ರಾಯಗಳು ಹುಟ್ಟುವಂತೆ ಮಾಡಲಾಗಿದೆ. ಸಿಖ್ಖರ ಕುರಿತ ಜೋಕುಗಳ ಪುಸ್ತಕಗಳೇ ಬಂದಿವೆ. ಹೀಗೆಯೇ, ಸಿಂಧಿಗಳ ಬಗೆಗೂ ನಕಾರಾತ್ಮಕವಾದ ಮತ್ತು ಅಶ್ಲೀಲವಾದ ಜೋಕುಗಳನ್ನು ಹುಟ್ಟಿಹಾಕಲಾಗಿದೆ, ಕೆಟ್ಟ ವಾತಾವರಣವನ್ನೇ ಸೃಷ್ಟಿಸಲಾಗಿದೆ. ಶತಶತಮಾನಗಳ ಕಾಲ ಜಿಹಾದಿಗಳ ಹಿಂಸೆಗೆ, ಅತ್ಯಾಚಾರಕ್ಕೆ ತುತ್ತಾಗಿ, ಸಾಲದೆಂಬಂತೆ ಮತ್ತೆ ದೇಶವಿಭಜನೆಯ ಕಾಲದಲ್ಲಿ ಇನ್ನಷ್ಟು ನರಹತ್ಯಾಕಾಂಡ, ಅತ್ಯಾಚಾರಗಳಿಗೆ ಬಲಿಯಾದ ಸಿಂಧಿಗಳ ಬಗೆಗೂ ಇದೇ ಬಗೆಯ ಅನಗತ್ಯ ದ್ವೇಷ, ವಿರೋಧಗಳನ್ನು ಗಮನಿಸಿ, ನಾನೇ ಸ್ವತಃ ಅಚ್ಚರಿಪಟ್ಟಿದ್ದೇನೆ. ಭಾರತದ್ವೇಷಿಗಳ ಕಬಂಧ ಬಾಹುಗಳು ಎಷ್ಟು ಉದ್ದ ಎಂದರೆ, ನಮ್ಮ ಕೆಲವು ಕನ್ನಡ ಹೋರಾಟಗಾರರು ಕೆಲವು ದಶಕಗಳ ಹಿಂದೆ, ಸಿಂಧಿಗಳ ಬಗೆಗೆ ಕೆಂಡ ಕಾರುತ್ತಿದ್ದರು ಮತ್ತು ಕನ್ನಡವನ್ನು ನಾಶ ಮಾಡಿ ಪರ್ಷಿಯನ್ ಭಾಷೆಯನ್ನು ಆಡಳಿತ ಭಾಷೆಯನ್ನಾಗಿ ಮಾಡಿದ ಟಿಪ್ಪುವನ್ನು ಹೊಗಳಿಹಾಡುತ್ತಿದ್ದರು.
ಇವೆಲ್ಲಾ ಸರಳವಾಗಿ ಕಾಣುವುದಿಲ್ಲ. ಇವೆಲ್ಲಾ ಭಾರತ-ದ್ವೇಷಿ ಮಾಫಿಯಾದ ಅಗೋಚರ ಕೈಗಳು.
ನೂರಾರು ವರ್ಷಗಳಿಂದ ಸಿಖ್ ಸಮುದಾಯವನ್ನು ಪಕ್ಕಕ್ಕೆ ಸರಿಸುವ, ಹಿಂದುಗಳಿಂದ ಬೇರೆ ಮಾಡುವ, ಪ್ರತ್ಯೇಕತಾಭಾವವನ್ನು ಬೆಳೆಸುವ ಷಡ್ಯಂತ್ರವು ನಡೆಯುತ್ತಲೇ ಇದೆ. ಮಹಾರಾಜಾ ರಣಜಿತ್ ಸಿಂಹರ ಮರಣಾನಂತರ ಕುತಂತ್ರಿ ಬ್ರಿಟಿಷರು, 19ನೆಯ ಶತಮಾನದಲ್ಲಿಯೇ “ಸಿಖ್ ರೆಜಿಮೆಂಟ್” ಸ್ಥಾಪಿಸಿ, ಎರಡು ಮಹಾಯುದ್ಧಗಳೂ ಸೇರಿದಂತೆ, ಅನೇಕ ಯುದ್ಧಗಳಲ್ಲಿ ಬಳಸಿಕೊಂಡು ಬಿಸಾಡಿದರು. ಸಿಖ್ಖರಿಗೆ ಕೊಡಬೇಕಾಗಿದ್ದ ಗೌರವವನ್ನು, ಮಹತ್ತ್ವವನ್ನು, ಅಧಿಕಾರವನ್ನು ನೀಡಲೇ ಇಲ್ಲ. ಗುಟ್ಟಾಗಿ ತಮ್ಮ ಪ್ರೀತಿಪಾತ್ರ ದಳ್ಳಾಳಿಗಳನ್ನೇ ಬೆಳೆಸಿದರು. ದೇಶವಿಭಜನೆಯಾದಾಗ ಜಿಹಾದಿಗಳಿಗೆ ಪಾಕಿಸ್ತಾನ ಸಿಕ್ಕಿತು. ನೂರಾರು ವರ್ಷಗಳ ಕಾಲ ಬ್ರಿಟಿಷರಿಗೆ ಸೇವೆ ಸಲ್ಲಿಸಿದ ಸಿಖ್ಖರು ಬರೀ ನರಹತ್ಯಾಕಾಂಡ, ಅತ್ಯಾಚಾರಗಳನ್ನು ಎದುರಿಸಬೇಕಾಯಿತು.
ಇದನ್ನೂ ಓದಿ: ನನ್ನ ದೇಶ ನನ್ನ ದನಿ ಅಂಕಣ: ಅಂತಃಸ್ಫೋಟದ ಅಂಚಿನಲ್ಲಿ ಪಾಪಿಸ್ತಾನ
ಅಕಾಲಿದಳವನ್ನು ನಿಗ್ರಹಿಸಲು ಇಂದಿರಾ ಗಾಂಧಿಯವರು ಭಿಂದ್ರನ್ ವಾಲೆ ಎಂಬ ಪ್ರತ್ಯೇಕತಾವಾದಿಯನ್ನು ಬೆಳೆಸಿದರು. ಅದು ಇನ್ನೊಂದು “ಫ್ರಾಂಕೆನ್‌ಸ್ಟೈನ್ ಕತೆ”ಯಾಯಿತು. ಆತ ಅಮೃತಸರದ ಸ್ವರ್ಣಮಂದಿರವನ್ನೇ ಖಲಿಸ್ತಾನಿಗಳ ಅಡ್ಡಾ ಮಾಡಿಕೊಂಡುಬಿಟ್ಟ. ಅನಂತರದ ಜೂನ್ 1984ರಲ್ಲಿ ನಡೆದ “ಆಪರೇಷನ್ ಬ್ಲೂಸ್ಟಾರ್” ನಮಗೆಲ್ಲಾ ಗೊತ್ತೇ ಇದೆ. ಅನಂತರ ಇಂದಿರಾ ಗಾಂಧಿಯವರ ಹತ್ಯೆಯೇ ನಡೆದುಹೋಯಿತು. ಅನಂತರ ಕಾಂಗ್ರೆಸ್ಸಿಗರು ನಡೆಸಿದ ಅಕ್ಷಮ್ಯ “ಸಿಖ್ ಹತ್ಯಾಕಾಂಡ” ಅತ್ಯಂತ ಅಮಾನುಷವಾಗಿತ್ತು. ಇದು ಸಹ 1948ರಲ್ಲಿ ಗಾಂಧೀ ಹತ್ಯೆಯ ಅನಂತರ, ನಿರ್ದಿಷ್ಟ ಸಮುದಾಯವೊಂದನ್ನು ಗುರಿ ಮಾಡಿಕೊಂಡು ಕಾಂಗ್ರೆಸ್ಸಿಗರೇ ನಡೆಸಿದ ಯೋಜಿತ ನಿರ್ಮಮ ಹತ್ಯಾಕಾಂಡದಂತೆಯೇ ಇತ್ತು. ಇಂತಹ ಹತ್ಯಾಕಾಂಡಗಳೇ ಹಾಗೆ. ಬಲಿಪಶುಗಳಾದ (ಹೆಂಗಸರೂ ಮಕ್ಕಳೂ ಸೇರಿದಂತೆ) ಮುಗ್ಧಜೀವಗಳಿಗೆ ಯಾರು, ಯಾವ ಕಾರಣಕ್ಕೆ, ಕೊಲ್ಲಲು, ಸುಟ್ಟುಹಾಕಲು, ಅತ್ಯಾಚಾರ ಮಾಡಲು ಬಂದಿದ್ದಾರೆ, ಎಂಬುದು ಗೊತ್ತೇ ಇರುವುದಿಲ್ಲ.
ಮತ್ತೆ ಈಗ ಪಂಜಾಬ್ ದಳ್ಳುರಿಯಲ್ಲಿ ಸಿಲುಕಿಕೊಳ್ಳುತ್ತಿದೆ. ಪಾಕಿಸ್ತಾನ್ ಮೂಲದ ಜಿಹಾದಿಗಳು ತಮ್ಮ ಭಾರತ-ದ್ವೇಷದ ಇನ್ನೊಂದು ವರಸೆಯನ್ನು ಪ್ರಾರಂಭಿಸಿದ್ದಾರೆ. ಒಂದೆಡೆ ಅಗಾಧ ಪ್ರಮಾಣದಲ್ಲಿ ಮಾದಕ ದ್ರವ್ಯಗಳನ್ನು ಕಳ್ಳ ಸಾಗಾಣಿಕೆ ಮಾಡಿ ಪಂಜಾಬಿನ ಯುವಜನಾಂಗವನ್ನು ನಾಶ ಮಾಡುತ್ತಿದ್ದಾರೆ. ಇನ್ನೊಂದೆಡೆ ಪ್ರತ್ಯೇಕತಾವಾದಿ ಖಲಿಸ್ತಾನಿಗಳನ್ನು ಬೆಂಬಲಿಸಿ ಪ್ರತ್ಯಕ್ಷ – ಪರೋಕ್ಷ ಯುದ್ಧವನ್ನೇ ಮಾಡಿಸುತ್ತಿದ್ದಾರೆ. ಯಾರು ತಮ್ಮ ಗುರುಗಳನ್ನು ಅಮಾನುಷವಾಗಿ ಹತ್ಯೆ ಮಾಡಿದರೋ, ಅಂತಹ ಜಿಹಾದಿಗಳ ಬೆಂಬಲ ಪಡೆದು, ಮೂರ್ಖ ಖಲಿಸ್ತಾನಿಗಳು ಭಾರತದ ವಿರುದ್ಧ ಸಮರವನ್ನೇ ಸಾರಿದ್ದಾರೆ.
ಈ ನಡುವೆ, ಕ್ರೈಸ್ತ ಕ್ರುಸೇಡಿಗರು ಅಪಾರ ಸಂಖ್ಯೆಯಲ್ಲಿ ಸಿಖ್ಖರ ಮತಾಂತರ ಮಾಡುತ್ತಿದ್ದಾರೆ. ಶತ್ರುಗಳ ಬಹು-ಆಯಾಮದ ಇಂತಹ ಚಕ್ರವ್ಯೂಹದಲ್ಲಿ ಸಿಲುಕಿಕೊಂಡಿರುವ ಸಿಖ್ಖರಿಗೆ ಮಿತ್ರರು ಯಾರು, ಶತ್ರುಗಳು ಯಾರು ಎಂಬ ಸರಳ ಸಂಗತಿಗಳೂ ತಿಳಿಯುತ್ತಿಲ್ಲ.
ಇದನ್ನೂ ಓದಿ: ನನ್ನ ದೇಶ ನನ್ನ ದನಿ ಅಂಕಣ: ಸಾಂಚಿ ಎಂಬ ಅಚ್ಚರಿ
ಅಣ್ಣಾ ಹಜಾರೆ ಎಂಬ “ಮುಗ್ಧ” ಗಾಂಧೀವಾದಿಗೆ ಉಂಡೆನಾಮ ತಿಕ್ಕಿ, ಅನಂತರ ಅವರ ಬೆನ್ನಿಗೆ ಚೂರಿ ಹಾಕಿದ ಕುತಂತ್ರಿಯೊಬ್ಬ ದೆಹಲಿಯನ್ನೇ ಆಪೋಶನ ತೆಗೆದುಕೊಂಡುಬಿಟ್ಟ. ಅವನ ಅಗ್ಗದ ವಾಗ್ದಾನಗಳಿಗೆ ಮರುಳಾದ ದೆಹಲಿಯ ಮತದಾರರು ಮತ್ತೆ ಮತ್ತೆ ಅವನನ್ನೇ ಬೆಂಬಲಿಸುತ್ತಿರುವುದು ವಿಷಾದದ ಸಂಗತಿಯಾಗಿದೆ. “ಭ್ರಷ್ಟಾಚಾರ ವಿರೋಧೀ ಆಂದೋಲನ” ಎಂಬ ಮೆಟ್ಟಿಲು ಬಳಸಿಕೊಂಡ ಈತ ಸ್ವತಃ ಬಹಳ ದೊಡ್ಡ ಭ್ರಷ್ಟಾಚಾರಿ. ಅದಕ್ಕೂ ಹೆಚ್ಚಿನದೆಂದರೆ ಅಧಿಕಾರಕ್ಕಾಗಿ ಈತ ಯಾವುದೇ ಮಟ್ಟಕ್ಕೂ ಇಳಿಯಬಲ್ಲ. ಯಾರೊಂದಿಗೆ ಮೈತ್ರಿ ಮಾಡಿಕೊಳ್ಳಲೂ ಹೇಸುವುದಿಲ್ಲ. “ಭಾರತ್ ತೇರೇ ತುಕಡೇ ಹೋಂಗೆ” ಗ್ಯಾಂಗ್ ಜೊತೆಗೂ ಸೇರಿಕೊಳ್ಳುತ್ತಾನೆ. ಪಂಜಾಬಿನ ಮುಗ್ಧ ಮತದಾರರು ಅಕಾಲಿ ದಳ, ಕಾಂಗ್ರೆಸ್ ಪಕ್ಷಗಳಿಗೆ ಬೇಸತ್ತು ಇವನನ್ನು ಬೆಂಬಲಿಸಿಬಿಟ್ಟರು. ಈತ ತನ್ನ ಚೇಲಾ ಒಬ್ಬನನ್ನು (ಕುಡುಕ, ಜೋಕರ್) ಮುಖ್ಯಮಂತ್ರಿಯನ್ನಾಗಿ ಮಾಡಿ ಪರೋಕ್ಷವಾಗಿ ತಾನೇ ಆಡಳಿತ ನಡೆಸುತ್ತಿದ್ದಾನೆ. ಪ್ರತ್ಯೇಕತಾವಾದಿಗಳ ಕಾಲದಲ್ಲಿ ತುಂಬ ತೊಂದರೆಗೊಳಗಾದ ಪಂಜಾಬ್, ಈಗ ಈ ಕುತಂತ್ರಿಯ ಕೈಗೆ ಸಿಲುಕಿ ಮತ್ತೆ ನರಳುತ್ತಿದೆ. ಪತ್ರಿಕೆಗಳಿರಲಿ, ಟ್ವಿಟ್ಟರ್, WhatsApp, Facebookಗಳಲ್ಲಿ ಇವನ ಪಕ್ಷವನ್ನು, ಇವನ ಕಾರ್ಯನೀತಿಗಳನ್ನು ಟೀಕಿಸುವ ಪತ್ರಕರ್ತರನ್ನು ಬೇಟೆಯಾಡಲಾಗುತ್ತಿದೆ. ಪತ್ರಕರ್ತರು ಈಗ ವರದಿ ಮಾಡಲು ಸಹ ಭಯ ಪಡುತ್ತಿದ್ದಾರೆ. ಕೆಲವು ಭ್ರಷ್ಟಾತಿಭ್ರಷ್ಟ ಪೊಲೀಸ್ ಅಧಿಕಾರಿಗಳಿಗೆ ಬಡ್ತಿ ನೀಡಲಾಗುತ್ತಿದೆ ಮತ್ತು “ಮಹತ್ತ್ವದ” ಸ್ಥಾನಗಳನ್ನು ನೀಡಲಾಗುತ್ತಿದೆ. ವಿಚಿತ್ರವೆಂದರೆ, ಈ ಕುತಂತ್ರಿಯ ಬೆಂಬಲ ಪಡೆದ ಕ್ರಿಮಿನಲ್ ಗೂಂಡಾಗಳು, ಇತ್ತೀಚೆಗೆ ದಕ್ಷ ಪೊಲೀಸ್ ಅಧಿಕಾರಿಗಳ ಮೇಲೆಯೇ ದಾಳಿ ಮಾಡಿದರು. ಅಮೃತಸರದ ಜೈಲಿನ ಮೇಲೆ NIA ದಾಳಿ ಮಾಡಿದಾಗ, ಅಲ್ಲಿ ಮಾದಕ ದ್ರವ್ಯಗಳ ದಾಸ್ತಾನೇ ಸಿಕ್ಕಿತು. 12 ವರ್ಷಗಳ ಹುಡುಗನೊಬ್ಬನ ಬಳಿ ಎಂಟು ಲಕ್ಷ ರೂ ನಗದು, ಮೂರು ಕೆಜಿ ಹೆರಾಯಿನ್ ಸಿಕ್ಕಾಗ, NIA ಅಧಿಕಾರಿಗಳೇ ದಂಗುಬಡಿದುಹೋದರು.
ಕಾಂಗ್ರೆಸ್ ಪಕ್ಷವು ನಾಶ ಮಾಡಿದ್ದು ಸಾಲದೆಂದು, ಈಗ ಈ ಕುತಂತ್ರಿ ಪಂಜಾಬನ್ನು ನಾಶ ಮಾಡುತ್ತಿದ್ದಾನೆ. ಕ್ಷಾತ್ರ-ಭಾರತದ ಹೆಬ್ಬಾಗಿಲು ಈ ಪಂಜಾಬ್. ಅಂತಹ ಪಂಜಾಬ್ ನಾಶವಾಗುತ್ತಿರುವುದನ್ನು ತುರ್ತಾಗಿ ತಪ್ಪಿಸಲೇಬೇಕಾಗಿದೆ.
ಇದನ್ನೂ ಓದಿ: ನನ್ನ ದೇಶ ನನ್ನ ದನಿ: ಒಂದೆಡೆ ಭೂಮಿಯ ಕೇಂದ್ರ ಮಹಾಕಾಲ, ಇನ್ನೊಂದೆಡೆ ಕಾಲಭೈರವನಿಗೆ ಮದ್ಯಾರ್ಪಣೆ: ಸೋಜಿಗದ ಉಜ್ಜಯಿನಿ
ಅಂಕಣ
ರಾಜಮಾರ್ಗ ಅಂಕಣ: ಆತ್ಮಾಹುತಿ ದಾಳಿಗೆ ಎದೆಕೊಟ್ಟು ಆಕೆ ಬಂಡೆಯಂತೆ ನಿಂತಿದ್ದರು!
ವಿಜಯಚೌಕದ ಕಡೆಯಿಂದ ಒಂದು ಬಿಳಿ ಬಣ್ಣದ ಅಂಬಾಸೆಡರ್ ಕಾರು ಅವರಿದ್ದ ಗೇಟಿನ ಕಡೆಗೆ ಬರತೊಡಗಿತು. ಅದರ ಮೇಲೆ ಕೆಂಪು ದೀಪ ಇತ್ತು. ಎದುರು ಭಾಗದಲ್ಲಿ ಪಾರ್ಲಿಮೆಂಟ್ ಮತ್ತು ಗೃಹ ಮಂತ್ರಾಲಯದ ಸ್ಟಿಕರಗಳು ಇದ್ದವು. ಯಾರಿಗೂ ಸಂಶಯ ಬರಲು ಸಾಧ್ಯವೇ ಇರಲಿಲ್ಲ. ಆದರೆ ಗೇಟಿನ ಬಳಿಗೆ ಬಂದಾಗ ಕಾರು ನಿಧಾನವಾಗದೆ ವೇಗವನ್ನು ಹೆಚ್ಚಿಸಿಕೊಂಡಿತು. ಕಮಲೇಶ್ ಹದ್ದಿನ ಕಣ್ಣಿಗೆ ಕಾರಲ್ಲಿ ಯಾರೋ ಸಂಶಯಾಸ್ಪದ ವ್ಯಕ್ತಿಗಳು ಇರುವುದು ಗಮನಕ್ಕೆ ಬಂದಿದೆ. ಅವರು ತಕ್ಷಣ ಅಲರ್ಟ್ ಆಗಿದ್ದಾರೆ.
ಅಂದು ಭಾರತದ ಘನತೆಯನ್ನು ಕಾಪಾಡಿದ್ದು ಒಬ್ಬ ಸಾಮಾನ್ಯ ಮಹಿಳೆ!
ರಾಷ್ಟ್ರಪ್ರೇಮಿಗಳ ನೆತ್ತರನ್ನು ಬಿಸಿಮಾಡುವ ಓರ್ವ ಸಾಮಾನ್ಯ ಮಹಿಳೆಯ ಸಾಹಸದ ಕಥೆಯನ್ನು ಇಂದು ನಿಮ್ಮೆದುರು ತೆರೆದು ಇಡುತ್ತಿದ್ದೇನೆ. ಅದು ಖಂಡಿತವಾಗಿ ಭಾರತದ ಘನತೆಯನ್ನು ಕಾಪಾಡಿದ ಘಟನೆ ಆಗಿತ್ತು. ಆ ದಿನ ಆಕೆ ಏನಾದರೂ ಮೈ ಮರೆತಿದ್ದರೆ….?
ಭಾರತದ ಪ್ರತಿಷ್ಠೆ ಮಣ್ಣುಪಾಲು ಆಗುತ್ತಿತ್ತು ಖಂಡಿತ.
ಅಂದು 2001 ಡಿಸೆಂಬರ್ 13!
ಆ ಕರಾಳ ದಿನವನ್ನು ಯಾವ ಭಾರತೀಯನೂ ಮರೆಯಲು ಸಾಧ್ಯವಿಲ್ಲ. ಜಗತ್ತಿನ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದ ಬುಡವನ್ನು ಭಯೋತ್ಪಾದಕರು ಅಲ್ಲಾಡಿಸಲು ಪ್ರಯತ್ನಪಟ್ಟ ದಿನವದು! ಅಂದು ದೆಹಲಿಯ ಭವ್ಯವಾದ ಪಾರ್ಲಿಮೆಂಟ್ ಭವನದ ಮೇಲೆ ಬಾಂಬ್ ದಾಳಿಯನ್ನು ನಡೆಸಲು ಯತ್ನಿಸಿದ ಭಯೋತ್ಪಾದಕರ ಸಂಚು ವಿಫಲವಾಗಿತ್ತು! ಅದನ್ನು ಎದುರಿಸಿ ನಿಂತವರು ಒಬ್ಬ ಸಾಮಾನ್ಯ CRPF ಕಾನ್ಸಟೇಬಲ್! ಆಕೆಯೇ ನಮ್ಮ ಇಂದಿನ ಕಥಾನಾಯಕಿ ಕಮಲೇಶ್ ಕುಮಾರಿ!
ಓವರ್ ಟು ದೆಹಲಿ
ಅಂದು ಬೆಳಿಗ್ಗೆ 11-40ರ ಹೊತ್ತು. ಪಾರ್ಲಿಮೆಂಟ್ ಭವನದಲ್ಲಿ ಲೋಕಸಭೆ ಮತ್ತು ರಾಜ್ಯಸಭೆಗಳ ಅಧಿವೇಶನಗಳು ಜೊತೆಯಾಗಿ ನಡೆಯುತ್ತಿದ್ದವು. ಮೊದಲ ಅಧಿವೇಶನವು ಮುಗಿದು ಎರಡನೆಯ ಅಧಿವೇಶನಕ್ಕೆ ಸಿದ್ಧತೆ ನಡೆಯುತ್ತಿತ್ತು. ಕೇಂದ್ರ ಗೃಹ ಮಂತ್ರಿ ಅಡ್ವಾಣಿ, ಜಸ್ವಂತ್ ಸಿಂಗ್ ಜೊತೆಗೆ ಹತ್ತಾರು ಕೇಂದ್ರ ಮಂತ್ರಿಗಳು, ನೂರು ಲೋಕಸಭಾ ಸದಸ್ಯರು, ಸ್ಪೀಕರ್ ಪಾರ್ಲಿಮೆಂಟ್ ಭವನದ ಒಳಗಿದ್ದರು. ಅವರ್ಯಾರಿಗೂ ಮುಂದೆ ನಡೆಯಲಿರುವ ಭಯೋತ್ಪಾದನೆಯ ಧಾಳಿಯ ಸಣ್ಣ ಸೂಚನೆ ಕೂಡ ಇರಲಿಲ್ಲ. ಪೋಲಿಸ್ ಸಮವಸ್ತ್ರದಲ್ಲಿದ್ದ
ಕಾನ್ಸಟೇಬಲ್ ಕಮಲೇಶ್ ಕುಮಾರಿ ಅವರು ಪಾರ್ಲಿಮೆಂಟಿನ ಹೊರಗಿನ ಕಬ್ಬಿಣದ ಮೊದಲ ಗೇಟಲ್ಲಿ ಕಾವಲಿದ್ದರು. ಅದು ಪಾರ್ಲಿಮೆಂಟ್ ಒಳಗೆ ಅತೀ ಪ್ರಾಮುಖ್ಯ ವ್ಯಕ್ತಿಗಳು ( VIP) ಪ್ರವೇಶ ಮಾಡುವ ಗೇಟಾಗಿತ್ತು!
ಆಕೆಯ ಕೈಯ್ಯಲ್ಲಿ ಯಾವ ವೆಪನ್ ಇರಲಿಲ್ಲ!
ಕಾನ್‌ಸ್ಟೆಬಲ್‌ಗಳ ಕೈಗೆ ಸಾಮಾನ್ಯ ಸಂದರ್ಭಗಳಲ್ಲಿ ವೆಪನ್ಸ್ ಕೊಡುತ್ತಿರಲಿಲ್ಲ. ಹಾಗೆ ಅವರ ಕೈಯ್ಯಲ್ಲಿ ವಯರ್ಲೆಸ್ ಸೆಟ್ ಮಾತ್ರ ಇತ್ತು. ಅವರು ರಸ್ತೆಯ ಕಡೆಗೆ ದೃಷ್ಟಿ ನೆಟ್ಟು ಪ್ರತಿಮೆಯಂತೆ ನಿಂತಿದ್ದರು.
ಆ ಬಿಳಿಯ ಬಣ್ಣದ ಅಂಬಾಸೆಡರ್ ಕಾರು….
ಆಗ ವಿಜಯಚೌಕದ ಕಡೆಯಿಂದ ಒಂದು ಬಿಳಿ ಬಣ್ಣದ ಅಂಬಾಸೆಡರ್ ಕಾರು ಅವರಿದ್ದ ಗೇಟಿನ ಕಡೆಗೆ ಬರತೊಡಗಿತು. ಅದರ ಮೇಲೆ ಕೆಂಪು ದೀಪ ಇತ್ತು. ಎದುರು ಭಾಗದಲ್ಲಿ ಪಾರ್ಲಿಮೆಂಟ್ ಮತ್ತು ಗೃಹ ಮಂತ್ರಾಲಯದ ಸ್ಟಿಕರಗಳು ಇದ್ದವು. ಯಾರಿಗೂ ಸಂಶಯ ಬರಲು ಸಾಧ್ಯವೇ ಇರಲಿಲ್ಲ. ಆದರೆ ಗೇಟಿನ ಬಳಿಗೆ ಬಂದಾಗ ಕಾರು ನಿಧಾನವಾಗದೆ ವೇಗವನ್ನು ಹೆಚ್ಚಿಸಿಕೊಂಡಿತು. ಕಮಲೇಶ್ ಹದ್ದಿನ ಕಣ್ಣಿಗೆ ಕಾರಲ್ಲಿ ಯಾರೋ ಸಂಶಯಾಸ್ಪದ ವ್ಯಕ್ತಿಗಳು ಇರುವುದು ಗಮನಕ್ಕೆ ಬಂದಿದೆ. ಅವರು ತಕ್ಷಣ ಅಲರ್ಟ್ ಆಗಿದ್ದಾರೆ. ವಾಕಿ ಟಾಕೀ ಮೂಲಕ ಎಲ್ಲರಿಗೂ ಸೂಚನೆ ರವಾನೆ ಮಾಡಿದ್ದಾರೆ. ಗೇಟಿನ ಬಳಿ ಓಡಿ ಬಂದು ಗೇಟು ಸೀಲ್ ಮಾಡಿದ್ದಾರೆ. ಜೋರಾಗಿ ಕಿರುಚಿ ಎಲ್ಲರನ್ನೂ ಜಾಗೃತ ಮಾಡಿದ್ದಾರೆ. ತನ್ನಿಂದ ಸ್ವಲ್ಪ ದೂರದಲ್ಲಿ ನಿಂತಿದ್ದ ಸುಖ್ವಿಂದರ್ ಸಿಂಘ್ ಎಂಬ ಸೈನಿಕನಿಗೆ ಸೂಚನೆ ಕೊಟ್ಟಿದ್ದಾರೆ. ಇದೆಲ್ಲವೂ ಕಣ್ಣು ರೆಪ್ಪೆ ಮುಚ್ಚುವಷ್ಟರಲ್ಲಿ ನಡೆದು ಹೋಗಿದೆ!
ಆ ಕಾರಿನಲ್ಲಿ ಐದು ಆತ್ಮಾಹುತಿ ದಳದ ಉಗ್ರರು ಇದ್ದರು!
ಆ ಕಾರಿನಲ್ಲಿದ್ದ ಐದು ಜನ ಭಯೋತ್ಪಾದಕರು ಪೂರ್ತಿ ಸನ್ನದ್ಧರಾಗಿ ಬಂದಿದ್ದರು. ಅವರ ಬಳಿ AK 47, ಗ್ರೆನೇಡ್ಗಳು, ಗ್ರೆನೇಡ್ ಲಾಂಚರ್ಸ್ ಎಲ್ಲವೂ ಇದ್ದವು! ಅದೊಂದು ಆತ್ಮಾಹುತಿ ಬಾಂಬ್ ಧಾಳಿಯ ಸಂಚು ಆಗಿತ್ತು. ಈ ಉಗ್ರ ಬಾಂಬರಗಳಿಗೆ ಎದೆಗೊಟ್ಟು ಕಮಲೇಶ್ ಕುಮಾರಿ ಎಂಬ ಸಾಮಾನ್ಯ ಕಾನ್ಸಟೇಬಲ್ ಬಂಡೆಯಂತೆ ನಿಂತಿದ್ದರು!
ಹುತಾತ್ಮರಾದರು ಕಮಲೇಶ್
ಸಿಟ್ಟಾದ ಭಯೋತ್ಪಾದಕರು ಕಂಡ ಕಂಡಲ್ಲಿ ಗುಂಡು ಸಿಡಿಸಿದರು. ತಮ್ಮ ಸಂಚನ್ನು ಭಗ್ನ ಮಾಡಿದ ಕಮಲೇಶ್ ಕುಮಾರಿ ಕಡೆಗೆ ಅವರ ಸಿಟ್ಟು ತಿರುಗಿತು. ಅವರ ಹೊಟ್ಟೆಯಲ್ಲಿ 11 ಗುಂಡು ತೂರಿ ಬಿಟ್ಟರು. ಅವರು ರಕ್ತದ ಮಡುವಿನಲ್ಲಿ ಕುಸಿದು ಬಿದ್ದು ಪ್ರಾಣ ಕಳೆದುಕೊಂಡರು. ಅಷ್ಟು ಹೊತ್ತಿಗೆ ಅಲರ್ಟ್ ಆಗಿದ್ದ ಪಾರ್ಲಿಮೆಂಟ್ ಭವನದ ರಕ್ಷಣಾ ಪಡೆಯವರು ಧಾವಿಸಿಬಂದು ಆ ಕಾರಿನಲ್ಲಿದ್ದ ಭಯೋತ್ಪಾದಕರನ್ನೆಲ್ಲ ಕೊಂದು ಹಾಕಿದರು. ಅಂದು ಗುಂಡಿನ ಚಕಮಕಿ ಮತ್ತು ಗ್ರೆನೇಡ್ ದಾಳಿಯಲ್ಲಿ ಒಟ್ಟು 9 ರಕ್ಷಣಾ ಪಡೆಯ ಅಧಿಕಾರಿಗಳು ಹುತಾತ್ಮರಾದರು. ಅಂದು ಸಾಮಾನ್ಯ ಕಾನ್ಸಟೇಬಲ್ ಆಗಿದ್ದ ಕಮಲೇಶ್ ಕುಮಾರಿ ಅವರು ತೋರಿದ್ದ ಪ್ರಸಂಗಾವಧಾನತೆಯು ಭಾರತದ ಘನತೆಯನ್ನು ಕಾಪಾಡಿತು. ಇಲ್ಲವಾದರೆ ಏನೆಲ್ಲ ಆಗುತ್ತಿತ್ತು ಎನ್ನುವುದನ್ನು ಊಹೆ ಮಾಡುವುದು ನಮಗೆ ಕಷ್ಟ! ಏಕೆಂದರೆ ಅಂದು ಸದನದಲ್ಲಿ ನೂರಕ್ಕಿಂತ ಹೆಚ್ಚು ಸಂಸದರು ಇದ್ದರು ಮತ್ತು ಹತ್ತಕಿಂತ ಹೆಚ್ಚು ಪ್ರಭಾವೀ ಮಂತ್ರಿಗಳು ಇದ್ದರು. ಕಮಲೇಶ್ ಕುಮಾರಿ ಅರ್ಧ ಕ್ಷಣ ನಿರ್ಲಕ್ಷ ಮಾಡಿದ್ದರೂ ಅಂದು ಭಾರತದ ಪ್ರತಿಷ್ಠೆಯ ಸಂಕೇತವಾಗಿದ್ದ ಪಾರ್ಲಿಮೆಂಟ್ ಭವನ ಸ್ಫೋಟವಾಗುವ ಸಾಧ್ಯತೆ ಇತ್ತು!
ಅಮರ್ ರಹೇ ಕಮಲೇಶ್ ಕುಮಾರಿ
ಮುಂದೆ ಅವರಿಗೆ ಇಡೀ ಭಾರತವು ಕಣ್ಣೀರು ಸುರಿಸಿತು. ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಕಂಬನಿಯನ್ನು ಮಿಡಿದರು. ಭಾರತ ಸರಕಾರವು ಆಕೆಯ ಸಾಹಸ, ಧೈರ್ಯವನ್ನು ಪರಿಗಣಿಸಿ ಶಾಂತಿ ಕಾಲದ ಪರಮೋಚ್ಚ ಶೌರ್ಯ ಪ್ರಶಸ್ತಿಯಾದ ಅಶೋಕ ಚಕ್ರವನ್ನು ಮರಣೋತ್ತರವಾಗಿ ನೀಡಿ ಅವರನ್ನು ಗೌರವಿಸಿತು. ಅದೇ ಘಟನೆಯಲ್ಲಿ ಮರಣ ಹೊಂದಿದ ಇತರ ಎಂಟು ರಕ್ಷಣಾ ಪಡೆಯ ಜವಾನರಿಗೆ ಕೂಡ ವಿವಿಧ ಶೌರ್ಯ ಪ್ರಶಸ್ತಿ ನೀಡಿ ದೇಶವು ಗೌರವ ಸಲ್ಲಿಸಿತು.
ಆದರೆ ಮುಂದೆ ಏನಾಯ್ತು?
ಮುಂದೆ ಪಾರ್ಲಿಮೆಂಟ್ ಬ್ಲಾಸ್ಟ್ ಯೋಜನೆಯ ಸಂಚನ್ನು ರೂಪಿಸಿದ್ದ ಭಯೋತ್ಪಾದಕನಾದ ಮೊಹಮ್ಮದ್ ಆಪ್ಜಲನನ್ನು ಅಧಿಕಾರಿಗಳು ಬಂಧಿಸಿ ವಿಚಾರಣೆಗೆ ತಳ್ಳಿದರು. ಮುಂದೆ ಸುಪ್ರೀಂ ಕೋರ್ಟು ವಿಚಾರಣೆಯನ್ನು ಮುಗಿಸಿ ಆತನನ್ನು ನಿರ್ದಾಕ್ಷಿಣ್ಯವಾಗಿ ಗಲ್ಲುಶಿಕ್ಷೆಗೆ ಗುರಿಮಾಡಿತು. ಆದರೆ ಅಫ್ಜಲನ ಕುಟುಂಬವು ರಾಷ್ಟ್ರಪತಿಯವರಿಗೆ ಕ್ಷಮಾದಾನಕ್ಕೆ ಅರ್ಜಿ ಸಲ್ಲಿಸಿತು. ದುರಂತ ಏನೆಂದರೆ ಹಲವು ವರ್ಷಗಳ ಕಾಲ ಆ ಅರ್ಜಿಯು ಇತ್ಯರ್ಥ ಆಗಲೇ ಇಲ್ಲ! ಆಗ ಕಮಲೇಶ್ ಕುಟುಂಬದವರು ತಮ್ಮ ತೀವ್ರ ಅಸಮಾಧಾನವನ್ನು ಬಹಿರಂಗವಾಗಿಯೇ ತೋಡಿಕೊಂಡರು, ಮಾತ್ರವಲ್ಲ ತಮಗೆ ನೀಡಿದ ಅಶೋಕ ಚಕ್ರ ಪ್ರಶಸ್ತಿಯನ್ನು 2006ರಲ್ಲಿ ಸರಕಾರಕ್ಕೆ ಹಿಂದೆ ಕೊಟ್ಟರು! ಇತರ ಎಂಟು ಯೋಧರ ಕುಟುಂಬದವರೂ ತಮ್ಮ
ಶೌರ್ಯ ಪ್ರಶಸ್ತಿಗಳನ್ನು ವಾಪಸು ಮಾಡಿದರು! ಅದು ನಿಜವಾದ ಸ್ವಾಭಿಮಾನದ ನಡೆ ಆಗಿತ್ತು.
ಮುಂದೆ ರಾಷ್ಟ್ರಪತಿಯಾಗಿ ಆಯ್ಕೆ ಆದ ಪ್ರಣಬ್ ಮುಖರ್ಜಿಯವರು 2013ರಲ್ಲಿ ಆ ಕ್ಷಮಾದಾನದ ಅರ್ಜಿಯನ್ನು ತಿರಸ್ಕರಿಸಿದರು. ಪರಿಣಾಮವಾಗಿ ಅಫ್ಜಲನನ್ನು ಕೂಡಲೇ ಗಲ್ಲಿಗೇರಿಸಲಾಯಿತು. ಆಗ ಒಂಬತ್ತು ಕುಟುಂಬಗಳು ಕೂಡ ತುಂಬು ಹೆಮ್ಮೆಯಿಂದ ತಮ್ಮ ಶೌರ್ಯ ಪ್ರಶಸ್ತಿಗಳನ್ನು ಮತ್ತೆ ಸ್ವೀಕಾರ ಮಾಡಿದರು!
ಇದನ್ನೂ ಓದಿ: ರಾಜಮಾರ್ಗ ಅಂಕಣ: ಇವರ ಬದುಕು ಒಂದು ಥ್ರಿಲ್ಲರ್ ಸಿನೆಮಾಗಿಂತ ರೋಚಕ ಆಗಿದೆ!
ಭರತ ವಾಕ್ಯ
ಕೇವಲ CRPF ಕಾನಸ್ಟೇಬಲ್ ಆಗಿದ್ದ ಕಮಲೇಶ್ ಕುಮಾರಿ ಅವರ ದಿಟ್ಟತನ, ಧೈರ್ಯ, ಅಸಾಮಾನ್ಯ ಪ್ರಸಂಗಾವಧಾನತೆ ಮತ್ತು ರಾಷ್ಟ್ರಪ್ರೇಮದ ಯಶೋಗಾಥೆಯು ಶಾಲೆಯ ಮಕ್ಕಳ ಪಠ್ಯಪುಸ್ತಕದಲ್ಲಿ ಸ್ಥಾನ ಪಡೆಯಬೇಕು. ಅದರಿಂದ ಸಾವಿರಾರು ವಿದ್ಯಾರ್ಥಿಗಳು ಸ್ಫೂರ್ತಿ ಪಡೆಯಬೇಕು.
ಕಮಲೇಶ್ ಕುಮಾರಿ ಅವರು ನಿಜವಾಗಿ ಭಾರತದ ಹೆಮ್ಮೆ ಎಂದು ನನಗೆ ಅನ್ನಿಸುತ್ತದೆ.
ಜೈ ಹಿಂದ್!
ಅಂಕಣ
ಸಕಾಲಿಕ: ಗುತ್ತಿಗೆ ಕಾರ್ಮಿಕರೆಂಬ ಬಾವಲಿಗಳ ಬವಣೆ ನೀಗುವುದು ಹೇಗೆ?
ಪ್ರಾಣಿಯೂ ಅಲ್ಲದೆ, ಪಕ್ಷಿಯೂ ಅಲ್ಲದ ಬಾವಲಿಗಳಂತೆ ತ್ರಿಶಂಕು ಬದುಕು ಸಾಗಿಸುತ್ತಿರುವ ಗುತ್ತಿಗೆ ಕಾರ್ಮಿಕ ವರ್ಗಕ್ಕೆ ಸೇರಿದ ಅಸಂಖ್ಯಾತರಿದ್ದಾರೆ. ಇವರಿಗೊಂದು ಶಾಶ್ವತ, ಸ್ಥಿರವಾದ ಬದುಕನ್ನು ರೂಪಿಸುವ ಬದ್ಧತೆ ಆಳುವವರಿಗೆ ಬರಬೇಕು.
:: ಮೋಹನದಾಸ ಕಿಣಿ, ಕಾಪು
ರಾಜ್ಯದ ಸರ್ಕಾರ (Karnataka government) ಬದಲಾವಣೆಯಾದ ಕೂಡಲೇ ಸಂಭವಿಸಿದ ಘಟನೆಗಳಲ್ಲಿ ಒಂದು, ಅನುಕಂಪದ ಆಧಾರದಲ್ಲಿ ನೇಮಕವಾದ ಕೆಲವು ನೌಕರರನ್ನು ವಜಾ ಮಾಡಿದ್ದು. ಅದರಲ್ಲಿ ಕಳೆದ ವರ್ಷ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಪ್ರವೀಣ್ ನೆಟ್ಟಾರ್ ಅವರ ಪತ್ನಿ ನೂತನ ಕುಮಾರಿ ಕೂಡಾ ಒಬ್ಬರು. ಹಾಗೆ ವಜಾ ಮಾಡಿದ ಸುದ್ದಿಗೆ ತೀವ್ರ ಪ್ರತಿಭಟನೆ ವ್ಯಕ್ತವಾಗುತ್ತಿದ್ದಂತೆ ಮುಖ್ಯಮಂತ್ರಿಯವರು ಟ್ವೀಟ್ ಮಾಡಿ ಹೊಸ ಸರಕಾರ ಬರುತ್ತಿದ್ದಂತೆ ಹಳೆ ನೇಮಕಾತಿಗಳು ರದ್ದಾಗುವುದು ಸಹಜ ಪ್ರಕ್ರಿಯೆ. ಅದರಂತೆ 150ಕ್ಕೂ ಹೆಚ್ಚಿನ ನೇಮಕಾತಿಗಳನ್ನು ರದ್ದುಪಡಿಸಲಾಗಿದೆ. ಇದರಲ್ಲಿ ಸರ್ಕಾರದ ಹಸ್ತಕ್ಷೇಪವಿಲ್ಲ. ಆಕೆಯ ಪ್ರಕರಣವನ್ನು ವಿಶೇಷವಾಗಿ ಪರಿಗಣಿಸಿ ಮರು ನೇಮಕಾತಿ ಮಾಡುವುದಾಗಿ ಹೇಳಿದರು. ಇದರಲ್ಲಿ ನೆಟ್ಟಾರ್ ಪತ್ನಿಯ ಪ್ರಕರಣವನ್ನು ಮಾತ್ರ ಮರು ಪರಿಶೀಲನೆ ಮಾಡುವುದೋ ಅಥವಾ ಹಾಗೆ ವಜಾ ಮಾಡಲಾಗಿದ್ದ ಎಲ್ಲವನ್ನೂ ಮಾಡಲಾಗುವುದೋ ಎಂಬುದು ಸ್ಪಷ್ಟವಿಲ್ಲ. ಮುಖ್ಯ ವಿಚಾರವೆಂದರೆ ಹೊಸ ಸರಕಾರ ಬಂದೊಡನೆ ರದ್ದಾಗಲು ಇದು ನಿಗಮ ಮಂಡಳಿಯಂತೆ ರಾಜಕೀಯ ನೇಮಕಾತಿಯೇ? ನಿಗಮ ಮಂಡಳಿ ನೇಮಕಾತಿಗಳು ಸಂಪೂರ್ಣ ರಾಜಕೀಯ ಮತ್ತು ಅವರ್ಯಾರಿಗೂ ಅಂತಹ ನೇಮಕಾತಿ ಪೂರ್ಣಕಾಲಿಕ ಉದ್ಯೋಗವಲ್ಲ. ಆದರೆ ನೆಟ್ಟಾರ್ ಅವರ ಪತ್ನಿಯಂತವರ ನೇಮಕಾತಿ ರದ್ದಾದರೆ ಅವರ ಜೀವನೋಪಾಯ ಸಂಪೂರ್ಣವಾಗಿ ಸ್ಥಗಿತಗೊಳ್ಳುತ್ತದೆ. ಈ ನೇಮಕಾತಿಗಳನ್ನು ರಾಜಕೀಯ ಸ್ಥಿತ್ಯಂತರಕ್ಕೆ ತಳಕು ಹಾಕುವ ಅಗತ್ಯವಿದೆಯೇ? ಇದೂ ಸೇರಿ ಬಹಳಷ್ಟು ಅಸ್ಥಿರ ನೇಮಕಾತಿಗಳಿದ್ದು ಅದೆಲ್ಲದಕ್ಕೂ ಖಾಯಂ ಪರಿಹಾರ ಮಾಡಲಾಗದೇ?
ಒಂದೆಡೆ ರಾಜ್ಯ ಸರಕಾರಿ ನೌಕರರು ಹಳೆಯ ಪಿಂಚಣಿಗಾಗಿ ಮಾಡುತ್ತಿರುವ ಹೋರಾಟ, ಇನ್ನೊಂದೆಡೆ ಆಶಾ ಕಾರ್ಯಕರ್ತೆಯರಿಗೆ, ಅಂಗನವಾಡಿ ಕಾರ್ಯಕರ್ತೆಯರಿಗೆ (anganavadi workers), ಗೌರವಧನ ಬಾಕಿ, ರಾಷ್ಟ್ರೀಯ ಆರೋಗ್ಯ ಅಭಿಯಾನ ಸೇರಿದಂತೆ ವಿವಿಧೆಡೆ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ ನೌಕರರ ಬೇಡಿಕೆಗಳು.
ಮೇಲ್ನೋಟಕ್ಕೆ ಎಲ್ಲರೂ ಸರಕಾರಿ ಉದ್ಯೋಗಿಗಳು. ಆದರೆ ವಿವಿಧ ವರ್ಗದ ಉದ್ಯೋಗಿಗಳಿದ್ದು ಅವರ ನೇಮಕಾತಿ, ಉದ್ಯೋಗದ ಷರತ್ತುಗಳು, ವೇತನ ಮತ್ತಿತರ ಸೌಲಭ್ಯಗಳು, ವೇತನ ಪಾವತಿ ವಿಧಾನ, ವೇತನ ಬಡ್ತಿ, ಉದ್ಯೋಗ ಸ್ಥಿರತೆ, ಅಂತಿಮವಾಗಿ ನಿವೃತ್ತಿ ನಂತರ ಯಾರಿಗೆ ಏನು ಸಿಗುತ್ತದೆ, “ಏನೂ ಸಿಗದವರು” ಯಾರು? ಇತ್ಯಾದಿ ವಿವರಗಳು ಎಷ್ಟು ಜನರಿಗೆ ಗೊತ್ತು?
ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ನೇಮಕಗೊಳ್ಳುವವರದ್ದು ಒಂದು ವರ್ಗವಾದರೆ, ಗುತ್ತಿಗೆ ಆಧಾರದಲ್ಲಿ ನೇಮಕಗೊಡು ಕ್ರಮೇಣ ಖಾಯಂ ಆಗುವವರು, ಗುತ್ತಿಗೆ ಆಧಾರದಲ್ಲಿ ನೇಮಕಗೊಡು ನಿವೃತ್ತಿಯಾಗುವ ತನಕವೂ ಗುತ್ತಿಗೆ ಆಧಾರದಲ್ಲಿಯೇ ಮುಂದುವರಿಯುವವರು ಇನ್ನು ಕೆಲವರು. ಶೋಚನೀಯವೆಂದರೆ, ಇದೆಲ್ಲದಕ್ಕೂ ಮಿಗಿಲಾಗಿ ಹೊರಗುತ್ತಿಗೆ ನೆಲೆಯಲ್ಲಿ ಮಾಡುವ ನೇಮಕಾತಿಗಳು. ಪ್ರತಿಯೊಂದು ವರ್ಗದವರ ಸಮಸ್ಯೆಗಳನ್ನು ವಿಶ್ಲೇಷಣೆ ಮಾಡುವುದಾದರೆ;
1-4-2006ರಿಂದೀಚೆಗೆ ನೇಮಕಗೊಂಡ ಖಾಯಂ ನೌಕರರಿಗೆ ಅದಕ್ಕೂ ಹಿಂದೆ ನೇಮಕಗೊಂಡವರಿಗೆ ಸಿಗುತ್ತಿದ್ದ ರೀತಿಯ ಪಿಂಚಣಿ ಸಿಗುವುದಿಲ್ಲ. ಅವರ ವೇತನದಿಂದ 10% ಕಡಿತಗೊಳಿಸಿ ಸರ್ಕಾರದ 10% ಸೇರಿಸಿ ಮೊತ್ತವನ್ನು ಮ್ಯೂಚುವಲ್ ಫಂಡ್ ಮೂಲಕ ಷೇರುಗಳಲ್ಲಿ ತೊಡಗಿಸಲಾಗುತ್ತದೆ. ಉದ್ಯೋಗಿ ನಿವೃತ್ತಿ ಹೊಂದುವಾಗ ಆತನ/ಆಕೆಯ ಅದೃಷ್ಟ ಚೆನ್ನಾಗಿದ್ದರೆ ಒಳ್ಳೆಯ ಮೊತ್ತ ಸಿಗಬಹುದು. ಇಲ್ಲದಿದ್ದರೆ ಇಲ್ಲ. ಇಂತಹ ಅನಿಶ್ಚಿತತೆಯ ಕಾರಣಕ್ಕಾಗಿಯೇ ಹಳೆಯ ಪಿಂಚಣಿ ಸೌಲಭ್ಯಕ್ಕೆ ಒತ್ತಾಯಿಸುತ್ತಿರುವುದು. ಆದರೆ ಇವರಿಗೆ ಪಿಂಚಣಿ ಅನಿಶ್ಚಿತ ಎಂಬುದನ್ನು ಹೊರತುಪಡಿಸಿ ಉದ್ಯೋಗ ಮತ್ತು ವೇತನ, ವೇತನ ಬಡ್ತಿ ಇನ್ನಿತರ ಸೌಲಭ್ಯಗಳಿವೆ.
ರಾಷ್ಟ್ರೀಯ ಆರೋಗ್ಯ ಅಭಿಯಾನ, ಜಲ ಜೀವನ ಅಭಿಯಾನ, ಆಯುಷ್, ಸ್ವಚ್ಛ ಭಾರತ್, ಸ್ಮಾರ್ಟ್ ಸಿಟಿ- ಹೀಗೆ ವಿವಿಧ ಅಭಿಯಾನಗಳಡಿಯಲ್ಲಿ ಗುತ್ತಿಗೆ ಆಧಾರದಲ್ಲಿ ನೇಮಕಾತಿ ಆಗಿ, ವರ್ಷಾನುಗಟ್ಟಲೆ ಕೆಲಸ ಮಾಡುವವರಿಗೆ ಉದ್ಯೋಗ ಖಾತರಿಯಾಗಲೀ, ಪದೋನ್ನತಿ, ವೇತನ ಬಡ್ತಿ ಯಾವುದೂ ಇರುವುದಿಲ್ಲ. ಮಾತ್ರವಲ್ಲ ಪ್ರತೀ ಮಾರ್ಚ್ 31ರಂದು ಅವರನ್ನು ಸೇವೆಯಿಂದ ಬಿಡುಗಡೆ ಮಾಡಿ ಎಪ್ರಿಲ್ 2ರಂದು ಮರು ನೇಮಕಾತಿ ಮಾಡಲಾಗುತ್ತದೆ. ಅವರು ನಿರಂತರ ಸೇವೆಯಲ್ಲಿರಲಿಲ್ಲ ಎಂದು ತೋರಿಸುವುದಕ್ಕಾಗಿ ಹೀಗೆ ಮಾಡಲಾಗುತ್ತದೆ. ಸರ್ವೋಚ್ಚ ನ್ಯಾಯಾಲಯ ಆದೇಶದಂತೆ ನಿರಂತರವಾಗಿ ಸೇವೆಯಲ್ಲಿರುವವರನ್ನು ಖಾಯಂಗೊಳಿಸಬೇಕಾಗುತ್ತದೆ. ಆದ್ದರಿಂದ ಈ “ರಂಗೋಲಿ ಕೆಳಗೆ ತೂರುವ” ಬುದ್ಧಿವಂತಿಕೆ!
ಸರ್ವೋಚ್ಚ ನ್ಯಾಯಾಲಯ ಹೇಳುವಂತೆ ಸಮಾನ ಕರ್ತವ್ಯ ನಿರ್ವಹಿಸುವವರಿಗೆ ಸಮಾನ ವೇತನ ನೀಡಬೇಕು. ವಾಸ್ತವದಲ್ಲಿ ಆಗುತ್ತಿರುವುದೇನು? ಒಂದು ಉದಾಹರಣೆ ನೋಡಿ. ಸರ್ಕಾರಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುವ ಎಂಬಿಬಿಎಸ್ ವೈದ್ಯರಲ್ಲಿ ಖಾಯಂ ನೆಲೆಯಲ್ಲಿರುವವರಿಗೆ ಆರಂಭಿಕ ವೇತನ ಭತ್ಯೆಗಳು ಸೇರಿದಂತೆ ಒಂದು ಲಕ್ಷಕ್ಕಿಂತ ಹೆಚ್ಚು. ಅದೇ ಗುತ್ತಿಗೆ ಆಧಾರದಲ್ಲಿರುವವರಿಗೆ ಕೇವಲ 45000/- ಯಾವುದೇ ಭತ್ಯೆ ಇಲ್ಲ. ಕೆಲಸ ಇಬ್ಬರಿಗೂ ಸಮಾನ! ಇದು ಕೇವಲ ಉದಾಹರಣೆ ಮಾತ್ರ. ಎಲ್ಲಾ ಇಲಾಖೆಗಳ ಎಲ್ಲಾ ವರ್ಗದ ಉದ್ಯೋಗಿಗಳಿಗೂ ಇದಕ್ಕಿಂತಲೂ ಕನಿಷ್ಟ ವೇತನ, ಯಾವುದೇ ಉದ್ಯೋಗ ಭದ್ರತೆಯಿಲ್ಲದ ಅತಂತ್ರ ಸ್ಥಿತಿಯಿದೆ.
ಇದನ್ನೂ ಓದಿ: Good News | 11,133 ಪೌರ ಕಾರ್ಮಿಕರ ಕಾಯಂಗೆ ರಾಜ್ಯ ಸಚಿವ ಸಂಪುಟ ಅನುಮೋದನೆ
ಇನ್ನೂಂದು ಸರ್ಕಾರಿ ಪ್ರಾಯೋಜಿತ ಜೀತ ಪದ್ಧತಿಯಿದೆ. ಅದೇ ಹೊರಗುತ್ತಿಗೆ. ಸರ್ಕಾರದ ಇಲಾಖೆಗಳಿಗೆ ಬೇಕಾಗುವ ಸಿಬಂಧಿ ಒದಗಿಸುವ ಟೆಂಡರ್ ಕರೆಯಲಾಗುತ್ತದೆ. ಕಡಿಮೆ ದರ ನಮೂದಿಸಿದ ಸಂಸ್ಥೆಗೆ ಟೆಂಡರ್ ನೀಡಲಾಗುತ್ತದೆ. ಪ್ರತೀ ಬಾರಿ ಈ ಗುತ್ತಿಗೆ ಪಡೆಯುವ ಸಂಸ್ಥೆ ಬದಲಾಗಬಹುದು. ಅಂತಹ ಸಂಸ್ಥೆಗಳಿಗೂ, ನೌಕರರಿಗೆ ಪಾವತಿಸಬೇಕಾದ ಕನಿಷ್ಠ ವೇತನ, ಕಾರ್ಮಿಕ ಭವಿಷ್ಯ ನಿಧಿ ಮುಂತಾದ ಶರತ್ತುಗಳೇನೋ ಇವೆ. ಆದರೆ ಇದನ್ನು ಎಷ್ಟರಮಟ್ಟಿಗೆ ಪಾಲಿಸಲಾಗುತ್ತದೆ?
ಬೇರೆ ವರ್ಗಗಳ ಸಿಬ್ಬಂದಿಗೆ ನೇರವಾಗಿ ಸರ್ಕಾರವೇ ವೇತನ ಪಾವತಿ ಮಾಡುವುದರಿಂದ ಭವಿಷ್ಯ ನಿಧಿಗೆ ದೇಣಿಗೆ ಪಾವತಿ ಮಾಡಲ್ಪಡುತ್ತದೆ. ಅಷ್ಟರಮಟ್ಟಿಗೆ ಅವರ ಹೆಸರಿನಲ್ಲಿ ಒಂದಷ್ಟು ಉಳಿತಾಯ ಆಗುತ್ತದೆ. ಹೊರಗುತ್ತಿಗೆ ಸಿಬ್ಬಂದಿಗೆ ಗುತ್ತಿಗೆ ಪಡೆದ ಸಂಸ್ಥೆ ಪಾವತಿಸಿದರೆ ಉಂಟು. ಒಂದೆರಡು ವರ್ಷ ಗುತ್ತಿಗೆ ಪಡೆದು ನಂತರ ಸಂಸ್ಥೆಯು ಬಾಗಿಲು ಮುಚ್ಚಿಕೊಂಡು ಹೋದರೆ ಸಿಬ್ಬಂದಿಗೆ ಮೂರು ನಾಮ! ಎಲ್ಲಾ ವರ್ಗದವರು ತಮಗೊಂದು ಉದ್ಯೋಗ ಸಿಕ್ಕಿತೆಂಬ ಧೈರ್ಯದಿಂದ ಮದುವೆ, ಮಕ್ಕಳು, ವಸತಿ ಅದಕ್ಕೊಂದಿಷ್ಟು ಸಾಲ ಮಾಡಿದರೆ, ಏಕಾಏಕಿ ಕೆಲಸದಿಂದ ಕಿತ್ತು ಹಾಕಿದರೆ ಏನಾದೀತು ಪರಿಸ್ಥಿತಿ?
ಇದನ್ನೂ ಓದಿ: ವಿಸ್ತಾರ ಅಂಕಣ: ವಿದೇಶದಲ್ಲಿ ಕಾಲಿಟ್ಟ ತಕ್ಷಣ ರಾಹುಲ್ ಗಾಂಧಿ ಭಾರತ ವಿರೋಧಿ ಆಗುವುದೇಕೆ?
ಮೇಲೆ ಹೇಳಲಾದ, ವಿವಿಧ ವರ್ಗದ ಗುತ್ತಿಗೆ ಸಿಬ್ಬಂದಿ (contract labour), ಆಶಾ ಕಾರ್ಯಕರ್ತೆಯರು (Asha workers) ಬಿಸಿಯೂಟ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಒಂದು ರೀತಿಯಲ್ಲಿ ಸಂಘಟಿತರಾಗಿರುವುದರಿಂದ ತಮಗಾಗುವ ಅನ್ಯಾಯದ ವಿರುದ್ದ ಧ್ವನಿ ಎತ್ತುವಷ್ಟರ ಮಟ್ಟಿಗೆ ಇದ್ದಾರೆ. ಹೊರಗುತ್ತಿಗೆ ವ್ಯವಸ್ಥೆಯಲ್ಲಿರುವವರಿಗೆ ಅದೂ ಇಲ್ಲ. ಹಾಗೇನಾದರೂ ಧ್ವನಿ ಎತ್ತಿದರೆ, ನಾಳೆ ಗೇಟ್ ಪಾಸ್ ಪಡೆಯುವ ಭಯದಿಂದ ತೆಪ್ಪಗೆ ಇರುವವರೇ ಹೆಚ್ಚು. ಮೇಲ್ನೋಟಕ್ಕೆ ಸರ್ಕಾರಿ ನೌಕರಿಯೆಂಬ ಹಣೆಪಟ್ಟಿಯಿರುವವರ ಬದುಕು ಅದೆಷ್ಟು ಅಸ್ಥಿರವೆಂಬುದರತ್ತ ಬೆಳಕು ಚೆಲ್ಲುವುದಷ್ಟೇ ಈ ಲೇಖನದ ಉದ್ದೇಶ.
ಒಟ್ಟಿನಲ್ಲಿ ಅತ್ತ ಹಗಲಲ್ಲಿ ಯಾರೂ ಹೇಳಲಾಗದ ನಿದ್ರಾ ಸ್ಥಿತಿ, ಇತ್ತ ರಾತ್ರಿ ವೇಳೆ ಕೇಳುವವರು ಯಾರೂ ಇಲ್ಲದ ಬದುಕು ಸಾಗಿಸುತ್ತಿರುವ ಪ್ರಾಣಿಯೂ ಅಲ್ಲದೆ, ಪಕ್ಷಿಯೂ ಅಲ್ಲದ ಬಾವಲಿಗಳಂತೆ ತ್ರಿಶಂಕು ಬದುಕು ಸಾಗಿಸುತ್ತಿರುವ ಇಂತಹ ವರ್ಗಕ್ಕೆ ಸೇರಿದ ಅಸಂಖ್ಯಾತ ಕಾರ್ಮಿಕರಿದ್ದಾರೆ. ಇವರಿಗೊಂದು ಶಾಶ್ವತವಾದ, ಸ್ಥಿರವಾದ ಬದುಕನ್ನು ರೂಪಿಸುವ ಬದ್ಧತೆ ಆಳುವವರಿಗೆ ಬರಲಿ.
(ಲೇಖಕರು ಹವ್ಯಾಸಿ ಬರಹಗಾರ, ಆರೋಗ್ಯ ಇಲಾಖೆಯ ನಿವೃತ್ತ ಕಚೇರಿ ಅಧೀಕ್ಷಕ)
ಅಂಕಣ
ವಿಸ್ತಾರ ಅಂಕಣ: ಪಠ್ಯ ಪುಸ್ತಕ ಪರಿಷ್ಕರಣೆ ಎಂದರೆ ಮಕ್ಕಳ ಆಟ ಎಂದುಕೊಂಡಿದೆಯೇ ಸರ್ಕಾರ?
ಯಾವುದೋ ಒಂದು ಗುಂಪನ್ನು ಮೆಚ್ಚಿಸಲು ದಿನಬೆಳಗಾದರೆ ಪಠ್ಯಪುಸ್ತಕ ಪರಿಷ್ಕರಣೆಯ ಮಾತನ್ನು ಸರ್ಕಾರದ ಭಾಗವಾಗಿರುವವರು ನಿಲ್ಲಿಸುವುದು ಒಳ್ಳೆಯದು. ಪಠ್ಯ ಪುಸ್ತಕ ರಚನೆಯ ಜವಾಬ್ದಾರಿಯನ್ನು ರಾಜಕೀಯ ಹಿತಾಸಕ್ತಿ ಇಲ್ಲದ ಚಿಂತಕರಿಗೆ ಒಪ್ಪಿಸಬೇಕು.
“ಮೊಘಲ್ ಬಾದಶಹರಲ್ಲಿ ಕೊನೆಯವನಾದ ಔರಂಗಜೇಬನು ಕಾಲಚಕ್ರವನ್ನು ಹಿಂದಕ್ಕೆ ತಿರುಗಿಸಲು ಪ್ರಯತ್ನ ಮಾಡಿ ಪ್ರಗತಿಯನ್ನು ತಡೆದು, ಕಡೆಗೆ ನುಚ್ಚು ನೂರು ಮಾಡಿದನು. ಜನತೆಯ ಸ್ವಭಾವಕ್ಕನುಗುಣವಾಗಿ ಎಲ್ಲಿಯವರೆಗೆ ಎಲ್ಲರನ್ನೂ ಸಮಾನವಾಗಿ ಕಂಡು, ರಾಷ್ಟ್ರೀಯ ಭಾವನೆಯನ್ನು ಉದ್ದೀಪನಗೊಳಿಸಲು ಮೊಘಲ್ ರಾಜರು ಪ್ರಯತ್ನಿಸಿದರೋ, ಅಲ್ಲಿಯವರೆಗೂ ಅವರು ಬಲಿಷ್ಠರಾಗಿದ್ದರು. ಔರಂಗಜೇಬನು ಇದಕ್ಕೆ ವಿರುದ್ಧವಾಗಿ ನಡೆದುಕೊಂಡು, ಭಾರತೀಯನಲ್ಲದ ಮುಸ್ಲಿಂ ಚಕ್ರವರ್ತಿಯಾಗಲು ಪ್ರಯತ್ನಪಟ್ಟನೋ ಅಂದಿನಿಂದಲೇ ಮೊಘಲ್ ಚಕ್ರಾಧಿಪತ್ಯವು ಕುಸಿಯಲು ಆರಂಭವಾಯಿತು. ಅಕ್ಬರನೂ ಅವನ ವಂಶಿಕರೂ ಮಾಡಿದ ಕೆಲಸವೆಲ್ಲ ನಿರರ್ಥಕವಾಯಿತು. “
-ಜವಾಹರಲಾಲ್ ನೆಹರು
ಭಾರತದ ಪ್ರಥಮ ಪ್ರಧಾನಮಂತ್ರಿ ಪಂಡಿತ್ ಜವಾಹರಲಾಲ್ ನೆಹರೂ ಅವರು ತಮ್ಮ ʼಭಾರತ ದರ್ಶನʼ ಸರಣಿಯ ಮೊದಲ ಸಂಪುಟದಲ್ಲಿ ಬರೆದಿರುವ ಈ ಮಾತಿಗೆ ಕೆಲವರು ಆಕ್ಷೇಪ ವ್ಯಕ್ತಪಡಿಸಬಹುದು. ಮೊಘಲ್ ವಂಶದ ಬಹುತೇಕ ರಾಜರು ಔರಂಗಜೇಬನ ರೀತಿಯೇ ಇದ್ದರು ಎನ್ನಲೂ ಬಹುದು. ಇನ್ನೂ ಕೆಲವರು ಇದು ನೆಹರು ಅವರ ಅಲ್ಪಸಂಖ್ಯಾತರ ತುಷ್ಟೀಕರಣ ನೀತಿ ಎನ್ನಲೂ ಬಹುದು. ಈ ಎಲ್ಲವೂ ಚರ್ಚೆಯ ವಿಷಯಗಳು. ಆದರೆ, ನೆಹರು ಅವರ ಈ ಮಾತಿನಲ್ಲಿ- ರಾಜನೊಬ್ಬ ಹೇಗಿರಬೇಕು ಎಂಬ ವಿವೇಕವನ್ನು ಗಮನಿಸಬೇಕು.
ಆಡಳಿತ ಎನ್ನುವುದು ಎಲ್ಲಿಯವರೆಗೆ ಜನರ ಭಾವನೆಗಳಿಗೆ ಅನುಗುಣವಾಗಿ ಇರುತ್ತದೆಯೋ ಅಲ್ಲಿಯವರೆಗೆ ನಿರಾತಂಕವಾಗಿ ನಡೆಯುತ್ತದೆ. ಆದರೆ ಎಂದು ಕೆಲವೇ ತನ್ನ ಸುತ್ತಮುತ್ತಲಿರುವವರ ವಿಷಯವನ್ನೋ ಅಥವಾ ತನ್ನ ಖಾಸಗಿ ನಂಬಿಕೆಯನ್ನೋ ಸಮಾಜದ ಮೇಲೆ ಹೇರಲು ಹೊರಟಾಗ ಸಮಾಜ ಅದನ್ನು ಪ್ರತಿಭಟಿಸುತ್ತದೆ. ಅದು ರಾಜಾಡಳಿತವಾದರೂ ಅಷ್ಟೆ, ಆಕ್ರಮಣಕಾರರಾದರೂ ಅಷ್ಟೆ, ಪ್ರಜಾಪ್ರಭುತ್ವವಾದರೂ ಅಷ್ಟೆ. ಈ ಸಂದೇಶವು ಕರ್ನಾಟಕದಲ್ಲಿ 10-15 ವರ್ಷದಿಂದ ನಡೆಯುತ್ತಿರುವ ಕದನಕ್ಕೆ ಹೊಂದಿಕೆಯಾಗುತ್ತದೆ.
2008ರಲ್ಲಿ ಕರ್ನಾಟಕದಲ್ಲಿ ಮೊದಲ ಬಾರಿಗೆ ಪೂರ್ಣಪ್ರಮಾಣದ ಸರ್ಕಾರ ರಚನೆಯಾದ ನಂತರ ಶಾಲಾ ಪಠ್ಯಪುಸ್ತಕ ಪರಿಷ್ಕರಣೆಗೆ (textbook revision) ಕೈ ಹಾಕಲಾಯಿತು. ಪ್ರೊ. ಮುಡಂಬಡಿತ್ತಾಯ ಅವರ ಅಧ್ಯಕ್ಷತೆಯ ಸಮಿತಿ ರಚಿಸಿದ್ದ ಬಿಜೆಪಿ ಸರ್ಕಾರ, ಪಠ್ಯಪುಸ್ತಕ ಬದಲಾಯಿಸುವ, ವಿವಿಧ ಪಠ್ಯವನ್ನು ಸೇರಿಸುವ ಕೆಲಸ ಮಾಡಿತು. ಧರಣಿ ಮಂಡಲ ಮಧ್ಯದೊಳಗೆ ಪದ್ಯದ ಆಶಯವನ್ನೇ ಬಿಜೆಪಿ ತಿರುಚಿದೆ ಎಂದು ಆರೋಪಿಸಲಾಯಿತು. ಇದಕ್ಕೆ ಸಹಜವಾಗಿಯೇ ಕಾಂಗ್ರೆಸ್ ಹಾಗೂ ಎಡಪಂಥೀಯ ಒಲವುಳ್ಳ ಲೇಖಕರು ವಿರೋಧ ವ್ಯಕ್ತಪಡಿಸಿದರು.
2013ರಲ್ಲಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಬಿಜೆಪಿ ಮಾಡಿದ ಈ ‘ತಪ್ಪನ್ನುʼ ಸರಿಮಾಡಲು ಮುಂದಾಯಿತು. ಪ್ರೊ. ಬರಗೂರು ರಾಮಚಂದ್ರಪ್ಪ ಅವರ ಅಧ್ಯಕ್ಷತೆಯಲ್ಲಿ ಪಠ್ಯಪುಸ್ತಕ ರಚನಾ ಸಮಿತಿಯನ್ನು ರಚಿಸಿತು. ಈ ಸಮಿತಿಯು ಅನೇಕ ಬದಲಾವಣೆಗಳನ್ನು ಮಾಡಿತು. ಆದರೆ, ಬ್ರಾಹ್ಮಣರು ಯಜ್ಞ ಯಾಗಾದಿಗಳನ್ನು ಮಾಡಲು ತುಪ್ಪವನ್ನು ಬಳಸಿದ್ದರಿಂದ ಪ್ರಪಂಚದಲ್ಲಿ ಆಹಾರದ ಅಭಾವ ಸೃಷ್ಟಿಯಾಯಿತು ಎಂಬ ಸಾಲುಗಳನ್ನು ಈ ಸಮಿತಿ ಸೇರಿಸಿತ್ತು. ಇದಕ್ಕೆ ಬಿಜೆಪಿ ವಲಯದಿಂದ ಸಹಜವಾಗಿ ವಿರೋಧ ವ್ಯಕ್ತವಾಯಿತು.
ಕಾಂಗ್ರೆಸ್ ಸಮಯದಲ್ಲಿ ಮಾಡಿದ್ದ ಈ ʼಮಹಾ ಪ್ರಮಾದʼವನ್ನು ಸರಿಪಡಿಸಲು 2019ರಲ್ಲಿ ಅಧಿಕಾರಕ್ಕೇರಿದ ಬಿಜೆಪಿ ಸರ್ಕಾರ ಮುಂದಾಯಿತು. ರೋಹಿತ್ ಚಕ್ರತೀರ್ಥ ಅವರ ಅಧ್ಯಕ್ಷತೆಯ ಸಮಿತಿ ರಚನೆ ಮಾಡಿ ಪಠ್ಯಪುಸ್ತಕವನ್ನು ತಿದ್ದಿತು. ಇದರಲ್ಲಿ ನಾರಾಯಣಗುರು, ಕುವೆಂಪು ಸೇರಿ ಅನೇಕರಿಗೆ ಅವಮಾನ ಮಾಡಲಾಗಿದೆ ಎಂಬ ಆರೋಪ ಮತ್ತೊಮ್ಮೆ ಇನ್ನೊಂದು ತುದಿಯಲ್ಲಿದ್ದ ಕಾಂಗ್ರೆಸ್ ಹಾಗೂ ಎಡ ಪರ ಲೇಖಕರ ವಲಯದಿಂದ ಕೇಳಿಬಂದಿತು.
ಇದೀಗ 2023ರಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ಅಧಿಕಾರಕ್ಕೇರಿ ಇನ್ನೂ ಒಂದು ತಿಂಗಳೂ ಕಳೆದಿಲ್ಲ. ಈಗಾಗಲೆ ಶಾಲೆಗಳು ಆರಂಭವಾಗಿದ್ದರೂ, ಶಾಲಾ ಪಠ್ಯಪುಸ್ತಕಗಳನ್ನು ಪರಿಷ್ಕರಣೆ ಮಾಡುವ ಮಾತುಗಳನ್ನು ಸ್ವತಃ ಸಿಎಂ ಸಿದ್ದರಾಮಯ್ಯ ಆದಿಯಾಗಿ ಅನೇಕರು ಮಾತನಾಡುತ್ತಿದ್ದಾರೆ. ಸ್ವತಃ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಪಠ್ಯಪುಸ್ತಕ ಪರಿಷ್ಕರಣೆ ಆಗುವುದು ಖಚಿತ ಎಂದಿದ್ದಾರೆ. ಇದೆಲ್ಲವೂ ರಾಜಕೀಯ ಪಕ್ಷಗಳು ತಮ್ಮ ಸೈದ್ಧಾಂತಿಕ ನೆಲೆಯನ್ನು ಭದ್ರಪಡಿಸಿಕೊಳ್ಳಲು ಪ್ರಯತ್ನಿಸುತ್ತಿರುವುದರ ಸ್ಪಷ್ಟ ಸಂಕೇತ. ಆದರೆ, ಈ ಪ್ರಯತ್ನದಲ್ಲಿ ವಿದ್ಯಾರ್ಥಿಗಳು ಸಂತ್ರಸ್ತರಾಗುತ್ತಿದ್ದಾರೆ ಎಂಬುದನ್ನೇ ಸರಕಾರ ಮರೆತಿದೆ.
ದೇಶದ ಎರಡನೇ ರಾಷ್ಟ್ರಪತಿಯಾಗಿದ್ದ ಡಾ. ಎಸ್. ರಾಧಾಕೃಷ್ಣನ್ ಅವರು ಸ್ವತಃ ಶಿಕ್ಷಕರು, ಶಿಕ್ಷಣ ತಜ್ಞರೂ ಆಗಿದ್ದರು. ಅವರು ಹೇಳಿರುವಂತೆ, “ಶಿಕ್ಷಣದ ಅಂತಿಮ ಗುರಿಯು ಮುಕ್ತ ಆಲೋಚನೆಯ ಮನುಷ್ಯನನ್ನು ಸೃಜಿಸುವುದಾಗಿರಬೇಕು. ಈ ಮನುಷ್ಯನು ಐತಿಹಾಸಿಕ ಸನ್ನಿವೇಶಗಳು ಹಾಗೂ ನಿಸರ್ಗದ ಪ್ರತಿಕೂಲಗಳ ವಿರುದ್ಧ ಹೋರಾಡುವವನಾಗಿರಬೇಕು” ಎಂದರು. ಅಲ್ಲಿಗೆ, ಶಿಕ್ಷಣ ಕ್ಷೇತ್ರದಲ್ಲಿ ನಿರಂತರ ಪ್ರವಾಹವನ್ನು ಕಾಯ್ದುಕೊಳ್ಳಬೇಕು ಎಂಬ ಸಂದೇಶವನ್ನು ರಾಧಾಕೃಷ್ಣನ್ ಅವರು ನೀಡಿದ್ದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಐದು ವರ್ಷಕ್ಕೊಮ್ಮೆ ವಿಧಾನಸಭೆ, ಲೋಕಸಭೆ ಚುನಾವಣೆಗಳನ್ನು ನಡೆಸಲಾಗುತ್ತದೆ. ತಮ್ಮ ಅಭಿಪ್ರಾಯಕ್ಕೆ ಮನ್ನಣೆ ನೀಡುವವರನ್ನು ಜನರು ಆಯ್ಕೆ ಮಾಡಲಿ, ತಮಗೆ ಇಷ್ಟ ಇಲ್ಲದವರನ್ನು ಮನೆಗೆ ಕಳಿಸಲಿ ಎಂದು ಮಾಡಿಕೊಂಡಿರುವ ವ್ಯವಸ್ಥೆ. ಹೊಸ ಸರ್ಕಾರ ಬಂದ ಕೂಡಲೆ ವ್ಯವಸ್ಥೆಯನ್ನು ಮತ್ತಷ್ಟು ಸರಳಗೊಳಿಸಬೇಕು. ಹಳೆಯ ವ್ಯವಸ್ಥೆಯಲ್ಲಿರುವಲೋಪದೋಷಗಳನ್ನು, ವ್ಯವಸ್ಥೆಗೆ ಧಕ್ಕೆ ಆಗದಂತೆ ಹೊರತೆಗೆಯಬೇಕು ಎನ್ನುವುದು. ಬಿಜೆಪಿ ಸರ್ಕಾರ ಹೋಗಿ ಕಾಂಗ್ರೆಸ್ ಸರ್ಕಾರ ಬರಬಹುದು, ಮತ್ತೆ ಕಾಂಗ್ರೆಸ್ ಸರ್ಕಾರ ಹೋಗಿ ಬಿಜೆಪಿ ಸರ್ಕಾರ ಅಧಿಕಾರ ಹಿಡಿಯಬಹುದು. ಇಲ್ಲಿ ಬಿಜೆಪಿ, ಕಾಂಗ್ರೆಸ್ ಹಾಗೂ ಯಾವುದೇ ಪಕ್ಷಗಳು ಬದಲಾಗುತ್ತವೆಯೇ ವಿನಃ ಸರ್ಕಾರ ಅಲ್ಲ. ಸರ್ಕಾರ ಎನ್ನುವುದು ನಿರಂತರ ವ್ಯವಸ್ಥೆ. ಒಟ್ಟಾರೆಯಾಗಿ ಅದು ಕರ್ನಾಟಕ ಸರ್ಕಾರ, ಭಾರತ ಸರ್ಕಾರ, ಮಹಾರಾಷ್ಟ್ರ ಸರ್ಕಾರ, ಇತ್ಯಾದಿ ಇತ್ಯಾದಿ. ಪಕ್ಷಗಳೂ ಹೆಸರು ಹೇಳುವುದು, ಸಿಎಂ, ಪಿಎಂ ಇಲ್ಲವೇ ಪಕ್ಷಗಳ ಹೆಸರಿನಲ್ಲಿ ಸರ್ಕಾರವನ್ನು ಸಂಬೋಧಿಸುವುದು ನಮ್ಮ ಅನುಕೂಲಕ್ಕಾಗಿ ಮಾತ್ರ.
ಬಿಜೆಪಿ ಸರ್ಕಾರ ರಚನೆ ಮಾಡಿದ ಕೂಡಲೆ ಅದರ ಕಣ್ಣು ಶಾಲಾ ಮಕ್ಕಳ ಪಠ್ಯಪುಸ್ತಕದ ಮೇಲೆ ಹೋಗುತ್ತದೆ. ಅವರ ವಾದ ಏನು? ಭಾರತದ ಇತಿಹಾಸವನ್ನು ಕಳೆದ 75 ವರ್ಷಗಳಲ್ಲಿ ತಪ್ಪಾಗಿ ಹೇಳಲಾಗಿದೆ. ಅಲೆಕ್ಸಾಂಡರ್, ಅಕ್ಬರ್, ಟಿಪ್ಪುವನ್ನೇ ಮೆರೆಸಲಾಗಿದೆ. ನಮ್ಮದೇ ರಾಜರಾದ ಕೃಷ್ಣದೇವರಾಯ, ಶಿವಾಜಿ, ರಾಣಾ ಪ್ರತಾಪನನ್ನು ಮರೆತಿದ್ದಾರೆ. ಕೇವಲ ಮಹಾತ್ಮ ಗಾಂಧಿ ಸ್ವಾತಂತ್ರ್ಯ ತಂದುಕೊಟ್ಟರು ಎಂದು ಬಿಂಬಿಸಲಾಗಿದೆ. ಕ್ರಾಂತಿಕಾರಿಗಳನ್ನು ಕಡೆಗಣಿಸಲಾಗಿದೆ…. ಹೀಗೆ ಇತಿಹಾಸದಲ್ಲಿ ಆಗಿರುವ ಪ್ರಮಾದಗಳ ದೊಡ್ಡ ಪಟ್ಟಿಯೇ ಬಿಜೆಪಿ ಹಾಗೂ ಅದರ ಚಿಂತಕ ವಲಯದಲ್ಲಿದೆ. ಇದು ಸತ್ಯ ಕೂಡ. ನಮ್ಮ ದೇಶದ ಇತಿಹಾಸವನ್ನು ಮಕ್ಕಳಿಗೆ ತಿಳಿಸಿದರೆ ಅವರಲ್ಲಿ ಸ್ವಾಭಿಮಾನ ಜಾಗೃತಿಯಾಗುತ್ತದೆ. ಅವರು ಯಾವುದೇ ಭ್ರಷ್ಟಾಚಾರ, ಅನಾಚಾರಕ್ಕೆ ಮುಂದಾಗದೆ ದೇಶದ ಏಳಿಗೆಗಾಗಿ ದುಡಿಯುತ್ತಾರೆ. ಆಗ ದೇಶವು ಇಡೀ ವಿಶ್ವದಲ್ಲಿ ಗೌರವಯುತ ಸ್ಥಾನ ಪಡೆಯುತ್ತದೆ. ಇದರಲ್ಲಿ ತಪ್ಪೇನೂ ಇಲ್ಲ.
ಆದರೆ ಶಿಕ್ಷಣ ಎನ್ನುವುದು ಕೇವಲ ಪಠ್ಯಪುಸ್ತಕ ಎಂಬ ತಪ್ಪು ತಿಳುವಳಿಕೆ ಇಲ್ಲಿದೆ. ಸಮಾಜ ವಿಜ್ಞಾನ, ಕನ್ನಡ ಪಠ್ಯಪುಸ್ತಕ ಬದಲು ಮಾಡಿಬಿಟ್ಟರೆ ಇಡೀ ಮಕ್ಕಳ ಮನಸ್ಥಿತಿ ಬದಲಾಗಿಬಿಡುತ್ತದೆ ಎನ್ನುವುದು ಭ್ರಮೆ. ಒಟ್ಟಾರೆ ಶಿಕ್ಷಣ ವ್ಯವಸ್ಥೆಯಲ್ಲಿ ಪಠ್ಯಪುಸ್ತಕವೂ ಒಂದು ಭಾಗ. ಇದರಲ್ಲಿ ಶಾಲಾ ಮೂಲಸೌಕರ್ಯ, ಶಿಕ್ಷಕರ ಗುಣಮಟ್ಟ, ಶಿಕ್ಷಕರ ತರಬೇತಿ, ಮೌಲ್ಯಮಾಪನ ವ್ಯವಸ್ಥೆ, ಬೋಧನಾ ವಿಧಾನ, ಆಟೋಟಗಳಿಗೆ ಪ್ರೋತ್ಸಾಹಕ, ವಿಜ್ಞಾನ ತಿಳಿವಳಿಕೆ… ಹೀಗೆ ಹತ್ತಾರು ವಿಚಾರಗಳು ಸೇರಿ ಒಬ್ಬ ಒಳ್ಳೆಯ, ದೇಶಭಕ್ತ ವಿದ್ಯಾರ್ಥಿ ತಯಾರಾಗುತ್ತಾನೆ. ಈ ಹಿಂದೆ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದಾಗಲೂ ಮಾನವ ಸಂಪನ್ಮೂಲ ಸಚಿವರಾಗಿದ್ದ ಡಾ. ಮುರಳೀಮನೋಹರ ಜೋಶಿ ಅವರು ಪಠ್ಯಪುಸ್ತಕಗಳ ಪರಿಷ್ಕರಣೆಗೆ ಕೈಹಾಕಿದರು. ಆಗ ದೇಶಾದ್ಯಂತ ಕೇಸರೀಕರಣದ ಹುಯಿಲೆಬ್ಬಿಸಲಾಯಿತು. ಆನಂತರ 2004ರಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಬಂದಾಗ, ಬಿಜೆಪಿ ಅವಧಿಯ ಅನೇಕ ಬದಲಾವಣೆಗಳನ್ನು ತೆಗೆದುಹಾಕಿತು. ಆಗ ಬಿಜೆಪಿ ಮತ್ತೆ, ಇದು ಹಿಂದುಗಳನ್ನು ದಮನ ಮಾಡುವ ಕ್ರಿಯೆ ಎಂದು ಬೊಬ್ಬೆ ಹಾಕಿತು.
ಇದೀಗ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸರಳ ಬಹುಮತ ಪಡೆದು ಸ್ಥಾಪನೆಯಾಗಿದೆ. ಯಾವುದೇ ಪಕ್ಷ ಸುಲಭವಾಗಿ ಆಪರೇಷನ್ ಮಾಡಿ ಸರ್ಕಾರವನ್ನು ಬೀಳಿಸಲು ಸಾಧ್ಯವಾಗದಿರುವಷ್ಟು ಸುಭದ್ರ ಸಂಖ್ಯೆಯನ್ನು ಜನರು ಕಾಂಗ್ರೆಸ್ ಪಕ್ಷಕ್ಕೆ ನೀಡಿದ್ದಾರೆ. ಈಗ ಜನರಿಗೆ ಅತ್ಯಗತ್ಯವಾಗಿ ಬೇಕಾದ ಅನೇಕ ವಿಚಾರಗಳತ್ತ ಸರ್ಕಾರ ಗಮನ ಹರಿಸುವ ಅಗತ್ಯವಿದೆ.
ಈಗಾಗಲೆ ಚುನಾವಣೆಯಲ್ಲಿ ಘೋಷಣೆ ಮಾಡಿರುವ ಐದು ಗ್ಯಾರಂಟಿ ಯೋಜನೆಗಳ ಜತೆಗೆ ಒಟ್ಟಾರೆ ಪ್ರಣಾಳಿಕೆಯನ್ನು ಜಾರಿಗೆ ತರಬೇಕಿದೆ. ಪ್ರತಿ ವರ್ಷ ಬಜೆಟ್ ಮಂಡಿಸುವ ಮೂಲಕ ಒಂದೊಂದೇ ಹೆಜ್ಜೆ ರಾಜ್ಯವನ್ನು ಸುಭಿಕ್ಷದೆಡೆಗೆ ಕರೆದೊಯ್ಯಬೇಕಿದೆ. ಇದೆಲ್ಲದರ ನಡುವೆ ಎದುರಾಗುವ ಬರ, ನೆರೆ ಮುಂತಾದ ಪ್ರಕೃತಿ ವಿಕೋಪಗಳಿಗೂ ಸ್ಪಂದಿಸಬೇಕಿದೆ. ಆದರೆ ಕಾಂಗ್ರೆಸ್ ಸರ್ಕಾರ ಇದೆಲ್ಲವನ್ನೂ ಬಿಟ್ಟು ಮತ್ತೆ ಪಠ್ಯಪುಸ್ತಕಕ್ಕೆ ಕೈ ಹಾಕಿದೆ. ಬಿಜೆಪಿ ಅವಧಿಯಲ್ಲಿ ನಡೆಸಿದ ತಿದ್ದುಪಡಿಗಳನ್ನು ಬದಲಾಯಿಸಲು ಮುಂದಾಗಿದೆ. ಯಾರದ್ದೋ ಮೇಲಿನ ದ್ವೇಷವನ್ನು ಪಠ್ಯದ ಮೇಲೆ ತೀರಿಸಲು ಹೊರಟಿದೆ. ಸ್ವಾತಂತ್ರ್ಯ ಹೋರಾಟಗಾರರ ಕುರಿತ ಪಾಠ, ಹಿರಿಯ ವಿದ್ವಾಂಸ ಬನ್ನಂಜೆ ಗೋವಿಂದಾಚಾರ್ಯರು ರಚಿಸಿರುವ ಪಾಠ, ಆರ್ ಎಸ್ ಎಸ್ ಸಂಸ್ಥಾಪಕ ಡಾ. ಕೇಶವ ಬಲಿರಾಮ್ ಹೆಡಗೆವಾರ್ ಅವರ ಭಾಷಣದ ಮೇಲೆ ಕಾಂಗ್ರೆಸ್ ಸರ್ಕಾರದ ಕಣ್ಣು ಬಿದ್ದಿದೆ. ಕಾಂಗ್ರೆಸ್ ಹೇಳುವ ಪ್ರಕಾರ ಈ ಪಠ್ಯಪುಸ್ತಕವನ್ನು ಸರಿಯಾದ ಕ್ರಮದಲ್ಲಿ ಪರಿಷ್ಕರಣೆ ಮಾಡಲಿಲ್ಲ. ಸಮಿತಿಯಲ್ಲಿ ಇದ್ದವರಿಗೆ ಅದಕ್ಕೆ ತಕ್ಕ ಅರ್ಹತೆ ಇರಲಿಲ್ಲ, ಒಟ್ಟಾರೆ ಪಠ್ಯಪುಸ್ತಕ ಪರಿಷ್ಕರಣೆಗೆ ಸರ್ಕಾರ ಆದೇಶವನ್ನೇ ನೀಡಿಲ್ಲ ಎಂಬಂತಹ ವಾದಗಳನ್ನು ಮುಂದಿಡಲಾಗುತ್ತಿದೆ. ಚಿಂತಕರು ಎಂದು ಹೇಳಿಕೊಂಡ, ಎಡ ಪರ, ಕಾಂಗ್ರೆಸ್ ಪರ ಸಾಹಿತಿಗಳ ನಿಯೋಗವೊಂದು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಪಠ್ಯಪುಸ್ತಕ ಪರಿಷ್ಕರಣೆಯನ್ನು ಕೈಬಿಡಲು ಮನವಿ ಮಾಡಿದೆ.
ಈಗಾಗಲೆ ಚುನಾವಣೆ ಪ್ರಣಾಳಿಕೆಯಲ್ಲೂ ಕಾಂಗ್ರೆಸ್ ಈ ವಿಷಯವನ್ನು ಹೇಳಿರುವುದರಿಂದ ಅದಕ್ಕೆ ಬದ್ಧವಾಗಿರುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ ಇಲ್ಲಿರುವ ಪ್ರಶ್ನೆ, ಇಷ್ಟೆಲ್ಲ ರಾದ್ಧಾಂತದ ನಂತರ ಶಾಲೆಯಲ್ಲಿ ಪಾಠ ಓದುವ ಮಕ್ಕಳ ಪಾಡೇನು? ಇಂತಹ ಪಾಠವನ್ನು ಈ ಬಾರಿ ಮೌಲ್ಯಮಾಪನಕ್ಕೆ ಪರಿಗಣನೆ ಮಾಡುವುದಿಲ್ಲ ಎಂದು ತಿದ್ದೋಲೆಯನ್ನು ಸರ್ಕಾರ ಕಳಿಸಬಹುದು. ಆಗ ಶಿಕ್ಷಕರು ಆ ಪಾಠವನ್ನು ಬೋಧನೆ ಮಾಡುವುದಿಲ್ಲ. ಆದರೆ ಆ ಪಾಠ ವಿದ್ಯಾರ್ಥಿಯ ಪುಸ್ತಕದಲ್ಲಿ ಆ ಪಾಠ ಹಾಗೆಯೇ ಇರುತ್ತದೆ ಅಲ್ಲವೇ? ಮೌಲ್ಯಮಾಪನ ಮಾಡದಿದ್ದ ಮಾತ್ರಕ್ಕೆ, ಶಿಕ್ಷಕರು ಬೋಧಿಸದ ಮಾತ್ರಕ್ಕೆ ವಿದ್ಯಾರ್ಥಿಗಳು ಆ ಪಾಠವನ್ನು ಓದುವುದನ್ನು ತಡೆಯಲು ಆಗುತ್ತದೆಯೇ? ಸ್ವಾತಂತ್ರ್ಯ ಹೋರಾಟಗಾರರ ಕುರಿತು ಇಂತಹ ಒಳ್ಳೆಯ ಪಾಠವನ್ನು ಸರ್ಕಾರ ಏಕೆ ನಿಷೇಧ ಮಾಡಿದೆ? ಎಂದು ವಿದ್ಯಾರ್ಥಿಗೆ ಅನ್ನಿಸುವುದಿಲ್ಲವೇ? ಆಗ ಸರ್ಕಾರದ ಬಗ್ಗೆ ಆತನಿಗೆ ಯಾವ ಅಭಿಪ್ರಾಯ ಬರಬಹುದು? ಇಂತಹ ಸೂಕ್ಷ್ಮ ಸಂಗತಿಗಳನ್ನೂ ಆಳುವವರು ಗಮನದಲ್ಲಿ ಇರಿಸಿಕೊಳ್ಳಬೇಕು. ಏಕೆಂದರೆ ರಾಧಾಕೃಷ್ಣನ್ ಅವರು ಹೇಳಿದಂತೆ ಶಿಕ್ಷಣ ಎನ್ನುವುದು ಮನುಷ್ಯನನ್ನು ಸೃಜನಶೀಲನನ್ನಾಗಿಸಬೇಕೆ ಹೊರತು ಈ ರೀತಿ ಒಟ್ಟಾರೆ ವ್ಯವಸ್ಥೆಯ ಮೇಲೆಯೇ ಅನುಮಾನವನ್ನು ಹುಟ್ಟುಹಾಕುವುದಲ್ಲ.
ಇದನ್ನೂ ಓದಿ: ವಿಸ್ತಾರ ಅಂಕಣ: ವಿದೇಶದಲ್ಲಿ ಕಾಲಿಟ್ಟ ತಕ್ಷಣ ರಾಹುಲ್ ಗಾಂಧಿ ಭಾರತ ವಿರೋಧಿ ಆಗುವುದೇಕೆ?
ಈ ಹಿಂದೆ ಬಿಜೆಪಿ ಸರ್ಕಾರ ಮಾಡಿದ ತಪ್ಪನ್ನು ಈಗಿನ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಾಡಲಿಲ್ಲ. ಕೇವಲ ಪಠ್ಯಪುಸ್ತಕ ಪರಿಷ್ಕರಣೆಯಿಂದ ಯಾವ ಉದ್ದೇಶವೂ ಈಡೇರುವುದಿಲ್ಲ ಎನ್ನುವುದು ಆ ಪಕ್ಷದ ಅರಿವಿಗೆ ಬಂದಿತ್ತು. ಹಾಗಾಗಿ ಒಟ್ಟಾರೆ ಶಿಕ್ಷಣ ವ್ಯವಸ್ಥೆಯನ್ನೇ ಆಮೂಲಾಗ್ರವಾಗಿ ಬದಲಾವಣೆ ಮಾಡುವ ನಿಟ್ಟಿನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತರಲು ಆರಂಭಿಸಿದೆ. ಹಂತಹಂತವಾಗಿ ಸುಮಾರು 10 ವರ್ಷದಲ್ಲಿ ಈ ಯೋಜನೆ ಜಾರಿಯಾದಾಗ ಒಟ್ಟಾರೆ ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ ಆಗಬೇಕು ಎನ್ನುವುದು ನಿರೀಕ್ಷೆ.
ಈಗಂತೂ ಶಾಲೆಗಳು ಆರಂಭವಾಗಿವೆ. ಪ್ರಸಕ್ತ ವರ್ಷದಲ್ಲಿ ಪಾಠ ಪ್ರವಚನಗಳು ಎಂದಿನಂತೆ ನಡೆಯಲಿ. ಮುಖ್ಯವಾಗಿ ರಾಜ್ಯದ ಅನೇಕ ಸರ್ಕಾರಿ ಶಾಲೆಗಳು ಕಟ್ಟಡಗಳು ಬೀಳುವ ಹಂತದಲ್ಲಿವೆ. ವಿದ್ಯಾರ್ಥಿಗಳು ಕಿಲೋಮೀಟರ್ ಗಟ್ಟಲೆ ನಡೆದೇ ಶಾಲೆಗೆ ಹೋಗುತ್ತಿದ್ದಾರೆ. ಶಿಕ್ಷಕರ ಹತ್ತಾರು ಬೇಡಿಕೆಗಳನ್ನು ಈಡೇರಿಸಬೇಕಿದೆ. ಶಿಕ್ಷಕರ ತರಬೇತಿಯತ್ತಲೂ ಗಮನ ನೀಡಬೇಕಿದೆ. ಬೇಕಿದ್ದರೆ ಪಠ್ಯಪುಸ್ತಕ ಪರಿಷ್ಕರಣೆಗೊಂದು ತಜ್ಞರ ಸಮಿತಿಯನ್ನು ರಚನೆ ಮಾಡಿ ಕೆಲಸ ಆರಂಭಿಸಲಿ. ಅವರು ಈ ವರ್ಷದ ಅಂತ್ಯಕ್ಕೆ ವರದಿ ನೀಡಿ, ಆ ವರದಿಯ ಅನುಷ್ಠಾನದ ಕುರಿತು ಸರ್ಕಾರ ನಿರ್ಧಾರ ಮಾಡಲಿ. ಮುಂದಿನ ವರ್ಷದಿಂದ ಹೊಸ ಪಠ್ಯಕ್ರಮಕ್ಕೆ ತೆರೆದುಕೊಳ್ಳಬಹುದು. ಅದನ್ನು ಬಿಟ್ಟು, ಯಾವುದೋ ಒಂದು ಗುಂಪನ್ನು ಮೆಚ್ಚಿಸುವ ಸಲುವಾಗಿ ಹಾಗೂ ಸರ್ಕಾರದ ಮೇಲಿನ ಗಮನವನ್ನು ಬೇರೆಡೆ ಸೆಳೆಯಲು ದಿನಬೆಳಗಾದರೆ ಪಠ್ಯಪುಸ್ತಕ ಪರಿಷ್ಕರಣೆಯ ಮಾತನ್ನು ಸರ್ಕಾರದ ಭಾಗವಾಗಿರುವವರು ನಿಲ್ಲಿಸುವುದು ಒಳ್ಳೆಯದು. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ, ಸಮಾಜ ಸುಧಾರಣೆಗೆ ಶ್ರಮಿಸಿದವರನ್ನು ರಾಜಕಾರಣ ಹಾಗೂ ಸ್ವಾರ್ಥಕ್ಕಾಗಿ ಅವಮಾನಿಸುವುದಕ್ಕೆ ಅಂತ್ಯ ಹಾಡುವ ಕೆಲಸ ಕಾಂಗ್ರೆಸ್ ಸರ್ಕಾರದಿಂದಲೇ ಆರಂಭವಾಗಲಿ.
ಇದನ್ನೂ ಓದಿ: ವಿಸ್ತಾರ ಅಂಕಣ: ಗ್ಯಾರಂಟಿ ಮರೆಮಾಚಲು ʼಗೋಹತ್ಯೆʼ ಗುರಾಣಿಯಾಗಬೇಕೆ?
ಕಡೆಯದಾಗಿ ನೆಹರು ಅವರು ಬರೆದಿರುವ ಮೊಘಲ್ ಚಕ್ರಾಧಿಪತ್ಯದ ಸಾಲುಗಳಿಗೆ ಮರಳೋಣ. ಅವರು ಹೇಳಿದರೆ, ನಾನು ಹಾಗೂ ನನ್ನ ವಯಸ್ಸಿನ(35ರಿಂದ 45) ತಲೆಮಾರು ಬಾಬರ್ ನಿಂದ ಔರಂಗಬೇಬ್ ವರೆಗೆ ಎಲ್ಲರನ್ನೂ ಓದಿದ್ದೇವೆ. ಅವರ ಚಿತ್ರಪಟುಗಳು ನಮ್ಮ ಸ್ಮೃತಿಪಟಲದಲ್ಲಿವೆ. ಆದರೆ, ಕೃಷ್ಣದೇವರಾಯ, ಶಿವಾಜಿ, ರಾಣಾ ಪ್ರತಾಪ ಬಗ್ಗೆ ನಾವು ಓದಿದ್ದು ಕಡಿಮೆ. ಅಂತೆಯೇ ನಮ್ಮ ರಾಜ್ಯದಲ್ಲೂ ಟಿಪ್ಪು, ಹೈದರಾಲಿ ಬಗ್ಗೆ ಓದಿದಷ್ಟು ನಾಲ್ವಡಿ, ಮುಮ್ಮಡಿ ಒಡೆಯರ್ ಬಗ್ಗೆ ಓದಿದ್ದು ಕಡಿಮೆ. ಏಕೆಂದರೆ, ಪಠ್ಯ ಪುಸ್ತಕದ ಮೇಲೆ ಬಹಳಷ್ಟು ವರ್ಷಗಳ ಕಾಲ ಎಡಪಂಥೀಯ ಸಿದ್ಧಾಂತವಾದಿಗಳ ಹಿಡಿತವಿತ್ತು. ಅವರು ಎಲ್ಲವನ್ನೂ ತಮ್ಮ ಸಿದ್ಧಾಂತಕ್ಕೆ ಅನುಗುಣವಾಗಿಯೇ ರೂಪಿಸಿದರು. ಬಳಿಕ ಬಂದ ಬಿಜೆಪಿ ಸರಕಾರ, ಈ ಪ್ರಮಾದವನ್ನು ಸರಿಪಡಿಸುತ್ತಲೇ, ತನಗಿಷ್ಟವಾದ ಸಿದ್ಧಾಂತವನ್ನು ಮೆರೆಸಲು ಯತ್ನಿಸಿತು. ಪ್ರಮಾಣದಲ್ಲಿ ವ್ಯತ್ಯಾಸವಿದ್ದರೂ ಈ ಎರಡೂ ತಪ್ಪೇ.
ಹಾಗಾಗಿ, ಪಠ್ಯ ಪುಸ್ತಕ ಪರಿಷ್ಕರಣೆಯ ಜವಾಬ್ದಾರಿಯನ್ನು. ಆಯಾ ಕಾಲದ ರಾಜಕೀಯ ಪಕ್ಷಗಳ ಸಿದ್ಧಾಂತವಾದಿಗಳಿಗೆ ಒಪ್ಪಿಸುವ ಬದಲು . ಚಿಂತನೆಯ ಸಂಸ್ಥೆಗೆ ಒಪ್ಪಿಸುವ ಅಗತ್ಯವಿದೆ. ಇದಕ್ಕಾಗಿ ಸರಕಾರ ರಾಜಕಿಯೇತರವಾದ ಒಂದು ಶಾಶ್ವತ ಸಾಂವಿಧಾನಿಕ ಸಂಸ್ಥೆಯನ್ನು ಹುಟ್ಟುಹಾಕಿದರೂ ತಪ್ಪಲ್ಲ. ಯಾವುದೇ ಪಂಥಕ್ಕೆ ಅಂಟಿಕೊಳ್ಳದ, ವೃತ್ತಿಪರವಾಗಿ ಆಲೋಚಿಸುವ ದೊಡ್ಡ ಮಾನವ ಸಂಪನ್ಮೂಲ ಭಾರತದಲ್ಲಿ ಇದೆ. ಅವರನ್ನು ದುಡಿಸಿಕೊಳ್ಳುವ ಜರೂರತ್ತೂ ಇದೆ.
ಇದನ್ನೂ ಓದಿ: ವಿಸ್ತಾರ ಅಂಕಣ: ಜನಕಲ್ಯಾಣದ ಕನಸಿಗೆ ಕಾರ್ಯಾಂಗವೂ ಕೈ ಜೋಡಿಸಲಿ
ಅಂಕಣ
ರಾಜಮಾರ್ಗ ಅಂಕಣ: ಇವರ ಬದುಕು ಒಂದು ಥ್ರಿಲ್ಲರ್ ಸಿನೆಮಾಗಿಂತ ರೋಚಕ ಆಗಿದೆ!
ಸಾವು ಬದುಕಿನ ಹೋರಾಟವನ್ನು ನಡೆಸುವ ವೃತ್ತಿಗೆ ನಾನು ಅನಿವಾರ್ಯವಾಗಿ ಬಂದಾಗಿತ್ತು. ಒಬ್ಬ ಸಾಮಾನ್ಯ ಹುಡುಗಿ ಆಗಿದ್ದ ನಾನು ಸ್ಟಂಟ್ ಹುಡುಗಿ ಆದ ಕತೆ ಅದು. ಧೈರ್ಯ ಮಾತ್ರ ನನಗೆ ಅಂದು ಬಂಡವಾಳ ಆಗಿತ್ತು. ನನ್ನಲ್ಲಿ ಫೈಟಿಂಗ್ ಸ್ಪಿರಿಟ್ ಇದೆ ಅಂತ ನನಗೆ ಗೊತ್ತಿತ್ತು. ಆದರೆ ನನಗೆ ಸ್ಟಂಟ್ ಮಾಡಲು ಯಾವುದೇ ವೃತ್ತಿಪರ ತರಬೇತಿ ಕೂಡ ಆಗಿರಲಿಲ್ಲ.
ಇವರ ಬದುಕು ಯಾವ ಥ್ರಿಲ್ಲರ್ ಸಿನೆಮಾದ ಕಥೆಗಿಂತ ಕಡಿಮೆ ಇಲ್ಲ ಅನ್ಸುತ್ತೆ! ಒಬ್ಬ ಸಾಮಾನ್ಯರಲ್ಲಿ ಸಾಮಾನ್ಯರಾದ ಈ ‘ಸಲ್ವಾರ್ ಕಮೀಜ್’ ಹುಡುಗಿಯು ಇಂದು ಬಾಲಿವುಡ್ ಸಿನೆಮಾರಂಗದಲ್ಲಿ ಲೀಡ್ ಸ್ಟಂಟ್ ಹುಡುಗಿಯಾಗಿ ಬೆಳೆದದ್ದು ನಿಜಕ್ಕೂ ಅದ್ಭುತವೇ ಸರಿ.
ಆಕೆ ಗೀತಾ ಟಂಡನ್ – ಬಾಲಿವುಡ್ ಸಿನೆಮಾ ರಂಗದ ಲೀಡ್ ಸ್ಟಂಟ್ ವುಮನ್.
ನಾವು ಸಿನೆಮಾ ನೋಡುವಾಗ ಹೀರೋ ಅಥವಾ ಹೀರೋಯಿನ್ ಎತ್ತರದ ಬಿಲ್ಡಿಂಗ್ ಮೇಲಿಂದ ಕೆಳಗೆ ಹಾರುವಾಗ, ಫೈಟ್ ಮಾಡುವಾಗ, ಗ್ಲಾಸು ಒಡೆದು ಹಾರುವಾಗ, ವೇಗವಾಗಿ ಬೈಕ್ ಅಥವಾ ಕಾರನ್ನು ಓಡಿಸುವಾಗ, ಬೆಂಕಿಯ ಕೆನ್ನಾಲಿಗೆಯ ಮೂಲಕ ಹಾರುವಾಗ ಶಿಳ್ಳೆ ಹೊಡೆದು ಖುಷಿಪಡುತ್ತೇವೆ. ಆದರೆ ತೆರೆಯ ಹಿಂದೆ ಆ ಸಾಹಸವನ್ನು ಮಾಡುವವರು ಬೇರೆ ಯಾರೋ ಆಗಿರುತ್ತಾರೆ. ಜೀವದ ಹಂಗು ತೊರೆದು ಅವರು ಈ ಸಾಹಸಗಳನ್ನು ಮಾಡುತ್ತಾರೆ. ಅವರನ್ನು ‘ಸ್ಟಂಟ್ ಮಾಸ್ಟರ್’ ಅನ್ನುತ್ತಾರೆ. ಇದೀಗ ಈ ಕ್ಷೇತ್ರದಲ್ಲಿ ಒಬ್ಬಳು ಮಹಿಳೆಯು ದೊಡ್ಡ ಸುದ್ದಿ ಮಾಡುತ್ತಿದ್ದಾರೆ. ಅವರೇ ಇಂದಿನ ಕಥಾ ನಾಯಕಿ ಗೀತಾ ಟಂಡನ್!
ಆಕೆಯ ಕಥೆಯನ್ನು ಆಕೆಯ ಬಾಯಿಂದ ಕೇಳುವುದೇ ಒಳ್ಳೆಯದು. ಓವರ್ ಟು ಗೀತಾ.
ನನಗೂ ಬ್ರಹ್ಮಾಂಡ ಕನಸುಗಳು ಇದ್ದವು
ನಾನು ಹುಟ್ಟಿದ್ದು ಮುಂಬೈಯ ಒಂದು ಸಾಮಾನ್ಯವಾದ ಕುಟುಂಬದಲ್ಲಿ. ನನಗೂ ದೊಡ್ಡ ದೊಡ್ಡ ಕನಸುಗಳು ಇದ್ದವು. ನನಗೆ ನಾಲ್ಕು ಜನ ಒಡಹುಟ್ಟಿದವರು. 7ನೆಯ ವರ್ಷಕ್ಕೆ ನನ್ನ ಅಮ್ಮ ತೀರಿದರು. 10ನೆಯ ವರ್ಷದಲ್ಲಿ ಅಪ್ಪ ಸತ್ತರು. ನನ್ನ ಚಿಕ್ಕಪ್ಪ ನನ್ನನ್ನು 10ನೇ ತರಗತಿಯವರೆಗೆ ಓದಿಸಿದರು. ನನಗೆ 14ನೆಯ ವರ್ಷಕ್ಕೆ ಬದುಕು ಅರ್ಥ ಆಗುವ ಮೊದಲೇ ಮದುವೆ ಆಗಿ ಹೋಯಿತು. ಅಲ್ಲಿಂದ ನನಗೆ ದಿನವೂ ನರಕ ದರ್ಶನವೆ ಆರಂಭ ಆಯಿತು.
ನನ್ನ ಗಂಡ ಅನ್ನಿಸಿಕೊಂಡವನು ಮಹಾಕುಡುಕ ಮತ್ತು ಲಂಪಟ. ಅತ್ತೆ ಮಹಾ ಕ್ರೂರಿ. ಕೈ ಹಿಡಿದ ಗಂಡ ದಿನವೂ ನನ್ನನ್ನು ಹೊಡೆದು, ಬಡಿದು ದೌರ್ಜನ್ಯ ಮಾಡಿ ‘ ನಾನು ಗಂಡಸು’ ಎಂದು ಪ್ರೂವ್ ಮಾಡುತ್ತಿದ್ದ. ಅತ್ತೆಯಂತು ಯಾವಾಗಲೂ ತನ್ನ ಮಗನಿಗೆ ಸಪೋರ್ಟ್ ಆಗಿ ನಿಂತು ಬಿಡುತ್ತಿದ್ದರು. “ಹೋಗು, ನಿನ್ನ ಹೆಂಡತಿಯ ಮೇಲೆ ಬಲಾತ್ಕಾರ ಮಾಡು” ಎಂದು ಹೇಳೋರು!
ನಾನು ಏನು ಮಾಡಬಹುದಿತ್ತು?
ಪೋಲಿಸ್ ಸ್ಟೇಷನ್ನಿಗೆ ಒಮ್ಮೆ ದೂರು ಕೊಡಲು ಹೋಗಿದ್ದೆ.
ಪೊಲೀಸರು ” ಹೋಗಮ್ಮ ಹೋಗು. ಇದು ಗಂಡ ಹೆಂಡತಿ ಜಗಳ. ಇವತ್ತು ನೀವು ಹೊಡೆದಾಡುತ್ತೀರಿ. ನಾಳೆ ಒಂದಾಗುತ್ತೀರಿ. ಸದ್ಯಕ್ಕೆ ನಿನ್ನ ಅಕ್ಕನ ಮನೆಗೆ ಹೋಗು” ಅಂದಿದ್ದರು. ಅಕ್ಕನ ಮನೆಗೆ ಹೋದರೆ ತಿರಸ್ಕಾರದ ಭಾವನೆಯಿಂದ ಉಸಿರು ಕಟ್ಟಿತು. ಅಲ್ಲಿಂದ ಮತ್ತೆ ಗಂಡನ ಮನೆಗೆ ಬಂದಾಗ ಹಿಂಸೆ ಮತ್ತೂ ಹೆಚ್ಚಾಯಿತು. ನಾನು ಇಷ್ಟ ಪಡದೇ ಎರಡು ಮಕ್ಕಳು ಬಂದು ನನ್ನ ಮಡಿಲಲ್ಲಿ ಕೂತವು! ನಾನು ಬೇರೆ ಏನು ಮಾಡಲು ಸಾಧ್ಯವಿತ್ತು?
ನಾನು ಜೀವ ಉಳಿಸಿಕೊಳ್ಳಲು ಮನೆ ಬಿಟ್ಟು ಓಡಿದ್ದೆ!
ಒಂದು ದಿನ ನನ್ನ ಗಂಡ ಕುಡಿದು ಬಂದು ನನ್ನ ಜುಟ್ಟು ಹಿಡಿದು ಹೊಡೆಯಲು ತೊಡಗಿದ್ದ. ಆಗ ಪ್ರಾಣವನ್ನು ಉಳಿಸಲು ನನ್ನ ಎರಡು ಪುಟ್ಟ ಮಕ್ಕಳನ್ನು ಗಟ್ಟಿಯಾಗಿ ಹಿಡಿದು ಓಡಲು ತೊಡಗಿದೆ. ಬೀದಿಯಲ್ಲಿ ನಿಂತವರು ಎಲ್ಲರೂ ನನ್ನನ್ನು ನೋಡುವರೆಂದು ನನಗೆ ಗೊತ್ತಿತ್ತು. ಆದರೆ ನನಗೆ ನನ್ನ ಮಕ್ಕಳ ಪ್ರಾಣವನ್ನು ಉಳಿಸುವುದು ಮುಖ್ಯ ಆಗಿತ್ತು. ರಸ್ತೆ ಬದಿಯಲ್ಲಿ ಮಲಗಲು ಭಯ. ಕೊನೆಗೆ ಒಂದು ಗುರುದ್ವಾರದಲ್ಲಿ ಮಲಗುವ ವ್ಯವಸ್ಥೆ ಆಯಿತು. ಆಗ ನನಗೆ ಕೇವಲ 20 ವರ್ಷ!
ಒಬ್ಬ ಗೆಳತಿಯು ನನ್ನ ಸಹಾಯಕ್ಕೆ ಬಂದಳು. ” ಒಂದು ಕೆಲ್ಸ ಇದೆ ಗೀತಾ. ಮಾಡ್ತೀಯಾ? ” ಅಂದಳು.
“ನನ್ನ ಮಕ್ಕಳಿಗಾಗಿ ಯಾವ ಕೆಲಸವನ್ನು ಬೇಕಾದರೂ ಮಾಡುತ್ತೇನೆ” ಎಂದು ಚೀರಿ ಹೇಳಿದ್ದೆ. ಕೇವಲ ಎಸೆಸೆಲ್ಸಿ ಕಲಿತ ನನಗೆ ಯಾರು ಕೆಲಸ ಕೊಡುತ್ತಾರೆ? ಹಸಿವು, ಹತಾಶೆ ಎರಡೂ ಜೊತೆಗೆ ಸೇರಿ ನಾನು ದೊರೆತ ಯಾವ ಕೆಲಸವನ್ನು ಬೇಕಾದರೂ ಮಾಡಲು ಸಿದ್ಧ ಎಂದಿದ್ದೆ. ಸ್ವಾಭಿಮಾನದ ಬದುಕು ಕಟ್ಟುವುದು ನನಗೆ ಮುಖ್ಯವಾಗಿತ್ತು. ಆತ್ಮಹತ್ಯೆಯನ್ನು ಮಾಡುವ ಯೋಚನೆ ಬಂದಾಗಲೆಲ್ಲ ಮಕ್ಕಳ ಮುಖ ನೋಡುತ್ತಿದ್ದೆ. ಆಗ ಆತ್ಮಹತ್ಯೆಯ ಯೋಚನೆ ಮರೆತುಹೋಗ್ತಿತ್ತು.
ನಾನು ಆರಿಸಿಕೊಂಡದ್ದು ಸ್ಟಂಟ್ ಮಾಸ್ಟರ್ ವೃತ್ತಿ!
ಸಾವು ಬದುಕಿನ ಹೋರಾಟವನ್ನು ನಡೆಸುವ ವೃತ್ತಿಗೆ ನಾನು ಅನಿವಾರ್ಯವಾಗಿ ಬಂದಾಗಿತ್ತು. ಒಬ್ಬ ಸಾಮಾನ್ಯ ಹುಡುಗಿ ಆಗಿದ್ದ ನಾನು ಸ್ಟಂಟ್ ಹುಡುಗಿ ಆದ ಕತೆ ಅದು. ಧೈರ್ಯ ಮಾತ್ರ ನನಗೆ ಅಂದು ಬಂಡವಾಳ ಆಗಿತ್ತು. ನನ್ನಲ್ಲಿ ಫೈಟಿಂಗ್ ಸ್ಪಿರಿಟ್ ಇದೆ ಅಂತ ನನಗೆ ಗೊತ್ತಿತ್ತು. ಆದರೆ ನನಗೆ ಸ್ಟಂಟ್ ಮಾಡಲು ಯಾವುದೇ ವೃತ್ತಿಪರ ತರಬೇತಿ ಕೂಡ ಆಗಿರಲಿಲ್ಲ. ಮೊದಲು ಬೈಕ್,ಕಾರ್ ಅತ್ಯಂತ ವೇಗವಾಗಿ ಓಡಿಸುವುದನ್ನು ಕಲಿತೆ. ಮಾರ್ಷಿಯಲ್ ಆರ್ಟ್ ಕಲಿತೆ. ಫಿಸಿಕಲ್ ಫಿಟ್ನೆಸ್ ತಂತ್ರಗಳನ್ನು ಕಲಿತೆ. ಹಸಿವು ನನಗೆ ಎಲ್ಲವನ್ನೂ ಕಲಿಸಿತು. ಹಲವು ಸಿನೆಮಾ ಮಂದಿಯ ಪರಿಚಯ ಆಯಿತು. ಖ್ಯಾತ ನಿರ್ದೇಶಕ ರೋಹಿತ್ ಶೆಟ್ಟಿ ನನಗೆ ದೇವರಂತೆ ಅವಕಾಶಗಳನ್ನು ಕೊಟ್ಟರು. ನನ್ನ ಬದುಕಿನಲ್ಲಿ ನಾನು ತಿಂದ ಪೆಟ್ಟುಗಳು ನನ್ನನ್ನು ಗಟ್ಟಿ ಮಾಡಿದವು.
ಹೆಜ್ಜೆ ಹೆಜ್ಜೆಗೂ ಅಪಾಯ, ಪ್ರಾಣ ಭಯ
ನಾನೀಗ ನಿತ್ಯ ಮಾಡುತ್ತಿರುವುದು ತುಂಬಾ ಅಪಾಯದ ಕೆಲಸ! ಹಲವು ಬಾರಿ ನನಗೆ ಗಾಯ ಆಗಿದೆ. ಎಲುಬು ಮುರಿದಿದೆ. ಲಡಾಕ್ ಶೂಟಿಂಗ್ ಹೊತ್ತಿಗೆ ಬೆಂಕಿಯ ನಡುವಿಂದ ಹಾರುವಾಗ ನನ್ನ ಮುಖ, ಅರ್ಧ ದೇಹ ಸುಟ್ಟು ಹೋಗಿತ್ತು. ಆದರೆ ಬದುಕಿ ಬಂದೆ! ದೀಪಿಕಾ ಪಡುಕೋಣೆ, ಕತ್ರೀನಾ ಕೈಫ್, ಪರಿಣಿತಾ ಚೋಪ್ರ, ಬಿಪಾಶಾ ಬಸು, ಐಶ್ವರ್ಯ ರೈ ಇವರಿಗೆಲ್ಲ ಸ್ಟಂಟ್ ಮಾಡಿದ್ದೇನೆ. ಚೆನ್ನೈ ಎಕ್ಸಪ್ರೆಸ್, ಸಿಂಗ್ ಸಾಬ್ ಗ್ರೇಟ್, ಹಸೀ ತೋ ಫಸೀ, ಲಮ್ಹಾ, ರಾಗಿಣಿ ಎಂಎಂಎಸ್……….. ಮೊದಲಾದ ಹಲವು ಸಿನೆಮಾಗಳಲ್ಲಿ ಫೈಟ್ ಕಂಪೋಸ್ ಮಾಡಿದ್ದೇನೆ. ಮೊದಲೆಲ್ಲ ಫೈಟ್ ಮಾಡುವಾಗ ಭಯ ಆಗುತಿತ್ತು. ಆದರೆ ಈಗ ನಾನೊಬ್ಬ ವೃತ್ತಿನಿರತ ಸ್ಟಂಟ್ ವುಮನ್!
ಕಲರ್ಸ್ ಟಿವಿ ವಾಹಿನಿಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ಆದ ‘ಖತರೊಂ ಕಾ ಖಿಲಾಡಿ’ ಯಲ್ಲಿ ಭಾಗವಹಿಸಿ ನಾನು ಬಹುಮಾನ ಗೆದ್ದಿದ್ದೆ. ಆಗ ನನ್ನ ಫೈಟಿಂಗ್ ಸಾಮರ್ಥ್ಯವನ್ನು ಇಡೀ ದೇಶವೇ ನೋಡಿತು.
ಇದನ್ನೂ ಓದಿ: ರಾಜಮಾರ್ಗ ಅಂಕಣ: ಗಣಿತ ಕಲಿಸಿದ ಜೀವನದ ಪಾಠ – ಎಲ್ಲ ಸಮಸ್ಯೆಗಳಿಗೂ ಪರಿಹಾರ ಇದೆ!
ಇಂದು ನಾನೊಬ್ಬ ಸ್ವಾವಲಂಬಿ ಮಹಿಳೆ ಆಗಿದ್ದೇನೆ. ಮುಂಬೈಯಲ್ಲಿ ಸ್ವಂತ ಮನೆ ಇದೆ. ಮಕ್ಕಳು ಶಾಲೆಗೆ ಹೋಗುತ್ತಿದ್ದಾರೆ. ನನಗೀಗ ನನ್ನದೇ ಆದ ಕನಸುಗಳಿವೆ.
ಭರತ ವಾಕ್ಯ
‘ಯಾವುದೇ ಹೆಣ್ಣು ಮಕ್ಕಳು ಜೀವನದಲ್ಲಿ ಸೋಲನ್ನು ಒಪ್ಪಿಕೊಳ್ಳಬೇಡಿ. ಕೊನೆಯ ಕ್ಷಣದವರೆಗೂ ಎದ್ದು ನಿಂತು ಹೋರಾಡಿ. ಆಗ ಮಾತ್ರ ನಿಮ್ಮ ಬದುಕಿನಲ್ಲಿ ಬಣ್ಣ ಬಣ್ಣದ ಕಾಮನಬಿಲ್ಲು ಮೂಡುವುದು’ ಎಂದು ಆಕೆ ಹೇಳುವಾಗ ಅವರ ಕಣ್ಣಲ್ಲಿ ಗೆದ್ದ ಖುಷಿ ಇತ್ತು!
ಅಂದ ಹಾಗೆ ಗೀತಾ ಅವರಿಗೆ ಈಗ 37 ವರ್ಷ!
-
ಪ್ರಮುಖ ಸುದ್ದಿ1 hour ago
Horoscope Today: ಈ ರಾಶಿಯವರ ಕುಟುಂಬದಲ್ಲಿ ಭಿನ್ನಾಭಿಪ್ರಾಯ ಮೂಡುವ ಸಾಧ್ಯತೆ, ಎಚ್ಚರ ಇರಲಿ!
-
ಅಂಕಣ24 hours ago
ವಿಸ್ತಾರ ಅಂಕಣ: ಪಠ್ಯ ಪುಸ್ತಕ ಪರಿಷ್ಕರಣೆ ಎಂದರೆ ಮಕ್ಕಳ ಆಟ ಎಂದುಕೊಂಡಿದೆಯೇ ಸರ್ಕಾರ?
-
ಕ್ರಿಕೆಟ್21 hours ago
Viral News: ಲಬುಶೇನ್ರನ್ನು ನಿದ್ರೆಯಿಂದ ಬಡಿದೆಬ್ಬಿಸಿದ ಸಿರಾಜ್; ಸಖತ್ ಮಜವಾಗಿದೆ ವಿಡಿಯೊ
-
ಕ್ರಿಕೆಟ್20 hours ago
Viral News: ಶುಭಮನ್ ಗಿಲ್ಗೆ ಪ್ರಪೋಸ್ ಮಾಡಿದ ಯುವತಿ; ಸಾರಾ ತೆಂಡೂಲ್ಕರ್ ರಿಯ್ಯಾಕ್ಷನ್ ಹೇಗಿತ್ತು?
-
ದೇಶ17 hours ago
Tipu Sultan: ಬುಲ್ಡೋಜರ್ ಮೂಲಕ ಟಿಪ್ಪು ಸುಲ್ತಾನ್ ಸ್ಮಾರಕ ನೆಲಸಮ, ವ್ಯಾಪಕ ಬಂದೋಬಸ್ತ್
-
ಕ್ರಿಕೆಟ್18 hours ago
WTC Final 2023: ರದ್ದಾಗುವ ಭೀತಿಯಲ್ಲಿದೆ ವಿಶ್ವ ಟೆಸ್ಟ್ ಫೈನಲ್ ಪಂದ್ಯ!
-
ಕರ್ನಾಟಕ16 hours ago
BY Vijayendra: ಧರಣಿ ಕುಳಿತ ಶಾಸಕ ಬಿ.ವೈ. ವಿಜಯೇಂದ್ರ! ತಾರಕಕ್ಕೇರಿದ ಮರ ಸಾಗಾಟ ಗಲಾಟೆ
-
South Cinema18 hours ago
Adipurush Movie: ಮುಟ್ಟಾದವರು ಆದಿಪುರುಷ್ ಸಿನ್ಮಾ ನೋಡೋದು ಬೇಡ! ರಾಹುಕಾಲದಲ್ಲಿ ಶೋ ಬೇಡ್ವೇ ಬೇಡ