Site icon Vistara News

ನನ್ನ ದೇಶ ನನ್ನ ದನಿ ಅಂಕಣ: ಜಿಹಾದಿ, ಮಿಷನರಿಗಳ ಸಾವಿರ ಹಿರೋಷಿಮಾಗಳು ಕಾಯುತ್ತಿವೆ

chamanlal book ನನ್ನ ದೇಶ ನನ್ನ ದನಿ ಅಂಕಣ

:: ಮಂಜುನಾಥ ಅಜ್ಜಂಪುರ

ನನ್ನ ದೇಶ ನನ್ನ ದನಿ ಅಂಕಣ: ನಮ್ಮದು ಅತಿ-ವಿಶಿಷ್ಟ ಸಾಂಸ್ಕೃತಿಕ (Cultural) ಪರಂಪರೆ. ಭಾರತವನ್ನು – ಭಾರತದ ಆತ್ಮವನ್ನು (soul of India) ಅರ್ಥ ಮಾಡಿಕೊಳ್ಳಲು, ಪಾಶ್ಚಾತ್ಯ ಮಾನಸಿಕತೆಯನ್ನು ಮತ್ತು ಆ ವಾಹಿನಿಯಿಂದ ಬಂದ ಸಾಮ್ರಾಜ್ಯಶಾಹಿ ಪರಿಕಲ್ಪನೆಗಳನ್ನು ಪಕ್ಕಕ್ಕಿರಿಸಿ, ಸಾಂಸ್ಕೃತಿಕ ಭಾರತವನ್ನು ಕಣ್ಮುಂದೆ ತಂದುಕೊಳ್ಳಲು ನಾವು ಪ್ರಾಮಾಣಿಕ ಪ್ರಯತ್ನ ಮಾಡಿದಾಗ ಮಾತ್ರ, ನಮ್ಮ ಅಸ್ಮಿತೆ – ನಮ್ಮ ವೈಶಿಷ್ಟ್ಯಗಳು ಆತ್ಮಗತವಾಗುತ್ತವೆ.

ಆಕ್ರಮಣಕಾರಿ ಅಬ್ರಹಾಮಿಕ್ ಮತಗಳಿಂದ ನಮಗೆ ಬಹಳ ದೊಡ್ಡ ಆಘಾತವೇ ಮುಗಿಬಿದ್ದಿದೆ. ಲಕ್ಷ ಲಕ್ಷ ಗ್ರಂಥಗಳು ಜಿಹಾದಿಗಳಿಂದ ನಾಶವಾಗಿಹೋಗಿವೆ. ನಮ್ಮ ಪರಂಪರೆಯ ಸರಿಯಾದ ಚಿತ್ರವೇ ಇನ್ನೂ ಸಿಕ್ಕಿಲ್ಲ. ನಮ್ಮ ಇತಿಹಾಸದ, ನಮ್ಮ ಪರಂಪರೆಯ ತುಂಬ ತುಂಬ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸುವ ಸಂಶೋಧಿಸುವ ಮಹತ್ಕಾರ್ಯ ಇನ್ನೂ ಆರಂಭವಾಗಿಯೇ ಇಲ್ಲ.

ನಮಗೆ ಗ್ರಂಥನಾಶಕ್ಕಿಂತ ದೊಡ್ಡ ಪೆಟ್ಟು ಬಿದ್ದದ್ದು ಮೆಕಾಲೆವಾದಿ – ಜಿಹಾದೀ – ಕಮ್ಯೂನಿಸ್ಟ್ ದೇಶದ್ರೋಹಿ ಇತಿಹಾಸಕಾರರಿಂದ. ಇವರೆಲ್ಲಾ ನಮ್ಮ ಇತಿಹಾಸ ಪಠ್ಯಪುಸ್ತಕಗಳಲ್ಲಿ ಬರೀ ಅನೃತವನ್ನೇ ತುಂಬಿದುದರಿಂದ, ಸತ್ಯಕಥನಗಳಿಗಾಗಿ ಬೇರೆ ಬೇರೆ ಸಾಕ್ಷ್ಯಾಧಾರಗಳನ್ನು ನಾವೀಗ ಆಶ್ರಯಿಸಬೇಕಾಗಿದೆ. ಜಗತ್ತಿನ ಶ್ರೇಷ್ಠ ಇತಿಹಾಸಕಾರರಾದ ವಿಲ್ ಡ್ಯೂರಾಂಟ್ ಭಾರತವನ್ನು ಅರ್ಥ ಮಾಡಿಕೊಂಡವರಲ್ಲಿ ಒಬ್ಬರು. ಇಸ್ಲಾಮೀ ದುರಾಕ್ರಮಣಗಳಿಂದ ರಕ್ತಸಿಕ್ತವಾಗಿಹೋಗಿದ್ದ ಭಾರತಕ್ಕಾಗಿ ಅವರು ಮಿಡಿದಿದ್ದರು.

“ಭಾರತವು ನಮ್ಮ ಜನಾಂಗದ ಮಾತೃಭೂಮಿ. ಸಂಸ್ಕೃತ ಭಾಷೆಯು ಯೂರೋಪಿನ ಭಾಷೆಗಳ ತಾಯಿ. ನಮ್ಮ ತತ್ತ್ವಶಾಸ್ತ್ರ, ಗಣಿತ, ಸ್ವಯಮಾಡಳಿತ ಮತ್ತು ಜನತಂತ್ರಗಳ ಪರಿಕಲ್ಪನೆಯ ಮೂಲವು ಭಾರತವೇ. ಅನೇಕ ರೀತಿಯಲ್ಲಿ ಭಾರತವೇ ನಮ್ಮೆಲ್ಲರ ತಾಯಿ” ಎಂದಿದ್ದರು ವಿಲ್ ಡ್ಯೂರಾಂಟ್.

ಈ ಮಾತುಗಳಿಂದ ಪ್ರೇರಣೆ ಪಡೆದ ಭಿಕ್ಷು ಚಮನ್ ಲಾಲ್ ಅವರು “India Mother of us all” (ಪ್ರಕಟಣೆ 1968) ಎಂಬ ಮಹತ್ತ್ವದ ಕೃತಿಯನ್ನು ನೀಡಿದ್ದಾರೆ. ಎಲ್.ವಿ. ಶಾಂತಕುಮಾರಿ ಅವರು “ನಮ್ಮೆಲ್ಲರ ತಾಯಿ ಭಾರತ” ಎಂಬ ತುಂಬ ಚಂದದ ಕನ್ನಡಾನುವಾದವನ್ನು ನೀಡಿದ್ದಾರೆ. ಬೇರೆಬೇರೆ ದೇಶಗಳ ಅನೇಕ ವಿದ್ವಾಂಸರ ಅಭಿಮತ ಮತ್ತು ಸತ್ಯನಿಷ್ಠ ಮೆಚ್ಚುಗೆಗಳನ್ನು ಇಲ್ಲಿ ದಾಖಲಿಸಲಾಗಿದೆ.

“ಭಾರತದ ಜನರು ಧಾರ್ಮಿಕರು, ವಾತ್ಸಲ್ಯಮಯ ವ್ಯಕ್ತಿತ್ವದವರು, ಅತಿಥಿ ಸತ್ಕಾರ ಮಾಡುವವರು, ಸ್ನೇಹಪರರು, ಮುಚ್ಚುಮರೆಯಿರದ ಸರಳಜೀವಿಗಳು. ಭಾರತೀಯರು ಪ್ರಾಂಜಲ ಸ್ವಭಾವದವರು, ವೈಜ್ಞಾನಿಕ ಸಂಶೋಧನೆಗಳಲ್ಲಿ ನಿರತರಾಗಿರುವವರು, ಜೀವನದಲ್ಲಿ ಕಠಿಣ ನಿಯಮಗಳನ್ನು ಅನುಸರಿಸುವವರು, ನ್ಯಾಯಾನ್ವೇಷಿಗಳು, ತೃಪ್ತರು, ಉದ್ಯಮಶೀಲರು, ವ್ಯವಹಾರ ಸಮರ್ಥರು, ನಿಷ್ಠರು, ಸತ್ಯಸಂಧರು ಮತ್ತು ಸ್ಥಿರವಾಗಿ ನಿಲ್ಲುವವರು. ಈ ಜನಗಳ ನಿಜವಾದ ಜೀವನಮೌಲ್ಯವು ವಿಪತ್ಕಾಲದಲ್ಲಿ ಎದ್ದುತೋರುತ್ತದೆ. ಇಲ್ಲಿನ ಯೋಧರಿಗೆ ರಣರಂಗದಿಂದ ಹಿಮ್ಮೆಟ್ಟುವುದು ಗೊತ್ತೇ ಇಲ್ಲ. ಯುದ್ಧರಂಗದಲ್ಲಿ ಗಟ್ಟಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾದಾಗ ಅವರು ಕುದುರೆಗಳಿಂದ ಕೆಳಗಿಳಿದು ತಮ್ಮ ಜೀವಗಳನ್ನೇ ಅಪಾಯಕ್ಕೆ ಒಡ್ಡಿಕೊಂಡು ದೃಢನಿರ್ಧಾರ ತೆಗೆದುಕೊಳ್ಳುತ್ತಾರೆ. ಯುದ್ಧಭೂಮಿಯಿಂದ ಓಡಿಹೋಗುವುದು ಸಾವಿಗಿಂತಲೂ ಹೆಚ್ಚು ಭಯಂಕರವಾದುದು, ಎಂದು ಭಾರತೀಯರು ಪರಿಗಣಿಸುತ್ತಾರೆ” ಎಂದು ತನ್ನ “ಐನ್ ಈ ಅಕ್ಬರಿ” ಕೃತಿಯಲ್ಲಿ, ಸಾಮಾನ್ಯ ಯುಗದ 16ನೆಯ ಶತಮಾನದ ಮುಸ್ಲಿಂ ಇತಿಹಾಸಕಾರ ಅಬು ಫಝಲ್ ಅಲ್ಲಮಿ ದಾಖಲಿಸಿದ್ದಾನೆ.

ಅನೀತಿಯುತವಾದ ಭಾರತ-ವಿರೋಧೀ ಪರಿಕಲ್ಪನೆಗಳ ವಿಕೃತ ಶಿಕ್ಷಣ ವ್ಯವಸ್ಥೆಯಲ್ಲಿ ಕಲಿತ ನಮಗೆಲ್ಲಾ ಈ ದಾಖಲೆಗಳು “ನಿಜವೇ?” ಎಂಬ ವಿಸ್ಮಯವನ್ನು ಹುಟ್ಟಿಸುತ್ತವೆ. ಕಳೆದ ಎರಡು ಶತಮಾನಗಳ ಕಾಲಾವಧಿಯ, ಬ್ರಿಟಿಷರ ಮತ್ತು ಅವರ “ಪ್ರೀತಿಪಾತ್ರರ” ದುರಾಡಳಿತದಲ್ಲಿ ನಮ್ಮ ಸಮಾಜವು ಹೇಗಿದೆಯೆಂದರೆ, ಈ ಜೀವನಮೌಲ್ಯಗಳು ಹಿಂದೆ ನಮ್ಮಲ್ಲಿ ಇದ್ದವೇ, ಎಂಬ ಅನುಮಾನವು ನಮ್ಮಲ್ಲಿಯೇ ಮೂಡುತ್ತದೆ.

ಸಾಮಾನ್ಯಯುಗಪೂರ್ವ 4ನೆಯ ಶತಮಾನದ ಗ್ರೀಕ್ ಇತಿಹಾಸಕಾರ ಮತ್ತು ಜನಾಂಗಶಾಸ್ತ್ರಜ್ಞ ಮೆಗಾಸ್ತನೀಸ್ ಭಾರತೀಯ ಪುರುಷರ ಧೈರ್ಯವನ್ನು, ಸ್ತ್ರೀಯರ ಪರಿಶುದ್ಧತೆಯನ್ನು ಮತ್ತು ಮುಖ್ಯವಾಗಿ ಗುಲಾಮಗಿರಿಯ ಅನುಪಸ್ಥಿತಿಯನ್ನು ಗುರುತಿಸಿದ್ದಾನೆ. “ಪರಾಕ್ರಮದಲ್ಲಿ ಏಷಿಯಾದ ಉಳಿದೆಲ್ಲರನ್ನೂ ಮೀರಿಸಿದ ಭಾರತೀಯರು ಶಾಂತಚಿತ್ತರು, ಉದ್ಯಮಶೀಲರು, ಉತ್ತಮ ರೈತರು ಮತ್ತು ಕುಶಲ ಕಸಬುದಾರರು. ಅವರು ಎಂದೂ ದಾವೆ, ಖಟ್ಲೆಗಳನ್ನು ಅವಲಂಬಿಸಿದವರಲ್ಲ ಮತ್ತು ತಮ್ಮ ಸ್ಥಳೀಯ ಮುಖ್ಯಸ್ಥರ ಮಾರ್ಗದರ್ಶನದಲ್ಲಿ ಶಾಂತಿಯಿಂದ ಜೀವಿಸುತ್ತಿದ್ದರು” ಎಂದು ಸಹ ಗಮನಿಸಿದ್ದಾನೆ, ಮೆಚ್ಚಿದ್ದಾನೆ.

ಇನ್ನೋರ್ವ ಗ್ರೀಕ್ ತತ್ತ್ವಶಾಸ್ತ್ರಜ್ಞ ಎಪಿಕ್ಟೆಟಸ್ ಶಿಷ್ಯ ಅರ್ರೇನ್ (ಸಾಮಾನ್ಯ ಯುಗದ 2ನೆಯ ಶತಮಾನ) “ಪ್ರಾಚೀನ ಭಾರತದಲ್ಲಿ ಕಳ್ಳತನವೆಂಬುದು ಇರಲೇ ಇಲ್ಲ. ಜನರು ಪರಿಪೂರ್ಣ ಸುರಕ್ಷತೆಯಿಂದ ಜೀವಿಸುತ್ತಿದ್ದರು. ಹಿಂದೂಗಳು ಎಷ್ಟು ಪ್ರಾಮಾಣಿಕರೆಂದರೆ, ಅವರ ಮನೆಯ ಬಾಗಿಲುಗಳಿಗೆ ಬೀಗದ ಆವಶ್ಯಕತೆಯಿರಲಿಲ್ಲ. ಪರಸ್ಪರರಲ್ಲಿ ಅವರು ಮಾಡಿಕೊಳ್ಳುತ್ತಿದ್ದ ಒಪ್ಪಂದಗಳನ್ನು ಖಾತ್ರಿಪಡಿಸಲು ಲಿಖಿತ ಪುರಾವೆಗಳ ಆವಶ್ಯಕತೆಯೂ ಅವರಿಗಿರಲಿಲ್ಲ. ಯಾವೊಬ್ಬ ಭಾರತೀಯನೂ ಅಸತ್ಯವಾಡಿದ್ದನ್ನು ಎಂದೂ ಕಂಡಿಲ್ಲ, ಕೇಳಿಲ್ಲ” ಎಂದು ಮೆಚ್ಚಿ ದಾಖಲಿಸಿದ್ದಾನೆ.

ಚೀನಾದ ಯಾತ್ರಿಕರಲ್ಲಿ ಅತ್ಯಂತ ಪ್ರಸಿದ್ಧನಾದವನು, ಸಾಮಾನ್ಯ ಯುಗದ 7ನೆಯ ಶತಮಾನಕ್ಕೆ ಸೇರಿದ ಯುವಾನ್ ಚ್ವಾಂಗ್ (ಇದು ಸರಿಯಾದ ಉಚ್ಚಾರಣೆ, ಹಿಂದೆ ಹ್ಯೂಎನ್ ತ್ಸಾಂಗ್ ಎನ್ನಲಾಗುತ್ತಿತ್ತು). ಅವನು “ಭಾರತೀಯರು ತಮ್ಮ ನಿಷ್ಕಪಟ ನೇರ ನಡೆನುಡಿ ಮತ್ತು ಪ್ರಾಮಾಣಿಕ ಚಾರಿತ್ರ್ಯದಿಂದಾಗಿ ಪ್ರಸಿದ್ಧರಾಗಿದ್ದಾರೆ. ಸಂಪತ್ತಿಗೆ ಸಂಬಂಧಿಸಿದಂತೆ ಅವರು ಏನನ್ನೂ ಅನ್ಯಾಯವಾಗಿ ತೆಗೆದುಕೊಳ್ಳುವುದಿಲ್ಲ. ನ್ಯಾಯವನ್ನು ಅವರು ಗೌರವಿಸುತ್ತಾರೆ. ನೇರ ನಡವಳಿಕೆ ಅವರ ಆಡಳಿತದ ಮುಖ್ಯ ಲಕ್ಷಣವಾಗಿದೆ” ಎಂದು ಮೆಚ್ಚಿದ್ದಾನೆ.

ಡಿಸೆಂಬರ್ 1861ರ “ದಿ ಕೊಲ್ಕತ್ತಾ ರಿವ್ಯೂ” ಹೀಗೆ ಹೇಳುತ್ತದೆ: ” ಹಿಂದಿನ ಕಾಲದಲ್ಲಿ ಹಿಂದೂಗಳು ವ್ಯವಹಾರನಿಪುಣರಾಗಿದ್ದರು. ಭಾರತದ ಮಗ್ಗಗಳಲ್ಲಿನ ಪರಿಶ್ರಮವನ್ನು ಜಗತ್ತಿನೆಲ್ಲೆಡೆ ಗೌರವಿಸಲಾಗುತ್ತಿತ್ತು ಮೆಚ್ಚಲಾಗುತ್ತಿತ್ತು, ಎನ್ನುವುದಕ್ಕೆ ಹೇರಳವಾದ ಸಾಕ್ಷ್ಯಾಧಾರಗಳಿವೆ. ಪ್ರಾಚೀನ ಕಾಲದಿಂದಲೇ ಹಿಂದೂಗಳು ರೇಷ್ಮೆಯನ್ನು ತಯಾರಿಸುತ್ತಿದ್ದಾರೆ. ಭಾರತೀಯರು ಅತ್ಯಂತ ಪ್ರಾಜ್ಞರು, ಅಧ್ಯಾತ್ಮಜ್ಞಾನದಲ್ಲಿ ಅತ್ಯಂತ ಶ್ರೇಷ್ಠರು. ಖಗೋಳ ಶಾಸ್ತ್ರ ಹಾಗೂ ಅಂಕಗಣಿತದಲ್ಲಿಯೂ ಅಷ್ಟೇ ಪರಿಣತರು, ಎಂದು ಗ್ರೀಕ್ ಲೇಖಕರು ಹೇಳಿದ್ದಾರೆ”.

ಭಾರತೀಯರ ಬಗೆಗೆ ಡಯೋನಿಸಿಯಸ್ ಹೀಗೆ ಹೇಳಿದ್ದಾನೆ: “ಅವರು ಮೊದಲು ಸಾಗರವನ್ನು ಪರಿಶೋಧಿಸಿದರು. ಗೊತ್ತಿರದ ತೀರಗಳಿಗೂ ಸರಕುಗಳನ್ನು ಸಾಗಿಸಿದರು. ಭಾರತೀಯರು ಮೊದಲು ತಾರಾಮಂಡಲವನ್ನು ಅರಿತು ಅರಗಿಸಿಕೊಂಡರು. ಅವುಗಳ ಚಲನೆಯನ್ನು ಗುರುತಿಸಿದರು ಮತ್ತು ಬೇರೆ ಬೇರೆ ಹೆಸರುಗಳಲ್ಲಿ ಅವುಗಳನ್ನು ಕರೆದರು. ಪುರಾತನ ಕಾಲದಿಂದಲೂ, ಹಿಂದೂಸ್ತಾನವು ವಿಶ್ವದಲ್ಲಿ ಅತ್ಯಂತ ಹೆಚ್ಚು ಮೆಚ್ಚುಗೆಗೆ ಪಾತ್ರವಾದ ದೇಶಗಳಲ್ಲಿ ಒಂದು, ಎಂದು ಪ್ರಖ್ಯಾತಿ ಹೊಂದಿದೆ.

ಎಲ್ಲ ಜ್ಞಾನಶಾಖೆಗಳಲ್ಲಿಯೂ ಪಾಶ್ಚಾತ್ಯರ ಹಳಸಲನ್ನೇ ತಿಂದು ಅದನ್ನೇ ವಿದ್ಯಾರ್ಥಿಗಳ ಮೇಲೆ ವಾಂತಿ ಮಾಡಿಕೊಳ್ಳುವ ನಮ್ಮ ಅಕೆಡೆಮಿಕ್ ಪ್ರಭೃತಿಗಳಿಗೆ, ಪ್ರಾಚೀನ ಹಿಂದೂ ಭಾರತದ ಯಾವ ಸಾಧನೆಗಳೂ – ಯಾವ ಚಿತ್ರಗಳೂ ಪಥ್ಯವಾಗುವುದಿಲ್ಲ. ಹಿಂದೆ ನಮ್ಮಲ್ಲಿದ್ದುದು ಬರೀ ಅಸ್ಪೃಶ್ಯತೆ, ಜಾತೀಯತೆ, ಸ್ತ್ರೀ ಅಸಮಾನತೆ, ಸತಿ ಸಹಗಮನ, ಮೂಢನಂಬಿಕೆಗಳು ಅಷ್ಟೇ, ಎನ್ನುತ್ತಾರೆ. ಮೇಲೆ ಹೇಳಿದ ಯಾವ ಸಂಗತಿಗಳನ್ನು ಪ್ರಸ್ತಾಪಿಸಿದರೂ ಅದೊಂದು ಜೋಕೆಂಬಂತೆ ಗಹಗಹಿಸಿ ನಗುತ್ತಾರೆ.

ಹಿರೋಷಿಮಾ ಮೇಲೆ ಅಣುಬಾಂಬ್ ಆಸ್ಫೋಟವಾದ ದುರ್ದಿನ ಆಗಸ್ಟ್ 6. ಮನುಕುಲದ ಮಹಾದುರಂತದ ದಿನವಿದು.

ವಿವೇಕಾನಂದರ, ಮಹರ್ಷಿ ಅರವಿಂದರ, ರವೀಂದ್ರರ, ಬಂಕಿಮ ಚಂದ್ರರ, ಸುಭಾಷರ, ಸತ್ಯಜಿತ್ ರಾಯ್ ಅಂತಹವರ ಅತ್ಯದ್ಭುತ ಪರಂಪರೆ – ಸಂಸ್ಕೃತಿ – ಸಂಗೀತ – ಸಾಹಿತ್ಯ – ಚಲನಚಿತ್ರ – ನೃತ್ಯಗಳ ಬಂಗಾಳ ಬಾಂಗ್ಲಾಗಳು ಕಳೆದ ನೂರು ವರ್ಷಗಳಲ್ಲಿ ನಮ್ಮ ಕಣ್ಮುಂದೆಯೇ ನಾಶವಾಗಿಬಿಟ್ಟಿವೆ. ಈಗ ಅಲ್ಲಿ ಕೇವಲ ಕಲ್ಲೆಸೆಯುವವರೇ ತುಂಬಿಕೊಂಡುಬಿಟ್ಟಿದ್ದಾರೆ.

ಇಂದು ಭಾರತದ ಮೇಲೆ, ನೂರೆಂಟು ಹಿರೋಷಿಮಾಗಳನ್ನು ಸುರಿದುಬಿಡಲು ಜಿಹಾದೀ – ಮಿಷನರಿ – ಕಮ್ಯೂನಿಸ್ಟ್ ದುಃಶಕ್ತಿಗಳು ಹವಣಿಸುತ್ತಿವೆ. ಆಕ್ರಮಣಕಾರಿ ದುಃಶಕ್ತಿಗಳನ್ನು ಅರ್ಥ ಮಾಡಿಕೊಳ್ಳದ ಮತ್ತು ಅನಗತ್ಯ ಔದಾರ್ಯದಿಂದ ಸ್ವತಃ ನಾಶವಾಗಿಹೋದ ನಾವು ಇನ್ನಾದರೂ ಜಾಗೃತರಾಗೋಣ, ನಿಜ-ಭಾರತವನ್ನು ಉಳಿಸಿಕೊಳ್ಳೋಣ.

ಇದನ್ನೂ ಓದಿ: ನನ್ನ ದೇಶ ನನ್ನ ದನಿ ಅಂಕಣ: ಗೋವಾದಲ್ಲಿ ಹಿಂದೂಗಳ ಮೇಲಿತ್ತು ಜುಟ್ಟಿನ ತೆರಿಗೆ!

Exit mobile version